ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕಾಗಿ ‘ನಶಾ ಮುಕ್ತ ಯುವ’ ಆಂದೋಲನಕ್ಕೆ 2026ರ ಆಗಸ್ಟ್ 2 ರಂದು ಚಾಲನೆ
ಮಾದಕ ದ್ರವ್ಯ ಸೇವನೆಯ ವಿರುದ್ಧ 'ಜನ ಭಾಗೀದಾರಿ' ಮೂಲಕ ರಾಷ್ಟ್ರವ್ಯಾಪಿ 100 ವಾರಗಳ ಆಂದೋಲನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ
ಸುಮಾರು 10,000 ಸ್ಥಳಗಳಲ್ಲಿ ಒಂದೇ ಸಮಯದಲ್ಲಿ 1 ಕೋಟಿಗೂ ಹೆಚ್ಚು ಯುವಜನರಿಂದ 'ನಶಾ ಮುಕ್ತಿ ಪ್ರತಿಜ್ಞೆ' ಸ್ವೀಕಾರ
प्रविष्टि तिथि:
29 JUL 2026 2:32PM by PIB Bengaluru
'ನಶಾ ಮುಕ್ತ ಭಾರತ' ಮತ್ತು 'ವಿಕಸಿತ ಭಾರತ 2047'ರ ದೃಷ್ಟಿಕೋನವನ್ನು ನನಸಾಗಿಸುವ ಪ್ರಮುಖ ಹೆಜ್ಜೆಯಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಆಗಸ್ಟ್ 2 ರಂದು "ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕಾಗಿ ನಶಾ ಮುಕ್ತ ಯುವ" ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ. ಜನ ಭಾಗೀದಾರಿ ಮೂಲಕ ಮಾದಕ ದ್ರವ್ಯ ಸೇವನೆ ವಿರುದ್ಧ ಜನಾಂದೋಲನದ ನೇತೃತ್ವ ವಹಿಸುವಂತೆ ಅವರು ದೇಶದ ಯುವಜನತೆಗೆ ಕರೆ ನೀಡಲಿದ್ದಾರೆ.

ಪ್ರಧಾನಮಂತ್ರಿಯವರ ಕರೆಗೆ ಸ್ಪಂದಿಸಿ, ಈ ಅಭಿಯಾನವನ್ನು 'ಮೈ ಭಾರತ್' (MY Bharat) ನೇತೃತ್ವದಲ್ಲಿ ದೇಶಾದ್ಯಂತ ಯುವಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ರಾಷ್ಟ್ರವ್ಯಾಪಿ ಜನಾಂದೋಲನವಾಗಿ ಪ್ರಾರಂಭಿಸಲಾಗುವುದು. ಜಾಗೃತಿ, ಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು ನಿರಂತರ ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮೂಲಕ ಮಾದಕದ್ರವ್ಯ ಮುಕ್ತ ಭಾರತವನ್ನು ನಿರ್ಮಿಸುವ ಬೃಹತ್ ರಾಷ್ಟ್ರೀಯ ಅಭಿಯಾನದಲ್ಲಿ ಯುವ ನಾಗರಿಕರನ್ನು ಒಂದಗೂಡಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.
ಪ್ರಧಾನಮಂತ್ರಿಯವರ ಭಾಷಣದಿಂದ ಪ್ರೇರಿತರಾಗಿ, ದೇಶಾದ್ಯಂತ ಸುಮಾರು 10,000 ಸ್ಥಳಗಳಲ್ಲಿ ಒಂದೇ ಸಮಯದಲ್ಲಿ ಪ್ರತಿಜ್ಞಾ ವಿಧಿ ಸಮಾರಂಭಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಒಂದು ಕೋಟಿಗೂ ಹೆಚ್ಚು ಯುವಜನರು 'ನಶಾ ಮುಕ್ತಿ ಪ್ರತಿಜ್ಞೆ' ಸ್ವೀಕರಿಸಲಿದ್ದು, ಮಾದಕದ್ರವ್ಯ ಮುಕ್ತ ಸಮಾಜಕ್ಕಾಗಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಲಿದ್ದಾರೆ ಹಾಗೂ ನಶಾ ಮುಕ್ತ ಯುವ ಸ್ವಯಂಸೇವಕರಾಗಿ ರಾಷ್ಟ್ರ ನಿರ್ಮಾಣಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳಲಿದ್ದಾರೆ.
ಈ ಅಭಿಯಾನವು 'ಮೈ ಭಾರತ್' ಸ್ವಯಂಸೇವಕರು, ಮೈ ಭಾರತ್ ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್) ಸ್ವಯಂಸೇವಕರು, ಯುವಕ ಸಂಘಗಳು, ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಸರ್ಕಾರೇತರ ಸಂಸ್ಥೆಗಳು, ಕೈಗಾರಿಕಾ ಸಂಘಗಳು ಮತ್ತು 125 ಕ್ಕೂ ಹೆಚ್ಚು ಆಧ್ಯಾತ್ಮಿಕ ಸಂಸ್ಥೆಗಳಿಂದ ಅಭೂತಪೂರ್ವ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಇದು ದೇಶದಲ್ಲಿ ಮಾದಕ ದ್ರವ್ಯ ಸೇವನೆಯ ವಿರುದ್ಧ ಯುವಜನ ನೇತೃತ್ವದ ಅತಿದೊಡ್ಡ ಜನಾಂದೋಲನಗಳಲ್ಲಿ ಒಂದಾಗಲಿದೆ.
ಸಾಮಾನ್ಯ ಜಾಗೃತಿ ಕಾರ್ಯಕ್ರಮಕ್ಕಿಂತ ಭಿನ್ನವಾಗಿ, 'ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕಾಗಿ ನಶಾ ಮುಕ್ತ ಯುವ' ಆಂದೋಲನವನ್ನು 100 ವಾರಗಳ ನಿರಂತರ 'ಜನ ಭಾಗೀದಾರಿ' ಚಳವಳಿಯಾಗಿ ವಿನ್ಯಾಸಗೊಳಿಸಲಾಗಿದೆ. ಮುಂದಿನ 100 ವಾರಗಳವರೆಗೆ ಪ್ರತಿ ಭಾನುವಾರ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು, ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಮತ್ತು ಯುವಜನರ ಶಕ್ತಿಯನ್ನು ರಚನಾತ್ಮಕ ರಾಷ್ಟ್ರ ನಿರ್ಮಾಣದತ್ತ ಸಾಗಿಸಲು ದೇಶಾದ್ಯಂತ ಯುವಜನ ನೇತೃತ್ವದ ಚಟುವಟಿಕೆಗಳನ್ನು ಆಯೋಜಿಸಲಾಗುವುದು.
ಸಾಮಾಜಿಕ ಮೌಲ್ಯಗಳನ್ನು ಉತ್ತೇಜಿಸುವ ಜೊತೆಗೆ ಮಾದಕ ದ್ರವ್ಯ ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಸಮಾಜವನ್ನು ಸಂವೇದನಾಶೀಲಗೊಳಿಸುವ ಉದ್ದೇಶದಿಂದ ಕ್ರೀಡಾ ಸ್ಪರ್ಧೆಗಳು, ವಾಕಥಾನ್ ಗಳು, ಧ್ಯಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲೆ ಮತ್ತು ಸೃಜನಶೀಲ ಸ್ಪರ್ಧೆಗಳು, ಬೀದಿ ನಾಟಕಗಳು, ಜಾಗೃತಿ ಅಭಿಯಾನಗಳು ಮತ್ತು ಇತರ ಸಮುದಾಯ ಭಾಗವಹಿಸುವಿಕೆಯ ಉಪಕ್ರಮಗಳು ವಾರಾಂತ್ಯದ ಚಟುವಟಿಕೆಗಳಲ್ಲಿ ಸೇರಿರುತ್ತವೆ.
ನಿರಂತರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತ್ತು ಮಾದರಿ ಪ್ರಯತ್ನಗಳನ್ನು ಗುರುತಿಸಲು, ಅಭಿಯಾನಕ್ಕೆ ಅತ್ಯುತ್ತಮ ಕೊಡುಗೆ ನೀಡುವ ಸ್ವಯಂಸೇವಕರು ಮತ್ತು ಸಂಸ್ಥೆಗಳನ್ನು 50ನೇ, 75ನೇ ಮತ್ತು 100ನೇ ವಾರದ ಮೈಲಿಗಲ್ಲುಗಳಲ್ಲಿ ಸನ್ಮಾನಿಸಲಾಗುವುದು, ಇದು ಸಾರ್ವಜನಿಕ ಸೇವೆ ಮತ್ತು ಸಾಂಸ್ಥಿಕ ಹೊಣೆಗಾರಿಕೆಯ ಭಾವನೆಯನ್ನು ಬಲಪಡಿಸುತ್ತದೆ.
ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್‌ಸುಖ್ ಮಾಂಡವೀಯ ಅವರು ದೇಶದ ಯುವಜನರು ಮತ್ತು ಸಾಮಾಜಿಕ ಸಂಸ್ಥೆಗಳಿಗೆ ರಾಷ್ಟ್ರಹಿತಕ್ಕಾಗಿ ಗೌರವಾನ್ವಿತ ಪ್ರಧಾನಮಂತ್ರಿಯವರ ಕರೆಯನ್ನು ಬೆಂಬಲಿಸಲು ಮತ್ತು ಈ ಐತಿಹಾಸಿಕ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಮನವಿ ಮಾಡಿದ್ದಾರೆ. ಲಕ್ಷಾಂತರ ಯುವಕರು, ಸಂಸ್ಥೆಗಳು ಮತ್ತು ಸಮುದಾಯ ಸಂಘಟನೆಗಳ ಸಾಮೂಹಿಕ ಪ್ರಯತ್ನಗಳ ಮೂಲಕ, ಈ ಅಭಿಯಾನವು ರಾಷ್ಟ್ರವ್ಯಾಪಿ ಸಾಮಾಜಿಕ ಚಳವಳಿಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಇದು ಮಾದಕ ದ್ರವ್ಯ ಸೇವನೆಯನ್ನು ತಿರಸ್ಕರಿಸಲು ಮತ್ತು ಆರೋಗ್ಯಕರ, ಬಲವಾದ ಮತ್ತು ಹೆಚ್ಚು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಲು ವ್ಯಕ್ತಿಗಳಿಗೆ ಪ್ರೇರಣೆ ನೀಡುತ್ತದೆ.
'ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕಾಗಿ ನಶಾ ಮುಕ್ತ ಯುವ' ಆಂದೋಲನವು, ನಾಗರಿಕರ ಸಕ್ರಿಯ ಭಾಗವಹಿಸುವಿಕೆಯಿಂದ ಮಾದಕದ್ರವ್ಯದ ವಿರುದ್ಧದ ಹೋರಾಟವನ್ನು ಜನಾಂದೋಲನವಾಗಿ ಪರಿವರ್ತಿಸುವ ಗೌರವಾನ್ವಿತ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಬಿಂಬಿಸುತ್ತದೆ. "ಮಾದಕದ್ರವ್ಯ ಮುಕ್ತ ಯುವಜನತೆಯೇ ವಿಕಸಿತ ಭಾರತದ ಅತಿದೊಡ್ಡ ಶಕ್ತಿ" ಎಂಬ ಸಂದೇಶದೊಂದಿಗೆ, ಈ ಅಭಿಯಾನವು ಈ ರಾಷ್ಟ್ರೀಯ ಸಂಕಲ್ಪವನ್ನು ಪ್ರತಿ ಹಳ್ಳಿ, ಪಟ್ಟಣ ಮತ್ತು ನಗರಗಳಿಗೆ ತಲುಪಿಸಲು ಶ್ರಮಿಸುತ್ತದೆ, ಹಾಗೂ ವಿಕಸಿತ ಭಾರತ 2047 ರತ್ತ ಭಾರತದ ಪಯಣವನ್ನು ಮತ್ತಷ್ಟು ಬಲಪಡಿಸುತ್ತದೆ.
*****
(रिलीज़ आईडी: 2291181)
आगंतुक पटल : 9