ಹಣಕಾಸು ಸಚಿವಾಲಯ
azadi ka amrit mahotsav

ಭಾರತದಾದ್ಯಂತ ಹಲವು ವನ್ಯಜೀವಿ ಕಳ್ಳಸಾಗಣೆ ಜಾಲಗಳನ್ನು ಭೇದಿಸಿದ ಡಿಆರ್‌ಐ


ದೇಶಾದ್ಯಂತ ನಡೆದ ಸಂಘಟಿತ ಕಾರ್ಯಾಚರಣೆಗಳಲ್ಲಿ 440ಕ್ಕೂ ಹೆಚ್ಚು ಅಳಿವಿನಂಚಿನಲ್ಲಿರುವ/ಸಂರಕ್ಷಿತ ವನ್ಯಜೀವಿಗಳು, ಸುಮಾರು 15 ಕೆಜಿ ದಂತದ ವಸ್ತುಗಳು ಮತ್ತು ಆನೆ ದಂತಗಳ ವಶ; 33 ಜನರ ಬಂಧನ

प्रविष्टि तिथि: 13 JUL 2026 7:22PM by PIB Bengaluru

ಅಕ್ರಮ ವನ್ಯಜೀವಿ ಕಳ್ಳಸಾಗಣೆ ವಿರುದ್ಧ ಗುಪ್ತಚರ ಮಾಹಿತಿ ಆಧರಿಸಿ ಭಾರತದಾದ್ಯಂತದ ನಡೆಸಿದ ಸಂಘಟಿತ ಕಾರ್ಯಾಚರಣೆಗಳ ಸರಣಿಯಲ್ಲಿ, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿ ಆರ್‌ ಐ)  440 ಅಳಿವಿನಂಚಿನಲ್ಲಿರುವ/ಸಂರಕ್ಷಿತ ವನ್ಯಜೀವಿಗಳು ಮತ್ತು ಸುಮಾರು 15 ಕೆಜಿ ದಂತದ ವಸ್ತುಗಳು ಮತ್ತು ಆನೆ ದಂತಗಳನ್ನು ವಶಪಡಿಸಿಕೊಂಡಿದ್ದು, ವನ್ಯಜೀವಿ ಕಳ್ಳಸಾಗಣೆಯಲ್ಲಿ ತೊಡಗಿದ್ದ 33 ಜನರನ್ನು ಬಂಧಿಸಿದೆ.

ರಾಜಸ್ಥಾನದ ಸುಜನ್ ಗಢ್ ಬಳಿ 2026ರ ಜುಲೈ 10 ರಂದು ಆನೆ ದಂತದ ಅಕ್ರಮ ವ್ಯಾಪಾರದಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ಡಿ ಆರ್‌ ಐ ಅಧಿಕಾರಿಗಳು ತಡೆದಿದ್ದು, ಈ ಕಾರ್ಯಾಚರಣೆಯಲ್ಲಿ ಸುಮಾರು 11 ಕೆಜಿ ಆನೆ ದಂತವನ್ನು ವಶಪಡಿಸಿಕೊಳ್ಳಲಾಗಿದೆ. ನಾಲ್ವರನ್ನು ಬಂಧಿಸಿ, ವನ್ಯಜೀವಿ (ರಕ್ಷಣೆ) ಕಾಯ್ದೆ, 1972ರ ಅಡಿಯಲ್ಲಿ ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡ ದಂತದೊಂದಿಗೆ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಭಾರತೀಯ ಆನೆ (ಎಲಿಫಾಸ್ ಮ್ಯಾಕ್ಸಿಮಸ್) ಅನ್ನು ವನ್ಯಜೀವಿ (ರಕ್ಷಣೆ) ಕಾಯ್ದೆ, 1972ರ ಪರಿಚ್ಛೇದ I ರ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ, ಇದು ಆನೆಗಳು ಮತ್ತು ಅದರಿಂದ ಪಡೆದ ವಸ್ತುಗಳ ವ್ಯಾಪಾರವನ್ನು ನಿಷೇಧಿಸಿದೆ. ಅಳಿವಿನಂಚಿನಲ್ಲಿರುವ ವನ್ಯಪ್ರಾಣಿ ಮತ್ತು ಸಸ್ಯ ಪ್ರಭೇದಗಳ ಅಂತಾರಾಷ್ಟ್ರೀಯ ವ್ಯಾಪಾರದ ಸಮಾವೇಶ (ಸಿ ಐ ಟಿ ಇ ಎಸ್) ಅಡಿಯಲ್ಲಿ ಅದರ ಬಾಧ್ಯತೆಗಳಿಗೆ ಅನುಗುಣವಾಗಿ ಭಾರತದಲ್ಲಿ ಆನೆ ದಂತಗಳ ವಾಣಿಜ್ಯ ವ್ಯಾಪಾರ ಸಹ ನಿಷೇಧಿಸಲಾಗಿದೆ ಹಾಗೂ ವಿದೇಶಿ ವ್ಯಾಪಾರ ನೀತಿಯಡಿಯಲ್ಲಿ ದಂತದ ಆಮದು ಮತ್ತು ರಫ್ತು ನಿಷೇಧಿಸಲಾಗಿದೆ.

ಇದಕ್ಕೂ ಮುನ್ನ, ಹೌರಾದಲ್ಲಿ, ಡಿ ಆರ್‌ ಐ ಅಧಿಕಾರಿಗಳು ಇಬ್ಬರನ್ನು ಬಂಧಿಸಿ, ಬಾಂಗ್ಲಾದೇಶದಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂದು ಶಂಕಿಸಲಾದ ದಂತದಿಂದ ಮಾಡಿದ ಎರಡು ದೇವರ ವಿಗ್ರಹಗಳನ್ನು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕದ ಮೈಸೂರಿನಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ, ಡಿ ಆರ್‌ ಐ ಅಧಿಕಾರಿಗಳು 4 ಕೆಜಿ ಆನೆ ದಂತವನ್ನು ಹಾಗೂ ಅದರ ಅಕ್ರಮ ವ್ಯಾಪಾರದಲ್ಲಿ ತೊಡಗಿದ್ದ ಮೂವರನ್ನು ವಶಕ್ಕೆ ಪಡೆದಿದ್ದು, ಮುಂದಿನ ಕ್ರಮಕ್ಕಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. 

ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಾದ್ಯಂತ ಅನೇಕ ಸ್ಥಳಗಳಲ್ಲಿ 2026ರ ಜುಲೈ 7 ಮತ್ತು 8 ರಂದು, ಅಂತಾರಾಜ್ಯ ವನ್ಯಜೀವಿ ಕಳ್ಳಸಾಗಣೆ ಜಾಲವನ್ನು ಪತ್ತೆಹಚ್ಚಲಾಯಿತು. ಮುಂಬೈನ ಡಿ ಆರ್ ಐ ಮತ್ತು ಮುಂಬೈನ ಸಿಬಿಐ, ಆರ್ಥಿಕ ಅಪರಾಧಗಳ ಶಾಖೆ (ಇಒಬಿ) ನಡೆಸಿದ ಮೊದಲ ಬೃಹತ್ ಜಂಟಿ ಕಾರ್ಯಾಚರಣೆ ಇದಾಗಿದೆ. ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ (ಡಬ್ಲ್ಯೂಸಿಸಿಬಿ) ಬೆಂಬಲದೊಂದಿಗೆ ನಡೆಸಿದ ಈ ಕಾರ್ಯಾಚರಣೆಯ ಸಮಯದಲ್ಲಿ, ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಪರಿಚ್ಛೇದ - I ರಡಿಯಲ್ಲಿ ಪಟ್ಟಿ ಮಾಡಲಾದ ವಿವಿಧ ವನ್ಯಜೀವಿ ಪ್ರಭೇದಗಳಾದ 15 ಕಾಡುಪಾಪ, 2 ಬಿಂಟುರಾಂಗ್ ಗಳು, 28 ನಕ್ಷತ್ರ ಆಮೆಗಳು, 6 ಈಜಿಪ್ಟ್ ರಣಹದ್ದುಗಳು ಮತ್ತು 2 ಶಿಕ್ರಾ ಪಕ್ಷಿಗಳನ್ನು ವಶಪಡಿಸಿಕೊಂಡು ರಕ್ಷಿಸಲಾಗಿದೆ. ಪ್ರಕರಣದ ಗುಪ್ತಚರ ಮಾಹಿತಿಯನ್ನು ಡಿ ಆರ್‌ ಐ ನೀಡಿದ್ದು, ಈಗ ಸಿಬಿಐ ಈ ಪ್ರಕರಣದ ತನಿಖೆ ಮಾಡುತ್ತಿದೆ. ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು ನಂತರ ಸಿಬಿಐ ಅವರನ್ನು ಬಂಧಿಸಿದೆ.

ಇತರ ಕೆಲವು ಸಂದರ್ಭಗಳಲ್ಲಿ, ಬ್ಯಾಂಕಾಕ್, ಕೌಲಾಲಂಪುರ್ ಮತ್ತು ಕೊಲಂಬೊದಿಂದ ಬರುವ ಪ್ರಯಾಣಿಕರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ಸಂರಕ್ಷಿತ ವನ್ಯಜೀವಿಗಳನ್ನು ಭಾರತಕ್ಕೆ ಕಳ್ಳಸಾಗಣೆ ಮಾಡುವ ಹಲವು ಪ್ರಯತ್ನಗಳನ್ನು ಡಿ ಆರ್‌ ಐ ಯಶಸ್ವಿಯಾಗಿ ವಿಫಲಗೊಳಿಸಿದೆ. ಇದರಲ್ಲಿ ಅಲ್ಬಿನೋ ರೆಡ್ ಇಯರ್ಡ್‌ ಟರ್ಟಲ್, ಹೈಪೋ ಝೀರೋ ಬಿಯರ್ಡೆಡ್ ಡ್ರ್ಯಾಗನ್, ಆಫ್ರಿಕನ್ ಸ್ಪರ್ರ್ಡ್ ಟಾರ್‌ ಟಾಯ್ಸ್, ಬೊರ್ನಿಯೊ ಪೈಥಾನ್, ಗ್ರೀನ್ ಇಗುಆನಾ, ಮ್ಯಾಂಗ್ರೋವ್ ಮಾನಿಟರ್ ಲಿಜರ್ಡ್, ಅರ್ಜೆಂಟೀನಾದ ಬ್ಲಾಕ್‌ ಅಂಡ್‌ ವೈಟ್ ಟೆಗು, ಗೋಲ್ಡೀಸ್ ಮಾರ್ಮೊ ಸೆಟ್, ಯೆಲ್ಲೋ ಚೀಕ್ಡ್ ಗಿಬ್ಬನ್, ಇಂಡೋನೇಷಿಯನ್ ಬ್ಲೂ ಟಂಗ್ಡ್ ಸ್ಕಿಂಕ್, ಸಿಯಾಮಾಂಗ್ ಗಿಬ್ಬನ್, ವೂಲಿ ಮಂಕಿ, ಸಿಲ್ವರಿ ಲುಟಂಗ್, ಯೆಲ್ಲೋ ಬೆಲ್ಲಿ ಬಾಲ್ ಪೈಥಾನ್, ಪ್ಯಾಸ್ಟಲ್ ಬಾಲ್ ಪೈಥಾನ್ ಇತ್ಯಾದಿ‌ ಜೀವಿಗಳನ್ನು ವಶಪಡಿಸಿಕೊಂಡು ರಕ್ಷಿಸಲಾಗಿದೆ.

ಬೆಂಗಳೂರು, ವಾರಂಗಲ್, ಪುಣೆ, ಸೂರತ್, ಚೆನ್ನೈ, ಕೋಲ್ಕತ್ತಾ, ತಿರುಚ್ಚಿ, ಮಧುರೈ, ಶ್ರೀಕಾಕುಲಂ, ಹೊಜೈ (ಅಸ್ಸಾಂ), ರಾಜಸ್ಥಾನ, ಮೈಸೂರು ಮತ್ತು ಹೌರಾಗಳಲ್ಲಿ ಡಿ ಆರ್‌ ಐ ನಡೆಸಿದ ಸಂಘಟಿತ ಕಾರ್ಯಾಚರಣೆಗಳಲ್ಲಿ ಪ್ಯಾಂಗೋಲಿನ್ ಮಾಪಕಗಳು, ಚಿರತೆ ಚರ್ಮ, ಸಮುದ್ರ ಕುದುರೆಯಿಂದ ತಯಾರಾದ ವನ್ಯಜೀವಿ ವಸ್ತುಗಳು, ರಕ್ತ ಚಂದನ ಮತ್ತು ಸಂರಕ್ಷಿತ ಜಾತಿಯ ಗಿಬ್ಬನ್ ಗಳು, ಹಲ್ಲಿಗಳು, ಆಮೆಗಳು, ಪಕ್ಷಿಗಳು, ಅಳಿಲುಗಳು, ಹಾವುಗಳು, ಕೆಂಪು ಇರ್ತೆಲೆ ಹಾವು ಸೇರಿದಂತೆ ವನ್ಯಜೀವಿ ಮತ್ತು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಗಳಲ್ಲಿ ಹಲವನ್ನು ಬೆಂಗಳೂರು, ಕೋಲ್ಕತ್ತಾ, ತಿರುಚ್ಚಿ ಮತ್ತು ಮಧುರೈನಲ್ಲಿರುವ ಕಸ್ಟಮ್ಸ್ ನ ವಿಮಾನ ನಿಲ್ದಾಣ ಗುಪ್ತಚರ ಘಟಕಗಳು, ಸಿಬಿಐ, ಡಬ್ಲ್ಯೂಸಿಸಿಬಿ, ರಾಜ್ಯ ಅರಣ್ಯ ಇಲಾಖೆಗಳು ಮತ್ತು ಸ್ಥಳೀಯ ಪೊಲೀಸ್ ಪ್ರಾಧಿಕಾರಗಳು ಸೇರಿದಂತೆ ಪಾಲುದಾರ ಜಾರಿ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕಾರ್ಯಗತಗೊಳಿಸಲಾಗಿದೆ. 

ಗುಪ್ತಚರ ನೇತೃತ್ವದ ಈ ನಿರಂತರ ಕಾರ್ಯಾಚರಣೆಗಳು ಸಂಘಟಿತ ವನ್ಯಜೀವಿ ಅಪರಾಧಗಳನ್ನು ಎದುರಿಸಲು ಹಾಗೂ ಅಳಿವಿನಂಚಿನಲ್ಲಿರುವ ಪ್ರಾಣಿ ಮತ್ತು ಸಸ್ಯಗಳ ಕಳ್ಳಸಾಗಣೆಯಲ್ಲಿ ವ್ಯವಹರಿಸುವ ಅಂತಾರಾಷ್ಟ್ರೀಯ ಜಾಲ ಭೇದಿಸಲು ಡಿ ಆರ್‌ ಐ ನ ಬದ್ಧತೆಯನ್ನು ಒತ್ತಿಹೇಳುತ್ತವೆ. ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯ ಪ್ರಭೇದಗಳ ಅಂತಾರಾಷ್ಟ್ರೀಯ ವ್ಯಾಪಾರ ಸಮಾವೇಶ (ಸಿಐಟಿಇಎಸ್) ಅಡಿಯಲ್ಲಿ ಭಾರತದ ಬಾಧ್ಯತೆಗಳನ್ನು ಬಲಪಡಿಸುವುದನ್ನು ಡಿ ಆರ್‌ ಐ ಮುಂದುವರೆಸಿದ್ದು, ಈ ಮೂಲಕ ದೇಶದ ಶ್ರೀಮಂತ ಜೀವವೈವಿಧ್ಯತೆಯ ರಕ್ಷಣೆಗೆ ಕೊಡುಗೆ ನೀಡುತ್ತಿದೆ.

 

*****


(रिलीज़ आईडी: 2284377) आगंतुक पटल : 4
इस विज्ञप्ति को इन भाषाओं में पढ़ें: English , Gujarati , Urdu , हिन्दी , Marathi , Assamese , Telugu , Malayalam