ಪ್ರಧಾನ ಮಂತ್ರಿಯವರ ಕಛೇರಿ
ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಅವರೊಂದಿಗಿನ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆಯ ಕನ್ನಡ ಅನುವಾದ
प्रविष्टि तिथि:
09 JUL 2026 11:33AM by PIB Bengaluru
ಗೌರವಾನ್ವಿತ, ಮಾನ್ಯ ಪ್ರಧಾನ ಮಂತ್ರಿ ಅಲ್ಬನೀಸ್,
ಎರಡೂ ದೇಶಗಳ ಪ್ರತಿನಿಧಿಗಳು,
ಮಾಧ್ಯಮದ ಸ್ನೇಹಿತರೇ,
ನಮಸ್ಕಾರ!
ಮೆಲ್ಬೋರ್ನ್‌ನಲ್ಲಿ ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತ ಮತ್ತು ಸೌಹಾರ್ದಯುತ ಆತಿಥ್ಯಕ್ಕಾಗಿ ನನ್ನ ಸ್ನೇಹಿತ ಪ್ರಧಾನ ಮಂತ್ರಿ ಅಲ್ಬನೀಸ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನುಸಲ್ಲಿಸಲು ಬಯಸುತ್ತೇನೆ.
ಅವರ ವೈಯಕ್ತಿಕ ಪ್ರಯತ್ನಗಳು ಮತ್ತು ಬದ್ಧತೆಯು ಭಾರತ-ಆಸ್ಟ್ರೇಲಿಯಾ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ ಮತ್ತು ನಮ್ಮ ಪಾಲುದಾರಿಕೆಯ ವ್ಯಾಪ್ತಿಯನ್ನು ವಿಸ್ತರಿಸಿದೆ. ಅವರ ಅಮೂಲ್ಯ ಕೊಡುಗೆಗಾಗಿ ನಾನು ಅವರನ್ನು ಶ್ಲಾಘಿಸುತ್ತೇನೆ.
ಮಿತ್ರರೇ,
ಭಾರತ ಮತ್ತು ಆಸ್ಟ್ರೇಲಿಯಾ
ಎರಡು ಸಕ್ರಿಯ ಪ್ರಜಾಪ್ರಭುತ್ವಗಳು,
ಎರಡು ಬಹುಸಂಸ್ಕೃತಿ ಸಮಾಜಗಳು,
ಮತ್ತು ಎರಡು ಪ್ರಮುಖ ಸಾಗರ ಶಕ್ತಿಗಳು
ಈ ಹಂಚಿಕೆಯ ಗುಣಲಕ್ಷಣಗಳು ಮತ್ತು ನಮ್ಮ ಸಾಮಾನ್ಯ ವಿಶ್ವ ದೂರದೃಷ್ಟಿಯು ಆಳವಾದ ಪರಸ್ಪರ ನಂಬಿಕೆಯೊಂದಿಗೆ ಮುಂದುವರಿಯಲು ನಮಗೆ ಸ್ಫೂರ್ತಿ ನೀಡುತ್ತದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಅಭೂತಪೂರ್ವ ಪ್ರಗತಿಯನ್ನು ಕಂಡಿದೆ ಮತ್ತು ಇಂದು ಮೂರನೇ ವಾರ್ಷಿಕ ಶೃಂಗಸಭೆಯು ನಮ್ಮ ಸಹಕಾರಕ್ಕೆ ಹಲವು ಹೊಸ ಆಯಾಮಗಳನ್ನು ಸೇರ್ಪಡೆ ಮಾಡಿದೆ.
2022ರಲ್ಲಿ ಸಹಿ ಹಾಕಲಾದ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದವು ನಮ್ಮ ವ್ಯಾಪಾರ ಮತ್ತು ಹೂಡಿಕೆಯ ವ್ಯಾಪ್ತಿಯನ್ನು ನಿರಂತರವಾಗಿ ವಿಸ್ತರಿಸಿದೆ. ಸಮತೋಲಿತ, ಮಹತ್ವಾಕಾಂಕ್ಷೆಯ ಮತ್ತು ಎರಡೂ ದೇಶಗಳಿಗೆ ಗೆಲುವು-ಗೆಲುವಿನ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (ಸಿಇಸಿಎ) ದ ಕಡೆಗೆ ನಾವು ಈಗ ತ್ವರಿತವಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ಮೇಲೂ ನಾವು ವೇಗವಾಗಿ ಮುಂದುವರಿಯುತ್ತೇವೆ.
ನಮ್ಮ ನವೀಕರಿಸಬಹುದಾದ ಇಂಧನ ಪಾಲುದಾರಿಕೆಯು ಶುದ್ಧ ಇಂಧನ ಮತ್ತು ಹವಾಮಾನ ಕ್ರಿಯೆಯಲ್ಲಿ ನಮ್ಮ ಪ್ರಯತ್ನಗಳಿಗೆ ಸ್ವಷ್ಟ ರೂಪವನ್ನು ನೀಡುತ್ತಿದೆ. ಆ ಪಾಲುದಾರಿಕೆಯಡಿಯಲ್ಲಿ, ನಾವು ಹೂಡಿಕೆ, ತಂತ್ರಜ್ಞಾನ ವರ್ಗಾವಣೆ ಮತ್ತು ಉದ್ಯಮದಿಂದ ಉದ್ಯಮದ ಸಹಯೋಗಕ್ಕೆ ವಿಶೇಷ ಒತ್ತು ನೀಡುತ್ತಿದ್ದೇವೆ.
ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯನ್ನು ಬೆಂಬಲಿಸಲು, ನಾವು ಗುಜರಾತ್‌ನಲ್ಲಿ ಜಂಟಿಯಾಗಿ ರೂಫ್‌ಟಾಪ್ ಸೌರ ತರಬೇತಿ ಅಕಾಡೆಮಿ ಸ್ಥಾಪಿಸಿದ್ದೇವೆ. ಈ ಅಕಾಡೆಮಿ ಅನೇಕ ಮಹಿಳೆಯರು ಮತ್ತು ಯುವಕರ ಸಾಮರ್ಥ್ಯ ವೃದ್ಧಿಗೆ ಕೊಡುಗೆ ನೀಡುತ್ತದೆ.
ಪರಮಾಣು ಇಂಧನ ಕ್ಷೇತ್ರದಲ್ಲಿ ನಾವು ಇಂದು ಒಂದು ಪ್ರಮುಖ ಒಪ್ಪಂದವನ್ನು ತಲುಪಿದ್ದೇವೆ. ಇದು ಆಸ್ಟ್ರೇಲಿಯಾದಿಂದ ಭಾರತಕ್ಕೆ ಯುರೇನಿಯಂ ಪೂರೈಕೆ ಹಾದಿಯನ್ನು ತೆರೆಯುತ್ತದೆ ಮತ್ತು ನಮ್ಮ ಶುದ್ಧ ಇಂಧನ ಉದ್ದೇಶಗಳಿಗೆ ಹೊಸ ಶಕ್ತಿಯನ್ನು ಒದಗಿಸುತ್ತದೆ.
ನಿರ್ಣಾಯಕ ಖನಿಜಗಳಲ್ಲಿ ನಮ್ಮ ಸಹಕಾರವು ನಮ್ಮ ಕಾರ್ಯತಂತ್ರದ ಭದ್ರತೆ ಮತ್ತು ಶುದ್ಧ ಇಂಧನ ಪರಿವರ್ತನೆಗೆ ಅತ್ಯಗತ್ಯ. ಈ ದೂರದೃಷ್ಟಿಯೊಂದಿಗೆ ಇಂದು ನಾವು ಆಸ್ಟ್ರೇಲಿಯಾ-ಭಾರತ ಪಾಲುದಾರಿಕೆ ಸೈಬರ್, ನಿರ್ಣಾಯಕ ತಂತ್ರಜ್ಞಾನಗಳು, ಪೂರೈಕೆ ಸರಣಿ (ಎಐ-ಪಿಎಸಿಸಿಟಿಎಸ್) ಅನ್ನು ಆರಂಭಿಸಿದ್ದೇವೆ. ಕ್ರಿಟಿಕಲ್ ಮಿನರಲ್ಸ್ ಕಾರಿಡಾರ್‌ನಲ್ಲಿಯೂ ನಾವು ಒಗ್ಗೂಡಿ ಕಾರ್ಯನಿರ್ವಹಿಸುತ್ತೇವೆ.
ಮಿತ್ರರೇ,
ಇಂಡೋ-ಪೆಸಿಫಿಕ್ ಕೇವಲ ಎರಡು ಸಾಗರಗಳ ಸಂಗಮವಲ್ಲ. ಇದು ಭಾರತ ಮತ್ತು ಆಸ್ಟ್ರೇಲಿಯಾದಂತಹ ಸಮಾನ ಮನಸ್ಕ ಪ್ರಜಾಪ್ರಭುತ್ವಗಳ ಹಂಚಿಕೆಯ ಆಕಾಂಕ್ಷೆಗಳ ಸಂಕೇತವಾಗಿದೆ.
ರಕ್ಷಣೆ ಮತ್ತು ಭದ್ರತೆಯಲ್ಲಿ ನಮ್ಮ ಸಹಕಾರವನ್ನು ವೃದ್ಧಿಸಲು ನಾವು ಇಂದು ಒಂದು ಪ್ರಮುಖ ಜಂಟಿ ಘೋಷಣೆಯನ್ನು ಹೊರಡಿಸಿದ್ದೇವೆ. ಭಾರತ-ಆಸ್ಟ್ರೇಲಿಯಾ ರಕ್ಷಣಾ ನಾವೀನ್ಯತೆ ಕಾರಿಡಾರ್ ಮೂಲಕ, ನಾವು ರಕ್ಷಣಾ ನವೋದ್ಯಮಗಳು ಮತ್ತು ಕೈಗಾರಿಕೆಗಳನ್ನು ಸಂಪರ್ಕಿಸುವತ್ತ ಕಾರ್ಯ ಮಾಡುತ್ತೇವೆ.
ನಮ್ಮ ಸಾಗರ ಭದ್ರತಾ ಸಹಯೋಗದ ನೀಲನಕ್ಷೆಯು ಇಂಡೋ-ಪೆಸಿಫಿಕ್‌ನಲ್ಲಿ ನಮ್ಮ ಹಂಚಿಕೆಯ ಪ್ರಯತ್ನಗಳಿಗೆ ಹೊಸ ಶಕ್ತಿಯನ್ನು ಒದಗಿಸುತ್ತದೆ. ಹಡಗು ನಿರ್ಮಾಣ, ಹಡಗು ದುರಸ್ತಿ ಮತ್ತು ನಿರ್ವಹಣೆಯಂತಹ ಕ್ಷೇತ್ರಗಳಲ್ಲಿಯೂ ನಾವು ಒಟ್ಟಾಗಿ ಮುಂದುವರಿಯುತ್ತೇವೆ.
ಮಿತ್ರರೇ,
ನಾವು ಇಂದು ಹಲವಾರು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ವ್ಯಾಪಕ ಚರ್ಚೆಗಳನ್ನು ನಡೆಸಿದ್ದೇವೆ.
ಭಯೋತ್ಪಾದನೆಯು ಯಾವುದೇ ಒಂದು ದೇಶಕ್ಕೆ ಮಾತ್ರ ಸವಾಲಲ್ಲ, ಆದರೆ ಇಡೀ ಮಾನವೀಯತೆಗೆ ಗಂಭೀರ ಬೆದರಿಕೆ ಎಂದು ಭಾರತ ಮತ್ತು ಆಸ್ಟ್ರೇಲಿಯಾ ನಂಬುತ್ತವೆ. ಆದ್ದರಿಂದ, ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟವನ್ನು ಹಂಚಿಕೊಳ್ಳಲಾಗಿದೆ, ನಮ್ಮ ಸಂಕಲ್ಪ ಅಚಲವಾಗಿದೆ ಮತ್ತು ನಮ್ಮ ಸಹಕಾರವು ಬಲವಾಗಿ ಬೆಳೆಯುತ್ತಲೇ ಇದೆ.
ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಸಂಘರ್ಷಗಳ ಪರಿಹಾರವು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಮಾತ್ರ ಸಾಧ್ಯ ಎಂದು ನಾವು ನಂಬುತ್ತೇವೆ. ಇಡೀ ಇಂಡೋ-ಪೆಸಿಫಿಕ್ ಪ್ರದೇಶದಾದ್ಯಂತ, ಶಾಂತಿ, ಸ್ಥಿರತೆ, ಸಂಚರಣೆಯ ಸ್ವಾತಂತ್ರ್ಯ ಮತ್ತು ನಿಯಮ ಆಧಾರಿತ ಕ್ರಮವನ್ನು ಮತ್ತಷ್ಟು ಬಲಪಡಿಸಲು ನಾವು ಒಗ್ಗೂಡಿ ಕೆಲಸ ಮಾಡುತ್ತೇವೆ.
ಮಿತ್ರರೇ,
ನಮ್ಮ ಸಂಬಂಧದ ಅತ್ಯಂತ ವಿಶಿಷ್ಟ ಶಕ್ತಿ ನಮ್ಮ ಜನರ ನಡುವಿನ ಸಂಬಂಧಗಳು. ಭಾರತೀಯ ಮೂಲದ ಜನರು ಆಸ್ಟ್ರೇಲಿಯಾದ ಆರ್ಥಿಕ ಮತ್ತು ಸಾಮಾಜಿಕ ಜೀವನಕ್ಕೆ ಸಕಾರಾತ್ಮಕ ಕೊಡುಗೆಗಳನ್ನು ನೀಡುತ್ತಿದ್ದಾರೆ.
ಆಸ್ಟ್ರೇಲಿಯಾ ಭಾರತೀಯ ವಿದ್ಯಾರ್ಥಿಗಳಿಗೆ ಆದ್ಯತೆಯ ತಾಣವಾಗಿದೆ. ಭಾರತದಲ್ಲಿ ಆಸ್ಟ್ರೇಲಿಯಾ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳನ್ನು ತೆರೆಯುವುದು ನಮ್ಮ ಜ್ಞಾನ ಪಾಲುದಾರಿಕೆಗೆ ಹೊಸ ಅಧ್ಯಾಯವನ್ನು ಸೇರ್ಪಡೆ ಮಾಡಿದೆ. ಎರಡೂ ದೇಶಗಳ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಪ್ರವಾಸಿಗರ ನಡುವಿನ ವಿನಿಮಯ ಹೆಚ್ಚಿಸಲು ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ.
ಮಿತ್ರರೇ,
ನಾವು ಇಂದು ವಿಶ್ವದ ಕ್ರೀಡಾ ರಾಜಧಾನಿ ಮೆಲ್ಬೋರ್ನ್‌ನಲ್ಲಿರುವುದರಿಂದ ಕ್ರೀಡೆಗಳ ಬಗ್ಗೆ ಮಾತನಾಡದಿರುವುದು ಟಾಸ್ ನಂತರ ಕ್ರಿಕೆಟ್ ಪಂದ್ಯವನ್ನು ಆರಂಭಿಸದಿರುವಂತಾಗುತ್ತದೆ!
ಕ್ರಿಕೆಟ್ ಭಾರತ-ಆಸ್ಟ್ರೇಲಿಯಾ ಸಂಬಂಧಗಳ ವಿಶಿಷ್ಟ ರಾಜತಾಂತ್ರಿಕ ಭಾಷೆಯಾಗಿದೆ. ಅದಕ್ಕಾಗಿಯೇ ನಮ್ಮ ಸಭೆಗಳು ಕ್ರಿಕೆಟ್ ಪಂದ್ಯಗಳಂತೆ ಭಾಸವಾಗುತ್ತವೆ:
ಕಾರ್ಯಸೂಚಿ - ಒಂದು ದಿನದ ಪಂದ್ಯದಂತೆ ಕೇಂದ್ರೀಕೃತವಾಗಿದೆ,
ನಿರ್ಧಾರಗಳು - T20 ಯಷ್ಟು ವೇಗವಾಗಿ,
ಮತ್ತು ನಮ್ಮ ಪಾಲುದಾರಿಕೆ - ಟೆಸ್ಟ್ ಪಂದ್ಯದಷ್ಟೇ ದೀರ್ಘಕಾಲೀನ ಮತ್ತು ಆಳವಾದದ್ದು.
ಮುಂಬರುವ ವರ್ಷಗಳಲ್ಲಿಎರಡೂ ದೇಶಗಳು ಒಲಿಂಪಿಕ್ಸ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಂತಹ ಪ್ರಮುಖ ಕ್ರೀಡಾಕೂಟಗಳನ್ನು ಆಯೋಜಿಸುತ್ತವೆ. ಇದು ನಮ್ಮ ಕ್ರೀಡಾ ಸಹಕಾರವನ್ನು ಹೆಚ್ಚಿಸುವುದಲ್ಲದೆ, ಕ್ರೀಡಾ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಹಲವು ಅವಕಾಶಗಳನ್ನು ಸೃಷ್ಟಿಸುತ್ತದೆ.
ಮಿತ್ರರೇ,
ಇಂದು ನಮ್ಮ ಚರ್ಚೆಗಳ ಸಂದೇಶವು ಸ್ಪಷ್ಟವಾಗಿದೆ: ಭಾರತ-ಆಸ್ಟ್ರೇಲಿಯಾ ಪಾಲುದಾರಿಕೆಯು ವರ್ತಮಾನದ ಪಾಲುದಾರಿಕೆ ಮಾತ್ರವಲ್ಲ, ಭವಿಷ್ಯದ ಪಾಲುದಾರಿಕೆಯೂ ಆಗಿದೆ. ನಮ್ಮ ಹಂಚಿಕೆಯ ದೂರದೃಷ್ಟಿಯ ಅಡಿಪಾಯದ ಮೇಲೆ ನಾವು ಒಗ್ಗೂಡಿ ಮುಂದುವರಿಯುತ್ತೇವೆ.
ಪ್ರಧಾನ ಮಂತ್ರಿ ಅಲ್ಬನೀಸ್,
ನಿಮ್ಮ ಸ್ನೇಹ, ನಿಮ್ಮ ಬದ್ಧತೆ ಮತ್ತು ಇಂದು ನಾವು ನಡೆಸಿದ ಅರ್ಥಪೂರ್ಣ ಚರ್ಚೆಗಳಿಗೆ ನಾನು ಮತ್ತೊಮ್ಮೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
1.4 ಬಿಲಿಯನ್ ಭಾರತೀಯರೊಂದಿಗೆ ನಾನು ನಿಮ್ಮನ್ನು ಮತ್ತೊಮ್ಮೆ ಭಾರತಕ್ಕೆ ಸ್ವಾಗತಿಸಲು ಎದುರು ನೋಡುತ್ತಿದ್ದೇನೆ.
ತುಂಬಾ ತುಂಬಾ ಧನ್ಯವಾದಗಳು.
ಘೋಷಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
*****
(रिलीज़ आईडी: 2283273)
आगंतुक पटल : 4
इस विज्ञप्ति को इन भाषाओं में पढ़ें:
English
,
Urdu
,
हिन्दी
,
Assamese
,
Bengali
,
Bengali-TR
,
Manipuri
,
Punjabi
,
Gujarati
,
Odia
,
Telugu
,
Malayalam