ಆಯುಷ್
ಯೋಗ ಪಾರ್ಕ್ ಪೋರ್ಟಲ್: ಸಾರ್ವಜನಿಕ ಸ್ಥಳಗಳನ್ನು ಸಮುದಾಯದ ಸ್ವಾಸ್ಥ್ಯ ಕೇಂದ್ರಗಳನ್ನಾಗಿ ಪರಿವರ್ತಿಸುವಿಕೆ
ಯೋಗ ಪಾರ್ಕ್ ಗಳು ಸ್ವಾಸ್ಥ್ಯ ಮತ್ತು ರೋಗನಿರೋಧಕ ಆರೋಗ್ಯ ರಕ್ಷಣೆಯ ಸಮುದಾಯದ ಆಧಾರಸ್ತಂಭಗಳಾಗಿ ಕಾರ್ಯನಿರ್ವಹಿಸಲಿವೆ
प्रविष्टि तिथि:
16 JUN 2026 2:29PM by PIB Bengaluru
ಭಾರತದ ಸಮುದಾಯ ಸ್ಥಳಗಳು, ನಗರ ಪ್ರದೇಶಗಳು ಮತ್ತು ಉದ್ಯಾನವನಗಳು ಜನರನ್ನು ಒಗ್ಗೂಡಿಸುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಬಹುಕಾಲದಿಂದ ಪ್ರಮುಖ ಪಾತ್ರ ವಹಿಸುತ್ತಿವೆ. ನಗರ ಜೀವನವು ಹೆಚ್ಚೆಚ್ಚು ವೇಗವನ್ನು ಪಡೆದುಕೊಳ್ಳುತ್ತಿರುವ ಈ ದಿನಗಳಲ್ಲಿ, ಇಂತಹ ಸಾರ್ವಜನಿಕ ಸ್ಥಳಗಳು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಕೇಂದ್ರಗಳಾಗಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇವುಗಳ ಸಾಮರ್ಥ್ಯವನ್ನು ಗುರುತಿಸಿರುವ ಆಯುಷ್ ಸಚಿವಾಲಯವು, ಭಾರತದಾದ್ಯಂತ ಇರುವ ಪ್ರಸ್ತುತ ಉದ್ಯಾನವನಗಳನ್ನು 'ಸಮುದಾಯದ ಸ್ವಾಸ್ಥ್ಯ ಕೇಂದ್ರಗಳಾಗಿ' (ಕಮ್ಯುನಿಟಿ ವೆಲ್ನೆಸ್ ಹಬ್ಸ್) ಪರಿವರ್ತಿಸಲು 'ಯೋಗ ಪಾರ್ಕ್ ಪೋರ್ಟಲ್' ಅನ್ನು ಪ್ರಾರಂಭಿಸಿದೆ. ಇಲ್ಲಿ ಯೋಗ, ಧ್ಯಾನ ಮತ್ತು ಆರೋಗ್ಯಕರ ಜೀವನವು ದೈನಂದಿನ ಬದುಕಿನ ಭಾಗವಾಗಲಿದೆ.
ಮಧ್ಯಪ್ರದೇಶದ ಖಜುರಾಹೊದಲ್ಲಿ ನಡೆದ 'ಅಂತಾರಾಷ್ಟ್ರೀಯ ಯೋಗ ದಿನ 2026'ರ 25 ದಿನಗಳ ಕೌಂಟ್ಡೌನ್ ಕಾರ್ಯಕ್ರಮದಲ್ಲಿ, ಆಯುಷ್ ಕೇಂದ್ರ ರಾಜ್ಯ ಖಾತೆ ಸಚಿವರಾದ (ಸ್ವತಂತ್ರ ಉಸ್ತುವಾರಿ) ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಖಾತೆ ಸಚಿವರಾದ ಶ್ರೀ ಪ್ರತಾಪ್ ರಾವ್ ಜಾಧವ್ ಅವರು ಈ ಯೋಗ ಪಾರ್ಕ್ ಪೋರ್ಟಲ್ ಗೆ ಚಾಲನೆ ನೀಡಿದರು. ಮರು-ಚಾಲನೆಗೊಂಡ 'ಯೋಗ ಸಂಗಮ ಪೋರ್ಟಲ್' ಜೊತೆಗೆ ಅನಾವರಣಗೊಂಡ ಈ ಪ್ಲಾಟ್ಫಾರ್ಮ್, ಯೋಗವನ್ನು ತಳಮಟ್ಟದವರೆಗೆ ಕೊಂಡೊಯ್ಯಲು ಮತ್ತು ದೇಶಾದ್ಯಂತ ಸುಸ್ಥಿರ ಸ್ವಾಸ್ಥ್ಯ ಮೂಲಸೌಕರ್ಯವನ್ನು ಸೃಷ್ಟಿಸಲು ಸಚಿವಾಲಯವು ಕೈಗೊಂಡಿರುವ ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿದೆ.
ಯೋಗ ಪಾರ್ಕ್ ಉಪಕ್ರಮವು ಪ್ರಮುಖವಾಗಿ, ಉದ್ಯಾನವನಗಳನ್ನು ಕೇವಲ ಮನರಂಜನಾ ಸ್ಥಳಗಳಾಗಿ ಮಾತ್ರ ನೋಡದೆ ಅವುಗಳನ್ನು ಸಮುದಾಯd ಸ್ವಾಸ್ಥ್ಯ ಕೇಂದ್ರಗಳಾಗಿ ಮರುಕಲ್ಪನೆ ಮಾಡಲು ಬಯಸುತ್ತದೆ. ಈ ಪೋರ್ಟಲ್ ಮೂಲಕ, ಪಂಚಾಯತ್ ರಾಜ್ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWAs), ಸರ್ಕಾರೇತರ ಸಂಸ್ಥೆಗಳು (NGOs), ಕಾರ್ಪೊರೇಟ್ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳು ಪ್ರಸ್ತುತ ಇರುವ ಉದ್ಯಾನವನಗಳನ್ನು ಯೋಗ ಪಾರ್ಕ್ಗಳಾಗಿ ಅಭಿವೃದ್ಧಿಪಡಿಸುವಲ್ಲಿ ಭಾಗವಹಿಸಬಹುದಾಗಿದೆ. ಇವು ನಿಯಮಿತ ಯೋಗ ಅಭ್ಯಾಸ, ಧ್ಯಾನ, ಮುನ್ನೆಚ್ಚರಿಕೆಯ ಆರೋಗ್ಯ ರಕ್ಷಣೆ ಮತ್ತು ಸಾಮುದಾಯಿಕ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುತ್ತವೆ.
ಈ ಉಪಕ್ರಮದ ಮಹತ್ವವನ್ನು ಉಲ್ಲೇಖಿಸಿದ ಶ್ರೀ ಪ್ರತಾಪರಾವ್ ಜಾಧವ್ ಅವರು, ಯೋಗ ಪಾರ್ಕ್ಗಳನ್ನು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಮತ್ತು ಭಾರತದ ಮುನ್ನೆಚ್ಚರಿಕೆಯ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಶಾಶ್ವತ ಸಾಮುದಾಯಿಕ ಆಸ್ತಿಗಳಾಗಿ ಬಳಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ. ಈ ಉಪಕ್ರಮವು ಯೋಗವನ್ನು ದೈನಂದಿನ ಜೀವನದಲ್ಲಿ ಸಂಯೋಜಿಸಲು ಮತ್ತು ದೇಶದಾದ್ಯಂತದ ನೆರೆಹೊರೆಯ ಹಾಗೂ ಸಮುದಾಯಗಳಲ್ಲೇ ಸ್ವಾಸ್ಥ್ಯದ ಲಭ್ಯತೆಯನ್ನು ಖಚಿತಪಡಿಸಲು ಸಚಿವಾಲಯವು ಹೊಂದಿರುವ ವ್ಯಾಪಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಕೇವಲ ಭೌತಿಕ ಅಭಿವೃದ್ಧಿಯ ಮೇಲಷ್ಟೇ ಗಮನ ಹರಿಸುವ ಸಾಂಪ್ರದಾಯಿಕ ಮೂಲಸೌಕರ್ಯ ಯೋಜನೆಗಳಿಗಿಂತ ಭಿನ್ನವಾಗಿ, ಯೋಗ ಪಾರ್ಕ್ ಪ್ರಕ್ರಿಯೆಯು ಸ್ವಾಸ್ಥ್ಯ, ಪರಿಸರ ಸುಸ್ಥಿರತೆ ಮತ್ತು ಸಾಮಾಜಿಕ ಭಾಗವಹಿಸುವಿಕೆಯನ್ನು ಒಟ್ಟುಗೂಡಿಸುತ್ತದೆ. ಪ್ರಸ್ತುತ ಇರುವ ಸಾರ್ವಜನಿಕ ಉದ್ಯಾನವನಗಳನ್ನು ಯೋಗ ಅಭ್ಯಾಸ, ಧ್ಯಾನ ಮತ್ತು ಸಾಮುದಾಯಿಕ ಸ್ವಾಸ್ಥ್ಯ ಚಟುವಟಿಕೆಗಳಿಗೆ ಸೂಕ್ತವಾದ ಆಹ್ಲಾದಕರ ಸ್ಥಳಗಳಾಗಿ ಮೇಲ್ದರ್ಜೆಗೇರಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಎಲ್ಲಾ ವಯೋಮಾನದ ಜನರು ನಿಯಮಿತವಾಗಿ ಭಾಗವಹಿಸುವುದನ್ನು ಪ್ರೋತ್ಸಾಹಿಸಲು ಮೀಸಲಾದ ಯೋಗ ವೇದಿಕೆಗಳು, ಧ್ಯಾನ ವಲಯಗಳು, ಹಸಿರು ಪರಿಸರ, ಜಾಗೃತಿ ಸೌಲಭ್ಯಗಳು ಮತ್ತು ಸಾಮೂಹಿಕ ತರಗತಿಗಳಿಗಾಗಿ ಮುಕ್ತ ಸ್ಥಳಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ.
ಸಹಯೋಗದ ಅನುಷ್ಠಾನ ಮಾದರಿಯು ಈ ಉಪಕ್ರಮದ ಒಂದು ವಿಶಿಷ್ಟ ವೈಶಿಷ್ಟ್ಯವಾಗಿದೆ. ಸೂಕ್ತವಾದ ಉದ್ಯಾನವನಗಳನ್ನು ಗುರುತಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಸಾಮುದಾಯಿಕ ಸಂಘಟನೆಗಳು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ, ಹಾಗೆಯೇ ಯೋಗ ಸಂಸ್ಥೆಗಳು ಜಾಗೃತಿ ಕಾರ್ಯಕ್ರಮಗಳು ಮತ್ತು ನಿಯಮಿತ ಯೋಗ ತರಗತಿಗಳಿಗೆ ಬೆಂಬಲ ನೀಡಬಹುದು. ಈ ಉಪಕ್ರಮವು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಮೂಲಕ ಭಾಗವಹಿಸುವಿಕೆಯನ್ನು ಸಹ ಪ್ರೋತ್ಸಾಹಿಸುತ್ತದೆ, ಇದು ಸ್ಥಳೀಯ ಸಮುದಾಯಗಳಿಗೆ ನೇರವಾಗಿ ಪ್ರಯೋಜನವನ್ನು ನೀಡುವ ಸ್ವಾಸ್ಥ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಕಂಪನಿಗಳು ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ.
ದೈನಂದಿನ ಯೋಗಾಭ್ಯಾಸ, ಆರೋಗ್ಯ ಜಾಗೃತಿ ಚಟುವಟಿಕೆಗಳು ಮತ್ತು ಸಮುದಾಯದ ಸ್ವಾಸ್ಥ್ಯ ಕಾರ್ಯಕ್ರಮಗಳಿಗೆ ಸುಲಭವಾಗಿ ಪ್ರ ಲಭ್ಯವಾಗುವ ಸ್ಥಳಗಳನ್ನು ಒದಗಿಸುವ ಮೂಲಕ, ಸಿ ಎಸ್ ಆರ್ (CSR) ಬೆಂಬಲಿತ 'ಯೋಗ ಪಾರ್ಕ್'ಗಳು ಶಾಶ್ವತವಾದ ಸಾರ್ವಜನಿಕ ಆರೋಗ್ಯದ ಪರಂಪರೆಯನ್ನು ಸೃಷ್ಟಿಸಬಲ್ಲವು ಎಂದು ಸಚಿವಾಲಯವು ಒತ್ತಿ ಹೇಳಿದೆ. ಸಾಮಾಜಿಕ ಯೋಗಕ್ಷೇಮಕ್ಕೆ ನೀಡುವ ಕೊಡುಗೆಗಾಗಿ ಪಾಲ್ಗೊಳ್ಳುವ ಕಂಪನಿಗಳಿಗೆ ಸೂಕ್ತ ಮನ್ನಣೆ ದೊರೆಯಲಿದ್ದು, ಇದು ರೋಗನಿರೋಧಕ ಆರೋಗ್ಯ ರಕ್ಷಣೆ (preventive healthcare) ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಖಾಸಗಿ ವಲಯದ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತದೆ.
ಕೇವಲ ಮೂಲಸೌಕರ್ಯ ಅಭಿವೃದ್ಧಿಯ ಆಚೆಗೆ, ಯೋಗ ಪಾರ್ಕ್ ಪೋರ್ಟಲ್ ರಾಷ್ಟ್ರವ್ಯಾಪಿ ಭಾಗವಹಿಸುವಿಕೆಗಾಗಿ ಒಂದು ಡಿಜಿಟಲ್ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ. ಪಾಲುದಾರರು ಈ ಉಪಕ್ರಮದೊಂದಿಗೆ ಕೈಜೋಡಿಸಲು ಅಗತ್ಯವಿರುವ ಮಾರ್ಗಸೂಚಿಗಳು, ಪರಿಕಲ್ಪನಾ ಟಿಪ್ಪಣಿಗಳು, ನೋಂದಣಿ ವ್ಯವಸ್ಥೆಗಳು ಮತ್ತು ಸಂಪನ್ಮೂಲಗಳನ್ನು ಈ ಪ್ಲಾಟ್ಫಾರ್ಮ್ ಒದಗಿಸುತ್ತದೆ. ಒಂದೇ ಪೋರ್ಟಲ್ ಮೂಲಕ ಸರ್ಕಾರಿ ಸಂಸ್ಥೆಗಳು, ಸ್ಥಳೀಯ ಆಡಳಿತ ಮಂಡಳಿಗಳು, ಸಮುದಾಯ ಸಂಘಟನೆಗಳು ಮತ್ತು ಕಾರ್ಪೊರೇಟ್ ಪಾಲುದಾರರನ್ನು ಒಗ್ಗೂಡಿಸುವ ಮೂಲಕ, ಸ್ವಾಸ್ಥ್ಯ ಮತ್ತು ಸಾರ್ವಜನಿಕ ಆರೋಗ್ಯವನ್ನು ಕೇಂದ್ರವಾಗಿರಿಸಿಕೊಂಡು ಸಮನ್ವಯತೆಯಿಂದ ಕೂಡಿದ ರಾಷ್ಟ್ರೀಯ ಚಳುವಳಿಯನ್ನು ಸೃಷ್ಟಿಸುವುದು ಸಚಿವಾಲಯದ ಪ್ರಮುಖ ಗುರಿಯಾಗಿದೆ.
ಈ ಉಪಕ್ರಮವು 2026ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ವಿಷಯವಾದ "ಆರೋಗ್ಯಕರ ವಯಸ್ಸಾಗುವಿಕೆಗಾಗಿ ಯೋಗ" ಎಂಬುದರೊಂದಿಗೆ ನಿಕಟವಾಗಿ ಹೊಂದಿಕೆಯಾಗುತ್ತದೆ. ಪ್ರಪಂಚದಾದ್ಯಂತದ ಜನರು ಜೀವನಶೈಲಿ ಅಸ್ವಸ್ಥತೆಗಳು, ಒತ್ತಡ ಮತ್ತು ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸವಾಲುಗಳಿಗೆ ಸಂಬಂಧಿಸಿದಂತೆ ಬೆಳೆಯುತ್ತಿರುವ ಕಳವಳಗಳನ್ನು ಎದುರಿಸುತ್ತಿರುವುದರಿಂದ, ಸುಲಭವಾಗಿ ಲಭ್ಯವಾಗುವ ಸಾರ್ವಜನಿಕ ಸ್ವಾಸ್ಥ್ಯ ಸ್ಥಳಗಳು ನಿಯಮಿತ ದೈಹಿಕ ಚಟುವಟಿಕೆ, ಸಾವಧಾನತೆ ಮತ್ತು ಸಾಮಾಜಿಕ ಸಂವಹನವನ್ನು ಪ್ರೋತ್ಸಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಯೋಗ ಪಾರ್ಕ್ ಗಳನ್ನು ಮಕ್ಕಳು, ಯುವಕರು, ಉದ್ಯೋಗಿಗಳು ಮತ್ತು ಹಿರಿಯ ನಾಗರಿಕರು ಎಲ್ಲರೂ ತಮ್ಮ ದೈನಂದಿನ ಜೀವನದಲ್ಲಿ ಯೋಗದ ಅಭ್ಯಾಸದಿಂದ ಪ್ರಯೋಜನ ಪಡೆಯಬಹುದಾದ ಒಳಗೊಳ್ಳುವಿಕೆಯ ವಾತಾವರಣವಾಗಿ ಕಲ್ಪಿಸಲಾಗಿದೆ.
ಮುಖ್ಯವಾಗಿ, ಯೋಗ ಪಾರ್ಕ್ ವಾರ್ಷಿಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಆಚರಣೆಗಿಂತಲೂ ಮಿಗಿಲಾದ ಒಂದು ಸುದೀರ್ಘ ಪರಂಪರೆಯನ್ನು ಸೃಷ್ಟಿಸಲು ಬಯಸುತ್ತದೆ. ಸಾಮೂಹಿಕ ಯೋಗ ಪ್ರದರ್ಶನಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳು ಜಾಗೃತಿಯನ್ನು ಮೂಡಿಸುತ್ತವೆಯಾದರೂ, ಮೀಸಲಾದ ಸ್ವಾಸ್ಥ್ಯ ಸ್ಥಳಗಳ ರಚನೆಯು ವರ್ಷಪೂರ್ತಿ ನಾಗರಿಕರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸಬಹುದಾದ ಒಂದು ಶಾಶ್ವತ ಸಾಮುದಾಯಿಕ ಸಂಪನ್ಮೂಲವನ್ನು ಒದಗಿಸುತ್ತದೆ. ಈ ನಿಟ್ಟಿನಲ್ಲಿ, ಈ ಉಪಕ್ರಮವು ಕೇವಲ ಕಾರ್ಯಕ್ರಮ-ಆಧಾರಿತ ಭಾಗವಹಿಸುವಿಕೆಯಿಂದ ನಿರಂತರ ಸ್ವಾಸ್ಥ್ಯ ತೊಡಗಿಸಿಕೊಳ್ಳುವಿಕೆಯ ಕಡೆಗಿನ ಬದಲಾವಣೆಯನ್ನು ಪ್ರತಿನಿಧಿಸುತ್ತದೆ.
ಕಳೆದ ದಶಕದಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ವಿಶ್ವದ ಅತಿ ದೊಡ್ಡ ಸಾರ್ವಜನಿಕ ಸ್ವಾಸ್ಥ್ಯ ಆಂದೋಲನಗಳಲ್ಲಿ ಒಂದಾಗಿ ವಿಕಸನಗೊಂಡಿದೆ. ಯೋಗ ಪಾರ್ಕ್ ಪೋರ್ಟಲ್ ಆ ವೇಗವನ್ನು ಬಳಸಿಕೊಂಡು, ಜಾಗೃತಿಯನ್ನು ಮೂಲಸೌಕರ್ಯವನ್ನಾಗಿ ಮತ್ತು ಭಾಗವಹಿಸುವಿಕೆಯನ್ನು ದೀರ್ಘಕಾಲದ ಸಾಮುದಾಯಿಕ ಪ್ರಯೋಜನವನ್ನಾಗಿ ಪರಿವರ್ತಿಸುತ್ತದೆ. ಗ್ರಾಮೀಣ ಮತ್ತು ನಗರ ಭಾರತದಾದ್ಯಂತ ಹೆಚ್ಚಿನ ಉದ್ಯಾನವನಗಳನ್ನು ಈ ಉಪಕ್ರಮದಲ್ಲಿ ಸಂಯೋಜಿಸುವುದರಿಂದ, ಯೋಗ ಪಾರ್ಕ್ ಮುನ್ನೆಚ್ಚರಿಕೆಯ ಆರೋಗ್ಯ ರಕ್ಷಣೆ, ಪರಿಸರ ಸಾಮರಸ್ಯ ಮತ್ತು ಸಮಗ್ರ ಸ್ವಾಸ್ಥ್ಯದ ಕಡೆಗೆ ಭಾರತದ ಬದ್ಧತೆಯ ಶಾಶ್ವತ ಸಂಕೇತವಾಗುವ ಸಾಮರ್ಥ್ಯವನ್ನು ಹೊಂದಿದೆ.

*****
(रिलीज़ आईडी: 2273551)
आगंतुक पटल : 22