ಶಿಕ್ಷಣ ಸಚಿವಾಲಯ
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಜೂನ್ 14, 2026 ರಂದು ಫ್ರಾನ್ಸ್‌ನ ʻನೈಸ್ʼ ನಗರದಲ್ಲಿ ʻಭಾರತ್ ಇನ್ನೋವೇಟ್ಸ್-2026ʼ ಕಾರ್ಯಕ್ರಮವನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ
ಜಾಗತಿಕ ಡೀಪ್ ಟೆಕ್, ನಾವೀನ್ಯತೆ ಮತ್ತು ನವೋದ್ಯಮ (ಸ್ಟಾರ್ಟ್-ಅಪ್) ಪರಿಸರ ವ್ಯವಸ್ಥೆಗಳನ್ನು ಮುನ್ನಡೆಸಲು ಇಂಡೋ-ಫ್ರೆಂಚ್ ಪಾಲುದಾರಿಕೆ
प्रविष्टि तिथि:
12 JUN 2026 6:00PM by PIB Bengaluru
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ 2026ರ ಜೂನ್ 14ರಂದು ಫ್ರಾನ್ಸ್‌ನ ನೈಸ್ ನಗರದಲ್ಲಿರುವ ಪ್ರಮುಖ ಪ್ರದರ್ಶನ ಕೇಂದ್ರ ʻಪಲೈಸ್ ಡೆಸ್ ಎಕ್ಸ್ ಪೋಸಿಶನ್ಸ್ ಡಿ ನೈಸ್ʼನಲ್ಲಿ ʻಭಾರತ್ ಇನ್ನೋವೇಟ್ಸ್-2026ʼ ಕಾರ್ಯಕ್ರಮವನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ.

ಭಾರತ ಸರ್ಕಾರವು ಆಯೋಜಿಸುತ್ತಿರುವ ʻಭಾರತ್ ಇನ್ನೋವೇಟ್ಸ್-2026ʼ ಕಾರ್ಯಕ್ರಮವು ಕೇಂದ್ರ ಶಿಕ್ಷಣ ಸಚಿವಾಲಯದ ಉಪಕ್ರಮವಾಗಿದೆ. ಇದರಲ್ಲಿ 120 ಭಾರತೀಯ ನವೋದ್ಯಮಿಗಳು, 15ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು (ಎಚ್‌ಇಐ) ಮತ್ತು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಸಾಹಸಿ ಬಂಡವಾಳ ಸಂಸ್ಥೆಗಳು ಸೇರಿದಂತೆ 500ಕ್ಕೂ ಹೆಚ್ಚು ಹೂಡಿಕೆದಾರರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಸುಧಾರಿತ ಕಂಪ್ಯೂಟಿಂಗ್, ಸೆಮಿಕಂಡಕ್ಟರ್‌ಗಳು, ಬಾಹ್ಯಾಕಾಶ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಇಂಧನ, ಆರೋಗ್ಯ ರಕ್ಷಣೆ ಮತ್ತು ಉತ್ಪಾದನೆಯಂತಹ 13 ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿದೆ. ಬೆಳೆಯುತ್ತಿರುವ ಭಾರತದ ನಾವೀನ್ಯತೆ ಮತ್ತು ಡೀಪ್ ಟೆಕ್ ಪರಿಸರ ವ್ಯವಸ್ಥೆಯನ್ನು ಈ ಕಾರ್ಯಕ್ರಮವನು ಎತ್ತಿ ತೋರಿಸುತ್ತದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ. ಎಸ್.ಜೈಶಂಕರ್ ಹಾಗೂ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಉಪಸ್ಥಿತರಿರುವ ನಿರೀಕ್ಷೆಯಿದೆ. ʻಭಾರತ್ ಇನ್ನೋವೇಟ್ಸ್-2026ʼಗಾಗಿ ಭಾರತದಿಂದ 120 ನವೋದ್ಯಮಗಳನ್ನು ಆಯ್ಕೆ ಮಾಡಲಾಗುವುದು. ತಾಂತ್ರಿಕ ಮೇಲ್ವಿಚಾರಣಾ ಸಮಿತಿಯ ನೇತೃತ್ವ ವಹಿಸಿರುವ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಶ್ರೀ ಅಜಯ್ ಕುಮಾರ್ ಸೂದ್ ಅವರು ಸಹ ಉಪಸ್ಥಿತರಿರುವ ನಿರೀಕ್ಷೆಯಿದೆ.
ನೈಸ್ ನಗರದಲ್ಲಿ ನಡೆಯಲಿರುವ ʻಭಾರತ್ ಇನ್ನೋವೇಟ್ಸ್-2026ʼ ಚೊಚ್ಚಲ ಆವೃತ್ತಿಯು ಭಾರತದ ಆಳವಾದ ಟೆಕ್ ನವೋದ್ಯಮಿಗಳು ಮತ್ತು ನವೋದ್ಯಮಗಳನ್ನು ಜಾಗತಿಕ ಹೂಡಿಕೆದಾರರು ಮತ್ತು ಉದ್ಯಮಕ್ಕೆ ಪ್ರದರ್ಶಿಸುತ್ತದೆ. ಈ ಕಾರ್ಯಕ್ರಮವು ಭಾರತ ಮತ್ತು ಜಾಗತಿಕ ಮಧ್ಯಸ್ಥಗಾರರ ನಡುವೆ ನಾವೀನ್ಯತೆ ನೇತೃತ್ವದ ಪಾಲುದಾರಿಕೆಯನ್ನು ಮುನ್ನಡೆಸಲು ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಡೀಪ್ ಟೆಕ್, ಸಂಶೋಧನೆ ಮತ್ತು ಅಭಿವೃದ್ಧಿ, ನವೋದ್ಯಮ ಸಾಮರ್ಥ್ಯವರ್ಧನೆ, ಮತ್ತು ಗಡಿಯಾಚೆಗಿನ ಹೂಡಿಕೆ ಸೌಲಭ್ಯದಲ್ಲಿ ಸಹಯೋಗದ ನೀತಿಗಳ ಬಲವರ್ಧನೆ ಸೇರಿದಂತೆ ಹಲವಾರು ಪ್ರಮುಖ ಘೋಷಣೆಗಳು ಮತ್ತು ಫಲಿತಾಂಶಗಳನ್ನು ಈ ಸಂದರ್ಭದಲ್ಲಿ ನಿರೀಕ್ಷಿಸಲಾಗಿದೆ.
ಸಹ-ಅಭಿವೃದ್ಧಿ, ತಂತ್ರಜ್ಞಾನ ವಿನಿಮಯ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ವೇಗವರ್ಧನೆಯ ಮೇಲೆ ಗಮನ ಕೇಂದ್ರೀಕರಿಸಿ ಭಾರತೀಯ ಮತ್ತು ಫ್ರೆಂಚ್ ನಾವೀನ್ಯತೆ ಪರಿಸರ ವ್ಯವಸ್ಥೆಗಳ ನಡುವಿನ ಸಾಂಸ್ಥಿಕ ಪಾಲುದಾರಿಕೆಯ ಹೊಸ ಮಾರ್ಗಗಳನ್ನು ಈ ಕಾರ್ಯಕ್ರಮವು ಉಲ್ಲೇಖಿಸುತ್ತದೆ. ಹೂಡಿಕೆಗಳು, ತಂತ್ರಜ್ಞಾನ ಮೌಲ್ಯೀಕರಣ, ಸಹ-ಅಭಿವೃದ್ಧಿ ಅವಕಾಶಗಳು, ಪ್ರಾಯೋಗಿಕ ಯೋಜನೆಗಳು, ಉತ್ಪಾದನಾ ಪಾಲುದಾರಿಕೆಗಳಿಗಾಗಿ ಭಾಗವಹಿಸುವ ನವೋದ್ಯಮಿಗಳು ಮತ್ತು ಸಂಸ್ಥೆಗಳನ್ನು ಹೂಡಿಕೆದಾರರು, ನಿಗಮಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರಿ ಪಾಲುದಾರರೊಂದಿಗೆ ಸಂಪರ್ಕಿಸಲು 'ಭಾರತ್ ಇನ್ನೋವೇಟ್ಸ್' ಅನ್ನು ವಿನ್ಯಾಸಗೊಳಿಸಲಾಗಿದೆ. ಜೊತೆಗೆ ತಂತ್ರಜ್ಞಾನ ವರ್ಗಾವಣೆ, ಮಾರುಕಟ್ಟೆ ಪ್ರವೇಶ ಮತ್ತು ಭಾರತೀಯ ನಾವೀನ್ಯತೆಗಳ ಅಂತರರಾಷ್ಟ್ರೀಯ ವಿಸ್ತರಣೆಗೆ ಮಾರ್ಗಗಳನ್ನು ಸೃಷ್ಟಿಸುತ್ತದೆ.
'ಭಾರತ್ ಇನ್ನೋವೇಟ್ಸ್ 2026' ಜಾಗತಿಕ ನಾವೀನ್ಯತೆ ನೆಟ್‌ವರ್ಕ್‌ಗಳೊಂದಿಗೆ ಭಾರತದ ಒಡನಾಟವನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ ಮತ್ತು ತಂತ್ರಜ್ಞಾನ-ಚಾಲಿತ ಬೆಳವಣಿಗೆ ಹಾಗೂ ಉದ್ಯಮಶೀಲತೆಯ ಪ್ರಮುಖ ಕೇಂದ್ರವಾಗಿ ಅದರ ಸ್ಥಾನವನ್ನು ಬಲಪಡಿಸುತ್ತದೆ. ಫೆಬ್ರವರಿ 2026ರಲ್ಲಿ ಮುಂಬೈನಲ್ಲಿ ಭಾರತದ ಪ್ರಧಾನಮಂತ್ರಿ ಮತ್ತು ಫ್ರಾನ್ಸ್‌ನ ಅಧ್ಯಕ್ಷರು ಜಂಟಿಯಾಗಿ ಉದ್ಘಾಟಿಸಿದ 'ಭಾರತ-ಫ್ರಾನ್ಸ್ ನಾವೀನ್ಯತಾ ವರ್ಷ'ದ ಆಶ್ರಯದಲ್ಲಿ ಇದನ್ನು ಆಯೋಜಿಸಲಾಗುತ್ತಿದೆ
ʻಭಾರತ್ ಇನ್ನೋವೇಟ್ಸ್ʼ ಕುರಿತು ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: https://bharatinnovates.in/
*****
(रिलीज़ आईडी: 2272404)
आगंतुक पटल : 9