ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಇಂಡಿಯಾ ಎಐ ಮಿಷನ್‌ನಿಂದ ಸ್ವದೇಶಿ 'ವರ್ಯ' ಬಿಡುಗಡೆ, ಕೈಗೆಟುಕುವ ದರದಲ್ಲಿ ಗುಣಮಟ್ಟದ ವಿಡಿಯೋ ಸ್ಟೋರಿ ಜನರೇಟಿಂಗ್ ಎಐ ಮಾಡೆಲ್


ಇಂಡಿಯಾ ಎಐ ಮಿಷನ್ ಬೆಂಬಲದೊಂದಿಗೆ 'ಅವತಾರ್.ಎಐ' ಅಭಿವೃದ್ಧಿಪಡಿಸಿರುವ ವರ್ಯ, ವಿಡಿಯೋ ಸೃಷ್ಟಿಸುವ ಸಮಯವನ್ನು 50 ಹಂತಗಳಿಂದ 4 ಹಂತಗಳಿಗೆ ಇಳಿಸಿದೆ; ಪ್ರಮುಖ ಮಾಡೆಲ್‌ಗಳಿಗಿಂತ ಹತ್ತು ಪಟ್ಟು ಹೆಚ್ಚು ದಕ್ಷತೆಯನ್ನು ಹೊಂದಿರುವುದಾಗಿ ಸಂಸ್ಥೆ ಪ್ರತಿಪಾದಿಸಿದೆ
 
ಶಿಕ್ಷಣದಿಂದ ಇ-ಕಾಮರ್ಸ್‌ವರೆಗೆ, ವರ್ಯ ಮಾಡೆಲ್ ಭಾರತಕ್ಕೆ ಜನಸಂಖ್ಯೆಯ ಪ್ರಮಾಣದಲ್ಲಿ ಕೈಗೆಟುಕುವ ದರದ ಎಐ ವಿಡಿಯೋ ಜನರೇಷನ್ ಸೇವೆಯನ್ನು ತರಲಿದೆ ಮತ್ತು ಸ್ಮಾರ್ಟ್ ಪ್ರಾಂಪ್ಟಿಂಗ್ ಮೂಲಕ ಪಠ್ಯವನ್ನು ವಿಡಿಯೋಗಳಾಗಿ ಪರಿವರ್ತಿಸುವ ಅಪಾರ ಸಾಮರ್ಥ್ಯವನ್ನು ನೀಡುತ್ತದೆ

प्रविष्टि तिथि: 12 JUN 2026 3:09PM by PIB Bengaluru

ಎಐ-ಆಧಾರಿತ ಪರಿವರ್ತನಾ ಸಂಸ್ಥೆಯಾದ ಅವತಾರ್ (Avataar), ಭಾರತದ ಮುಂದಿನ ಪೀಳಿಗೆಯ ಬಳಕೆದಾರರಿಗೆ ಅತ್ಯಾಧುನಿಕ ವಿಡಿಯೋ ಎಐ ಅನ್ನು ಕೈಗೆಟುಕುವಂತೆ, ಸುಲಭವಾಗಿ ಸಿಗುವಂತೆ ಮತ್ತು ಪ್ರಸ್ತುತವಾಗಿಸುವ ಉದ್ದೇಶದಿಂದ ಸಿದ್ಧಪಡಿಸಲಾದ ಡಿಸ್ಟಿಲ್ಡ್ ವಿಡಿಯೋ ಮಾಡೆಲ್ ‘ವರ್ಯ’ (Varya) ಅನ್ನು ಇಂದು ಬಿಡುಗಡೆ ಮಾಡಿದೆ.

ಹೊಸ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್ ಮತ್ತು ಅವತಾರ್ ಸಂಸ್ಥೆಯ ನಾಯಕತ್ವದ ತಂಡದ ಸಮ್ಮುಖದಲ್ಲಿ ಈ ಬಿಡುಗಡೆಯನ್ನು ಅನಾವರಣಗೊಳಿಸಲಾಯಿತು.

ವರ್ಯ ಮಾಡೆಲ್ ಅನ್ನು ಭಾರತದ ಸಾಮಾನ್ಯ ಕಲ್ಪನೆಗಾಗಿ ಅಲ್ಲದೆ, ಇಲ್ಲಿನ ವೈವಿಧ್ಯಮಯ ಸಂದರ್ಭಗಳಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಭಾರತದ ವಿವಿಧ ಪ್ರದೇಶಗಳು, ಹಬ್ಬಗಳು, ಸಮುದಾಯಗಳು, ಆಹಾರ, ಉಡುಪುಗಳು, ಸಾರ್ವಜನಿಕ ಸ್ಥಳಗಳು ಮತ್ತು ದೈನಂದಿನ ಜೀವನದ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ದೃಶ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಸೃಷ್ಟಿಸಲು ಈ ಮಾಡೆಲ್ ಅನ್ನು ರೂಪಿಸಲಾಗಿದೆ. ಹಳ್ಳಿಯ ತರಗತಿಯೊಂದರಲ್ಲಿ ದೃಶ್ಯ ಪಾಠವನ್ನು ಸಿದ್ಧಪಡಿಸುವ ಶಿಕ್ಷಕರಿಂದ ಹಿಡಿದು, ಉತ್ಪನ್ನದ ಜಾಹೀರಾತುಗಳನ್ನು ರಚಿಸುವ ಎಂಎಸ್‌ಎಂಇ (MSME) ವರೆಗೆ ಮತ್ತು ವಿಡಿಯೋ ಮೂಲಕ ಸಾರ್ವಜನಿಕ ಮಾಹಿತಿಯನ್ನು ಪಡೆಯುವ ನಾಗರಿಕರವರೆಗೆ, ಒಂದು ಸರಳವಾದ ಕಲ್ಪನೆಯನ್ನು ಚಲಿಸುವ ಕಥೆಯಾಗಿ ಪರಿವರ್ತಿಸುವ ಗುರಿಯನ್ನು ವರ್ಯ ಹೊಂದಿದೆ.

ಸ್ವದೇಶಿ ಮೂಲಭೂತ ಎಐ ಸಾಮರ್ಥ್ಯಗಳನ್ನು ನಿರ್ಮಿಸಲು, ಇಂಡಿಯಾ ಎಐ ಮಿಷನ್ ಆಯ್ಕೆ ಮಾಡಿದ ಕಂಪನಿಗಳಲ್ಲಿ ಅವತಾರ್ ಕೂಡ ಒಂದಾಗಿದೆ. ಸಬ್ಸಿಡಿ ದರದ ರಾಷ್ಟ್ರೀಯ ಎಐ ಕಂಪ್ಯೂಟ್ ಮೂಲಸೌಕರ್ಯದ ಲಭ್ಯತೆಯು ವರ್ಯ ಮಾಡೆಲ್‌ನ ಸಂಶೋಧನೆಗೆ ನೆರವಾಗಿದ್ದು, ಸಾರ್ವಜನಿಕ ಎಐ ಮೂಲಸೌಕರ್ಯವು ದೇಶೀಯ ನಾವೀನ್ಯತೆಯನ್ನು ಹೇಗೆ ವೇಗಗೊಳಿಸುತ್ತದೆ ಎಂಬುದನ್ನು ಇದು ಉಲ್ಲೇಖಿಸುತ್ತದೆ.

ಕಲಿಕೆ, ವಾಣಿಜ್ಯ, ಸಂವಹನ ಮತ್ತು ಕಥೆ ಹೇಳುವಿಕೆಗೆ ವಿಡಿಯೋ ಪ್ರಾಥಮಿಕ ಮಾಧ್ಯಮವಾಗುತ್ತಿರುವುದರಿಂದ, ಉತ್ತಮ ಗುಣಮಟ್ಟದ ವಿಡಿಯೋ ವಿಷಯವನ್ನು ದಕ್ಷತೆಯಿಂದ ಸೃಷ್ಟಿಸುವ ಸಾಮರ್ಥ್ಯವು ಹೆಚ್ಚು ಪ್ರಮುಖವಾಗುತ್ತಿದೆ.

ಇಂಡಿಯಾಐ ಮಿಷನ್ ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾದ ವರ್ಯ, ಡಿಸ್ಟಿಲೇಶನ್ ತಂತ್ರಜ್ಞಾನವನ್ನು ಬಳಸುತ್ತದೆ. ಇದು ವಿಡಿಯೋ ಸೃಷ್ಟಿಯ ಹಂತಗಳನ್ನು 50 ರಿಂದ 4 ಕ್ಕೆ ಇಳಿಸುತ್ತದೆ ಮತ್ತು ಅದೇ ಗುಣಮಟ್ಟದ ಔಟ್‌ಪುಟ್ ಅನ್ನು ಕಾಯ್ದುಕೊಳ್ಳುತ್ತದೆ. ಅವತಾರ್‌ನ ಆಂತರಿಕ ವೆಚ್ಚದ ಮಾನದಂಡಗಳ ಪ್ರಕಾರ, ವರ್ಯ ಪ್ರತಿ ಸೆಕೆಂಡಿಗೆ ₹0.48 ವೆಚ್ಚದಲ್ಲಿ ವಿಡಿಯೋವನ್ನು ಸೃಷ್ಟಿಸಬಲ್ಲದು. ಇದು ಜಾಗತಿಕವಾಗಿ ಮುಂಚೂಣಿಯಲ್ಲಿರುವ ಹಲವಾರು ವಿಡಿಯೋ ಮಾಡೆಲ್‌ಗಳಿಗಿಂತ 10 ಪಟ್ಟು ಹೆಚ್ಚು ವೆಚ್ಚ-ದಕ್ಷತೆಯನ್ನು ಹೊಂದಿದೆ.

ಈ ಉತ್ಪನ್ನದ ಅನುಭವವನ್ನು ಸರಳವಾದ ಭರವಸೆಯ ಸುತ್ತ ವಿನ್ಯಾಸಗೊಳಿಸಲಾಗಿದೆ: ಕಲ್ಪನೆ → ವಿಡಿಯೋ → ಕಥೆ (Idea → Video → Story). ಬಳಕೆದಾರರು ಕಲ್ಪನೆಯನ್ನು ಟೈಪ್ ಮಾಡಬಹುದು, ಚಿತ್ರವನ್ನು ಅಪ್‌ಲೋಡ್ ಮಾಡಬಹುದು, ವಿಡಿಯೋ ಸೃಷ್ಟಿಸಬಹುದು ಮತ್ತು ಹೆಚ್ಚುವರಿ ಕ್ಲಿಪ್‌ಗಳ ಮೂಲಕ ಕಥೆಯನ್ನು ಮುಂದುವರಿಸಬಹುದು. ಒಂದು ಪ್ರಾಂಪ್ಟ್ ಒಂದು ಪಾಠ, ಜಾಹೀರಾತು, ಮಾರ್ಗದರ್ಶಿ, ಚಲನಚಿತ್ರ ಅಥವಾ ನೆನಪಾಗಿ ಬದಲಾಗಬಹುದು.

ಎಐ ಕೇವಲ ಲಕ್ಷಾಂತರ ಜನರಿಗಷ್ಟೇ ಅಲ್ಲದೆ ಶತಕೋಟಿಗೂ ಹೆಚ್ಚು ಜನರಿಗೆ ಕೆಲಸ ಮಾಡಬೇಕಾದ ಭಾರತದಂತಹ ದೇಶದಲ್ಲಿ, ದಕ್ಷತೆ ಎಂಬುದು ಕೇವಲ ತಾಂತ್ರಿಕ ವಿವರವಲ್ಲ. ಅದು ಎಲ್ಲರನ್ನೂ ಒಳಗೊಳ್ಳುವಿಕೆಯ ಅಡಿಪಾಯವಾಗಿದೆ.

ವರ್ಯಾ ಭಾರತದ AI ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ

ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಾರ್ಯದರ್ಶಿ ಎಸ್. ಕೃಷ್ಣನ್, “ಇಂಡಿಯಾ ಎಐ ಮಿಷನ್ ಅಡಿಯಲ್ಲಿ ಬೆಂಬಲಿತವಾಗಿರುವ ಮೂಲಭೂತ ಮಾಡೆಲ್‌ಗಳಲ್ಲಿ ಒಂದಾದ ವರ್ಯ ಬಿಡುಗಡೆಯು ಭಾರತದ ಎಐ ಪ್ರಯಾಣದಲ್ಲಿ ಒಂದು ಮಹತ್ವದ ಮೈಲಿಗಲ್ಲು. ನಾವು ಸಕ್ರಿಯಗೊಳಿಸಲು ಬಯಸುವ ಸಂಶೋಧನೆ-ಆಧಾರಿತ ಸಾಮರ್ಥ್ಯ ನಿರ್ಮಾಣಕ್ಕೆ ವರ್ಯ ಒಂದು ಉತ್ತಮ ಉದಾಹರಣೆಯಾಗಿದೆ. ಇದು ಸ್ವದೇಶಿ ಎಐ ಸಾಮರ್ಥ್ಯಗಳನ್ನು ನಿರ್ಮಿಸಲು ಮತ್ತು ರೋಮಾಂಚಕ ಡೀಪ್-ಟೆಕ್ ಪರಿಸರ ವ್ಯವಸ್ಥೆಯನ್ನು ಪೋಷಿಸಲು ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುವ ಹೆಮ್ಮೆಯ ಕ್ಷಣವಾಗಿದೆ. ಮೂಲಭೂತ ಮಾಡೆಲ್‌ಗಳಿಗೆ ಆಯಕಟ್ಟಿನ ಬೆಂಬಲವನ್ನು ನೀಡುವ ಮೂಲಕ, ನಾವು ದೊಡ್ಡ ಪ್ರಮಾಣದಲ್ಲಿ ನಾವೀನ್ಯತೆಯನ್ನು ಸಕ್ರಿಯಗೊಳಿಸುತ್ತಿದ್ದೇವೆ ಮತ್ತು ಮುಂದಿನ ಪೀಳಿಗೆಯ ಎಐ ಪರಿಹಾರಗಳಿಗೆ ಅಡಿಪಾಯವನ್ನು ನಿರ್ಮಿಸುತ್ತಿದ್ದೇವೆ. ಭಾರತದ ಎಐ ಸಾಮರ್ಥ್ಯಗಳನ್ನು ಇನ್ನಷ್ಟು ಬಲಪಡಿಸಲು ಮತ್ತು ವಿಶ್ವದರ್ಜೆಯ ಹಾಗೂ ಜನಸಂಖ್ಯೆಯ ಪ್ರಮಾಣದಲ್ಲಿ ಲಭ್ಯವಾಗುವಂತಹ ಮಿತವ್ಯಯದ ನಾವೀನ್ಯತೆಯನ್ನು ಮುನ್ನಡೆಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.

ಅವತಾರ್ ಸಂಸ್ಥೆಯು ವರ್ಯ ಮಾಡೆಲ್‌ನ ಆರ್ಕಿಟೆಕ್ಚರ್, ಡಿಸ್ಟಿಲೇಶನ್ ವಿಧಾನ ಮತ್ತು ಮಾನದಂಡಗಳನ್ನು ವಿವರಿಸುವ ತಾಂತ್ರಿಕ ವರದಿಯನ್ನು ಸಹ ಪ್ರಕಟಿಸಲಿದೆ.

ವರ್ಯ ನಾವೀನ್ಯತೆಯ ಮೂಲಕ ಕೈಗೆಟುಕುವ ಎಐ

ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವತಾರ್ ಸಂಸ್ಥೆಯ ಸಿಇಒ ಮತ್ತು ಸಹ-ಸ್ಥಾಪಕ ಶ್ರವಂತ್ ಆಲೂರು, “ಭಾರತದ ಎಐ ಅವಕಾಶವನ್ನು ಕೇವಲ ಅತಿ ದೊಡ್ಡ ಮಾಡೆಲ್‌ಗಳಿಂದ ಮಾತ್ರ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಇದನ್ನು ಅತ್ಯಂತ ದಕ್ಷ ಮಾಡೆಲ್‌ಗಳ ಮೂಲಕವೂ ವ್ಯಾಖ್ಯಾನಿಸಲಾಗುತ್ತದೆ. ಅತ್ಯಾಧುನಿಕ ಗುಣಮಟ್ಟದ ವಿಡಿಯೋ ಎಐ ಅನ್ನು ನಾಟಕೀಯವಾಗಿ ಹೆಚ್ಚು ದಕ್ಷ ಹಾಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಬಹುದು ಎಂಬುದನ್ನು ವರ್ಯ ನಿರೂಪಿಸಿದೆ. 140 ಕೋಟಿ ಜನರಿರುವ ದೇಶಕ್ಕೆ, ಕೈಗೆಟುಕುವ ದರ ಎಂಬುದು ಕೇವಲ ಒಂದು ವೈಶಿಷ್ಟ್ಯವಲ್ಲ, ಅದು ಮೊದಲ ಅಗತ್ಯತೆಯಾಗಿದೆ. ಮುಂದಿನ ಶತಕೋಟಿ ಕಥೆಗಳು, ಪಾಠಗಳು, ಜಾಹೀರಾತುಗಳು, ಸೇವೆಗಳು ಮತ್ತು ಅನುಭವಗಳು ಎಐ ಮೂಲಕವೇ ಸೃಷ್ಟಿಯಾಗುತ್ತವೆ ಎಂದು ನಾವು ನಂಬುತ್ತೇವೆ ಮತ್ತು ಆ ಸಾಮರ್ಥ್ಯಗಳು ಕೇವಲ ಕೆಲವರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಲಭ್ಯವಿರಬೇಕು” ಎಂದರು.

ಇದಲ್ಲದೆ ಅವರು, “ಕೈಗೆಟುಕುವ ಎಐ ಎಂದರೆ ಎಲ್ಲರನ್ನೂ ಒಳಗೊಳ್ಳುವ ಎಐ ಹಾಗೂ ವರ್ಯ ಮೂಲಕ ಅವತಾರ್ ನಿರ್ಮಿಸುತ್ತಿರುವುದು ಪ್ರಮುಖವಾಗಿದೆ ಏಕೆಂದರೆ ಇದು ಚರ್ಚೆಯನ್ನು ಕೇವಲ ಎಐ ಸಾಮರ್ಥ್ಯದಿಂದ ಎಐ ಲಭ್ಯತೆಯ ಕಡೆಗೆ ಬದಲಾಯಿಸುತ್ತದೆ. ಭಾರತದಲ್ಲಿ ಜನಸಂಖ್ಯೆಯ ಪ್ರಮಾಣದ ಬಳಕೆಗೆ ಎಐ ಉತ್ಪನ್ನಗಳನ್ನು ನಿರ್ಮಿಸಲು ಅಗತ್ಯವಿರುವ ಪ್ರತಿಭೆ, ಮಾರುಕಟ್ಟೆಯ ಆಳ ಮತ್ತು ಕಲಯುಕ್ತ ಕಲ್ಪನಾ ಶಕ್ತಿ ಇದೆ. ಭಾರತೀಯ ಕಂಪನಿಗಳು ಕೇವಲ ದೊಡ್ಡ ಮಾಡೆಲ್‌ಗಳನ್ನು ನಿರ್ಮಿಸುವ ಮೂಲಕ ಅಲ್ಲದೆ, ಲಭ್ಯತೆಯನ್ನು ವಿಸ್ತರಿಸುವ ಹೆಚ್ಚು ದಕ್ಷ ಹಾಗೂ ಸಂದರ್ಭೋಚಿತ ಮಾಡೆಲ್‌ಗಳನ್ನು ನಿರ್ಮಿಸುವ ಮೂಲಕ ಜಾಗತಿಕವಾಗಿ ಹೇಗೆ ಸ್ಪರ್ಧಿಸಬಹುದು ಎಂಬುದಕ್ಕೆ ವರ್ಯ ಒಂದು ಬಲವಾದ ಉದಾಹರಣೆಯಾಗಿದೆ” ಎಂದು ಅವರು ಒತ್ತಿ ಹೇಳಿದರು.

ಅವತಾರ್ ಸಂಸ್ಥೆಯ ಬಗ್ಗೆ

ಅವತಾರ್ (Avataar) ಎಂಬುದು ಎಐ-ಆಧಾರಿತ ಪರಿವರ್ತನಾ ಕಂಪನಿಯಾಗಿದ್ದು, ಉದ್ಯಮಗಳಿಗೆ ದಕ್ಷತೆಯನ್ನು ಹೆಚ್ಚಿಸಲು, ಹೊಸ ಆಪರೇಟಿಂಗ್ ಮಾಡೆಲ್‌ಗಳನ್ನು ಅನ್ಲಾಕ್ ಮಾಡಲು ಮತ್ತು ರಕ್ಷಣಾತ್ಮಕ ಐಪಿ-ಆಧಾರಿತ ಸಾಮರ್ಥ್ಯಗಳನ್ನು ನಿರ್ಮಿಸಲು ಸಹಾಯ ಮಾಡುವ ಡೊಮೇನ್-ವಿಶೇಷ ಎಐ ಉತ್ಪನ್ನಗಳನ್ನು ಸಿದ್ಧಪಡಿಸುತ್ತದೆ. ಕಂಪನಿಯು ಹೆಚ್ಚಿನ ಬೆಳವಣಿಗೆಯ ಮಾರುಕಟ್ಟೆಗಳಲ್ಲಿ ನೈಜ ಜಗತ್ತಿನ ವ್ಯವಹಾರ ಮತ್ತು ಗ್ರಾಹಕ ಬಳಕೆಯ ಸಂದರ್ಭಗಳಿಗೆ ಎಐ ಅನ್ನು ಅನ್ವಯಿಸುವುದರ ಮೇಲೆ ಗಮನ ಹರಿಸಿದೆ.

ಡಿಸ್ಟಿಲ್ಡ್ ವಿಡಿಯೋ ಜನರೇಷನ್ ಎಂದರೇನು

ಡಿಸ್ಟಿಲ್ಡ್ ವಿಡಿಯೋ ಜನರೇಷನ್ (Distilled video generation) ಎಂಬುದು ಮಷೀನ್ ಲರ್ನಿಂಗ್‌ನಲ್ಲಿನ ಒಂದು ಮಾಡೆಲ್ ಕಂಪ್ರೆಷನ್ (ಸಂಕುಚಿತಗೊಳಿಸುವ) ತಂತ್ರಜ್ಞಾನವಾಗಿದೆ. ಇಲ್ಲಿ ಒಂದು ಸಣ್ಣ 'ಸ್ಟೂಡೆಂಟ್' ಮಾಡೆಲ್, ದೊಡ್ಡದಾದ ಮತ್ತು ನಿಧಾನಗತಿಯ 'ಟೀಚರ್' ಮಾಡೆಲ್‌ನ ಔಟ್‌ಪುಟ್‌ಗಳನ್ನು ನಕಲಿಸುತ್ತದೆ. ಇದು ಅನಗತ್ಯ ಲೆಕ್ಕಾಚಾರಗಳನ್ನು ತೆಗೆದುಹಾಕುವ ಮೂಲಕ ಸಾಮರ್ಥ್ಯಗಳನ್ನು ವರ್ಗಾಯಿಸುತ್ತದೆ. ಸಾಮಾನ್ಯ ವಿಡಿಯೋ ಮಾಡೆಲ್‌ಗಳು ಶುದ್ಧವಾದ ಔಟ್‌ಪುಟ್ ನೀಡುವ ಮೊದಲು 50 ಕ್ಕೂ ಹೆಚ್ಚು ನೋಯ್ಸಿ (Noisy) ಹಂತಗಳ ಮೂಲಕ ಸಾಗುತ್ತವೆ; ಆದರೆ ಡಿಸ್ಟಿಲೇಶನ್ ತಂತ್ರವು ಹೆಚ್ಚಿನ ಹಂತಗಳನ್ನು ಬಿಟ್ಟುಬಿಡಲು ಮತ್ತು ಕೆಲವೇ ಹಂತಗಳಲ್ಲಿ ಅದೇ ಗುಣಮಟ್ಟವನ್ನು ನೀಡಲು ಸ್ಟೂಡೆಂಟ್ ಮಾಡೆಲ್‌ಗೆ ಕಲಿಸುತ್ತದೆ. ವರ್ಯ ಈ ಅದ್ಭುತ ತಂತ್ರವನ್ನು ಭಾರತದಲ್ಲಿ ಮೊದಲ ಬಾರಿಗೆ ವಿಡಿಯೋ ಕ್ಷೇತ್ರಕ್ಕೆ ಅನ್ವಯಿಸಿದೆ, ಇದು ಅತ್ಯಾಧುನಿಕ ಗುಣಮಟ್ಟದ ವಿಡಿಯೋ ಸೃಷ್ಟಿಯನ್ನು ಕೈಗೆಟುಕುವಂತೆ, ವೇಗವಾಗಿ ಮತ್ತು ಜನಸಂಖ್ಯೆಯ ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡುತ್ತದೆ.

 

*****


(रिलीज़ आईडी: 2272197) आगंतुक पटल : 18
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Gujarati , Odia , Tamil , Malayalam