ಸಹಕಾರ ಸಚಿವಾಲಯ
ರಾಷ್ಟ್ರೀಯ ಸಹಕಾರ ನೀತಿ-2025ರ ಅಡಿಯಲ್ಲಿ ರಾಷ್ಟ್ರ ಮಟ್ಟದ ನೀತಿ ಅನುಷ್ಠಾನ ಮತ್ತು ಉಸ್ತುವಾರಿ ಸಮಿತಿಯ ಪ್ರಥಮ ಸಭೆಯು ನವದೆಹಲಿಯಲ್ಲಿ ಜರುಗಿತು
ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸಚಿವಾಲಯಗಳು ಮತ್ತು ಸಹಕಾರ ಸಂಸ್ಥೆಗಳ ಸಮನ್ವಯದೊಂದಿಗೆ ರಾಷ್ಟ್ರೀಯ ಸಹಕಾರ ನೀತಿ-2025 ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮಾರ್ಗಸೂಚಿಯ ಕುರಿತು ಸಮಿತಿಯು ಚರ್ಚಿಸಿತು
ರಾಷ್ಟ್ರೀಯ ಸಹಕಾರ ನೀತಿ-2025, ‘ಸಹಕಾರದಿಂದ ಸಮೃದ್ಧಿ’ ಎಂಬ ದೂರದೃಷ್ಟಿಗೆ ಅನುಗುಣವಾಗಿ ಪಾರದರ್ಶಕ, ತಂತ್ರಜ್ಞಾನ ಆಧಾರಿತ, ವೃತ್ತಿಪರವಾಗಿ ನಿರ್ವಹಿಸಲ್ಪಡುವ ಮತ್ತು ಸದಸ್ಯ-ಕೇಂದ್ರಿತ ಸಹಕಾರ ಸಂಸ್ಥೆಗಳನ್ನು ಬಲಪಡಿಸಲಿದೆ
ಬಲಿಷ್ಠ, ಪಾರದರ್ಶಕ ಮತ್ತು ಆಧುನಿಕ ಸಹಕಾರ ಸಂಸ್ಥೆಗಳು ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯವನ್ನು ನೀಡಲಿವೆ ಮತ್ತು ವಿಕಸಿತ ಭಾರತ @2047ಕ್ಕೆ ಗಮನಾರ್ಹ ಕೊಡುಗೆಯನ್ನು ನೀಡಲಿವೆ: ಡಾ. ಆಶಿಶ್ ಕುಮಾರ್ ಭೂಟಾನಿ
प्रविष्टि तिथि:
09 JUN 2026 5:42PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ “ಸಹಕಾರದಿಂದ ಸಮೃದ್ಧಿ” ಎಂಬ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ಮತ್ತು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ, ಸಹಕಾರ ಸಚಿವಾಲಯವು ಸಹಕಾರ ವಲಯವನ್ನು ಬಲಪಡಿಸಲು ಮತ್ತು ಆಧುನೀಕರಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ, ರಾಷ್ಟ್ರೀಯ ಸಹಕಾರ ನೀತಿ-2025ರ ಅಡಿಯಲ್ಲಿ ರಚಿಸಲಾದ ರಾಷ್ಟ್ರೀಯ ಮಟ್ಟದ ನೀತಿ ಅನುಷ್ಠಾನ ಮತ್ತು ಉಸ್ತುವಾರಿ ಸಮಿತಿಯ ಪ್ರಥಮ ಸಭೆಯು ಇಂದು ನವದೆಹಲಿಯ ಅಟಲ್ ಅಕ್ಷಯ್ ಊರ್ಜಾ ಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಹಕಾರ ಸಚಿವಾಲಯದ ಕಾರ್ಯದರ್ಶಿ ಹಾಗೂ ಸಮಿತಿಯ ಅಧ್ಯಕ್ಷರಾದ ಡಾ. ಆಶಿಶ್ ಕುಮಾರ್ ಭೂಟಾನಿ ಅವರು ವಹಿಸಿದ್ದರು. ಸಾಂಸ್ಥಿಕ ಬಲವರ್ಧನೆ, ಡಿಜಿಟಲ್ ರೂಪಾಂತರ, ಸಾಮರ್ಥ್ಯ ವೃದ್ಧಿ, ಸದಸ್ಯತ್ವ ವಿಸ್ತರಣೆ ಮತ್ತು ಸಹಕಾರ ಆಧಾರಿತ ಸಮಗ್ರ ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿಗಾಗಿ ಕೇಂದ್ರ ಸಚಿವಾಲಯಗಳು, ಇಲಾಖೆಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಷ್ಟ್ರೀಯ ಒಕ್ಕೂಟಗಳು/ಸಹಕಾರ ಸಂಸ್ಥೆಗಳ ಸಂಘಟಿತ ಕಾರ್ಯವೈಖರಿಯ ಮೇಲೆ ವಿಶೇಷ ಗಮನ ಹರಿಸಿ, ರಾಷ್ಟ್ರೀಯ ಸಹಕಾರ ನೀತಿ-2025 ರ ಪರಿಣಾಮಕಾರಿ ಅನುಷ್ಠಾನದ ಮಾರ್ಗಸೂಚಿಯ ಕುರಿತು ಸಮಿತಿಯು ಸುದೀರ್ಘವಾಗಿ ಚರ್ಚಿಸಿತು.
ಈ ಸಭೆಯಲ್ಲಿ ಇಫ್ಕೋ ಅಧ್ಯಕ್ಷರಾದ ಶ್ರೀ ದಿಲೀಪ್ ಸಂಘಾನಿ; ಸಹಕಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸಿದ್ಧಾರ್ಥ್ ಜೈನ್; ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಗಳಾದ ಶ್ರೀ ಆನಂದ್ ಕುಮಾರ್ ಝಾ, ಶ್ರೀ ರಮಣ್ ಕುಮಾರ್ ಮತ್ತು ಶ್ರೀ ಶಿವ ಪಾಲ್ ಸಿಂಗ್; “ತ್ರಿಭುವನ್” ಸಹಕಾರಿ ವಿಶ್ವವಿದ್ಯಾಲಯದ ಉಪಕುಲಪತಿಗಳು; ನಬಾರ್ಡ್ ಅಧ್ಯಕ್ಷರು ಮತ್ತು ವಿವಿಧ ಕೇಂದ್ರ ಸಚಿವಾಲಯಗಳು, ರಾಷ್ಟ್ರೀಯ ಸಹಕಾರ ಒಕ್ಕೂಟಗಳು, ಸಹಕಾರ ಸಂಸ್ಥೆಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಮಿತಿಯನ್ನುದ್ದೇಶಿಸಿ ಮಾತನಾಡಿದ ಡಾ. ಭೂಟಾನಿ ಅವರು, ರಾಷ್ಟ್ರೀಯ ಸಹಕಾರ ನೀತಿ-2025ರ ಉದ್ದೇಶಗಳನ್ನು ಸಮಾಜದ ಜನಸಾಮಾನ್ಯರ ಮಟ್ಟಕ್ಕೆ ಕೊಂಡೊಯ್ಯಲು ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು. ಬಲಿಷ್ಠ, ಪಾರದರ್ಶಕ ಮತ್ತು ಆಧುನಿಕ ಸಹಕಾರ ಸಂಸ್ಥೆಗಳು ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯವನ್ನು ನೀಡಲಿವೆ ಮತ್ತು ವಿಕಸಿತ ಭಾರತ @2047ರ ಗುರಿಯ ಸಾಧನೆಗೆ ಗಮನಾರ್ಹ ಕೊಡುಗೆಯನ್ನು ನೀಡಲಿವೆ ಎಂದು ಅವರು ಹೇಳಿದರು. ರಾಷ್ಟ್ರೀಯ ಸಹಕಾರ ನೀತಿ-2025 ಸಹಕಾರ ಸಂಸ್ಥೆಗಳನ್ನು ಪಾರದರ್ಶಕ, ತಂತ್ರಜ್ಞಾನ ಆಧಾರಿತ, ವೃತ್ತಿಪರವಾಗಿ ನಿರ್ವಹಿಸಲ್ಪಡುವ ಮತ್ತು ಸದಸ್ಯ-ಕೇಂದ್ರಿತ ಆರ್ಥಿಕ ಸಂಸ್ಥೆಗಳನ್ನಾಗಿ ಮಾಡಲು ಒಂದು ಸಮಗ್ರ ಚೌಕಟ್ಟನ್ನು ಒದಗಿಸುತ್ತದೆ ಎಂದು ಅವರು ಒತ್ತಿಹೇಳಿದರು.
ಚರ್ಚೆಯ ಸಮಯದಲ್ಲಿ, ಸಮಿತಿಯು ರಾಷ್ಟ್ರೀಯ ಸಹಕಾರ ನೀತಿ-2025ರ ಆರು ಕಾರ್ಯತಂತ್ರದ ಸ್ತಂಭಗಳ ಬಗ್ಗೆ ಚರ್ಚಿಸಿತು, ಅವುಗಳೆಂದರೆ ಸಹಕಾರ ವಲಯದ ಅಡಿಪಾಯವನ್ನು ಬಲಪಡಿಸುವುದು, ಸಹಕಾರ ಸಂಸ್ಥೆಗಳನ್ನು ಚೈತನ್ಯಶೀಲ ಮತ್ತು ಸ್ಪರ್ಧಾತ್ಮಕವಾಗಿಸುವುದು, ಸಹಕಾರ ಸಂಸ್ಥೆಗಳನ್ನು ಭವಿಷ್ಯಕ್ಕಾಗಿ ಸಜ್ಜುಗೊಳಿಸುವುದು, ಒಳಗೊಳ್ಳುವಿಕೆ ಮತ್ತು ತಲುಪುವಿಕೆಯನ್ನು ವಿಸ್ತರಿಸುವುದು, ಹೊಸ ಮತ್ತು ಉದಯೋನ್ಮುಖ ವಲಯಗಳಲ್ಲಿ ಸಹಕಾರ ಸಂಸ್ಥೆಗಳ ಪಾತ್ರವನ್ನು ಹೆಚ್ಚಿಸುವುದು ಮತ್ತು ಯುವ ಪೀಳಿಗೆಯನ್ನು ಸಹಕಾರ ಅಭಿವೃದ್ಧಿಯೊಂದಿಗೆ ಜೋಡಿಸುವುದು.
ಅನುಷ್ಠಾನ ಮತ್ತು ಉಸ್ತುವಾರಿ ಸಮಿತಿಯು ಪಂಚಾಯತ್ ರಾಜ್ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ಮೀನುಗಾರಿಕೆ ಇಲಾಖೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ, ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಹಾಗೂ ಇತರ ಸಂಬಂಧಿತ ಇಲಾಖೆಗಳು ಸೇರಿದಂತೆ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ಸಂಘಟಿತ ಕ್ರಿಯಾ ಯೋಜನೆಯ ಕುರಿತು ಚರ್ಚಿಸಿತು.
ಸಭೆಯಲ್ಲಿ ಪರಿಶೀಲಿಸಲಾದ ಪ್ರಮುಖ ಉಪಕ್ರಮಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು (ಪಿಎಸಿಎಸ್) ಬಹುಪಯೋಗಿ ಸೇವಾ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವುದು, ಪ್ರತಿ ಜಿಲ್ಲೆಯಲ್ಲೂ ಮಾದರಿ ಸಹಕಾರಿ ಗ್ರಾಮಗಳನ್ನು ಅಭಿವೃದ್ಧಿಪಡಿಸುವುದು, ಎಲ್ಲಾ ಪಂಚಾಯತ್ಗಳಿಗೂ ಸಹಕಾರ ಸೌಲಭ್ಯಗಳು ತಲುಪುವುದನ್ನು ಖಚಿತಪಡಿಸಿಕೊಳ್ಳುವುದು, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಹಕಾರ ಸಂಘಗಳ ವಿಸ್ತರಣೆ, ಇಆರ್ಪಿ ಆಧಾರಿತ ನಿರ್ವಹಣಾ ವ್ಯವಸ್ಥೆಗಳ ಪ್ರೋತ್ಸಾಹ, ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವಿಕೆ ಮತ್ತು ಸಹಕಾರ ವಲಯದಲ್ಲಿ ಸೈಬರ್ ಭದ್ರತೆಯನ್ನು ಬಲಪಡಿಸುವುದು ಒಳಗೊಂಡಿವೆ.
ಸಹಕಾರ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಕೈಗೊಳ್ಳಲಾದ ಪ್ರಮುಖ ಉಪಕ್ರಮಗಳ ಪ್ರಗತಿಯನ್ನು ಸಮಿತಿಯು ಪರಿಶೀಲಿಸಿತು, ಇದರಲ್ಲಿ ರಾಷ್ಟ್ರೀಯ ಸಹಕಾರ ದತ್ತಸಂಚಯದ ಅಭಿವೃದ್ಧಿ, ಪ್ಯಾಕ್ಸ್ (ಪಿಎಸಿಎಸ್) ಗಣಕೀಕರಣ, “ತ್ರಿಭುವನ್” ಸಹಕಾರಿ ವಿಶ್ವವಿದ್ಯಾಲಯದ ಸ್ಥಾಪನೆ ಹಾಗೂ ರಾಷ್ಟ್ರೀಯ ಮಟ್ಟದ ಸಹಕಾರ ಸಂಸ್ಥೆಗಳಾದ ರಾಷ್ಟ್ರೀಯ ಸಹಕಾರಿ ರಫ್ತು ನಿಯಮಿತ, ರಾಷ್ಟ್ರೀಯ ಸಹಕಾರಿ ಸಾವಯವ ನಿಯಮಿತ ಮತ್ತು ಭಾರತೀಯ ಬೀಜ್ ಸಹಕಾರಿ ಸಮಿತಿ ನಿಯಮಿತ ಸಂಸ್ಥೆಗಳ ರಚನೆ ಒಳಗೊಂಡಿವೆ.
ಸಹಕಾರ ಸಂಸ್ಥೆಗಳ ಸದಸ್ಯತ್ವ ವಿಸ್ತರಣೆ, ಸಹಕಾರ ಸಂಸ್ಥೆಗಳ ಆರ್ಥಿಕ ಕೊಡುಗೆಯನ್ನು ಹೆಚ್ಚಿಸುವುದು, ಮಹಿಳೆಯರು, ಯುವಕರು ಮತ್ತು ಸಣ್ಣ ರೈತರ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದು ಮತ್ತು ಸಹಕಾರ ಉದ್ಯಮಗಳನ್ನು ಹೊಸ ಮಾರುಕಟ್ಟೆಗಳೊಂದಿಗೆ ಜೋಡಿಸುವುದರ ಬಗ್ಗೆ ವಿಶೇಷ ಒತ್ತು ನೀಡಲಾಯಿತು. ಈ ರಾಷ್ಟ್ರೀಯ ಸಹಕಾರ ನೀತಿಯು 2035ರ ವೇಳೆಗೆ ಸಹಕಾರ ಸದಸ್ಯತ್ವವನ್ನು 50 ಕೋಟಿಗೆ ವಿಸ್ತರಿಸುವ ಮತ್ತು ದೇಶದ ಆರ್ಥಿಕತೆಯಲ್ಲಿ ಸಹಕಾರ ವಲಯದ ಕೊಡುಗೆಯನ್ನು ಮೂರು ಪಟ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಗುರಿಯನ್ನು ಹೊಂದಿದೆ.
ಸಭೆಯು ಸಹಕಾರ ವಲಯದಲ್ಲಿ ನಾವೀನ್ಯತೆ, ನವೋದ್ಯಮ ಸಂಸ್ಕೃತಿಯ ಉತ್ತೇಜನ, ಕೌಶಲ್ಯಾಭಿವೃದ್ಧಿ ಮತ್ತು ಯುವ ನಾಯಕತ್ವದ ಸೃಷ್ಟಿಯ ಕುರಿತು ಚರ್ಚಿಸಿತು. ಸಹಕಾರಿ ಶಿಕ್ಷಣ, ತರಬೇತಿ, ಸಂಶೋಧನೆ ಮತ್ತು ಸಾಮರ್ಥ್ಯ ವೃದ್ಧಿಯನ್ನು ಸಾಂಸ್ಥಿಕಗೊಳಿಸುವಲ್ಲಿ “ತ್ರಿಭುವನ್” ಸಹಕಾರಿ ವಿಶ್ವವಿದ್ಯಾಲಯದ ಪಾತ್ರವನ್ನು ಸಹ ಪರಿಶೀಲಿಸಲಾಯಿತು.
ಸಹಕಾರ ವಲಯದಲ್ಲಿ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸಲು, ರಾಷ್ಟ್ರೀಯ ಸಹಕಾರ ದತ್ತಸಂಚಯ, ಸಹಕಾರ ಶ್ರೇಯಾಂಕ ಚೌಕಟ್ಟು, ಡಿಜಿಟಲ್ ವೇದಿಕೆಗಳು ಮತ್ತು ದತ್ತಾಂಶ ಆಧಾರಿತ ಉಸ್ತುವಾರಿ ವ್ಯವಸ್ಥೆಗಳನ್ನು ಬಲಪಡಿಸುವತ್ತ ಒತ್ತು ನೀಡಲಾಯಿತು.
ಕೇಂದ್ರ, ರಾಜ್ಯಗಳು, ಸಹಕಾರ ಸಂಸ್ಥೆಗಳು ಮತ್ತು ಎಲ್ಲಾ ಪಾಲುದಾರರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ, 'ಸಮಗ್ರ ಸರ್ಕಾರಿ ವಿಧಾನದʼ ಮೂಲಕ ರಾಷ್ಟ್ರೀಯ ಸಹಕಾರ ನೀತಿ-2025ರ ಯಶಸ್ವಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದು ಸಮಿತಿಯು ಒತ್ತಿಹೇಳಿತು.
*****
(रिलीज़ आईडी: 2271030)
आगंतुक पटल : 4