ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಮಂಗಳವಾರ, ಜೂನ್ 9, 2026 ರಂದು ನವದೆಹಲಿಯಲ್ಲಿ ಭೂ ಬಂದರು ನಿರ್ವಹಣಾ ವ್ಯವಸ್ಥೆ (ಎಲ್‌ಪಿಎಂಎಸ್) ಗೆ ಚಾಲನೆ ನೀಡಲಿದ್ದಾರೆ
ಈ ಉಪಕ್ರಮವು ಸ್ಮಾರ್ಟ್ ಗಡಿ ನಿರ್ವಹಣೆ ಹಾಗೂ ಗಡಿಯಾಚೆಗಿನ ವ್ಯಾಪಾರ ಮತ್ತು ಪ್ರಯಾಣಿಕರ ಸಂಚಾರದಲ್ಲಿ ಸುರಕ್ಷತೆಗೆ ಮೋದಿ ಸರ್ಕಾರದ ಬದ್ಧತೆಯನ್ನು ಉಲ್ಲೇಖಿಸುತ್ತದೆ
ಎಲ್ ಪಿ ಎಂ ಎಸ್ ಅತ್ಯಾಧುನಿಕ ಡಿಜಿಟಲ್ ವೇದಿಕೆಯಾಗಿದ್ದು, ಭೂ ಬಂದರುಗಳ ಕಾರ್ಯಚಟುವಟಿಕೆಗಳನ್ನು ಏಕೀಕೃತ ವ್ಯವಸ್ಥೆಯಾಗಿ ಸಂಯೋಜಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ
ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ಮಾದರಿಯಲ್ಲಿಯೇ ಭೂ ಬಂದರುಗಳಿಗೂ ಸಾಗಾಣಿಕೆ ಮತ್ತು ನಿಯಂತ್ರಕ ಮಾಹಿತಿಯ ಸುರಕ್ಷಿತ, ನೈಜ-ಸಮಯದ ವಿನಿಮಯದ ಸೌಲಭ್ಯವನ್ನು ಇದು ಕಲ್ಪಿಸುತ್ತದೆ
ಸರಕು ಮತ್ತು ಪ್ರಯಾಣಿಕರ ಪ್ರಕ್ರಿಯೆಗಳಿಗಾಗಿ ಸ್ಲಾಟ್ ಬುಕಿಂಗ್, ಪಾವತಿಗಳು, ಟ್ರ್ಯಾಕಿಂಗ್ ಮತ್ತು ಏಕ ಗವಾಕ್ಷಿ ಕ್ಲಿಯರೆನ್ಸ್ ಸೇರಿದಂತೆ ಸಂಪೂರ್ಣ ಡಿಜಿಟಲ್ ಕೆಲಸದ ಹರಿವನ್ನು ಇದು ಒಳಗೊಂಡಿದೆ
प्रविष्टि तिथि:
07 JUN 2026 6:18PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದರ್ಶಿತ್ವದ ನಾಯಕತ್ವದಲ್ಲಿ ಭಾರತದ ಗಡಿ ಮತ್ತು ಆಂತರಿಕ ಭದ್ರತೆಗೆ ಹೊಸ ಉತ್ತೇಜನ ದೊರೆತಿದೆ. ಈ ನಿಟ್ಟಿನಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2026ರ ಜೂನ್ 9 ಮಂಗಳವಾರದಂದು ನವದೆಹಲಿಯಲ್ಲಿ ಭೂ ಬಂದರು ನಿರ್ವಹಣಾ ವ್ಯವಸ್ಥೆ (‘ಲ್ಯಾಂಡ್ ಪೋರ್ಟ್ ಮ್ಯಾನೇಜ್ಮೆಂಟ್ ಸಿಸ್ಟಮ್ – ಎಲ್ ಪಿಎಂ ಎಸ್) ಅನ್ನು ಉದ್ಘಾಟಿಸುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಲಿದೆ.
ತಂತ್ರಜ್ಞಾನ ಆಧಾರಿತ ಪರಿಹಾರಗಳ ಮೂಲಕ ಸ್ಮಾರ್ಟ್ ಗಡಿ ನಿರ್ವಹಣೆ, ಗಡಿಯಾಚೆಗಿನ ವ್ಯಾಪಾರ ಮತ್ತು ಪ್ರಯಾಣಿಕರ ಸಂಚಾರದಲ್ಲಿ ದಕ್ಷತೆ, ಪಾರದರ್ಶಕತೆ ಹಾಗೂ ಭದ್ರತೆಯನ್ನು ಹೆಚ್ಚಿಸಲು ಮೋದಿ ಸರ್ಕಾರ ಹೊಂದಿರುವ ಬದ್ಧತೆಯನ್ನು ಈ ಉಪಕ್ರಮವು ಒತ್ತಿಹೇಳುತ್ತದೆ.
ಈ ಸಂದರ್ಭದಲ್ಲಿ, ಕೇಂದ್ರ ಗೃಹ ಸಚಿವರು ದಾವ್ಕಿ (ಮೇಘಾಲಯ) ಮತ್ತು ಶ್ರೀಮಂತಪುರ (ತ್ರಿಪುರಾ) ಭೂ ಬಂದರುಗಳಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಪಾಲುದಾರರ ವಸತಿ ಸೌಲಭ್ಯಗಳನ್ನು ಉದ್ಘಾಟಿಸಲಿದ್ದಾರೆ. ಇದು ಗಡಿ ಭದ್ರತಾ ಸಿಬ್ಬಂದಿ ಮತ್ತು ಇತರ ಪ್ರಮುಖ ಪಾಲುದಾರರಿಗೆ ಮೂಲಸೌಕರ್ಯ ಬೆಂಬಲವನ್ನು ಮತ್ತಷ್ಟು ಬಲಪಡಿಸಲಿದೆ.
ಎಲ್ ಪಿಎಂ ಎಸ್ ನ ಚಾಲನೆಯು ಭಾರತದ ಆಧುನಿಕ, ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ಗಡಿ ನಿರ್ವಹಣಾ ವ್ಯವಸ್ಥೆಯ ಪ್ರಯಾಣದಲ್ಲಿ ಒಂದು ಐತಿಹಾಸಿಕ ಹೆಜ್ಜೆಯಾಗಿದೆ. ಇದು ವ್ಯಾಪಾರ ಸುಲಭೀಕರಣ, ಸಂಪರ್ಕ, ರಾಷ್ಟ್ರೀಯ ಭದ್ರತೆ ಮತ್ತು 2027ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುವ ದೇಶದ ಕಾರ್ಯತಂತ್ರದ ಗಮನವನ್ನು ಪ್ರತಿಬಿಂಬಿಸುತ್ತದೆ.
ಎಲ್ ಪಿಎಂ ಎಸ್ ಒಂದು ಅತ್ಯಾಧುನಿಕ ಡಿಜಿಟಲ್ ವೇದಿಕೆಯಾಗಿದ್ದು, ಭೂ ಬಂದರುಗಳಾದ್ಯಂತ ಕಾರ್ಯಚಟುವಟಿಕೆಗಳನ್ನು ಏಕೀಕೃತ ವ್ಯವಸ್ಥೆಯಾಗಿ ಸಂಯೋಜಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ಲಾಜಿಸ್ಟಿಕ್ಸ್ (ಸಾಗಾಣಿಕೆ) ಮತ್ತು ನಿಯಂತ್ರಕ ಮಾಹಿತಿಯ ಸುರಕ್ಷಿತ ಮತ್ತು ನೈಜ-ಸಮಯದ ವಿನಿಮಯವನ್ನು ಸಕ್ರಿಯಗೊಳಿಸುತ್ತದೆ. ಆ ಮೂಲಕ ಭೂ ಬಂದರುಗಳನ್ನು ವಿಮಾನ ನಿಲ್ದಾಣಗಳು ಮತ್ತು ಕಡಲ ಬಂದರುಗಳಲ್ಲಿ ಕಾರ್ಯನಿರ್ವಹಿಸುವ ಡಿಜಿಟಲ್ ವ್ಯವಸ್ಥೆಗಳಿಗೆ ಸಮನಾಗಿ ತರುತ್ತದೆ. ಒಂದು ತಟಸ್ಥ ಮತ್ತು ಮುಕ್ತ ವೇದಿಕೆಯಾಗಿ, ಎಲ್ ಪಿಎಂ ಎಸ್ ಸರ್ಕಾರಿ ಏಜೆನ್ಸಿಗಳು ಮತ್ತು ಖಾಸಗಿ ಆಪರೇಟರ್ಗಳು ಸೇರಿದಂತೆ ವಿವಿಧ ಪಾಲುದಾರರ ನಡುವೆ ತಡೆರಹಿತ ಸಮನ್ವಯವನ್ನು ಸುಲಭಗೊಳಿಸುತ್ತದೆ. ಇದರಿಂದಾಗಿ ವಿಳಂಬವನ್ನು ಕಡಿಮೆ ಮಾಡುತ್ತದೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ.
ಈ ವ್ಯವಸ್ಥೆಯು ಕಾರ್ಗೋ ಮತ್ತು ಪ್ರಯಾಣಿಕರ ಪ್ರಕ್ರಿಯೆಗಳಿಗಾಗಿ ಸ್ಲಾಟ್ ಬುಕಿಂಗ್, ಪಾವತಿಗಳು, ಟ್ರ್ಯಾಕಿಂಗ್ ಮತ್ತು ಏಕ ಗವಾಕ್ಷಿ ಕ್ಲಿಯರೆನ್ಸ್ ಸೇರಿದಂತೆ ಸಂಪೂರ್ಣ ಡಿಜಿಟಲ್ ಕೆಲಸದ ಹರಿವನ್ನು ಪರಿಚಯಿಸುತ್ತದೆ. ಐಸ್-ಗೇಟ್ , ಯುಎಲ್ ಐ ಪಿ ಮತ್ತು ಮೋಟಾರು ವಾಹನ ಪರಿಸರ ವ್ಯವಸ್ಥೆಯಂತಹ ಪ್ರಮುಖ ರಾಷ್ಟ್ರೀಯ ವೇದಿಕೆಗಳೊಂದಿಗೆ ಸಂಪೂರ್ಣವಾಗಿ ಸಂಯೋಜಿಸಲ್ಪಟ್ಟಿರುವ ಎಲ್ ಪಿಎಂ ಎಸ್, ಪರಸ್ಪರ ಕಾರ್ಯಸಾಧ್ಯವಾದ, ದಕ್ಷ ಮತ್ತು ಪಾರದರ್ಶಕ ಗಡಿ ನಿರ್ವಹಣೆಯನ್ನು ಸಕ್ರಿಯಗೊಳಿಸುತ್ತದೆ.
ಗೃಹ ವ್ಯವಹಾರಗಳ ಸಚಿವಾಲಯದ ಗಡಿ ನಿರ್ವಹಣಾ ಇಲಾಖೆಯ ಅಡಿಯಲ್ಲೊಂದು ಶಾಸನಬದ್ಧ ಸಂಸ್ಥೆಯಾಗಿರುವ ಭಾರತದ ಭೂ ಬಂದರುಗಳ ಪ್ರಾಧಿಕಾರವು (ಎಲ್ ಪಿ ಎ ಐ), ವ್ಯಾಪಾರ, ಸಂಪರ್ಕ ಮತ್ತು ಪ್ರಾದೇಶಿಕ ಸಹಕಾರವನ್ನು ಸುಲಭಗೊಳಿಸಲು ಭೂ ಬಂದರುಗಳನ್ನು ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ. ಪ್ರಸ್ತುತ, ಎಲ್ ಪಿ ಎ ಐ ಭಾರತದ ಅಂತರರಾಷ್ಟ್ರೀಯ ಗಡಿಗಳಲ್ಲಿ 15 ಭೂ ಬಂದರುಗಳನ್ನು ನಿರ್ವಹಿಸುತ್ತಿದೆ: ಅಟ್ಟಾರಿ (ಪಂಜಾಬ್) ಮತ್ತು ಡೇರಾ ಬಾಬಾ ನಾನಕ್ (ಪಂಜಾಬ್) ಭಾರತ-ಪಾಕಿಸ್ತಾನ ಗಡಿಯಲ್ಲಿ; ರೂಪೈದಿಹಾ (ಉತ್ತರ ಪ್ರದೇಶ), ರಕ್ಸೌಲ್ (ಬಿಹಾರ) ಮತ್ತು ಜೋಗ್ಬನಿ (ಬಿಹಾರ) ಭಾರತ-ನೇಪಾಳ ಗಡಿಯಲ್ಲಿ; ದರಂಗಾ (ಅಸ್ಸಾಂ) ಭಾರತ-ಭೂತಾನ್ ಗಡಿಯಲ್ಲಿ; ಪೆಟ್ರಾಪೋಲ್ (ಪಶ್ಚಿಮ ಬಂಗಾಳ), ದಾವ್ಕಿ (ಮೇಘಾಲಯ), ಸುತಾರಕಂಡಿ, ಗೋಲಕಗಂಜ್ ಮತ್ತು ಮಂಕಾಚಾರ್ (ಅಸ್ಸಾಂ), ಅಗರ್ತಲಾ, ಶ್ರೀಮಂತಪುರ ಮತ್ತು ಸಬ್ರೂಮ್ (ತ್ರಿಪುರಾ) ಭಾರತ-ಬಾಂಗ್ಲಾದೇಶ ಗಡಿಯಲ್ಲಿ; ಮತ್ತು ಮೋರೆ (ಮಣಿಪುರ) ಭಾರತ-ಮ್ಯಾನ್ಮಾರ್ ಗಡಿಯಲ್ಲಿ.
*****
(रिलीज़ आईडी: 2270087)
आगंतुक पटल : 17