ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಕೃತಕ ಬುದ್ಧಿಮತ್ತೆ (ಎಐ) ಪಠ್ಯಕ್ರಮದ ನವೀಕರಣದ ಕುರಿತು ಉದ್ಯಮದವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್
ಪ್ರಾಯೋಗಿಕ ಅನುಭವ, ಉದ್ಯಮ-ಸಂಯೋಜಿತ ಕಲಿಕೆ, ಅಧ್ಯಾಪಕರ ಅಭಿವೃದ್ಧಿ ಮತ್ತು ಹಂಚಿಕೆಯ ಮೂಲಸೌಕರ್ಯಗಳನ್ನು ಹೆಚ್ಚಿಸುವತ್ತ ಮೇಲೆ ಗಮನ
ಪ್ರಕಟಣಾ ದಿನಾಂಕ:
28 MAY 2026 4:03PM by PIB Bengaluru
ಉದಯೋನ್ಮುಖ ತಾಂತ್ರಿಕ ಪ್ರವೃತ್ತಿಗಳಿಗೆ ಕಲಿಯುವವರನ್ನು ಉತ್ತಮವಾಗಿ ಸಜ್ಜುಗೊಳಿಸಲು, ಕೃತಕ ಬುದ್ಧಿಮತ್ತೆ (ಎಐ) ಪಠ್ಯಕ್ರಮದ ಸಮಗ್ರ ಪರಿಷ್ಕರಣೆಗಾಗಿ ಭಾರತ ಸರ್ಕಾರವು ಉದ್ಯಮದವರೊಂದಿಗೆ ಕೈಜೋಡಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ನವದೆಹಲಿಯಲ್ಲಿ ಎಐ ಪಠ್ಯಕ್ರಮ ಕಾರ್ಯಪಡೆಯೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.

ಭಾರತದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸ್ತುತ ಇರುವ ಬ್ಯಾಚುಲರ್ ಆಫ್ ಟೆಕ್ನಾಲಜಿ (ಬಿ.ಟೆಕ್) ಕಂಪ್ಯೂಟರ್ ಸೈನ್ಸ್ ಮತ್ತು ಸಂಬಂಧಿತ ಪಠ್ಯಕ್ರಮಗಳ ಮೂಲ ಅಧ್ಯಯನವನ್ನು ಈ ಕಾರ್ಯಪಡೆಯು ನಡೆಸಿತು. ಈ ಕಾರ್ಯವನ್ನು ಉದ್ಯಮದ ತಜ್ಞರು ಮತ್ತು ರಾಷ್ಟ್ರೀಯ ಸಾಫ್ಟ್ವೇರ್ ಮತ್ತು ಸೇವಾ ಕಂಪನಿಗಳ ಸಂಘ (ನಾಸ್ ಕಾಂ) ಸಹಭಾಗಿತ್ವದಲ್ಲಿ ಕೈಗೊಳ್ಳಲಾಯಿತು.

ಭಾರತೀಯ ಪಠ್ಯಕ್ರಮದಲ್ಲಿ ಎಐ ವ್ಯಾಪ್ತಿಯು ವಿಸ್ತಾರಗೊಂಡಿದೆ ಎಂದು ಈ ಅಧ್ಯಯನವು ತಿಳಿಸಿದರೂ, ಅದರಲ್ಲಿ ಕೆಲವು ಗಮನಾರ್ಹ ನ್ಯೂನತೆಗಳನ್ನು ಗುರುತಿಸಿದೆ. ಇವು ಮುಖ್ಯವಾಗಿ ಬೋಧನಾ ಶಾಸ್ತ್ರ ಮೂಲಸೌಕರ್ಯ ಮತ್ತು ಜನರೇಟಿವ್ ಎಐ, ಮಷಿನ್ ಲರ್ನಿಂಗ್ ಆಪರೇಷನ್ಸ್ (ಎಂಎಲ್ ಒಪಿ) ಹಾಗೂ ಫೌಂಡೇಶನಲ್ ಮಾಡೆಲ್ ಡೆವಲಪ್ ಮೆಂಟ್ ನಂತಹ ಕ್ಷೇತ್ರಗಳಲ್ಲಿನ ಪ್ರಾಯೋಗಿಕ ಅನುಭವದ ಕೊರತೆಗೆ ಸಂಬಂಧಿಸಿದ್ದಾಗಿವೆ.
ಕಾರ್ಯಪಡೆಯ ಪ್ರಮುಖ ಗಮನ ಹರಿಸುವ ಕ್ಷೇತ್ರಗಳು:
- ಅನ್ವಯಿಕ-ಆಧಾರಿತ ಬೋಧನಾ ಶಾಸ್ತ್ರ: ಉಪನ್ಯಾಸ ಆಧಾರಿತ ಬೋಧನೆಯಿಂದ ಮೊದಲ ಸೆಮಿಸ್ಟರ್ನಿಂದಲೇ ನೈಜ ಉದ್ಯಮದ ಬಳಕೆಯ ಪ್ರಕರಣಗಳ ಆಧಾರದ ಮೇಲಿನ ಕಲಿಕೆಗೆ ಬದಲಾವಣೆ ತರುವುದು.
- ಕ್ರೆಡಿಟ್-ಸಂಯೋಜಿತ ಪಠ್ಯಕ್ರಮದ ಸಂಯೋಜನೆ: ರಚನಾತ್ಮಕವಾಗಿ ಸೆಮಿಸ್ಟರ್ ಪ್ರಕಾರ ಜಾರಿಗೆ ತರುವಂತೆ, ಔಪಚಾರಿಕ ಶೈಕ್ಷಣಿಕ ಕ್ರೆಡಿಟ್ ವ್ಯವಸ್ಥೆಯೊಳಗೆ ಎಐ ಕೋರ್ಸ್ಗಳನ್ನು ಅಳವಡಿಸುವುದು.
- ಹೆಚ್ಚಿದ ಪ್ರಾಯೋಗಿಕ ಅನುಭವ: ಪದವಿಯ ಸ್ವರೂಪ ಮತ್ತು ಆಯ್ಕೆ ಮಾಡಿದ ವಿಶೇಷತೆಯನ್ನು ಅವಲಂಬಿಸಿ, ಪ್ರಸ್ತುತ ಇರುವ ಶೇಕಡಾ 25-30 ರಷ್ಟು ಪ್ರಾಯೋಗಿಕ ಅನುಭವವನ್ನು ಶೇಕಡಾ 40-75 ಕ್ಕೆ ಹೆಚ್ಚಿಸುವುದು.
- ಉದ್ಯಮ-ಸಂಯೋಜಿತ ಬೋಧನಾ ಶಾಸ್ತ್ರ: ಕ್ಯಾಪ್ಸ್ಟೋನ್ ಪ್ರಾಜೆಕ್ಟ್ಗಳು ಸಂಪೂರ್ಣ ಎಐ ಪರಿಹಾರ ಎಂಜಿನಿಯರಿಂಗ್, ಮತ್ತು ಲೋ-ಕೋಡ್ ಹಾಗೂ ನೋ-ಕೋಡ್ ಪರಿಕರಗಳ ಬಳಕೆಯ ಮೂಲಕ ಇಡೀ ಕಾರ್ಯಕ್ರಮದಾದ್ಯಂತ ಉದ್ಯಮದ ಅನುಭವವನ್ನು ಹಂಚುವುದು.
- ನಿರಂತರ ಸರಣಿಯಾಗಿ ಜವಾಬ್ದಾರಿಯುತ ಎಐ: ಜವಾಬ್ದಾರಿಯುತ ಎಐ ಮತ್ತು ಎಐ ಆಡಳಿತವನ್ನು ಪ್ರತ್ಯೇಕ ಮಾಡ್ಯೂಲ್ ಗಳಾಗಿ ಇಡುವ ಬದಲಿಗೆ ಎಲ್ಲಾ ಸೆಮಿಸ್ಟರ್ಗಳಲ್ಲಿ ಸಂಯೋಜಿಸುವುದು.
- ಬಹು ಪ್ರವೇಶ-ನಿರ್ಗಮನ ಆಯ್ಕೆಗಳು: 1ನೇ ವರ್ಷದ ನಂತರ ಪ್ರಮಾಣಪತ್ರ, 2ನೇ ವರ್ಷದ ನಂತರ ಡಿಪ್ಲೊಮಾ, ಮತ್ತು 3ನೇ ವರ್ಷದ ನಂತರ ಉನ್ನತ ಡಿಪ್ಲೊಮಾ ನೀಡುವ ಸುಲಭ ಶೈಕ್ಷಣಿಕ ಮಾರ್ಗವನ್ನು ಒದಗಿಸುವುದು.
ಅಧ್ಯಾಪಕರ ಅಭಿವೃದ್ಧಿಗೆ ಒತ್ತು
ಪಠ್ಯಕ್ರಮದ ಸುಧಾರಣೆಗೆ ತಕ್ಕಂತೆ ಅಧ್ಯಾಪಕರು ಸಹ ಸಿದ್ಧರಾಗಿರಬೇಕು ಎಂಬುದನ್ನು ಗುರುತಿಸಿ, ಈ ಸಮಾಲೋಚನೆಯು ಬೋಧಕರ ಸಾಮರ್ಥ್ಯ ವೃದ್ಧಿಯನ್ನು ಪ್ರಸ್ತಾವಿತ ಮಾರ್ಗಸೂಚಿಯ ಕೇಂದ್ರಬಿಂದುವಾಗಿರಿಸಿದೆ. ಶಿಫಾರಸುಗಳು ಈ ಕೆಳಗಿನಂತಿವೆ:
- ತರಬೇತುದಾರರಿಗೆ ರಚನಾತ್ಮಕ ತರಬೇತಿ ಕಾರ್ಯಕ್ರಮಗಳು
- ಆಯ್ಕೆ ಮಾಡಲ್ಪಟ್ಟ ಕೋರ್ಸ್ ವಿಷಯಗಳು,
- ಪ್ರಮಾಣೀಕೃತ ಮೌಲ್ಯಮಾಪನ ಚೌಕಟ್ಟುಗಳು, ಮತ್ತು
- ಪ್ರಸ್ತುತ ಉದ್ಯಮದ ಪರಿಕರಗಳು ಮತ್ತು ವೇದಿಕೆಗಳಿಗೆ ಅನುಗುಣವಾಗಿ ಆಧುನೀಕರಿಸಿದ ಪ್ರಯೋಗಾಲಯಗಳು.
ತರಗತಿಯಲ್ಲಿ ಆಳವಾದ ವೃತ್ತಿಪರ ಪ್ರಾಯೋಗಿಕ ಪರಿಣತಿಯನ್ನು ತರಲು, ಪ್ರಮುಖ ಬಿಸಿನೆಸ್ ಶಾಲೆಗಳ ಯಶಸ್ವಿ ಮಾದರಿಯನ್ನು ಆಧರಿಸಿ, ಅನುಭವಸ್ಥ ಉದ್ಯಮ ವೃತ್ತಿಪರರನ್ನು ಅರೆಕಾಲಿಕ ಅಧ್ಯಾಪಕರನ್ನಾಗಿ ತೊಡಗಿಸಿಕೊಳ್ಳಲು ವಿಶೇಷ ಮದ್ಯಸ್ಥಿಕೆಯನ್ನು ಶಿಫಾರಸು ಮಾಡಲಾಗಿದೆ.
ಮೂಲದಲ್ಲಿ ಹಂಚಿಕೆಯ ಮೂಲಸೌಕರ್ಯ
ಭಾಗವಹಿಸಿದವರು ರಾಷ್ಟ್ರ ಮಟ್ಟದ 'ಹಂಚಿಕೆಯ ಎಐ ಮೂಲಸೌಕರ್ಯ'ದ ರಚನೆಯನ್ನು ಮತ್ತಷ್ಟು ಪ್ರಸ್ತಾಪಿಸಿದರು. 'ಟ್ರಿಪಲ್ ಹೆಲಿಕ್ಸ್' (triple helix) ಮಾದರಿಯನ್ನು ಉದ್ಯಮ, ಸರ್ಕಾರ ಮತ್ತು ಶೈಕ್ಷಣಿಕ ಸಂಸ್ಥೆಗಳು ಜಂಟಿಯಾಗಿ ಬೆಂಬಲಿಸುತ್ತವೆ. ಇದು ಎಲ್ಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್ ಕಂಪ್ಯೂಟ್, ಎಡ್ಜ್ ಸಾಧನಗಳು, ಸಾಫ್ಟ್ವೇರ್ ಸ್ಟಾಕ್ಗಳು ಮತ್ತು ಚಂದಾದಾರಿಕೆ ಆಧಾರಿತ ವೇದಿಕೆಗಳಿಗೆ ಸಮಾನ ಪ್ರವೇಶವನ್ನು ಖಚಿತಪಡಿಸುತ್ತದೆ.
ಭವಿಷ್ಯದ ಮಾರ್ಗಸೂಚಿ
- ಸಮಾಲೋಚನೆಯು ತಕ್ಷಣದ ಮುಂದಿನ ನಾಲ್ಕು ಕ್ರಮಗಳ ಕುರಿತು ಒಮ್ಮತದೊಂದಿಗೆ ಮುಕ್ತಾಯವಾಯಿತು:
- ರಾಷ್ಟ್ರ ಮಟ್ಟದಲ್ಲಿ ಕಂಪ್ಯೂಟ್, ಮೂಲಸೌಕರ್ಯ, ಅಧ್ಯಾಪಕರು ಮತ್ತು ಕಲಿಯುವವರ ಪ್ರಮಾಣಕ್ಕೆ ಸಂಬಂಧಿಸಿದ ಅಗತ್ಯತೆಗಳ ಅಂದಾಜು ಮಾಡುವುದು.
- ಪ್ರಸ್ತುತ ಬ್ಯಾಚ್ ಗಳ ಐದರಿಂದ ಎಂಟನೇ ಸೆಮಿಸ್ಟರ್ ಗಳಲ್ಲಿ ನವೀಕರಿಸಿದ ಪಠ್ಯಕ್ರಮವನ್ನು ಔಪಚಾರಿಕವಾಗಿ ಅಳವಡಿಸಿಕೊಳ್ಳಲು ಮತ್ತು ಹೊಸ ಬ್ಯಾಚ್ ಗಳಿಗೆ ಸಂಪೂರ್ಣವಾಗಿ ಸಂಯೋಜಿಸಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಯೊಂದಿಗೆ ತೊಡಗಿಸಿಕೊಳ್ಳುವುದು.
- ಉದ್ಯಮದವರ ನೇತೃತ್ವದಲ್ಲಿ ತರಬೇತಿ, ಅನುಭವ ಹಂಚಿಕೆ ಮತ್ತು ಕಾರ್ಪೊರೇಟ್ ವೃತ್ತಿಪರರು ಶಿಕ್ಷಕರಾಗಿ ಸೇವೆ ಸಲ್ಲಿಸಲು ರಚನಾತ್ಮಕ ಮಾರ್ಗವನ್ನು ಒಳಗೊಂಡಂತೆ ಅಧ್ಯಾಪಕರ ಅಭಿವೃದ್ಧಿ ಮಾರ್ಗಸೂಚಿ ಸಿದ್ಧಪಡಿಸುವುದು.
- ನಾನ್-ಸ್ಟೆಮ್ (Non-STEM) ವಿಭಾಗಗಳಿಗೆ ಸಮಾನಾಂತರ ಮಾರ್ಗವನ್ನು ರಚಿಸುವುದು. ಇದನ್ನು ಎಐ ಅರಿವು, ಮೂಲಭೂತ ಎಐ ಸಾಕ್ಷರತೆ ಮತ್ತು ತಾಂತ್ರಿಕೇತರ ಪಾತ್ರಗಳಲ್ಲಿ ಎಐನ ಪ್ರಾಯೋಗಿಕ ಬಳಕೆಯನ್ನು ಒಳಗೊಂಡ ಪ್ರತ್ಯೇಕ ಕಾರ್ಯಕ್ಷೇತ್ರವಾಗಿ ಕೈಗೆತ್ತಿಕೊಳ್ಳಲಾಗುವುದು.
*****
(ಪ್ರಕಟಣೆ ಐ.ಡಿ.: 2266329)
ವಿಸಿಟರ್ ಕೌಂಟರ್ : 8