ಶಿಕ್ಷಣ ಸಚಿವಾಲಯ
ನೀಟ್ (ಯುಜಿ) ಮರುಪರೀಕ್ಷೆಯನ್ನು ಸುರಕ್ಷಿತ, ಸುಭದ್ರ ಮತ್ತು ಯಶಸ್ವಿಯಾಗಿ ನಡೆಸುವಂತೆ ಕೋರಿ ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್
ಪ್ರಕಟಣಾ ದಿನಾಂಕ:
25 MAY 2026 6:39PM by PIB Bengaluru
2026 ರ ಜೂನ್ 21 ರಂದು ನಡೆಯಲಿರುವ ನೀಟ್ (ಯುಜಿ) ಮರುಪರೀಕ್ಷೆಯನ್ನು ಸುಗಮವಾಗಿ, ನ್ಯಾಯಯುತವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಸಹಕರಿಸುವಂತೆ ಕೋರಿ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ದೇಶದಾದ್ಯಂತದ ಎಲ್ಲಾ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್ ಗಳು ಮತ್ತು ಆಡಳಿತಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಪ್ರಸ್ತುತ ಚಾಲ್ತಿಯಲ್ಲಿರುವ ತೀವ್ರ ಬಿಸಿಗಾಳಿಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಪರೀಕ್ಷಾರ್ಥಿಗಳ ಅನುಕೂಲ ಮತ್ತು ಯೋಗಕ್ಷೇಮಕ್ಕಾಗಿ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸಚಿವರು ಅವರಿಗೆ ನಿರ್ದಿಷ್ಟವಾಗಿ ಒತ್ತಾಯಿಸಿದ್ದಾರೆ.
“ಪ್ರಸ್ತುತ ಚಾಲ್ತಿಯಲ್ಲಿರುವ ಬಿಸಿಗಾಳಿಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಸೌಕರ್ಯಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಪರೀಕ್ಷೆಯನ್ನು ಆಯೋಜಿಸುತ್ತಿರುವ ಜಿಲ್ಲಾ ಅಧಿಕಾರಿಗಳಿಗೆ ಮತ್ತು ಎಲ್ಲಾ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಇತರ ಸಂಸ್ಥೆಗಳಿಗೆ ಸೂಕ್ತ ಸೂಚನೆಗಳನ್ನು ನೀಡಬೇಕಾಗಿ ನಾನು ನಿಮ್ಮಲ್ಲಿ ವಿನಂತಿಸುತ್ತೇನೆ. ಇವುಗಳಲ್ಲಿ ಸುರಕ್ಷಿತ ಕುಡಿಯುವ ನೀರು, ಸೂಕ್ತ ಆಸನ ವ್ಯವಸ್ಥೆಗಳು, ಸುಸ್ಥಿತಿಯಲ್ಲಿರುವ ಫ್ಯಾನ್/ಕೂಲರ್, ಸ್ವಚ್ಛವಾದ ಶೌಚಾಲಯಗಳು, ನೆರಳಿರುವ ಕಾಯುವ ಪ್ರದೇಶಗಳು, ತಡೆರಹಿತ ವಿದ್ಯುತ್ ಪೂರೈಕೆ ಮತ್ತು ಅಗತ್ಯವಿರುವ ಕಡೆಗಳಲ್ಲಿ ಪೋರ್ಟಬಲ್ (ಸಾಗಿಸಬಹುದಾದ) ಶೌಚಾಲಯಗಳು ಸೇರಿರಬಹುದು.” ಎಂದು ಶ್ರೀ ಪ್ರಧಾನ್ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಯೋಗಕ್ಷೇಮವು ಅತ್ಯಂತ ಮಹತ್ವವಾದುದು ಎಂದು ಉಲ್ಲೇಖಿಸಿದ ಸಚಿವರು, ಪರೀಕ್ಷೆಯ ದಿನವಾದ ಜೂನ್ 21 ರಂದು ಅಭ್ಯರ್ಥಿಗಳಿಗೆ ಸೂಕ್ತ ಸಾರಿಗೆ ಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದ್ದಾರೆ.
ನೀಟ್ (ಯುಜಿ) 2026ರ ಮರುಪರೀಕ್ಷೆಯನ್ನು ಸುಗಮ, ಪಾರದರ್ಶಕ ಮತ್ತು ನ್ಯಾಯಯುತ ರೀತಿಯಲ್ಲಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳು ತಮ್ಮ ಪೂರ್ಣ ಸಹಕಾರವನ್ನು ನೀಡಲಿವೆ ಎಂಬ ವಿಶ್ವಾಸವನ್ನು ಶ್ರೀ ಪ್ರಧಾನ್ ಅವರು ವ್ಯಕ್ತಪಡಿಸಿದ್ದಾರೆ.
******
(ಪ್ರಕಟಣೆ ಐ.ಡಿ.: 2265137)
ವಿಸಿಟರ್ ಕೌಂಟರ್ : 10