ಜಲ ಶಕ್ತಿ ಸಚಿವಾಲಯ
azadi ka amrit mahotsav

ಗುವಾಹಟಿಯಲ್ಲಿ ಬ್ರಹ್ಮಪುತ್ರ ಮಂಡಳಿಯ 14ನೇ ಎಚ್‌ ಪಿ ಆರ್‌ ಬಿ (HPRB) ಸಭೆಯ ಅಧ್ಯಕ್ಷತೆ ವಹಿಸಿದ ಕೇಂದ್ರ ಜಲಶಕ್ತಿ ಸಚಿವರು


ರಾಜ್ಯಗಳಾದ್ಯಂತ ಸುಸ್ಥಿರ ಜಲ ಆಡಳಿತ ಮತ್ತು ಸುಧಾರಣಾ ಉಪಕ್ರಮಗಳನ್ನು ಬಲಪಡಿಸಲು 'ರಾಜ್ಯ ಜಲ ಸುಧಾರಣಾ ಚೌಕಟ್ಟು' ಬಿಡುಗಡೆ

ಪ್ರಕಟಣಾ ದಿನಾಂಕ: 19 MAY 2026 4:06PM by PIB Bengaluru

ಭಾರತ ಸರ್ಕಾರದ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಪುತ್ರ ಮಂಡಳಿಯ ಉನ್ನತಾಧಿಕಾರ ಪರಿಶೀಲನಾ ಮಂಡಳಿಯ (HPRB) 14ನೇ ಸಭೆಯು 2026ರ ಮೇ 19ರಂದು ಗುವಾಹಟಿಯಲ್ಲಿ ನಡೆಯಿತು. ಕೇಂದ್ರ ಕ್ಯಾಬಿನೆಟ್ ಸಚಿವ ಸರ್ಬಾನಂದ ಸೋನೊವಾಲ್, ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವರಾದ ರಾಜ್ ಭೂಷಣ್ ಚೌಧರಿ, ಜೊತೆಗೆ ಇತರ ಸಚಿವರು, ಭಾರತ ಸರ್ಕಾರ ಮತ್ತು ಈಶಾನ್ಯ ರಾಜ್ಯಗಳ ಹಿರಿಯ ಅಧಿಕಾರಿಗಳು, ತಾಂತ್ರಿಕ ತಜ್ಞರು ಮತ್ತು ಪಾಲುದಾರರು ನದಿ ಜಲಾನಯನ ನಿರ್ವಹಣಾ ಉಪಕ್ರಮಗಳ ಪ್ರಗತಿಯನ್ನು ಪರಿಶೀಲಿಸಲು ಮತ್ತು ಬ್ರಹ್ಮಪುತ್ರ ಮಂಡಳಿಯ ಭವಿಷ್ಯದ ಮಾರ್ಗಸೂಚಿಗೆ ಕಾರ್ಯತಂತ್ರದ ಮಾರ್ಗದರ್ಶನ ನೀಡಲು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಜಲ ಆಡಳಿತ ಸುಧಾರಣೆಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಮಹತ್ವದ ರಾಷ್ಟ್ರೀಯ ಉಪಕ್ರಮವಾದ 'ರಾಜ್ಯ ಜಲ ಸುಧಾರಣಾ ಚೌಕಟ್ಟನ್ನು' (State Water Reforms Framework - SWRF) ಕೂಡ ಕೇಂದ್ರ ಜಲಶಕ್ತಿ ಸಚಿವರು ಬಿಡುಗಡೆ ಮಾಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಜಲ ಭದ್ರತೆಯು ಭಾರತದ ಅಭಿವೃದ್ಧಿ ಪಯಣದ ಕೇಂದ್ರಬಿಂದುವಾಗಿದೆ ಮತ್ತು 'ವಿಕಸಿತ ಭಾರತ @2047'ರ ದೃಷ್ಟಿಕೋನವನ್ನು ಸಾಧಿಸಲು ಒಂದು ಪ್ರಮುಖ ಆಧಾರಸ್ತಂಭವಾಗಿದೆ ಎಂದು ಪ್ರತಿಪಾದಿಸಿದರು. ಸುಸ್ಥಿರ ಜಲ ನಿರ್ವಹಣೆಗೆ ಕೇವಲ ಮೂಲಸೌಕರ್ಯಗಳ ನಿರ್ಮಾಣವಷ್ಟೇ ಅಲ್ಲದೆ, ಸದೃಢ ಆಡಳಿತ ವ್ಯವಸ್ಥೆಗಳು, ಉತ್ತಮ ನೀತಿಗಳು, ಬಲವಾದ ಸಂಸ್ಥೆಗಳು, ತಾಂತ್ರಿಕ ನಾವೀನ್ಯತೆ ಮತ್ತು ಸಮುದಾಯದ ಸಹಭಾಗಿತ್ವದ ಅಗತ್ಯವಿದೆ ಎಂದು ಅವರು ತಿಳಿಸಿದರು.

HPRB ಸಭೆಯು ನದಿ ಜಲಾನಯನ ನಿರ್ವಹಣೆ, ಮಾಸ್ಟರ್ ಪ್ಲಾನ್‌ ಗಳ ತಯಾರಿ ಮತ್ತು ನವೀಕರಣ, ಪ್ರವಾಹ ಮತ್ತು ಮಣ್ಣಿನ ಸವೆತ ನಿರ್ವಹಣೆ, ಜಲಮೂಲಗಳ ಪುನರುಜ್ಜೀವನ, ಡಿಜಿಟಲ್ ರೂಪಾಂತರ, ಸಾಮರ್ಥ್ಯ ವೃದ್ಧಿ ಮತ್ತು ಸಾಂಸ್ಥಿಕ ಸುಧಾರಣೆಗಳ ಕ್ಷೇತ್ರಗಳಲ್ಲಿ ಬ್ರಹ್ಮಪುತ್ರ ಮಂಡಳಿಯ ಪ್ರಗತಿಯನ್ನು ಪರಿಶೀಲಿಸಿತು. ಸಮಗ್ರ ನದಿ ಜಲಾನಯನ ಯೋಜನೆಗಳನ್ನು ಬಲಪಡಿಸುವಲ್ಲಿ ಹಾಗೂ ಈಶಾನ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದಾದ್ಯಂತ ತಾಂತ್ರಿಕ ಬೆಂಬಲ ಚಟುವಟಿಕೆಗಳನ್ನು ವಿಸ್ತರಿಸುವಲ್ಲಿ ಕಳೆದ ಎರಡು ವರ್ಷಗಳಲ್ಲಿ ಮಂಡಳಿಯು ಸಾಧಿಸಿದ ಗಣನೀಯ ಪ್ರಗತಿಯನ್ನು HPRB ಶ್ಲಾಘಿಸಿತು.

ಸಭೆಯ ಸಮಯದಲ್ಲಿ, ಜಿಐಎಸ್ (GIS), ರಿಮೋಟ್ ಸೆನ್ಸಿಂಗ್, ಲಿಡಾರ್ (LiDAR) ಮತ್ತು ಹೈಡ್ರೊಲಾಜಿಕಲ್ ಮಾಡೆಲಿಂಗ್‌ ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ನದಿ ಜಲಾನಯನ ಮಾಸ್ಟರ್ ಪ್ಲಾನ್‌ ಗಳ (ಬೃಹತ್ ಯೋಜನೆಗಳ) ತಯಾರಿ ಮತ್ತು ನವೀಕರಣದ ಕುರಿತು ವಿವರವಾದ ಚರ್ಚೆಗಳನ್ನು ನಡೆಸಲಾಯಿತು. ಬ್ರಹ್ಮಪುತ್ರ ಮತ್ತು ಬರಾಕ್ ಜಲಾನಯನ ಪ್ರದೇಶಗಳನ್ನು ಒಳಗೊಂಡಂತೆ ಮಾಸ್ಟರ್ ಪ್ಲಾನ್‌ ಗಳ ತಯಾರಿ ಮತ್ತು ನವೀಕರಣಕ್ಕಾಗಿ ಒಟ್ಟು 76 ನದಿ ಜಲಾನಯನ ಪ್ರದೇಶಗಳು ಮತ್ತು ಉಪ-ಜಲಾನಯನ ಪ್ರದೇಶಗಳನ್ನು ಈಗ ಗುರುತಿಸಲಾಗಿದೆ ಎಂದು ಮಂಡಳಿಯು ತಿಳಿಸಿತು.

HPRB ಈಶಾನ್ಯ ಪ್ರದೇಶದ ವಿವಿಧ ರಾಜ್ಯಗಳಲ್ಲಿ ಪ್ರವಾಹ ನಿರ್ವಹಣೆ, ಮಣ್ಣಿನ ಸವೆತ ತಡೆಗಟ್ಟುವ ಕಾಮಗಾರಿಗಳು, ಒಳಚರಂಡಿ ಅಭಿವೃದ್ಧಿ, ಜಲಮೂಲಗಳ ನಿರ್ವಹಣೆ ಮತ್ತು ಜಲ ಸಂರಕ್ಷಣಾ ಉಪಕ್ರಮಗಳಿಗೆ ಸಂಬಂಧಿಸಿದ ವಿವಿಧ ನಡೆಯುತ್ತಿರುವ ಮತ್ತು ಉದ್ದೇಶಿತ ಯೋಜನೆಗಳನ್ನು ಸಹ ಪರಿಶೀಲಿಸಿತು. ಆಯಾ ರಾಜ್ಯ ಸರ್ಕಾರಗಳ ಸಮನ್ವಯದೊಂದಿಗೆ ಅಸ್ಸಾಂ, ಮೇಘಾಲಯ, ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಕೈಗೊಳ್ಳಲಾಗುತ್ತಿರುವ ಪ್ರಮುಖ ಕಾರ್ಯಗಳನ್ನು ಮಂಡಳಿಯು ಎತ್ತಿತೋರಿಸಿತು.

ಬ್ರಹ್ಮಪುತ್ರ ಮಂಡಳಿಯನ್ನು ಆಧುನಿಕ, ತಂತ್ರಜ್ಞಾನ-ಚಾಲಿತ ಮತ್ತು ಜ್ಞಾನ-ಆಧಾರಿತ ನದಿ ಜಲಾನಯನ ಸಂಸ್ಥೆಯಾಗಿ (River Basin Organization - RBO) ಪರಿವರ್ತಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ನಿಟ್ಟಿನಲ್ಲಿ, ದಕ್ಷತೆ, ಪಾರದರ್ಶಕತೆ ಮತ್ತು ಸಮನ್ವಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸಾಂಸ್ಥಿಕ ಪುನರ್ರಚನೆ, ವಿಶೇಷ ತಾಂತ್ರಿಕ ಘಟಕಗಳ ಬಲವರ್ಧನೆ, ಡಿಜಿಟಲ್ ಆಡಳಿತ ಉಪಕ್ರಮಗಳು ಮತ್ತು ಸಾಂಸ್ಥಿಕ ಸುಧಾರಣೆಗಳ ಕುರಿತು ನೀತಿ ಮತ್ತು ಕಾರ್ಯತಂತ್ರದ ಮಾರ್ಗದರ್ಶನವನ್ನು ನೀಡಲಾಯಿತು.

ಈ ಪ್ರದೇಶದಲ್ಲಿ ಸಂಶೋಧನೆ, ಹೈಡ್ರಾಲಿಕ್ ಅಧ್ಯಯನಗಳು, ತಾಂತ್ರಿಕ ಸಲಹಾ ಸೇವೆಗಳು ಮತ್ತು ಸಾಮರ್ಥ್ಯ ವೃದ್ಧಿ ಚಟುವಟಿಕೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ 'ನಾರ್ತ್ ಈಸ್ಟರ್ನ್ ಹೈಡ್ರಾಲಿಕ್ ಅಂಡ್ ಅಲೈಡ್ ರಿಸರ್ಚ್ ಇನ್‌ಸ್ಟಿಟ್ಯೂಟ್' (NEHARI) ನ ಉದ್ದೇಶಿತ ಪುನರುಜ್ಜೀವನ ಯೋಜನೆಯನ್ನು ಸಹ HPRB ಪರಿಶೀಲಿಸಿತು. ಗುವಾಹಟಿಯ ಬಸಿಷ್ಠದಲ್ಲಿರುವ (Basistha) ಬ್ರಹ್ಮಪುತ್ರ ಮಂಡಳಿಯ ಕಚೇರಿ ಸಂಕೀರ್ಣವನ್ನು ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ಆಧುನಿಕ ಸಾಂಸ್ಥಿಕ ಕ್ಯಾಂಪಸ್ ಆಗಿ ಮರು-ಅಭಿವೃದ್ಧಿಗೊಳಿಸುವ ಕುರಿತು ಕೂಡ ಚರ್ಚೆಗಳನ್ನು ನಡೆಸಲಾಯಿತು.

ಕಾರ್ಯಕ್ರಮದ ಭಾಗವಾಗಿ, ಈಶಾನ್ಯ ಭಾರತದ ಸಾಂಪ್ರದಾಯಿಕ ಜಲ ನಿರ್ವಹಣಾ ಪದ್ಧತಿಗಳ ಕುರಿತಾದ ಈ ಕೆಳಗಿನ ಪುಸ್ತಕಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು:

•    ಈಶಾನ್ಯ ಭಾರತದ ಸಾಂಪ್ರದಾಯಿಕ ಜಲ ನಿರ್ವಹಣಾ ಪದ್ಧತಿಗಳು – ಸಂಪನ್ಮೂಲ ಪುಸ್ತಕ (Resource Book)
•    ಈಶಾನ್ಯ ಭಾರತದ ಸಾಂಪ್ರದಾಯಿಕ ಜಲ ನಿರ್ವಹಣಾ ಪದ್ಧತಿಗಳು – ಚಿತ್ರ ಪುಸ್ತಕ (Picture Book)
•    ಭತ್ತ-ಮತ್ತು-ಮೀನುಗಾರಿಕೆ (ಅರುಣಾಚಲ ಪ್ರದೇಶ) – ಸಾಕ್ಷ್ಯಚಿತ್ರ
•    ಡೊಂಗ್ ವ್ಯವಸ್ಥೆ (ಅಸ್ಸಾಂ) – ಸಾಕ್ಷ್ಯಚಿತ್ರ
•    ಬಿದಿರು ಹನಿ ನೀರಾವರಿ (ಮೇಘಾಲಯ) – ಸಾಕ್ಷ್ಯಚಿತ್ರ
•    ಮಳೆನೀರು ಕೊಯ್ಲು (ಮಿಜೋರಾಂ) – ಸಾಕ್ಷ್ಯಚಿತ್ರ


ಈ ಪ್ರದೇಶದ ಸ್ಥಳೀಯ ಹಾಗೂ ಸುಸ್ಥಿರ ಜಲ ನಿರ್ವಹಣಾ ಪದ್ಧತಿಗಳನ್ನು ದಾಖಲಿಸುವಲ್ಲಿ ಬ್ರಹ್ಮಪುತ್ರ ಮಂಡಳಿಯ ಪ್ರಯತ್ನಗಳನ್ನು ಎಚ್‌ ಪಿ ಆರ್‌ ಬಿ ಶ್ಲಾಘಿಸಿತು ಮತ್ತು ಆಧುನಿಕ ನದಿ ಜಲಾನಯನ ನಿರ್ವಹಣಾ ವಿಧಾನಗಳೊಂದಿಗೆ ಸಾಂಪ್ರದಾಯಿಕ ಜ್ಞಾನವನ್ನು ಸಂಯೋಜಿಸುವ ಮಹತ್ವವನ್ನು ಒತ್ತಿಹೇಳಿತು.

ರಾಜ್ಯ ಜಲ ಸುಧಾರಣಾ ಚೌಕಟ್ಟಿನ (SWRF) ಕುರಿತು

ಕಾರ್ಯಕ್ರಮದ ವೇಳೆ ಬಿಡುಗಡೆ ಮಾಡಲಾದ 'ರಾಜ್ಯ ಜಲ ಸುಧಾರಣಾ ಚೌಕಟ್ಟು' (SWRF), ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಪ್ರಗತಿಪರ ಜಲ ವಲಯದ ಸುಧಾರಣೆಗಳನ್ನು ಉತ್ತೇಜಿಸಲು ಮತ್ತು ಮಾನದಂಡಗಳನ್ನು (benchmark) ನಿಗದಿಪಡಿಸಲು ಜಲಶಕ್ತಿ ಸಚಿವಾಲಯವು ಅಭಿವೃದ್ಧಿಪಡಿಸಿದ ಸುಧಾರಣಾ-ಆಧಾರಿತ ಆಡಳಿತ ಚೌಕಟ್ಟಾಗಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವವನ್ನು ಒಳಗೊಂಡಿರುವ ಈ ಚೌಕಟ್ಟನ್ನು, ನೀರು ಎಂಬುದು ಕೇಂದ್ರ ಹಾಗೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವೆ ಸಾಮೂಹಿಕ ಮಾಲೀಕತ್ವ, ಸಹಯೋಗದ ಆಡಳಿತ ಮತ್ತು ಜಂಟಿ ಹೊಣೆಗಾರಿಕೆಯನ್ನು ಬೇಡುವ ಹಂಚಿಕೆಯ ರಾಷ್ಟ್ರೀಯ ಸಂಪನ್ಮೂಲವೆಂದು ಗುರುತಿಸಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಮಾಲೋಚನೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಈ ಚೌಕಟ್ಟು ನೀತಿ ಮತ್ತು ನಿಯಂತ್ರಣ, ಯೋಜನಾ ಉಸ್ತುವಾರಿ, ಡಿಜಿಟಲೀಕರಣ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ (R&D), ಮೂಲಸೌಕರ್ಯ ಮತ್ತು ಸಮುದಾಯದ ಸಹಭಾಗಿತ್ವ ಸೇರಿದಂತೆ ಐದು ಆಯಾಮಗಳಲ್ಲಿ 75 ಸೂಚಕಗಳನ್ನು ಒಳಗೊಂಡಿದೆ. ಈ ಆಯಾಮಗಳಾದ್ಯಂತ ಪಾರದರ್ಶಕವಾದ, ಪುರಾವೆ-ಆಧಾರಿತ ಮಾನದಂಡದ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಸ್ಪರರ ಅತ್ಯುತ್ತಮ ಅಭ್ಯಾಸಗಳಿಂದ ಕಲಿಯಲು, ಇತರ ರಾಜ್ಯಗಳೊಂದಿಗೆ ತಮ್ಮ ಸಾಧನೆಯನ್ನು ಅಳೆಯಲು ಮತ್ತು ಜಲ ಆಡಳಿತದಲ್ಲಿ ಶ್ರೇಷ್ಠತೆಗಾಗಿ ಶ್ರಮಿಸಲು ಅನುವು ಮಾಡಿಕೊಡುವ ಜೊತೆಗೆ, SWRF ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ಶಕ್ತಿಯನ್ನು ಸಹ ಬಳಸಿಕೊಳ್ಳುತ್ತದೆ. ರಾಜ್ಯಗಳ ನಡುವಿನ ಈ ಆರೋಗ್ಯಕರ ಸ್ಪರ್ಧೆಯು ಸುಧಾರಣೆಗಳನ್ನು ಚುರುಕುಗೊಳಿಸುವ, ನಾವೀನ್ಯತೆಯನ್ನು ಪ್ರೇರೇಪಿಸುವ ಮತ್ತು ದೇಶಾದ್ಯಂತ ಜಲ ನಿರ್ವಹಣೆಯ ಒಟ್ಟಾರೆ ಗುಣಮಟ್ಟವನ್ನು ಹೆಚ್ಚಿಸುವ ನಿರೀಕ್ಷೆಯನ್ನು ಹೊಂದಿದೆ.

ಅಂತರ್ಜಲ ನಿಯಂತ್ರಣ, ಪ್ರವಾಹ ಬಯಲು ವಲಯ ರಚನೆ, ತ್ಯಾಜ್ಯನೀರಿನ ಮರುಬಳಕೆ, ಅಣೆಕಟ್ಟು ಸುರಕ್ಷತೆ, ಸಹಭಾಗಿತ್ವದ ನೀರಾವರಿ ನಿರ್ವಹಣೆ, ನದಿ ಜಲಾನಯನ ಯೋಜನೆ, ಡೇಟಾ ಏಕೀಕರಣ ಮತ್ತು ಸಾಂಸ್ಥಿಕ ಬಲವರ್ಧನೆಯಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಅಳೆಯಬಹುದಾದ ಮತ್ತು ಪರಿಶೀಲಿಸಬಹುದಾದ ಸುಧಾರಣೆಗಳನ್ನು ಕೈಗೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸಲು ಈ ಚೌಕಟ್ಟು ಪ್ರಯತ್ನಿಸುತ್ತದೆ. ನೀತಿಗಳಲ್ಲಿನ ಅಂತರಗಳನ್ನು ಗುರುತಿಸಲು, ಅಳೆಯಬಹುದಾದ ಸುಧಾರಣೆಗಳನ್ನು ಕೈಗೊಳ್ಳಲು ಮತ್ತು 'ವಿಕಸಿತ ಭಾರತ @2047'ರ ದೃಷ್ಟಿಕೋನಕ್ಕೆ ಅನುಗುಣವಾಗಿ ಚೇತರಿಸಿಕೊಳ್ಳಬಲ್ಲ (resilient), ಜವಾಬ್ದಾರಿಯುತ ಮತ್ತು ಜಲ-ಸುರಕ್ಷಿತ ಆಡಳಿತ ವ್ಯವಸ್ಥೆಗಳನ್ನು ನಿರ್ಮಿಸಲು ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಬೆಂಬಲಿಸುವ ಗುರಿಯನ್ನು ಇದು ಹೊಂದಿದೆ.

ಪ್ರಮುಖ ಸುಧಾರಣೆಗಳನ್ನು ಕೈಗೊಳ್ಳಲು 2026ರ ಡಿಸೆಂಬರ್ 31ರವರೆಗೆ ಏಳು ತಿಂಗಳ ಮುಂಗಡ ಕಾಲಾವಕಾಶವನ್ನು ಈ ಚೌಕಟ್ಟಿನ ಬಿಡುಗಡೆಯು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೀಡುತ್ತದೆ ಹಾಗೂ 2027ರ ಜನವರಿ 31ರೊಳಗೆ ಸೂಚಕಗಳ ಕುರಿತು ಪ್ರತಿಕ್ರಿಯೆಗಳನ್ನು ಒದಗಿಸಬೇಕಾಗುತ್ತದೆ.

ಈಶಾನ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳಕ್ಕಾಗಿ ಅಂತರ-ರಾಜ್ಯ ಸಮನ್ವಯತೆ, ಸುಸ್ಥಿರ ನದಿ ಜಲಾನಯನ ನಿರ್ವಹಣೆ ಮತ್ತು ದೀರ್ಘಾವಧಿಯ ಜಲಸಂಪನ್ಮೂಲ ಯೋಜನೆಯನ್ನು ಬಲಪಡಿಸುವ ಸಾಮೂಹಿಕ ಬದ್ಧತೆಯೊಂದಿಗೆ ಸಭೆಯು ಮುಕ್ತಾಯವಾಯಿತು.

 

*****


(ಪ್ರಕಟಣೆ ಐ.ಡಿ.: 2262837) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: Khasi , English , Urdu , हिन्दी , Assamese , Gujarati , Tamil