ರೈಲ್ವೇ ಸಚಿವಾಲಯ
ಹೆಚ್ಚಿನ ಸಾಂದ್ರತೆಯ ಹೌರಾ-ದೆಹಲಿ ರೈಲು ಮಾರ್ಗದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಲು ₹962 ಕೋಟಿ ವೆಚ್ಚದ 54 ಕಿ.ಮೀ ಕಿಯುಲ್-ಝಾಝಾ 3ನೇ ಮಾರ್ಗ ಯೋಜನೆಗೆ ಭಾರತೀಯ ರೈಲ್ವೆ ಅನುಮೋದನೆ ನೀಡಿದೆ
ಪ್ರಯಾಣಿಕರ ಸಂಚಾರ, ಸಂಪರ್ಕ ಮತ್ತು ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆಯನ್ನು ಬಲಪಡಿಸಲು ಕಿಯುಲ್-ಝಾಝಾ 3ನೇ ಮಾರ್ಗ ಯೋಜನೆ: ಅಶ್ವಿನಿ ವೈಷ್ಣವ್
ಪ್ರಕಟಣಾ ದಿನಾಂಕ:
19 MAY 2026 11:35AM by PIB Bengaluru
ಭಾರತೀಯ ರೈಲ್ವೆಯು ₹962 ಕೋಟಿ ವೆಚ್ಚದ ಕಿಯುಲ್-ಝಾಝಾ 3ನೇ ಮಾರ್ಗ ಯೋಜನೆಯನ್ನು (54 ಕಿ.ಮೀ) ಅನುಮೋದಿಸಿದೆ, ಇದು ರೈಲು ವ್ಯವಸ್ಥೆಗಳ ಸಾಮರ್ಥ್ಯವನ್ನು ಹೆಚ್ಚಿಸುವ, ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವ ಮತ್ತು ಹೆಚ್ಚಿನ ಸಾಂದ್ರತೆಯ ಹೌರಾ-ದೆಹಲಿ ಕಾರಿಡಾರ್ನಲ್ಲಿ ತಡೆರಹಿತ ರೈಲು ಸಾರಿಗೆಯನ್ನು ಖಚಿತಪಡಿಸಿಕೊಳ್ಳುವ ಕಡೆಗೆ ತನ್ನ ಬದ್ಧತೆಯನ್ನು ಬಲಪಡಿಸುತ್ತದೆ. ಈ ಯೋಜನೆಯು ಭಾರತೀಯ ರೈಲ್ವೆಯ ಹೆಚ್ಚಿನ ಸಂಚಾರ ಸಾಂದ್ರತೆ ಜಾಲದ ಪ್ರಮುಖ ಭಾಗವಾಗಿದೆ ಮತ್ತು ಪೂರ್ವ ಮತ್ತು ಉತ್ತರ ಭಾರತದಾದ್ಯಂತ ಪ್ರಯಾಣಿಕರು ಮತ್ತು ಸರಕು ಸಾಗಣೆ ಎರಡನ್ನೂ ಬಲಪಡಿಸುವ ನಿರೀಕ್ಷೆಯಿದೆ.
ಕಿಯುಲ್-ಝಾಝಾ 3ನೇ ಮಾರ್ಗ ಯೋಜನೆಯು ಹೆಚ್ಚು ಬಳಕೆಯಾಗುತ್ತಿರುವ ಹೌರಾ-ದೆಹಲಿ ರೈಲು ಕಾರಿಡಾರ್ನಲ್ಲಿ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ರೈಲು ಸೇವೆಗಳ ಸಮಯಪಾಲನೆ ಮತ್ತು ಕಾರ್ಯಾಚರಣೆಯ ನಮ್ಯತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಹೆಚ್ಚುವರಿ ಮಾರ್ಗ ಮೂಲಸೌಕರ್ಯವು ಪ್ರಯಾಣಿಕ ಮತ್ತು ಸರಕು ರೈಲುಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದ್ದು, ಪ್ರದೇಶದಾದ್ಯಂತ ಕೈಗಾರಿಕಾ ಬೆಳವಣಿಗೆ ಮತ್ತು ವ್ಯಾಪಾರ ಸಂಪರ್ಕವನ್ನು ಬೆಂಬಲಿಸುತ್ತದೆ ಎಂದು ಅವರು ಹೇಳಿದರು.
ಪ್ರಸ್ತುತ, ಕಿಯುಲ್ ಮತ್ತು ಝಾಜಾ ನಡುವಿನ ಅಸ್ತಿತ್ವದಲ್ಲಿರುವ ಡಬಲ್ ಮಾರ್ಗ ವಿಭಾಗವು ಅತ್ಯುತ್ತಮ ಸಾಮರ್ಥ್ಯದ ಬಳಕೆಯನ್ನು ಮೀರಿ ಕಾರ್ಯನಿರ್ವಹಿಸುತ್ತಿದೆ. ಹಾಗೂ, ಕಾರಿಡಾರ್ನಲ್ಲಿ ಸಂಚಾರ ಬೇಡಿಕೆಯು ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ, ಇದರಿಂದಾಗಿ ಹೆಚ್ಚುವರಿ ಮೂಲಸೌಕರ್ಯ ವೃದ್ಧಿಯ ಅಗತ್ಯವಿರುತ್ತದೆ. ಪ್ರಸ್ತಾವಿತ 54 ಕಿಮೀ ಮೂರನೇ ಮಾರ್ಗ ಯೋಜನೆಯು ಮಾರ್ಗ ಸಾಮರ್ಥ್ಯವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ, ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣಿಕ ಮತ್ತು ಸರಕು ರೈಲುಗಳ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಈ ಯೋಜನೆಯು ಪಾಟ್ನಾ ಮತ್ತು ಕೋಲ್ಕತ್ತಾ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ, ಜೊತೆಗೆ ಉತ್ತರ ಮತ್ತು ಪೂರ್ವ ಭಾರತದಾದ್ಯಂತ ಪ್ರಮುಖ ಕೈಗಾರಿಕಾ ಮತ್ತು ಸಾಗಣಿಕೆ (ಲಾಜಿಸ್ಟಿಕ್ಸ್) ಕೇಂದ್ರಗಳಿಗೆ ಸಂಪರ್ಕ ಹೊಂದಿದ ಸರಕು ಸಾಗಣೆಯನ್ನು ಬೆಂಬಲಿಸುತ್ತದೆ.
ಈ ಮಾರ್ಗವು ಕೋಲ್ಕತ್ತಾ/ಹಾಲ್ಡಿಯಾ ಬಂದರುಗಳು ಮತ್ತು ರಕ್ಸೌಲ್/ನೇಪಾಳಗಳ ನಡುವೆ ನಿರ್ಣಾಯಕ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಬಾರ್ಹ್ ಎಸ್.ಟಿ.ಪಿ.ಪಿ., ಜವಾಹರ್ ಎಸ್.ಟಿ.ಪಿ.ಪಿ. ಮತ್ತು ಬಿರ್ಗಂಜ್ ಐಸಿಡಿ ಸೇರಿದಂತೆ ಪ್ರಮುಖ ಕೈಗಾರಿಕಾ ಸಂಸ್ಥೆಗಳೊಂದಿಗೆ ಸಂಬಂಧಿಸಿದ ಗಣನೀಯ ಸರಕು ಸಾಗಣೆಯನ್ನು ನಿರ್ವಹಿಸುತ್ತದೆ. ಈ ವಿಭಾಗವನ್ನು, ಭಾರತೀಯ ರೈಲ್ವೆಯ “ಹೈ ಟ್ರಾಫಿಕ್ ಡೆನ್ಸಿಟಿ ನೆಟ್ವರ್ಕ್ ಕಾರಿಡಾರ್” ಅಡಿಯಲ್ಲಿ ಗುರುತಿಸಲಾಗಿದೆ.
ಈ ಕಾರ್ಯತಂತ್ರದ ಕಾರಿಡಾರ್ ನಲ್ಲಿ ಹೆಚ್ಚುತ್ತಿರುವ ಸಂಚಾರ ಬೇಡಿಕೆಯೊಂದಿಗೆ, ಯೋಜನೆಯು ಪ್ರಯಾಣಿಕ ಮತ್ತು ಸರಕು ಸಾಗಣೆ ಕಾರ್ಯಾಚರಣೆಗಳಿಗೆ ದೀರ್ಘಕಾಲೀನ ಮೂಲಸೌಕರ್ಯ ಬೆಂಬಲವನ್ನು ಒದಗಿಸುವ ನಿರೀಕ್ಷೆಯಿದೆ. ಪೂರ್ವ ಮತ್ತು ಉತ್ತರ ಭಾರತದ ಪ್ರಮುಖ ಆರ್ಥಿಕ ಕೇಂದ್ರಗಳ ನಡುವೆ ವರ್ಧಿತ ಸಂಪರ್ಕ ಮತ್ತು ಹೆಚ್ಚುವರಿ ಸಾಗಿಸುವ ಸಾಮರ್ಥ್ಯವು ಹೆಚ್ಚು ಪರಿಣಾಮಕಾರಿ ಲಾಜಿಸ್ಟಿಕ್ಸ್ ಚಲನೆ, ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ರೈಲು ಸಾರಿಗೆ ವಿಶ್ವಾಸಾರ್ಹತೆಯನ್ನು ಸುಧಾರಿಸಲು ಕೊಡುಗೆ ನೀಡುತ್ತದೆ.
*****
(ಪ್ರಕಟಣೆ ಐ.ಡಿ.: 2262691)
ವಿಸಿಟರ್ ಕೌಂಟರ್ : 5