ಆಯುಷ್
azadi ka amrit mahotsav

ಬಿಸಿಗಾಳಿ ಮತ್ತು ತೀವ್ರ ಉಷ್ಣಾಂಶದ ಪರಿಸ್ಥಿತಿಗಳ ಕುರಿತು ಆಯುಷ್ ಸಚಿವಾಲಯದಿಂದ ಸಾರ್ವಜನಿಕ ಆರೋಗ್ಯ ಸಲಹೆ ಜಾರಿ


ಶಾಖ-ಸಂಬಂಧಿತ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಮುನ್ನೆಚ್ಚರಿಕೆ ಕ್ರಮಗಳು, ಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳು ಮತ್ತು ತುರ್ತು ಪ್ರತಿಕ್ರಿಯೆ ವ್ಯವಸ್ಥೆಯನ್ನು ಸಲಹೆಯು ಪ್ರಮುಖವಾಗಿ ಉಲ್ಲೇಖಿಸುತ್ತದೆ

ಪ್ರಕಟಣಾ ದಿನಾಂಕ: 18 MAY 2026 3:31PM by PIB Bengaluru

ದೇಶದ ಹಲವು ಭಾಗಗಳಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ಬಿಸಿಗಾಳಿಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಅಡಿಯಲ್ಲಿರುವ ಆಯುಷ್ ವಿಭಾಗವು, ಆಯುಷ್ ಸಚಿವಾಲಯದ ಸಮನ್ವಯದೊಂದಿಗೆ ಪ್ರಸಕ್ತ ಬೇಸಿಗೆ ಋತುವಿಗಾಗಿ ತೀವ್ರ ಉಷ್ಣಾಂಶ/ಬಿಸಿಗಾಳಿಯ ಕುರಿತು ಸಮಗ್ರ ಸಾರ್ವಜನಿಕ ಆರೋಗ್ಯ ಸಲಹೆಯನ್ನು ಹೊರಡಿಸಿದೆ.

ಈ ಸಲಹೆಯು ಸಾರ್ವಜನಿಕರು, ದುರ್ಬಲ ಗುಂಪುಗಳು, ಉದ್ಯೋಗದಾತರು, ಕಾರ್ಮಿಕರು ಮತ್ತು ಸಾಮೂಹಿಕ ಸಭೆಗಳು ಹಾಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸುವವರು ಶಾಖದ ಒತ್ತಡ ಮತ್ತು ಶಾಖ-ಸಂಬಂಧಿತ ಕಾಯಿಲೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವಿವರವಾದ ಮಾರ್ಗದರ್ಶನವನ್ನು ನೀಡುತ್ತದೆ. ಇದು ಸಾಕಷ್ಟು ನೀರು ಕುಡಿಯುವುದು, ತೀವ್ರ ಬಿಸಿಲಿರುವ ಸಮಯದಲ್ಲಿ ಸೂರ್ಯನ ಬೆಳಕಿಗೆ ನೇರವಾಗಿ ಒಡ್ಡಿಕೊಳ್ಳುವುದನ್ನು ತಪ್ಪಿಸುವುದು, ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸುವುದು ಮತ್ತು ಎಲೆಕ್ಟ್ರೋಲೈಟ್‌ ಗಳಿಂದ ಸಮೃದ್ಧವಾಗಿರುವ ಋತುಮಾನದ ಹಣ್ಣುಗಳು ಹಾಗೂ ದ್ರವ ಪದಾರ್ಥಗಳನ್ನು ಸೇವಿಸುವುದನ್ನು ಒತ್ತಿಹೇಳುತ್ತದೆ.

ಬಿಸಿಗಾಳಿಯ ಪರಿಸ್ಥಿತಿಗಳಲ್ಲಿ ಶಿಶುಗಳು, ಮಕ್ಕಳು, ಗರ್ಭಿಣಿಯರು, ವೃದ್ಧರು, ಹೊರಾಂಗಣ ಕಾರ್ಮಿಕರು ಮತ್ತು ಹೃದ್ರೋಗ ಹಾಗೂ ರಕ್ತದೊತ್ತಡದಂತಹ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ವಿಶೇಷವಾಗಿ ತೊಂದರೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಇರುವುದರಿಂದ ಅವರಿಗೆ ವಿಶೇಷ ಕಾಳಜಿ ಮತ್ತು ಮೇಲ್ವಿಚಾರಣೆಯ ಅಗತ್ಯವಿರುತ್ತದೆ ಎಂಬುದನ್ನು ಸಲಹೆಯು ಎತ್ತಿ ತೋರಿಸುತ್ತದೆ.

ಕೆಲಸದ ಸ್ಥಳಗಳು, ಸಾರ್ವಜನಿಕ ಸಭೆಗಳು ಮತ್ತು ಹೊರಾಂಗಣ ಚಟುವಟಿಕೆಗಳಿಗಾಗಿ ವಿಶೇಷ ಮುನ್ನೆಚ್ಚರಿಕೆಗಳನ್ನು ಸೂಚಿಸಲಾಗಿದೆ; ಇದರಲ್ಲಿ ನೆರಳಿನ ವಿಶ್ರಾಂತಿ ಸ್ಥಳಗಳ ನಿಬಂಧನೆ, ನಿಯಮಿತವಾಗಿ ನೀರು ಕುಡಿಯಲು ವಿರಾಮಗಳು, ಕಾರ್ಮಿಕರಿಗೆ ವಾತಾವರಣಕ್ಕೆ ಒಗ್ಗಿಕೊಳ್ಳುವ ಕ್ರಮಗಳು ಮತ್ತು ಶಾಖದ ಒತ್ತಡದ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವುದು ಸೇರಿದೆ.

ತಲೆತಿರುಗುವಿಕೆ, ತಲೆನೋವು, ವಾಕರಿಕೆ, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ, ದೇಹದ ಹೆಚ್ಚಿನ ತಾಪಮಾನ, ನಿರ್ಜಲೀಕರಣ, ಫಿಟ್ಸ್ ಮತ್ತು ಮೂರ್ಛೆ ಹೋಗುವಿಕೆಯಂತಹ ಶಾಖ-ಸಂಬಂಧಿತ ಕಾಯಿಲೆಗಳ ಅಪಾಯದ ಲಕ್ಷಣಗಳ ಬಗ್ಗೆ ನಾಗರಿಕರು ಜಾಗರೂಕರಾಗಿರಲು ಸಲಹೆಯು ಎಚ್ಚರಿಸುತ್ತದೆ. ಹೀಟ್‌ಸ್ಟ್ರೋಕ್ (ಬಿಸಿಲಿನ ಬೇಗೆಯ ಹೊಡೆತ) ಅನ್ನು ತಕ್ಷಣದ ವೈದ್ಯಕೀಯ ಗಮನದ ಅಗತ್ಯವಿರುವ ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಗುರುತಿಸಲಾಗಿದೆ. ತೀವ್ರತರವಾದ ಪ್ರಕರಣಗಳಲ್ಲಿ ತಕ್ಷಣವೇ ತುರ್ತು ಸಹಾಯವಾಣಿ 108/102 ಗೆ ಕರೆ ಮಾಡಲು ಸಲಹೆಯು ಶಿಫಾರಸು ಮಾಡುತ್ತದೆ.

ಡಿ‌ ಜಿ ಎಚ್‌ ಎಸ್ ಅಡಿಯಲ್ಲಿ ಆಯುಷ್ ವಿಭಾಗವು ಹೊರಡಿಸಿದ ಅನುಬಂಧದ ಭಾಗವಾಗಿ, ಬಿಸಿಗಾಳಿಯ ಪರಿಸ್ಥಿತಿಗಳನ್ನು ಎದುರಿಸಲು ಆಯುರ್ವೇದ, ಸಿದ್ಧ, ಯೋಗ, ಯುನಾನಿ ಮತ್ತು ಹೋಮಿಯೋಪತಿ ಸೇರಿದಂತೆ ವಿವಿಧ ಆಯುಷ್ ಪದ್ಧತಿಗಳ ಸಾಂಪ್ರದಾಯಿಕ ಆರೋಗ್ಯ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ಈ ಸಲಹೆಯು ಒಳಗೊಂಡಿದೆ.

ಆಯುರ್ವೇದ ವಿಭಾಗವು ತಂಪಾಗಿಸುವ ಆಹಾರ ಪದ್ಧತಿಗಳು, ಮಜ್ಜಿಗೆ, ಎಳನೀರು ಮತ್ತು ನಿಂಬೆ ಆಧಾರಿತ ಪಾನೀಯಗಳಂತಹ ಹೈಡ್ರೇಟಿಂಗ್ ಪಾನೀಯಗಳ ಸೇವನೆ ಮತ್ತು ತೀವ್ರ ಶಾಖದ ಸಮಯದಲ್ಲಿ ದೇಹದ ತಾಪಮಾನವನ್ನು ನಿಯಂತ್ರಿಸಲು ಸಹಾಯ ಮಾಡಲು ನಿಂಬುಕಫಲ ಪಾನಕ, ಆಮ್ರ ಪ್ರಪಾನಕ ಮತ್ತು ಚಿಂಚಾ ಪಾನಕ ಸೇರಿದಂತೆ ಸಾಂಪ್ರದಾಯಿಕ ಪಾನೀಯಗಳನ್ನು ಶಿಫಾರಸು ಮಾಡುತ್ತದೆ.

ಸಿದ್ಧ ಮತ್ತು ಯೋಗ ವಿಭಾಗಗಳು ತಂಪಾಗಿಸುವ ಉಪಹಾರಗಳನ್ನು ಅಳವಡಿಸಿಕೊಳ್ಳಲು ಮತ್ತು ಉಷ್ಣದ ಸೌಕರ್ಯವನ್ನು ಕಾಪಾಡಿಕೊಳ್ಳಲು ಹಾಗೂ ಶಾಖದ ಒತ್ತಡವನ್ನು ಕಡಿಮೆ ಮಾಡಲು ಶೀತಲಿ ಪ್ರಾಣಾಯಾಮ ಮತ್ತು ಸರಳ ಯೋಗಾಭ್ಯಾಸಗಳಂತಹ ಉಸಿರಾಟದ ತಂತ್ರಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡುತ್ತವೆ.

ಯುನಾನಿ ಪದ್ಧತಿಯು ಸನ್ಬರ್ನ್ (ಬಿಸಿಲಿನಿಂದ ಚರ್ಮ ಕಪ್ಪಾಗುವುದು) ಮತ್ತು ನಿರ್ಜಲೀಕರಣವನ್ನು ತಡೆಗಟ್ಟಲು ಸಾಂಪ್ರದಾಯಿಕ ತಂಪಾಗಿಸುವ ಪಾನೀಯಗಳು ಮತ್ತು ಗಿಡಮೂಲಿಕೆಗಳ ಲೇಪನಗಳನ್ನು ಶಿಫಾರಸು ಮಾಡುತ್ತದೆ, ಹೋಮಿಯೋಪತಿ ವಿಭಾಗವು ತೀವ್ರ ಬಿಸಿಲಿರುವ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಸೂಚಿಸುತ್ತದೆ.

ಬೇಸಿಗೆಯ ಅವಧಿಯಲ್ಲಿ ಸಾರ್ವಜನಿಕರು ತಮ್ಮ ದೈನಂದಿನ ಆಹಾರದಲ್ಲಿ ಸೌತೆಕಾಯಿ, ಕಲ್ಲಂಗಡಿ, ನಿಂಬೆಹಣ್ಣು, ಕರಬೂಜ, ಬೂದುಗುಂಬಳಕಾಯಿ ಮತ್ತು ಟೊಮೆಟೊಗಳಂತಹ ಹೈಡ್ರೇಟಿಂಗ್ ಮತ್ತು ತಂಪಾಗಿಸುವ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಲು ಸಲಹೆಯು ಪ್ರೋತ್ಸಾಹಿಸುತ್ತದೆ.

ನಾಗರಿಕರು ಭಾರತೀಯ ಹವಾಮಾನ ಇಲಾಖೆ ಹೊರಡಿಸುವ ಹವಾಮಾನ ನವೀಕರಣಗಳನ್ನು ನಿಯಮಿತವಾಗಿ ಅನುಸರಿಸಲು ಮತ್ತು ಬಿಸಿಗಾಳಿಯ ಎಚ್ಚರಿಕೆಗಳ ಸಮಯದಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ.

The detailed advisory is attached.

 

*****


(ಪ್ರಕಟಣೆ ಐ.ಡಿ.: 2262569) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Bengali-TR , Gujarati , Tamil , Telugu