ರೈಲ್ವೇ ಸಚಿವಾಲಯ
ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ರೈಲು ಸಂಪರ್ಕವನ್ನು ಬಲಪಡಿಸುವ ಬೆಂಗಳೂರು-ಮುಂಬೈ ಎಕ್ಸ್ ಪ್ರೆಸ್ ರೈಲಿಗೆ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಸಿರು ನಿಶಾನೆ ತೋರಿದರು
ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ಸೇವೆ ಶೀಘ್ರದಲ್ಲೇ ಆರಂಭ: ಶ್ರೀ ಅಶ್ವಿನಿ ವೈಷ್ಣವ್
ಪ್ರಕಟಣಾ ದಿನಾಂಕ:
17 MAY 2026 3:40PM by PIB Bengaluru
ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಬೆಂಗಳೂರು – ಮುಂಬೈ ನಡುವಿನ ಎಕ್ಸ್ ಪ್ರೆಸ್ ರೈಲಿಗೆ ವರ್ಚುವಲ್ ಮಾಧ್ಯಮದ ಮೂಲಕ ಹಸಿರು ನಿಶಾನೆ ತೋರಿಸಿದರು. ಇದು ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

ದಕ್ಷಿಣ ಮತ್ತು ಉತ್ತರ ಕರ್ನಾಟಕದ ದೀರ್ಘಕಾಲದ ಬೇಡಿಕೆಗಳು ಈಗ ಈಡೇರುತ್ತಿವೆ ಎಂದು ಶ್ರೀ ವೈಷ್ಣವ್ ಹೇಳಿದರು. ಇದಲ್ಲದೆ, ಬೆಂಗಳೂರು ಮತ್ತು ಮುಂಬೈ ನಡುವಿನ ವಂದೇ ಭಾರತ್ ಸ್ಲೀಪರ್ ಸೇವೆಯು ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಅವರು ಘೋಷಿಸಿದರು.
ಮೂಲಸೌಕರ್ಯಗಳ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ಹೂಡಿಕೆಯಲ್ಲಿ ಗಮನಾರ್ಹ ಹೆಚ್ಚಳವಾಗಿದ್ದು, ಇದು ಕರ್ನಾಟಕದಾದ್ಯಂತ ಯೋಜನಾ ಅನುಷ್ಠಾನವನ್ನು ವೇಗಗೊಳಿಸಿದೆ ಎಂದು ಹೇಳಿದರು.
ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ, ₹2,160 ಕೋಟಿ ವೆಚ್ಚದಲ್ಲಿ 61 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದ್ದು, ಇದರಲ್ಲಿ ಈಗಾಗಲೇ 9 ನಿಲ್ದಾಣಗಳು ಪೂರ್ಣಗೊಂಡಿವೆ. ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ₹485 ಕೋಟಿ ವೆಚ್ಚದಲ್ಲಿ ಮತ್ತು ಯಶವಂತಪುರ ನಿಲ್ದಾಣವನ್ನು ₹367 ಕೋಟಿ ವೆಚ್ಚದಲ್ಲಿ ಪುನರಭಿವೃದ್ಧಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

2014 ರಿಂದ ಕರ್ನಾಟಕದಲ್ಲಿ ಸುಮಾರು 1,750 ಕಿಮೀ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ ಮತ್ತು ಹಾಸನ-ಮಂಗಳೂರು ವಿಭಾಗದಲ್ಲಿ ಸಂಕೀರ್ಣವಾದ ವಿದ್ಯುದೀಕರಣ ಕಾಮಗಾರಿಗಳು ಪೂರ್ಣಗೊಂಡಿದ್ದು, ಪ್ರಸ್ತುತ ಪರೀಕ್ಷೆ ಕಾರ್ಯ ನಡೆಯುತ್ತಿದೆ ಎಂದರು.
ಬೆಂಗಳೂರು ಉಪನಗರ ರೈಲು ಯೋಜನೆಯ ಕುರಿತು ಮಾತನಾಡಿದ ಅವರು, ಎಲ್ಲಾ ನಾಲ್ಕು ಕಾರಿಡಾರ್ ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಮತ್ತು ಹೀಲಲಿಗೆ-ರಾಜಾನುಕುಂಟೆ ಕಾರಿಡಾರ್ ಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಿಲ್ದಾಣದ ಕಾಮಗಾರಿಗಳು ಪ್ರಸ್ತುತ ಪ್ರಗತಿಯಲ್ಲಿವೆ. ಕೆ ಎಸ್ ಆರ್ ಬೆಂಗಳೂರು-ದೇವನಹಳ್ಳಿ ಜೋಡಣೆಗೆ ರಾಜ್ಯ ಸರ್ಕಾರ ಮತ್ತು ರೈಲ್ವೆ ಜಂಟಿಯಾಗಿ ಅನುಮೋದನೆ ನೀಡಿದ್ದು, ಜಿಯೋಟೆಕ್ನಿಕಲ್ ಸಮೀಕ್ಷೆ ಪೂರ್ಣಗೊಂಡಿದೆ. ಕೆಂಗೇರಿ-ವೈಟ್‌ಫೀಲ್ಡ್ ಜೋಡಣೆಗೆ ಇತ್ತೀಚೆಗೆ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲೇ ಸಮೀಕ್ಷೆ ಕಾರ್ಯ ಆರಂಭವಾಗಲಿದೆ. ಉಪನಗರ ರೈಲು ಜಾಲವು ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ, ಮಾರತಹಳ್ಳಿ ಮತ್ತು ಹೆಬ್ಬಾಳ ಸೇರಿದಂತೆ ಪ್ರಮುಖ ಹಬ್ ಗಳನ್ನು ಸಂಯೋಜಿಸಲಿದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಪ್ರಸ್ತುತ 12 ಜೋಡಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ ಎಂದು ರೈಲ್ವೆ ಸಚಿವರು ಮಾಹಿತಿ ನೀಡಿದರು. ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಯುತ್ತಿದ್ದು, ಶೀಘ್ರದಲ್ಲೇ ಮಡಗಾಂವ್ ವರೆಗಿನ ಕರಾವಳಿ ಸಂಪರ್ಕವನ್ನು ಇದು ಸುಧಾರಿಸಲಿದೆ ಎಂದರು.
ಬೆಂಗಳೂರನ್ನು ಹೈದರಾಬಾದ್ ಮತ್ತು ಚೆನ್ನೈಗೆ ಸಂಪರ್ಕಿಸುವ ಬುಲೆಟ್ ರೈಲು ಕಾರಿಡಾರ್ ಗಳಿಗೂ ಅನುಮೋದನೆ ನೀಡಲಾಗಿದೆ ಎಂದು ಶ್ರೀ ಅಶ್ವಿನಿ ವೈಷ್ಣವ್ ಹೇಳಿದರು. ಮುಂಬೈ, ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳನ್ನು ಸಂಪರ್ಕಿಸುವ ದೀರ್ಘಕಾಲದ ದೃಷ್ಟಿಕೋನದೊಂದಿಗೆ, ಈ ಜಾಲವನ್ನು 7,000 ಕಿಮೀಗೆ ವಿಸ್ತರಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ರೈಲು ಸಂಖ್ಯೆ 16553/54 ಎಸ್ ಎಂ ವಿ ಟಿ ಬೆಂಗಳೂರು – ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸುವ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರೈಲ್ವೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು, ಹೊಸ ಬೆಂಗಳೂರು-ಮುಂಬೈ ರೈಲನ್ನು ಮಂಜೂರು ಮಾಡಿದ್ದಕ್ಕಾಗಿ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಇದು ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾಗಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಮತ್ತು ಕರ್ನಾಟಕದ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಪ್ರಸ್ತುತ 14 ಜಿಲ್ಲೆಗಳನ್ನು ಒಳಗೊಂಡ 12 ಜೋಡಿ ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು. ಥಣಿಸಂದ್ರದಲ್ಲಿ ₹₹270 ಕೋಟಿ ವೆಚ್ಚದಲ್ಲಿ ವಂದೇ ಭಾರತ್ ಸ್ಲೀಪರ್ ನಿರ್ವಹಣಾ ಡಿಪೋ ಮತ್ತು ಎಸ್ ಎಂ ವಿ ಟಿ ಬೆಂಗಳೂರಿನಲ್ಲಿ ₹52.73 ಕೋಟಿ ವೆಚ್ಚದಲ್ಲಿ ಚೇರ್ ಕಾರ್ ನಿರ್ವಹಣಾ ಸೌಲಭ್ಯವನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು. ಸಾಮರ್ಥ್ಯವನ್ನು ಹೆಚ್ಚಿಸಲು ಬೈಯಪ್ಪನಹಳ್ಳಿ-ಹೊಸೂರು (₹1,116 ಕೋಟಿ), ಬೆಟ್ಟಹಲಸೂರು-ರಾಜಾನುಕುಂಟೆ (₹248 ಕೋಟಿ) ಜೋಡಿ ಮಾರ್ಗ ಮತ್ತು ಬೆಂಗಳೂರು ಸುತ್ತಮುತ್ತಲಿನ ಚತುಷ್ಪಥ ಕಾಮಗಾರಿಗಳನ್ನು (₹1,347 ಕೋಟಿ) ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಯಶವಂತಪುರ, ಕೆ ಎಸ್ ಆರ್ ಬೆಂಗಳೂರು, ಲೊಟ್ಟೆಗೊಲ್ಲಹಳ್ಳಿ, ಬೈಯಪ್ಪನಹಳ್ಳಿ, ಪೆನುಕೊಂಡ, ಮೈಸೂರು ಮತ್ತು ಜೋಲಾರಪೇಟೆ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಒಟ್ಟು ₹6,396 ಕೋಟಿ ವೆಚ್ಚದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಕಾಮಗಾರಿಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಶ್ರೀ ಸೋಮಣ್ಣ ಹೇಳಿದರು. ಒಟ್ಟಾರೆ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, ಕರ್ನಾಟಕಕ್ಕೆ ದಾಖಲೆಯ ₹₹7748 ಕೋಟಿ ರೈಲ್ವೆ ಬಜೆಟ್ ಅನುದಾನ ಲಭಿಸಿದೆ ಎಂದು ತಿಳಿಸಿದರು. 2014 ರಿಂದ, ಸುಮಾರು 3,840 ಕಿಮೀ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು 3,742 ಕಿಮೀ ವಿದ್ಯುದೀಕರಣಗೊಳಿಸಲಾಗಿದೆ, ಇದು ರಾಜ್ಯವನ್ನು ಶೇಕಡಾ 100 ರಷ್ಟು ವಿದ್ಯುದೀಕರಣಕ್ಕೆ ಹತ್ತಿರ ತಂದಿದೆ. ಆರ್ ಒ ಬಿ (ಮೇಲ್ಸೇತುವೆ)/ಆರ್ ಯು ಬಿ (ಕೆಳಸೇತುವೆ) ಗಳ ಸಂಖ್ಯೆ 2014 ಕ್ಕಿಂತ ಮೊದಲು ಸುಮಾರು 150 ಇದ್ದದ್ದು ಈಗ 707 ಕ್ಕೆ ಏರಿದೆ, ಮುಂದಿನ ಒಂದು ವರ್ಷದೊಳಗೆ ಇನ್ನೂ 146 ಕಾಮಗಾರಿಗಳು ಪೂರ್ಣಗೊಳ್ಳಲಿವೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ಲೆವೆಲ್ ಕ್ರಾಸಿಂಗ್ ಗಳನ್ನು ತೆಗೆದುಹಾಕುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದರಾದ ಶ್ರೀ ಪಿ. ಸಿ. ಮೋಹನ್; ಗೌರವಾನ್ವಿತ ರಾಜ್ಯಸಭಾ ಸಂಸದರಾದ ಶ್ರೀ ಲೆಹರ್ ಸಿಂಗ್ ಸಿರೋಯಾ; ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಹಾಗೂ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2261999)
ವಿಸಿಟರ್ ಕೌಂಟರ್ : 14