ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಮುಂಚೂಣಿಯ ಆರೋಗ್ಯ ವಿತರಣೆಯನ್ನು ಬಲಪಡಿಸಲು ಏಕೀಕೃತ, ಸಾಮರ್ಥ್ಯ-ಆಧರಿತ ಚೌಕಟ್ಟಿನ ಅಡಿಯಲ್ಲಿ ಪ್ರಾಥಮಿಕ ಆರೋಗ್ಯ ತಂಡಗಳಿಗೆ ಸಮಗ್ರ ತರಬೇತಿ ಪ್ರಾರಂಭಿಸಿದ ಕೇಂದ್ರ ಆರೋಗ್ಯ ಸಚಿವಾಲಯ


ಸಹಾನುಭೂತಿಯುಳ್ಳ, ಸ್ಪಂದನಶೀಲ ಮತ್ತು ಉತ್ತಮ-ಗುಣಮಟ್ಟದ ಆರೈಕೆಯನ್ನು ನೀಡಲು ಸಮುದಾಯ ಆಧಾರಿತ ಕಾರ್ಯಪಡೆಯ ಸಾಮರ್ಥ್ಯವನ್ನು ಬಲಪಡಿಸಲು ಸಮಗ್ರ ತರಬೇತಿ ಮಾದರಿ

ಈ ಉಪಕ್ರಮವು ಪ್ರಾಥಮಿಕ ಆರೋಗ್ಯ ಸಿಬ್ಬಂದಿಯಲ್ಲಿ (ಆಶಾಕಾರ್ಯಕರ್ತೆಯರು, ʻಎಎನ್ಎಂʼ, ʻಸಿಎಚ್ಒʼ ಸೇರಿದಂತೆ)
ಶೇ.70 ಕ್ಕಿಂತಲೂ ಹೆಚ್ಚು ಭಾಗವನ್ನು ಪ್ರತಿನಿಧಿಸುವ ಮಹಿಳೆಯರನ್ನು ಸಬಲೀಕರಣಗೊಳಿಸುತ್ತದೆ, ಆ ಮೂಲಕ ಪ್ರಧಾನಮಂತ್ರಿಯವರ ʻನಾರಿ ಶಕ್ತಿʼ ದೃಷ್ಟಿಕೋನವನ್ನು ಮುನ್ನಡೆಸುತ್ತದೆ

ಕೊನೆಯ ಮೈಲಿಯವರೆಗೂ ಆರೋಗ್ಯ ಸೇವೆ ವಿತರಣೆಯನ್ನು ಹೆಚ್ಚಿಸುತ್ತದೆ, ಮುಂಚೂಣಿ ಆರೋಗ್ಯ ಕಾರ್ಯಪಡೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ʻವಿಕಸಿತ ಭಾರತ@2047ʼ ಆಶಯಕ್ಕೆ ಉತ್ತೇಜನ ನೀಡುತ್ತದೆ

ಪ್ರಕಟಣಾ ದಿನಾಂಕ: 08 MAY 2026 12:19PM by PIB Bengaluru

ಇತ್ತೀಚೆಗೆ ಮುಕ್ತಾಯಗೊಂಡ "ನಾವೀನ್ಯತೆ ಮತ್ತು ಒಳಗೊಳ್ಳುವಿಕೆ: ಭಾರತದ ಆರೋಗ್ಯ ಭವಿಷ್ಯವನ್ನು ರೂಪಿಸುವ ಉತ್ತಮ ಅಭ್ಯಾಸಗಳು" ವಿಷಯದ ಮೇಲಿನ 10ನೇ ರಾಷ್ಟ್ರೀಯ ಶೃಂಗಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ʻಪ್ರಾಥಮಿಕ ಆರೋಗ್ಯ ತಂಡಗಳಿಗೆ ಸಮಗ್ರ ತರಬೇತಿʼ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದರೊಂದಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆಯ ಬದ್ಧತೆಗೆ ಮತ್ತಷ್ಟು ಬಲ ಬಂದಂತಾಗಿದ್ದು, ಮುಂಚೂಣಿ ಆರೋಗ್ಯ ಪೂರೈಕೆದಾರರ ಸಾಮರ್ಥ್ಯ ಹೆಚ್ಚಳಕ್ಕೂ ಪುಷ್ಟಿ ದೊರೆತಿದೆ.

ʻಪ್ರಾಥಮಿಕ ಆರೋಗ್ಯ ತಂಡಗಳಿಗೆ ಸಮಗ್ರ ತರಬೇತಿʼ ಕಾರ್ಯಕ್ರಮವು ವಿಛಿದ್ರವಾಗಿದ್ದ ಸಾಮರ್ಥ್ಯ ಅಭಿವೃದ್ಧಿ ಮಾದರಿಯಿಂದ ಏಕ, ರಚನಾತ್ಮಕ ಮತ್ತು ಸಾಮರ್ಥ್ಯ ಆಧರಿತ ಮಾದರಿಗೆ ನಿರ್ಣಾಯಕ ಬದಲಾವಣೆಯನ್ನು ಸೂಚಿಸುತ್ತದೆ. ಇದು ಭಾರತದ ಮುಂಚೂಣಿ ಆರೋಗ್ಯ ಸಿಬ್ಬಂದಿಯನ್ನು ಕೊನೆಯ ಮೈಲಿಯಲ್ಲಿ ಸಮಗ್ರ, ವಿಶ್ವಾಸಾರ್ಹ ಜನ-ಕೇಂದ್ರಿತ ಆರೋಗ್ಯ ಸೇವೆಯ ಪೂರೈಕೆದಾರರನ್ನಾಗಿ ಪರಿವರ್ತಿಸುತ್ತದೆ.

ಆರೋಗ್ಯ ವ್ಯವಸ್ಥೆಗಳ ಬಲವರ್ಧನೆಗೆ ಹೂಡಿಕೆ ಮಾಡುವಲ್ಲಿ ಭಾರತವು ಸಾಕಷ್ಟು ಮುಂದಿದೆ. ಇತ್ತೀಚಿನ ವರ್ಷಗಳಲ್ಲಿ, ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆಯ ಮೇಲೆ ಬಲವಾದ ಗಮನ ಹರಿಸಲಾಗಿದೆ. ಇದು ಆರೋಗ್ಯ ರಕ್ಷಣೆಯು ಸಮಾನವಾಗಿರಬೇಕು ಮತ್ತು ಜನರು ವಾಸಿಸುವ ಸ್ಥಳಕ್ಕೆ ಹತ್ತಿರದಲ್ಲಿರಬೇಕು ಎಂಬ ದೇಶದ ನಂಬಿಕೆಯನ್ನು ಸೂಚಿಸುತ್ತದೆ. ಈ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲುಗಲ್ಲೆಂದರೆ ಅದು ʻಆಯುಷ್ಮಾನ್ ಭಾರತ್ʼ ಕಾರ್ಯಕ್ರಮದ ಪ್ರಾರಂಭ. ಇದರ ಅಡಿಯಲ್ಲಿ ʻಆಯುಷ್ಮಾನ್ ಆರೋಗ್ಯ ಮಂದಿರʼಗಳನ್ನು ರೋಗತಡೆಗಟ್ಟುವ, ಆರೋಗ್ಯ ಉತ್ತೇಜಿಸುವ ಮತ್ತು ರೋಗ ಶಮನ ಕೇಂದ್ರಗಳನ್ನಾಗಿ ರೂಪಿಸಲಾಗಿದೆ. ಜನ ಆರೋಗ್ಯ ಸಮಿತಿಗಳು, ಮಹಿಳಾ ಆರೋಗ್ಯ ಸಮಿತಿಗಳು, ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳು ಹಾಗೂ ʻಎಎಎಂ ಶಿಬಿರʼಗಳಂತಹ ವೇದಿಕೆಗಳ ಮೂಲಕ ಆಳವಾದ ಸಮುದಾಯ ತೊಡಗಿಸಿಕೊಳ್ಳುವಿಕೆಯು ಇದರ ನಿರ್ಣಾಯಕ ಶಕ್ತಿಯಾಗಿದೆ.

ಭಾರತವು ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಹತ್ತಿರುವಾಗುತ್ತಿದೆ ಮತ್ತು ಹೆಚ್ಚು ಮುಂದುವರಿದ ಭವಿಷ್ಯದತ್ತ ದಾಪುಗಾಲಿಡಲು ಸಿದ್ಧತೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ, ಆರೋಗ್ಯ ಸೇವೆಯ ಲಭ್ಯತೆ ಮಾತ್ರವಲ್ಲದೆ, ಸ್ಪಂದನಶೀಲ ಮತ್ತು ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆಯ ಅವಶ್ಯಕತೆ ಹೆಚ್ಚುತ್ತಿದೆ. ದೇಶಾದ್ಯಂತ, ಸಾವಿರಾರು ಪ್ರಾಥಮಿಕ ಆರೋಗ್ಯ ತಂಡಗಳು ಸಮುದಾಯಗಳಿಗೆ ಸಮರ್ಪಣೆಯಿಂದ ಸೇವೆ ಸಲ್ಲಿಸುತ್ತಿವೆ. ಅಲ್ಲದೆ, ಕೆಲವೊಮ್ಮೆ ಸವಾಲಿನ ವಾತಾವರಣದಲ್ಲೂ ಇವರು ತಮ್ಮ ಸೇವಾ ತತ್ಪರತೆ ಮೆರೆಯುತ್ತಿದ್ದಾರೆ. ಸಮಯೋಚಿತ ಮತ್ತು ಪರಿಣಾಮಕಾರಿ ಆರೈಕೆಯನ್ನು ನೀಡುವ ಅವರ ಸಾಮರ್ಥ್ಯವು ಮೂಲಸೌಕರ್ಯದ ಮೇಲೆ ಮಾತ್ರವಲ್ಲದೆ, ಅವರು ತಮ್ಮ ಕೆಲಸದಲ್ಲಿ ಹೊಂದಿರುವ ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸದ ಮೇಲೆ ಅವಲಂಬಿತವಾಗಿರುತ್ತದೆ.

ಆರೈಕೆಯ ಗುಣಮಟ್ಟವನ್ನು ಸುಧಾರಿಸಲು, ಉನ್ನತ ಮಟ್ಟದ ಸೌಲಭ್ಯಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ಸಾರ್ವಜನಿಕರ ನಂಬಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಉತ್ತಮ ತರಬೇತಿ ಪಡೆದ ಮತ್ತು ಆತ್ಮವಿಶ್ವಾಸಯುಕ್ತ ಪ್ರಾಥಮಿಕ ಆರೋಗ್ಯ ಸಿಬ್ಬಂದಿ ಅತ್ಯಗತ್ಯ. ಇದು ಆರೋಗ್ಯವಂತ ಮತ್ತು ಹೆಚ್ಚು ಉತ್ಪಾದಕ ರಾಷ್ಟ್ರವನ್ನು ನಿರ್ಮಿಸುವ ಪ್ರಮುಖ ಆಧಾರಸ್ತಂಭಗಳಾದ ರೋಗ ತಡೆಗಟ್ಟುವಿಕೆ ಮತ್ತು ಆರೋಗ್ಯ ರಕ್ಷಣೆಗೆ ಭಾರತದ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.  ಆ ಮೂಲಕ ಗೌರವಾನ್ವಿತ ಪ್ರಧಾನ ಮಂತ್ರಿಯವರ ʻವಿಕಸಿತ ಭಾರತ @2047ʼ ಆಶಯಕ್ಕೆ ಕೊಡುಗೆ ನೀಡುತ್ತದೆ.

ಜನಕೇಂದ್ರಿತ ಆರೋಗ್ಯ ರಕ್ಷಣೆಯ ಈ ದೃಷ್ಟಿಕೋನವನ್ನು ಬಲಪಡಿಸುವ ಮಹತ್ವವನ್ನು ಒತ್ತಿ ಹೇಳೀರುವ ಮಾನ್ಯ ಪ್ರಧಾನ ಮಂತ್ರಿಯವರು "ನಿಜವಾದ ಪ್ರಗತಿಯು ಜನ ಕೇಂದ್ರಿತವಾಗಿದೆ. ವೈದ್ಯಕೀಯ ವಿಜ್ಞಾನದಲ್ಲಿ ಎಷ್ಟೇ ಪ್ರಗತಿ ಸಾಧಿಸಿದರೂ, ಕೊನೆಯ ಮೈಲಿಯಲ್ಲಿರುವ ಕೊನೆಯ ವ್ಯಕ್ತಿಗೂ ಅದರ ಲಭ್ಯತೆಯನ್ನು ಖಾತರಿಪಡಿಸಬೇಕು,ʼʼ ಎಂದಿದ್ದಾರೆ.

ಪ್ರಾಥಮಿಕ ಆರೋಗ್ಯ ಸಿಬ್ಬಂದಿಗೆ ಸಮಗ್ರ ತರಬೇತಿಯು ಈ ಅಡಿಪಾಯವನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಹತ್ತು ಹಲವು ಕಾರ್ಯಕ್ರಮಳಲ್ಲಿ ಹಂಚಿ ಹೋಗಿದ್ದ ತರಬೇತಿಗಳನ್ನು ಏಕ, ರಚನಾತ್ಮಕ ಮತ್ತು ಸಾಮರ್ಥ್ಯ-ಆಧರಿತ ಚೌಕಟ್ಟಿನಲ್ಲಿ ಒಟ್ಟುಗೂಡಿಸುವ ಮೂಲಕ, ಈ ಉಪಕ್ರಮವು ಮುಂಚೂಣಿ ಆರೋಗ್ಯ ಪೂರೈಕೆದಾರರ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಜೊತೆಗೆ ಅವರ ಕಲಿಕೆಯನ್ನು ಸರಳಗೊಳಿಸುತ್ತದೆ. ರೋಗ ತಡೆಗಟ್ಟುವಿಕೆ ಮತ್ತು ಆರಂಭಿಕ ರೋಗ ಪತ್ತೆಯಿಂದ ಚಿಕಿತ್ಸೆ ಮತ್ತು ಅನುಸರಣೆಯವರೆಗೆ ಸಮಗ್ರ ಆರೈಕೆಯನ್ನು ನೀಡಲು ಇದು ಅವರನ್ನು ಸಜ್ಜುಗೊಳಿಸುತ್ತದೆ - ಜನರು ಸರಿಯಾದ ಸಮಯದಲ್ಲಿ, ತಮ್ಮ ಮನೆಗಳಿಗೆ ಹತ್ತಿರದಲ್ಲಿ ಸರಿಯಾದ ಆರೈಕೆಯನ್ನು ಪಡೆಯುತ್ತಾರೆ ಎಂದು ಖಚಿತಪಡಿಸುತ್ತದೆ. ಭಾರತದ ತಾಂತ್ರಿಕ ಪ್ರಗತಿಗೆ ಅನುಗುಣವಾಗಿ, ʻಐಜಿಒಟಿ ಕರ್ಮಯೋಗಿʼಯಂತಹ ಡಿಜಿಟಲ್ ವೇದಿಕೆಗಳು ನಿರಂತರ ಕಲಿಕೆಯನ್ನು ಸಕ್ರಿಯಗೊಳಿಸುತ್ತವೆ. ಇದು ಕಾರ್ಯಪಡೆಯನ್ನು ಹೆಚ್ಚು ಹೊಂದಾಣಿಕೆಗೆ ಮತ್ತು ಭವಿಷ್ಯಕ್ಕೆ ಸಜ್ಜುಗೊಳಿಸುತ್ತದೆ.

ಈ ಉಪಕ್ರಮವು ಎರಡು ಪ್ರಮುಖ ರೀತಿಯಲ್ಲಿ ವಿಶಿಷ್ಟವಾಗಿದೆ. ಮೊದಲನೆಯದಾಗಿ, ಇದು ಸಹಾನುಭೂತಿ, ಸ್ಪಂದನಶೀಲ ಮತ್ತು ಉತ್ತಮ-ಗುಣಮಟ್ಟದ ಆರೈಕೆಯನ್ನು ತಲುಪಿಸಲು ಸಮುದಾಯ ಆಧಾರಿತ ಕಾರ್ಯಪಡೆಯ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಎರಡನೆಯದಾಗಿ, ಇದು ಪ್ರಾಥಮಿಕ ಆರೋಗ್ಯ ರಕ್ಷಣೆಯ ಬೆನ್ನೆಲುಬಾಗಿರುವ ಶೇ.70ಕ್ಕಿಂತ ಮಹಿಳೆಯರನ್ನು - ಆಶಾಕಾರ್ಯಕರ್ತೆಯರು, ʻಎಎನ್ಎಂʼಗಳು ಮತ್ತು ʻಸಿಎಚ್ಒʼಗಳು ಸೇರಿದಂತೆ ಸಬಲೀಕರಣಗೊಳಿಸುತ್ತದೆ. ಗೌರವಾನ್ವಿತ ಪ್ರಧಾನ ಮಂತ್ರಿಗಳು ʻನಾರಿ ಶಕ್ತಿʼಯ ಮಹತ್ವವನ್ನು ನಿರಂತರವಾಗಿ ಒತ್ತಿಹೇಳಿದ್ದಾರೆ ಮತ್ತು ಈ ಉಪಕ್ರಮವು ಆ ಆಶಯದ ಸಾಕಾರವಾಗಿದೆ. ಮುಂಚೂಣಿ ಮಹಿಳಾ ಆರೋಗ್ಯ ಸಿಬ್ಬಂದಿ ಮೇಲೆ ಹೂಡಿಕೆ ಮಾಡುವ ಮೂಲಕ ಭಾರತವು ಸಮುದಾಯಗಳಲ್ಲಿ ಪರಿವರ್ತನಾತ್ಮಕ ಬದಲಾವಣೆಯನ್ನು ತರುತ್ತಿದೆ.

ಸಮಗ್ರ ತರಬೇತಿ ಮಾದರಿಗಳು ಪ್ರಾಥಮಿಕ ಆರೋಗ್ಯ ತಂಡಗಳಿಗೆ ಸಮುದಾಯಗಳು ಮತ್ತು ಆರೋಗ್ಯ ವ್ಯವಸ್ಥೆಯ ನಡುವಿನ ನಂಬಿಕೆಯನ್ನು ಬಲಪಡಿಸುವುದರ ಜೊತೆಗೆ ಸಮಗ್ರ, ಜನ-ಕೇಂದ್ರಿತ ಆರೈಕೆಯನ್ನು ನೀಡಲು ಅನುವು ಮಾಡಿಕೊಡುತ್ತದೆ. ಇದು ಕೇವಲ ತರಬೇತಿ ಸುಧಾರಣೆಯಲ್ಲ - ಇದು ಭಾರತದ ಸಾರ್ವಜನಿಕ ಆರೋಗ್ಯದ ಭವಿಷ್ಯಕ್ಕಾಗಿ ಕಾರ್ಯತಂತ್ರದ ಹೂಡಿಕೆಯಾಗಿದೆ.

 

*****


(ಪ್ರಕಟಣೆ ಐ.ಡಿ.: 2259007) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Manipuri , Bengali , Bengali-TR , Gujarati , Tamil , Malayalam