ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಕಾರ್ಮಿಕ ಸಂಹಿತೆಗಳಡಿಯಲ್ಲಿ ಕಾರ್ಮಿಕರಿಗೆ ರಾಷ್ಟ್ರವ್ಯಾಪಿ ವಾರ್ಷಿಕ ಆರೋಗ್ಯ ತಪಾಸಣೆ ಉಪಕ್ರಮವನ್ನು ಉದ್ಘಾಟಿಸಿದ ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ
ದೇಶಾದ್ಯಂತ 40 ವರ್ಷಕ್ಕಿಂತ ಮೇಲ್ಪಟ್ಟ ಕಾರ್ಮಿಕರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ
“ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಒದಗಿಸುವ ದೇಶಗಳಲ್ಲಿ ಭಾರತವೇ ಮೊದಲು’’ -ಡಾ. ಮನ್ಸುಖ್ ಮಾಂಡವಿಯ ಹೇಳಿಕೆ
ಭಾರತದಲ್ಲಿ ಸಾಮಾಜಿಕ ಭದ್ರತಾ ವ್ಯಾಪ್ತಿಯ ವಿಸ್ತರಣೆ ಶೇ. 19 ರಿಂದ ಶೇ.64 ಕ್ಕೆ ಹೆಚ್ಚಳ; ಇದರಿಂದ ಸುಮಾರು 94 ಕೋಟಿ ಜನರಿಗೆ ಪ್ರಯೋಜನ
ದಶಕದ ಹಿಂದೆ ಸುಮಾರು 7 ಕೋಟಿ ಫಲಾನುಭವಿಗಳಾಗಿದ್ದ ಇಎಸ್ ಐಸಿ ವ್ಯಾಪ್ತಿ ಇಂದು ಸುಮಾರು 15 ಕೋಟಿ ಫಲಾನುಭವಿಗಳಿಗೆ ಹೆಚ್ಚಳ: ಡಾ. ಮನ್ಸುಖ್ ಮಾಂಡವಿಯಾ
ಪ್ರಕಟಣಾ ದಿನಾಂಕ:
07 MAY 2026 1:54PM by PIB Bengaluru
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ದೆಹಲಿಯ ಬಸೈದರಾಪುರದ ಇ ಎಸ್ ಐ ಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿಂದು 40 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲಾ ಕಾರ್ಮಿಕರಿಗೆ ರಾಷ್ಟ್ರವ್ಯಾಪಿ ವಾರ್ಷಿಕ ಆರೋಗ್ಯ ತಪಾಸಣೆ ಉಪಕ್ರಮಕ್ಕೆ ಚಾಲನೆ ನೀಡಿದರು. ಇದು ಭಾರತದ ದುಡಿಯುವಪಡೆಗೆ ಔದ್ಯೋಗಿಕ ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ, ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿಯು ದೇಶಾದ್ಯಂತ ಕಾರ್ಮಿಕರ ಘನತೆ, ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭರವಸೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಈ ಸಂದರ್ಭವನ್ನು “ಶ್ರಮಶಕ್ತಿ” ಗೌರವಾರ್ಥವಾಗಿ ಆಚರಿಸಲಾಗುವ ದಿನವೆಂದು ಕರೆದ ಅವರು, ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಬಲಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರವು ಕಳೆದ 12 ವರ್ಷಗಳಿಂದ ಉದ್ಯೋಗ ಸೃಷ್ಟಿ ಮತ್ತು ಕಲ್ಯಾಣ ಕ್ರಮಗಳ ಮೂಲಕ ”ಶ್ರಮ ಶಕ್ತಿ’’ ಮತ್ತು ”ಯುವ ಶಕ್ತಿ’’ ಯನ್ನು ಸಬಲೀಕರಣಗೊಳಿಸುವ ಕೆಲಸ ಮಾಡಿದೆ ಎಂದು ಕೇಂದ್ರ ಸಚಿವರು ಬಲವಾಗಿ ಪ್ರತಿಪಾದಿಸಿದರು.
ದೇಶದಲ್ಲಿ ಸಾಮಾಜಿಕ ಭದ್ರತಾ ವ್ಯಾಪ್ತಿಯು ಒಂದು ದಶಕದ ಹಿಂದೆ ಸುಮಾರು 30 ಕೋಟಿ ಜನರಿಂದ ಇಂದು ಸುಮಾರು 94 ಕೋಟಿ ಫಲಾನುಭವಿಗಳಿಗೆ ಗಮನಾರ್ಹವಾಗಿ ವಿಸ್ತರಣೆಗೊಂಡಿದೆ, ಇದು ಶೇಕಡ 19 ರಿಂದ 64 ಕ್ಕೆ ಹೆಚ್ಚಳವಾಗಿದೆ ಎಂದು ಅವರು ಉಲ್ಲೇಖಿಸಿದರು.
ಇಎಸ್ಐಸಿ ವ್ಯಾಪ್ತಿ ಒಂದು ದಶಕದ ಹಿಂದೆ ಸುಮಾರು 7 ಕೋಟಿ ಫಲಾನುಭವಿಗಳಿಂದ ಇಂದು ಸುಮಾರು 15 ಕೋಟಿ ಫಲಾನುಭವಿಗಳಿಗೆ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಕಾರ್ಮಿಕರ ಕಲ್ಯಾಣಕ್ಕಾಗಿ ಒಂದು ಪ್ರಮುಖ ಉಪಕ್ರಮವನ್ನು ಘೋಷಿಸಿದ ಡಾ. ಮಾಂಡವಿಯ, 40 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಈಗ ಪ್ರತಿ ವರ್ಷ ದೇಶಾದ್ಯಂತ ನಡೆಸಲಾಗುವುದು ಎಂದು ಹೇಳಿದರು.
ಆರೋಗ್ಯ ತಪಾಸಣೆಯ ಮೂಲಕ ಆರಂಭದಲ್ಲೇ ರೋಗಳನ್ನು ಪತ್ತೆ ಹೆಚ್ಚುವುದರಿಂದ ಗಂಭೀರ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು ಮತ್ತು ಆರೋಗ್ಯ ಶಿಬಿರಗಳಲ್ಲಿ ಗುರುತಿಸಲಾದ ಚಿಕಿತ್ಸೆ ಮತ್ತು ಔಷಧಿಗಳನ್ನು ಇಎಸ್ಐಸಿ ಸೌಲಭ್ಯಗಳ ಮೂಲಕ ಒದಗಿಸಲಾಗುವುದು ಎಂದು ತಿಳಿಸಿದರು.
ನಾಲ್ಕು ಕಾರ್ಮಿಕ ಸಂಹಿತೆಗಳಡಿಯಲ್ಲಿ ಪ್ರಮುಖ ಕಾರ್ಮಿಕ ಸುಧಾರಣೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಸಚಿವರು, ಪುರುಷ ಮತ್ತು ಮಹಿಳಾ ಕಾರ್ಮಿಕರಿಗೆ ಸಮಾನ ವೇತನ ನೀಡುವ ನಿಬಂಧನೆಗಳನ್ನು ಖಾತ್ರಿಪಡಿಸಲಾಗಿದೆ, ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಳ ಮಾಡಲಾಗಿದೆ ಮತ್ತು ಮಹಿಳೆಯರಿಗೆ ಮನೆಯಿಂದ ಕೆಲಸ ಮಾಡುವ ನಿಬಂಧನೆಗಳನ್ನು ಸಹ ಸೇರ್ಪಡೆ ಮಾಡಲಾಗಿದೆ ಎಂದು ಹೇಳಿದರು.

ಜಗತ್ತಿನಾದ್ಯಂತ ಹಲವು ದೇಶಗಳು ಇನ್ನೂ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರನ್ನು ಸಾಮಾಜಿಕ ಭದ್ರತಾ ಚೌಕಟ್ಟಿನೊಳಗೆ ತರುವ ಮಾರ್ಗಗಳನ್ನು ಅನ್ವೇಷಿಸುತ್ತಿರುವ ಸಮಯದಲ್ಲಿ ನರೇಂದ್ರ ಮೋದಿ ಸರ್ಕಾರವು ಹೊಸ ಕಾರ್ಮಿಕ ಸಂಹಿತೆಗಳ ಮೂಲಕ ಅವರ ಸೇರ್ಪಡೆಯನ್ನು ಮೊದಲೇ ಖಾತ್ರಿಪಡಿಸಿಕೊಂಡಿದೆ ಎಂದು ಅವರು ಹೇಳಿದರು.
ಅಪಾಯಕಾರಿ ಉದ್ಯೋಗಗಳಲ್ಲಿ ತೊಡಗಿರುವ ಕಾರ್ಮಿಕರು ಮತ್ತು 10 ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಈಗ ಇಎಸ್ ಐಸಿ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಡಾ. ಮಾಂಡವಿಯಾ ಹೇಳಿದರು.
ಈ ಹಿಂದೆ ಕಾರ್ಮಿಕರನ್ನು ನಿರ್ಲಕ್ಷಿಸಲಾಗುತ್ತಿತ್ತು ಮತ್ತು ಅವರ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿರಲಿಲ್ಲ, ಆದರೆ ಸದ್ಯ ಸರ್ಕಾರವು ಅವರ ಕಾಳಜಿಗಳನ್ನು ಬದ್ಧತೆ ಮತ್ತು ಸೂಕ್ಷ್ಮತೆಯಿಂದ ಪರಿಹರಿಸಲಾಗುತ್ತಿದೆ ಎಂದು ಹೇಳಿದರು. ರಾಷ್ಟ್ರವ್ಯಾಪಿ ಆರೋಗ್ಯ ತಪಾಸಣೆ ಉಪಕ್ರಮವು ದೇಶದ ಕಾರ್ಯಪಡೆಗೆ ಘನತೆ, ರಕ್ಷಣೆ ಮತ್ತು ಉತ್ತಮ ಆರೋಗ್ಯ ಫಲಿತಾಂಶಗಳನ್ನು ಖಾತ್ರಿಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಮತ್ತೊಂದು ಪ್ರಮುಖ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.
ಉದ್ಘಾಟನಾ ಕಾರ್ಯಕ್ರಮವನ್ನು ರಾಷ್ಟ್ರವ್ಯಾಪಿ ನೌಕರರ ರಾಜ್ಯ ವಿಮಾ ನಿಗಮ (ಇ ಎಸ್ ಐ ಸಿ) ಆಸ್ಪತ್ರೆಗಳ 11 ಇತರ ಸ್ಥಳಗಳಲ್ಲಿ ಏಕಕಾಲದಲ್ಲಿ ರಾಜ್ಯ ಕಾರ್ಮಿಕ ಸಚಿವರು, ಸಂಸತ್ ಸದಸ್ಯರು, ವಿಧಾನಸಭಾ ಸದಸ್ಯರು, ಹಿರಿಯ ಅಧಿಕಾರಿಗಳು, ಉದ್ಯೋಗದಾತರ ಪ್ರತಿನಿಧಿಗಳು, ಕಾರ್ಮಿಕರು ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಆಚರಿಸಲಾಯಿತು.

ದೆಹಲಿಯ ಎನ್‌ಸಿಟಿ ಸರ್ಕಾರದ ಕಾನೂನು ಮತ್ತು ನ್ಯಾಯ, ಕಾರ್ಮಿಕ, ಉದ್ಯೋಗ, ಅಭಿವೃದ್ಧಿ, ಕಲೆ, ಸಂಸ್ಕೃತಿ ಮತ್ತು ಭಾಷೆ, ಪ್ರವಾಸೋದ್ಯಮ ಸಚಿವರಾದ ಶ್ರೀ ಕಪಿಲ್ ಮಿಶ್ರಾ ಮತ್ತು ಇಎಸ್‌ಐಸಿ ಮಹಾನಿರ್ದೇಶಕರಾದ ಶ್ರೀ ಅಶೋಕ್ ಕುಮಾರ್ ಸಿಂಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2258683)
ವಿಸಿಟರ್ ಕೌಂಟರ್ : 8