ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
azadi ka amrit mahotsav

ದುರ್ಬಲ ಜನರನ್ನು ಶಾಖದ ಅಲೆಗಳಿಂದ ರಕ್ಷಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ರಾಷ್ಟ್ರ ರಾಜಧಾನಿ ಪ್ರದೇಶ -  ದೆಹಲಿ ಮತ್ತು 21 ರಾಜ್ಯಗಳಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೂಚನೆ


ವಸತಿ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ ಆರ್ಥಿಕ ದುರ್ಬಲ ವರ್ಗಗಳು, ಹೊರಾಂಗಣ ಕಾರ್ಮಿಕರು, ವೃದ್ಧರು, ಮಕ್ಕಳು, ನವಜಾತ ಶಿಶುಗಳು ಮತ್ತು ವಿಶೇಷವಾಗಿ ನಿರಾಶ್ರಿತರು ಶಾಖದ ಅಲೆಯಿಂದ ಎದುರಿಸುತ್ತಿರುವ ಅಪಾಯಗಳ ತಗ್ಗಿಸಲು ಸೂಚನೆ

ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ನಿರ್ದಿಷ್ಟ ಕಾರ್ಯಾಚರಣೆ ವಿಧಾನ (ಎಸ್ ಒ ಪಿ) ಗಳಿಗೆ ಅನುಗುಣವಾಗಿ ಅಥವಾ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ ಡಿ ಎಂ ಎ) ಮಾರ್ಗಸೂಚಿಗಳ ಪ್ರಕಾರ ಶಾಖದ ಅಲೆಗಳ ಪರಿಣಾಮ ತಗ್ಗಿಸಲು ಮತ್ತು ಸಾವುನೋವುಗಳನ್ನು ತಡೆಗಟ್ಟಲು ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ಸೂಚನೆ

ಪ್ರಕಟಣಾ ದಿನಾಂಕ: 28 APR 2026 11:54AM by PIB Bengaluru

ದೇಶದಲ್ಲಿ ದುರ್ಬಲ ಜನಸಂಖ್ಯೆಯನ್ನು ಬಿಸಿಲ ಶಾಖದ ಅಲೆಗಳಿಂದ ರಕ್ಷಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಹಾಗೂ ಪರಿಹಾರ ಕ್ರಮಗಳನ್ನು ಅನುಷ್ಠಾನಕ್ಕೆ ತರುವಂತೆ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ ಹೆಚ್ ಆರ್ ಸಿ) ರಾಷ್ಟ್ರ ರಾಜಧಾನಿ ಪ್ರದೇಶ (ಎನ್ ಸಿ ಟಿ) – ದೆಹಲಿ ಮತ್ತು 21 ರಾಜ್ಯಗಳಿಗೆ ಸೂಚನೆ ನೀಡಿದೆ. ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ ಗಢ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

ವಸತಿ ಆಶ್ರಯ ಮತ್ತು ಸಂಪನ್ಮೂಲಗಳ ಕೊರತೆ ಎದುರಿಸುತ್ತಿರುವ ಅಂಚಿನಲ್ಲಿರುವ ದುರ್ಬಲ ಸಮುದಾಯ, ಆರ್ಥಿಕ ದುರ್ಬಲ ವರ್ಗಗಳು, ಹೊರಾಂಗಣ ಕಾರ್ಮಿಕರು ಮತ್ತು ನಿರಾಶ್ರಿತರ ಮೇಲೆ ಶಾಖದ ಅಲೆಗಳ ಆವರ್ತನ, ಅವಧಿ ಮತ್ತು ತೀವ್ರತೆಯಲ್ಲಿನ ಹೆಚ್ಚಳವು ಅಸಮಾನವಾಗಿ ಪರಿಣಾಮ ಬೀರಿದೆ ಎಂಬುದನ್ನು ಆಯೋಗ ಗಮನಿಸಿದೆ. ತೀವ್ರ ಶಾಖವು ವಯಸ್ಸಾದವರು, ಮಕ್ಕಳು, ಶಿಶುಗಳು ಮತ್ತು ನವಜಾತ ಶಿಶುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ, ಶಾಖದ ಅಲೆಗಳಿಂದಾಗಿ ಜೀವನೋಪಾಯಕ್ಕೆ ತೊಡಕಾಗಬಹುದಾಗಿದ್ದು, ಬೆಂಕಿ ಅಪಘಾತಗಳ ಅಪಾಯ ಹೆಚ್ಚಳಕ್ಕೂ ಕಾರಣವಾಗಬಹುದಾಗಿದೆ.

ಆದ್ದರಿಂದ, ಆಯೋಗವು ಈ ರಾಜ್ಯಗಳು ಮತ್ತು ದೆಹಲಿ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ, ಸಮಗ್ರ ಮತ್ತು ಎಲ್ಲರನ್ನೂ ಒಳಗೊಂಡ ಕ್ರಮಗಳ ತುರ್ತು ಅಗತ್ಯವನ್ನು ಒತ್ತಿ ಹೇಳಿದೆ. ಭಾರತದಲ್ಲಿ 2019-2023ರ ಅವಧಿಯಲ್ಲಿ ಬಿಸಿಲು ಅಥವಾ ಬಿಸಿಲಿನ ಹೊಡೆತದಿಂದ (ಸನ್ ಸ್ಟ್ರೋಕ್) 3,712 ಜನರು ಸಾವನ್ನಪ್ಪಿದ್ದಾರೆ ಎಂಬ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ ಸಿ ಆರ್ ಬಿ) ದತ್ತಾಂಶವನ್ನು ಉಲ್ಲೇಖಿಸುತ್ತಾ, ಉಷ್ಣ ಅಲೆಗಳ ಪರಿಣಾಮವನ್ನು ತಗ್ಗಿಸಲು ಮತ್ತು ಸಾವುನೋವುಗಳನ್ನು ತಡೆಗಟ್ಟಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ ಡಿ ಎಂ ಎ) ನೀಡಿರುವ ಮಾರ್ಗಸೂಚಿಗಳ ಪ್ರಕಾರ ಅಥವಾ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (ಎಸ್ ಒ ಪಿ) ಅನುಗುಣವಾಗಿ ಪರಿಹಾರ ಕ್ರಮಗಳ ಸುಗಮ ಅನುಷ್ಠಾನಕ್ಕೆ ಯೋಜಿಸುವಂತೆ ಆಯೋಗ ಮನವಿ ಮಾಡಿದೆ.

ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲೆಗಳಿಂದ ಕ್ರೋಢೀಕೃತ ವರದಿಗಳನ್ನು ಆಯೋಗವು ಕೋರಿದೆ.

 

*****


(ಪ್ರಕಟಣೆ ಐ.ಡಿ.: 2256227) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , Gujarati , Marathi , हिन्दी , Tamil , Telugu , Malayalam