ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಪ್ರಿಲ್ 27-28ರಂದು ಸಿಕ್ಕಿಂಗೆ ಪ್ರಧಾನಮಂತ್ರಿ ಭೇಟಿ ನೀಡಲಿದ್ದಾರೆ 


ಗ್ಯಾಂಗ್ಟಾಕ್ ನಲ್ಲಿ ಸಿಕ್ಕಿಂನ 50ನೇ ರಾಜ್ಯ ಸಂಸ್ಥಾಪನಾ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಪ್ರಧಾನಮಂತ್ರಿ

ರಾಜ್ಯಾದ್ಯಂತ 4,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಕಾರ್ಯಾರಂಭ  ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

ಮೂಲಸೌಕರ್ಯ, ಸಂಪರ್ಕ, ಆರೋಗ್ಯ ರಕ್ಷಣೆ, ಶಿಕ್ಷಣ, ಇಂಧನ, ನಗರಾಭಿವೃದ್ಧಿ, ಪರಿಸರ, ಪ್ರವಾಸೋದ್ಯಮ ಮತ್ತು ಕೃಷಿ ಸೇರಿದಂತೆ ವ್ಯಾಪಕ ವಲಯಗಳನ್ನು ಈ ಯೋಜನೆಗಳು ಒಳಗೊಂಡಿವೆ

ಸಿಕ್ಕಿಂನಲ್ಲಿ ಸಮಗ್ರ ಮತ್ತು ಅಂತರ್ಗತ ಅಭಿವೃದ್ಧಿಯನ್ನು ವೇಗಗೊಳಿಸುವ ಗುರಿಯನ್ನು ಯೋಜನೆಗಳು ಹೊಂದಿವೆ

ಪ್ರಕಟಣಾ ದಿನಾಂಕ: 26 APR 2026 3:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026 ರ ಏಪ್ರಿಲ್ 27-28 ರಂದು ಸಿಕ್ಕಿಂಗೆ ಭೇಟಿ ನೀಡಲಿದ್ದಾರೆ. ಅವರು ಏಪ್ರಿಲ್ 27 ರಂದು ಮಧ್ಯಾಹ್ನ 3 ಗಂಟೆಗೆ ಗ್ಯಾಂಗ್ಟಾಕ್ ಗೆ ಆಗಮಿಸಲಿದ್ದಾರೆ. ಏಪ್ರಿಲ್ 28 ರಂದು, ಬೆಳಿಗ್ಗೆ 9:30 ರ ಸುಮಾರಿಗೆ ಪ್ರಧಾನಮಂತ್ರಿಯವರು ಗ್ಯಾಂಗ್ಟಾಕ್ ನಲ್ಲಿರುವ ಆರ್ಕಿಡೇರಿಯಂಗೆ ಭೇಟಿ ನೀಡಲಿದ್ದಾರೆ. ರಾಜ್ಯದ ಪರಿಸರ ಮತ್ತು ಸಸ್ಯ ಪರಂಪರೆಯನ್ನು ಪ್ರದರ್ಶಿಸಲು, ಸ್ವರ್ಣಜಯಂತಿ ಮೈತ್ರಿ ಮಂಜರಿ ಉದ್ಯಾನವನವನ್ನು ಅತ್ಯಾಧುನಿಕ, ವಿಶ್ವ ದರ್ಜೆಯ ಆರ್ಕಿಡ್ ಅನುಭವ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ.

ನಂತರ, ಬೆಳಿಗ್ಗೆ 10 ಗಂಟೆಗೆ, ಪಾಲ್ಜೋರ್ ಕ್ರೀಡಾಂಗಣದಲ್ಲಿ ಸಿಕ್ಕಿಂನ 50 ನೇ ರಾಜ್ಯೋತ್ಸವದ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಲಿದ್ದಾರೆ, ಅಲ್ಲಿ ಅವರು ರಾಜ್ಯದಾದ್ಯಂತ 4,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಕಾರ್ಯಾರಂಭ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಯೋಜನೆಗಳು ಮೂಲಸೌಕರ್ಯ, ಸಂಪರ್ಕ, ಆರೋಗ್ಯ ರಕ್ಷಣೆ, ಶಿಕ್ಷಣ, ವಿದ್ಯುತ್, ನಗರಾಭಿವೃದ್ಧಿ, ಪರಿಸರ, ಪ್ರವಾಸೋದ್ಯಮ ಮತ್ತು ಕೃಷಿ ಸೇರಿದಂತೆ ವಿಶಾಲ ವ್ಯಾಪ್ತಿಯ ಕ್ಷೇತ್ರಗಳನ್ನು ಒಳಗೊಂಡಿವೆ ಮತ್ತು ಸಿಕ್ಕಿಂನಲ್ಲಿ ಸಮಗ್ರ ಹಾಗು  ಅಂತರ್ಗತ ಅಭಿವೃದ್ಧಿಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿವೆ.

ಆರೋಗ್ಯ ಕ್ಷೇತ್ರದಲ್ಲಿ, ಪ್ರಧಾನಮಂತ್ರಿಯವರು ನಾಮ್ಚಿ ಜಿಲ್ಲೆಯ ಯಂಗಾಂಗ್ ನಲ್ಲಿ 100 ಹಾಸಿಗೆಗಳ ಆಯುರ್ವೇದ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ಎನ್ಐಟಿ ದಿಯೋರಾಲಿಯಲ್ಲಿ 30 ಹಾಸಿಗೆಗಳ ಸಮಗ್ರ ಸೋವಾ ರಿಗ್ಪಾ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ, ಮೂಲಕ ರಾಜ್ಯದಲ್ಲಿ ಸಾಂಪ್ರದಾಯಿಕ ಮತ್ತು ಸಮಗ್ರ ವೈದ್ಯಕೀಯ ವ್ಯವಸ್ಥೆಗಳ ಲಭ್ಯತೆಯನ್ನು ಬಲಪಡಿಸಲಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ, ಪ್ರಧಾನಮಂತ್ರಿ ಅವರು ಯಾಂಗ್ಗಾಂಗ್ನಲ್ಲಿ ಸಿಕ್ಕಿಂ ವಿಶ್ವವಿದ್ಯಾಲಯದ ಶಾಶ್ವತ ಕ್ಯಾಂಪಸ್, ಚಾಕುಂಗ್ ನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಉತ್ಕೃಷ್ಟತಾ ವಿಶ್ವವಿದ್ಯಾಲಯದ ಆಡಳಿತ ವಿಭಾಗ, ಗ್ಯಾಂಗ್ಟಾಕ್ ಜಿಲ್ಲೆಯ ಸೋಚೆಗಾಂಗ್ನಲ್ಲಿರುವ ಹೆಲೆನ್ ಲೆಪ್ಚಾ ವೈದ್ಯಕೀಯ ಕಾಲೇಜು ಮತ್ತು ಗ್ಯಾಲ್ಶಿಂಗ್ ಜಿಲ್ಲೆಯ ಡೆಂಟಮ್ನಲ್ಲಿರುವ ಡೆಂಟಮ್ ವೃತ್ತಿಪರ ಕಾಲೇಜನ್ನು ಉದ್ಘಾಟಿಸಲಿದ್ದಾರೆ. ಅವರು ಹೀ ಗ್ಯಾಥಾಂಗ್ ನಲ್ಲಿ ಮಾದರಿ ವಸತಿ ಶಾಲೆಗಳು, ಮಂಗನ್ ಜಿಲ್ಲೆಯ ಮಂಗಶಿಲಾದಲ್ಲಿ ಹೊಸ ಮಾದರಿ ಪದವಿ ಕಾಲೇಜು ಮತ್ತು ನಾಮ್ಚಿ ಜಿಲ್ಲೆಯ ಬೂಮ್ಟಾರ್ ಗುಂಪಾದಲ್ಲಿ ಸನ್ಯಾಸಿ ಹಾಸ್ಟೆಲ್ ಮತ್ತು ತರಗತಿ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ. ಇದಲ್ಲದೆ, ಅವರು ಸಿಕ್ಕಿಂನ 160 ಶಾಲೆಗಳಲ್ಲಿ ಐಟಿ ಆಧಾರಿತ ಶೈಕ್ಷಣಿಕ ಮೂಲಸೌಕರ್ಯ ಯೋಜನೆಗಳ ಅನುಷ್ಠಾನಕ್ಕೆ ಚಾಲನೆ ನೀಡಲಿದ್ದಾರೆ.

ಸಿಕ್ಕಿಂನಲ್ಲಿ ಸಂಪರ್ಕವನ್ನು ಮತ್ತಷ್ಟು ಸುಧಾರಿಸಲು, ನಾಮ್ಚಿ ಮತ್ತು ಗ್ಯಾಂಗ್ಟಾಕ್ ಜಿಲ್ಲೆಗಳನ್ನು ಸಂಪರ್ಕಿಸುವ ಸಿರ್ವಾನಿ ಮತ್ತು ಲೋವರ್ ಸ್ಯಾಮ್ಡಾಂಗ್ ನಲ್ಲಿ ತೀಸ್ತಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಎರಡು ಡಬಲ್ ಲೇನ್ ಉಕ್ಕಿನ ಕಮಾನು ಸೇತುವೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಿಚುಡುಮ್ರಾ ಮೂಲಕ ಬಿರ್ಧಂಗ್ ನಿಂದ ನಾಮ್ಚಿಯವರೆಗಿನ ರಸ್ತೆಯ ಅಗಲೀಕರಣ ಮತ್ತು ಬಲಪಡಿಸುವಿಕೆಯನ್ನು ಅವರು ಉದ್ಘಾಟಿಸಲಿದ್ದಾರೆ, ಇದು ಅಂತರ-ಜಿಲ್ಲಾ ಸಂಪರ್ಕ-ಅವಕಾಶವನ್ನು ಹೆಚ್ಚಿಸುತ್ತದೆ, ಪ್ರಯಾಣದ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಜನರು ಹಾಗು ಸರಕುಗಳ ಸಾಗಾಟ/ ಚಲನೆಯನ್ನು ಸುಗಮಗೊಳಿಸುತ್ತದೆ.

ವಿದ್ಯುತ್ ವಲಯದಲ್ಲಿ, ಗ್ಯಾಂಗ್ಟಾಕ್ ನಲ್ಲಿ ಪ್ರಸರಣ ಮತ್ತು ವಿತರಣಾ (ಟಿ & ಡಿ) ಜಾಲದ ಸುಧಾರಣೆ, ಉನ್ನತೀಕರಣ ಮತ್ತು ನವೀಕರಣವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ, ಈ ಪ್ರದೇಶದಲ್ಲಿ ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಬಲಪಡಿಸಲಿದ್ದಾರೆ.

ನಗರಾಭಿವೃದ್ಧಿ ಮತ್ತು ಆಡಳಿತಾತ್ಮಕ ಮೂಲಸೌಕರ್ಯ ಕ್ಷೇತ್ರದಲ್ಲಿ, ಪ್ರಧಾನಮಂತ್ರಿಯವರು ಲುಮ್ಸೆಯಲ್ಲಿ ಜನಸೇವಾ ಸಚಿವಾಲಯ (ಮಿನಿ ಸೆಕ್ರೆಟರಿಯೇಟ್) ಮತ್ತು ಗ್ಯಾಂಗ್ಟಾಕ್ ನಲ್ಲಿ ನಾಗರಿಕ ಸೇವಾ ಅಧಿಕಾರಿಗಳ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಲಿಂಗ್ಡಿಂಗ್ನಲ್ಲಿ ಸಿಕ್ಕಿಂ ನಗರ ಗರೀಬ್ ಆವಾಸ್ ಯೋಜನೆ, ಪೊಲೀಸ್ ಸಿಬ್ಬಂದಿಗೆ ವಸತಿ ಮತ್ತು ಎಸ್ಎಪಿ ಪಂಗ್ಥಾಂಗ್ ನಲ್ಲಿ ಗ್ರೇಡ್ 'ಸಿ' ಕ್ವಾರ್ಟರ್ಸ್ ಸೇರಿದಂತೆ ವಸತಿ ಉಪಕ್ರಮಗಳನ್ನು ಅವರು ಉದ್ಘಾಟಿಸಲಿದ್ದಾರೆ. ಇದಲ್ಲದೆ, ಅವರು ಎಂಜಿ ಮಾರ್ಗದಲ್ಲಿ ಸದ್ಭಾವ ಮಂಟಪ (ಸಾರ್ವಜನಿಕ ಸೌಲಭ್ಯ ಕೇಂದ್ರ) ಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪರಿಸರ ಸಂರಕ್ಷಣಾ ಪ್ರಯತ್ನಗಳ ಭಾಗವಾಗಿ, ಪ್ರಧಾನಮಂತ್ರಿಯವರು ನದಿ ಮಾಲಿನ್ಯ ತಗ್ಗಿಸುವ ಉಪಕ್ರಮಗಳ ಅಡಿಯಲ್ಲಿ ಸಿಂಗ್ಟಮ್ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ಪುನರ್ವಸತಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ಗ್ಯಾಂಗ್ಟಾಕ್ನ ವಲಯ IIIರಲ್ಲಿ ರೋರೊ ಚು ನದಿಯ ಮೂಲಕ ರಾಣಿ ಚು ನದಿಯ ಮಾಲಿನ್ಯ ತಗ್ಗಿಸುವ ಯೋಜನೆಯನ್ನು ಉದ್ಘಾಟಿಸಲಿದ್ದಾರೆ, ಇದು ಸುಧಾರಿತ ನಗರ ನೈರ್ಮಲ್ಯ ಮತ್ತು ಸುಸ್ಥಿರ ಪರಿಸರ ವ್ಯವಸ್ಥೆಗಳಿಗೆ ಕೊಡುಗೆ ನೀಡುತ್ತದೆ.

ಪ್ರವಾಸೋದ್ಯಮ ಮತ್ತು ಯಾತ್ರಾ ಕ್ಷೇತ್ರದಲ್ಲಿ, ಗ್ಯಾಂಗ್ಟಾಕ್ನ ರಿಡ್ಜ್ ಆವರಣದ ಪುನರಾಭಿವೃದ್ಧಿ, ಸೊರೆಂಗ್ನ ದೋಡಾಕ್ನಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಯಾತ್ರಾ ಮೂಲಸೌಕರ್ಯ, ಕೈಲಾಸ ಮಾನಸ ಸರೋವರ ಯಾತ್ರೆಗೆ ಸಂಬಂಧಿಸಿದ ಮೂಲಸೌಕರ್ಯಗಳು ಸೇರಿದಂತೆ 18ನೇ ಮೈಲಿ ಮತ್ತು ಹಂಗು ಸರೋವರಗಳಲ್ಲಿ ಮೂಲಸೌಕರ್ಯ ಸೌಲಭ್ಯಗಳು  ಮತ್ತು ನಾಂಫಿಂಗ್ ಕೃಷ್ಣ ಪ್ರಾಣಾಮಿ ಮಂಗಲ್ಧಾಮದಲ್ಲಿ ಯಾತ್ರಿ ನಿವಾಸವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಗ್ಯಾಲ್ಶಿಂಗ್ ಜಿಲ್ಲೆಯ ಸಿಲ್ನಾನ್ನಲ್ಲಿ ಪರಿಸರ ತೀರ್ಥಯಾತ್ರೆ ಸಂಕೀರ್ಣಕ್ಕೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ಸಿಕ್ಕಿಂ ಇಫ್ಕೊ ಸಂಸ್ಕರಣಾ ಘಟಕವನ್ನು ಉದ್ಘಾಟಿಸಲಿದ್ದಾರೆ, ಇದು ಕೃಷಿ ಸಂಸ್ಕರಣೆಗೆ ಹೆಚ್ಚಿನ  ಉತ್ತೇಜನ ನೀಡುವ ಮತ್ತು ರಾಜ್ಯದಲ್ಲಿ ರೈತರ ಜೀವನೋಪಾಯ ಹಾಗು ಮೌಲ್ಯ ಸರಪಳಿಗಳನ್ನು ಬಲಪಡಿಸುವ ನಿರೀಕ್ಷೆಯಿದೆ. ಯುವಜನರ  ಪಾಲ್ಗೊಳ್ಳುವಿಕೆ ಮತ್ತು ಕ್ರೀಡಾ ಅಭಿವೃದ್ಧಿಯನ್ನು ಉತ್ತೇಜಿಸಲು ಪಾಕ್ಯೊಂಗ್ ಜಿಲ್ಲೆಯ ರಂಗ್ಪೋದಲ್ಲಿ ಒಳಾಂಗಣ ಕ್ರಿಕೆಟ್ ಸೌಲಭ್ಯಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.

ಪ್ರಧಾನಮಂತ್ರಿಯವರ ಭೇಟಿಯು ಸಿಕ್ಕಿಂ ರಾಜ್ಯದ ಸುವರ್ಣ ಮಹೋತ್ಸವ ವರ್ಷದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಮತ್ತು ರಾಜ್ಯ ಹಾಗು  ಈಶಾನ್ಯ ಪ್ರದೇಶದ ತ್ವರಿತ ಮತ್ತು ಸುಸ್ಥಿರ ಅಭಿವೃದ್ಧಿಗೆ ಪ್ರಸ್ತುತ ಸರ್ಕಾರದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2255829) ವಿಸಿಟರ್ ಕೌಂಟರ್ : 10