ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಮುಖ ವಲಯಗಳ ಕುರಿತಾದ ಅಪ್ ಡೇಟ್ ಗಳು
ಗಣಿ ಸಚಿವಾಲಯವು ಉದ್ಯಮ ಸಂಘಗಳು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ತೊಡಗಿಸಿಕೊಂಡಿದೆ
ಗೃಹ ಬಳಕೆಯ ಎಲ್ ಪಿ ಜಿ ಪೂರೈಕೆಗೆ ಆದ್ಯತೆ ನೀಡಲಾಗಿದೆ; ವಿತರಕತ್ವಗಳಲ್ಲಿ ಯಾವುದೇ ದಾಸ್ತಾನು ಖಾಲಿಯಾಗಿರುವ ಬಗ್ಗೆ ವರದಿಯಾಗಿಲ್ಲ
ಏಪ್ರಿಲ್ 3 ರಿಂದ ಸಾರ್ವಜನಿಕ ವಲಯದ ತೈಲ ಕಂಪನಿಗಳು 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳಿಗಾಗಿ 5,600ಕ್ಕೂ ಹೆಚ್ಚು ಜಾಗೃತಿ ಶಿಬಿರಗಳನ್ನು ಆಯೋಜಿಸಿವೆ; 69,000ಕ್ಕೂ ಹೆಚ್ಚು ಸಿಲಿಂಡರ್ ಗಳು ಮಾರಾಟವಾಗಿವೆ
ಆಟೋ ಎಲ್ ಪಿ ಜಿ ಮಾರಾಟವು ಖಾಸಗಿಯಿಂದ ಸಾರ್ವಜನಿಕ ವಲಯದ ತೈಲ ಕಂಪನಿಗಳತ್ತ ಬದಲಾಗಿದ್ದು, ಮಾರಾಟದಲ್ಲಿ ಶೇ. 62 ರಷ್ಟು ಏರಿಕೆಯಾಗಿದೆ
ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಾಮಾನ್ಯ ಸ್ಥಿತಿಯಲ್ಲಿದ್ದು, ಯಾವುದೇ ದಟ್ಟಣೆ ವರದಿಯಾಗಿಲ್ಲ
ಫೆಬ್ರವರಿ 28 ರಿಂದ ಈ ಪ್ರದೇಶದಿಂದ ಸುಮಾರು 10.10 ಲಕ್ಷ ಪ್ರಯಾಣಿಕರು ಭಾರತಕ್ಕೆ ಪ್ರಯಾಣಿಸಿದ್ದಾರೆ
ಇರಾನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು 2,348 ಭಾರತೀಯರನ್ನು ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಭಾರತಕ್ಕೆ ಮರಳಲು ಅನುಕೂಲ ಮಾಡಿಕೊಟ್ಟಿದೆ
ಪ್ರಕಟಣಾ ದಿನಾಂಕ:
16 APR 2026 5:56PM by PIB Bengaluru
ಪಶ್ಚಿಮ ಏಷ್ಯಾದಲ್ಲಿನ ಬದಲಾಗುತ್ತಿರುವ ಪರಿಸ್ಥಿತಿಯ ನಡುವೆ ಪ್ರಮುಖ ವಲಯಗಳಲ್ಲಿ ಸನ್ನದ್ಧತೆ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿದೆ. ಈ ಕೆಳಗಿನ ಅಪ್‌ಡೇಟ್ ಗಣಿಗಾರಿಕೆ, ಇಂಧನ ಪೂರೈಕೆ, ಕಡಲ ಕಾರ್ಯಾಚರಣೆಗಳು ಮತ್ತು ಈ ಪ್ರದೇಶದಲ್ಲಿನ ಭಾರತೀಯ ಪ್ರಜೆಗಳಿಗೆ ಬೆಂಬಲ ನೀಡುವ ಕ್ಷೇತ್ರಗಳಲ್ಲಿ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ವಿವರಗಳನ್ನು ಒದಗಿಸುತ್ತದೆ.
ಗಣಿ ವಲಯದ ಅಪ್‌ಡೇಟ್ ಗಳು
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ಉಂಟಾಗುವ ಸಮಸ್ಯೆಗಳ ಕುರಿತು ಸಚಿವಾಲಯವು ತೆಗೆದುಕೊಳ್ಳುತ್ತಿರುವ ಪೂರ್ವಭಾವಿ ಕ್ರಮಗಳನ್ನು ಗಣಿ ಸಚಿವಾಲಯವು ವಿವರಿಸಿದೆ. ಸಚಿವಾಲಯವು ಹೀಗೆ ಹೇಳಿದೆ:
• ಪಶ್ಚಿಮ ಏಷ್ಯಾದ ಬೆಳವಣಿಗೆಗಳಿಗೆ ಸಂಬಂಧಿಸಿದ ಸವಾಲುಗಳನ್ನು ಗುರುತಿಸಲು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು 2026ರ ಮಾರ್ಚ್‌ನಲ್ಲಿ ರಚಿಸಲಾದ 'ಪೆಟ್ರೋಲಿಯಂ ಮತ್ತು ಇಂಧನ ಸಬಲೀಕೃತ ಗುಂಪು' (Empowered Group) ನಲ್ಲಿ ಗಣಿ ಸಚಿವಾಲಯವು ಪ್ರಾತಿನಿಧ್ಯ ಹೊಂದಿದೆ. ಈ ಗುಂಪಿನ ಅಧ್ಯಕ್ಷತೆಯನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಗಳು ವಹಿಸಿದ್ದಾರೆ.
• ಉದ್ಯಮದ ಮಧ್ಯಸ್ಥಗಾರರ ಅಗತ್ಯತೆಗಳನ್ನು ಮೌಲ್ಯಮಾಪನ ಮಾಡಲು ಅವರಿಂದ ಸಲಹೆಗಳನ್ನು ಪಡೆಯಲಾಗಿದೆ. ಪರಿಣಾಮಕಾರಿ ಸಮನ್ವಯಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಯಿತು ಮತ್ತು ಅವರ ವಿವರಗಳನ್ನು ಉದ್ಯಮದೊಂದಿಗೆ ಹಂಚಿಕೊಳ್ಳಲಾಯಿತು.
• ವಿವಿಧ ಇನ್‌ಪುಟ್ ಸಾಮಗ್ರಿಗಳ ಅಗತ್ಯತೆಗಳ ಕುರಿತು ಚರ್ಚಿಸಲು ವಿವಿಧ ಮಧ್ಯಸ್ಥಗಾರರೊಂದಿಗೆ ಮೂರು ಸಭೆಗಳನ್ನು ನಡೆಸಲಾಯಿತು.
• 1ನೇ ಸಭೆಯು 01 ಏಪ್ರಿಲ್, 2026 ರಂದು ಪ್ರಾಥಮಿಕ ಮತ್ತು ದ್ವಿತೀಯ ಅಲ್ಯೂಮಿನಿಯಂ ಉತ್ಪಾದಕರು ಮತ್ತು ಅಲ್ಯೂಮಿನಿಯಂ ಸಂಘಗಳೊಂದಿಗೆ ನಡೆಯಿತು.
• 2ನೇ ಸಭೆಯು 02 ಏಪ್ರಿಲ್, 2026 ರಂದು ತಾಮ್ರ ಉತ್ಪಾದಕರು ಮತ್ತು ಸಂಘಗಳೊಂದಿಗೆ ನಡೆಯಿತು.
• 09 ಏಪ್ರಿಲ್ 2026 ರಂದು, ಉದ್ಯಮ ಸಂಘಗಳೊಂದಿಗೆ (FIMI, FICCI, CII, PHDCCI, ASSOCHAM ಇತ್ಯಾದಿ) ಚರ್ಚೆ ನಡೆಸಲಾಯಿತು. ಉದ್ಯಮದಿಂದ ಪಡೆದ ಸಲಹೆಗಳನ್ನು ಸಂಬಂಧಪಟ್ಟ ಸಚಿವಾಲಯಗಳೊಂದಿಗೆ ಹಂಚಿಕೊಳ್ಳಲಾಗಿದೆ.
• ತರುವಾಯ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 08 ಏಪ್ರಿಲ್, 2026 ರ ಪತ್ರದ ಮೂಲಕ ಲೋಹಗಳು ಸೇರಿದಂತೆ ಕೆಲವು ನಿರ್ಣಾಯಕ ವಲಯಗಳಿಗೆ ಎಲ್‌ಪಿಜಿಯ (LPG) ಖಚಿತ ಹಂಚಿಕೆಯನ್ನು ಜಾರಿ ಮಾಡಿದೆ. ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರದ ಸಮಗ್ರ ದೃಷ್ಟಿಕೋನಕ್ಕೆ (whole of Government approach) ಅನುಗುಣವಾಗಿ ಉದ್ಯಮಕ್ಕೆ ಅಗತ್ಯ ಬೆಂಬಲದ ಭರವಸೆಯನ್ನು ನೀಡಲಾಯಿತು.
ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ
ಹಾರ್ಮುಜ್ ಜಲಸಂಧಿಗೆ (Strait of Hormuz) ಸಂಬಂಧಿಸಿದ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ಪಿಜಿ (LPG) ನಿರಂತರವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಚಿವಾಲಯದ ಪ್ರಕಟಣೆಯ ಮುಖ್ಯಾಂಶಗಳು ಇಲ್ಲಿವೆ:
ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ
• ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಆದ್ದರಿಂದ, ನಾಗರಿಕರು ಆತಂಕಕ್ಕೆ ಒಳಗಾಗಿ ಇವುಗಳನ್ನು ಅನಗತ್ಯವಾಗಿ ಸಂಗ್ರಹಿಸದಂತೆ (Panic purchase) ಸೂಚಿಸಲಾಗಿದೆ.
• ವದಂತಿಗಳಿಗೆ ಕಿವಿಗೊಡಬೇಡಿ ಮತ್ತು ನಿಖರ ಮಾಹಿತಿಗಾಗಿ ಅಧಿಕೃತ ಮೂಲಗಳನ್ನೇ ಅವಲಂಬಿಸಿ.
• ಎಲ್ ಪಿ ಜಿ ಗ್ರಾಹಕರು ಡಿಜಿಟಲ್ ಬುಕಿಂಗ್ ವೇದಿಕೆಗಳನ್ನು ಬಳಸಲು ಮತ್ತು ವಿತರಕರ ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡುವುದನ್ನು ತಪ್ಪಿಸಲು ವಿನಂತಿಸಲಾಗಿದೆ.
• ನಾಗರಿಕರು ಪರ್ಯಾಯ ಇಂಧನಗಳಾದ ಪಿ ಎನ್ ಜಿ (PNG) ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಕುಕ್ ಟಾಪ್ ಗಳನ್ನು ಬಳಸಲು ಉತ್ತೇಜಿಸಲಾಗುತ್ತದೆ.
• ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನ ಉಳಿತಾಯ ಮಾಡುವಂತೆ ಕೋರಲಾಗಿದೆ.
ಸರ್ಕಾರದ ಸನ್ನದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು
ಪ್ರಸ್ತುತದ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ನಡುವೆಯೂ, ಗೃಹ ಬಳಕೆಯ ಎಲ್‌ಪಿಜಿ (LPG), ಗೃಹ ಬಳಕೆಯ ಪಿಎನ್‌ಜಿ (PNG) ಮತ್ತು ಸಿಎನ್‌ಜಿ (ಸಾರಿಗೆ) ಪೂರೈಕೆಯನ್ನು ಸರ್ಕಾರವು ಶೇ. 100 ರಷ್ಟು ಖಚಿತಪಡಿಸಿದೆ.
• ವಾಣಿಜ್ಯ ಎಲ್ ಪಿ ಜಿ ಪೂರೈಕೆಯಲ್ಲಿ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಇದರೊಂದಿಗೆ ಫಾರ್ಮಾ, ಉಕ್ಕು, ಆಟೋಮೊಬೈಲ್, ಬೀಜ ಮತ್ತು ಕೃಷಿ ಮುಂತಾದ ವಲಯಗಳಿಗೂ ಆದ್ಯತೆ ನೀಡಲಾಗಿದೆ. ಹೆಚ್ಚುವರಿಯಾಗಿ, ವಲಸೆ ಕಾರ್ಮಿಕರಿಗೆ ನೀಡಲಾಗುವ 5 ಕೆಜಿ ಎಫ್‌ಟಿಎಲ್ (FTL) ಪೂರೈಕೆಯನ್ನು ಮಾರ್ಚ್ 2 ಮತ್ತು 3, 2026 ರ ಸರಾಸರಿ ದೈನಂದಿನ ಪೂರೈಕೆಯ ಆಧಾರದ ಮೇಲೆ ದುಪ್ಪಟ್ಟುಗೊಳಿಸಲಾಗಿದೆ.
• ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಸರ್ಕಾರವು ಈಗಾಗಲೇ ಹಲವಾರು ತರ್ಕಬದ್ಧ ಕ್ರಮಗಳನ್ನು ಜಾರಿಗೆ ತಂದಿದೆ. ಇದರಲ್ಲಿ ರಿಫೈನರಿ ಉತ್ಪಾದನೆಯನ್ನು ಹೆಚ್ಚಿಸುವುದು, ಎಲ್ ಪಿ ಜಿ ಬುಕಿಂಗ್ ಅವಧಿಯನ್ನು ನಗರ ಪ್ರದೇಶಗಳಲ್ಲಿ 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಯಲ್ಲಿ ಆಯಾ ವಲಯಗಳಿಗೆ ಆದ್ಯತೆ ನೀಡುವುದನ್ನು ಸೇರಿಸಲಾಗಿದೆ.
• ಎಲ್‌ಪಿಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.
• ಸಣ್ಣ ಮತ್ತು ಮಧ್ಯಮ ಗ್ರಾಹಕರಿಗೆ ವಿತರಿಸಲು ರಾಜ್ಯಗಳಿಗೆ ಹೆಚ್ಚುವರಿ ಕಲ್ಲಿದ್ದಲನ್ನು ಪೂರೈಸುವಂತೆ ಕಲ್ಲಿದ್ದಲು ಸಚಿವಾಲಯವು ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲಿಯರೀಸ್ ಗೆ ನಿರ್ದೇಶನ ನೀಡಿದೆ.
• ಗೃಹ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ ಪಿ ಎನ್ ಜಿ ಸಂಪರ್ಕಗಳನ್ನು ಸುಗಮಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಘಟಿತ ಪ್ರಯತ್ನಗಳು ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು
• ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಕಾಳಸಂತೆ ಹಾಗೂ ಅಕ್ರಮ ದಾಸ್ತಾನು ತಡೆಯಲು ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಎಲ್ ಪಿ ಜಿ ನಿಯಂತ್ರಣ ಆದೇಶ 2000ರ ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ.
• ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರ ವಹಿಸಬೇಕಿದೆ. ಭಾರತ ಸರ್ಕಾರವು ಈ ವಿಷಯವನ್ನು ವಿವಿಧ ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯಗಳಿಗೆ ಪುನರುಚ್ಚರಿಸಿದೆ.
• ಇಂಧನದ ಲಭ್ಯತೆಯ ಬಗ್ಗೆ ನಾಗರಿಕರಿಗೆ ಭರವಸೆ ನೀಡಲು ಪೂರ್ವಭಾವಿ ಸಾರ್ವಜನಿಕ ಸಂವಹನ ನಡೆಸುವ ಅಗತ್ಯವನ್ನು ಭಾರತ ಸರ್ಕಾರವು 27.03.2026 ಮತ್ತು 02.04.2026 ರ ಪತ್ರಗಳ ಮೂಲಕ ಒತ್ತಿಹೇಳಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತವಾಗಿ ಪರಿಶೀಲನಾ ಸಭೆಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, 02.04.2026 ಮತ್ತು 06.04.2026 ರಂದು ಉನ್ನತ ಮಟ್ಟದ ಸಭೆಗಳನ್ನು ಆಯೋಜಿಸಲಾಗಿದ್ದು, ಈ ಕೆಳಗಿನ ಅಂಶಗಳಿಗೆ ಒತ್ತು ನೀಡಲಾಗಿದೆ:
o ಪ್ರತಿದಿನ ಪತ್ರಿಕಾಗೋಷ್ಠಿಗಳನ್ನು ನಡೆಸುವುದು ಮತ್ತು ನಿಯಮಿತವಾಗಿ ಸಾರ್ವಜನಿಕ ಸಲಹೆಗಳನ್ನು (Advisories) ನೀಡುವುದು.
o ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳು ಮತ್ತು ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವುದು ಹಾಗೂ ಅವುಗಳನ್ನು ತಡೆಯುವುದು.
o ಜಿಲ್ಲಾಡಳಿತದ ಮೂಲಕ ದೈನಂದಿನ ಜಾರಿ ಪ್ರಕ್ರಿಯೆಗಳನ್ನು ಚುರುಕುಗೊಳಿಸುವುದು ಮತ್ತು ತೈಲ ಕಂಪನಿಗಳ (OMCs) ಸಮನ್ವಯದೊಂದಿಗೆ ದಾಳಿ ಹಾಗೂ ತಪಾಸಣೆಗಳನ್ನು ಮುಂದುವರಿಸುವುದು.
o ತಮ್ಮ ರಾಜ್ಯ/ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿ ವಾಣಿಜ್ಯ ಎಲ್‌ಪಿಜಿ ಹಂಚಿಕೆ ಆದೇಶಗಳನ್ನು ಹೊರಡಿಸುವುದು.
o ರಾಜ್ಯಗಳಿಗೆ ಹೆಚ್ಚುವರಿಯಾಗಿ ಹಂಚಿಕೆಯಾದ ಸೀಮೆಎಣ್ಣೆ (SKO) ವಿತರಣೆಗೆ ಸಂಬಂಧಿಸಿದ ಆದೇಶಗಳನ್ನು ನೀಡುವುದು.
o ಪಿ ಎನ್ ಜಿ (PNG) ಬಳಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸುವುದು.
o ಎಲ್ ಪಿ ಜಿ ಪೂರೈಕೆಯಲ್ಲಿ ಆದ್ಯತೆ ನೀಡುವುದು, ವಿಶೇಷವಾಗಿ ಗೃಹಬಳಕೆಯ ಅಗತ್ಯತೆಗಳಿಗೆ ಮತ್ತು ಪೂರೈಕೆಯಲ್ಲಿ ಸ್ಥಿರತೆಯನ್ನು ಕಾಪಾಡಲು 5 ಕೆಜಿ ಎಫ್ ಟಿ ಎಲ್ (FTL) ಸಿಲಿಂಡರ್ ಗಳ ಉದ್ದೇಶಿತ ವಿತರಣೆಯನ್ನು ಅಳವಡಿಸಿಕೊಳ್ಳುವುದು.
• ಅಕ್ರಮ ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಯಲು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿಯಂತ್ರಣ ಕೊಠಡಿಗಳು ಮತ್ತು ಜಿಲ್ಲಾ ಮೇಲ್ವಿಚಾರಣಾ ಸಮಿತಿಗಳನ್ನು ಸ್ಥಾಪಿಸಲಾಗಿದೆ.
• ಈಗಾಗಲೇ ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ ಮತ್ತು ಮಾಹಿತಿ ನೀಡುತ್ತಿವೆ.
ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು
• ಎಲ್ ಪಿ ಜಿ (LPG) ಕಾಳಸಂತೆ ಮತ್ತು ಅಕ್ರಮ ದಾಸ್ತಾನನ್ನು ತಡೆಯಲು ದೇಶಾದ್ಯಂತ ಜಾರಿ ಕ್ರಮಗಳು ಮುಂದುವರಿದಿವೆ. 15.04.2026 ರಂದು 2500ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ.
• ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (PSU OMCs) ದಿಢೀರ್ ತಪಾಸಣೆಗಳನ್ನು ಚುರುಕುಗೊಳಿಸಿವೆ ಮತ್ತು ನಿನ್ನೆಯವರೆಗೆ 238 ಎಲ್‌ಪಿಜಿ ವಿತರಕರಿಗೆ ದಂಡ ವಿಧಿಸಿವೆ ಹಾಗೂ 63 ಎಲ್ ಪಿ ಜಿ ವಿತರಕತ್ವವನ್ನು ಅಮಾನತುಗೊಳಿಸಿವೆ.
ಎಲ್ ಪಿ ಜಿ ಪೂರೈಕೆ
ಗೃಹ ಬಳಕೆಯ ಎಲ್ ಪಿ ಜಿ ಪೂರೈಕೆಯ ಸ್ಥಿತಿಗತಿ:
• ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಎಲ್‌ಪಿಜಿ ಪೂರೈಕೆಯ ಮೇಲೆ ಪರಿಣಾಮ ಮುಂದುವರಿದಿದೆ.
• ಮನೆಗಳಿಗೆ ನೀಡುವ ಗೃಹ ಬಳಕೆಯ ಎಲ್‌ಪಿಜಿ ಪೂರೈಕೆಗೆ ಮೊದಲ ಆದ್ಯತೆ ನೀಡಲಾಗಿದೆ.
• ಯಾವುದೇ ಎಲ್ ಪಿ ಜಿ ವಿತರಕತ್ವಗಳಲ್ಲಿ ದಾಸ್ತಾನು ಖಾಲಿಯಾಗಿರುವ (Dry-outs) ಬಗ್ಗೆ ವರದಿಯಾಗಿಲ್ಲ.
• ನಿನ್ನೆ ಇಡೀ ಉದ್ಯಮದಾದ್ಯಂತ ಆನ್ ಲೈನ್ ಎಲ್ ಪಿ ಜಿ ಬುಕಿಂಗ್ ಪ್ರಮಾಣವು ಸುಮಾರು ಶೇ. 98 ರಷ್ಟು ಹೆಚ್ಚಾಗಿದೆ.
• ಪೂರೈಕೆ ಹಾದಿ ತಪ್ಪುವುದನ್ನು ತಡೆಯಲು ಡೆಲಿವರಿ ಅಥೆಂಟಿಕೇಶನ್ ಕೋಡ್ (DAC) ಆಧಾರಿತ ವಿತರಣೆಗಳು ಸುಮಾರು ಶೇ. 92 ರಷ್ಟು ಹೆಚ್ಚಿವೆ. ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಈ DAC ಅನ್ನು ಕಳುಹಿಸಲಾಗುತ್ತದೆ.
• ಬುಕಿಂಗ್‌ಗಳಿಗೆ ಪ್ರತಿಯಾಗಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯು ಸಾಮಾನ್ಯ ಸ್ಥಿತಿಯಲ್ಲಿದೆ.
ವಾಣಿಜ್ಯ ಎಲ್ ಪಿ ಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:
• ಒಟ್ಟು ವಾಣಿಜ್ಯ ಎಲ್ ಪಿಜಿ ಹಂಚಿಕೆಯನ್ನು ಬಿಕ್ಕಟ್ಟಿನ ಪೂರ್ವದ ಮಟ್ಟದ ಸುಮಾರು ಶೇ. 70 ಕ್ಕೆ ಹೆಚ್ಚಿಸಲಾಗಿದೆ, ಇದರಲ್ಲಿ ಶೇ. 10 ರಷ್ಟು ಸುಧಾರಣೆ-ಆಧಾರಿತ (reform-linked) ಹಂಚಿಕೆಯೂ ಸೇರಿದೆ.
• ಭಾರತ ಸರ್ಕಾರವು 06.04.2026 ರ ಪತ್ರದ ಮೂಲಕ, ವಲಸೆ ಕಾರ್ಮಿಕರಿಗೆ ವಿತರಿಸಲು ಪ್ರತಿ ರಾಜ್ಯದಲ್ಲಿ ಲಭ್ಯವಿರುವ 5 ಕೆಜಿ ಎಫ್ ಟಿ ಎಲ್ (FTL) ಸಿಲಿಂಡರ್ ಗಳ ದೈನಂದಿನ ಪ್ರಮಾಣವನ್ನು ದುಪ್ಪಟ್ಟುಗೊಳಿಸಿರುವುದಾಗಿ ತಿಳಿಸಿದೆ. ಇದನ್ನು ಮಾರ್ಚ್ 2-3, 2026 ರ ಅವಧಿಯ ಸರಾಸರಿ ದೈನಂದಿನ ಪೂರೈಕೆಯ ಆಧಾರದ ಮೇಲೆ ನಿರ್ಧರಿಸಲಾಗಿದೆ. ಈ ಸಿಲಿಂಡರ್‌ಗಳು ರಾಜ್ಯ ಸರ್ಕಾರದ ಸುಪರ್ದಿಯಲ್ಲಿದ್ದು, ತೈಲ ಮಾರುಕಟ್ಟೆ ಕಂಪನಿಗಳ (OMCs) ನೆರವಿನೊಂದಿಗೆ ಆಯಾ ರಾಜ್ಯದ ವಲಸೆ ಕಾರ್ಮಿಕರಿಗೆ ಮಾತ್ರ ಪೂರೈಸಲಾಗುವುದು.
• ಏಪ್ರಿಲ್ 3, 2026 ರಿಂದ ಸಾರ್ವಜನಿಕ ವಲಯದ ತೈಲ ಕಂಪನಿಗಳು (PSU OMCs) 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳಿಗಾಗಿ 5600ಕ್ಕೂ ಹೆಚ್ಚು ಜಾಗೃತಿ ಶಿಬಿರಗಳನ್ನು ಆಯೋಜಿಸಿವೆ, ಇದರಲ್ಲಿ 69,000ಕ್ಕೂ ಹೆಚ್ಚು ಸಿಲಿಂಡರ್‌ಗಳು ಮಾರಾಟವಾಗಿವೆ. ನಿನ್ನೆ ಒಂದೇ ದಿನ 500ಕ್ಕೂ ಹೆಚ್ಚು ಶಿಬಿರಗಳ ಮೂಲಕ 8453 ಸಿಲಿಂಡರ್ ಗಳು ಮಾರಾಟವಾಗಿವೆ.
• ಇತ್ತೀಚೆಗೆ ಏಪ್ರಿಲ್ 14, 2026 ರಂದು ಮಹಾರಾಷ್ಟ್ರದ ಖೋಪಾತ್ ನಲ್ಲಿ ಬಿಪಿಸಿಎಲ್ (BPCL) ಆಯೋಜಿಸಿದ್ದ ಜಾಗೃತಿ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 400 ಸಿಲಿಂಡರ್ ಗಳು ಮಾರಾಟವಾಗಿವೆ.
• ಮಾರ್ಚ್ 23, 2026 ರಿಂದ ಈವರೆಗೆ ಸುಮಾರು 15.5 ಲಕ್ಷ 5 ಕೆಜಿ ಮುಕ್ತ ವ್ಯಾಪಾರ ಎಲ್‌ಪಿಜಿ ಸಿಲಿಂಡರ್ ಗಳು ಮಾರಾಟವಾಗಿವೆ.
• IOCL, HPCL ಮತ್ತು BPCL ಕಂಪನಿಗಳ ಕಾರ್ಯನಿರ್ವಾಹಕ ನಿರ್ದೇಶಕರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯು ರಾಜ್ಯ ಅಧಿಕಾರಿಗಳು ಮತ್ತು ಉದ್ಯಮ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ವಾಣಿಜ್ಯ ಎಲ್ ಪಿ ಜಿ ವಿತರಣೆಯನ್ನು ಯೋಜಿಸುತ್ತಿದೆ.
• 15.04.2026 ರಂದು 7930 ಮೆಟ್ರಿಕ್ ಟನ್ ವಾಣಿಜ್ಯ ಎಲ್ ಪಿ ಜಿ (ಇದು 4.17 ಲಕ್ಷಕ್ಕೂ ಹೆಚ್ಚು 19 ಕೆಜಿ ಸಿಲಿಂಡರ್ ಗಳಿಗೆ ಸಮಾನ) ಮಾರಾಟವಾಗಿದೆ.
• ಮಾರ್ಚ್ 14, 2026 ರಿಂದ ಈವರೆಗೆ ಒಟ್ಟು 1,42,156 ಮೆಟ್ರಿಕ್ ಟನ್ (74.8 ಲಕ್ಷಕ್ಕೂ ಹೆಚ್ಚು 19 ಕೆಜಿ ಸಿಲಿಂಡರ್ ಗಳಿಗೆ ಸಮಾನ) ವಾಣಿಜ್ಯ ಎಲ್‌ಪಿಜಿ ಮಾರಾಟವಾಗಿದೆ. ಇದರಲ್ಲಿ 8400 ಮೆಟ್ರಿಕ್ ಟನ್‌ಗೂ ಹೆಚ್ಚು ಆಟೋ ಎಲ್ ಪಿ ಜಿ ಸೇರಿದೆ.
• ಏಪ್ರಿಲ್ 2026ರಲ್ಲಿ (15.04.26 ರವರೆಗೆ) ಸಾರ್ವಜನಿಕ ವಲಯದ ತೈಲ ಕಂಪನಿಗಳ ಸರಾಸರಿ ಆಟೋ ಎಲ್‌ಪಿಜಿ ಮಾರಾಟವು ದಿನಕ್ಕೆ ಸುಮಾರು 286 ಮೆಟ್ರಿಕ್ ಟನ್ ಆಗಿದ್ದು, ಫೆಬ್ರವರಿ 2026 ರಲ್ಲಿದ್ದ 177 ಮೆಟ್ರಿಕ್ ಟನ್‌ಗೆ ಹೋಲಿಸಿದರೆ ಗಮನಾರ್ಹ ಏರಿಕೆ ಕಂಡಿದೆ.
• ಆಟೋ ಎಲ್ ಪಿ ಜಿ ಮಾರಾಟವು ಖಾಸಗಿ ಕಂಪನಿಗಳಿಂದ ಸಾರ್ವಜನಿಕ ವಲಯದ ಕಂಪನಿಗಳತ್ತ ಬದಲಾಗುತ್ತಿರುವುದು ಕಂಡುಬಂದಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಸಾರ್ವಜನಿಕ ವಲಯದ ಕಂಪನಿಗಳ ಆಟೋ ಎಲ್‌ಪಿಜಿ ಮಾರಾಟವು ಶೇ. 62 ರಷ್ಟು ಹೆಚ್ಚಾಗಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿದೆ.
ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿ ಎನ್ ಜಿ (PNG) ವಿಸ್ತರಣಾ ಉಪಕ್ರಮಗಳು
• ಗ್ರಾಹಕರಿಗೆ ಆದ್ಯತೆ ನೀಡಲಾಗಿದ್ದು, ಗೃಹ ಬಳಕೆಯ ಪಿಎನ್‌ಜಿ (D-PNG) ಮತ್ತು ಸಿ ಎನ್ ಜಿ-ಸಾರಿಗೆಗೆ (CNG-Transport) ಶೇ. 100 ರಷ್ಟು ಪೂರೈಕೆಯನ್ನು ಖಚಿತಪಡಿಸಲಾಗಿದೆ.
• ರಸಗೊಬ್ಬರ ಕಾರ್ಖಾನೆಗಳಿಗೆ ಒಟ್ಟಾರೆ ಅನಿಲ ಹಂಚಿಕೆಯನ್ನು ಅವುಗಳ ಆರು ತಿಂಗಳ ಸರಾಸರಿ ಬಳಕೆಯ ಸುಮಾರು ಶೇ. 95 ಕ್ಕೆ ಹೆಚ್ಚಿಸಲಾಗಿದೆ.
• ಹೆಚ್ಚುವರಿಯಾಗಿ, ಸಿಜಿಡಿ (CGD) ನೆಟ್‌ವರ್ಕ್ ಗಳ ಮೂಲಕ ಪೂರೈಕೆಯಾಗುವ ಇತರ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಅನಿಲ ಪೂರೈಕೆಯನ್ನು ಶೇ. 80 ರವರೆಗೆ ಹೆಚ್ಚಿಸಲಾಗಿದೆ.
• ವಾಣಿಜ್ಯ ಎಲ್ ಪಿ ಜಿ ಲಭ್ಯತೆಯ ಕುರಿತಾದ ಕಳವಳಗಳನ್ನು ಪರಿಹರಿಸಲು, ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಮತ್ತು ಕ್ಯಾಂಟೀನ್ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್ ಜಿ ಸಂಪರ್ಕಗಳನ್ನು ಆದ್ಯತೆಯ ಮೇಲೆ ನೀಡುವಂತೆ ಸಿಜಿಡಿ ಸಂಸ್ಥೆಗಳಿಗೆ ಸೂಚಿಸಲಾಗಿದೆ.
• IGL, MGL, GAIL Gas ಮತ್ತು BPCL ಸೇರಿದಂತೆ ಪ್ರಮುಖ ಸಿಜಿಡಿ ಕಂಪನಿಗಳು ಗೃಹ ಮತ್ತು ವಾಣಿಜ್ಯ ಪಿಎನ್‌ಜಿ ಸಂಪರ್ಕಗಳಿಗಾಗಿ ವಿವಿಧ ಪ್ರೋತ್ಸಾಹಕಗಳನ್ನು (Incentives) ನೀಡುತ್ತಿವೆ.
• ಸಿಜಿಡಿ ನೆಟ್ ವರ್ಕ್‌ಗಳ ವಿಸ್ತರಣೆಗೆ ಅಗತ್ಯವಿರುವ ಅನುಮೋದನೆಗಳನ್ನು ತ್ವರಿತಗೊಳಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳಿಗೆ ವಿನಂತಿಸಲಾಗಿದೆ.
• ಎಲ್ ಪಿ ಜಿ ಯಿಂದ ಪಿ ಎನ್ ಜಿಗೆ ದೀರ್ಘಾವಧಿಯ ಬದಲಾವಣೆಗೆ ಸಹಕರಿಸುವ ರಾಜ್ಯಗಳಿಗೆ ಹೆಚ್ಚುವರಿ ಶೇ. 10 ರಷ್ಟು ವಾಣಿಜ್ಯ ಎಲ್ ಪಿ ಜಿ ಹಂಚಿಕೆಯನ್ನು ನೀಡುವುದಾಗಿ ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ತಿಳಿಸಿದೆ. ಈಗಾಗಲೇ 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪಿ ಎನ್ ಜಿ ವಿಸ್ತರಣಾ ಸುಧಾರಣೆಗಳಿಗೆ ಪೂರಕವಾಗಿ ಹೆಚ್ಚುವರಿ ವಾಣಿಜ್ಯ ಎಲ್ ಪಿ ಜಿ ಹಂಚಿಕೆಯನ್ನು ಪಡೆಯುತ್ತಿವೆ.
• ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 24.03.26 ರ ಪತ್ರದ ಮೂಲಕ, ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಲು 3 ತಿಂಗಳ ಅವಧಿಗೆ 'ವೇಗವರ್ಧಿತ ಅನುಮೋದನೆ ಚೌಕಟ್ಟು' (Accelerated Approval Framework) ಅಳವಡಿಸಿಕೊಂಡಿದೆ.
• ಭಾರತ ಸರ್ಕಾರವು ಅಗತ್ಯ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ ಆದೇಶ, 2026' ಅನ್ನು 24.03.2026 ರ ಗೆಜೆಟ್ ಮೂಲಕ ಅಧಿಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್‌ಲೈನ್ ಗಳನ್ನು ಅಳವಡಿಸಲು ಮತ್ತು ವಿಸ್ತರಿಸಲು ಕಾಲಮಿತಿಯ ಚೌಕಟ್ಟನ್ನು ಒದಗಿಸುತ್ತದೆ, ಇದು ವಸತಿ ಪ್ರದೇಶಗಳಲ್ಲಿ ನೈಸರ್ಗಿಕ ಅನಿಲ ಮೂಲಸೌಕರ್ಯದ ವೇಗದ ಅಭಿವೃದ್ಧಿಗೆ ಮತ್ತು ಇಂಧನ ಭದ್ರತೆಯನ್ನು ಬಲಪಡಿಸಲು ಸಹಕಾರಿಯಾಗಿದೆ.
• PNGRB ಸಂಸ್ಥೆಯು ಗೃಹ ಬಳಕೆಯ ಪಿ ಎನ್ ಜಿ ಸಂಪರ್ಕಗಳನ್ನು ತ್ವರಿತಗೊಳಿಸಲು ಸಿಜಿಡಿ ಘಟಕಗಳಿಗೆ ನಿರ್ದೇಶಿಸಿದೆ. ಅಲ್ಲದೆ, ಪಿಎನ್‌ಜಿ ವಿಸ್ತರಣೆಯ ವೇಗವನ್ನು ಉಳಿಸಿಕೊಳ್ಳಲು 'ರಾಷ್ಟ್ರೀಯ ಪಿ ಎನ್ ಜಿ ಅಭಿಯಾನ 2.0' ಅನ್ನು 30.06.2026 ರವರೆಗೆ ವಿಸ್ತರಿಸಲಾಗಿದೆ.
• ಇಂಧನ ಸ್ವಾವಲಂಬನೆಯನ್ನು ಉತ್ತೇಜಿಸಲು ಭಾರತ ಸರ್ಕಾರವು ಮಾದರಿ 'ರಾಜ್ಯ ಸಿಬಿಜಿ (CBG) ನೀತಿ'ಯ ಕರಡನ್ನು ಸಿದ್ಧಪಡಿಸಿದೆ. ಈ ನೀತಿಯನ್ನು ಅಳವಡಿಸಿಕೊಳ್ಳುವ ರಾಜ್ಯಗಳಿಗೆ ಮುಂದಿನ ಹಂತದ ಹೆಚ್ಚುವರಿ ವಾಣಿಜ್ಯ ಎಲ್ ಪಿ ಜಿ ಹಂಚಿಕೆಯಲ್ಲಿ ಆದ್ಯತೆ ನೀಡಲಾಗುವುದು.
• ಮಾರ್ಚ್ 2026 ರಿಂದ ಈವರೆಗೆ ಸುಮಾರು 4.58 ಲಕ್ಷ ಪಿ ಎನ್ ಜಿ ಸಂಪರ್ಕಗಳಿಗೆ ಗ್ಯಾಸ್ ಪೂರೈಕೆ ಆರಂಭವಾಗಿದೆ ಮತ್ತು ಸುಮಾರು 5.1 ಲಕ್ಷ ಹೆಚ್ಚುವರಿ ಗ್ರಾಹಕರು ಹೊಸ ಸಂಪರ್ಕಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ.
• 15.04.26 ರವರೆಗೆ ಸುಮಾರು 35,000 PNG ಗ್ರಾಹಕರು MYPNGD.in ವೆಬ್‌ಸೈಟ್ ಮೂಲಕ ತಮ್ಮ LPG ಸಂಪರ್ಕಗಳನ್ನು ತ್ಯಜಿಸಿದ್ದಾರೆ.
ಕಚ್ಚಾ ತೈಲದ ಸ್ಥಿತಿ ಮತ್ತು ರಿಫೈನರಿ ಕಾರ್ಯಾಚರಣೆಗಳು
• ಎಲ್ಲಾ ರಿಫೈನರಿಗಳು (ತೈಲ ಸಂಸ್ಕರಣಾಗಾರಗಳು) ಸಾಕಷ್ಟು ಕಚ್ಚಾ ತೈಲ ದಾಸ್ತಾನಿನೊಂದಿಗೆ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್‌ನ ಸಮರ್ಪಕ ದಾಸ್ತಾನನ್ನು ಸಹ ಕಾಯ್ದುಕೊಳ್ಳಲಾಗುತ್ತಿದೆ.
• ದೇಶೀಯ ಬಳಕೆಯನ್ನು ಬೆಂಬಲಿಸಲು ರಿಫೈನರಿಗಳಿಂದ ಗೃಹ ಬಳಕೆಯ ಎಲ್‌ಪಿಜಿ (LPG) ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
• ದೇಶೀಯ ಮಾರುಕಟ್ಟೆಗೆ ಪೆಟ್ರೋಕೆಮಿಕಲ್ ಫೀಡ್ ಸ್ಟಾಕ್ ಪೂರೈಕೆಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಂತರ್-ಸಚಿವಾಲಯದ ಜಂಟಿ ಕಾರ್ಯಕಾರಿ ಗುಂಪನ್ನು (JWG) ಸ್ಥಾಪಿಸಲಾಗಿದೆ. ತರುವಾಯ, ಭಾರತ ಸರ್ಕಾರವು 01.04.2026 ರ ಆದೇಶದ ಮೂಲಕ, ತೈಲ ಸಂಸ್ಕರಣಾ ಕಂಪನಿಗಳು ಮತ್ತು ಪೆಟ್ರೋಕೆಮಿಕಲ್ ಸಂಕೀರ್ಣಗಳು ಸೆಂಟರ್ ಫಾರ್ ಹೈ ಟೆಕ್ನಾಲಜಿ (CHT) ನಿರ್ಧರಿಸಿದಂತೆ ನಿರ್ಣಾಯಕ ವಲಯಗಳಿಗೆ ಕನಿಷ್ಠ ಪ್ರಮಾಣದ C3 ಮತ್ತು C4 ಸ್ಟ್ರೀಮ್‌ಗಳನ್ನು ಲಭ್ಯವಾಗುವಂತೆ ಮಾಡಲು ಅನುಮತಿ ನೀಡಿದೆ.
• ಔಷಧೀಯ ಇಲಾಖೆ (DoP), ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಇಲಾಖೆ (DCPC), ಹಾಗೂ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಗಳ (DPIIT) ವಿನಂತಿಗಳ ಆಧಾರದ ಮೇಲೆ, ಫಾರ್ಮಾ ಮತ್ತು ರಾಸಾಯನಿಕ ವಲಯದ ಕಂಪನಿಗಳಿಗೆ ಎಲ್‌ಪಿಜಿ ಪೂಲ್‌ನಿಂದ ಪ್ರತಿದಿನ 1000 ಮೆಟ್ರಿಕ್ ಟನ್ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ.
• ಏಪ್ರಿಲ್ 9, 2026 ರಿಂದ ಈವರೆಗೆ ಸುಮಾರು 2000 ಮೆಟ್ರಿಕ್ ಟನ್ ಪ್ರೊಪಿಲೀನ್ (Propylene) ಮಾರಾಟವಾಗಿದೆ.
ಪೆಟ್ರೋಲ್/ಡೀಸೆಲ್ ಲಭ್ಯತೆ ಮತ್ತು ಬೆಲೆ ನಿಯಂತ್ರಣ ಕ್ರಮಗಳು
• ದೇಶಾದ್ಯಂತ ಇರುವ ಪೆಟ್ರೋಲ್ ಬಂಕ್ ಗಳು (Retail outlets) ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
• ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲದ ಬೆಲೆಯಲ್ಲಿ ಅಸಹಜ ಏರಿಕೆಯಾಗಿದೆ; ಆದರೂ, ಗ್ರಾಹಕರ ಹಿತರಕ್ಷಣೆಗಾಗಿ ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು (Excise duty) ಪ್ರತಿ ಲೀಟರ್ ಗೆ ₹10 ರಷ್ಟು ಕಡಿತಗೊಳಿಸಿದೆ.
• ದೇಶೀಯ ಮಾರುಕಟ್ಟೆಯಲ್ಲಿ ಇಂಧನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಭಾರತ ಸರ್ಕಾರವು 11.04.2026 ರ ಗೆಜೆಟ್ ಅಧಿಸೂಚನೆಯ ಮೂಲಕ ಡೀಸೆಲ್ ಮೇಲಿನ ರಫ್ತು ಸುಂಕವನ್ನು ಪ್ರತಿ ಲೀಟರ್‌ಗೆ ₹55.50 ಕ್ಕೆ ಮತ್ತು ಎಟಿಎಫ್ (ATF) ಮೇಲಿನ ಸುಂಕವನ್ನು ಪ್ರತಿ ಲೀಟರ್‌ಗೆ ₹42 ಕ್ಕೆ ಹೆಚ್ಚಿಸಿದೆ.
• ಪೆಟ್ರೋಲ್ ಮತ್ತು ಡೀಸೆಲ್‌ನ ಸಾಮಾನ್ಯ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಮತ್ತು ಸಾರ್ವಜನಿಕ ವಲಯದ ತೈಲ ಕಂಪನಿಗಳ (PSU OMCs) ಪೆಟ್ರೋಲ್ ಬಂಕ್‌ಗಳಲ್ಲಿ ಯಾವುದೇ ಬೆಲೆ ಏರಿಕೆ ಮಾಡಿಲ್ಲ.
ಸೀಮೆಎಣ್ಣೆ ಲಭ್ಯತೆ ಮತ್ತು ವಿತರಣಾ ಕ್ರಮಗಳು
• ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಿತ ಹಂಚಿಕೆಯ ಜೊತೆಗೆ ಹೆಚ್ಚುವರಿಯಾಗಿ 48,000 ಕೆಎಲ್ (KL) ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ.
• ಈಗಾಗಲೇ 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೀಮೆಎಣ್ಣೆ (SKO) ವಿತರಣಾ ಆದೇಶಗಳನ್ನು ಹೊರಡಿಸಿವೆ, ಆದರೆ ಹಿಮಾಚಲ ಪ್ರದೇಶ ಮತ್ತು ಲಡಾಖ್ ತಮಗೆ ಇದರ ಅಗತ್ಯವಿಲ್ಲ ಎಂದು ತಿಳಿಸಿವೆ.
ಕಡಲ ಸುರಕ್ಷತೆ ಮತ್ತು ಹಡಗು ಸಂಚಾರ ಕಾರ್ಯಾಚರಣೆಗಳು
ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಹಡಗುಗಳು ಮತ್ತು ನಾವಿಕರನ್ನು ರಕ್ಷಿಸಲು ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಚಿವಾಲಯವು ಈ ಕೆಳಗಿನಂತೆ ತಿಳಿಸಿದೆ:
• ನಾವಿಕರ ಕಲ್ಯಾಣ ಮತ್ತು ಅಡೆತಡೆಯಿಲ್ಲದ ಕಡಲ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಮಿಷನ್ ಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯವನ್ನು ಮುಂದುವರಿಸಿದೆ.
• ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊತ್ತ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
• ಡಿಜಿ ಶಿಪ್ಪಿಂಗ್ ನಿಯಂತ್ರಣ ಕೊಠಡಿಯು ಕಾರ್ಯಾರಂಭ ಮಾಡಿದಾಗಿನಿಂದ ಈವರೆಗೆ 6,580 ಕರೆಗಳು ಮತ್ತು 13,719 ಕ್ಕೂ ಹೆಚ್ಚು ಇ-ಮೇಲ್ ಗಳನ್ನು ನಿರ್ವಹಿಸಿದೆ. ಕಳೆದ 24 ಗಂಟೆಗಳಲ್ಲಿ 131 ಕರೆಗಳು ಮತ್ತು 276 ಇ-ಮೇಲ್ ಗಳನ್ನು ಸ್ವೀಕರಿಸಲಾಗಿದೆ.
• ಡಿಜಿ ಶಿಪ್ಪಿಂಗ್ ಈವರೆಗೆ ಕೊಲ್ಲಿ ಪ್ರದೇಶದ ವಿವಿಧ ಸ್ಥಳಗಳಿಂದ 2,417 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ಅನುಕೂಲ ಮಾಡಿಕೊಟ್ಟಿದೆ. ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಮರಳಿದ 80 ನಾವಿಕರು ಸೇರಿದ್ದಾರೆ.
• ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಾಮಾನ್ಯ ಸ್ಥಿತಿಯಲ್ಲಿದ್ದು, ಯಾವುದೇ ದಟ್ಟಣೆ (Congestion) ವರದಿಯಾಗಿಲ್ಲ.
ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ
ಕೊಲ್ಲಿ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ಬೆಳವಣಿಗೆಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಿರಂತರವಾಗಿ ಗಮನಿಸುತ್ತಿದ್ದು, ಆ ಭಾಗದಲ್ಲಿರುವ ಭಾರತೀಯ ಸಮುದಾಯದ ರಕ್ಷಣೆ, ಭದ್ರತೆ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಗಮನ ಹರಿಸುತ್ತಿದೆ. ಈ ಕುರಿತಾದ ಮಾಹಿತಿ ಹೀಗಿದೆ:
• ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಸ್ಥಾಪಿಸಲಾಗಿರುವ ವಿಶೇಷ ನಿಯಂತ್ರಣ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಇವು ಭಾರತೀಯ ರಾಯಭಾರಿ ಕಚೇರಿಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುತ್ತಿವೆ.
• ಮಾಹಿತಿ ಹಂಚಿಕೆ ಮತ್ತು ಪ್ರಯತ್ನಗಳ ಉತ್ತಮ ಹೊಂದಾಣಿಕೆಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.
• ಭಾರತೀಯ ರಾಯಭಾರಿ ಕಚೇರಿಗಳು ಮತ್ತು ದೂತಾವಾಸಗಳು ದಿನದ 24 ಗಂಟೆಯೂ ಸಹಾಯವಾಣಿಗಳನ್ನು ನಡೆಸುತ್ತಿವೆ ಮತ್ತು ಭಾರತೀಯ ಪ್ರಜೆಗಳಿಗೆ ಸಕ್ರಿಯವಾಗಿ ನೆರವಾಗುತ್ತಿವೆ. ಇವು ಸ್ಥಳೀಯ ಸರ್ಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ.
• ಸ್ಥಳೀಯ ಸರ್ಕಾರದ ಮಾರ್ಗಸೂಚಿಗಳು, ವಿಮಾನ ಪ್ರಯಾಣದ ಸ್ಥಿತಿಗತಿಗಳು, ಕಾನ್ಸುಲರ್ ಸೇವೆಗಳು ಮತ್ತು ಭಾರತೀಯ ಸಮುದಾಯಕ್ಕೆ ನೀಡಲಾಗುತ್ತಿರುವ ವಿವಿಧ ಕಲ್ಯಾಣ ಕ್ರಮಗಳ ಕುರಿತು ನಿಯಮಿತವಾಗಿ ಪರಿಷ್ಕೃತ ಸಲಹೆಗಳನ್ನು ನೀಡಲಾಗುತ್ತಿದೆ.
• ಈ ಪ್ರದೇಶದಲ್ಲಿರುವ ವಿವಿಧ ಸಂಘ-ಸಂಸ್ಥೆಗಳು, ವೃತ್ತಿಪರ ಗುಂಪುಗಳು, ಭಾರತೀಯ ಕಂಪನಿಗಳು ಮತ್ತು ಇತರ ಪಾಲುದಾರರೊಂದಿಗೆ ನಮ್ಮ ರಾಯಭಾರಿ ಕಚೇರಿಗಳು ಸಕ್ರಿಯವಾಗಿ ತೊಡಗಿಸಿಕೊಂಡಿವೆ.
• ಈ ಭಾಗದ ಹಡಗುಗಳಲ್ಲಿರುವ ಭಾರತೀಯ ಸಿಬ್ಬಂದಿಗೆ ಸ್ಥಳೀಯ ಅಧಿಕಾರಿಗಳು ಮತ್ತು ಏಜೆನ್ಸಿಗಳ ಸಮನ್ವಯದೊಂದಿಗೆ ಎಲ್ಲಾ ರೀತಿಯ ಸಹಾಯ, ಕಾನ್ಸುಲರ್ ನೆರವು ಮತ್ತು ಭಾರತಕ್ಕೆ ಮರಳಲು ಬಯಸುವವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
• ವಾಯುಪ್ರದೇಶ ಮುಕ್ತವಾಗಿರುವ ದೇಶಗಳಿಂದ ವಿಮಾನಗಳು ಕಾರ್ಯಾಚರಣೆಯನ್ನು ಮುಂದುವರಿಸಿವೆ. ಫೆಬ್ರವರಿ 28 ರಿಂದ ಈವರೆಗೆ ಸುಮಾರು 10,10,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಪ್ರಯಾಣಿಸಿದ್ದಾರೆ.
• ಯುಎಇ (UAE) ನಲ್ಲಿ, ಕಾರ್ಯಾಚರಣೆ ಮತ್ತು ಸುರಕ್ಷತೆಯ ಆಧಾರದ ಮೇಲೆ ಏರ್ ಲೈನ್ಸ್ ಗಳು ಸೀಮಿತ ಸಂಖ್ಯೆಯ ವಾಣಿಜ್ಯೇತರ ವಿಮಾನಗಳನ್ನು ಭಾರತಕ್ಕೆ ನಡೆಸುತ್ತಿವೆ. ಇಂದು ಯುಎಇ ಮತ್ತು ಭಾರತದ ನಡುವೆ ಸುಮಾರು 100 ವಿಮಾನಗಳು ಸಂಚರಿಸುವ ನಿರೀಕ್ಷೆಯಿದೆ.
• ಸೌದಿ ಅರೇಬಿಯಾ ಮತ್ತು ಓಮನ್‌ನ ವಿವಿಧ ವಿಮಾನ ನಿಲ್ದಾಣಗಳಿಂದ ಭಾರತದ ನಗರಗಳಿಗೆ ವಿಮಾನ ಸಂಚಾರ ಮುಂದುವರಿದಿದೆ.
• ಕತಾರ್ ವಾಯುಪ್ರದೇಶ ಭಾಗಶಃ ಮುಕ್ತವಾಗಿದ್ದು, ಕತಾರ್ ಏರ್ವೇಸ್ ಇಂದು ಭಾರತಕ್ಕೆ ಸುಮಾರು 10 ವಿಮಾನಗಳನ್ನು ನಡೆಸುವ ನಿರೀಕ್ಷೆಯಿದೆ.
• ಕುವೈತ್ ವಾಯುಪ್ರದೇಶ ಮುಚ್ಚಲ್ಪಟ್ಟಿದೆ. ಜಜೀರಾ ಏರ್‌ವೇಸ್ ಮತ್ತು ಕುವೈತ್ ಏರ್‌ವೇಸ್ ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ವಾಣಿಜ್ಯೇತರ ವಿಮಾನಗಳನ್ನು ಓಡಿಸುತ್ತಿವೆ.
• ಬಹ್ರೇನ್ ವಾಯುಪ್ರದೇಶ ಮುಕ್ತವಾಗಿದೆ. ಗಲ್ಫ್ ಏರ್ ಸೀಮಿತ ವಿಮಾನ ಕಾರ್ಯಾಚರಣೆಯನ್ನು ಯೋಜಿಸುತ್ತಿದ್ದು, ಪ್ರಸ್ತುತ ಸೌದಿ ಅರೇಬಿಯಾದ ದಮ್ಮಾಮ್ ಮೂಲಕ ಭಾರತದ ವಿವಿಧ ನಗರಗಳಿಗೆ ವಿಮಾನಯಾನ ಒದಗಿಸುತ್ತಿದೆ.
• ಇರಾಕ್ ವಾಯುಪ್ರದೇಶ ಮುಕ್ತವಾಗಿದ್ದು, ಭಾರತಕ್ಕೆ ತೆರಳುವ ಪ್ರಯಾಣಿಕರಿಗಾಗಿ ಈ ಪ್ರದೇಶದ ಇತರ ನಗರಗಳ ಮೂಲಕ ಸೀಮಿತ ವಿಮಾನಯಾನ ಲಭ್ಯವಿದೆ.
• ಟೆಹ್ರಾನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಈವರೆಗೆ 2,348 ಭಾರತೀಯರನ್ನು ಇರಾನ್ ನಿಂದ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಭಾರತಕ್ಕೆ ಮರಳಲು ಅನುಕೂಲ ಮಾಡಿಕೊಟ್ಟಿದೆ. ಇದರಲ್ಲಿ 1,031 ವಿದ್ಯಾರ್ಥಿಗಳು ಮತ್ತು 657 ಮೀನುಗಾರರು ಸೇರಿದ್ದಾರೆ
• ಇಸ್ರೇಲ್ ವಾಯುಪ್ರದೇಶ ಭಾಗಶಃ ಮುಕ್ತವಾಗಿದ್ದು, ವಿಮಾನ ಸಂಚಾರಕ್ಕೆ ನಿರ್ಬಂಧಗಳಿವೆ. ಭಾರತೀಯ ಪ್ರಜೆಗಳು ಜೋರ್ಡಾನ್ ಮತ್ತು ಈಜಿಪ್ಟ್ ಮೂಲಕ ಭಾರತಕ್ಕೆ ಮರಳಲು ವ್ಯವಸ್ಥೆ ಮಾಡಲಾಗುತ್ತಿದೆ.
*****
(ಪ್ರಕಟಣೆ ಐ.ಡಿ.: 2252772)
ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Bengali
,
Gujarati
,
Odia
,
Tamil
,
Telugu
,
Malayalam