ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪ್ರಮುಖ ವಲಯಗಳ ಕುರಿತು ಮಾಹಿತಿ


ನಾಗರಿಕರು ಎಲ್‌ ಪಿ ಜಿ ಸಿಲಿಂಡರ್‌ ಗಳ ಬುಕಿಂಗ್‌ ಗಾಗಿ ಡಿಜಿಟಲ್ ವಿಧಾನಗಳನ್ನು ಬಳಸುವಂತೆ ಮತ್ತು ಅಗತ್ಯವಿಲ್ಲದಿದ್ದಲ್ಲಿ ವಿತರಕರ ಬಳಿ ಭೇಟಿ ನೀಡದಂತೆ ಸಲಹೆ ನೀಡಲಾಗಿದೆ

ಅಕ್ರಮ ಸಾಗಾಟ ತಡೆಯಲು ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ಆಧಾರಿತ ಎಲ್‌ ಪಿ ಜಿ ವಿತರಣೆಯು 2026ರ ಫೆಬ್ರವರಿಯಲ್ಲಿದ್ದ ಶೇ. 53 ರಿಂದ ನಿನ್ನೆ ಶೇ. 90 ಕ್ಕೆ ಏರಿಕೆಯಾಗಿದೆ.

ವಿಳಾಸ ಪುರಾವೆ ಇಲ್ಲದೆಯೇ 5 ಕೆಜಿ ಎಫ್‌ ಟಿ ಎಲ್  ಸಿಲಿಂಡರ್‌ ಗಳ ಸುಲಭ ಲಭ್ಯತೆ; ನಿನ್ನೆ 90,000 ಕ್ಕೂ ಹೆಚ್ಚು ಸಿಲಿಂಡರ್‌ ಗಳು  ಮಾರಾಟವಾಗಿವೆ

ಪಿ ಎನ್‌ ಜಿ ವಿಸ್ತರಣೆಯು ವೇಗವನ್ನು ಪಡೆದುಕೊಂಡಿದ್ದು, ಮಾರ್ಚ್ 2026 ರಿಂದೀಚೆಗೆ 3.6 ಲಕ್ಷ ಸಂಪರ್ಕಗಳಿಗೆ ಅನಿಲ ಪೂರೈಕೆ ಮಾಡಲಾಗಿದೆ ಮತ್ತು 3.9 ಲಕ್ಷಕ್ಕೂ ಹೆಚ್ಚು ಹೊಸ ನೋಂದಣಿಗಳಾಗಿವೆ

ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ; ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊತ್ತ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ

ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜ ಸ್ಥಿತಿಯಲ್ಲಿವೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ಬದಲಾಗುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ

ವಿಮಾನ ಹಾರಾಟ ಪರಿಸ್ಥಿತಿಯು ಸುಧಾರಿಸುತ್ತಿದೆ; ಫೆಬ್ರವರಿ 28 ರಿಂದ 7,02,000 ಕ್ಕೂ ಹೆಚ್ಚು ಪ್ರಯಾಣಿಕರು ಭಾರತಕ್ಕೆ ಮರಳಿದ್ದಾರೆ

ಪ್ರಕಟಣಾ ದಿನಾಂಕ: 05 APR 2026 2:38PM by PIB Bengaluru

ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಪ್ರಮುಖ ವಲಯಗಳಲ್ಲಿ ಸನ್ನದ್ಧತೆ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇಂಧನ ಪೂರೈಕೆ, ಕಡಲ ಕಾರ್ಯಾಚರಣೆಗಳು ಮತ್ತು ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ನೆರವು ನೀಡುವ ಕ್ಷೇತ್ರಗಳಲ್ಲಿ ಕೈಗೊಳ್ಳಲಾದ ಕ್ರಮಗಳ ವಿವರಗಳು ಇಲ್ಲಿವೆ:

ಇಂಧನ ಪೂರೈಕೆ ಮತ್ತು ಇಂಧನ ಲಭ್ಯತೆ

ಹಾರ್ಮುಜ್ ಜಲಸಂಧಿ ಸೇರಿದಂತೆ ಉದ್ಭವಿಸುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ ಜಿಯ ಸುಗಮ ಮತ್ತು ಅಡೆತಡೆಯಿಲ್ಲದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸಚಿವಾಲಯದ ಪ್ರಕಾರ:

ಸಾರ್ವಜನಿಕ ಸಲಹೆ ಮತ್ತು ನಾಗರಿಕರ ಜಾಗೃತಿ

  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ನಾಗರಿಕರು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಗಾಬರಿಯಿಂದ ಖರೀದಿಸುವುದನ್ನು ಹಾಗೂ ಎಲ್‌ ಪಿ ಜಿಯ ಅನಗತ್ಯ ಬುಕಿಂಗ್ ಮಾಡುವುದನ್ನು ತಪ್ಪಿಸುವಂತೆ ಸಲಹೆ ನೀಡಲಾಗಿದೆ.
  • ನಾಗರಿಕರು ವದಂತಿಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಸರಿಯಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಬೇಕು ಎಂದು ಸೂಚಿಸಲಾಗಿದೆ.
  • ಎಲ್‌ ಪಿ ಜಿಗಾಗಿ, ನಾಗರಿಕರು ಸಿಲಿಂಡರ್‌ ಗಳ ಬುಕಿಂಗ್ ಮಾಡಲು ಡಿಜಿಟಲ್ ವಿಧಾನಗಳನ್ನು ಬಳಸುವಂತೆ ಮತ್ತು ಅಗತ್ಯವಿದ್ದಲ್ಲಿ ಮಾತ್ರ ಎಲ್‌ ಪಿ ಜಿ ವಿತರಕರನ್ನು ಭೇಟಿ ಮಾಡುವಂತೆ ವಿನಂತಿಸಲಾಗಿದೆ.
  • ಸಾಧ್ಯವಿರುವ ಕಡೆ ಪಿ ಎನ್‌ ಜಿ, ಇಂಡಕ್ಷನ್ ಮತ್ತು ಎಲೆಕ್ಟ್ರಿಕ್ ಕುಕ್‌ಟಾಪ್‌ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತಿದೆ.
  • ಪ್ರಸ್ತುತ ಪರಿಸ್ಥಿತಿಯಲ್ಲಿ, ಎಲ್ಲಾ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಉಳಿಸಲು ಅಗತ್ಯ ಪ್ರಯತ್ನಗಳನ್ನು ಮಾಡಲು ವಿನಂತಿಸಲಾಗಿದೆ.

ಸರ್ಕಾರದ ಸನ್ನದ್ಧತೆ ಮತ್ತು ಪೂರೈಕೆ ನಿರ್ವಹಣಾ ಕ್ರಮಗಳು

  • ಈ ಯುದ್ಧದ ಪರಿಸ್ಥಿತಿಯ ಹೊರತಾಗಿಯೂ, ಸರ್ಕಾರವು ಗೃಹಬಳಕೆಯ ಎಲ್‌ ಪಿ ಜಿ ಮತ್ತು ಪಿ ಎನ್‌ ಜಿಗೆ ಅತ್ಯುನ್ನತ ಆದ್ಯತೆಯನ್ನು ನೀಡಿದೆ, ಜೊತೆಗೆ ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ.
  • ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಸರ್ಕಾರವು ಈಗಾಗಲೇ ಹಲವಾರು ತರ್ಕಬದ್ಧ ಕ್ರಮಗಳನ್ನು ಜಾರಿಗೊಳಿಸಿದೆ. ಇದರಲ್ಲಿ ಸಂಸ್ಕರಣಾಗಾರ ಉತ್ಪಾದನೆಯನ್ನು ಹೆಚ್ಚಿಸುವುದು, ನಗರ ಪ್ರದೇಶಗಳಲ್ಲಿ ಬುಕಿಂಗ್ ಅವಧಿಯನ್ನು 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ಆದ್ಯತೆಯ ವಲಯಗಳನ್ನು ಗುರುತಿಸುವುದು ಸೇರಿದೆ.
  • ಎಲ್‌ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನ ಆಯ್ಕೆಗಳನ್ನು ನೀಡಲಾಗಿದೆ.
  • ರಾಜ್ಯಗಳಿಗೆ ಸಣ್ಣ, ಮಧ್ಯಮ ಮತ್ತು ಇತರ ಗ್ರಾಹಕರಿಗೆ ವಿತರಿಸಲು ಹೆಚ್ಚಿನ ಪ್ರಮಾಣದ ಕಲ್ಲಿದ್ದಲನ್ನು ಹಂಚಿಕೆ ಮಾಡುವಂತೆ ಕಲ್ಲಿದ್ದಲು ಸಚಿವಾಲಯವು ಈಗಾಗಲೇ ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲಿಯರೀಸ್‌ ಗೆ ಆದೇಶ ನೀಡಿದೆ.
  • ಗೃಹಬಳಕೆ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ ಪಿ ಎನ್‌ ಜಿ ಸಂಪರ್ಕಗಳನ್ನು ಕಲ್ಪಿಸಲು ಅನುಕೂಲ ಮಾಡಿಕೊಡುವಂತೆ ರಾಜ್ಯಗಳಿಗೆ ಸಲಹೆ ನೀಡಲಾಗಿದೆ.
  • ಇತ್ತೀಚೆಗೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಯವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ (ಆಹಾರ ಮತ್ತು ನಾಗರಿಕ ಸರಬರಾಜು) ಸಭೆ ನಡೆಸಿ ಇಂಧನ ಪೂರೈಕೆ ಪರಿಸ್ಥಿತಿಯನ್ನು ಪರಾಮರ್ಶಿಸಿದರು. ಗೃಹಬಳಕೆ ಮತ್ತು ಅನಿವಾರ್ಯ ಅಗತ್ಯಗಳಿಗಾಗಿ ಎಲ್‌ ಪಿ ಜಿ ವಿತರಣೆಗೆ ಆದ್ಯತೆ ನೀಡುವಂತೆ ಮತ್ತು ಕಾಳಸಂತೆ ಮಾರಾಟ, ಅಕ್ರಮ ಸಾಗಾಟ ಮತ್ತು ತಪ್ಪು ಮಾಹಿತಿಯ ವಿರುದ್ಧ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ರಾಜ್ಯಗಳಿಗೆ ನಿರ್ದೇಶಿಸಲಾಯಿತು. ವಲಸೆ ಕಾರ್ಮಿಕರಿಗೆ 5 ಕೆಜಿ ಎಫ್‌ ಟಿ ಎಲ್ ಎಲ್‌ ಪಿ ಜಿ ಪೂರೈಕೆಯ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ, ವಲಸೆ ಕಾರ್ಮಿಕರ ಮೇಲೆ ಪರಿಣಾಮ ಬೀರುವ ಎಲ್‌ ಪಿ ಜಿ ಪೂರೈಕೆಯಲ್ಲಿ ಯಾವುದೇ ಅಡೆತಡೆಯಿಲ್ಲ ಮತ್ತು ಪೂರೈಕೆ ಸ್ಥಿರವಾಗಿದೆ ಎಂದು ರಾಜ್ಯಗಳು ಸ್ಪಷ್ಟಪಡಿಸಿವೆ. ತೈಲ ಕಂಪನಿಗಳೊಂದಿಗೆ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ 5 ಕೆಜಿ ಎಫ್‌ ಟಿ ಎಲ್  ಎಲ್‌ ಪಿ ಜಿ ಸಿಲಿಂಡರ್‌ ಗಳ ಉದ್ದೇಶಿತ ವಿತರಣೆಯನ್ನು ನಿರ್ವಹಿಸುವ ಬಗ್ಗೆ ರಾಜ್ಯಗಳು ಪರಿಗಣಿಸಬಹುದು ಎಂದು ಕಾರ್ಯದರ್ಶಿಯವರು ತಿಳಿಸಿದರು.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಂಘಟಿತ ಪ್ರಯತ್ನಗಳು ಮತ್ತು ಸಾಂಸ್ಥಿಕ ಕಾರ್ಯವಿಧಾನಗಳು

  • ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್‌ ಪಿ ಜಿ ನಿಯಂತ್ರಣ ಆದೇಶ, 2000 ಅಡಿಯಲ್ಲಿ, ಯಾವುದೇ ಕಾಳಸಂತೆ ಮಾರಾಟ ಮತ್ತು ಅಕ್ರಮ ದಾಸ್ತಾನು ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರವನ್ನು ವಹಿಸಬೇಕಾಗುತ್ತದೆ. ಭಾರತ ಸರ್ಕಾರವು ಈ ಬಗ್ಗೆ ಹಲವಾರು ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್‌ ಗಳ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪುನರುಚ್ಚರಿಸಿದೆ.
  • ಎಲ್ಲಾ ಮುಖ್ಯ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿಗಳು/ಆಹಾರ ಮತ್ತು ನಾಗರಿಕ ಸರಬರಾಜು ಕಾರ್ಯದರ್ಶಿಗಳಿಗೆ ಈ ಕೆಳಗಿನಂತೆ ವಿನಂತಿಸಲಾಗಿದೆ:
  • ರಾಜ್ಯ/ಜಿಲ್ಲಾ ಮಟ್ಟದಲ್ಲಿ ಪ್ರತಿದಿನ ಪತ್ರಿಕಾಗೋಷ್ಠಿಗಳನ್ನು ನಡೆಸಬೇಕು ಮತ್ತು ನಿಯಮಿತ ಸಾರ್ವಜನಿಕ ಸಲಹೆಗಳನ್ನು ನೀಡಬೇಕು.
  • ಮೀಸಲಾದ ನಿಯಂತ್ರಣ ಕೊಠಡಿಗಳು/ಹೆಲ್ಪ್‌ಲೈನ್‌ಗಳನ್ನು ಸ್ಥಾಪಿಸಬೇಕು.
  • ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ/ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ತಡೆಯಬೇಕು.
  • ಜಿಲ್ಲಾಡಳಿತದಿಂದ ದೈನಂದಿನ ಜಾರಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲು ಮತ್ತು ತೈಲ ಕಂಪನಿಗಳೊಂದಿಗೆ ಸಮನ್ವಯದೊಂದಿಗೆ ದಾಳಿ ಮತ್ತು ತಪಾಸಣೆಗಳನ್ನು ಮುಂದುವರಿಸಬೇಕು.
  • ಅವರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಎಲ್‌ ಪಿ ಜಿ ಹಂಚಿಕೆ ಆದೇಶಗಳನ್ನು ಹೊರಡಿಸಬೇಕು.
  • ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾದ ಹೆಚ್ಚುವರಿ ಸೀಮೆಎಣ್ಣೆಗಾಗಿ ಹಂಚಿಕೆ ಆದೇಶಗಳನ್ನು ಹೊರಡಿಸಬೇಕು.
  • ಸಿಜಿಡಿ ವಿಸ್ತರಣೆಯನ್ನು ತ್ವರಿತಗೊಳಿಸಲು, RoW/RoU ಅನುಮತಿಗಳು, 24x7 ಕೆಲಸದ ಅನುಮತಿಗಳು ಇತ್ಯಾದಿಗಳನ್ನು ಶೀಘ್ರವಾಗಿ ನೀಡಬೇಕು.
  • ಪಿ ಎನ್‌ ಜಿ ಅಳವಡಿಕೆ ಮತ್ತು ಪರ್ಯಾಯ ಇಂಧನಗಳನ್ನು ಉತ್ತೇಜಿಸಬೇಕು.
  • ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದೊಂದಿಗೆ ಸಮನ್ವಯಕ್ಕಾಗಿ ಹಿರಿಯ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು.
  • ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಅಕ್ರಮ ದಾಸ್ತಾನು/ಕಾಳಸಂತೆ ಮಾರಾಟದ ಪ್ರಕರಣಗಳನ್ನು ತಡೆಯಲು ನಿಯಂತ್ರಣ ಕೊಠಡಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಮಿತಿಗಳನ್ನು ಸ್ಥಾಪಿಸಿವೆ.
  • ಭಾರತ ಸರ್ಕಾರವು 27.03.2026 ಮತ್ತು 02.04.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಕ್ರಿಯ ಮತ್ತು ನಿಯಮಿತ ಸಾರ್ವಜನಿಕ ಸಂವಹನವನ್ನು ತೀವ್ರಗೊಳಿಸಲು, ಹಿರಿಯ ಮಟ್ಟದಲ್ಲಿ ದೈನಂದಿನ ಪತ್ರಿಕಾಗೋಷ್ಠಿಗಳನ್ನು ನಡೆಸಲು ಮತ್ತು ಸಾಮಾಜಿಕ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ನಿಖರವಾದ ಮಾಹಿತಿಯನ್ನು ಸಮಯೋಚಿತವಾಗಿ ಪ್ರಸಾರ ಮಾಡಲು ವಿನಂತಿಸಿದೆ. ಇದು ತಪ್ಪು ಮಾಹಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಮತ್ತು ಎಲ್‌ ಪಿ ಜಿಯ ಸಮರ್ಪಕ ಲಭ್ಯತೆ ಮತ್ತು ಸುಗಮ ವಿತರಣೆಯ ಬಗ್ಗೆ ನಾಗರಿಕರಿಗೆ ಭರವಸೆ ನೀಡಲು ಸಹಕಾರಿಯಾಗಿದೆ.
  • ಪ್ರಸ್ತುತ, 22 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.

ಜಾರಿ ಮತ್ತು ಮೇಲ್ವಿಚಾರಣಾ ಕ್ರಮಗಳು

  • ಎಲ್‌ ಪಿ ಜಿ ಅಕ್ರಮ ದಾಸ್ತಾನು ಮತ್ತು ಕಾಳಸಂತೆ ಮಾರಾಟವನ್ನು ತಡೆಯಲು ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿಗಳು ಮುಂದುವರಿದಿವೆ. ಮಾರ್ಚ್‌ನಿಂದ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಾರ್ವಜನಿಕ ವಲಯದ ತೈಲ ಕಂಪನಿಗಳ ಜಂಟಿ ತಂಡಗಳು 50,000 ಕ್ಕೂ ಹೆಚ್ಚು ಸಿಲಿಂಡರ್‌ ಗಳನ್ನು ವಶಪಡಿಸಿಕೊಂಡಿವೆ.
  • ಅಕ್ರಮ ದಾಸ್ತಾನು/ಕಾಳಸಂತೆ ಮಾರಾಟದ ಯಾವುದೇ ನಿದರ್ಶನಗಳನ್ನು ತಡೆಯಲು ಆಕಸ್ಮಿಕ ತಪಾಸಣೆಯ ವ್ಯವಸ್ಥೆಯನ್ನು ಬಲಪಡಿಸಲು ಸಾರ್ವಜನಿಕ ವಲಯದ ತೈಲ ಕಂಪನಿಗಳ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
  • ಸಾರ್ವಜನಿಕ ವಲಯದ ತೈಲ ಕಂಪನಿಗಳು ಇಲ್ಲಿಯವರೆಗೆ ಎಲ್‌ ಪಿ ಜಿ ವಿತರಕರಿಗೆ 1400 ಕ್ಕೂ ಹೆಚ್ಚು ಶೋಕಾಸ್ ನೋಟಿಸ್‌ ಗಳನ್ನು ನೀಡಿವೆ. ಇದಲ್ಲದೆ, ಇಲ್ಲಿಯವರೆಗೆ 36 ಎಲ್‌ ಪಿ ಜಿ ವಿತರಣಾ ಏಜೆನ್ಸಿಗಳನ್ನು ಅಮಾನತುಗೊಳಿಸಲಾಗಿದೆ.

ಎಲ್ಪಿ ಜಿ ಪೂರೈಕೆ

ಗೃಹಬಳಕೆಯ ಎಲ್ಪಿ ಜಿ ಪೂರೈಕೆ ಸ್ಥಿತಿ:

  • ಎಲ್‌ ಪಿ ಜಿ ವಿತರಣಾ ಕೇಂದ್ರಗಳಲ್ಲಿ ಯಾವುದೇ ದಾಸ್ತಾನು ಖಾಲಿಯಾದ ವರದಿಯಾಗಿಲ್ಲ.
  • ನಿನ್ನೆ ಉದ್ಯಮದಾದ್ಯಂತ ಆನ್‌ಲೈನ್ ಎಲ್‌ ಪಿ ಜಿ ಸಿಲಿಂಡರ್ ಬುಕಿಂಗ್ ಶೇ. 95 ಕ್ಕೆ ಏರಿದೆ.
  • ವಿತರಕರ ಮಟ್ಟದಲ್ಲಿ ಅಕ್ರಮ ಸಾಗಾಟ ತಡೆಯಲು, ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ಆಧಾರಿತ ವಿತರಣೆಗಳನ್ನು ಫೆಬ್ರವರಿ-2026 ರಲ್ಲಿದ್ದ ಶೇ. 53 ರಿಂದ ನಿನ್ನೆ ಶೇ. 90 ಕ್ಕೆ ಹೆಚ್ಚಿಸಲಾಗಿದೆ.
  • ನಿನ್ನೆ 51 ಲಕ್ಷಕ್ಕೂ ಹೆಚ್ಚು ಗೃಹಬಳಕೆಯ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ವಿತರಿಸಲಾಗಿದೆ.

ವಾಣಿಜ್ಯ ಎಲ್ಪಿ ಜಿ ಪೂರೈಕೆ ಮತ್ತು ಹಂಚಿಕೆ ಕ್ರಮಗಳು:

  • ಭಾರತ ಸರ್ಕಾರವು 01.04.2026 ರ ಆದೇಶದ ಮೂಲಕ ಪೆಟ್ರೋಕೆಮಿಕಲ್ ಸಂಕೀರ್ಣಗಳು ಸೇರಿದಂತೆ ಸಂಸ್ಕರಣಾ ಕಂಪನಿಗಳಿಗೆ ಔಷಧೀಯ ಇಲಾಖೆ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಇಲಾಖೆ ಇತ್ಯಾದಿ ನಿರ್ಣಾಯಕ ವಲಯಗಳಿಗೆ ಅಗತ್ಯವಿರುವ ಕನಿಷ್ಠ ಪ್ರಮಾಣದ ಸಿ3 ಮತ್ತು ಸಿ4 ಸ್ಟ್ರೀಮ್‌ ಗಳನ್ನು ಲಭ್ಯವಾಗುವಂತೆ ಮಾಡಲು ಅನುಮತಿ ನೀಡಿದೆ.
  • ಬಿಕ್ಕಟ್ಟಿನ ಪೂರ್ವದ ಮಟ್ಟದ ಶೇ. 70 ರಷ್ಟು ಒಟ್ಟು ವಾಣಿಜ್ಯ ಹಂಚಿಕೆಯನ್ನು ಹಂಚಿಕೆ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ (ಇದರಲ್ಲಿ ಶೇ. 10 ರಷ್ಟು ಸುಧಾರಣೆ ಆಧಾರಿತವಾಗಿದೆ).
  • ನಿನ್ನೆ, 90,000 ಕ್ಕೂ ಹೆಚ್ಚು - 5 ಕೆಜಿ ಎಫ್‌ ಟಿ ಎಲ್  ಸಿಲಿಂಡರ್‌ ಗಳು  ಮಾರಾಟವಾಗಿವೆ.
  • 2026 ರ ಮಾರ್ಚ್ 23 ರಿಂದ, ಸುಮಾರು 6.6 ಲಕ್ಷ - 5 ಕೆಜಿ ಎಫ್‌ ಟಿ ಎಲ್  ಸಿಲಿಂಡರ್‌ ಗಳು  ಮಾರಾಟವಾಗಿವೆ.
  • 5 ಕೆಜಿ ಎಫ್‌ ಟಿ ಎಲ್  ಸಿಲಿಂಡರ್‌ ಗಳು  ಹತ್ತಿರದ ಎಲ್‌ ಪಿ ಜಿ ವಿತರಣಾ ಕೇಂದ್ರಗಳಲ್ಲಿ ಲಭ್ಯವಿದ್ದು, ಯಾವುದೇ ಮಾನ್ಯ ಗುರುತಿನ ಚೀಟಿಗಳನ್ನು ತೋರಿಸಿ ಖರೀದಿಸಬಹುದು. ಯಾವುದೇ ವಿಳಾಸ ಪುರಾವೆ ಅಗತ್ಯವಿಲ್ಲ.
  • ಐಒಸಿಎಲ್, ಎಚ್‌ ಪಿ ಸಿ ಎಲ್ ಮತ್ತು ಬಿಪಿಸಿಎಲ್ ನ ಕಾರ್ಯನಿರ್ವಾಹಕ ನಿರ್ದೇಶಕರ ಮೂವರು ಸದಸ್ಯರ ಸಮಿತಿಯು ರಾಜ್ಯ ಅಧಿಕಾರಿಗಳು ಮತ್ತು ಉದ್ಯಮ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಎಲ್‌ ಪಿ ಜಿ ಮಾರಾಟದ ಯೋಜನೆಯನ್ನು ಅಂತಿಮಗೊಳಿಸುತ್ತದೆ.
  • 2026 ರ ಮಾರ್ಚ್ 14 ರಿಂದ ಒಟ್ಟು 78,833 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ ಪಿ ಜಿಯನ್ನು ಮಾರಾಟ ಮಾಡಲಾಗಿದೆ.

ನೈಸರ್ಗಿಕ ಅನಿಲ ಪೂರೈಕೆ ಮತ್ತು ಪಿ ಎನ್ಜಿ ವಿಸ್ತರಣೆ ಉಪಕ್ರಮಗಳು

  • ಡಿ-ಪಿ ಎನ್‌ ಜಿ ಮತ್ತು ಸಿ ಎನ್‌ ಜಿ-ಸಾರಿಗೆ ಗ್ರಾಹಕರಿಗೆ ಆದ್ಯತೆ ನೀಡಲಾಗಿದ್ದು, ಇವರಿಗೆ ಶೇ. 100 ರಷ್ಟು ಪೂರೈಕೆ ಮಾಡಲಾಗುತ್ತಿದೆ.
  • ಕಾರ್ಯಾಚರಣೆಯಲ್ಲಿರುವ ಯೂರಿಯಾ ಘಟಕಗಳಿಗೆ ಪೂರೈಕೆಯು ಕಳೆದ 6 ತಿಂಗಳ ಸರಾಸರಿ ಬಳಕೆಯ ಶೇ. 70-75 ರಷ್ಟಿದೆ. ಲಭ್ಯವಿರುವ ದಾಸ್ತಾನು ಮತ್ತು ನಿಗದಿತ ಎಲ್‌ ಎನ್‌ ಜಿ ಕಾರ್ಗೋ ಆಗಮನವನ್ನು ಗಮನದಲ್ಲಿಟ್ಟುಕೊಂಡು, ರಸಗೊಬ್ಬರ ಘಟಕಗಳಿಗೆ ಲಭ್ಯವಿರುವ ಒಟ್ಟು ಅನಿಲ ಪೂರೈಕೆಯನ್ನು 06.04.2026 ರಿಂದ ಜಾರಿಗೆ ಬರುವಂತೆ ಅವುಗಳ ಹಿಂದಿನ ಆರು ತಿಂಗಳ ಸರಾಸರಿ ಬಳಕೆಯ ಸುಮಾರು ಶೇ. 90 ಕ್ಕೆ ಹೆಚ್ಚಿಸಲಾಗುವುದು. ಹೆಚ್ಚುವರಿಯಾಗಿ, ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (ಸಿಜಿಡಿ) ನೆಟ್‌ವರ್ಕ್‌ ಗಳ ಮೂಲಕ ಪೂರೈಕೆ ಸೇರಿದಂತೆ ಇತರ ಕೈಗಾರಿಕಾ ಮತ್ತು ವಾಣಿಜ್ಯ ವಲಯಗಳಿಗೆ ಅನಿಲ ಪೂರೈಕೆಯನ್ನು 06.04.2026 ರಿಂದ ಜಾರಿಗೆ ಬರುವಂತೆ ಮತ್ತಷ್ಟು ಶೇ. 10 ರಷ್ಟು ಹೆಚ್ಚಿಸಲಾಗುವುದು.
  • ವಾಣಿಜ್ಯ ಎಲ್‌ ಪಿ ಜಿ ಲಭ್ಯತೆಯ ಬಗ್ಗೆ ಇರುವ ಕಳವಳಗಳನ್ನು ಹೋಗಲಾಡಿಸಲು ಎಲ್ಲಾ ಭೌಗೋಳಿಕ ಪ್ರದೇಶಗಳಲ್ಲಿನ ರೆಸ್ಟೋರೆಂಟ್‌ ಗಳು, ಹೋಟೆಲ್‌ ಗಳು ಮತ್ತು ಕ್ಯಾಂಟೀನ್‌ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್‌ ಜಿ ಸಂಪರ್ಕಗಳಿಗೆ ಆದ್ಯತೆ ನೀಡುವಂತೆ ಭಾರತ ಸರ್ಕಾರವು ಸಿಜಿಡಿ ಸಂಸ್ಥೆಗಳಿಗೆ ಸಲಹೆ ನೀಡಿದೆ.
  • ಐಜಿಎಲ್, ಎಂಜಿಎಲ್, ಗೇಲ್ ಗ್ಯಾಸ್ ಮತ್ತು ಬಿಪಿಸಿಎಲ್ ನಂತಹ ಸಿಜಿಡಿ ಕಂಪನಿಗಳು ಗೃಹಬಳಕೆ ಮತ್ತು ವಾಣಿಜ್ಯ ಪಿ ಎನ್‌ ಜಿ ಸಂಪರ್ಕಗಳನ್ನು ಪಡೆಯಲು ಪ್ರೋತ್ಸಾಹಕಗಳನ್ನು ನೀಡಿವೆ.
  • ಸಿಜಿಡಿ ನೆಟ್‌ವರ್ಕ್ ವಿಸ್ತರಣೆಗೆ ಅಗತ್ಯವಿರುವ ಅರ್ಜಿಗಳ ಅನುಮೋದನೆಯನ್ನು ತ್ವರಿತಗೊಳಿಸುವಂತೆ ಭಾರತ ಸರ್ಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ಕೇಂದ್ರ ಸಚಿವಾಲಯಗಳಿಗೆ ವಿನಂತಿಸಿದೆ.
  • ಎಲ್‌ ಪಿ ಜಿಯಿಂದ ಪಿ ಎನ್‌ ಜಿಗೆ ದೀರ್ಘಕಾಲೀನ ಪರಿವರ್ತನೆಯಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡುವ ರಾಜ್ಯಗಳಿಗೆ ವಾಣಿಜ್ಯ ಎಲ್‌ ಪಿ ಜಿಯ ಹೆಚ್ಚುವರಿ ಶೇ. 10 ರಷ್ಟು ಹಂಚಿಕೆಯನ್ನು ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ನೀಡಿದೆ. ಪಿ ಎನ್‌ ಜಿ ವಿಸ್ತರಣೆಯ ಸುಧಾರಣಾ ಕ್ರಮಗಳ ಅಡಿಯಲ್ಲಿ 12 ರಾಜ್ಯಗಳು ಹೆಚ್ಚುವರಿ ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ಪಡೆಯುತ್ತಿವೆ. ಇದರ ಜೊತೆಗೆ, 1 ಕೇಂದ್ರಾಡಳಿತ ಪ್ರದೇಶದ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಪರಿಶೀಲನೆಯಲ್ಲಿದೆ.
  • ಪಿ ಎನ್‌ ಜಿ ಆರ್‌ ಬಿ ತನ್ನ 23.03.2026 ರ ಆದೇಶದ ಮೂಲಕ ಎಲ್ಲಾ ಸಿಜಿಡಿ ಸಂಸ್ಥೆಗಳಿಗೆ ವಸತಿ ಶಾಲೆಗಳು ಮತ್ತು ಕಾಲೇಜುಗಳು, ಹಾಸ್ಟೆಲ್‌ ಗಳು, ಸಮುದಾಯ ಅಡುಗೆ ಮನೆಗಳು, ಅಂಗನವಾಡಿ ಅಡುಗೆ ಮನೆಗಳು ಇತ್ಯಾದಿಗಳನ್ನು ಪೈಪ್‌ಲೈನ್ ಮೂಲಸೌಕರ್ಯ ಲಭ್ಯವಿರುವ ಕಡೆಗಳಲ್ಲಿ 5 ದಿನಗಳಲ್ಲಿ ಪಿ ಎನ್‌ ಜಿ ಮೂಲಕ ಸಂಪರ್ಕಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲು ನಿರ್ದೇಶಿಸಿದೆ.
  • ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 24.03.2026 ರ ಪತ್ರದಲ್ಲಿ, ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆದ್ಯತೆಯ ಮೇಲೆ ಸಂಸ್ಕರಿಸಲು 3 ತಿಂಗಳ ಅವಧಿಗೆ ವಿಶೇಷ ಕ್ರಮವಾಗಿ "ಕಡಿಮೆ ಸಮಯದ ಮಿತಿಯೊಂದಿಗೆ ಸಿಜಿಡಿ ಮೂಲಸೌಕರ್ಯಕ್ಕಾಗಿ ತ್ವರಿತ ಅನುಮೋದನೆ ಚೌಕಟ್ಟನ್ನು" ಅಳವಡಿಸಿಕೊಂಡಿರುವುದಾಗಿ ತಿಳಿಸಿದೆ.
  • ಭಾರತ ಸರ್ಕಾರವು 24.03.2026 ರ ಗೆಜೆಟ್ ಮೂಲಕ ಅಗತ್ಯ ವಸ್ತುಗಳ ಕಾಯ್ದೆ, 1955 ರ ಅಡಿಯಲ್ಲಿ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ (ಪೈಪ್‌ಲೈನ್‌ ಮತ್ತು ಇತರ ಸೌಲಭ್ಯಗಳ ಹಾಕುವಿಕೆ, ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026 ಅನ್ನು ಅಧಿಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್‌ಲೈನ್‌ಗಳನ್ನು ಹಾಕಲು ಮತ್ತು ವಿಸ್ತರಿಸಲು ಸುವ್ಯವಸ್ಥಿತ ಮತ್ತು ಸಮಯಬದ್ಧ ಚೌಕಟ್ಟನ್ನು ಒದಗಿಸುತ್ತದೆ, ಅನುಮೋದನೆಗಳು ಮತ್ತು ಭೂಮಿ ಲಭ್ಯತೆಯಲ್ಲಿನ ವಿಳಂಬಗಳನ್ನು ಪರಿಹರಿಸುತ್ತದೆ ಮತ್ತು ವಸತಿ ಪ್ರದೇಶಗಳು ಸೇರಿದಂತೆ ನೈಸರ್ಗಿಕ ಅನಿಲ ಮೂಲಸೌಕರ್ಯಗಳ ವೇಗದ ಅಭಿವೃದ್ಧಿಯನ್ನು ಶಕ್ತಗೊಳಿಸುತ್ತದೆ. ಇದು ಪಿ ಎನ್‌ ಜಿ ನೆಟ್‌ವರ್ಕ್ ಬೆಳವಣಿಗೆಯನ್ನು ವೇಗಗೊಳಿಸಲು, ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸಲು ಮತ್ತು ಸ್ವಚ್ಛ ಇಂಧನಗಳತ್ತ ಪರಿವರ್ತನೆಯನ್ನು ಬೆಂಬಲಿಸಲು ನಿರೀಕ್ಷಿಸಲಾಗಿದೆ, ಆ ಮೂಲಕ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ.
  • ರಕ್ಷಣಾ ಸಚಿವಾಲಯವು 27.03.2026 ರ ಪತ್ರದ ಮೂಲಕ ಜೂನ್ 30, 2026 ರವರೆಗೆ ಜಾರಿಯಲ್ಲಿರುವಂತೆ ಅಲ್ಪಾವಧಿಯ ನೀತಿ ಮಾರ್ಪಾಡನ್ನು ಹೊರಡಿಸಿದೆ, ಇದು ರಕ್ಷಣಾ ಪಡೆಯ ಎಲ್ಲಾ ವಸತಿ ಪ್ರದೇಶಗಳಲ್ಲಿ ಪಿ ಎನ್‌ ಜಿ ಮೂಲಸೌಕರ್ಯ ಸ್ಥಾಪನೆಯನ್ನು ತ್ವರಿತಗೊಳಿಸಲು ಸಹಕಾರಿಯಾಗಿದೆ.
  • ಪಿ ಎನ್‌ ಜಿ ಆರ್‌ ಬಿ ಸಿಜಿಡಿ ಸಂಸ್ಥೆಗಳಿಗೆ ಡಿ-ಪಿ ಎನ್‌ ಜಿ ಸಂಪರ್ಕಗಳನ್ನು ತ್ವರಿತಗೊಳಿಸಲು ನಿರ್ದೇಶಿಸಿದೆ. ಅಲ್ಲದೆ, ರಾಷ್ಟ್ರೀಯ ಪಿ ಎನ್‌ ಜಿ ಅಭಿಯಾನ 2.0 (01.01.2026-31.03.2026) ಅನ್ನು ಈಗ 30.06.2026 ರವರೆಗೆ ವಿಸ್ತರಿಸಲಾಗಿದ್ದು, ಪಿ ಎನ್‌ ಜಿ ವಿಸ್ತರಣೆಯ ವೇಗವನ್ನು ಕಾಯ್ದುಕೊಳ್ಳಲಾಗಿದೆ.
  • ಮಾರ್ಚ್ 2026 ರಿಂದ, ಸುಮಾರು 3.6 ಲಕ್ಷ ಪಿ ಎನ್‌ ಜಿ ಸಂಪರ್ಕಗಳಿಗೆ ಅನಿಲ ಪೂರೈಕೆ ಆರಂಭವಾಗಿದೆ. ಇದಲ್ಲದೆ, 3.9 ಲಕ್ಷಕ್ಕೂ ಹೆಚ್ಚು ಗ್ರಾಹಕರು ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ.

ಕಚ್ಚಾ ತೈಲ ಸ್ಥಿತಿ ಮತ್ತು ಸಂಸ್ಕರಣಾಗಾರ ಕಾರ್ಯಾಚರಣೆಗಳು

  • ಎಲ್ಲಾ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳಿವೆ. ದೇಶವು ಪೆಟ್ರೋಲ್ ಮತ್ತು ಡೀಸೆಲ್‌ ನ ಸಮರ್ಪಕ ದಾಸ್ತಾನುಗಳನ್ನು ಸಹ ಹೊಂದಿದೆ.
  • ದೇಶೀಯ ಬಳಕೆಯನ್ನು ಬೆಂಬಲಿಸಲು ಸಂಸ್ಕರಣಾಗಾರಗಳಿಂದ ಗೃಹಬಳಕೆಯ ಎಲ್‌ ಪಿ ಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.

ಚಿಲ್ಲರೆ ಇಂಧನ ಲಭ್ಯತೆ ಮತ್ತು ಬೆಲೆ ಕ್ರಮಗಳು

  • ದೇಶಾದ್ಯಂತ ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.
  • ಮಧ್ಯಪ್ರಾಚ್ಯ ಬಿಕ್ಕಟ್ಟು ಕಚ್ಚಾ ತೈಲ ಬೆಲೆಗಳಲ್ಲಿ ಅಸಹಜ ಹೆಚ್ಚಳಕ್ಕೆ ಕಾರಣವಾಗಿದೆ. ಗ್ರಾಹಕರನ್ನು ಈ ಪ್ರಭಾವದಿಂದ ರಕ್ಷಿಸಲು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ ಗೆ 10 ರೂಪಾಯಿಗಳಷ್ಟು ಕಡಿತಗೊಳಿಸುವ ಮೂಲಕ ಈ ಹೊರೆಯ ಒಂದು ಭಾಗವನ್ನು ಭರಿಸಲು ಭಾರತ ಸರ್ಕಾರ ನಿರ್ಧರಿಸಿದೆ.
  • ಇದಲ್ಲದೆ, ದೇಶೀಯ ಮಾರುಕಟ್ಟೆಯಲ್ಲಿ ಡೀಸೆಲ್ ಮತ್ತು ವಿಮಾನ ಇಂಧನ (ಎಟಿಎಫ್) ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಡೀಸೆಲ್ ಮೇಲೆ ಪ್ರತಿ ಲೀಟರ್‌‌ ಗೆ 21.5 ರೂ. ಮತ್ತು ಎಟಿಎಫ್ ಮೇಲೆ 29.5 ರೂ. ರಫ್ತು ತೆರಿಗೆಯನ್ನು ವಿಧಿಸಿದೆ.
  • ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಮಾನ್ಯ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ.
  • ವದಂತಿಗಳನ್ನು ನಂಬದಂತೆ ಸರ್ಕಾರವು ತನ್ನ ಸಲಹೆಯನ್ನು ಪುನರುಚ್ಚರಿಸಿದೆ. ವದಂತಿಗಳನ್ನು ತಡೆಗಟ್ಟಲು, ಸರಿಯಾದ ಮಾಹಿತಿಯನ್ನು ಪತ್ರಿಕಾಗೋಷ್ಠಿಗಳ ಮೂಲಕ ಪ್ರಸಾರ ಮಾಡುವಂತೆ ರಾಜ್ಯ ಸರ್ಕಾರಗಳನ್ನು ಕೋರಲಾಗಿದೆ.

ಸೀಮೆಎಣ್ಣೆ ಲಭ್ಯತೆ ಮತ್ತು ವಿತರಣಾ ಕ್ರಮಗಳು

  • ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಿತ ಹಂಚಿಕೆಗಿಂತ ಹೆಚ್ಚುವರಿಯಾಗಿ 48,000 ಕೆಎಲ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ.
  • ಭಾರತ ಸರ್ಕಾರವು 29.03.2026 ರ ಗೆಜೆಟ್ ಅಧಿಸೂಚನೆಯ ಮೂಲಕ 'ಸೀಮೆಎಣ್ಣೆ ಮುಕ್ತ' ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಡುಗೆ ಮತ್ತು ಬೆಳಕಿನ ಉದ್ದೇಶಕ್ಕಾಗಿ ಮಾತ್ರ ಪಿಡಿಎಸ್ ಸೀಮೆಎಣ್ಣೆ ವಿತರಣೆಯನ್ನು ಸುಗಮಗೊಳಿಸಿದೆ -
    • ಪ್ರತಿ ಜಿಲ್ಲೆಗೆ ಗರಿಷ್ಠ ಎರಡು ಸಾರ್ವಜನಿಕ ವಲಯದ ತೈಲ ಕಂಪನಿಗಳ ಸೇವಾ ಕೇಂದ್ರಗಳಿಗೆ (ಆದ್ಯತೆಯ ಮೇರೆಗೆ ಕಂಪನಿಯೇ ನಿರ್ವಹಿಸುವ ಮಳಿಗೆಗಳು) 5,000 ಲೀಟರ್ ವರೆಗೆ ಪಿಡಿಎಸ್ ಸೀಮೆಎಣ್ಣೆಯನ್ನು ಸಂಗ್ರಹಿಸಲು ಅನುಮತಿ ನೀಡಲಾಗಿದೆ.
    • ಈ ಸೇವಾ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶದ ಆಡಳಿತವು ಗೊತ್ತುಪಡಿಸುತ್ತದೆ.
  • 18 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೀಮೆಎಣ್ಣೆ ಹಂಚಿಕೆ ಆದೇಶಗಳನ್ನು ಹೊರಡಿಸಿವೆ. ಇದಲ್ಲದೆ, ಹಿಮಾಚಲ ಪ್ರದೇಶ ಮತ್ತು ಲಡಾಖ್ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಸೀಮೆಎಣ್ಣೆಯ ಅಗತ್ಯವಿಲ್ಲ ಎಂದು ತಿಳಿಸಿವೆ.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಹಡಗುಗಳು ಮತ್ತು ನಾವಿಕರನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಂಡಿದೆ.

  • ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಹಡಗುಗಳ ಸಂಚಾರ, ಬಂದರು ಕಾರ್ಯಾಚರಣೆಗಳು ಮತ್ತು ಭಾರತೀಯ ನಾವಿಕರ ಸುರಕ್ಷತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ಜೊತೆಗೆ ಕಡಲ ವ್ಯಾಪಾರದ ನಿರಂತರತೆಯನ್ನು ಖಚಿತಪಡಿಸುತ್ತಿದೆ.
  • ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊತ್ತ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
  • ಒಟ್ಟು 17 ಭಾರತೀಯ ಧ್ವಜ ಹೊತ್ತ ಹಡಗುಗಳು ಮತ್ತು 460 ಭಾರತೀಯ ನಾವಿಕರು ಪಶ್ಚಿಮ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿದ್ದಾರೆ. ಹಡಗು ನಿರ್ದೇಶನಾಲಯವು ಹಡಗು ಮಾಲೀಕರು, ಆರ್‌ ಪಿ ಎಸ್‌ ಎಲ್ ಏಜೆನ್ಸಿಗಳು ಮತ್ತು ಭಾರತೀಯ ಮಿಷನ್‌ ಗಳ ಸಮನ್ವಯದೊಂದಿಗೆ ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
  • ಹಡಗು ನಿರ್ದೇಶನಾಲಯದ ನಿಯಂತ್ರಣ ಕೊಠಡಿಯು 24x7 ಕಾರ್ಯನಿರ್ವಹಿಸುತ್ತಿದ್ದು, ಸಕ್ರಿಯಗೊಂಡಾಗಿನಿಂದ 5088 ಕರೆಗಳು ಮತ್ತು 10547 ಇಮೇಲ್‌ ಗಳನ್ನು ನಿರ್ವಹಿಸಿದೆ; ಕಳೆದ 24 ಗಂಟೆಗಳಲ್ಲಿ 73 ಕರೆಗಳು ಮತ್ತು 122 ಇಮೇಲ್‌ ಗಳನ್ನು ಸ್ವೀಕರಿಸಲಾಗಿದೆ.
  • ಹಡಗು ನಿರ್ದೇಶನಾಲಯವು ಇದುವರೆಗೆ 1479 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ಅನುಕೂಲ ಮಾಡಿಕೊಟ್ಟಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ ವಿಮಾನ ನಿಲ್ದಾಣಗಳು ಮತ್ತು ಗಲ್ಫ್‌ ನ ವಿವಿಧ ಸ್ಥಳಗಳಿಂದ ಮರಳಿದ 159 ನಾವಿಕರು ಸೇರಿದ್ದಾರೆ.
  • ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ ಮತ್ತು ಪುದುಚೇರಿಯ ರಾಜ್ಯ ಕಡಲ ಮಂಡಳಿಗಳು ದೃಢಪಡಿಸಿದಂತೆ, ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಸಹಜವಾಗಿದ್ದು, ಯಾವುದೇ ದಟ್ಟಣೆ ವರದಿಯಾಗಿಲ್ಲ.
  • ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಮಿಷನ್‌ ಗಳು ಮತ್ತು ಕಡಲ ಪಾಲುದಾರರೊಂದಿಗೆ ಸಮನ್ವಯ ಸಾಧಿಸಿ ನಾವಿಕರ ಕಲ್ಯಾಣ ಮತ್ತು ಅಡೆತಡೆಯಿಲ್ಲದ ಕಡಲ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳುತ್ತಿದೆ.

ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ

ಈ ಪ್ರದೇಶದಾದ್ಯಂತ ಇರುವ ಭಾರತೀಯ ಮಿಷನ್‌ ಗಳು ಮತ್ತು ಕಚೇರಿಗಳು ಭಾರತೀಯ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿವೆ, ಜೊತೆಗೆ ನೆರವು ನೀಡುವುದನ್ನು ಮತ್ತು ಅವರ ಸುರಕ್ಷತೆ ಹಾಗೂ ಕ್ಷೇಮಕ್ಕಾಗಿ ಅಗತ್ಯ ಸಲಹೆಗಳನ್ನು ನೀಡುವುದನ್ನು ಮುಂದುವರಿಸಿವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ನೀಡಿದಂತೆ:

  • ಇರಾನ್‌ ನಲ್ಲಿ ಸಿಲುಕಿದ್ದ ಒಟ್ಟು 345 ಭಾರತೀಯ ಮೀನುಗಾರರು ನಿನ್ನೆ ಸ್ವದೇಶಕ್ಕೆ ಮರಳಿದ್ದಾರೆ. ಟೆಹ್ರಾನ್‌ ನಲ್ಲಿರುವ ರಾಯಭಾರ ಕಚೇರಿಯು ದಕ್ಷಿಣ ಇರಾನ್‌ ನಿಂದ ಅರ್ಮೇನಿಯಾಕ್ಕೆ ಅವರ ಸಂಚಾರವನ್ನು ಸುಗಮಗೊಳಿಸಿತು, ಅಲ್ಲಿಂದ ಅವರು ಚೆನ್ನೈಗೆ ವಿಮಾನಗಳ ಮೂಲಕ ಬಂದರು.
  • ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ಭಾರತೀಯ ಪ್ರಜೆಗಳ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೀಸಲಾದ ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಭಾರತೀಯ ಮಿಷನ್‌ ಗಳೊಂದಿಗೆ ನಿಯಮಿತ ಸಮನ್ವಯವನ್ನು ಹೊಂದಿದೆ.
  • ಮಿಷನ್‌ಗಳು ಮತ್ತು ಕಚೇರಿಗಳು ದಿನದ 24 ಗಂಟೆಯೂ ಸಹಾಯವಾಣಿಗಳನ್ನು ನಡೆಸುತ್ತಿವೆ, ಸಲಹೆಗಳನ್ನು ನೀಡುತ್ತಿವೆ ಮತ್ತು ಭಾರತೀಯ ಸಮುದಾಯ ಸಂಘಗಳು, ಕಂಪನಿಗಳು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ. ನೆರವುಗಳಲ್ಲಿ ವೀಸಾಗಳು, ಕಾನ್ಸುಲರ್ ಸೇವೆಗಳು, ಸಾರಿಗೆ ಸೌಲಭ್ಯ ಮತ್ತು ಲಾಜಿಸ್ಟಿಕಲ್ ಬೆಂಬಲ ಸೇರಿವೆ.
  • ಭಾರತೀಯ ವಿದ್ಯಾರ್ಥಿಗಳ ಕಲ್ಯಾಣಕ್ಕೆ ಆದ್ಯತೆ ನೀಡಲಾಗಿದೆ. ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಲು ಮಿಷನ್‌ ಗಳು ಸ್ಥಳೀಯ ಅಧಿಕಾರಿಗಳು, ಭಾರತೀಯ ಶಾಲೆಗಳು, ಮಂಡಳಿಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯೊಂದಿಗೆ ಸಮನ್ವಯ ಸಾಧಿಸುತ್ತಿವೆ.
  • ಮಿಷನ್‌ ಗಳು ಹಡಗುಗಳಲ್ಲಿರುವ ಭಾರತೀಯ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾನ್ಸುಲರ್ ಬೆಂಬಲವನ್ನು ನೀಡುತ್ತಿವೆ, ಕುಟುಂಬದೊಂದಿಗೆ ಸಂವಹನಕ್ಕೆ ಅನುಕೂಲ ಮಾಡಿಕೊಡುತ್ತಿವೆ ಮತ್ತು ಮರಳುವ ವಿನಂತಿಗಳಿಗೆ ಸಹಾಯ ಮಾಡುತ್ತಿವೆ.
  • ವಿಮಾನಗಳ ಪರಿಸ್ಥಿತಿಯು ಸುಧಾರಿಸುತ್ತಲೇ ಇದೆ; ಫೆಬ್ರವರಿ 28 ರಿಂದ ಸುಮಾರು 7,02,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಪ್ರಯಾಣಿಸಿದ್ದಾರೆ.
    • ಯುಎಇ: ಸೀಮಿತ ಪ್ರಮಾಣದ ಅನಿಗದಿತ ವಿಮಾನಗಳು ಮುಂದುವರಿದಿವೆ; ಭಾರತಕ್ಕೆ ಸುಮಾರು 90 ವಿಮಾನಗಳು ನಿರೀಕ್ಷಿಸಲಾಗಿದೆ.
    • ಸೌದಿ ಅರೇಬಿಯಾ ಮತ್ತು ಓಮನ್: ಬಹು ವಿಮಾನ ನಿಲ್ದಾಣಗಳಿಂದ ಭಾರತಕ್ಕೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
    • ಕತಾರ್: ಭಾಗಶಃ ವಾಯುಪ್ರದೇಶ ತೆರೆಯಲಾಗಿದ್ದು; ಇಂದು ಸುಮಾರು 8-10 ವಿಮಾನಗಳನ್ನು ನಿರೀಕ್ಷಿಸಲಾಗಿದೆ.
    • ಕುವೈತ್ ಮತ್ತು ಬಹ್ರೇನ್: ವಾಯುಪ್ರದೇಶ ಮುಚ್ಚಲಾಗಿದೆ; ಸೌದಿ ಅರೇಬಿಯಾದ ದಮ್ಮಾಮ್ ಮೂಲಕ ಭಾರತಕ್ಕೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
    • ಇರಾನ್: ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.
    • ಇಸ್ರೇಲ್: ಈಜಿಪ್ಟ್ ಮತ್ತು ಜೋರ್ಡಾನ್ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.
    • ಇರಾಕ್: ಜೋರ್ಡಾನ್ ಮತ್ತು ಸೌದಿ ಅರೇಬಿಯಾ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.
  • ಓಮನ್ ಕರಾವಳಿಯಲ್ಲಿ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ಪ್ರಜೆಯ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗಿದ್ದು, ದುಃಖತಪ್ತ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ನೆರವುಗಳನ್ನು ನೀಡಲಾಗುತ್ತಿದೆ.

 

*****


(ಪ್ರಕಟಣೆ ಐ.ಡಿ.: 2249152) ವಿಸಿಟರ್ ಕೌಂಟರ್ : 23