ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್‌ನ ವಾವ್-ಥರಡ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ

ಪ್ರಕಟಣಾ ದಿನಾಂಕ: 31 MAR 2026 8:27PM by PIB Bengaluru

ಭಾರತ ಮಾತೆಗೆ ಜಯವಾಗಲಿ

ಭಾರತ ಮಾತೆಗೆ ಜಯವಾಗಲಿ

ಭಾರತ ಮಾತೆಗೆ ಜಯವಾಗಲಿ

ಕಾರ್ಯಕ್ರಮದಲ್ಲಿ ಹಾಜರಿರುವ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ, ಗುಜರಾತ್ ವಿಧಾನಸಭಾ ಸ್ಪೀಕರ್ ಶಂಕರ್ ಭಾಯಿ, ಉಪಮುಖ್ಯಮಂತ್ರಿ ಭಾಯಿ ಹರ್ಷ ಸಾಂಘವಿ, ಗುಜರಾತ್ ಸರ್ಕಾರದ ಎಲ್ಲಾ ಸಚಿವರು, ಸಹವರ್ತಿ ಶಾಸಕರು ಮತ್ತು ಬನಸ್ಕಾಂತ, ವಾವ್, ಥರಡ್ ಹಾಗು ಉತ್ತರ ಗುಜರಾತ್‌ನ ನನ್ನ ಪ್ರೀತಿಯ ಸಹೋದರ ಸಹೋದರಿಯರೇ .

ಇಂದು, ನನ್ನ ತಾಯಂದಿರು ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಬಂದಿದ್ದಾರೆ, ಈ ತಾಯಂದಿರು ಮತ್ತು ಸಹೋದರಿಯರು ಅಪಾರ ಸಂಖ್ಯೆಯಲ್ಲಿ ಬಂದಿದ್ದೀರಿ. ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ನನ್ನ ವಿಶೇಷ ನಮನಗಳು.

ಕೆಲವೇ ದಿನಗಳ ಹಿಂದೆ, ನವರಾತ್ರಿಯ ಪವಿತ್ರ ಹಬ್ಬವು ಮುಕ್ತಾಯಗೊಂಡಿತು. ಮಾತೆ ಅಂಬಾಜಿಯವರ ಕೃಪೆಯಿಂದ ಇಂದು ಅವರ ಪಾದಗಳಿರುವಲ್ಲಿಗೆ ಬರುವ ಭಾಗ್ಯ ನನಗೆ ಸಿಕ್ಕಿತು. ಅವರ ಕೃಪೆಯಿಂದ ಇಂದು, ನನ್ನ ಕುಟುಂಬದ ಸದಸ್ಯರೆಲ್ಲರನ್ನೂ ನೋಡುವ ಭಾಗ್ಯ ನನಗೆ ಸಿಕ್ಕಿತು. ನಾನು ತಾಯಿ ಅಂಬಾಜಿಯವರ ಪಾದಗಳಿಗೆ ನಮಸ್ಕರಿಸುತ್ತೇನೆ. ನಮ್ಮ ವರಾಹ ರೂಪಿ ಶ್ರೀ ಧರ್ಣಿಧರ್ಜಿ, "ಮುಖದ ಕೃಷ್ಣ", ನಾನು ಇಂದು ಅವರಿಗೆ ನನ್ನ ಗೌರವಯುತ ನಮನ ಸಲ್ಲಿಸುತ್ತೇನೆ. ಇಂದು ನಾವು ಭಗವಾನ್ ಮಹಾವೀರ ಜಯಂತಿಯನ್ನು ಸಹ ಆಚರಿಸುತ್ತಿದ್ದೇವೆ ಎಂಬುದು ಆಹ್ಲಾದಕರ ಕಾಕತಾಳೀಯ ಸಂದರ್ಭ. ನಮ್ಮ ಪ್ರದೇಶವು ಅನೇಕ ಜೈನ ತೀರ್ಥಕ್ಷೇತ್ರಗಳ ಭೂಮಿಯಾಗಿದೆ. ನಾನು ಭಗವಾನ್ ಮಹಾವೀರರಿಗೆ ನಮಸ್ಕರಿಸುತ್ತೇನೆ ಮತ್ತು ಪವಿತ್ರ ಮಹಾವೀರ ಜನ್ಮ ಕಲ್ಯಾಣಕ್ ದಿನ, ಮಹಾವೀರ ಜಯಂತಿಯಂದು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇಂದು ನನ್ನ ಹೃದಯವು ಇನ್ನೊಂದು ಕಾರಣಕ್ಕಾಗಿ ಸಂತೋಷ ಅನುಭವಿಸುತ್ತಿದೆ. ನಾನು ಇಲ್ಲಿಗೆ ಬಂದಾಗ, ಮೊದಲ ಬಾರಿಗೆ ನನ್ನ ವಿಮಾನವು ನೇರವಾಗಿ ದೀಸಾ ವಾಯುನೆಲೆಯಲ್ಲಿ ಇಳಿಯಿತು. ದೀಸಾದ ವಾಯುನೆಲೆಯು ಅಂತರರಾಷ್ಟ್ರೀಯ ಗಡಿಯಿಂದ ಕೇವಲ 130 ಕಿಲೋಮೀಟರ್ ದೂರದಲ್ಲಿದೆ. ದೇಶದ ಭದ್ರತೆಗೆ ಇದು ಎಷ್ಟು ಮುಖ್ಯ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು.

ಆದರೆ ಸ್ನೇಹಿತರೇ,

ದೀಸಾ ವಿಮಾನ ನಿಲ್ದಾಣದ ಯೋಜನೆಯ ಚಿಂತನೆ ಇಂದು ಪ್ರಾರಂಭವಾದದ್ದಲ್ಲ. ನಾನು ಇಲ್ಲಿ ಮುಖ್ಯಮಂತ್ರಿಯಾಗಿದ್ದಾಗ, ಅಂದಿನಿಂದ ನಾವು ಭೂಮಿಯನ್ನು ಸ್ವಾಧೀನಪಡಿಸಿಕೊಂಡೆವು, ನನ್ನ ರೈತ ಸಹೋದರ ಸಹೋದರಿಯರು ಭೂಮಿಯನ್ನು ನೀಡಿದರು, ಮತ್ತು ರಾಷ್ಟ್ರೀಯ ಭದ್ರತೆಗಾಗಿ, ಭಾರತದ ಪಶ್ಚಿಮ ಗಡಿಯ ಭದ್ರತೆಗಾಗಿ, ಈ ದೀಸಾ ಅತ್ಯಂತ ಪ್ರಮುಖ ಸ್ಥಳವಾಗಿದೆ, ಇಲ್ಲಿ ವಾಯುನೆಲೆಯನ್ನು ಹೊಂದಿರುವುದು ಬಹಳ ಅವಶ್ಯಕ ಎಂದು ನಾವು ಬಯಸಿದ್ದೇವೆ. ಆದರೆ ಸಮಯದಲ್ಲಿ ದೆಹಲಿಯನ್ನು ಆಳಿದವರಿಗೆ ತಿಳಿದಿರಲಿಲ್ಲ, ಅವರಿಗೆ ಗುಜರಾತ್ ಬಗ್ಗೆ ಯಾವ ದ್ವೇಷವಿತ್ತು ಎಂದು ತಿಳಿದಿಲ್ಲ, ರಾಷ್ಟ್ರೀಯ ಭದ್ರತೆಯ ಯೋಜನೆಯು ವರ್ಷಗಳ ಕಾಲ ಕಡತಗಳಲ್ಲಿ ದಮನಿಸಲ್ಪಟ್ಟಿತ್ತು. ನೀವು ನನ್ನನ್ನು ದೆಹಲಿಗೆ ಕಳುಹಿಸಿದಾಗ, ನಾನು ಕಡತಗಳನ್ನು ಹೊರತೆಗೆದೆ ಮತ್ತು ಇಂದು ಅದರ ಫಲಿತಾಂಶವಾಗಿ ವಾಯುಪಡೆಯ ಒಂದು ದೊಡ್ಡ ನೆಲೆಯು ನಮ್ಮ ದೀಸಾಗೆ ಸೇರಿಕೊಂಡಿದೆ. ಮತ್ತು ಇದು ಕೇವಲ ವಾಯುನೆಲೆಯಲ್ಲ, ಇದರಿಂದಾಗಿ, ಇಲ್ಲಿ ಬಹಳಷ್ಟು ಚಟುವಟಿಕೆಗಳು ನಡೆಯಲಿವೆ, ಸೈನಿಕರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಳಿಯಲಿದ್ದಾರೆ. ಇದು ಪ್ರದೇಶದ ಅಭಿವೃದ್ಧಿಗೆ ಬಹಳ ದೊಡ್ಡ ಕೊಡುಗೆಯನ್ನು ನೀಡಲಿದೆ. ಆದರೆ ವಿಳಂಬವು ಸಮಯದಲ್ಲಿ ದೆಹಲಿಯಲ್ಲಿದ್ದ ಕಾಂಗ್ರೆಸ್ ಸರ್ಕಾರದ ಕಾರಣದಿಂದಾಗಿ ಸಂಭವಿಸಿದೆ, ಅದರ ವರ್ತನೆಯಿಂದಾಗಿ ಸಂಭವಿಸಿದೆ ಮತ್ತು ದೇಶವು ರಾಷ್ಟ್ರೀಯ ಭದ್ರತೆಯ ಬಗ್ಗೆ ಅಂತಹ ಉದಾಸೀನತೆಯನ್ನು ಎಂದಿಗೂ ಕ್ಷಮಿಸುವುದಿಲ್ಲ. ನಮ್ಮ ಸರಕಾರ ದೀಸಾ ವಿಮಾನ ನಿಲ್ದಾಣದ ಕೆಲಸವನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಿದೆ.  ಮತ್ತು ಇಂದು ವಿಮಾನ ನಿಲ್ದಾಣವು ಪ್ರದೇಶದ ಅಭಿವೃದ್ಧಿಗೆ ಒಂದು ದೊಡ್ಡ ಮೈಲಿಗಲ್ಲಾಗುತ್ತಿದೆ ಮತ್ತು ಇದು ದೇಶದ ಒಂದು ದೊಡ್ಡ ಕಾರ್ಯತಂತ್ರದ ಶಕ್ತಿಯಾಗಿದೆ. ಈ ಪ್ರದೇಶದ ವಿಮಾನ ನಿಲ್ದಾಣಕ್ಕಾಗಿ,  ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಬನಸ್ಕಾಂತದ ವಾವ್-ಥರಡ್ ಪ್ರದೇಶ, ನಿಮಗೆಲ್ಲರಿಗೂ ತಿಳಿದಿದೆ, ನಾನು ಇಲ್ಲಿ ಎಷ್ಟು ಬಲವಾದ ಬಾಂಧವ್ಯ ಹೊಂದಿದ್ದೇನೆ ಎಂಬುದು. ನನ್ನ ನೆನಪುಗಳಲಿಲ್ಲದ ಯಾವುದೇ ಹಳ್ಳಿ ಇಲ್ಲಿ ಇರಲಿಕ್ಕಿಲ್ಲ. ಇಂದು ನಾನು ಬಂದಾಗ, ಅನೇಕ ಹಳಬರ ಮುಖಗಳನ್ನು ನೋಡುವ ಅವಕಾಶ ಸಿಕ್ಕಿತು. ಮತ್ತು ರೋಡ್ ಶೋ ವನ್ನು ತುಂಬಾ ಭವ್ಯವಾಗಿ ಮಾಡಲಾಯಿತು, ಅದು ನನಗೆ ಪ್ರಯೋಜನವನ್ನು ನೀಡಿತು. ದೂರದಿಂದ  ಹೆಚ್ಚಿನ ಸಂಖ್ಯೆಯ ಹಳಬರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು. ಮತ್ತು ನಾನು ಸಂಘಟನಾ ಕೆಲಸವನ್ನು ಮಾಡುವಾಗ, ನಾನು ಇಲ್ಲಿ ಬಹಳಷ್ಟು ಪ್ರಯಾಣಿಸುತ್ತಿದ್ದೆ. ನಾನು ಸ್ಕೂಟರ್‌ನಲ್ಲಿ ಸುತ್ತಾಡುತ್ತಿದ್ದೆ. ನಿಮ್ಮೆಲ್ಲರನ್ನು ಭೇಟಿಯಾಗುವ ಅವಕಾಶ ನನಗೆ ಸಿಗುತ್ತಿತ್ತು, ಮತ್ತು ನಾನು ನನ್ನ ಉತ್ತರ ಗುಜರಾತ್‌ಗೆ ಬಂದಾಗ, ತಾಯಂದಿರು ಮತ್ತು ಸಹೋದರಿಯರು ತುಂಬಾ ಒಳ್ಳೆಯ ರೊಟ್ಟಿಗಳನ್ನು ತಯಾರಿಸಿ ತಿನ್ನಿಸುತ್ತಿದ್ದರು. ಬಜ್ರಾ ರೊಟ್ಟಿ, ತುಪ್ಪ, ಬೆಲ್ಲ, ಬೆಳ್ಳುಳ್ಳಿ ಚಟ್ನಿ, ತಾಜಾ ಬೆಣ್ಣೆ ಸಿಗುತ್ತಿತ್ತು. ನಿಮ್ಮ ವಾತ್ಸಲ್ಯ, ನಿಮ್ಮ ಅಪಾರ ಪ್ರೀತಿ, ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮತ್ತು ನೀವೆಲ್ಲರೂ ನನಗೆ ನೀಡಿದ ಪ್ರೀತಿ, ನನ್ನನ್ನು ಕುಟುಂಬದ ಮಗನಂತೆ ಬೆಳೆಸಿತು, ಮತ್ತು ಅದಕ್ಕಾಗಿಯೇ, ನಾನು ಎಲ್ಲಿದ್ದರೂ, ಅಭಿವೃದ್ಧಿಯನ್ನು ಮಾಡುವ ಮೂಲಕ ನಿಮ್ಮ ಪ್ರೀತಿಯನ್ನು ಬಡ್ಡಿ ಸಹಿತ ಮರುಪಾವತಿಸಲು ಪ್ರಯತ್ನಿಸುತ್ತೇನೆ. ಇಲ್ಲಿ ಸಂಘಟನೆಯ ಅನೇಕ ಹಳೆಯ ಕಾರ್ಯಕರ್ತರಿದ್ದಾರೆ, ಅವರೊಂದಿಗೆ ನನಗೆ ಹಗಲಿರುಳು ಕೆಲಸ ಮಾಡುವ ಅವಕಾಶ ಸಿಕ್ಕಿತು. ಅನೇಕ ಹಿರಿಯರು ಈಗ ಇಲ್ಲ, ಆದರೆ ನಾನು ಅವರೊಂದಿಗೆ ಬಹಳಷ್ಟು ಕಲಿಯಲು ಸಾಧ್ಯವಾಯಿತು. ಅಂತಹ ಎಲ್ಲಾ ಸಹಚರರು, ಬಿಜೆಪಿ ಕಾರ್ಯಕರ್ತರ ಸಂಪೂರ್ಣ ಹೊಸ ಪೀಳಿಗೆ ಇಂದು ನನ್ನ ಮುಂದೆ ಇದೆ. ಮತ್ತು ಅಂತಹ ಯಶಸ್ವಿ ಪೀಳಿಗೆ ಇದ್ದರೆ, ಯಾರಿಗೇ ಆದರೂ ಜೀವನದಲ್ಲಿ ಏನನ್ನಾದರೂ ಮಾಡಿದ ತೃಪ್ತಿಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ಇಂದು ನಮ್ಮ ಯುವ ಕಾರ್ಯಕರ್ತರು ಅದೇ ಕೌಶಲ್ಯದಿಂದ ಸಂಘಟನೆಯ ಕೆಲಸಗಳನ್ನು ಮುಂದುವರಿಸುತ್ತಿರುವುದನ್ನು  ನಾನು ನೋಡುತ್ತಿದ್ದೇನೆ. ಈ ಕಾರ್ಯಕ್ರಮ, ಈ ಮೆರವಣಿಗೆ , ಅದರ ವ್ಯವಸ್ಥೆ, ಇಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನಿಮ್ಮ ಉಪಸ್ಥಿತಿ ಇದಕ್ಕೆ ಪುರಾವೆಯಾಗಿದೆ. ನಾನು ಎರಡೂ ಮೂಲೆಗಳಿಗೆ ಹೋದೆ, ಒಮ್ಮೆಯಾದರೂ ನನ್ನ ಕೈ ತೋರಿಸಬೇಕೆಂದು ನನಗೆ ಅನಿಸಿತು, ಆದರೆ ನನ್ನ ದೃಷ್ಟಿ ತಲುಪುವ ಸ್ಥಳಕ್ಕಿಂತ  ಆಚೆಗೆ ಹೆಚ್ಚು, ಜನರು ಕುಳಿತಿದ್ದಾರೆ, ಇನ್ನೂ ಅನೇಕ ಜನರು ಹೊರಗೆ ನಿಂತಿದ್ದಾರೆ. ಬನಸ್ಕಾಂತದ ಜೊತೆಗೆ, ಪಠಾಣ್, ಮೆಹ್ಸಾನಾ ಸೇರಿದಂತೆ ಹಲವಾರು ಜಿಲ್ಲೆಗಳ ಜನರನ್ನು ನೋಡುವ ಅವಕಾಶ ನನಗೆ ಸಿಕ್ಕಿತು, ಇದಕ್ಕಾಗಿ ನಾನು ನಿಮ್ಮೆಲ್ಲರನ್ನು ತುಂಬಾ ಅಭಿನಂದಿಸುತ್ತೇನೆ. ವಿಶೇಷವಾಗಿ ನಾನು ಮತ್ತೊಮ್ಮೆ ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ನಮಿಸುತ್ತೇನೆ.

ಸ್ನೇಹಿತರೇ,

25 ವರ್ಷಗಳ ಹಿಂದೆ ನೀವು ಬನಸ್ಕಾಂತ ಮತ್ತು ಪ್ರದೇಶದ ಅಭಿವೃದ್ಧಿಯ ಜವಾಬ್ದಾರಿಯನ್ನು ನನಗೆ ವಹಿಸಿದಿರಿ. ನಾನು ಗುಜರಾತ್‌ನಲ್ಲಿ ಇರುವವರೆಗೂ, ಈ ಕೆಲಸವನ್ನು ಆಂದೋಲನದೋಪಾದಿಯಲ್ಲಿ (ಮಿಷನ್ ಮೋಡ್‌ನಲ್ಲಿ)  ಮಾಡಿದ್ದೇನೆ, ಗುಜರಾತ್ ನ್ನು ಸಾಧ್ಯವಾದಷ್ಟು ಅಭಿವೃದ್ಧಿಯತ್ತ ಮುನ್ನಡೆಸಿದೆ. ದಶಕಗಳಿಂದ ನಿಮಗೆ ಆಗುತ್ತಿದ್ದ ಎಲ್ಲಾ ಸಮಸ್ಯೆಗಳು, ಈ ಪ್ರದೇಶದ ಬಗ್ಗೆ ತೋರುತ್ತಿದ್ದ ನಿರ್ಲಕ್ಷ್ಯ, ಮತ್ತು ಆ ಸಂಬಂಧಿತ ಎಲ್ಲಾ ಕಷ್ಟ ಪರಂಪರೆಗಳು  ಕೊನೆಗೊಂಡವು. ಅಭಿವೃದ್ಧಿಯ ನಿರೀಕ್ಷೆಗಳು ಒಂದರ ನಂತರ ಒಂದರಂತೆ ಈಡೇರುತ್ತಲೇ ಇದ್ದವು. ನನಗೆ ಹೆಮ್ಮೆ ಇದೆ, ಇಲ್ಲಿ ಅಭಿವೃದ್ಧಿಯನ್ನು  ಪ್ರಾರಂಭಿಸಲು ನನಗೆ ಅದೃಷ್ಟ ಒದಗಿ ಬಂತು. ಅಭಿವೃದ್ಧಿ ನಿರಂತರವಾಗಿ ಸಾಗಲು  ಆರಂಭವಾಗಿ ಈಗ ಅದು ನಿರಂತರವಾಗಿ ಮುಂದುವರಿಯುತ್ತಿದೆ. ಮತ್ತು 2014 ರಿಂದ, ಡಬಲ್ ಎಂಜಿನ್ ಸರ್ಕಾರದ ಬಲವೂ ಇದರಲ್ಲಿ ಸೇರಿದೆ. ಇಂದು ಸುಮಾರು 20 ಸಾವಿರ ಕೋಟಿ ರೂಪಾಯಿ ಮೌಲ್ಯದ ಕೇಂದ್ರ ಮತ್ತು ರಾಜ್ಯದ ಯೋಜನೆಗಳು ಇಲ್ಲಿ ಪ್ರಾರಂಭವಾಗುತ್ತಿವೆ, 20 ಸಾವಿರ ಕೋಟಿ ರೂಪಾಯಿಗಳು. ಈ ಯೋಜನೆಗಳೊಂದಿಗೆ ಇಡೀ ಪ್ರದೇಶದ ಚಿತ್ರಣ ಬದಲಾಗುತ್ತದೆ. ಇಂಧನ, ರಸ್ತೆ, ರೈಲ್ವೆ ಮತ್ತು ವಸತಿ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು ಇಲ್ಲಿನ ಜೀವನಕ್ಕೆ ಹೊಸ ವೇಗವನ್ನು ನೀಡುತ್ತವೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ವಾವ್-ಥರಾಡ್, ಬನಸ್ಕಾಂತ ಮತ್ತು ಇಡೀ ಗುಜರಾತ್ ನ್ನು ಬಹಳವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇಂದು ಶಿಲಾನ್ಯಾಸ ನೆರವೇರಿಸಲಾದ ರಸ್ತೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಯೋಜನೆಗಳು ಇಡೀ ಉತ್ತರ ಗುಜರಾತ್‌ಗೆ ವೇಗವನ್ನು ನೀಡುತ್ತವೆ. ಇಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಇಡಾರ್‌ನಿಂದ ವಡಾಲಿ ಬೈಪಾಸ್‌ವರೆಗಿನ 4-ಪಥದ ಹೆದ್ದಾರಿಯ ನಿರ್ಮಾಣ ಮತ್ತು ಧೋಲವಿರದಿಂದ ಸಂತಲ್‌ಪುರವರೆಗಿನ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ಕೆಲಸವು ಹಳ್ಳಿಗಳನ್ನು ಮಾರುಕಟ್ಟೆಗಳಿಗೆ, ರೈತರನ್ನು ಹೊಸ ಅವಕಾಶಗಳಿಗೆ ಮತ್ತು ಯುವಜನರನ್ನು ಉದ್ಯೋಗಕ್ಕೆ ಸಂಪರ್ಕಿಸುತ್ತದೆ. ಅಹಮದಾಬಾದ್-ಧೋಲೇರಾ ಎಕ್ಸ್‌ಪ್ರೆಸ್‌ವೇ, -ಈ ಸಂಪೂರ್ಣ ಕಾರಿಡಾರ್ ನ್ನು ಇಂದು ಪ್ರದೇಶಕ್ಕೆ ಸಮರ್ಪಿಸಲಾಗಿದೆ. ಇಷ್ಟು ದೊಡ್ಡ ಸಂಪರ್ಕ ಸೃಷ್ಟಿಯಾದಾಗ, ಅದರೊಂದಿಗೆ ಕೈಗಾರಿಕೆಗಳು ಸಹ ಬರುತ್ತವೆ ಮತ್ತು ಹೂಡಿಕೆಯೂ ಬರುತ್ತದೆ. ಅಲ್ಲದೆ, ಈ ಪ್ರದೇಶದ ರೈಲು ಸಂಪರ್ಕವೂ ಸುಧಾರಿಸಿದೆ. ಹಿಮತ್‌ನಗರದಿಂದ ಖೇದ್‌ಬ್ರಹ್ಮವರೆಗಿನ ಗೇಜ್ ಪರಿವರ್ತನೆಯು ನಮ್ಮ ಉತ್ತರ ಗುಜರಾತ್‌ನ ಬುಡಕಟ್ಟು ಪ್ರದೇಶವನ್ನು ರಾಷ್ಟ್ರೀಯ ಬ್ರಾಡ್ ಗೇಜ್ ಜಾಲಕ್ಕೆ (ನೆಟ್‌ವರ್ಕ್‌ಗೆ) ಸಂಪರ್ಕಿಸುತ್ತದೆ. ಇಂದಿನಿಂದ, ಖೇದ್‌ಬ್ರಹ್ಮ, ಹಿಮತ್‌ನಗರ ಮತ್ತು ಅಸರ್ವಾವನ್ನು ಸಂಪರ್ಕಿಸುವ ಹೊಸ ರೈಲು ಸೇವೆಯೂ ಪ್ರಾರಂಭವಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಉತ್ತಮ ರಸ್ತೆಗಳು ಮತ್ತು ಹೆದ್ದಾರಿಗಳು, ರೈಲ್ವೆಗಳು, ಇವೆಲ್ಲವೂ ಗುಜರಾತ್‌ನ ಸರ್ವತೋಮುಖ ಅಭಿವೃದ್ಧಿ ಯೋಜನೆಯ ಭಾಗವಾಗಿವೆ. ಈ ಯೋಜನೆಯನ್ನು ಪೂರ್ಣಗೊಳಿಸುವಾಗ, ನಮ್ಮ ಸಂಪೂರ್ಣ ಗಮನವು ಇಲ್ಲಿನ ಇಂಧನ ಅಗತ್ಯಗಳ ಮೇಲೆ ಕೇಂದ್ರೀಕರಿಸಿದೆ. ಏಕೆಂದರೆ, ಹೊಸ ಕೈಗಾರಿಕೆಗಳು, ಹೊಸ ಹೂಡಿಕೆ, ಹೊಸ ಅವಕಾಶಗಳು, ಇವು ವಿದ್ಯುತ್ ಇದ್ದಾಗ ಮಾತ್ರ ಬರುತ್ತವೆ. ಅದಕ್ಕಾಗಿಯೇ, ಇಂದು ಖಾವ್ಡಾ ನವೀಕರಿಸಬಹುದಾದ ಇಂಧನ ಉದ್ಯಾನವನಕ್ಕೆ ಸಂಬಂಧಿಸಿದ ಪ್ರಸರಣ ಯೋಜನೆಗಳು ಬಹಳ ಮುಖ್ಯ. ಇಲ್ಲಿಂದ, ನಾಲ್ಕೂವರೆ ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುವುದು. ಈ ವಿದ್ಯುತ್ ಹೊಸ ಕಾರ್ಖಾನೆಗಳಿಗೆ ಕೂಡಾ ಉಪಯುಕ್ತವಾಗಿರುತ್ತದೆ, ನಿಮ್ಮ ಮನೆಗಳನ್ನು ತಲುಪುತ್ತದೆ ಮತ್ತು ರೈತರ ಹೊಲಕ್ಕೂ ಪ್ರಯೋಜನವನ್ನು ನೀಡುತ್ತದೆ.

ಸ್ನೇಹಿತರೇ,

ಇಂದು ಸೌರಶಕ್ತಿಯಲ್ಲಿ, ಗುಜರಾತ್‌ನ ಧ್ವಜವು ಪೂರ್ಣ ವೈಭವದಿಂದ ಹಾರಾಡುತ್ತಿದೆ. ಇಂದು ಗುಜರಾತ್ ನವೀಕರಿಸಬಹುದಾದ ಇಂಧನದಲ್ಲಿ ಬಹಳ ಮುಂದಿದೆ ಏಕೆಂದರೆ ಭಾರತದಲ್ಲಿ ಇದರ ಬಗ್ಗೆ ಹೆಚ್ಚಿನ ಗಮನವಿಲ್ಲದಿದ್ದಾಗ ಗುಜರಾತ್ ಅದನ್ನು ಪ್ರಾರಂಭಿಸಿತ್ತು. 2010 ರಲ್ಲಿ, ಅಂದರೆ, ಇಂದಿಗೆ 15-16 ವರ್ಷಗಳ ಹಿಂದೆ.  ನಾನು ಮುಖ್ಯಮಂತ್ರಿಯಾಗಿದ್ದಾಗ, ಚರಂಕದ ರತನ್‌ಪುರದ ಬಳಿ ದೇಶದ ಮೊದಲ ಸೌರ ಉದ್ಯಾನವನದ ಕೆಲಸವನ್ನು ಪ್ರಾರಂಭಿಸಿದೆ. ಇಂದು 15-16 ವರ್ಷ ವಯಸ್ಸಿನ ಮಕ್ಕಳಾಗಿದ್ದರೆ, ಅವರು ಹುಟ್ಟಿರಲಿಲ್ಲ. ಇದು ಬಹು-ತಂತ್ರಜ್ಞಾನ ಉದ್ಯಾನವನವಾಗಿದ್ದು, ಇದು ಸೌರಶಕ್ತಿಯ ಚಲನೆಯನ್ನು ಪ್ರಾರಂಭಿಸಿತು. ಇಂದು, ಗುಜರಾತ್‌ನಲ್ಲಿ ಸೌರಶಕ್ತಿ ಕೆಲಸ ನಡೆಯುವ ರೀತಿ ಹೇಗಿದೆಯೆಂದರೆ, ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಕೆಲಸ ನಡೆಯುತ್ತಿದೆ, ಖಾವ್ಡಾ ನವೀಕರಿಸಬಹುದಾದ ಇಂಧನ ಉದ್ಯಾನವನಕ್ಕೆ ಸಂಬಂಧಿಸಿದ ಯೋಜನೆಗಳು ಇಂದು ಪ್ರಾರಂಭವಾಗಿರುವಂತೆಯೇ, ಗುಜರಾತ್ ವಿಶ್ವದಲ್ಲಿ ನವೀಕರಿಸಬಹುದಾದ ಇಂಧನದ ಒಂದು ದೊಡ್ಡ ಕೇಂದ್ರವಾಗಿ ಹೊರಹೊಮ್ಮುವ ದಿನ ದೂರವಿಲ್ಲ.

ಸ್ನೇಹಿತರೇ,

ಇಂದು ಜಗತ್ತಿನಲ್ಲಿ ಭಾರತದ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ, ಇಂದು ಭಾರತದ ಬೆಳವಣಿಗೆಯ ಕಥೆಯ ಬಗ್ಗೆ ಮಾತನಾಡುವಾಗ, 'ಗುಜರಾತ್ ಮಾದರಿ'ಯನ್ನು ಪ್ರಶಂಸಿಸಲಾಗುತ್ತದೆ. ಮತ್ತು, ಗುಜರಾತ್ ಅಭಿವೃದ್ಧಿಗೆ ಮೂಲಸೌಕರ್ಯ ಯೋಜನೆಗಳು ಎಷ್ಟು ಅಗತ್ಯವೋ, ಸಾರ್ವಜನಿಕ ಕಲ್ಯಾಣ ಯೋಜನೆಗಳೂ ಅಷ್ಟೇ ಅಗತ್ಯವೆಂದು ತೋರಿಸಿದೆ. ಅಂದರೆ, ರಸ್ತೆಗಳು, ಹೆದ್ದಾರಿಗಳು, ರೈಲ್ವೆಗಳ ಅಭಿವೃದ್ಧಿ ಆಗಬೇಕು. ಹಳ್ಳಿ, ಬಡವರು ಮತ್ತು ಸಾಮಾನ್ಯ ಜನರ ಜೀವನ ಮಟ್ಟವೂ ಸುಧಾರಿಸಬೇಕು. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ನಾವು ಇಂದು ನಮ್ಮ ಕಣ್ಣ ಮುಂದೆ ಇದನ್ನು ನೋಡುತ್ತಿದ್ದೇವೆ. ಇಂದು ನೀವು ಇಲ್ಲಿ ಈ ವಿಷಯವನ್ನು ಪರಿಗಣಿಸಿ, ಗುಜರಾತ್‌ನಲ್ಲಿ 40 ಸಾವಿರ ಕುಟುಂಬಗಳು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಶಾಶ್ವತ ಮನೆಗಳನ್ನು ಪಡೆದಿವೆ, ಶಾಶ್ವತ ಮನೆಗಳು. ಸಾವಿರಾರು ಕುಟುಂಬಗಳಿಗೆ ಶಾಶ್ವತ ಮನೆಗಳ ಸೌಲಭ್ಯವು ಅವರಿಗೆ ಭದ್ರತೆಯೊದಗಿಸಿದೆ, ಜೀವನದ ಗುರುತಾಗಿದೆ ಮತ್ತು ಹೊಸ ಕನಸುಗಳೊಂದಿಗೆ ಅಲಂಕರಿಸುವ ಧೈರ್ಯವನ್ನು ಅವರಿಗೆ ನೀಡುತ್ತಿದೆ. ಮತ್ತು ಇದರಿಂದ ಜೀವನದಲ್ಲಿ ಎಂತಹ ದೊಡ್ಡ ಬದಲಾವಣೆಗಳು ಬರುತ್ತವೆ ನೋಡಿ. ಪಿಎಂ ಆವಾಸ್‌ನಲ್ಲಿ ಶಾಶ್ವತ ಮನೆಗಳನ್ನು ಪಡೆದವರು, ಇವತ್ತಿನವರೆಗೂ ಮನೆ ಇಲ್ಲದವರು, ಪಾದಚಾರಿ ಮಾರ್ಗಗಳಲ್ಲಿ ಜೀವನ ಕಳೆದವರು, ಗುಡಿಸಲುಗಳಲ್ಲಿ ಜೀವನ ಕಳೆದವರು, ಹಸಿ ಮಣ್ಣಿನ ಮನೆಗಳನ್ನು ಮಾಡಿಕೊಂಡು ಜೀವನ ಕಳೆದವರು, ಈ ಶಾಶ್ವತ ಮನೆಗಳನ್ನು ಪಡೆದಾಗ, ಆಶೀರ್ವಾದ ಪಡೆಯಬೇಕೇ ಅಥವಾ ಬೇಡವೇ? ಆಶೀರ್ವಾದ ಪಡೆಯಬೇಕೇ ಅಥವಾ ಬೇಡವೇ? ಆಶೀರ್ವಾದ ಪಡೆಯಬೇಕೇ ಅಥವಾ ಬೇಡವೇ? ಪುಣ್ಯ ಪಡೆಯಬೇಕೇ ಅಥವಾ ಬೇಡವೇ? ಈ ಪುಣ್ಯ ಯಾರ ಅದೃಷ್ಟಕ್ಕೆ ಹೋಗುತ್ತದೆ? ಈ ಪುಣ್ಯ ಯಾರ ಅದೃಷ್ಟಕ್ಕೆ ಹೋಗುತ್ತದೆ? ಅದು ಯಾರ ಅದೃಷ್ಟಕ್ಕೆ ಹೋಗುತ್ತದೆ? ಇಂದು 40 ಸಾವಿರ ಜನರು ಮನೆಗಳನ್ನು ಪಡೆದಿದ್ದಾರೆ, ನೀವೆಲ್ಲರೂ ಅವರ ಆಶೀರ್ವಾದಕ್ಕೆ ಅರ್ಹರು, ಅವರ ಪುಣ್ಯದಿಂದ, ನೀವು ದೇಶದ ನಾಗರಿಕರು, ಏಕೆಂದರೆ ನಿಮ್ಮ ಒಂದು ಮತದ ಬಲದಿಂದ, ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಿರಿ, ಮತ್ತು ಇಲ್ಲಿ 40 ಸಾವಿರ ಜನರ ಶಾಶ್ವತ ಮನೆಗಳನ್ನು ನಿರ್ಮಿಸಲಾಗಿದೆ. ನೀವೆಲ್ಲರೂ ಪುಣ್ಯದ ಹಕ್ಕುದಾರರು, ನಾನು ಕೇವಲ ಮಾಧ್ಯಮ. ಇದಕ್ಕಾಗಿ ಪಿಎಂ ಆವಾಸ್ ಎಲ್ಲಾ ಫಲಾನುಭವಿ ಸಹೋದರ ಸಹೋದರಿಯರನ್ನು ಇಂದು ನಾನು ತುಂಬಾ ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇಂದು ನಾನು ನಿಮ್ಮೊಂದಿಗೆ ಬಂದಿದ್ದೇನೆ, ಆದ್ದರಿಂದ ಇಲ್ಲಿನ ದಶಕಗಳಷ್ಟು ಹಳೆಯ ಸ್ಥಿತಿಯೂ ನೆನಪಿಗೆ ಬರುತ್ತಿದೆ. ಉತ್ತರ ಗುಜರಾತ್ ಹೆಸರು ಬಂದ ತಕ್ಷಣ ಜನರ ಮನಸ್ಸಿನಲ್ಲಿ ಬೇರೆಯದೇ ಚಿತ್ರಣ ಮೂಡುತ್ತಿದ್ದ ದಿನಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಒಣಗಿದ ನೆಲ, ಕ್ಷಾಮ - ಬರ, ನೀರಿನ ಕೊರತೆ, 10 ವರ್ಷಗಳಲ್ಲಿ 7 ಬಾರಿ ಕ್ಷಾಮ ಬರುತ್ತಿತ್ತು. ನೀರು ತುಂಬಲು ಮಡಕೆಗಳನ್ನು ಹೊತ್ತುಕೊಂಡು 3-4 ಕಿಲೋಮೀಟರ್ ಹೋಗಬೇಕಾಗಿತ್ತು. ಹೋರಾಟದಿಂದ ತುಂಬಿದ ಜೀವನ ಮತ್ತು ಕಾಂಗ್ರೆಸ್ ಸರ್ಕಾರಗಳಿಂದ ನಮ್ಮ ನಿರಂತರ ನಿರ್ಲಕ್ಷ್ಯದಿಂದಾಗಿ, ಹಲವು ಕಿಲೋಮೀಟರ್ ದೂರದಿಂದ ನೀರು ತರಬೇಕಾದ ದಿನಗಳನ್ನು ನಾವು ಯಾರೂ ಮರೆಯಲು ಸಾಧ್ಯವಿಲ್ಲ. ಮನೆಯ ಮಹಿಳೆಯರು, ಸಹೋದರಿಯರು-ಹೆಣ್ಣುಮಕ್ಕಳ ಹೆಚ್ಚಿನ ಸಮಯ ನೀರು ವ್ಯವಸ್ಥೆ ಮಾಡುವಲ್ಲಿ ಕಳೆದು ಹೋಗುತ್ತಿತ್ತು. ನೀರಿನ ಕೊರತೆಯಿಂದಾಗಿ, ರೈತರು ಸಹ ತಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಬೆಲೆಯನ್ನು ಪಡೆಯುತ್ತಿರಲಿಲ್ಲ. ದನಗಾಹಿಗಳು ತಮ್ಮ ಪ್ರಾಣಿಗಳಿಗೆ ನೀರು ಮತ್ತು ಮೇವಿನ ಬಗ್ಗೆ ಚಿಂತಿತರಾಗಿದ್ದರು. ಈ ಸಮಸ್ಯೆ ಬಹಳ ಸಮಯದಿಂದ ಕಾಡುತ್ತಿತ್ತು. ಹಿಂದೆ, ಇಲ್ಲಿ ದನದ ಕೊಟ್ಟಿಗೆಗಳು ಚಾಲ್ತಿಯಲ್ಲಿದ್ದವು. ಬೇಸಿಗೆ ಬಂದಾಗ, ದನದ ಕೊಟ್ಟಿಗೆಗಳು ಚಾಲ್ತಿಗೆ ಬರುತ್ತಿದ್ದವು. ಮತ್ತು ಸರ್ಕಾರ ಹುಲ್ಲು ತಲುಪಿಸುತ್ತಿತ್ತು. ಕುಡಿಯುವ ನೀರಿನ ತೊಂದರೆ ಇತ್ತು. ಎರಡು-ಎರಡು ದಶಕಗಳು ಕಳೆದಿವೆ, ಎಲ್ಲವೂ ನಿಂತುಹೋಗಿವೆ. ಅದು ಎಲ್ಲಿಯೂ ಕಾಣುತ್ತಿಲ್ಲ, ಅದರ ಅಗತ್ಯವೂ ಇಲ್ಲ. ಗುಜರಾತ್ ಜನರ ಮನೋಭಾವ ಹೀಗಿತ್ತು, ನಾವು ಒಟ್ಟಾಗಿ ನಮ್ಮ ಕಠಿಣ ಪರಿಶ್ರಮದಿಂದ ಹಣೆಬರಹ ಬದಲಾಯಿಸುವ ಸಂಕಲ್ಪ ತೆಗೆದುಕೊಂಡೆವು. 'ಸುಜಲಾಂ ಸುಫಲಾಂ ಯೋಜನೆ' ಮೂಲಕ ನೀರಿನ ಸಮಸ್ಯೆಯನ್ನು ಪರಿಹರಿಸಿದೆವು. ನರ್ಮದಾ ನದಿಯ ನೀರು ದೂರದವರೆಗೆ ತಲುಪಲು ಪ್ರಾರಂಭಿಸಿತು. ಹೊಸ ನೀರಾವರಿ ವ್ಯವಸ್ಥೆಯನ್ನು ರೂಪಿಸಲಾಯಿತು.

ಸ್ನೇಹಿತರೇ,

ಇಂದು ಇಲ್ಲಿನ ರೈತ ಒಂದೇ ಬೆಳೆಯ ಮೇಲೆ ಅವಲಂಬಿತನಲ್ಲ. ಅವನು ತನ್ನಷ್ಟಕ್ಕೆ ತಾನೇ ಕೃಷಿಯನ್ನು ಯೋಜಿಸುತ್ತಿದ್ದಾನೆ. ಇಂದು ಆಲೂಗಡ್ಡೆ ಉತ್ಪಾದನೆಯಲ್ಲಿ ಬನಸ್ಕಾಂತದ ಹೆಸರು ಹೇಗೆ ಹೊರಹೊಮ್ಮಿದೆಯೋ, ಅದು ತನ್ನಿಂದ ತಾನೇ ಒಂದು ಉದಾಹರಣೆಯಾಗಿದೆ.್

ಅದೇ ರೀತಿ, ಸಹೋದರರೇ ಮತ್ತು  ಸಹೋದರಿಯರೇ,

ನಾವು ಇಂದು ಮುಂದುವರಿಸುತ್ತಿರುವ ಅಭಿವೃದ್ಧಿ ಕಾರ್ಯಗಳು, ಅವುಗಳ ಪ್ರಯೋಜನವು ಇಡೀ ಉತ್ತರ ಗುಜರಾತ್‌ಗೆ ಹೋಗುತ್ತದೆ. ವಾವ್-ಥರಡ್, ಬನಸ್ಕಂತ, ಪಠಾಣ್ ಮತ್ತು ಮೆಹ್ಸಾನಾ - ಪ್ರತಿಯೊಂದು ಜಿಲ್ಲೆಗೂ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ - ಉತ್ತಮ ಜೀವನಕ್ಕೆ ದಾರಿಗಳು ತೆರೆದುಕೊಳ್ಳುತ್ತವೆ.

ಸ್ನೇಹಿತರೇ,

ಗುಜರಾತ್‌ನ ಅತಿದೊಡ್ಡ ಶಕ್ತಿ ಎಂದರೆ ಅದು 25 ವರ್ಷಗಳಿಂದ ಅಭಿವೃದ್ಧಿಯ ಮಹಾ ಅಭಿಯಾನವನ್ನು ನಿರಂತರವಾಗಿ ಮುನ್ನಡೆಸಿತು, ಅದು ಸ್ಥಗಿತಗೊಳ್ಳಲು  ಬಿಡಲಿಲ್ಲ. ಗುಜರಾತ್ ಹೊಸ ದಾಖಲೆಗಳನ್ನು ನಿರ್ಮಿಸಿತು. ತನ್ನದೇ ಆದ ದಾಖಲೆಗಳನ್ನು ತಾನೇ ಮುರಿಯುತು. ನಂತರ ಹೊಸ ದಾಖಲೆಗಳನ್ನು ನಿರ್ಮಿಸಿತು, ನಂತರ ದಾಖಲೆಯನ್ನು ಮುರಿದು, ಮತ್ತೆ ಹೊಸ ದಾಖಲೆಗಳನ್ನು ಮಾಡಿದೆ. ಇದೀಗ ಗುಜರಾತ್‌ನ ಮೂಲಸೌಕರ್ಯ ಯೋಜನೆಗಳ ಬಗ್ಗೆ ಪ್ರಸ್ತಾಪಿಸಲಾಯಿತು, ಅದೇ ರೀತಿ, ನಾವು ಇಡೀ ಗುಜರಾತ್‌ನಲ್ಲಿ ಉತ್ತಮ ರಸ್ತೆಗಳೊಂದಿಗೆ ಹಳ್ಳಿಯಿಂದ ಹಳ್ಳಿಗೆ ಸಂಪರ್ಕ ಕಲ್ಪಿಸಿದ್ದೇವೆ. ಹೈ-ಸ್ಪೀಡ್ ಹೆದ್ದಾರಿಗಳನ್ನು ನಿರ್ಮಿಸಿದ್ದೇವೆ. ವಂದೇ ಭಾರತ್‌ನಂತಹ ಹೈ-ಸ್ಪೀಡ್ ರೈಲುಗಳ ಸೌಲಭ್ಯವನ್ನು ಗುಜರಾತ್ ಸಹ ಸ್ವೀಕರಿಸುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

2005ರಲ್ಲಿ, ಗುಜರಾತ್‌ನ ಮೂಲೆ ಮೂಲೆಗೂ ಅಭಿವೃದ್ಧಿಯನ್ನು ಕೊಂಡೊಯ್ಯಲು ನಾನು 'ನಗರಾಭಿವೃದ್ಧಿ ವರ್ಷ'ವನ್ನು ಪ್ರಾರಂಭಿಸಿದೆ. ಆಗ ಅದರ ಬಜೆಟ್ ಸುಮಾರು ಆರುನೂರ ಐವತ್ತು ಕೋಟಿ ರೂಪಾಯಿಗಳಾಗಿತ್ತು. ಆದರೆ, ಅಭಿವೃದ್ಧಿಯ ಚಕ್ರ ಎಷ್ಟು ವೇಗವಾಗಿ ತಿರುಗಿತು ಎಂದರೆ ಇಂದು ಬಜೆಟ್ 33 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗಿದೆ. ಈ ದಿಕ್ಕಿನಲ್ಲಿ, 9 ಹೊಸ ಪುರಸಭೆಗಳಿಗೆ ಸುಮಾರು 2300 ಕೋಟಿ ರೂಪಾಯಿಗಳ ಸುಮಾರು 300 ಪ್ರಸ್ತಾವನೆಗಳು ಅನುಮೋದನೆಗೆ ಬಂದಿವೆ. 72 ಪುರಸಭೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಈ ವರ್ಷ ಗುಜರಾತ್ ಸರ್ಕಾರ ಮಂಡಿಸಿರುವ ಬಜೆಟ್ ಕೂಡ 4 ಲಕ್ಷ ಕೋಟಿಗಳಿಗಿಂತ ಹೆಚ್ಚು. ಈ ಹಣವನ್ನು ಹಳ್ಳಿಗಳು, ಪಟ್ಟಣಗಳು ​​ಮತ್ತು ನಗರಗಳ ಪರಿವರ್ತನೆಗಾಗಿ ಖರ್ಚು ಮಾಡಲಾಗುವುದು. ಪ್ರತಿ ಹಳ್ಳಿಯಲ್ಲಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಪೈಪ್‌ಗಳ ಮೂಲಕ ಮನೆ-ಮನೆಗೆ ನೀರು ತಲುಪುತ್ತಿದೆ.

ಸಹೋದರರೇ ಮತ್ತು  ಸಹೋದರಿಯರೇ,

ಪಂಚಾಯತ್‌ನಿಂದ ಸಂಸತ್ತಿನವರೆಗೆ ನಿಮ್ಮ ನಂಬಿಕೆ/ವಿಶ್ವಾಸ ಇರುವವರೆಗೆ, ಅಭಿವೃದ್ಧಿಯು ಅತ್ಯಂತ ವೇಗದ ರೈಲಿನಂತೆ ಇದೇ ವೇಗದಲ್ಲಿ ಚಲಿಸುತ್ತಲೇ ಇರುತ್ತದೆ.

ಸ್ನೇಹಿತರೇ,

ಭಾರತದ ದೊಡ್ಡ ಶಕ್ತಿ ಎಂದರೆ ಅದು - ಕಷ್ಟದ ಸಮಯ, ಎಷ್ಟೇ ಕಠಿಣ ಸಮಯ ಬಂದರೂ, ನಮ್ಮ ದೇಶವು ಕಷ್ಟದ ಸಮಯದಲ್ಲಿ ಒಗ್ಗಟ್ಟಿನಿಂದ ನಿಂತಿದೆ. ನೀವು ಕೆಲವು ಸಮಯದಿಂದ ನೋಡುತ್ತಿದ್ದೀರಿ, ಪ್ರಪಂಚದ ಅನೇಕ ದೇಶಗಳು ಯುದ್ಧ, ಅಶಾಂತಿ ಮತ್ತು ಅಸ್ಥಿರತೆಯಿಂದ ಆವರಿಸಿಕೊಂಡಿವೆ. ಪಶ್ಚಿಮ ಏಷ್ಯಾದಲ್ಲಿ ಸೃಷ್ಟಿಯಾದ ಪರಿಸ್ಥಿತಿಯು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿದೆ. ಡೀಸೆಲ್, ಪೆಟ್ರೋಲ್ ಮತ್ತು ಅನಿಲದಂತಹ ಇಂಧನ ಅಗತ್ಯಗಳ ಸಮಸ್ಯೆ ಇಡೀ ಜಗತ್ತಿನಲ್ಲಿ ಹೆಚ್ಚಾಗಿದೆ. ಅಂತಹ ಬಿಕ್ಕಟ್ಟಿನಲ್ಲಿಯೂ ಸಹ, ಭಾರತವು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದೆ. ಇದರ ಹಿಂದೆ ದೇಶದ ಯಶಸ್ವಿ ವಿದೇಶಾಂಗ ನೀತಿಯ ಶಕ್ತಿ ಮತ್ತು ದೇಶವಾಸಿಗಳ ಏಕತೆಯಿದೆ.

ಆದರೆ ಸಹೋದರರೇ ಮತ್ತು ಸಹೋದರಿಯರೇ,

ದುರದೃಷ್ಟ ನೋಡಿ, ನಮ್ಮ ದೇಶದಲ್ಲಿ ಕೆಲವು ರಾಜಕೀಯ ಪಕ್ಷಗಳು ಜಾಗತಿಕ ಬಿಕ್ಕಟ್ಟಿನ ಯುಗದಲ್ಲೂ ರಾಜಕೀಯದ ರೊಟ್ಟಿ ಬೇಯಿಸುವುದನ್ನು ನಿಲ್ಲಿಸುತ್ತಿಲ್ಲ! ಈ ರಾಜಕೀಯ ಪಿತೂರಿಯ ಮುಂಚೂಣಿಯಲ್ಲಿ ಯಾರಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ! ಇಂದು ದೇಶಕ್ಕೆ ಏಕತೆ ಮತ್ತು ಒಗ್ಗಟ್ಟಿನ ಅಗತ್ಯವಿರುವಾಗ, ಕಾಂಗ್ರೆಸ್ ನಾಯಕರು ದೇಶವನ್ನು ವಿಭಜಿಸುವಲ್ಲಿ ನಿರತರಾಗಿದ್ದಾರೆ. ಇಂದು ದೇಶಕ್ಕೆ ವಿಶ್ವಾಸ ಅಗತ್ಯವಿರುವಾಗ, ಕಾಂಗ್ರೆಸ್ ಭಯ ಮತ್ತು ವದಂತಿಗಳನ್ನು ಹರಡುವಲ್ಲಿ ನಿರತವಾಗಿದೆ. ಇಂದು ದೇಶಕ್ಕೆ ಸಂಯಮದ ಅಗತ್ಯವಿರುವಾಗ, ಕಾಂಗ್ರೆಸ್ ಜನರನ್ನು ಪ್ರಚೋದಿಸುವಲ್ಲಿ ನಿರತವಾಗಿದೆ. ರಾಜಕೀಯ ರಣಹದ್ದುಗಳಂತೆ, ದೇಶ ತೊಂದರೆಯಲ್ಲಿ ಸಿಲುಕಿದಾಗ ಕಾಂಗ್ರೆಸ್ ಸಮಯ ಕಾಯುತ್ತಿರುತ್ತದೆ ಮತ್ತು ನೆಪದಲ್ಲಿ ಅವರು ರಾಜಕೀಯ ಲಾಭವನ್ನು ಪಡೆಯುತ್ತಾರೆ!

ಸಹೋದರರೇ ಮತ್ತು  ಸಹೋದರಿಯರೇ,

ಇಂದು ವಿಶ್ವದ ಸಣ್ಣ ಶಕ್ತಿಗಳಿಂದ ಹಿಡಿದು ದೊಡ್ಡ ಸರ್ವ ಶಕ್ತ ರಾಷ್ಟ್ರಗಳವರೆಗೆ, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಶೇಕಡಾ 10 ರಷ್ಟು, ಶೇಕಡಾ 20 ರಷ್ಟು, ಕೆಲವೆಡೆ ಶೇಕಡಾ 25 ರಷ್ಟು ಹೆಚ್ಚಾಗಿವೆ. ಆದರೆ, ಭಾರತ ಅದರ ಪರಿಣಾಮ ದೇಶದ ಜನರ ಮೇಲೆ ಬೀಳಲು ಬಿಡುತ್ತಿಲ್ಲ. ಕಾಂಗ್ರೆಸ್ ಗೆ ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ, ಅದು ನಿರಂತರವಾಗಿ ವದಂತಿಗಳನ್ನು ಹರಡುತ್ತಿದೆ, ಇದರಿಂದಾಗಿ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ ಮತ್ತು ಜನರು ಪೆಟ್ರೋಲ್ ಪಂಪ್‌ಗಳು ಹಾಗು ಗ್ಯಾಸ್ ಏಜೆನ್ಸಿಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ, ಅವ್ಯವಸ್ಥೆ ಹರಡುತ್ತಿದೆ! ಅವರು ಇದರ ಬಗ್ಗೆ ಪ್ರಚಾರ ಮಾಡಬೇಕು, ಅದು ಅವರ ಉದ್ದೇಶ!

ಸ್ನೇಹಿತರೇ,

ಅಧಿಕಾರದಿಂದ ಹೊರಗಿದ್ದರೆ ಅದು ಕಾಂಗ್ರೆಸ್ ಪಕ್ಷವನ್ನು ಹುಚ್ಚರಂತಾಗಿಸುತ್ತದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜಾಗತಿಕ ಎ.ಐ. ಶೃಂಗಸಭೆಯಲ್ಲಿಯೂ ಸಹ ನೀವು ನೋಡಿದ್ದೀರಿ, ಪ್ರಪಂಚದಾದ್ಯಂತದ ಅತಿಥಿಗಳು ಇಲ್ಲಿಗೆ ಬಂದಿದ್ದರು, ದೆಹಲಿಯ ಎ.ಐ. ಶೃಂಗಸಭೆಯನ್ನು ಇಡೀ ಪ್ರಪಂಚವು ಹೊಗಳುತ್ತಿತ್ತು, ಆದರೆ ಪ್ರತಿಭಟನೆಗಾಗಿ ಕಾಂಗ್ರೆಸ್ ಜನರು ತಮ್ಮ ಬಟ್ಟೆಗಳನ್ನು ಹರಿದುಕೊಂಡರು, ಪ್ರಪಂಚದ ಮುಂದೆ ಭಾರತದ ಪ್ರತಿಷ್ಠೆಯನ್ನು ಹಾಳುಮಾಡಬೇಕೆಂದು ಅವರು ಪ್ರಯತ್ನಿಸಿದರು! ಇಂದಿನ ಪರಿಸ್ಥಿತಿಯಲ್ಲಿಯೂ ಸಹ, ಕಾಂಗ್ರೆಸ್ ಭಾರತವನ್ನು ದ್ವೇಷಿಸುವ ವಿದೇಶಿ ಶಕ್ತಿಗಳ ಭಾಷೆಯಲ್ಲಿ ಮಾತನಾಡುತ್ತಿದೆ. ಕಾಂಗ್ರೆಸ್ಸಿನ ಪಿತೂರಿಯ ಬಗ್ಗೆ ನಾವು ಜಾಗರೂಕರಾಗಿರಬೇಕು.

ಸ್ನೇಹಿತರೇ,

ಭಾರತವು ಯಾವುದೇ ಕಠಿಣ ಪರಿಸ್ಥಿತಿಯನ್ನು ದೃಢವಾಗಿ ಎದುರಿಸಬಲ್ಲದು, ಇದನ್ನು ನಾವು ಕೊರೊನಾ ಕಾಲದಲ್ಲಿಯೂ ತೋರಿಸಿದ್ದೇವೆ. ಅದೇ ರೀತಿ, ಇದು ಒಟ್ಟಿಗೆ ಇರಬೇಕಾದ ಸಮಯ. ಈ ಸಂಗತಿಯ ಬಗ್ಗೆ ನಾವು ಹೆಮ್ಮೆಪಡಬೇಕು, ಇಂದು ಇಡೀ ಜಗತ್ತು ತನ್ನ  ರಕ್ಷಣೆಯಲ್ಲಿಯೇ ಮಗ್ನವಾಗಿರುವಾಗ, ಭಾರತವು ಸ್ಥಿರತೆಯನ್ನು ಕಾಯ್ದುಕೊಳ್ಳುವುದಲ್ಲದೆ, ಪ್ರತಿದಿನ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಇಂದು ಗುಜರಾತ್‌ನಲ್ಲಿ ಸಾವಿರಾರು ಕೋಟಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಇದಕ್ಕೆ ಜೀವಂತ ಉದಾಹರಣೆಯಾಗಿದೆ. ಈ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ದೇಶವಾಸಿಗಳ ಸಂಯಮ, ಸಹಕಾರ ಮತ್ತು ಶಿಸ್ತಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ.

ನಿಮ್ಮೆಲ್ಲರನ್ನೂ ಭೇಟಿಯಾದುದರಿಂದ ತುಂಬಾ ಸಂತೋಷವಾಯಿತು. ಈಗ ನಾನು ನಿಮ್ಮ ಆಶೀರ್ವಾದ ಪಡೆದು ಮುಂದುವರಿಯುತ್ತೇನೆ. ತುಂಬಾ ಧನ್ಯವಾದಗಳು.

ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಸರಿಸುಮಾರಾದ ಅನುವಾದ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

 

*****


(ಪ್ರಕಟಣೆ ಐ.ಡಿ.: 2247543) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Manipuri , Assamese , Punjabi , Gujarati , Malayalam