ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾರ್ಚ್ 31ರಂದು ಗುಜರಾತ್‌ಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ


ಮಹಾವೀರ ಜಯಂತಿಯ ಸಂದರ್ಭದಲ್ಲಿ ಗಾಂಧಿನಗರದ ಕೋಬಾ ತೀರ್ಥದಲ್ಲಿʻಸಾಮ್ರಾಟ್ ಸಂಪ್ರತಿ ವಸ್ತುಸಂಗ್ರಹಾಲಯʼವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿಗಳು

ಈ ವಸ್ತುಸಂಗ್ರಹಾಲಯವು ಜೈನ ಧರ್ಮದ ಶ್ರೀಮಂತ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ; ಜೊತೆಗೆ ಪ್ರವಾಸಿಗರು ಜೈನ ಧರ್ಮದ ವಿಕಾಸ ಮತ್ತು ಅದರ ಆಳವಾದ ಸಾಂಸ್ಕೃತಿಕ ಪ್ರಭಾವದ ಕಾಲಾನುಕ್ರಮದ ತಿಳುವಳಿಕೆಯನ್ನು ಪಡೆಯಲು ಸಹಾಯ ಮಾಡುತ್ತದೆ

ಸನಂದ್‌ನಲ್ಲಿ ʻಕೇನ್ಸ್ ಸೆಮಿಕಾನ್ʼ ಘಟಕವನ್ನು ಪ್ರಧಾನಮಂತ್ರಿಗಳು ಉದ್ಘಾಟಿಸಲಿದ್ದು, ಇದು ಭಾರತದ ಸೆಮಿಕಂಡಕ್ಟರ್ ಪ್ರಯಾಣದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ

ಇದು ಭಾರತದಲ್ಲಿ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸುತ್ತಿರುವ ಎರಡನೇ ಸೆಮಿಕಂಡಕ್ಟರ್ ಘಟಕವಾಗಿದೆ

ದೇಶೀಯ ಸೆಮಿಕಂಡಕ್ಟರ್ ಪ್ಯಾಕೇಜಿಂಗ್ ಸಾಮರ್ಥ್ಯವನ್ನು ನಿರ್ಮಿಸಲು, ಭಾರತದ ಚಿಪ್ ಪರಿಸರ ವ್ಯವಸ್ಥೆಯಲ್ಲಿನ ನಿರ್ಣಾಯಕ ಅಂತರವನ್ನು ಪರಿಹರಿಸಲು ಹಾಗೂ ಸ್ವಾವಲಂಬನೆಯನ್ನು ಹೆಚ್ಚಿಸಲು ಈ ಘಟಕವು ನೆರವಾಗಲಿದೆ

ವಾವ್-ಥರಡ್ ನಲ್ಲಿ ₹20,000 ಕೋಟಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ

ವಿದ್ಯುತ್, ರೈಲ್ವೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಆರೋಗ್ಯ, ನಗರಾಭಿವೃದ್ಧಿ, ಬುಡಕಟ್ಟು ಅಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಸೇರಿದಂತೆ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡ ಯೋಜನೆಗಳು

ಪ್ರಕಟಣಾ ದಿನಾಂಕ: 30 MAR 2026 11:05AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಮಾರ್ಚ್ 31ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಪ್ರಧಾನಮಂತ್ರಿಯವರು ಗಾಂಧಿನಗರದಲ್ಲಿ ʻಸಾಮ್ರಾಟ್ ಸಂಪ್ರತಿʼ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 12:45ರ ಸುಮಾರಿಗೆ ಪ್ರಧಾನಮಂತ್ರಿಯವರು ಅಹಮದಾಬಾದ್‌ನ ಸನಂದ್‌ನಲ್ಲಿ ʻಕೇನ್ಸ್ ಸೆಮಿಕಾನ್ʼ ಘಟಕವನ್ನು ಉದ್ಘಾಟಿಸಲಿದ್ದಾರೆ. ಅಲ್ಲಿಯೂ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ, ಪ್ರಧಾನಮಂತ್ರಿಯವರು ವಾವ್-ಥರಾಡ್‌ಗೆ ಪ್ರಯಾಣಿಸಲಿದ್ದಾರೆ, ಅಲ್ಲಿ ಅವರು ಸಂಜೆ 4 ಗಂಟೆಗೆ 20,000 ಕೋಟಿ ರೂ.ಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಗಾಂಧಿನಗರದಲ್ಲಿ ಪ್ರಧಾನಮಂತ್ರಿ

ಮಹಾವೀರ ಜಯಂತಿಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಗಾಂಧಿನಗರದ ಕೋಬಾ ತೀರ್ಥದಲ್ಲಿ ʻಸಾಮ್ರಾಟ್ ಸಂಪ್ರತಿ ವಸ್ತುಸಂಗ್ರಹಾಲಯʼವನ್ನು ಉದ್ಘಾಟಿಸಲಿದ್ದಾರೆ. ಅಶೋಕನ ಮೊಮ್ಮಗ ಮತ್ತು ಜೈನ ಧರ್ಮದ ಪ್ರಚಾರಕ್ಕೆ ಬದ್ಧರಾಗಿದ್ದ ಜೈನ ಸಂಪ್ರದಾಯದ ಗೌರವಾನ್ವಿತ ವ್ಯಕ್ತಿ ಸಾಮ್ರಾಟ್ ಸಂಪ್ರತಿ ಅವರ ಹೆಸರನ್ನು ಇರಿಸಲಾದ ಈ ವಸ್ತುಸಂಗ್ರಹಾಲಯವು ಜೈನ ಧರ್ಮದ ಶ್ರೀಮಂತ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ.

ʻಮಹಾವೀರ್ ಜೈನ್ ಆರಾಧನಾ ಕೇಂದ್ರʼದ ಆವರಣದಲ್ಲಿರುವ ಈ ವಸ್ತುಸಂಗ್ರಹಾಲಯವು ಏಳು ವಿಭಿನ್ನ ವಿಭಾಗಗಳನ್ನು ಹೊಂದಿದೆ. ಈ ಪ್ರತಿಯೊಂದು ವಿಭಾಗವೂ ಭಾರತದ ನಾಗರಿಕ ಸಂಪ್ರದಾಯಗಳ ವಿಶಿಷ್ಟ ಅಂಶಗಳಿಗೆ ಮೀಸಲಾಗಿದೆ. ಇದು ಶತಮಾನಗಳ ಜ್ಞಾನ ಮತ್ತು ಪರಂಪರೆಯ ಮೂಲಕ ಸಂದರ್ಶಕರಿಗೆ ಸಮಗ್ರ ಅನುಭವವನ್ನು ನೀಡುತ್ತದೆ. ವಸ್ತುಸಂಗ್ರಹಾಲಯವು ಸಾಂಪ್ರದಾಯಿಕ ಪ್ರದರ್ಶನಗಳನ್ನು ಆಧುನಿಕ ಡಿಜಿಟಲ್ ಮತ್ತು ದೃಶ್ಯ-ಶ್ರಾವ್ಯ ವ್ಯವಸ್ಥೆಗಳೊಂದಿಗೆ ಸಂಯೋಜಿಸುತ್ತದೆ. ಸಂದರ್ಶಕರು, ಸಂಶೋಧಕರು ಮತ್ತು ವಿದ್ವಾಂಸರಿಗೆ ತಲ್ಲೀನಗೊಳಿಸುವ ಮತ್ತು ಆಕರ್ಷಕ ಅನುಭವವನ್ನು ಸೃಷ್ಟಿಸುತ್ತದೆ.

ಈ ವಸ್ತುಸಂಗ್ರಹಾಲಯದಲ್ಲಿ ಶತಮಾನಗಳಷ್ಟು ಹಳೆಯದಾದ ಅಪರೂಪದ ಅವಶೇಷಗಳು, ಜೈನ ಕಲಾಕೃತಿಗಳು ಮತ್ತು ಸಾಂಪ್ರದಾಯಿಕ ಪರಂಪರೆಯ ಸಂಗ್ರಹಗಳನ್ನು ಸಂರಕ್ಷಿಸಲಾಗಿದೆ ಮತ್ತು ಪ್ರದರ್ಶಿಸಲಾಗಿದೆ. ಇವುಗಳಲ್ಲಿ ಸಂಕೀರ್ಣವಾಗಿ ರಚಿಸಲಾದ ಕಲ್ಲು ಮತ್ತು ಲೋಹದ ವಿಗ್ರಹಗಳು, ದೊಡ್ಡ ತೀರ್ಥ ಪಟ್ಟಾ ಮತ್ತು ಯಂತ್ರ ಪಟ್ಟಾ, ಚಿಕಣಿ ವರ್ಣಚಿತ್ರಗಳು, ಬೆಳ್ಳಿಯ ರಥಗಳು, ನಾಣ್ಯಗಳು ಮತ್ತು ಪ್ರಾಚೀನ ಹಸ್ತಪ್ರತಿಗಳು ಸೇರಿವೆ. ಏಳು ಭವ್ಯ ಗ್ಯಾಲರಿಗಳಲ್ಲಿ ಇವೆಲ್ಲವುಗಳನ್ನೂ ಪ್ರದರ್ಶಿಸಲ್ಪಟ್ಟಿವೆ. ವಿಶಾಲವಾದ ಸಭಾಂಗಣಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಅಪರೂಪದ ಸಂಪತ್ತನ್ನು ಜೋಡಿಸಲಾಗಿದೆ, ಈ ವಸ್ತುಸಂಗ್ರಹಾಲಯವು ಸಂದರ್ಶಕರಿಗೆ ಜೈನ ಧರ್ಮದ ವಿಕಾಸ ಮತ್ತು ಅದರ ಆಳವಾದ ಸಾಂಸ್ಕೃತಿಕ ಪ್ರಭಾವದ ಕಾಲಾನುಕ್ರಮದ ತಿಳುವಳಿಕೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ.

ಸಾನಂದ್‌ನಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ಅಹಮದಾಬಾದ್‌ನ ʻಸನಂದ್ ಜಿಐಡಿಸಿʼಯಲ್ಲಿ ʻಕೇನ್ಸ್ ಸೆಮಿಕಾನ್ʼ ಘಟಕವನ್ನು ಉದ್ಘಾಟಿಸಲಿದ್ದಾರೆ. ಇದು ಈ ಘಟಕದಲ್ಲಿ ವಾಣಿಜ್ಯ ಉತ್ಪಾದನೆಯ ಪ್ರಾರಂಭವನ್ನು ಸೂಚಿಸುತ್ತದೆ, ಇದು ಭಾರತದ ಸೆಮಿಕಂಡಕ್ಟರ್ ಪ್ರಯಾಣದಲ್ಲಿ ಮಹತ್ವದ ಮೈಲುಗಲ್ಲಾಗಿದೆ.

ಸಣ್ಣ ಗಾತ್ರದ, ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಪವರ್ ಸ್ವಿಚಿಂಗ್ ವ್ಯವಸ್ಥೆಗಳ ಅಗತ್ಯವಿರುವ ವಾಹನ ಮತ್ತು ಕೈಗಾರಿಕಾ ಅನ್ವಯಿಕೆಗಳಿಗೆ ನಿರ್ಣಾಯಕ ಘಟಕಗಳಾದ ʻಸುಧಾರಿತ ಇಂಟೆಲಿಜೆಂಟ್ ಪವರ್ ಮಾಡ್ಯೂಲ್‌ʼಗಳ(ಐಪಿಎಂ) ವಾಣಿಜ್ಯ ಉತ್ಪಾದನೆ ಇಲ್ಲಿ ಪ್ರಾರಂಭವಾಗಲಿದೆ. ಪ್ರತಿ ಮಾಡ್ಯೂಲ್ 17 ಚಿಪ್‌ಗಳನ್ನು ಒಳಗೊಂಡಿರುತ್ತದೆ ಮತ್ತು ಕ್ಯಾಲಿಫೋರ್ನಿಯಾ ಮೂಲದ ʻಆಲ್ಫಾ ಮತ್ತು ಒಮೆಗಾ ಸೆಮಿಕಂಡಕ್ಟರ್ʼಗೆ(ಎಒಎಸ್) ಇವುಗಳನ್ನು ಪೂರೈಸಲಾಗುವುದು. ಘಟಕದ ಎಲ್ಲಾ ಹಂತಗಳು ಪೂರ್ಣಗೊಂಡ ಬಳಿಕ, ಇದು ದಿನಕ್ಕೆ 6.33 ದಶಲಕ್ಷ ಯುನಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ʻಕೇನ್ಸ್ ಸೆಮಿಕಾನ್ʼ ಘಟಕದ ಉದ್ಘಾಟನೆಯು ʻಇಂಡಿಯಾ ಸೆಮಿಕಂಡಕ್ಟರ್ ಮಿಷನ್ʼ (ಐಎಸ್ಎಂ) ಅಡಿಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸುವ ಕಾರ್ಯಕ್ರಮದ ಅಡಿಯಲ್ಲಿ ಅನುಮೋದಿತ ಯೋಜನೆಗಳಲ್ಲಿ ʻಮೈಕ್ರಾನ್ ಟೆಕ್ನಾಲಜಿʼಯ ನಂತರ ಇದು ಎರಡನೇ ಸೆಮಿಕಂಡಕ್ಟರ್ ಘಟಕವಾಗಿದೆ.

ಉತ್ಪಾದನಾ ಹಂತವನ್ನು ಪ್ರವೇಶಿಸುವ ಭಾರತದ ಎರಡನೇ ʻಒಎಸ್ಎಟಿ/ಎಟಿಎಂಪಿʼ (ಹೊರಗುತ್ತಿಗೆ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ / ಅಸೆಂಬ್ಲಿ, ಟೆಸ್ಟಿಂಗ್ , ಮಾರ್ಕಿಂಗ್ ಮತ್ತು ಪ್ಯಾಕಿಂಗ್) ಘಟಕವನ್ನು ಗುರುತಿಸುವ ಈ ಯೋಜನೆಯು ವಿಶೇಷ ಮಹತ್ವವನ್ನು ಹೊಂದಿದೆ. ಇದು ಭಾರತೀಯ ಮೂಲದ ʻಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಸರ್ವೀಸಸ್ʼ (ಇಎಂಎಸ್) ಕಂಪನಿಯ ಸೆಮಿಕಂಡಕ್ಟರ್ ಉತ್ಪಾದನೆಗೆ ಪ್ರವೇಶವನ್ನು ಸೂಚಿಸುತ್ತದೆ, ಆ ಮೂಲಕ ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ.

ಈ ಘಟಕವು ದೇಶೀಯ ಸೆಮಿಕಂಡಕ್ಟರ್ ಪ್ಯಾಕೇಜಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು, ಭಾರತದ ಚಿಪ್ ಪರಿಸರ ವ್ಯವಸ್ಥೆಯಲ್ಲಿನ ನಿರ್ಣಾಯಕ ಅಂತರವನ್ನು ಪರಿಹರಿಸಲು ಮತ್ತು ಉನ್ನತ ತಂತ್ರಜ್ಞಾನ ಉತ್ಪಾದನೆಯಲ್ಲಿ ಸ್ವಾವಲಂಬನೆಯ ದೃಷ್ಟಿಕೋನವನ್ನು ಹೆಚ್ಚಿಸಲು ಕೊಡುಗೆ ನೀಡುತ್ತದೆ.

ವಾವ್-ಥರಾಡ್ ನಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು 20,000 ಕೋಟಿ ರೂ.ಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಲೋಕಾರ್ಪಣೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ವಿದ್ಯುತ್, ರೈಲ್ವೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ಆರೋಗ್ಯ, ನಗರಾಭಿವೃದ್ಧಿ, ಬುಡಕಟ್ಟು ಅಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ ಕಾಮಗಾರಿಗಳು ಇದರಲ್ಲಿ ಸೇರಿವೆ.

5,100 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಪ್ರವೇಶ-ನಿಯಂತ್ರಿತ ಹೆದ್ದಾರಿಯ ʻಅಹಮದಾಬಾದ್-ಧೋಲೆರಾ ಎಕ್ಸ್‌ಪ್ರೆಸ್‌ವೇʼ ಅನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಈ ಎಕ್ಸ್‌ಪ್ರೆಸ್‌ವೇ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುತ್ತದೆ, ಧೋಲೆರಾ ವಿಶೇಷ ಹೂಡಿಕೆ ಪ್ರದೇಶದಲ್ಲಿ (ಡಿಎಸ್ಐಆರ್) ಕೈಗಾರಿಕಾ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಪ್ರಧಾನಮಂತ್ರಿಯವರು 4-ಪಥದ ಇಡಾರ್-ಬಡೋಲಿ ಬೈಪಾಸ್ ವಿಭಾಗದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿಯವರು ʻರಾಷ್ಟ್ರೀಯ ಹೆದ್ದಾರಿ 754ಕೆʼಗೆ ಸೇರಿರುವ ʻಧೋಲವಿರಾ-ಮೌವಾನಾ-ವೌವಾ-ಸಂತಾಲ್ಪುರ್ʼ ವಿಭಾಗವನ್ನು (ಪ್ಯಾಕೇಜ್-2) ಸುಸಜ್ಜಿತ ದ್ವಿಪಥ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ಹೆದ್ದಾರಿ ಮೂಲಸೌಕರ್ಯವನ್ನು ಬಲಪಡಿಸುತ್ತವೆ, ಧೋಲವಿರಾದಂತಹ ಪ್ರವಾಸೋದ್ಯಮ ತಾಣಗಳು ಸೇರಿದಂತೆ ಪ್ರಮುಖ ಪ್ರದೇಶಗಳಿಗೆ ಸಂಪರ್ಕವನ್ನು ಸುಧಾರಿಸುತ್ತವೆ, ಸರಕುಸಾಗಣೆ ದಕ್ಷತೆಯನ್ನು ಹೆಚ್ಚಿಸುತ್ತವೆ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುತ್ತವೆ.

ಗಾಂಧಿನಗರ-ಕೋಬಾ-ವಿಮಾನ ನಿಲ್ದಾಣ ರಸ್ತೆಯ ಭೈಜಿಪುರ ಜಂಕ್ಷನ್‌ನಲ್ಲಿರುವ ಮೇಲ್ಸೇತುವೆ ಸೇರಿದಂತೆ ಪ್ರಮುಖ ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಕಟ್ಟಡದ ಕೆಳಗೆ ಸಮಗ್ರ ಪಾರ್ಕಿಂಗ್ ಸ್ಥಳವನ್ನು ಒದಗಿಸುತ್ತದೆ. ಗಾಂಧಿನಗರ-ಕೋಬಾ-ಅರೋದ್ರಮ್ ರಸ್ತೆಯ ʻಪಿಡಿಪಿಯು ಜಂಕ್ಷನ್‌ʼನಲ್ಲಿರುವ ಮೇಲ್ಸೇತುವೆಯನ್ನು ಸಹ ಉದ್ಘಾಟಿಸಲಾಗುವುದು. ಗಾಂಧಿನಗರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ನಿತ್ಯ 140,000ಕ್ಕೂ ಹೆಚ್ಚು ವಾಹನಗಳ ದಟ್ಟಣೆಯನ್ನು ನಿರ್ವಹಿಸುತ್ತದೆ. ಮೇಲ್ಸೇತುವೆಯು  ‘ಸಿಎಚ್-0ʼ ಜಂಕ್ಷನ್‌ನಿಂದ ಅಹಮದಾಬಾದ್ ಮತ್ತು ಗಾಂಧಿನಗರ ನಡುವಿನ ವಿಮಾನ ನಿಲ್ದಾಣಕ್ಕೆ ಸುಗಮ ಮತ್ತು ತಡೆರಹಿತ ಸಂಚಾರವನ್ನು ಖಚಿತಪಡಿಸುತ್ತದೆ.

ಸುಮಾರು 3,650 ಕೋಟಿ ರೂ.ಗಳ ಒಟ್ಟು ವೆಚ್ಚದಲ್ಲಿ 4.5 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಸ್ಥಳಾಂತರಿಸಲು ಖಾವ್ಡಾ ಪೂಲಿಂಗ್ ಸ್ಟೇಷನ್ -2 ಮತ್ತು ಸಂಬಂಧಿತ ಪ್ರಸರಣ ವ್ಯವಸ್ಥೆಗಳು ಸೇರಿದಂತೆ ಪ್ರಮುಖ ವಿದ್ಯುತ್ ಪ್ರಸರಣ ಯೋಜನೆಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ಈ ಯೋಜನೆಗಳು ನವೀಕರಿಸಬಹುದಾದ ಇಂಧನ ಏಕೀಕರಣ ಮತ್ತು ಪ್ರಸರಣ ಸಾಮರ್ಥ್ಯವನ್ನು ಬಲಪಡಿಸುತ್ತವೆ.

ರೈಲ್ವೇ ವಲಯಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ಅವರು ʻಕನಾಲುಸ್ – ಜಾಮ್ ನಗರ ಜೋಡಿ ಮಾರ್ಗ ಯೋಜನೆʼ(28 ಕಿ.ಮೀ), ʻರಾಜ್‌ಕೋಟ್ – ಕನಾಲುಸ್ ಜೋಡಿ ಮಾರ್ಗ ಯೋಜನೆʼಯ ಒಂದು ಭಾಗ (111.20 ಕಿ.ಮೀ) ಹಾಗೂ ʻಗಾಂಧಿಧಾಮ – ಆದಿಪುರ್ʼ ವಿಭಾಗದ (10.69 ಕಿ.ಮೀ) ನಾಲ್ಕು ಹಳಿ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳು ರೈಲು ಸಾಮರ್ಥ್ಯವನ್ನು ಹೆಚ್ಚಿಸುತ್ತವೆ, ದಟ್ಟಣೆಯನ್ನು ಕಡಿಮೆ ಮಾಡುತ್ತವೆ, ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುತ್ತವೆ ಜೊತೆಗೆ ಪ್ರಯಾಣಿಕರು ಮತ್ತು ಸರಕು ಸಾಗಣೆಯ ಚಲನೆ ವೇಗವನ್ನು ಹೆಚ್ಚಿಸುತ್ತವೆ.

ಪ್ರಧಾನಮಂತ್ರಿಯವರು ʻಹಿಮ್ಮತ್ ನಗರ-ಖೇದಬ್ರಹ್ಮʼ ಗೇಜ್ ಪರಿವರ್ತನೆ ಯೋಜನೆಯನ್ನು (54.83 ಕಿ.ಮೀ) ಉದ್ಘಾಟಿಸಲಿದ್ದಾರೆ. ಇದು ಈ ಪ್ರದೇಶದಲ್ಲಿ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಸಂಚಾರವನ್ನು ಸುಧಾರಿಸುತ್ತದೆ. ಖೇದಬ್ರಹ್ಮ-ಹಿಮ್ಮತ್ ನಗರ-ಅಸರ್ವಾ ರೈಲು ಸೇವೆಗೆ ಅವರು ಹಸಿರು ನಿಶಾನೆ ತೋರಲಿದ್ದಾರೆ.

ಗುಜರಾತ್‌ನಾದ್ಯಂತ ನಗರ ಮೂಲಸೌಕರ್ಯಗಳನ್ನು ಹೆಚ್ಚಿಸುವ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಸುಮಾರು 5,300 ಕೋಟಿ ರೂ.ಗಳ 44 ನಗರಾಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಹಮದಾಬಾದ್‌ನ ಅಸರ್ವಾದ ಸಿವಿಲ್ ಆಸ್ಪತ್ರೆಯಲ್ಲಿ 858 ಹಾಸಿಗೆಗಳ ಆಶ್ರಯತಾಣದ ಉದ್ಘಾಟನೆ ಮತ್ತು ಗಾಂಧಿನಗರ ಸಿವಿಲ್ ಆಸ್ಪತ್ರೆ ಹಾಗೂ ಗಾಂಧಿನಗರದ ʻಜಿಎಂಇಆರ್‌ಎಸ್ʼ ವೈದ್ಯಕೀಯ ಕಾಲೇಜಿನಲ್ಲಿ ಇದೇ ರೀತಿಯ ಸೌಲಭ್ಯ ಸೇರಿದಂತೆ ವಿವಿಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಉಪಕ್ರಮಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ.

ಪ್ರಧಾನಮಂತ್ರಿಯವರು ಪಟಾನ್‌ನ ʻರಾಣಿ ಕಿ ವಾವ್ʼ =ನಲ್ಲಿ ಬೆಳಕು ಮತ್ತು ಧ್ವನಿ ಪ್ರದರ್ಶನ, ವಡ್‌ನಗರದ ಶರ್ಮಿಷ್ಠ ಸರೋವರದಲ್ಲಿ ʻವಾಟರ್ ಸ್ಕ್ರೀನ್ ಪ್ರೊಜೆಕ್ಷನ್ ಶೋʼ ಮತ್ತು ಪ್ರವಾಸೋದ್ಯಮ ಅನುಭವವನ್ನು ಹೆಚ್ಚಿಸುವ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಬನಸ್ಕಾಂತದ ಬಲರಾಮ್ ಮಹಾದೇವ್ ಮತ್ತು ವಿಶ್ವೇಶ್ವರ ಮಹಾದೇವ್‌ನಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಬನಸ್ಕಾಂತದ ಕಸರಾ-ದಂತಿವಾಡ ಪೈಪ್‌ಲೈನ್‌ ಹಾಗೂ ಪಟಾನ್ ಮತ್ತು ಬನಸ್ಕಾಂತದಾದ್ಯಂತ ದಿಂಡ್ರೋಲ್-ಮುಕ್ತೇಶ್ವರ ಪೈಪ್‌ಲೈನ್‌ ಸೇರಿದಂತೆ ಸುಮಾರು 1,780 ಕೋಟಿ ರೂ.  ಮೌಲ್ಯದ ಎರಡು ಪ್ರಮುಖ ನೀರಿನ ಪೈಪ್‌ಲೈನ್‌ ಯೋಜನೆಗಳನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಪ್ರಧಾನಮಂತ್ರಿಯವರು ಅಂಬಾಜಿ ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು 34 ಗ್ರಾಮಗಳು ಮತ್ತು ಅಂಬಾಜಿ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುತ್ತದೆ. ಬನಸ್ಕಾಂತ ಜಿಲ್ಲೆಯ ದಂತಾ ಮತ್ತು ಅಮೀರ್‌ಗಢ ತಾಲ್ಲೂಕುಗಳ ಸುಮಾರು 1.5 ಲಕ್ಷ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಗಾಂಧಿನಗರ ಜಿಲ್ಲೆಯಲ್ಲಿ ಸುಮಾರು 1000 ಕೋಟಿ ರೂ.ಗಳ ಒಟ್ಟು ಹೂಡಿಕೆಯೊಂದಿಗೆ ಮೂರು ಸಬರಮತಿ ನದಿ ತೀರದ ವಿಸ್ತರಣಾ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿಯವರು ಅಹ್ಮದಾಬಾದ್‌ನ ವೇಜಲ್ಪುರದಲ್ಲಿ ಸರ್ಕಾರಿ ಬಾಲಕರ ಹಾಸ್ಟೆಲ್ ಉದ್ಘಾಟಿಸಲಿದ್ದಾರೆ. ಈ ಸೌಲಭ್ಯವು ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಬುಡಕಟ್ಟು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.

 

*****


(ಪ್ರಕಟಣೆ ಐ.ಡಿ.: 2246865) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , Marathi , हिन्दी , Bengali , Manipuri , Punjabi , Gujarati , Telugu , Malayalam