ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಮುಖ ವಲಯಗಳ ಸ್ಥಿತಿಗತಿಗಳ ಮಾಹಿತಿ
ದೇಶದ ಎಲ್ಲಾ ಪೆಟ್ರೋಲ್ ಪಂಪ್ ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ ಸಾಕಷ್ಟು ದಾಸ್ತಾನು ಲಭ್ಯವಿದೆ
ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ಗಳ ವಿತರಣೆ ಸಹಜವಾಗಿದೆ; ನಿನ್ನೆ 54 ಲಕ್ಷಕ್ಕೂ ಹೆಚ್ಚು ಎಲ್ ಪಿ ಜಿ ಮರುಭರ್ತಿ ಸಿಲಿಂಡರ್ ಗಳನ್ನು ವಿತರಿಸಲಾಗಿದೆ
ವಾಣಿಜ್ಯ ಎಲ್ ಪಿ ಜಿ ಹಂಚಿಕೆಯನ್ನು ಬಿಕ್ಕಟ್ಟಿನ ಪೂರ್ವದ ಮಟ್ಟದ ಶೇ. 70 ಕ್ಕೆ ಹೆಚ್ಚಿಸಲಾಗಿದೆ
14 ಮಾರ್ಚ್ 2026 ರಿಂದ ವಾಣಿಜ್ಯ ಸಂಸ್ಥೆಗಳಿಂದ 33,781 ಮೆಟ್ರಿಕ್ ಟನ್ ಗೃಹಬಳಕೆಯೇತರ ಎಲ್ ಪಿ ಜಿಯನ್ನು ಪಡೆಯಲಾಗಿದೆ
ವದಂತಿಗಳನ್ನು ತಡೆಗಟ್ಟಲು ದೈನಂದಿನ ಪತ್ರಿಕಾಗೋಷ್ಠಿ ನಡೆಸಲು ಮತ್ತು ಮಾಧ್ಯಮ ಮಾಹಿತಿಗಳನ್ನು ನೀಡಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒತ್ತಾಯಿಸಲಾಗಿದೆ; ಈಗಾಗಲೇ 14 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ದೈನಂದಿನ ಸುದ್ದಿಗೋಷ್ಠಿಗಳನ್ನು ನಡೆಸುತ್ತಿವೆ
ಕಳೆದ 24 ಗಂಟೆಗಳಲ್ಲಿ 25 ಮಂದಿ ಸೇರಿದಂತೆ ಇದುವರೆಗೆ 938 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗಿದೆ
ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಯಾವುದೇ ದಟ್ಟಣೆಯಿಲ್ಲದೆ ಸಹಜವಾಗಿವೆ
ಪಶ್ಚಿಮ ಏಷ್ಯಾದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ನಡುವೆ ಭಾರತೀಯರ ಸ್ಥಳಾಂತರ ಮತ್ತು ಬೆಂಬಲ ಪ್ರಯತ್ನಗಳನ್ನು ಸರ್ಕಾರ ಮುಂದುವರಿಸಿದೆ
ಸ್ಥಳಾಂತರ ಮತ್ತು ವಿಮಾನ ಕಾರ್ಯಾಚರಣೆಗಳು ಮುಂದುವರಿದಿದ್ದು, ಸುಮಾರು 5 ಲಕ್ಷ ಪ್ರಯಾಣಿಕರು ಭಾರತಕ್ಕೆ ಮರಳಿದ್ದಾರೆ
ಪ್ರಕಟಣಾ ದಿನಾಂಕ:
28 MAR 2026 5:40PM by PIB Bengaluru
ಪಶ್ಚಿಮ ಏಷ್ಯಾದಲ್ಲಿನ ಬದಲಾಗುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಪ್ರಮುಖ ಕ್ಷೇತ್ರಗಳಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಭಾರತ ಸರ್ಕಾರವು ಅಗತ್ಯ ಸಿದ್ಧತೆಗಳನ್ನು ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಇಂಧನ ಪೂರೈಕೆ, ಸಮುದ್ರ ಮಾರ್ಗದ ಕಾರ್ಯಾಚರಣೆಗಳು ಮತ್ತು ಆ ಪ್ರದೇಶದಲ್ಲಿರುವ ಭಾರತೀಯರಿಗೆ ನೀಡಲಾಗುತ್ತಿರುವ ನೆರವಿನ ಕುರಿತಾದ ಇತ್ತೀಚಿನ ಮಾಹಿತಿಗಳು ಇಲ್ಲಿವೆ:
ಇಂಧನ ಪೂರೈಕೆ ಮತ್ತು ಇಂಧನದ ಲಭ್ಯತೆ
ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿದ್ದರೂ ಸಹ, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್ ಪಿ ಜಿ (ಅಡುಗೆ ಅನಿಲ) ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಪರಿಸ್ಥಿತಿ ಹೀಗಿದೆ:
ಕಚ್ಚಾ ತೈಲ/ಸಂಸ್ಕರಣಾಗಾರಗಳು:
· ಎಲ್ಲಾ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸಾಕಷ್ಟು ಕಚ್ಚಾ ತೈಲ ದಾಸ್ತಾನು ಹೊಂದಿವೆ. ದೇಶವು ಪೆಟ್ರೋಲ್ ಮತ್ತು ಡೀಸೆಲ್ ನ ಸಾಕಷ್ಟು ದಾಸ್ತಾನನ್ನು ಸಹ ನಿರ್ವಹಿಸುತ್ತಿದೆ.
· ದೇಶೀಯ ಬಳಕೆಯನ್ನು ಬೆಂಬಲಿಸಲು ಸಂಸ್ಕರಣಾಗಾರಗಳಿಂದ ಗೃಹಬಳಕೆಯ ಎಲ್ ಪಿ ಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.
ಚಿಲ್ಲರೆ ಮಾರಾಟ ಮಳಿಗೆಗಳು
· ದೇಶಾದ್ಯಂತ ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ.
· ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 10 ರೂ. ಕಡಿತಗೊಳಿಸಿದೆ.
· ಇದಲ್ಲದೆ, ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ 21.5 ರೂ. ಮತ್ತು ಏವಿಯೇಷನ್ ಟರ್ಬೈನ್ ಫ್ಯುಯೆಲ್ (ಎಟಿಎಫ್) ಮೇಲೆ 29.5 ರೂ. ರಫ್ತು ಸುಂಕವನ್ನು ಭಾರತ ಸರ್ಕಾರ ವಿಧಿಸಿದೆ.
· ಕೆಲವು ಪ್ರದೇಶಗಳಲ್ಲಿ 'ಪ್ಯಾನಿಕ್ ಬಯಿಂಗ್' (ಆತಂಕದಿಂದ ಖರೀದಿ ಮಾಡುವುದು) ವರದಿಯಾಗಿದೆ. ಕೆಲವು ವದಂತಿಗಳಿಂದಾಗಿ ಕೆಲವು ರಾಜ್ಯಗಳ ಮಳಿಗೆಗಳಲ್ಲಿ ಅತಿಯಾದ ಮಾರಾಟ ಮತ್ತು ಅತಿಯಾದ ಜನದಟ್ಟಣೆ ಉಂಟಾಗಿತ್ತು. ಆದಾಗ್ಯೂ, ದೇಶದ ಎಲ್ಲಾ ಪೆಟ್ರೋಲ್ ಪಂಪ್ ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದು ತಿಳಿಸಲಾಗಿದೆ.
· ವದಂತಿಗಳನ್ನು ನಂಬಬಾರದು ಎಂದು ಸರ್ಕಾರವು ಸಾರ್ವಜನಿಕರಿಗೆ ತನ್ನ ಸಲಹೆಯನ್ನು ಪುನರುಚ್ಚರಿಸಿದೆ.
ನೈಸರ್ಗಿಕ ಅನಿಲ:
· ಡಿ-ಪಿ ಎನ್ ಜಿ ಮತ್ತು ಸಿ ಎನ್ ಜಿ-ಸಾರಿಗೆಯ ಗ್ರಾಹಕರಿಗೆ ಆದ್ಯತೆ ನೀಡಲಾಗಿದ್ದು, ಇವರಿಗೆ ಶೇ. 100 ರಷ್ಟು ಪೂರೈಕೆ ಮಾಡಲಾಗುತ್ತಿದೆ.
· ಗ್ರಿಡ್ ಗೆ ಸಂಪರ್ಕ ಹೊಂದಿದ ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಅವರ ಸರಾಸರಿ ಬಳಕೆಯ ಶೇ. 80 ರಷ್ಟು ಪೂರೈಕೆ ಮಾಡಲಾಗುತ್ತಿದೆ.
· ವಾಣಿಜ್ಯ ಎಲ್ ಪಿ ಜಿ ಲಭ್ಯತೆಯ ಆತಂಕಗಳನ್ನು ನಿವಾರಿಸಲು, ರೆಸ್ಟೋರೆಂಟ್ ಗಳು, ಹೋಟೆಲ್ ಗಳು ಮತ್ತು ಕ್ಯಾಂಟೀನ್ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ತಮ್ಮ ಎಲ್ಲಾ ಭೌಗೋಳಿಕ ಪ್ರದೇಶಗಳಲ್ಲಿ ಪಿ ಎನ್ ಜಿ ಸಂಪರ್ಕಗಳಿಗೆ ಆದ್ಯತೆ ನೀಡಲು ನಗರ ಅನಿಲ ವಿತರಣಾ (ಸಿಜಿಡಿ) ಘಟಕಗಳಿಗೆ ಭಾರತ ಸರ್ಕಾರ ಸೂಚಿಸಿದೆ.
· ಐಜಿಎಲ್, ಎಂಜಿಎಲ್, ಗೇಲ್ ಗ್ಯಾಸ್ ಮತ್ತು ಬಿಪಿಸಿಎಲ್ ನಂತಹ ಸಿಜಿಡಿ ಕಂಪನಿಗಳು ಗೃಹಬಳಕೆಯ ಮತ್ತು ವಾಣಿಜ್ಯ ಪಿ ಎನ್ ಜಿ ಸಂಪರ್ಕಗಳನ್ನು ಪಡೆಯಲು ಪ್ರೋತ್ಸಾಹಕಗಳನ್ನು ನೀಡಿವೆ.
· ಸಿಜಿಡಿ ಜಾಲ ವಿಸ್ತರಣೆಗೆ ಅಗತ್ಯವಾದ ಅರ್ಜಿಗಳ ಅನುಮೋದನೆಯನ್ನು ತ್ವರಿತಗೊಳಿಸುವಂತೆ ಭಾರತ ಸರ್ಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳಿಗೆ ವಿನಂತಿಸಿದೆ.
· ದಿನಾಂಕ 18.03.2026 ರ ಪತ್ರದ ಮೂಲಕ, ರಾಜ್ಯಗಳು ಎಲ್ ಪಿ ಜಿ ಯಿಂದ ಪಿ ಎನ್ ಜಿ ಗೆ ದೀರ್ಘಕಾಲೀನ ಪರಿವರ್ತನೆಗೆ ಸಹಾಯ ಮಾಡಿದರೆ, ಅಂತಹ ರಾಜ್ಯಗಳಿಗೆ ವಾಣಿಜ್ಯ ಎಲ್ ಪಿ ಜಿ ಯ ಹೆಚ್ಚುವರಿ ಶೇ. 10 ರಷ್ಟು ಹಂಚಿಕೆಯನ್ನು ಭಾರತ ಸರ್ಕಾರ ನೀಡಿದೆ. ತರುವಾಯ, ಸಿಜಿಡಿ ಜಾಲ ಉತ್ತೇಜಿಸಲು ಸುಧಾರಣೆಗಳನ್ನು ಕೈಗೊಂಡ ಹಲವಾರು ರಾಜ್ಯಗಳಿಂದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಅರ್ಜಿಗಳನ್ನು ಸ್ವೀಕರಿಸಿದೆ. ಅದರಂತೆ ಕೆಲವು ರಾಜ್ಯಗಳಿಗೆ ಹೆಚ್ಚುವರಿ ಹಂಚಿಕೆಯನ್ನು ಶಿಫಾರಸು ಮಾಡಲಾಗಿದೆ.
· ಕೆಲವು ರಾಜ್ಯಗಳು ತ್ವರಿತ 'ರೈಟ್ ಆಫ್ ಯೂಸರ್/ರೈಟ್ ಆಫ್ ವೇ' (RoU/RoW) ಅನುಮತಿಗಳು, ದೀರ್ಘ ಕೆಲಸದ ಅವಧಿ ಮತ್ತು RoU/RoW ಶುಲ್ಕಗಳ ತರ್ಕಬದ್ಧಗೊಳಿಸುವಿಕೆಗಾಗಿ ನೀತಿಗಳನ್ನು ರೂಪಿಸಿವೆ.
· ಪಿ ಎನ್ ಜಿ ಆರ್ ಬಿ ದಿನಾಂಕ 23.03.2026 ರ ತನ್ನ ಆದೇಶದಲ್ಲಿ, ಪೈಪ್‌ಲೈನ್ ಮೂಲಸೌಕರ್ಯ ಲಭ್ಯವಿರುವ ಹತ್ತಿರದ ಪ್ರದೇಶಗಳಲ್ಲಿ ವಸತಿ ಶಾಲೆಗಳು ಮತ್ತು ಕಾಲೇಜುಗಳು, ಹಾಸ್ಟೆಲ್ ಗಳು, ಸಮುದಾಯ ಅಡುಗೆ ಮನೆಗಳು, ಅಂಗನವಾಡಿ ಕೇಂದ್ರಗಳು ಇತ್ಯಾದಿಗಳಿಗೆ 5 ದಿನಗಳಲ್ಲಿ ಪಿ ಎನ್ ಜಿ ಸಂಪರ್ಕ ಕಲ್ಪಿಸಲು ಎಲ್ಲಾ ಸಿಜಿಡಿ ಸಂಸ್ಥೆಗಳಿಗೆ ನಿರ್ದೇಶಿಸಿದೆ.
· ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 24.03.2026 ರ ಪತ್ರದಲ್ಲಿ, ಸಿಜಿಡಿ ಮೂಲಸೌಕರ್ಯಕ್ಕಾಗಿ 3 ತಿಂಗಳ ಅವಧಿಗೆ ವಿಶೇಷ ಕ್ರಮವಾಗಿ "ಕಡಿಮೆ ಸಮಯದ ಮಿತಿಯೊಂದಿಗೆ ಸಿಜಿಡಿ ಮೂಲಸೌಕರ್ಯಕ್ಕೆ ತ್ವರಿತ ಅನುಮೋದನೆ ಚೌಕಟ್ಟು" ಅಳವಡಿಸಿಕೊಳ್ಳಲಾಗಿದ್ದು, ಅಲ್ಲಿ ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಆದ್ಯತೆಯ ಮೇಲೆ ಪರಿಗಣಿಸಲಾಗುವುದು ಎಂದು ತಿಳಿಸಿದೆ.
· ಭಾರತ ಸರ್ಕಾರವು 24.03.2026 ರ ಗೆಜೆಟ್ ಮೂಲಕ 'ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ವಿತರಣೆ (ಪೈಪ್‌ಲೈನ್‌ಗಳ ನಿರ್ಮಾಣ, ಕಾರ್ಯಾಚರಣೆ ಮತ್ತು ವಿಸ್ತರಣೆಯ ಮೂಲಕ) ಆದೇಶ, 2026' ಅನ್ನು ಅಗತ್ಯ ವಸ್ತುಗಳ ಕಾಯ್ದೆ, 1955 ರ ಅಡಿಯಲ್ಲಿ ಅಧಿಸೂಚಿಸಿದೆ. ಈ ಆದೇಶವು ದೇಶಾದ್ಯಂತ ಪೈಪ್‌ಲೈನ್ ಗಳನ್ನು ಹಾಕಲು ಸುಗಮ ಮತ್ತು ಕಾಲಮಿತಿಯ ಚೌಕಟ್ಟನ್ನು ಒದಗಿಸುತ್ತದೆ, ಇದು ಅನುಮೋದನೆಗಳು ಮತ್ತು ಭೂಮಿಯ ಲಭ್ಯತೆಯ ವಿಳಂಬವನ್ನು ನಿವಾರಿಸುತ್ತದೆ. ಇದು ವಸತಿ ಪ್ರದೇಶಗಳು ಸೇರಿದಂತೆ ನೈಸರ್ಗಿಕ ಅನಿಲ ಮೂಲಸೌಕರ್ಯದ ವೇಗದ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತದೆ. ಇದು ಪಿ ಎನ್ ಜಿ ಜಾಲದ ಬೆಳವಣಿಗೆಯನ್ನು ವೇಗಗೊಳಿಸುತ್ತದೆ, ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಶುದ್ಧ ಇಂಧನಗಳಿಗೆ ಪರಿವರ್ತನೆಯನ್ನು ಬೆಂಬಲಿಸುತ್ತದೆ, ಇದರಿಂದಾಗಿ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಭಾರತದ ಅನಿಲ ಆಧಾರಿತ ಆರ್ಥಿಕತೆಯನ್ನು ಮುನ್ನಡೆಸುತ್ತದೆ ಎಂದು ನಿರೀಕ್ಷಿಸಲಾಗಿದೆ.
· ರಕ್ಷಣಾ ಸಚಿವಾಲಯವು 27.03.2026 ರ ಪತ್ರದಲ್ಲಿ, ರಕ್ಷಣಾ ವಸತಿ ಪ್ರದೇಶಗಳು/ಯುನಿಟ್ ಲೈನ್ ಗಳಲ್ಲಿ ಪಿ ಎನ್ ಜಿ ಮೂಲಸೌಕರ್ಯ ಅಳವಡಿಕೆಯನ್ನು ತ್ವರಿತಗೊಳಿಸಲು ಜೂನ್ 30, 2026 ರವರೆಗೆ ಜಾರಿಯಲ್ಲಿರುವಂತೆ ಅಲ್ಪಾವಧಿಯ ನೀತಿ ಮಾರ್ಪಾಡುಗಳನ್ನು ಹೊರಡಿಸಿದೆ:
o ಅಗತ್ಯ ಕೆಲಸಗಳನ್ನು ಕೈಗೊಳ್ಳಲು 24 ಗಂಟೆಗಳ ಒಳಗೆ ಅಗತ್ಯ ಅನುಮೋದನೆ.
o ಮೊದಲ 10 ವರ್ಷಗಳ ಅವಧಿಗೆ ವಾರ್ಷಿಕ ಲೈಸೆನ್ಸ್ ಶುಲ್ಕ @ ಪ್ರತಿ ಮೀಟರ್‌ಗೆ 1 ರೂ. ದರದಲ್ಲಿ ಭೂಗತ ಪೈಪ್‌ಲೈನ್ ಮತ್ತು ವಾಲ್ವ್ ಚೇಂಬರ್ ಹಾಕಲು ರಕ್ಷಣಾ ಭೂಮಿ ಬಳಸಲು ಅನುಮತಿ.
o ಯಾವುದೇ ರಸ್ತೆ ಮರುಸ್ಥಾಪನೆ ಶುಲ್ಕವಿಲ್ಲ. ಸಿಜಿಡಿ ಸಂಸ್ಥೆಗಳು ಸಾರ್ವಜನಿಕ ಆಸ್ತಿಗಳನ್ನು ಸ್ವಂತ ವೆಚ್ಚದಲ್ಲಿ ಗುಣಮಟ್ಟಕ್ಕೆ ಅನುಗುಣವಾಗಿ ಮರುಸ್ಥಾಪಿಸಬೇಕು.
· ಸಿಜಿಡಿ ಸಂಸ್ಥೆಗಳು ನಿನ್ನೆ 110 ಕೇಂದ್ರೀಕೃತ ಭೌಗೋಳಿಕ ಪ್ರದೇಶಗಳಲ್ಲಿ 11,463 ಪಿ ಎನ್ ಜಿ ಸಂಪರ್ಕಗಳನ್ನು (ಹೊಸ ಸಂಪರ್ಕಗಳು ಮತ್ತು ಹಳೆಯ ಗ್ಯಾಸ್-ಇನ್) ವರದಿ ಮಾಡಿವೆ.
ಎಲ್ ಪಿ ಜಿ
· ಪ್ರಚಲಿತ ಭೌಗೋಳಿಕ ರಾಜಕೀಯ ಪರಿಸ್ಥಿತಿಯು ಎಲ್ ಪಿ ಜಿ ಪೂರೈಕೆಯ ಮೇಲೆ ಪರಿಣಾಮ ಬೀರಿದೆ.
ಗೃಹಬಳಕೆಯ ಎಲ್ ಪಿ ಜಿ ಪೂರೈಕೆ:
· ಎಲ್ ಪಿ ಜಿ ವಿತರಕರಲ್ಲಿ ಯಾವುದೇ ದಾಸ್ತಾನು ಕೊರತೆ ವರದಿಯಾಗಿಲ್ಲ.
· ಆನ್‌ಲೈನ್ ಎಲ್ ಪಿ ಜಿ ಸಿಲಿಂಡರ್ ಬುಕಿಂಗ್ ನಿನ್ನೆ ಶೇ. 91 ಕ್ಕೆ ಏರಿದೆ.
· ವಿತರಕರ ಮಟ್ಟದಲ್ಲಿ ಅಕ್ರಮ ವರ್ಗಾವಣೆಯನ್ನು ತಡೆಯಲು, ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ಆಧಾರಿತ ವಿತರಣೆಯನ್ನು ಫೆಬ್ರವರಿ 2026 ರ 53% ರಿಂದ ನಿನ್ನೆ ಶೇ.84 ಕ್ಕೆ ಹೆಚ್ಚಿಸಲಾಗಿದೆ.
· ನಿನ್ನೆ 54 ಲಕ್ಷಕ್ಕೂ ಹೆಚ್ಚು ಎಲ್ ಪಿ ಜಿ ಮರುಭರ್ತಿ ಸಿಲಿಂಡರ್ ಗಳನ್ನು ವಿತರಿಸಲಾಗಿದೆ.
· ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ಗಳ ವಿತರಣೆ ಸಹಜವಾಗಿದೆ.
ವಾಣಿಜ್ಯ ಎಲ್ ಪಿ ಜಿ ಪೂರೈಕೆ:
· ಸರ್ಕಾರವು ಈಗಾಗಲೇ ಗ್ರಾಹಕರಿಗೆ ಭಾಗಶಃ ವಾಣಿಜ್ಯ ಎಲ್ ಪಿ ಜಿ ಪೂರೈಕೆಯನ್ನು (ಶೇ. 20) ಪುನಃಸ್ಥಾಪಿಸಿದೆ. ಇದಲ್ಲದೆ, ಪಿ ಎನ್ ಜಿ ವಿಸ್ತರಣೆಗಾಗಿ ಸುಧಾರಣೆಗಳನ್ನು ತಂದ ರಾಜ್ಯಗಳಿಗೆ ಹೆಚ್ಚುವರಿ ಶೇ. 10 ರಷ್ಟು ಹಂಚಿಕೆ ಮಾಡಲು ಭಾರತ ಸರ್ಕಾರವು 18.03.2026 ರಂದು ಪ್ರಸ್ತಾಪಿಸಿತ್ತು.
· ಭಾರತ ಸರ್ಕಾರವು 21.03.2026 ರ ಪತ್ರದ ಮೂಲಕ ರಾಜ್ಯಗಳಿಗೆ ಮತ್ತೊಂದು ಶೇ.20 ರಷ್ಟು ವಾಣಿಜ್ಯ ಎಲ್ ಪಿ ಜಿ ಹಂಚಿಕೆಯನ್ನು ಅನುಮತಿಸಿದೆ, ಇದು ಒಟ್ಟು ಹಂಚಿಕೆಯನ್ನು ಶೇ. 50 ಕ್ಕೆ ಕೊಂಡೊಯ್ಯುತ್ತದೆ (ಪಿ ಎನ್ ಜಿ ಸುಧಾರಣೆ ಆಧಾರಿತ ಶೇ. 10 ಸೇರಿದಂತೆ). ಈ ಹೆಚ್ಚುವರಿ ಶೇ. 20 ರಷ್ಟು ಹಂಚಿಕೆಯನ್ನು ಹೋಟೆಲ್ ಗಳು, ರೆಸ್ಟೋರೆಂಟ್ ಗಳು, ಡಾಬಾಗಳು, ಕೈಗಾರಿಕಾ ಕ್ಯಾಂಟೀನ್ ಗಳು, ಆಹಾರ ಸಂಸ್ಕರಣೆ/ಡೈರಿ, ಸರ್ಕಾರಿ ಸಬ್ಸಿಡಿ ಕ್ಯಾಂಟೀನ್ ಗಳು, ಸಮುದಾಯ ಅಡುಗೆ ಮನೆಗಳು ಮತ್ತು ವಲಸೆ ಕಾರ್ಮಿಕರಿಗೆ (5 ಕೆಜಿ ಎಫ್ಟಿಎಲ್) ಆದ್ಯತೆಯ ಮೇಲೆ ನೀಡಲಾಗುವುದು.
· ಭಾರತ ಸರ್ಕಾರವು 27.03.2026 ರ ಪತ್ರದ ಮೂಲಕ ವಾಣಿಜ್ಯ ಎಲ್ ಪಿ ಜಿ ಗಾಗಿ ಹೆಚ್ಚುವರಿ ಶೇ. 20 ರಷ್ಟು ಹಂಚಿಕೆ ಮಾಡಲು ನಿರ್ಧರಿಸಿದೆ (ಇದು ಒಟ್ಟು ವಾಣಿಜ್ಯ ಹಂಚಿಕೆಯನ್ನು ಬಿಕ್ಕಟ್ಟಿನ ಪೂರ್ವದ ಶೇ. 70 ಕ್ಕೆ ತರುತ್ತದೆ). ಈ ಹೆಚ್ಚುವರಿ ಶೇ. 20 ರಷ್ಟು ಹಂಚಿಕೆಯನ್ನು ಉಕ್ಕು, ಆಟೋಮೊಬೈಲ್, ಜವಳಿ, ಡೈ, ರಾಸಾಯನಿಕ ಮತ್ತು ಪ್ಲಾಸ್ಟಿಕ್ ಕೈಗಾರಿಕೆಗಳಿಗೆ ನೀಡಲಾಗುವುದು. ಇದರಲ್ಲಿ, ನೈಸರ್ಗಿಕ ಅನಿಲದಿಂದ ಬದಲಾಯಿಸಲಾಗದ ಕೈಗಾರಿಕೆಗಳಿಗೆ ಅಥವಾ ವಿಶೇಷ ತಾಪನ ಉದ್ದೇಶಗಳಿಗಾಗಿ ಎಲ್ ಪಿ ಜಿ ಅಗತ್ಯವಿರುವವರಿಗೆ ಆದ್ಯತೆ ನೀಡಲಾಗುವುದು.
· ನಿನ್ನೆ 46,000 ಕ್ಕೂ ಹೆಚ್ಚು 5 ಕೆಜಿ ಎಫ್ ಟಿ ಎಲ್ ಸಿಲಿಂಡರ್ ಗಳನ್ನು ಮಾರಾಟ ಮಾಡಲಾಗಿದೆ.
· 28 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಭಾರತ ಸರ್ಕಾರದ ಮಾರ್ಗಸೂಚಿಗಳಂತೆ ವಾಣಿಜ್ಯ ಎಲ್ ಪಿ ಜಿ ಹಂಚಿಕೆಗೆ ಆದೇಶ ಹೊರಡಿಸಿವೆ. ಉಳಿದ ರಾಜ್ಯಗಳಿಗೆ ಪಿ ಎಸ್ ಯು ತೈಲ ಮಾರುಕಟ್ಟೆ ಕಂಪನಿಗಳು ಸಿಲಿಂಡರ್ ಗಳನ್ನು ಬಿಡುಗಡೆ ಮಾಡುತ್ತಿವೆ. 14 ಮಾರ್ಚ್ 2026 ರಿಂದ ಇದುವರೆಗೆ ಒಟ್ಟು 33,781 ಮೆಟ್ರಿಕ್ ಟನ್ ಅನ್ನು ರಾಜ್ಯಗಳ ವಾಣಿಜ್ಯ ಸಂಸ್ಥೆಗಳು ಪಡೆದುಕೊಂಡಿವೆ.
ಸೀಮೆಎಣ್ಣೆ
· ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಾಮಾನ್ಯ ಹಂಚಿಕೆಗಿಂತ ಹೆಚ್ಚುವರಿಯಾಗಿ 48,000 ಕೆಎಲ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ.
· ಸೀಮೆಎಣ್ಣೆ ವಿತರಣೆಗಾಗಿ ಜಿಲ್ಲೆಗಳಲ್ಲಿ ಸ್ಥಳಗಳನ್ನು ಗುರುತಿಸಲು ರಾಜ್ಯಗಳನ್ನು ಕೋರಲಾಗಿದೆ.
· 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೀಮೆಎಣ್ಣೆ ಹಂಚಿಕೆ ಆದೇಶಗಳನ್ನು ಹೊರಡಿಸಿವೆ. ಹಿಮಾಚಲ ಪ್ರದೇಶ ಮತ್ತು ಲಡಾಖ್ ತಮಗೆ ಸೀಮೆಎಣ್ಣೆ ಅಗತ್ಯವಿಲ್ಲ ಎಂದು ತಿಳಿಸಿವೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಾತ್ರ
· ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್ ಪಿ ಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ ಯಾವುದೇ ಅಕ್ರಮ ಸಂಗ್ರಹಣೆ ಮತ್ತು ಕಾಳಸಂತೆ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿ ಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯನ್ನು ಮೇಲ್ವಿಚಾರಣೆ ಮಾಡುವಲ್ಲಿ ರಾಜ್ಯಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಭಾರತ ಸರ್ಕಾರವು ಪುನರುಚ್ಚರಿಸಿದೆ. ಭಾರತ ಸರ್ಕಾರವು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಬಹು ಪತ್ರಗಳು ಮತ್ತು ವಿಡಿಯೋ ಕಾನ್ಫರೆನ್ಸ್ ಗಳ ಮೂಲಕ ಇದನ್ನು ಪುನರುಚ್ಚರಿಸಿದೆ.
· ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಮುಖ್ಯ ಕಾರ್ಯದರ್ಶಿಗಳು, ಎಸಿಎಸ್/ಪ್ರಧಾನ ಕಾರ್ಯದರ್ಶಿಗಳು/ ಆಹಾರ ಮತ್ತು ನಾಗರಿಕ ಪೂರೈಕೆ ಕಾರ್ಯದರ್ಶಿಗಳಿಗೆ ಈ ಕೆಳಗಿನ ವಿನಂತಿ ಮಾಡಲಾಗಿದೆ:
o ರಾಜ್ಯ/ಜಿಲ್ಲಾ ಮಟ್ಟದಲ್ಲಿ ದೈನಂದಿನ ಪತ್ರಿಕಾಗೋಷ್ಠಿಗಳನ್ನು ಸಾಂಸ್ಥಿಕಗೊಳಿಸುವುದು ಮತ್ತು ಸಾರ್ವಜನಿಕ ಸಲಹೆಗಳನ್ನು ನೀಡುವುದು.
o ಸಮರ್ಪಿತ ನಿಯಂತ್ರಣ ಕೊಠಡಿ/ಸಹಾಯವಾಣಿ ಸ್ಥಾಪಿಸುವುದು.
o ಸಾಮಾಜಿಕ ಮಾಧ್ಯಮಗಳಲ್ಲಿನ ಸುಳ್ಳು ಸುದ್ದಿ/ವದಂತಿಗಳನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವುದು ಮತ್ತು ನಿಭಾಯಿಸುವುದು.
o ಜಿಲ್ಲಾಡಳಿತದಿಂದ ದೈನಂದಿನ ಜಾರಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸುವುದು ಮತ್ತು ತೈಲ ಕಂಪನಿಗಳೊಂದಿಗೆ ಜಂಟಿ ತಪಾಸಣೆ ನಡೆಸುವುದು.
o ರಾಜ್ಯದೊಳಗೆ ವಾಣಿಜ್ಯ ಎಲ್ ಪಿ ಜಿ ಮತ್ತು ಹೆಚ್ಚುವರಿ ಸೀಮೆಎಣ್ಣೆ ಹಂಚಿಕೆಗೆ ಆದೇಶ ಹೊರಡಿಸುವುದು.
o ಸಿಜಿಡಿ ವಿಸ್ತರಣೆ ಮತ್ತು ಪಿ ಎನ್ ಜಿ ಪಡೆಯುವಿಕೆಯನ್ನು ಉತ್ತೇಜಿಸುವುದು.
o ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದೊಂದಿಗೆ ಸಮನ್ವಯಕ್ಕಾಗಿ ಹಿರಿಯ ನೋಡಲ್ ಅಧಿಕಾರಿಗಳನ್ನು ನೇಮಿಸುವುದು.
· ಭಾರತದ ಸರ್ಕಾರವು 27.03.2026 ರಂದು ಬರೆದ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಸರಿಯಾದ ಮಾಹಿತಿಯನ್ನು ಪ್ರಸಾರ ಮಾಡಲು ಮತ್ತು ವದಂತಿಗಳನ್ನು ತೊಡೆದುಹಾಕಲು ದೈನಂದಿನ ಪತ್ರಿಕಾಗೋಷ್ಠಿಗಳು ಮತ್ತು ಸಕ್ರಿಯ ಸಾಮಾಜಿಕ ಮಾಧ್ಯಮ/ಎಲೆಕ್ಟ್ರಾನಿಕ್ ಮಾಧ್ಯಮ ನವೀಕರಣಗಳನ್ನು ನಡೆಸುವಂತೆ ವಿನಂತಿಸಿದೆ. ಪ್ರಸ್ತುತ, 14 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ದೈನಂದಿನ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.
ಜಾರಿ ಕ್ರಮಗಳು
· ಅಕ್ರಮ ಸಂಗ್ರಹಣೆ ತಡೆಯಲು ರಾಜ್ಯಗಳಲ್ಲಿ ದಾಳಿಗಳು ಮುಂದುವರಿದಿವೆ. ನಿನ್ನೆ ಸುಮಾರು 2900 ದಾಳಿಗಳನ್ನು ನಡೆಸಲಾಗಿದ್ದು, 1700 ಕ್ಕೂ ಹೆಚ್ಚು ಸಿಲಿಂಡರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
· ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ಅಕ್ರಮ ದಾಸ್ತಾನು/ ಕಪ್ಪು ಮಾರುಕಟ್ಟೆ ಪ್ರಕರಣಗಳನ್ನು ಪರಿಶೀಲಿಸಲು ಪಿ ಎಸ್ ಯು ತೈಲ ಕಂಪನಿಗಳ ಅಧಿಕಾರಿಗಳು ನಿನ್ನೆ ದೇಶಾದ್ಯಂತ 1600 ಕ್ಕೂ ಹೆಚ್ಚು ಚಿಲ್ಲರೆ ಮಳಿಗೆಗಳು ಮತ್ತು ಎಲ್ ಪಿ ಜಿ ವಿತರಕರ ಮೇಲೆ ಅನಿರೀಕ್ಷಿತ ತಪಾಸಣೆ ನಡೆಸಿದ್ದಾರೆ.
· ಇದುವರೆಗೆ ಎಲ್ ಪಿ ಜಿ ವಿತರಕರಿಗೆ 390 ಕ್ಕೂ ಹೆಚ್ಚು ಕಾರಣ ಕೇಳುವ ನೋಟಿಸ್ ಗಳನ್ನು ನೀಡಲಾಗಿದೆ.
ಇತರ ಸರ್ಕಾರಿ ಕ್ರಮಗಳು
· ಯುದ್ಧದ ಪರಿಸ್ಥಿತಿಯ ನಡುವೆಯೂ, ಸರ್ಕಾರವು ಗೃಹಬಳಕೆಯ ಎಲ್ ಪಿ ಜಿ ಮತ್ತು ಪಿ ಎನ್ ಜಿ ಗೆ ಅತ್ಯುನ್ನತ ಆದ್ಯತೆ ನೀಡಿದೆ, ಜೊತೆಗೆ ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ.
· ಸರ್ಕಾರವು ಈಗಾಗಲೇ ಪೂರೈಕೆ ಮತ್ತು ಬೇಡಿಕೆಯ ಎರಡೂ ಕಡೆಗಳಲ್ಲಿ ಹಲವಾರು ತರ್ಕಬದ್ಧಗೊಳಿಸುವ ಕ್ರಮಗಳನ್ನು ಜಾರಿಗೆ ತಂದಿದೆ, ಇದರಲ್ಲಿ ಸಂಸ್ಕರಣಾಗಾರ ಉತ್ಪಾದನೆಯನ್ನು ಹೆಚ್ಚಿಸುವುದು, ನಗರ ಪ್ರದೇಶಗಳಲ್ಲಿ ಬುಕಿಂಗ್ ಅವಧಿಯನ್ನು 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಲಯಗಳಿಗೆ ಆದ್ಯತೆ ನೀಡುವುದು ಸೇರಿವೆ.
· ಎಲ್ ಪಿ ಜಿ ಮೇಲಿನ ಒತ್ತಡ ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನ ಆಯ್ಕೆಗಳನ್ನು ನೀಡಲಾಗಿದೆ.
· ಸಣ್ಣ, ಮಧ್ಯಮ ಮತ್ತು ಇತರ ಗ್ರಾಹಕರಿಗೆ ಕಲ್ಲಿದ್ದಲು ವಿತರಿಸಲು ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೆ ಮಾಡಲು ಕಲ್ಲಿದ್ದಲು ಸಚಿವಾಲಯವು ಈಗಾಗಲೇ ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಲ್ಲಿದ್ದಲುಗಳಿಗೆ ಆದೇಶ ನೀಡಿದೆ.
· ಗೃಹಬಳಕೆ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ ಪಿ ಎನ್ ಜಿ ಸಂಪರ್ಕಗಳನ್ನು ಸುಗಮಗೊಳಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ.
ಸಾರ್ವಜನಿಕ ಸಲಹೆ
· ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿ ಜಿ ಲಭ್ಯತೆಯನ್ನು ಖಚಿತಪಡಿಸಲು ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಆತಂಕದಿಂದ ಖರೀದಿ ಮಾಡಬೇಡಿ.
· ವದಂತಿಗಳ ಬಗ್ಗೆ ಎಚ್ಚರವಿರಲಿ ಮತ್ತು ಅಧಿಕೃತ ಮೂಲಗಳ ಮಾಹಿತಿಯನ್ನೇ ನಂಬಿರಿ.
· ಎಲ್ ಪಿ ಜಿ ಗ್ರಾಹಕರು ಡಿಜಿಟಲ್ ಬುಕಿಂಗ್ ಬಳಸಿ ಮತ್ತು ವಿತರಕರನ್ನು ಭೇಟಿ ಮಾಡುವುದನ್ನು ತಪ್ಪಿಸಿ.
· ಪಿ ಎನ್ ಜಿ, ಇಂಡಕ್ಷನ್ ಸ್ಟೌವ್ ಗಳಂತಹ ಪರ್ಯಾಯಗಳನ್ನು ಬಳಸುವಂತೆ ವಿನಂತಿಸಲಾಗಿದೆ.
· ಪ್ರಸ್ತುತ ಪರಿಸ್ಥಿತಿಯಲ್ಲಿ, ಎಲ್ಲಾ ನಾಗರಿಕರು ತಮ್ಮ ದೈನಂದಿನ ಬಳಕೆಯಲ್ಲಿ ಇಂಧನವನ್ನು ಸಂರಕ್ಷಿಸಲು ಅಗತ್ಯ ಪ್ರಯತ್ನಗಳನ್ನು ಮಾಡುವಂತೆ ವಿನಂತಿಸಲಾಗಿದೆ.
ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು
ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಹಡಗುಗಳು ಮತ್ತು ನಾವಿಕರ ರಕ್ಷಣೆಗಾಗಿ 'ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ'ವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಚಿವಾಲಯದ ಮಾಹಿತಿ ಹೀಗಿದೆ:
· ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಕಡಲ ವ್ಯಾಪಾರದ ನಿರಂತರತೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ, ಹಡಗುಗಳ ಸಂಚಾರ, ಬಂದರು ಕಾರ್ಯಾಚರಣೆಗಳು ಮತ್ತು ಭಾರತೀಯ ನಾವಿಕರ ಸುರಕ್ಷತೆಯನ್ನು ಸತತವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
· ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ; ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜದ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
· ಪಶ್ಚಿಮ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ 540 ಭಾರತೀಯ ನಾವಿಕರನ್ನು ಹೊತ್ತ 20 ಭಾರತೀಯ ಧ್ವಜದ ಹಡಗುಗಳಿದ್ದು, ಇವುಗಳನ್ನು ಹಡಗು ನಿರ್ದೇಶನಾಲಯವು ಹಡಗು ಮಾಲೀಕರು, ಆರ್ ಪಿ ಎಸ್ ಎಲ್ ಏಜೆನ್ಸಿಗಳು ಮತ್ತು ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಮನ್ವಯ ಸಾಧಿಸಿ ಸಕ್ರಿಯವಾಗಿ ಗಮನಿಸುತ್ತಿದೆ.
· ಹಡಗು ನಿರ್ದೇಶನಾಲಯದ ನಿಯಂತ್ರಣ ಕೊಠಡಿಯು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದೆ. ಇದು ಆರಂಭವಾದಾಗಿನಿಂದ ಈವರೆಗೆ 4,431 ಕರೆಗಳನ್ನು ಮತ್ತು 8,865 ಇಮೇಲ್ ಗಳನ್ನು ನಿರ್ವಹಿಸಿದೆ; ಕಳೆದ 24 ಗಂಟೆಗಳಲ್ಲಿ 105 ಕರೆಗಳು ಮತ್ತು 309 ಇಮೇಲ್ ಗಳಿಗೆ ಸ್ಪಂದಿಸಿದೆ.
· ಹಡಗು ನಿರ್ದೇಶನಾಲಯವು ಇದುವರೆಗೆ 938 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿಸಲು ಅನುವು ಮಾಡಿಕೊಟ್ಟಿದೆ. ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಮರಳಿದ 25 ನಾವಿಕರು ಸೇರಿದ್ದಾರೆ.
· ಭಾರತದಾದ್ಯಂತ ಬಂದರು ಕಾರ್ಯಾಚರಣೆಗಳು ಯಾವುದೇ ದಟ್ಟಣೆಯಿಲ್ಲದೆ ಸಹಜವಾಗಿ ನಡೆಯುತ್ತಿವೆ; ಸರಕುಗಳಿಗಾಗಿ ಹೆಚ್ಚುವರಿ ಜಾಗವನ್ನು ನಿಗದಿಪಡಿಸಲಾಗಿದೆ. ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ ಮತ್ತು ಪುದುಚೇರಿಯ ರಾಜ್ಯ ಕಡಲ ಮಂಡಳಿಗಳು ಬಂದರುಗಳು ಸುಗಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಖಚಿತಪಡಿಸಿವೆ.
· ನಾವಿಕರ ಕಲ್ಯಾಣ ಮತ್ತು ಅಡೆತಡೆಯಿಲ್ಲದ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ರಾಯಭಾರ ಕಚೇರಿಗಳು ಮತ್ತು ಕಡಲ ವ್ಯವಹಾರದ ಪಾಲುದಾರರೊಂದಿಗೆ ನಿರಂತರ ಸಮನ್ವಯವನ್ನು ಮುಂದುವರಿಸಲಾಗಿದೆ.
ಪ್ರದೇಶದಲ್ಲಿನ ಭಾರತೀಯ ಪ್ರಜೆಗಳ ಸುರಕ್ಷತೆ
ಭಾರತೀಯ ರಾಯಭಾರ ಕಚೇರಿಗಳು ಮತ್ತು ಪೋಸ್ಟ್ ಗಳು ಈ ಪ್ರದೇಶದಲ್ಲಿರುವ ಭಾರತೀಯ ಸಮುದಾಯದೊಂದಿಗೆ ನಿರಂತರ ಸಂಪರ್ಕದಲ್ಲಿವೆ. ಅವರ ಸುರಕ್ಷತೆ ಮತ್ತು ಕ್ಷೇಮಕ್ಕಾಗಿ ಅಗತ್ಯವಾದ ಸಲಹೆಗಳನ್ನು ನೀಡುವ ಜೊತೆಗೆ ನಿರಂತರವಾಗಿ ನೆರವು ನೀಡುತ್ತಿವೆ. ಸಚಿವಾಲಯವು ನೀಡಿರುವ ಮಾಹಿತಿ ಇಂತಿದೆ:
· ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗಲ್ಫ್ ಮತ್ತು ಪಶ್ಚಿಮ ಏಷ್ಯಾದ ಬೆಳವಣಿಗೆಗಳನ್ನು ನಿಕಟವಾಗಿ ಗಮನಿಸುತ್ತಿದೆ. ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಕಲ್ಯಾಣಕ್ಕೆ ಅತ್ಯುನ್ನತ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ವಿಶೇಷ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸುತ್ತಿದ್ದು, ಮಾಹಿತಿ ವಿನಿಮಯ ಮತ್ತು ತುರ್ತು ಸ್ಪಂದನೆಗಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಯಮಿತವಾಗಿ ಸಮನ್ವಯ ಸಾಧಿಸಲಾಗುತ್ತಿದೆ.
· ಈ ಪ್ರದೇಶದಾದ್ಯಂತ ಇರುವ ಭಾರತೀಯ ರಾಯಭಾರ ಕಚೇರಿಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಸಹಾಯವಾಣಿಗಳನ್ನು ತೆರೆಯಲಾಗಿದೆ. ನಿಯಮಿತವಾಗಿ ಸುರಕ್ಷತಾ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತಿದೆ. ಸ್ಥಳೀಯ ಸರ್ಕಾರಗಳು ಮತ್ತು ಭಾರತೀಯ ಸಮುದಾಯದ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಾವಿಕರು, ವಿದ್ಯಾರ್ಥಿಗಳು, ಸಂಕಷ್ಟದಲ್ಲಿ ಸಿಲುಕಿರುವ ಪ್ರಜೆಗಳು ಮತ್ತು ಅಲ್ಪಾವಧಿಯ ಪ್ರವಾಸಿಗರಿಗೆ ವೀಸಾ, ಕಾನ್ಸುಲರ್ ಸೇವೆಗಳು ಹಾಗೂ ಅಗತ್ಯ ಸಾರಿಗೆ ವ್ಯವಸ್ಥೆಗಳಿಗಾಗಿ ನೆರವು ನೀಡಲಾಗುತ್ತಿದೆ.
· ಫೆಬ್ರವರಿ 28 ರಿಂದ ಈವರೆಗೆ ಸುಮಾರು 4,97,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಮರಳಿದ್ದಾರೆ:
o ಯುಎಇ: ವಿವಿಧ ವಿಮಾನ ನಿಲ್ದಾಣಗಳಿಂದ ಇಂದು ಭಾರತಕ್ಕೆ ಸುಮಾರು 85 ವಿಶೇಷ ವಿಮಾನಗಳು ಹಾರಾಟ ನಡೆಸುವ ನಿರೀಕ್ಷೆಯಿದೆ.
o ಸೌದಿ ಅರೇಬಿಯಾ ಮತ್ತು ಓಮನ್: ಇಲ್ಲಿಂದ ಭಾರತಕ್ಕೆ ವಿಮಾನಗಳ ಹಾರಾಟ ಮುಂದುವರಿದಿದೆ.
o ಕತಾರ್: ಇಲ್ಲಿನ ವಾಯುಪ್ರದೇಶವು ಭಾಗಶಃ ಪುನರಾರಂಭಗೊಂಡಿದ್ದು, ಇಂದು ಸುಮಾರು 8-10 ವಿಶೇಷ ವಿಮಾನಗಳು ಕಾರ್ಯಾಚರಿಸುವ ಸಾಧ್ಯತೆಯಿದೆ.
o ಕುವೈತ್ ಮತ್ತು ಬಹ್ರೇನ್: ಇಲ್ಲಿನ ವಾಯುಪ್ರದೇಶ ಇನ್ನೂ ಮುಚ್ಚಲ್ಪಟ್ಟಿದೆ; ಹಾಗಾಗಿ ಕುವೈತ್ ನ 'ಜಜೀರಾ ಏರ್ವೇಸ್' ಮತ್ತು ಬಹ್ರೇನ್ ನ 'ಗಲ್ಫ್ ಏರ್' ಸಂಸ್ಥೆಗಳ ವಿಶೇಷ ವಾಣಿಜ್ಯ ವಿಮಾನಗಳನ್ನು ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ಓಡಿಸಲಾಗುತ್ತಿದೆ.
o ಇರಾನ್: ಇಲ್ಲಿರುವ ಭಾರತೀಯ ಪ್ರಜೆಗಳ ಪ್ರಯಾಣಕ್ಕೆ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಅನುಕೂಲ ಮಾಡಿಕೊಡಲಾಗುತ್ತಿದೆ.
o ಇಸ್ರೇಲ್: ಇಲ್ಲಿರುವವರ ಪ್ರಯಾಣಕ್ಕೆ ಜೋರ್ಡಾನ್ ಮೂಲಕ ವ್ಯವಸ್ಥೆ ಮಾಡಲಾಗಿದೆ.
o ಇರಾಕ್: ಇಲ್ಲಿರುವವರ ಪ್ರಯಾಣಕ್ಕೆ ಜೋರ್ಡಾನ್ ಮತ್ತು ಸೌದಿ ಅರೇಬಿಯಾ ಮೂಲಕ ಅನುಕೂಲ ಮಾಡಿಕೊಡಲಾಗುತ್ತಿದೆ.
· ಅಬುಧಾಬಿಯಲ್ಲಿ ಕ್ಷಿಪಣಿ ಪ್ರತಿಬಂಧಕ ಕಾರ್ಯಾಚರಣೆಯ ವೇಳೆ ಬಿದ್ದ ಅವಶೇಷಗಳಿಂದಾಗಿ ಐವರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದಾರೆ. ಅಲ್ಲಿನ ಭಾರತೀಯ ಮಿಷನ್ ಅವರಿಗೆ ವೈದ್ಯಕೀಯ ನೆರವು ಮತ್ತು ಬೆಂಬಲವನ್ನು ನೀಡುತ್ತಿದ್ದು, ಗಾಯಗೊಂಡವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
*****
(ಪ್ರಕಟಣೆ ಐ.ಡಿ.: 2246532)
ವಿಸಿಟರ್ ಕೌಂಟರ್ : 13