ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಜಾಗತಿಕ ತೈಲ ಬೆಲೆ ಏರಿಕೆಯ ಆಘಾತದಿಂದ ಗ್ರಾಹಕರು ಮತ್ತು ತೈಲ ಮಾರಾಟ ಕಂಪನಿಗಳನ್ನು ರಕ್ಷಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಸರ್ಕಾರ
ಚಿಲ್ಲರೆ ಮಾರಾಟ ದರ ಸ್ಥಿರ; ತೈಲ ಮಾರಾಟ ಕಂಪನಿಗಳ ನಷ್ಟ ಭಾಗಶಃ ಭರ್ತಿ
ಪ್ರಕಟಣಾ ದಿನಾಂಕ:
27 MAR 2026 2:36PM by PIB Bengaluru
ಭಾರತ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 10 ರೂಪಾಯಿಗಳಷ್ಟು ಕಡಿತಗೊಳಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ದಿಢೀರ್ ಮತ್ತು ತೀವ್ರವಾಗಿ ಏರಿಕೆಯಾಗಿರುವುದಕ್ಕೆ ಪ್ರತಿಕ್ರಿಯೆಯಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ಜಾಗತಿಕ ಇಂಧನ ಪೂರೈಕೆ ಸರಪಳಿಯಲ್ಲಿನ ವ್ಯತ್ಯಯಗಳಿಂದಾಗಿ, ಕಳೆದ ಒಂದು ತಿಂಗಳ ಅವಧಿಯಲ್ಲಿ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್ ಗೆ ಸುಮಾರು 70 ಅಮೆರಿಕನ್ ಡಾಲರ್ ನಿಂದ 122 ಅಮೆರಿಕನ್ ಡಾಲರ್ ಗೆ ಏರಿಕೆಯಾಗಿದೆ. ಅಂದರೆ, ಕೇವಲ ನಾಲ್ಕು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಬೆಲೆಯಲ್ಲಿ ಸುಮಾರು ಶೇ. 75 ರಷ್ಟು ಭಾರಿ ಏರಿಕೆ ಕಂಡುಬಂದಿದೆ.
"ಪೆಟ್ರೋಲ್ ಮತ್ತು ಡೀಸೆಲ್ ನ ಚಿಲ್ಲರೆ ಮಾರಾಟ ದರಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಅಂದರೆ, ಅಬಕಾರಿ ಸುಂಕದ ಕಡಿತದ ಲಾಭವನ್ನು ಗ್ರಾಹಕರಿಗೆ ಬೆಲೆ ಇಳಿಕೆಯ ರೂಪದಲ್ಲಿ ವರ್ಗಾಯಿಸಲಾಗುತ್ತಿಲ್ಲ. ಬದಲಾಗಿ, ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳಾದ— ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ — ಅನುಭವಿಸುತ್ತಿರುವ ನಷ್ಟವನ್ನು ತಗ್ಗಿಸಲು ಇದನ್ನು ಬಳಸಲಾಗುತ್ತಿದೆ. ಈ ಕಂಪನಿಗಳು ತಮ್ಮ ಪೂರೈಕೆ ವೆಚ್ಚಕ್ಕಿಂತ ತೀರಾ ಕಡಿಮೆ ಬೆಲೆಗೆ ಭಾರತೀಯ ಗ್ರಾಹಕರಿಗೆ ನಿರಂತರವಾಗಿ ಇಂಧನ ಪೂರೈಸುತ್ತಿವೆ. ಪ್ರಸ್ತುತ ಅಂತರರಾಷ್ಟ್ರೀಯ ದರಗಳ ಆಧಾರದ ಮೇಲೆ, ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ ಸುಮಾರು 26 ರೂಪಾಯಿ ಮತ್ತು ಡೀಸೆಲ್ ಮೇಲೆ 81.90 ರೂಪಾಯಿಗಳಷ್ಟು ನಷ್ಟ ಉಂಟಾಗುತ್ತಿದೆ. ತೈಲ ಕಂಪನಿಗಳು ಒಟ್ಟಾರೆಯಾಗಿ ಪ್ರತಿದಿನ ಸುಮಾರು 2,400 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ನಷ್ಟವನ್ನು ಭರಿಸುತ್ತಿವೆ. ಈ ಅಬಕಾರಿ ಕಡಿತವು ಪ್ರತಿ ಲೀಟರ್ ಗೆ 10 ರೂಪಾಯಿಗಳಷ್ಟು ನಷ್ಟವನ್ನು ಸರಿದೂಗಿಸುತ್ತದೆ. ಇದರಿಂದಾಗಿ ಚಿಲ್ಲರೆ ಬೆಲೆಯನ್ನು ಏರಿಸದೆಯೇ, ಯಾವುದೇ ಅಡೆತಡೆಯಿಲ್ಲದೆ ಇಂಧನ ಪೂರೈಕೆಯನ್ನು ಮುಂದುವರಿಸಲು ತೈಲ ಕಂಪನಿಗಳಿಗೆ ಸಾಧ್ಯವಾಗಲಿದೆ.
ಜಾಗತಿಕ ಇಂಧನ ಮಾರುಕಟ್ಟೆಯೊಂದಿಗೆ ಹೋಲಿಸಿದರೆ ಭಾರತದ ಸ್ಥಿತಿ ಗಮನಾರ್ಹವಾಗಿದೆ. ಪ್ರಸ್ತುತ ಬಿಕ್ಕಟ್ಟು ಆರಂಭವಾದಂದಿನಿಂದ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಇಂಧನ ಬೆಲೆಗಳು ಶೇ. 30 ರಿಂದ 50 ರಷ್ಟು ಏರಿಕೆಯಾಗಿವೆ. ಅದೇ ರೀತಿ ಉತ್ತರ ಅಮೆರಿಕಾದಲ್ಲಿ ಶೇ. 30 ರಷ್ಟು ಮತ್ತು ಯುರೋಪ್ ನಲ್ಲಿ ಶೇ. 20 ರಷ್ಟು ಬೆಲೆ ಏರಿಕೆ ಕಂಡುಬಂದಿದೆ. ಆದರೆ, ಭಾರತವು ಮಾತ್ರ ಬೆಲೆ ಏರಿಕೆಯಾಗದಂತೆ ಸ್ಥಿರತೆಯನ್ನು ಕಾಪಾಡಿಕೊಂಡಿದೆ. ಈ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಆರ್ಥಿಕ ಹೊರೆಯಾದರೂ, ಜನಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರವೇ ಆ ಹೊರೆಯನ್ನು ಭರಿಸಲು ನಿರ್ಧರಿಸಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು,
"ಸರ್ಕಾರದ ಮುಂದೆ ಎರಡು ಸ್ಪಷ್ಟ ಆಯ್ಕೆಗಳಿದ್ದವು: ಒಂದು, ಇತರ ರಾಷ್ಟ್ರಗಳಂತೆ ಭಾರತದ ನಾಗರಿಕರ ಮೇಲೂ ಬೆಲೆ ಏರಿಕೆಯ ಭಾರೀ ಹೊರೆಯನ್ನು ಹೊರಿಸುವುದು; ಅಥವಾ ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳಿಂದ ನಾಗರಿಕರನ್ನು ರಕ್ಷಿಸಲು ಸರ್ಕಾರವೇ ಆರ್ಥಿಕ ಹೊರೆಯನ್ನು ಭರಿಸುವುದು. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾದರೂ ಪರವಾಗಿಲ್ಲ ಎಂಬ ನಿರ್ಧಾರ ಕೈಗೊಂಡರು. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಗಳು ಗಗನಕ್ಕೇರಿರುವ ಈ ಸಂದರ್ಭದಲ್ಲಿ, ತೈಲ ಮಾರಾಟ ಕಂಪನಿಗಳ ಭಾರೀ ನಷ್ಟವನ್ನು ತಗ್ಗಿಸಲು ಸರ್ಕಾರವು ತನ್ನ ತೆರಿಗೆ ಆದಾಯದ ಮೇಲೆ ಗಣನೀಯ ಪ್ರಭಾವ ಬೀರಿದರೂ ಸಹ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ" ಎಂದು ಹೇಳಿದ್ದಾರೆ.
ಅಬಕಾರಿ ಸುಂಕದ ಕಡಿತದ ಜೊತೆಗೇ, ಸರ್ಕಾರವು ಡೀಸೆಲ್ ಮೇಲೆ ರಫ್ತು ಸುಂಕವನ್ನೂ ವಿಧಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಡೀಸೆಲ್ ಬೆಲೆಗಳು ಗಗನಕ್ಕೇರಿರುವ ಈ ಸಂದರ್ಭದಲ್ಲಿ, ರಫ್ತಿನ ಮೇಲಿನ ಈ ಸುಂಕವು ವಿದೇಶಿ ಮಾರಾಟವನ್ನು ನಿಯಂತ್ರಿಸಿ, ದೇಶದ ಸಂಸ್ಕರಣಾಗಾರಗಳಲ್ಲಿ ಉತ್ಪತ್ತಿಯಾಗುವ ಇಂಧನವು ಮೊದಲು ದೇಶೀಯ ಬೇಡಿಕೆಯನ್ನೇ ಪೂರೈಸುವಂತೆ ಮಾಡುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಫ್ತು ಮಾಡುವುದು ಆರ್ಥಿಕವಾಗಿ ಎಷ್ಟೇ ಲಾಭದಾಯಕವಾಗಿದ್ದರೂ, ಭಾರತದ ಇಂಧನ ಕೇಂದ್ರಗಳಿಗೆ (ಪೆಟ್ರೋಲ್ ಬಂಕ್ ಗಳಿಗೆ) ನಿರಂತರ ಪೂರೈಕೆ ಮಾಡುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ.
ಈ ನಿರ್ಧಾರವು 2022ರ ರಷ್ಯಾ-ಉಕ್ರೇನ್ ಸಂಘರ್ಷದ ಸಮಯದಿಂದಲೂ ಅನುಸರಿಸಿಕೊಂಡು ಬಂದಿರುವ ನೀತಿಗೆ ಪೂರಕವಾಗಿದೆ. ಅಂದು ಕೂಡ ತೈಲ ಕಂಪನಿಗಳು ನಷ್ಟ ಅನುಭವಿಸಿದ್ದವು ಮತ್ತು ಸರ್ಕಾರವು ಕೇಂದ್ರೀಯ ತೆರಿಗೆಗಳನ್ನು ಕಡಿತಗೊಳಿಸುವ ಮೂಲಕ ಜನಸಾಮಾನ್ಯರನ್ನು ಹಾಗೂ ಉದ್ಯಮಗಳನ್ನು ಜಾಗತಿಕ ಬೆಲೆ ಏರಿಕೆಯ ಆಘಾತದಿಂದ ರಕ್ಷಿಸಿತ್ತು. ಇಂದಿನ ಈ ಕ್ರಮದ ಹಿಂದೆಯೂ ಅದೇ ತತ್ವ ಅಡಗಿದೆ: ಅಂದರೆ, ಭಾರತದ ನಾಗರಿಕರು ಅಥವಾ ಉದ್ದಿಮೆಗಳು ತಾವು ಮಾಡದ ತಪ್ಪಿಗೆ ಜಾಗತಿಕ ಅಡೆತಡೆಗಳ ಹೊರೆಯನ್ನು ಅನುಭವಿಸಬಾರದು. ಸರ್ಕಾರವು ಜಾಗತಿಕ ಇಂಧನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಭಾರತೀಯ ಗ್ರಾಹಕರಿಗೆ ನಿರಂತರ ಪೂರೈಕೆ ಮತ್ತು ಬೆಲೆ ರಕ್ಷಣೆಯನ್ನು ಖಚಿತಪಡಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
*****
(ಪ್ರಕಟಣೆ ಐ.ಡಿ.: 2246046)
ವಿಸಿಟರ್ ಕೌಂಟರ್ : 27