ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಮುಖ ವಲಯಗಳ ಕುರಿತು ಇತ್ತೀಚಿನ ಮಾಹಿತಿ


ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್‌ ಜಿ ಸಂಪರ್ಕಗಳಿಗೆ ಆದ್ಯತೆ ನೀಡಲು ನಗರ ಅನಿಲ ವಿತರಣಾ (ಸಿಜಿಡಿ) ಘಟಕಗಳಿಗೆ ಸೂಚನೆ

ಸಿಜಿಡಿ ಅನುಮೋದನೆಗಳನ್ನು ವೇಗಗೊಳಿಸಲು ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಪಿ ಎನ್‌ ಜಿ ಬಳಕೆಯನ್ನು ಉತ್ತೇಜಿಸಲು ಸಚಿವಾಲಯಗಳಿಗೆ ಸೂಚನೆ

ಪ್ರಮುಖ ನಗರಗಳು ಮತ್ತು ನಗರ ಪ್ರದೇಶಗಳಲ್ಲಿನ ವಾಣಿಜ್ಯ ಎಲ್‌ ಪಿ ಜಿ ಗ್ರಾಹಕರು ಪಿ ಎನ್‌ ಜಿ ಗೆ ಬದಲಾಗಲು ಸಲಹೆ

ರೆಸ್ಟೋರೆಂಟ್‌ ಗಳು, ಸಬ್ಸಿಡಿ ದರದ ಕ್ಯಾಂಟೀನ್‌ ಗಳು ಮತ್ತು ವಲಸೆ ಕಾರ್ಮಿಕರಿಗಾಗಿ (5 ಕೆಜಿ ಎಫ್‌ ಟಿ ಎಲ್) ರಾಜ್ಯಗಳಿಗೆ ಹೆಚ್ಚುವರಿ ಶೇ. 20 ರಷ್ಟು ವಾಣಿಜ್ಯ ಎಲ್‌ ಪಿ ಜಿ ಅನುಮೋದನೆ, ಒಟ್ಟಾರೆ ಹಂಚಿಕೆ ಈಗ ಶೇ. 50 ಕ್ಕೆ ಏರಿಕೆ

ಎಲ್‌ ಪಿ ಜಿ ದಾಸ್ತಾನು ಮತ್ತು ಕಾಳಸಂತೆ ತಡೆಯಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿ ಮುಂದುವರಿಕೆ

ಭಾರತದ ಕಡಲ ವಲಯವು ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಬಂದರುಗಳಲ್ಲಿ ದಟ್ಟಣೆ ವರದಿಯಾಗಿಲ್ಲ

ಗಲ್ಫ್ ಮತ್ತು ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಮೇಲೆ ನಿರಂತರ ನಿಗಾ, ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಕಲ್ಯಾಣಕ್ಕೆ ಆದ್ಯತೆ

ಎಂ ಟಿ ಸೇಫ್‌ ಸೀ ವಿಷ್ಣು ಹಡಗಿನ 15 ಭಾರತೀಯ ಸಿಬ್ಬಂದಿ ಇರಾಕ್‌ ನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ

ಪ್ರಕಟಣಾ ದಿನಾಂಕ: 21 MAR 2026 4:40PM by PIB Bengaluru

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಕೈಗೊಳ್ಳುತ್ತಿರುವ ಸನ್ನದ್ಧತೆ ಮತ್ತು ಪ್ರತಿಕ್ರಿಯೆ ಕ್ರಮಗಳ ಕುರಿತಾದ ಇತ್ತೀಚಿನ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಇವು ಇಂಧನ ಪೂರೈಕೆ, ಕಡಲ ಕಾರ್ಯಾಚರಣೆಗಳು ಮತ್ತು ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ಬೆಂಬಲ ಸೇರಿದಂತೆ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿವೆ.

ಇಂಧನ ಪೂರೈಕೆ ಮತ್ತು ಇಂಧನದ ಲಭ್ಯತೆ

ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ ಜಿ ಯ ಸ್ಥಿರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಸ್ಥಿತಿಗತಿ ಈ ಕೆಳಗಿನಂತಿದೆ:

ಕಚ್ಚಾ ತೈಲ/ಸಂಸ್ಕರಣಾಗಾರಗಳು

  • ಎಲ್ಲಾ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಸಾಕಷ್ಟು ಕಚ್ಚಾ ತೈಲ ದಾಸ್ತಾನುಗಳಿವೆ. ದೇಶವು ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನುಗಳನ್ನು ಸಹ ನಿರ್ವಹಿಸುತ್ತಿದೆ.
  • ಸಂಸ್ಕರಣಾಗಾರಗಳಿಂದ ದೇಶೀಯ ಎಲ್‌ ಪಿ ಜಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ.

ಚಿಲ್ಲರೆ ಮಾರಾಟ ಮಳಿಗೆಗಳು

  • ತೈಲ ಮಾರುಕಟ್ಟೆ ಕಂಪನಿಗಳು ಯಾವುದೇ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇಂಧನ ಖಾಲಿಯಾದ ಪ್ರಕರಣಗಳನ್ನು ವರದಿ ಮಾಡಿಲ್ಲ. ಪೆಟ್ರೋಲ್ ಮತ್ತು ಡೀಸೆಲ್‌ ನ ಸಾಕಷ್ಟು ದಾಸ್ತಾನು ಲಭ್ಯವಿದ್ದು, ಪೂರೈಕೆಯನ್ನು ನಿಯಮಿತವಾಗಿ ನಿರ್ವಹಿಸಲಾಗುತ್ತಿರುವುದರಿಂದ ಸಾರ್ವಜನಿಕರು ಆತಂಕದಿಂದ ಖರೀದಿ ಮಾಡಬಾರದು ಎಂದು ಸರ್ಕಾರವು ತನ್ನ ಸಲಹೆಯನ್ನು ಪುನರುಚ್ಚರಿಸಿದೆ.

ನೈಸರ್ಗಿಕ ಅನಿಲ

  • ಡಿ-ಪಿ ಎನ್‌ ಜಿ ಮತ್ತು ಸಿ ಎನ್‌ ಜಿ-ಸಾರಿಗೆಗೆ ಶೇ. 100 ರಷ್ಟು ಪೂರೈಕೆ ಸೇರಿದಂತೆ ಆದ್ಯತೆಯ ವಲಯಗಳಿಗೆ ಪೂರೈಕೆಯನ್ನು ರಕ್ಷಿಸಲಾಗಿದೆ. ಗ್ರಿಡ್‌ ಗೆ ಸಂಪರ್ಕ ಹೊಂದಿದ ಕೈಗಾರಿಕೆ ಮತ್ತು ವಾಣಿಜ್ಯ ಗ್ರಾಹಕರಿಗೆ ಅವರ ಸರಾಸರಿ ಬಳಕೆಯ ಶೇ. 80 ರಷ್ಟು ಪೂರೈಕೆ ಮಾಡಲಾಗುತ್ತಿದೆ.
  • ವಾಣಿಜ್ಯ ಎಲ್‌ ಪಿ ಜಿ ಲಭ್ಯತೆಯ ಬಗೆಗಿನ ಆತಂಕವನ್ನು ಪರಿಹರಿಸಲು, ತಮ್ಮ ವ್ಯಾಪ್ತಿಯಲ್ಲಿರುವ ರೆಸ್ಟೋರೆಂಟ್‌ ಗಳು, ಹೋಟೆಲ್‌ ಗಳು ಮತ್ತು ಕ್ಯಾಂಟೀನ್‌ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್‌ ಜಿ ಸಂಪರ್ಕಗಳಿಗೆ ಆದ್ಯತೆ ನೀಡುವಂತೆ ಭಾರತ ಸರ್ಕಾರವು ನಗರ ಅನಿಲ ವಿತರಣಾ (ಸಿಜಿಡಿ) ಘಟಕಗಳಿಗೆ ಸಲಹೆ ನೀಡಿದೆ.
  • ಐಜಿಎಲ್‌, ಎಂಜಿಎಲ್‌, ಗೇಲ್‌ ಗ್ಯಾಸ ಮತ್ತು ಬಿಪಿಸಿಎಲ್‌ ನಂತಹ ಸಿಜಿಡಿ ಕಂಪನಿಗಳು ದೇಶೀಯ ಮತ್ತು ವಾಣಿಜ್ಯ ಪಿ ಎನ್‌ ಜಿ ಸಂಪರ್ಕಗಳನ್ನು ಪಡೆಯುವವರಿಗೆ ಪ್ರೋತ್ಸಾಹಕಗಳನ್ನು ನೀಡುತ್ತಿವೆ.
  • ಅರ್ಜಿ ಸಲ್ಲಿಕೆ ಮತ್ತು ಗ್ರಾಹಕರ ಮನೆಗಳಿಗೆ ಅನಿಲ ಪೂರೈಕೆ ಆರಂಭವಾಗುವ ನಡುವಿನ ಕಾಲಮಿತಿಯನ್ನು ಕಡಿಮೆ ಮಾಡುವಂತೆ ಪಿ ಎನ್‌ ಜಿ ಆರ್‌ ಬಿ ವತಿಯಿಂದ ಸಿಜಿಡಿ ಘಟಕಗಳಿಗೆ ನಿರ್ದೇಶನ ನೀಡಲಾಗಿದೆ.
  • ಸಿಜಿಡಿ ಜಾಲದ ವಿಸ್ತರಣೆಗೆ ಅಗತ್ಯವಿರುವ ಅರ್ಜಿಗಳ ಅನುಮೋದನೆಯನ್ನು ತ್ವರಿತಗೊಳಿಸುವಂತೆ ಭಾರತ ಸರ್ಕಾರವು 16.03.2026 ರ ಪತ್ರದ ಮೂಲಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳನ್ನು ವಿನಂತಿಸಿದೆ.
  • ಎಲ್‌ ಪಿ ಜಿ ಯಿಂದ ಪಿ ಎನ್‌ ಜಿ ಗೆ ದೀರ್ಘಾವಧಿಯ ಬದಲಾವಣೆಗೆ ಸಹಾಯ ಮಾಡುವ ರಾಜ್ಯಗಳಿಗೆ ವಾಣಿಜ್ಯ ಎಲ್‌ ಪಿ ಜಿಯ ಹೆಚ್ಚುವರಿ ಶೇ.10 ರಷ್ಟು ಹಂಚಿಕೆಯನ್ನು ನೀಡುವುದಾಗಿ ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ತಿಳಿಸಿದೆ.
  • ಹೆಚ್ಚುವರಿಯಾಗಿ, ಭಾರತ ಸರ್ಕಾರವು 19.03.2026 ರ ಪತ್ರದ ಮೂಲಕ ಸಂಬಂಧಪಟ್ಟ ಎಲ್ಲಾ ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಈ ಕೆಲಘಿನ ವಿಷಯಗಳನ್ನು ಕುರಿತು ವಿನಂತಿಸಿದೆ:
    • ಸಿಜಿಡಿ ಮೂಲಸೌಕರ್ಯಕ್ಕೆ ಸಂಬಂಧಿಸಿದ ಎಲ್ಲಾ ಬಾಕಿ ಇರುವ ಮತ್ತು ಹೊಸ ಅನುಮತಿಗಳನ್ನು ತಕ್ಷಣವೇ ಫಾಸ್ಟ್ ಟ್ರ್ಯಾಕ್ ಮಾಡಲು ಮತ್ತು ವಿಲೇವಾರಿ ಮಾಡಲು ಸಂಬಂಧಪಟ್ಟ ಇಲಾಖೆ/ಸಂಸ್ಥೆಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಬೇಕು.
    • ಭವಿಷ್ಯದ ಸಿಜಿಡಿ ಸಂಬಂಧಿತ ಅನುಮತಿ ವಿನಂತಿಗಳನ್ನು ಪ್ರಕ್ರಿಯೆಗೊಳಿಸಲು ಸುವ್ಯವಸ್ಥಿತ ಮತ್ತು ಕಾಲಮಿತಿಯ ಕಾರ್ಯವಿಧಾನವನ್ನು ಜಾರಿಗೆ ತರಬೇಕು.
    • ಎಲ್ಲಾ ಕೇಂದ್ರ ಸರ್ಕಾರದ ಸಂಸ್ಥೆಗಳು/ವಸತಿ ಸಂಕೀರ್ಣಗಳು/ಅಧಿಕಾರಿಗಳ ನಿವಾಸಗಳು/ಕ್ಯಾಂಟೀನ್‌ ಗಳು ಎಲ್ಲಿ ಪಿ ಎನ್‌ ಜಿ ಲಭ್ಯವಿದೆಯೋ ಅಲ್ಲಿಗೆ ಬದಲಾಗಲು ಸಲಹೆ ನೀಡಬೇಕು.
  • ಭಾರತ ಸರ್ಕಾರದ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (ಪಿ ಇ ಎಸ್‌ ಒ) ತನ್ನ ಎಲ್ಲಾ ಕಚೇರಿಗಳಿಗೆ ಸಿಜಿಡಿ ಅರ್ಜಿಗಳನ್ನು ಆದ್ಯತೆಯ ಮೇರೆಗೆ, ಅಂದರೆ ಸ್ವೀಕರಿಸಿದ 10 ದಿನಗಳೊಳಗೆ ವಿಲೇವಾರಿ ಮಾಡಲು ಸೂಚಿಸಿದೆ.
  • ಪ್ರಮುಖ ನಗರಗಳು ಮತ್ತು ನಗರ ಪ್ರದೇಶಗಳಲ್ಲಿನ ವಾಣಿಜ್ಯ ಎಲ್‌ ಪಿ ಜಿ ಗ್ರಾಹಕರು ಪಿ ಎನ್‌ ಜಿ ಗೆ ಬದಲಾಗಲು ವಿನಂತಿಸಲಾಗಿದೆ.

ಎಲ್ಪಿ ಜಿ

  • ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಲ್‌ ಪಿ ಜಿ ಪೂರೈಕೆಯು ಇನ್ನೂ ಕಳವಳಕಾರಿಯಾಗಿದೆ.

ದೇಶೀಯ ಎಲ್ಪಿ ಜಿ ಪೂರೈಕೆ

  • ಎಲ್‌ ಪಿ ಜಿ ವಿತರಕರಲ್ಲಿ ಯಾವುದೇ ಸ್ಟಾಕ್ ಖಾಲಿಯಾದ ಬಗ್ಗೆ ವರದಿಯಾಗಿಲ್ಲ.
  • ಹೆಚ್ಚಿನ ವಿತರಣೆಗಳು ಡೆಲಿವರಿ ಅಥೆಂಟಿಕೇಶನ್ ಕೋಡ್ (ಡಿಎಸಿ) ಮೂಲಕ ನಡೆಯುತ್ತಿವೆ.
  • ಆತಂಕದ ಬುಕ್ಕಿಂಗ್‌ ಗಳು ಕಡಿಮೆಯಾಗಿವೆ.
  • ದೇಶೀಯ ಎಲ್‌ ಪಿ ಜಿ ಸಿಲಿಂಡರ್‌ ಗಳ ವಿತರಣೆಯು ಸಹಜವಾಗಿದೆ.

ವಾಣಿಜ್ಯ ಎಲ್ಪಿ ಜಿ ಪೂರೈಕೆ

  • ಸರ್ಕಾರವು ಈಗಾಗಲೇ ಗ್ರಾಹಕರಿಗೆ ಭಾಗಶಃ ವಾಣಿಜ್ಯ ಎಲ್‌ ಪಿ ಜಿ ಪೂರೈಕೆಯನ್ನು (ಶೇ.20) ಪುನಃಸ್ಥಾಪಿಸಿದೆ. ಇದಲ್ಲದೆ, ಪಿ ಎನ್‌ ಜಿ ವಿಸ್ತರಣೆಗಾಗಿ ಸುಲಭ ವ್ಯಾಪಾರ ಸುಧಾರಣೆಗಳ ಆಧಾರದ ಮೇಲೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಶೇ. 10 ರಷ್ಟು ವಾಣಿಜ್ಯ ಎಲ್‌ ಪಿ ಜಿ ಹಂಚಿಕೆ ಮಾಡಲು ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ಪ್ರಸ್ತಾಪಿಸಿದೆ.
  • ಭಾರತ ಸರ್ಕಾರವು 21.03.2026 ರ ಪತ್ರದ ಮೂಲಕ ರಾಜ್ಯಗಳಿಗೆ ಮತ್ತೊಂದು ಶೇ.20 ರಷ್ಟು ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯನ್ನು ಅನುಮತಿಸಿದೆ, ಇದು ಒಟ್ಟಾರೆ ಹಂಚಿಕೆಯನ್ನು ಶೇ. 50 ಕ್ಕೆ (ಸುಲಭ ವ್ಯಾಪಾರ ಸುಧಾರಣೆಗಳ ಆಧಾರದ ಮೇಲಿನ ಶೇ. 10 ಹಂಚಿಕೆ ಸೇರಿದಂತೆ) ಹೆಚ್ಚಿಸುತ್ತದೆ. ಈ ಹೆಚ್ಚುವರಿ ಶೇ. 20 ರಷ್ಟು ಹಂಚಿಕೆಯನ್ನು ರೆಸ್ಟೋರೆಂಟ್‌ ಗಳು, ಧಾಬಾಗಳು, ಹೋಟೆಲ್‌ ಗಳು, ಕೈಗಾರಿಕಾ ಕ್ಯಾಂಟೀನ್‌ ಗಳು, ಆಹಾರ ಸಂಸ್ಕರಣೆ/ಡೈರಿ, ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಡೆಸುವ ಸಬ್ಸಿಡಿ ದರದ ಕ್ಯಾಂಟೀನ್‌ ಗಳು, ಸಮುದಾಯ ಅಡುಗೆ ಮನೆಗಳು, ವಲಸೆ ಕಾರ್ಮಿಕರಂತಹ (5 ಕೆಜಿ ಎಫ್‌ ಟಿ ಎಲ್‌) ವಲಯಗಳಿಗೆ ಆದ್ಯತೆಯ ಮೇಲೆ ನೀಡಲಾಗುವುದು.
  • 20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಭಾರತ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಗೃಹಬಳಕೆಯೇತರ ಎಲ್‌ ಪಿ ಜಿಯನ್ನು ಹಂಚಿಕೆ ಮಾಡಲು ಆದೇಶಗಳನ್ನು ಹೊರಡಿಸಿವೆ. ಉಳಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ, ಪಿ ಎಸ್‌ ಯು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ ಪಿ ಜಿ ಸಿಲಿಂಡರ್‌ ಗಳನ್ನು ಬಿಡುಗಡೆ ಮಾಡುತ್ತಿವೆ. ಕಳೆದ ಒಂದು ವಾರದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾಣಿಜ್ಯ ಘಟಕಗಳಿಂದ ಒಟ್ಟು ಸುಮಾರು 13,479 ಮೆಟ್ರಿಕ್ ಟನ್ ಎಲ್‌ ಪಿ ಜಿ ಯನ್ನು ವಿತರಣೆಗಾಗಿ ಪಡೆಯಲಾಗಿದೆ.
  • ಶೈಕ್ಷಣಿಕ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಆದ್ಯತೆ ನೀಡಲಾಗಿದ್ದು, ಒಟ್ಟು ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯ ಸುಮಾರು ಶೇ. 50 ರಷ್ಟು ಈ ವಲಯಗಳಿಗೆ ಹೋಗುತ್ತಿದೆ.

ಸೀಮೆಎಣ್ಣೆ

  • ನಿಯಮಿತ ಹಂಚಿಕೆಯ ಜೊತೆಗೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 48,000 ಕೆಎಲ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ.
  • ಸೀಮೆಎಣ್ಣೆ ವಿತರಣೆಗಾಗಿ ಜಿಲ್ಲೆಗಳಲ್ಲಿ ಸ್ಥಳಗಳನ್ನು ಗುರುತಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ವಿನಂತಿಸಲಾಗಿದೆ.
  • 15 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೀಮೆಎಣ್ಣೆ ಹಂಚಿಕೆ ಆದೇಶಗಳನ್ನು ಹೊರಡಿಸಿವೆ. ಇದಲ್ಲದೆ, ಹಿಮಾಚಲ ಪ್ರದೇಶ ಮತ್ತು ಲಡಾಖ್ ತಮ್ಮಲ್ಲಿ ಸೀಮೆಎಣ್ಣೆಯ ಅವಶ್ಯಕತೆಯಿಲ್ಲ ಎಂದು ತಿಳಿಸಿವೆ. ಇಲ್ಲಿಯವರೆಗೆ, 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಇನ್ನೂ ಸೀಮೆಎಣ್ಣೆ ಹಂಚಿಕೆ ಆದೇಶಗಳನ್ನು ಹೊರಡಿಸಬೇಕಾಗಿದೆ.

ರಾಜ್ಯ ಸರ್ಕಾರಗಳು ನಡೆಸಿದ ಸಭೆಗಳು

  • ಅಗತ್ಯ ವಸ್ತುಗಳ ಕಾಯ್ದೆ, 1955 ಮತ್ತು ಎಲ್‌ ಪಿ ಜಿ ನಿಯಂತ್ರಣ ಆದೇಶ, 2000 ರ ಅಡಿಯಲ್ಲಿ, ಯಾವುದೇ ದಾಸ್ತಾನು ಮತ್ತು ಕಾಳಸಂತೆಯ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರವನ್ನು ವಹಿಸಬೇಕಾಗುತ್ತದೆ.
  • ಭಾರತ ಸರ್ಕಾರವು 13.03.2026 ಮತ್ತು 18.03.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೆಳಕಂಡ ವಿಷಯಗಳ ಬಗ್ಗೆ ವಿನಂತಿಸಿದೆ:
    • ದಾಸ್ತಾನು, ಕಾಳಸಂತೆ, ದೇಶೀಯ ಎಲ್‌ ಪಿ ಜಿ ಯ ಅಕ್ರಮ ಬಳಕೆ ಮತ್ತು ಇತರ ಅಕ್ರಮಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಜಾಗರೂಕತೆಯನ್ನು ವಹಿಸಬೇಕು.
    • ಅಗತ್ಯ ವಸ್ತುಗಳ ಕಾಯ್ದೆ 1955, ಪೆಟ್ರೋಲಿಯಂ ಕಾಯ್ದೆ 1934, ಪೆಟ್ರೋಲಿಯಂ ನಿಯಮಗಳು 2002, ಮೋಟಾರ್ ಸ್ಪಿರಿಟ್ ಮತ್ತು ಎಚ್‌ಎಸ್‌ಡಿ ಆದೇಶ 2005 ಮತ್ತು ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
    • ಸ್ಥಳೀಯ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಾಣಿಜ್ಯ ಎಲ್‌ ಪಿ ಜಿ ಗೆ ಸೂಕ್ತವಾದ ವಿತರಣಾ ವಿಧಾನಗಳನ್ನು ರೂಪಿಸಬೇಕು.
    • ಆತಂಕದ ಖರೀದಿಯನ್ನು ತಡೆಗಟ್ಟಲು, ಎಲ್‌ ಪಿ ಜಿ ಯ ವಿವೇಚನಾಪೂರ್ವಕ ಬಳಕೆಯನ್ನು ಪ್ರೋತ್ಸಾಹಿಸಲು ಮತ್ತು ನಿಖರವಾದ ಮಾಹಿತಿಯನ್ನು ಪ್ರಸಾರ ಮಾಡಲು ಸಾರ್ವಜನಿಕ ಸಲಹೆಗಳನ್ನು ನೀಡಬೇಕು.
  • 32 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿವೆ. ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರತಿದಿನ ಪತ್ರಿಕಾಗೋಷ್ಠಿಗಳನ್ನು ಸಹ ನಡೆಸುತ್ತಿವೆ.
  • 32 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಯನ್ನು ಸ್ಥಾಪಿಸಿವೆ.
  • ನಿಯಂತ್ರಣ ಕೊಠಡಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಮಿತಿಗಳನ್ನು ಸ್ಥಾಪಿಸದ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತುರ್ತು ಆಧಾರದ ಮೇಲೆ ಅವುಗಳನ್ನು ಸ್ಥಾಪಿಸಲು ವಿನಂತಿಸಲಾಗಿದೆ.

ಜಾರಿ ಕ್ರಮಗಳು

  • ಎಲ್‌ ಪಿ ಜಿ ದಾಸ್ತಾನು ಮತ್ತು ಕಪ್ಪು ಮಾರುಕಟ್ಟೆಯನ್ನು ತಡೆಯಲು ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿಗಳನ್ನು ಮುಂದುವರಿಸಲಾಗಿದೆ. ಉತ್ತರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಇತ್ಯಾದಿಗಳಲ್ಲಿ 3,500 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, ಸುಮಾರು 1400 ಸಿಲಿಂಡರ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ.
  • ಕಪ್ಪು ಮಾರುಕಟ್ಟೆ ಮತ್ತು ದಾಸ್ತಾನು ಮಾಡುವುದನ್ನು ತಡೆಯಲು ನಿಯಮಿತವಾಗಿ ದಾಳಿಗಳನ್ನು ನಡೆಸಲು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳನ್ನು ವಿನಂತಿಸಲಾಗಿದೆ.
  • ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ದಾಸ್ತಾನು/ಕಪ್ಪು ಮಾರುಕಟ್ಟೆ ಪ್ರಕರಣಗಳನ್ನು ಪರೀಕ್ಷಿಸಲು ಪಿ ಎಸ್‌ ಯು ಒಎಂಸಿ ಅಧಿಕಾರಿಗಳು ದೇಶಾದ್ಯಂತ 2,000 ಕ್ಕೂ ಹೆಚ್ಚು ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಎಲ್‌ ಪಿ ಜಿ ವಿತರಕರ ಮೇಲೆ ಹಠಾತ್ ತಪಾಸಣೆಗಳನ್ನು ನಡೆಸಿದ್ದಾರೆ.

ಸರ್ಕಾರದ ಇತರ ಕ್ರಮಗಳು

  • ಈ ಯುದ್ಧದ ಪರಿಸ್ಥಿತಿಯ ನಡುವೆಯೂ, ಸರ್ಕಾರವು ದೇಶೀಯ ಎಲ್‌ ಪಿ ಜಿ ಮತ್ತು ಪಿ ಎನ್‌ ಜಿ ಗೆ ಅತ್ಯುನ್ನತ ಆದ್ಯತೆಯನ್ನು ನೀಡಿದೆ, ಜೊತೆಗೆ ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ.
  • ಸಂಸ್ಕರಣಾಗಾರಗಳ ಉತ್ಪಾದನೆಯನ್ನು ಹೆಚ್ಚಿಸುವುದು, ನಗರ ಪ್ರದೇಶಗಳಲ್ಲಿ ಬುಕ್ಕಿಂಗ್ ಅವಧಿಯನ್ನು 21 ರಿಂದ 25 ದಿನಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಹೆಚ್ಚಿಸುವುದು ಮತ್ತು ಪೂರೈಕೆಗಾಗಿ ವಲಯಗಳಿಗೆ ಆದ್ಯತೆ ನೀಡುವುದು ಸೇರಿದಂತೆ ಪೂರೈಕೆ ಮತ್ತು ಬೇಡಿಕೆ ಎರಡೂ ಕಡೆಗಳಲ್ಲಿ ಸರ್ಕಾರವು ಈಗಾಗಲೇ ಹಲವಾರು ತರ್ಕಬದ್ಧ ಕ್ರಮಗಳನ್ನು ಜಾರಿಗೆ ತಂದಿದೆ.
  • ಎಲ್‌ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನ ಆಯ್ಕೆಗಳನ್ನು ನೀಡಲಾಗಿದೆ. ಸೀಮೆಎಣ್ಣೆ ಮತ್ತು ಕಲ್ಲಿದ್ದಲನ್ನು ಪರ್ಯಾಯವಾಗಿ ಬಳಸಲು ಅನುಮತಿ ನೀಡುವಂತೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಈಗಾಗಲೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸಲಹೆ ನೀಡಿದೆ.
  • ಸಣ್ಣ, ಮಧ್ಯಮ ಮತ್ತು ಇತರ ಗ್ರಾಹಕರಿಗೆ ಕಲ್ಲಿದ್ದಲನ್ನು ವಿತರಿಸಲು ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಕಲ್ಲಿದ್ದಲನ್ನು ಹಂಚಿಕೆ ಮಾಡಲು ಕಲ್ಲಿದ್ದಲು ಸಚಿವಾಲಯವು ಈಗಾಗಲೇ ಕೋಲ್ ಇಂಡಿಯಾ ಮತ್ತು ಸಿಂಗರೇಣಿ ಕಾಲಿಯರೀಸ್‌ ಗೆ ಆದೇಶ ಹೊರಡಿಸಿದೆ.
  • ದೇಶೀಯ ಮತ್ತು ವಾಣಿಜ್ಯ ಗ್ರಾಹಕರಿಗೆ ಹೊಸ ಪಿ ಎನ್‌ ಜಿ ಸಂಪರ್ಕಗಳನ್ನು ಸುಲಭಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ. ಪ್ರಕ್ರಿಯೆಯನ್ನು ಸುಲಭಗೊಳಿಸುವ ಮತ್ತು ವೇಗಗೊಳಿಸುವ ರಾಜ್ಯಗಳಿಗೆ ಶೇ. 10 ರಷ್ಟು ಹೆಚ್ಚುವರಿ ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯ ಪ್ರಸ್ತಾಪವನ್ನು ಮಾಡಲಾಗಿದೆ.

ಸಾರ್ವಜನಿಕ ಸಲಹೆ

  • ಮನೆಗಳಿಗೆ ಎಲ್‌ ಪಿ ಜಿ ಸಿಲಿಂಡರ್‌ ಗಳ ಅಡೆತಡೆಯಿಲ್ಲದ ಲಭ್ಯತೆ ಮತ್ತು ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ; ನಾಗರಿಕರು ಅಧಿಕೃತ ಮೂಲಗಳನ್ನು ಮಾತ್ರ ಅವಲಂಬಿಸಲು ಮತ್ತು ವದಂತಿಗಳನ್ನು ನಂಬದಿರಲು ಸಲಹೆ ನೀಡಲಾಗಿದೆ.
  • ಆತಂಕದ ಬುಕ್ಕಿಂಗ್‌ ಗಳನ್ನು ತಪ್ಪಿಸಲು, ಎಲ್‌ ಪಿ ಜಿ ಬುಕ್ಕಿಂಗ್‌ ಗಾಗಿ ಡಿಜಿಟಲ್ ವಿಧಾನಗಳನ್ನು ಬಳಸಲು ಮತ್ತು ವಿತರಕ ಮಳಿಗೆಗಳಿಗೆ ಭೇಟಿ ನೀಡುವುದನ್ನು ತಪ್ಪಿಸಲು ನಾಗರಿಕರಲ್ಲಿ ವಿನಂತಿಸಲಾಗಿದೆ; ಮನೆ ಬಾಗಿಲಿಗೆ ಸಿಲಿಂಡರ್‌ ಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.
  • ಆತಂಕದ ಬುಕ್ಕಿಂಗ್‌ ಗಳು ಕಡಿಮೆಯಾಗಿದ್ದರೂ, ವಿತರಕರಲ್ಲಿ ಜನದಟ್ಟಣೆಯ ವಿರಳ ಘಟನೆಗಳು ವರದಿಯಾಗಿವೆ; ಗ್ರಾಹಕರು ಸರತಿ ಸಾಲಿನಲ್ಲಿ ನಿಲ್ಲದಂತೆ ಮತ್ತು ಮನೆಯಲ್ಲೇ ವಿತರಣೆಗಾಗಿ ಕಾಯುವಂತೆ ಸಲಹೆ ನೀಡಲಾಗಿದೆ.
  • ನಾಗರಿಕರು ಪಿ ಎನ್‌ ಜಿ ಮತ್ತು ಎಲೆಕ್ಟ್ರಿಕ್/ಇಂಡಕ್ಷನ್ ಕುಕ್‌ಟಾಪ್‌ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ಮತ್ತು ದೈನಂದಿನ ಬಳಕೆಯಲ್ಲಿ ಇಂಧನ ಸಂರಕ್ಷಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗಿದೆ.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಹಡಗುಗಳು ಮತ್ತು ನಾವಿಕರನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಚಿವಾಲಯದ ಪ್ರಕಾರ:

  • ಬಂದರುಗಳು, ಹಡಗು ಸಾರಿಗೆ ಮತ್ತು ಜಲಮಾರ್ಗ ಸಚಿವಾಲಯವು ಹಡಗುಗಳ ಸಂಚಾರ, ಬಂದರು ಕಾರ್ಯಾಚರಣೆಗಳು, ಭಾರತೀಯ ನಾವಿಕರ ಸುರಕ್ಷತೆ ಮತ್ತು ಕಡಲ ವ್ಯಾಪಾರದ ನಿರಂತರತೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ; ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ, ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊಂದಿದ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಘಟನೆಗಳು ವರದಿಯಾಗಿಲ್ಲ.
  • ಒಟ್ಟು 22 ಭಾರತೀಯ ಧ್ವಜ ಹೊಂದಿದ ಹಡಗುಗಳು 611 ಭಾರತೀಯ ನಾವಿಕರೊಂದಿಗೆ ಪಶ್ಚಿಮ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿವೆ; ಹಡಗು ನಿರ್ದೇಶನಾಲಯವು ಹಡಗು ಮಾಲೀಕರು, ಆರ್‌ ಪಿ ಎಸ್‌ ಎಲ್ ಏಜೆನ್ಸಿಗಳು ಮತ್ತು ಭಾರತೀಯ ಮಿಷನ್‌ ಗಳೊಂದಿಗೆ ಸಮನ್ವಯ ಸಾಧಿಸಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.
  • ಒಂದು ಘಟನೆಯಲ್ಲಿ, ಪನಾಮ ಧ್ವಜದ ಹಡಗು  ಎ ಎಸ್‌ ಪಿ ಅವಾನಾದ ಮಾಸ್ಟರ್ ಆಗಿದ್ದ ಭಾರತೀಯ ನಾವಿಕ 18.03.2026 ರಂದು ನಿಧನರಾಗಿದ್ದಾರೆ; ಹಡಗು ನಿರ್ದೇಶನಾಲಯವು ಯುಎಇಯಲ್ಲಿನ ಭಾರತೀಯ ಮಿಷನ್‌ ನೊಂದಿಗೆ ಸಮನ್ವಯ ಸಾಧಿಸುತ್ತಿದೆ ಮತ್ತು ನಾವಿಕರ ಕುಟುಂಬಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದೆ.
  • ಹಡಗು ನಿರ್ದೇಶನಾಲಯದ ನಿಯಂತ್ರಣ ಕೊಠಡಿಯು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ಸಕ್ರಿಯಗೊಂಡ ನಂತರ 3,670 ಕರೆಗಳನ್ನು ಮತ್ತು 6,929 ಇಮೇಲ್‌ ಗಳನ್ನು ನಿರ್ವಹಿಸಿದೆ (ಕಳೆದ 24 ಗಂಟೆಗಳಲ್ಲಿ 120 ಕರೆಗಳು ಮತ್ತು 181 ಇಮೇಲ್‌ ಗಳು ಸೇರಿದಂತೆ); ಕಳೆದ 24 ಗಂಟೆಗಳಲ್ಲಿ 21 ಮಂದಿ ಸೇರಿದಂತೆ ಇಲ್ಲಿಯವರೆಗೆ 534 ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗಿದೆ.
  • ಭಾರತದ ಕಡಲ ವಲಯವು ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಬಂದರುಗಳಲ್ಲಿ ದಟ್ಟಣೆ ವರದಿಯಾಗಿಲ್ಲ; ನಾವಿಕರ ಸುರಕ್ಷತೆ ಮತ್ತು ಅಡೆತಡೆಯಿಲ್ಲದ ಕಡಲ ವ್ಯಾಪಾರ ಮತ್ತು ಬಂದರು ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ರಾಜ್ಯ ಕಡಲ ಮಂಡಳಿಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ನಿಕಟ ಸಮನ್ವಯದಲ್ಲಿದೆ.

ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ

ಭಾರತೀಯ ಮಿಷನ್‌ ಗಳು ಮತ್ತು ಕಚೇರಿಗಳು ಭಾರತೀಯ ಸಮುದಾಯದೊಂದಿಗೆ ಸಂಪರ್ಕದಲ್ಲಿವೆ ಮತ್ತು ಬೆಂಬಲವನ್ನು ಮುಂದುವರಿಸಿವೆ, ಜೊತೆಗೆ ಅವರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಅಗತ್ಯ ಸಲಹೆಗಳನ್ನು ನೀಡುತ್ತಿವೆ. ಸಚಿವಾಲಯವು ಮಾಹಿತಿ ನೀಡಿದಂತೆ:

  • ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇರಾನ್ ಅಧ್ಯಕ್ಷ ಡಾ. ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತನಾಡಿ, ಈದ್ ಮತ್ತು ನೌರೂಜ್ ಶುಭಾಶಯಗಳನ್ನು ಕೋರಿದ್ದಾರೆ; ಇಬ್ಬರೂ ನಾಯಕರು ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ಚರ್ಚಿಸಿದರು, ಶಾಂತಿ ಮತ್ತು ಸ್ಥಿರತೆಯ ಬಗ್ಗೆ ಭರವಸೆ ವ್ಯಕ್ತಪಡಿಸಿದರು, ಜಾಗತಿಕ ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರುವ ನಿರ್ಣಾಯಕ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಖಂಡಿಸಿದರು, ಹಡಗು ಮಾರ್ಗಗಳನ್ನು ಮುಕ್ತವಾಗಿ ಮತ್ತು ಸುರಕ್ಷಿತವಾಗಿಡುವ ಅಗತ್ಯವನ್ನು ಪುನರುಚ್ಚರಿಸಿದರು ಮತ್ತು ಭಾರತೀಯ ಪ್ರಜೆಗಳಿಗೆ ಇರಾನ್ ನೀಡುತ್ತಿರುವ ಬೆಂಬಲವನ್ನು ಶ್ಲಾಘಿಸಿದರು.
  • ಪ್ರಧಾನಮಂತ್ರಿಯವರು ನಿನ್ನೆ ಬಹ್ರೇನ್ ನ ಘನತೆವೆತ್ತ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರೊಂದಿಗೆ ಮಾತನಾಡಿ ಈದ್ ಅಲ್-ಫಿತರ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು; ಉಭಯ ಕಡೆಯವರು ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ಪರಿಶೀಲಿಸಿದರು, ಜಾಗತಿಕ ಆಹಾರ, ಇಂಧನ ಮತ್ತು ರಸಗೊಬ್ಬರ ಭದ್ರತೆಯ ಮೇಲೆ ಪರಿಣಾಮ ಬೀರುವ ಇಂಧನ ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಬಲವಾಗಿ ಖಂಡಿಸಿದರು, ಅಡೆತಡೆಯಿಲ್ಲದ ಕಡಲ ಸಂಚಾರದ ಅಗತ್ಯವನ್ನು ಒತ್ತಿಹೇಳಿದರು ಮತ್ತು ಬಹ್ರೇನ್‌ ನಲ್ಲಿರುವ ಭಾರತೀಯ ಸಮುದಾಯದ ಯೋಗಕ್ಷೇಮಕ್ಕಾಗಿ ಘನತೆವೆತ್ತ ರಾಜರು ನೀಡುತ್ತಿರುವ ನಿರಂತರ ಬೆಂಬಲವನ್ನು ಶ್ಲಾಘಿಸಿದರು. 
  • ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗಲ್ಫ್ ಮತ್ತು ಪಶ್ಚಿಮ ಏಷ್ಯಾ ಪ್ರದೇಶದ ಬೆಳವಣಿಗೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ, ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ; ಮೀಸಲಾದ 24x7 ನಿಯಂತ್ರಣ ಕೊಠಡಿಯು ಕಾರ್ಯನಿರ್ವಹಿಸುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಮುಂದುವರಿದಿದೆ.
  • ಈ ಪ್ರದೇಶದಾದ್ಯಂತ ಇರುವ ಭಾರತೀಯ ಮಿಷನ್‌ ಗಳು ಮತ್ತು ಕಚೇರಿಗಳು ಹಗಲಿರುಳು ಕಾರ್ಯನಿರ್ವಹಿಸುತ್ತಿವೆ, ಸಹಾಯವಾಣಿಗಳನ್ನು ನಡೆಸುತ್ತಿವೆ, ಸಲಹೆಗಳನ್ನು ನೀಡುತ್ತಿವೆ ಮತ್ತು ಸಮುದಾಯ ಸಂಸ್ಥೆಗಳು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿವೆ; ನಾವಿಕರು, ವಿದ್ಯಾರ್ಥಿಗಳು, ಸಂಕಷ್ಟದಲ್ಲಿರುವ ಪ್ರಜೆಗಳು ಮತ್ತು ಅಲ್ಪಾವಧಿಯ ಸಂದರ್ಶಕರಿಗೆ ನೆರವು ಮುಂದುವರಿದಿದೆ.
  • ಫೆಬ್ರವರಿ 28 ರಿಂದ, ಈ ಪ್ರದೇಶದಿಂದ ಸುಮಾರು 3.3 ಲಕ್ಷ ಪ್ರಯಾಣಿಕರು ಭಾರತಕ್ಕೆ ಮರಳಿದ್ದಾರೆ.
  • ಯುಎಇಯಿಂದ ಇಂದು ಸುಮಾರು 90 ವಿಮಾನಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ; ಸೌದಿ ಅರೇಬಿಯಾ ಮತ್ತು ಓಮನ್‌ ನಿಂದಲೂ ವಿಮಾನಗಳ ಹಾರಾಟ ಮುಂದುವರಿದಿವೆ, ಆದರೆ ಕತಾರ್ ತನ್ನ ವಾಯುಪ್ರದೇಶವನ್ನು ಭಾಗಶಃ ಮುಕ್ತಗೊಳಿಸಿ 8-10 ನಾನ್-ಷೆಡ್ಯೂಲ್ ವಿಮಾನಗಳನ್ನು ನಿರ್ವಹಿಸುತ್ತಿದೆ.
  • ಕುವೈತ್ ಮತ್ತು ಬಹ್ರೇನ್‌ ನಲ್ಲಿ ವಾಯುಪ್ರದೇಶ ಮುಚ್ಚಲ್ಪಟ್ಟಿರುವ ಕಾರಣ, ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ: ಸೌದಿ ಅರೇಬಿಯಾದ ಮೂಲಕ (ದಮ್ಮಾಮ್ ಮತ್ತು ಅಲ್ ಖೈಸುಮಾ ವಿಮಾನ ನಿಲ್ದಾಣಗಳು ಸೇರಿದಂತೆ) ವಿಮಾನಗಳನ್ನು ನಿರ್ವಹಿಸಲಾಗುತ್ತಿದೆ ಮತ್ತು ಭಾರತೀಯ ಪ್ರಜೆಗಳ ಪ್ರಯಾಣವನ್ನು ಸೌದಿ ಅರೇಬಿಯಾದ ಮೂಲಕ ಸುಗಮಗೊಳಿಸಲಾಗುತ್ತಿದೆ.
  • ಎಂ ಟಿ ಸೇಫ್‌ ಸೀ ವಿಷ್ಣುವಿನ 15 ಭಾರತೀಯ ಸಿಬ್ಬಂದಿ ಇರಾಕ್‌ ನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ.
  • ಪ್ರತ್ಯೇಕ ಘಟನೆಗಳಲ್ಲಿ, 6 ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ; ಈ ಪ್ರದೇಶದ ಮಿಷನ್‌ ಗಳು ಶೋಧ ಕಾರ್ಯಕ್ಕಾಗಿ ಮತ್ತು ಮೃತದೇಹಗಳನ್ನು ಶೀಘ್ರವಾಗಿ ಸ್ವದೇಶಕ್ಕೆ ಕಳುಹಿಸಲು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿವೆ.

 

*****

 


(ಪ್ರಕಟಣೆ ಐ.ಡಿ.: 2243430) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Gujarati , Odia , Telugu , Malayalam