ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಂತರ-ಸಚಿವಾಲಯ ಮಾಧ್ಯಮಗೋಷ್ಠಿ


ಇತ್ತೀಚಿನ ದಿನಗಳಲ್ಲಿ 13,700ಕ್ಕೂ ಹೆಚ್ಚು ಹೊಸ ಪಿ ಎನ್‌ ಜಿ ಸಂಪರ್ಕಗಳನ್ನು ನೀಡಲಾಗಿದೆ; 7,300ಕ್ಕೂ ಹೆಚ್ಚು ಗ್ರಾಹಕರು ಎಲ್‌ ಪಿ ಜಿ ಇಂದ ಪಿ ಎನ್‌ ಜಿ ಗೆ ಬದಲಾಗಿದ್ದಾರೆ

ಆತಂಕದ ಬುಕ್ಕಿಂಗ್‌ ಗಳ ಸಂಖ್ಯೆ ಮಾರ್ಚ್ 13 ರಂದು ಇದ್ದ 89 ಲಕ್ಷದಿಂದ ನಿನ್ನೆ ಸುಮಾರು 55 ಲಕ್ಷಕ್ಕೆ ಇಳಿಕೆಯಾಗಿದೆ

ರಾಜ್ಯಗಳಿಗೆ ಪರ್ಯಾಯ ಇಂಧನಗಳ ಪೂರೈಕೆಯನ್ನು ಹೆಚ್ಚಿಸಲು ಕಲ್ಲಿದ್ದಲು ಸಚಿವಾಲಯ ಬೆಂಬಲ ನೀಡುತ್ತಿದೆ

ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಗಟ್ಟಲು ರಾಜ್ಯಗಳಾದ್ಯಂತ ಜಾರಿ ಕ್ರಮಗಳು ಮುಂದುವರಿದಿವೆ

ಕಳೆದ 24 ಗಂಟೆಗಳಲ್ಲಿ 4,500ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, ಸುಮಾರು 4,000 ಸಿಲಿಂಡರ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ

ಇಂಧನ ಉಳಿತಾಯಕ್ಕಾಗಿ ಪಿ ಎನ್‌ ಜಿ ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಕುಕ್‌ಟಾಪ್‌ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ನಾಗರಿಕರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ

ಭಾರತದ ಕಡಲ ವಲಯವು ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಬಂದರುಗಳಲ್ಲಿ ದಟ್ಟಣೆ ವರದಿಯಾಗಿಲ್ಲ

ಪ್ರಧಾನಮಂತ್ರಿಯವರು ಓಮನ್, ಮಲೇಷ್ಯಾ, ಫ್ರಾನ್ಸ್, ಜೋರ್ಡಾನ್ ಮತ್ತು ಕತಾರ್ ನಾಯಕರೊಂದಿಗೆ ಮಾತನಾಡಿ, ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿಯ ಕುರಿತು ಭಾರತದ ನಿಲುವನ್ನು ತಿಳಿಸಿದ್ದಾರೆ

ಉದ್ವಿಗ್ನತೆ ಕಡಿಮೆ ಮಾಡಲು ಮತ್ತು ಶಾಂತಿ ಹಾಗೂ ಸ್ಥಿರತೆಯನ್ನು ಮರುಸ್ಥಾಪಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಪ್ರಧಾನಮಂತ್ರಿ​​​​​​​ ಒತ್ತು ನೀಡಿದ್ದಾರೆ

ಪ್ರಕಟಣಾ ದಿನಾಂಕ: 20 MAR 2026 4:50PM by PIB Bengaluru

ಪಶ್ಚಿಮ ಏಷ್ಯಾದ ಬೆಳವಣಿಗೆಗಳ ಕುರಿತು ಇಂದಿನ ಅಂತರ-ಸಚಿವಾಲಯ ಮಾಧ್ಯಮಗೋಷ್ಠಿಯು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆಯಿತು. ಉದ್ಭವಿಸುತ್ತಿರುವ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳಿಗೆ ನಿಯಮಿತವಾಗಿ ಮಾಹಿತಿ ನೀಡಲು ಇಂತಹ ಸಭೆಗಳನ್ನು ನಡೆಸಲಾಗುತ್ತಿದ್ದು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಇಂಧನ ಪೂರೈಕೆ, ಕಡಲ ಕಾರ್ಯಾಚರಣೆಗಳು ಮತ್ತು ಈ ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳಿಗೆ ನೆರವು ಕುರಿತು ಮಾಹಿತಿಯನ್ನು ಹಂಚಿಕೊಂಡರು. ಇಂದಿನ ಪತ್ರಿಕಾಗೋಷ್ಠಿಯಲ್ಲಿ, ಈ ಕ್ಷೇತ್ರಗಳಲ್ಲಿನ ಇತ್ತೀಚಿನ ಪರಿಸ್ಥಿತಿ ಮತ್ತು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಾಯಿತು.

ಇಂಧನ ಪೂರೈಕೆ ಮತ್ತು ಲಭ್ಯತೆ

ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವ ಹಿನ್ನೆಲೆಯಲ್ಲಿ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್‌ ಪಿ ಜಿ ಯ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮಾಹಿತಿ ನೀಡಿತು. ಸಚಿವಾಲಯವು ಈ ಕೆಳಗಿನ ವಿವರಗಳನ್ನು ನೀಡಿದೆ:

ಕಚ್ಚಾ ತೈಲ ಮತ್ತು ಸಂಸ್ಕರಣಾಗಾರಗಳು

  • ಎಲ್ಲಾ ಸಂಸ್ಕರಣಾಗಾರಗಳು ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾಕಷ್ಟು ಕಚ್ಚಾ ತೈಲ ದಾಸ್ತಾನು ಹೊಂದಿವೆ. ಪೆಟ್ರೋಲ್ ಮತ್ತು ಡೀಸೆಲ್‌ ನ ಸಮರ್ಪಕ ದಾಸ್ತಾನುಗಳನ್ನು ನಿರ್ವಹಿಸಲಾಗುತ್ತಿದೆ.
  • ಸಂಸ್ಕರಣಾಗಾರಗಳಿಂದ ದೇಶೀಯ ಎಲ್‌ ಪಿ ಜಿ ಉತ್ಪಾದನೆಯನ್ನು ಬಿಕ್ಕಟ್ಟಿನ ಪೂರ್ವದ ಮಟ್ಟಕ್ಕೆ ಹೋಲಿಸಿದರೆ ಸುಮಾರು ಶೇಕಡಾ 40 ರಷ್ಟು ಹೆಚ್ಚಿಸಲಾಗಿದೆ.

ಚಿಲ್ಲರೆ ಮಾರಾಟ ಮಳಿಗೆಗಳು

  • ತೈಲ ಮಾರುಕಟ್ಟೆ ಕಂಪನಿಗಳು ಯಾವುದೇ ಚಿಲ್ಲರೆ ಮಳಿಗೆಗಳಲ್ಲಿ ಇಂಧನ ಖಾಲಿಯಾದ ಪ್ರಕರಣಗಳನ್ನು ವರದಿ ಮಾಡಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯನ್ನು ನಿಯಮಿತವಾಗಿ ನಿರ್ವಹಿಸಲಾಗುತ್ತಿದೆ.
  • ಸಾಕಷ್ಟು ದಾಸ್ತಾನು ಲಭ್ಯವಿರುವುದರಿಂದ ನಾಗರಿಕರು ಆತಂಕದಿಂದ ಖರೀದಿ ಮಾಡದಂತೆ ಸಲಹೆ ನೀಡಲಾಗಿದೆ.

ನೈಸರ್ಗಿಕ ಅನಿಲ

  • ಆದ್ಯತಾ ವಲಯಗಳಿಗೆ ಸಂರಕ್ಷಿತ ಪೂರೈಕೆ ಮುಂದುವರಿದಿದೆ. ಇದರಲ್ಲಿ ಗೃಹಬಳಕೆಯ ಪಿ ಎನ್‌ ಜಿ ಮತ್ತು ಸಿ ಎನ್‌ ಜಿ ಸಾರಿಗೆಗೆ ಶೇಕಡಾ 100 ರಷ್ಟು ಪೂರೈಕೆ ಸೇರಿದೆ. ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಪೂರೈಕೆಯನ್ನು ಸುಮಾರು ಶೇಕಡಾ 80 ಕ್ಕೆ ಸೀಮಿತಗೊಳಿಸಲಾಗಿದೆ.
  • ಹೋಟೆಲ್‌ ಗಳು, ರೆಸ್ಟೋರೆಂಟ್‌ ಗಳು ಮತ್ತು ಕ್ಯಾಂಟೀನ್‌ ಗಳಂತಹ ವಾಣಿಜ್ಯ ಸಂಸ್ಥೆಗಳಿಗೆ ಪಿ ಎನ್‌ ಜಿ ಸಂಪರ್ಕಗಳನ್ನು ಆದ್ಯತೆಯ ಮೇಲೆ ನೀಡುವಂತೆ ನಗರ ಅನಿಲ ವಿತರಣಾ (ಸಿಜಿಡಿ) ಘಟಕಗಳಿಗೆ ಸೂಚಿಸಲಾಗಿದೆ.
  • ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಯವರು ಸಿಜಿಡಿ ಘಟಕಗಳೊಂದಿಗೆ ಪರಿಶೀಲನಾ ಸಭೆ ನಡೆಸಿ, ಪಿ ಎನ್‌ ಜಿ ವಿಸ್ತರಣೆಯನ್ನು ತ್ವರಿತಗೊಳಿಸಲು ಮತ್ತು ಎಲ್‌ ಪಿ ಜಿ ಯಿಂದ ಪಿ ಎನ್‌ ಜಿ ಗೆ ಪರಿವರ್ತನೆಯಾಗಲು ಒತ್ತು ನೀಡಿದರು.
  • ಐಜಿಎಲ್, ಎಂಜಿಎಲ್, ಗೇಲ್‌ ಗ್ಯಾಸ್‌ ಮತ್ತು ಬಿಪಿಸಿಎಲ್ ಸೇರಿದಂತೆ ಸಿಜಿಡಿ ಕಂಪನಿಗಳು ಪ್ರೋತ್ಸಾಹಕಗಳನ್ನು ನೀಡುತ್ತಿವೆ.
  • ಅರ್ಜಿ ಸಲ್ಲಿಸಿದ ದಿನಾಂಕದಿಂದ ಗ್ರಾಹಕರ ಮನೆಗಳಿಗೆ ಅನಿಲ ಪೂರೈಕೆ ಆರಂಭವಾಗುವವರೆಗಿನ ಸಮಯವನ್ನು ಕಡಿಮೆ ಮಾಡಲು ಮತ್ತು ಸಾಮೂಹಿಕ ಜಾಗೃತಿ ಉಪಕ್ರಮಗಳನ್ನು ಕೈಗೊಳ್ಳಲು ಪಿ ಎನ್‌ ಜಿ ಆರ್‌ ಬಿ ಸಿಜಿಡಿ ಘಟಕಗಳಿಗೆ ನಿರ್ದೇಶನ ನೀಡಿದೆ.
  • ಭಾರತ ಸರ್ಕಾರವು 16.03.2026 ರ ಪತ್ರದ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಿಜಿಡಿ ವಿಸ್ತರಣೆಯ ಅನುಮೋದನೆಗಳನ್ನು ತ್ವರಿತಗೊಳಿಸಲು ವಿನಂತಿಸಿದೆ.
  • ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಎಲ್‌ ಪಿ ಜಿಯ ಹೆಚ್ಚುವರಿ ಶೇಕಡಾ 10 ರಷ್ಟು ಹಂಚಿಕೆಯನ್ನು ನೀಡಲು ಮುಂದಾಗಿದೆ, ಆದರೆ ಅವರು ದೀರ್ಘಾವಧಿಯಲ್ಲಿ ಎಲ್‌ ಪಿ ಜಿ ಯಿಂದ ಪಿ ಎನ್‌ ಜಿ ಗೆ ಬದಲಾಗಲು ಸಹಾಯ ಮಾಡಬೇಕು ಎಂಬ ಷರತ್ತು ವಿಧಿಸಿದೆ.
  • ಈ ಸುಧಾರಣೆಯನ್ನು ಮುಂದಕ್ಕೆ ಕೊಂಡೊಯ್ಯುವುದು ಮತ್ತು ಸಿಜಿಡಿ ಜಾಲದ ವಿಸ್ತರಣೆಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ತಮ್ಮ ವ್ಯಾಪ್ತಿಯಲ್ಲಿರುವ ದೇಶೀಯ ಮತ್ತು ವಾಣಿಜ್ಯ/ಕೈಗಾರಿಕಾ ಪಿ ಎನ್‌ ಜಿ ಗ್ರಾಹಕರಿಗೆ ಸಂಪರ್ಕ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು ಈಗ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜವಾಬ್ದಾರಿಯಾಗಿದೆ.
  • ರಾಜಸ್ಥಾನ ಸರ್ಕಾರದಿಂದ 19.03.2026 ರ ಪತ್ರದ ಮೂಲಕ ಸಚಿವಾಲಯಕ್ಕೆ ಅರ್ಜಿ ಬಂದಿದ್ದು, ರಾಜ್ಯ ಸರ್ಕಾರವು ಸಿಜಿಡಿ ಉತ್ತೇಜಿಸಲು ಮತ್ತು ಪಿ ಎನ್‌ ಜಿ ಪರಿವರ್ತನೆಗೆ ಸಂಬಂಧಿಸಿದ ಸುಧಾರಣೆಗಳ ಬಗ್ಗೆ ಗಮನಾರ್ಹ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿದೆ. ಈ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ.
  • ಇತ್ತೀಚಿನ ದಿನಗಳಲ್ಲಿ 13,700ಕ್ಕೂ ಹೆಚ್ಚು ಹೊಸ ಪಿ ಎನ್‌ ಜಿ ಸಂಪರ್ಕಗಳನ್ನು ನೀಡಲಾಗಿದೆ ಮತ್ತು 7,300ಕ್ಕೂ ಹೆಚ್ಚು ಗ್ರಾಹಕರು ಎಲ್‌ ಪಿ ಜಿ ಯಿಂದ ಪಿ ಎನ್‌ ಜಿ ಗೆ ಬದಲಾಗಿದ್ದಾರೆ, ಇದು ಎಲ್‌ ಪಿ ಜಿ ಬೇಡಿಕೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ.

ಎಲ್ಪಿ ಜಿ

  • ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎಲ್‌ ಪಿ ಜಿ ಪೂರೈಕೆಯು ಇನ್ನೂ ಕಳವಳಕಾರಿಯಾಗಿದ್ದು, ಇದನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.
  • ವಿತರಣಾ ಕೇಂದ್ರಗಳಲ್ಲಿ ಯಾವುದೇ ಇಂಧನ ಖಾಲಿಯಾದ ಪ್ರಕರಣಗಳು ವರದಿಯಾಗಿಲ್ಲ.
  • ಆತಂಕದ ಬುಕ್ಕಿಂಗ್‌ ಗಳು ಮಾರ್ಚ್ 13 ರಂದು ಇದ್ದ 89 ಲಕ್ಷದಿಂದ ನಿನ್ನೆ ಸುಮಾರು 55 ಲಕ್ಷಕ್ಕೆ ಗಣನೀಯವಾಗಿ ಇಳಿಕೆಯಾಗಿವೆ. ಈ ನಡುವೆ ಗೃಹಬಳಕೆಯ ಎಲ್‌ ಪಿ ಜಿ ವಿತರಣೆಗಳು ಎಂದಿನಂತೆ ಮುಂದುವರಿದಿವೆ.
  • 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮನೆಬಳಕೆಯೇತರ ಎಲ್‌ ಪಿ ಜಿ ಹಂಚಿಕೆಗೆ ಆದೇಶ ಹೊರಡಿಸಿವೆ ಮತ್ತು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೂರೈಕೆ ಲಭ್ಯವಾಗುವಂತೆ ಮಾಡಲಾಗಿದೆ.
  • ಶೈಕ್ಷಣಿಕ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಅವು ವಾಣಿಜ್ಯ ಎಲ್‌ ಪಿ ಜಿ ಹಂಚಿಕೆಯ ಸುಮಾರು ಶೇಕಡಾ 50 ರಷ್ಟನ್ನು ಪಡೆಯುತ್ತಿವೆ.
  • ಕಳೆದ ವಾರದಲ್ಲಿ ಸುಮಾರು 11,360 ಮೆಟ್ರಿಕ್ ಟನ್ ವಾಣಿಜ್ಯ ಎಲ್‌ ಪಿ ಜಿ ಯನ್ನು ವಿತರನೆಗಾಗಿ ಪಡೆಯಲಾಗಿದೆ.

ಸೀಮೆಎಣ್ಣೆ

  • ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 48,000 ಕೆಎಲ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದ್ದು, ವಿತರಣಾ ಕೇಂದ್ರಗಳನ್ನು ಗುರುತಿಸಲು ವಿನಂತಿಸಲಾಗಿದೆ.
  • 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಸ್‌ ಕೆ ಒ ಹಂಚಿಕೆ ಆದೇಶಗಳನ್ನು ಹೊರಡಿಸಿವೆ. ಹಿಮಾಚಲ ಪ್ರದೇಶ ಮತ್ತು ಲಡಾಖ್ ಯಾವುದೇ ಅವಶ್ಯಕತೆ ಇಲ್ಲ ಎಂದು ತಿಳಿಸಿವೆ. ಇಲ್ಲಿಯವರೆಗೆ 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಎಸ್‌ ಕೆ ಒ ಹಂಚಿಕೆ ಆದೇಶಗಳನ್ನು ಹೊರಡಿಸಬೇಕಿದೆ.

ರಾಜ್ಯ ಸರ್ಕಾರಗಳು ನಡೆಸಿದ ಸಭೆಗಳು

  • ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಗತ್ಯ ವಸ್ತುಗಳ ಕಾಯ್ದೆ ಮತ್ತು ಎಲ್‌ ಪಿ ಜಿ ನಿಯಂತ್ರಣ ಆದೇಶದ ಅಡಿಯಲ್ಲಿ ಪೂರೈಕೆಯನ್ನು ಮೇಲ್ವಿಚಾರಣೆ ಮಾಡುತ್ತಿವೆ. ಜಾಗರೂಕತೆ ವಹಿಸಲು, ತಪಾಸಣೆ ನಡೆಸಲು ಮತ್ತು ಸುಗಮ ಎಲ್‌ ಪಿ ಜಿ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಸಲಹೆ ನೀಡಲಾಗಿದೆ.
  • ಪೆಟ್ರೋಲ್, ಡೀಸೆಲ್ ಮತ್ತು ಎಲ್‌ ಪಿ ಜಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಪ್ರಾಥಮಿಕ ಪಾತ್ರವನ್ನು ವಹಿಸಬೇಕಾಗುತ್ತದೆ.
  • ಭಾರತ ಸರ್ಕಾರವು 13.03.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪೆಟ್ರೋಲ್ ಪಂಪ್‌ ಗಳು, ಎಲ್‌ ಪಿ ಜಿ ವಿತರಣಾ ಕೇಂದ್ರಗಳು, ಸಂಗ್ರಹಣಾ ಕೇಂದ್ರಗಳು ಇತ್ಯಾದಿಗಳಲ್ಲಿ ಯಾವುದೇ ಅಕ್ರಮಗಳನ್ನು ತಡೆಯಲು ಜಿಲ್ಲಾಧಿಕಾರಿಗಳು/ಕಲೆಕ್ಟರ್‌ ಗಳು ಮತ್ತು ಇತರ ಜಾರಿ ಏಜೆನ್ಸಿಗಳಿಗೆ ಸಮನ್ವಯದ ತಪಾಸಣೆ ಮತ್ತು ಹಠಾತ್ ತಪಾಸಣೆ ನಡೆಸಲು ನಿರ್ದೇಶನ ನೀಡುವಂತೆ ವಿನಂತಿಸಿದೆ.
  • ಭಾರತ ಸರ್ಕಾರವು 18.03.2026 ರ ಪತ್ರದ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿನಂತಿಸಿರುವುದು:
    • ದಾಸ್ತಾನು, ಕಾಳಸಂತೆ, ಗೃಹಬಳಕೆ ಎಲ್‌ ಪಿ ಜಿ ದುರ್ಬಳಕೆ ಮತ್ತು ಇತರ ಅಕ್ರಮಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಜಾಗರೂಕತೆ ವಹಿಸುವುದು.
    • ಅಗತ್ಯ ವಸ್ತುಗಳ ಕಾಯ್ದೆ 1955, ಪೆಟ್ರೋಲಿಯಂ ಕಾಯ್ದೆ 1934, ಪೆಟ್ರೋಲಿಯಂ ನಿಯಮಗಳು 2002, ಮೋಟಾರ್ ಸ್ಪಿರಿಟ್ ಮತ್ತು ಎಚ್‌ ಎಸ್‌ ಡಿ ಆದೇಶ 2005 ಮತ್ತು ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು.
    • ಎಲ್‌ ಪಿ ಜಿ ಟ್ಯಾಂಕರ್‌ ಗಳು ಮತ್ತು ಸಿಲಿಂಡರ್‌ ಗಳ ಸುಗಮ ಮತ್ತು ಅಡೆತಡೆಯಿಲ್ಲದ ಚಲನೆಯನ್ನು ಒಳಗೊಂಡಂತೆ ಸಮರ್ಪಕ ಆಡಳಿತಾತ್ಮಕ ಮತ್ತು ಲಾಜಿಸ್ಟಿಕ್ ಕ್ರಮಗಳನ್ನು ತೆಗೆದುಕೊಳ್ಳುವುದು.
    • ಸ್ಥಳೀಯ ಆದ್ಯತೆಗಳು ಮತ್ತು ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಾಣಿಜ್ಯ ಎಲ್‌ ಪಿ ಜಿ ಗೆ ಸೂಕ್ತವಾದ ವಿತರಣಾ ವಿಧಾನಗಳನ್ನು ರೂಪಿಸುವುದು.
    • ಆತಂಕದ ಖರೀದಿಯನ್ನು ತಡೆಗಟ್ಟಲು, ಎಲ್‌ ಪಿ ಜಿ ಯ ವಿವೇಚನಾಪೂರ್ಣ ಬಳಕೆಯನ್ನು ಉತ್ತೇಜಿಸಲು ಮತ್ತು ನಿಖರವಾದ ಮಾಹಿತಿಯನ್ನು ಪ್ರಸಾರ ಮಾಡಲು ಸಾರ್ವಜನಿಕ ಸಲಹೆಗಳನ್ನು ಹೊರಡಿಸುವುದು.
  • ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಗಳು ಪ್ರತಿದಿನ ನಿಯಮಿತ ಜಾರಿ ಕ್ರಮಗಳನ್ನು ನಡೆಸಲು ವಿನಂತಿಸಲಾಗಿದೆ.
  • ಇದಲ್ಲದೆ, ಸರಿಯಾದ ಮಾಹಿತಿಯನ್ನು ಪ್ರಸಾರ ಮಾಡಲು ಸಹಾಯ ಮಾಡಲು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರತಿದಿನ ಪತ್ರಿಕಾಗೋಷ್ಠಿಗಳನ್ನು ನಡೆಸಲು ವಿನಂತಿಸಲಾಗಿದೆ.
  • ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸಹಾಯವಾಣಿ ಸಂಖ್ಯೆಗಳನ್ನು ಸ್ಥಾಪಿಸಲು ಮತ್ತು ನಿಯಮಿತ ಅಂತರದಲ್ಲಿ ಅವುಗಳಿಗೆ ವ್ಯಾಪಕ ಪ್ರಚಾರವನ್ನು ಖಚಿತಪಡಿಸಿಕೊಳ್ಳಲು ವಿನಂತಿಸಲಾಗಿದೆ.
  • 32 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿವೆ. ಅನೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರತಿದಿನ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿವೆ.
  • 31 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿಗಳನ್ನು ಸ್ಥಾಪಿಸಿವೆ.
  • ನಿಯಂತ್ರಣ ಕೊಠಡಿಗಳು ಮತ್ತು ಜಿಲ್ಲಾ ಮೇಲ್ವಿಚಾರಣಾ ಸಮಿತಿಗಳನ್ನು ಸ್ಥಾಪಿಸದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತುರ್ತಾಗಿ ಹಾಗೆ ಮಾಡಲು ವಿನಂತಿಸಲಾಗಿದೆ.

ಜಾರಿ ಕ್ರಮಗಳು

  • ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಗಟ್ಟಲು ರಾಜ್ಯಗಳಾದ್ಯಂತ ಜಾರಿ ಕ್ರಮಗಳು ಮುಂದುವರಿದಿವೆ. ಕಳೆದ 24 ಗಂಟೆಗಳಲ್ಲಿ 4,500ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದ್ದು, ಸುಮಾರು 4,000 ಸಿಲಿಂಡರ್‌ ಗಳನ್ನು ವಶಪಡಿಸಿಕೊಳ್ಳಲಾಗಿದೆ.
  • ಉತ್ತರ ಪ್ರದೇಶ, ತಮಿಳುನಾಡು, ಕೇರಳಂ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಗಮನಾರ್ಹ ಕ್ರಮಗಳನ್ನು ವರದಿ ಮಾಡಲಾಗಿದೆ.
  • ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಕ್ರಮಗಳನ್ನು ತಡೆಗಟ್ಟಲು ಚಿಲ್ಲರೆ ಮಳಿಗೆಗಳು ಮತ್ತು ಎಲ್‌ ಪಿ ಜಿ ವಿತರಣಾ ಕೇಂದ್ರಗಳಲ್ಲಿ 1,800ಕ್ಕೂ ಹೆಚ್ಚು ಹಠಾತ್ ತಪಾಸಣೆಗಳನ್ನು ನಡೆಸಿವೆ.

ಸರ್ಕಾರದ ಇತರ ಕ್ರಮಗಳು

  • ವಿಶೇಷವಾಗಿ ಮನೆಗಳು ಮತ್ತು ಆಸ್ಪತ್ರೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಂತಹ ಆದ್ಯತಾ ವಲಯಗಳಿಗೆ ತಡೆರಹಿತ ಎಲ್‌ ಪಿ ಜಿ ಪೂರೈಕೆ ಮತ್ತು ಪಿ ಎನ್‌ ಜಿ ವಿಸ್ತರಣೆಗೆ ಸರ್ಕಾರವು ಆದ್ಯತೆ ನೀಡುವುದನ್ನು ಮುಂದುವರಿಸಿದೆ.
  •  ಕ್ರಮಗಳಲ್ಲಿ ಹೆಚ್ಚಿದ ರಿಫೈನರಿ ಉತ್ಪಾದನೆ, ನಗರ ಪ್ರದೇಶಗಳಲ್ಲಿ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳವರೆಗೆ ಪರಿಷ್ಕೃತ ಬುಕ್ಕಿಂಗ್ ಅಂತರಗಳು ಮತ್ತು ಆದ್ಯತೆಯ ಹಂಚಿಕೆ ಸೇರಿವೆ.
  • ಸೀಮೆಎಣ್ಣೆ ಮತ್ತು ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ, ರಾಜ್ಯಗಳಿಗೆ ಸರಬರಾಜು ಹೆಚ್ಚಿಸಲು ಕಲ್ಲಿದ್ದಲು ಸಚಿವಾಲಯದಿಂದ ಬೆಂಬಲ ನೀಡಲಾಗುತ್ತಿದೆ.
  • ಹೆಚ್ಚುವರಿ ಎಲ್‌ ಪಿ ಜಿ ಹಂಚಿಕೆಗೆ ಸಂಬಂಧಿಸಿದ ಉತ್ತೇಜಕಗಳ ಬೆಂಬಲದೊಂದಿಗೆ ಪಿ ಎನ್‌ ಜಿ ಸಂಪರ್ಕಗಳನ್ನು ಸುಗಮಗೊಳಿಸಲು ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

ಸಾರ್ವಜನಿಕ ಸಲಹೆ

  • ನಾಗರಿಕರು ಅಧಿಕೃತ ಮೂಲಗಳನ್ನು ನಂಬಲು ಮತ್ತು ವದಂತಿಗಳನ್ನು ತಪ್ಪಿಸಲು ಸಲಹೆ ನೀಡಲಾಗಿದೆ.
  • ಗ್ರಾಹಕರು ಆತಂಕದ ಬುಕ್ಕಿಂಗ್‌ ಗಳನ್ನು ತಪ್ಪಿಸಲು, ಡಿಜಿಟಲ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್‌ ಗಳನ್ನು ಬಳಸಲು ಮತ್ತು ಎಲ್‌ ಪಿ ಜಿ ವಿತರಕರನ್ನು ಭೇಟಿ ಮಾಡುವುದನ್ನು ತಪ್ಪಿಸಲು ವಿನಂತಿಸಲಾಗಿದೆ, ಏಕೆಂದರೆ ಮನೆ ವಿತರಣೆ ಮುಂದುವರಿದಿದೆ.
  • ಪಿ ಎನ್‌ ಜಿ ಮತ್ತು ಎಲೆಕ್ಟ್ರಿಕ್ ಅಥವಾ ಇಂಡಕ್ಷನ್ ಕುಕ್‌ಟಾಪ್‌ ಗಳಂತಹ ಪರ್ಯಾಯ ಇಂಧನಗಳನ್ನು ಬಳಸಲು ಮತ್ತು ಇಂಧನವನ್ನು ಉಳಿಸಲು ನಾಗರಿಕರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ಕಡಲ ಸುರಕ್ಷತೆ ಮತ್ತು ಹಡಗು ಕಾರ್ಯಾಚರಣೆಗಳು

ಪರ್ಷಿಯನ್ ಕೊಲ್ಲಿಯಲ್ಲಿ ಚಾಲ್ತಿಯಲ್ಲಿರುವ ಕಡಲ ಪರಿಸ್ಥಿತಿ ಮತ್ತು ಭಾರತೀಯ ಹಡಗುಗಳು ಹಾಗೂ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಮಾಹಿತಿ ಹಂಚಿಕೊಂಡಿದೆ. ಸಚಿವಾಲಯವು ಈ ಕೆಳಗಿನ ಅಂಶಗಳನ್ನು ಗಮನಿಸಿದೆ:

  • ಈ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ ಭಾರತೀಯ ಧ್ವಜ ಹೊತ್ತ ಹಡಗುಗಳಿಗೆ ಸಂಬಂಧಿಸಿದ ಯಾವುದೇ ಕಡಲ ಘಟನೆ ವರದಿಯಾಗಿಲ್ಲ.
  • ಪ್ರಸ್ತುತ, 611 ಭಾರತೀಯ ನಾವಿಕರನ್ನು ಹೊಂದಿರುವ 22 ಭಾರತೀಯ ಧ್ವಜದ ಹಡಗುಗಳು ಪಶ್ಚಿಮ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿವೆ. ಹಡಗು ನಿರ್ದೇಶನಾಲಯವು ಹಡಗು ಮಾಲೀಕರು, ಆರ್‌ ಪಿ ಎಸ್‌ ಎಲ್ ಏಜೆನ್ಸಿಗಳು ಮತ್ತು ಭಾರತೀಯ ಮಿಷನ್‌ಗಳೊಂದಿಗೆ ಸಮನ್ವಯ ಸಾಧಿಸಿ ನಿಕಟ ಮೇಲ್ವಿಚಾರಣೆಯನ್ನು ಮುಂದುವರಿಸಿದೆ.
  • ಹಡಗು ನಿರ್ದೇಶನಾಲಯವು ನಿಯಂತ್ರಣ ಕೊಠಡಿಯು 24×7 ಕಾರ್ಯನಿರ್ವಹಿಸುತ್ತಿದೆ ಮತ್ತು ಇದು ಕಾರ್ಯಾರಂಭ ಮಾಡಿದಂದಿನಿಂದ 3,550 ಕರೆಗಳು ಮತ್ತು 6,748 ಇಮೇಲ್‌ ಗಳನ್ನು ನಿರ್ವಹಿಸಿದೆ. ಇದರಲ್ಲಿ ಕಳೆದ 24 ಗಂಟೆಗಳಲ್ಲಿ ಬಂದ 125 ಕರೆಗಳು ಮತ್ತು 209 ಇಮೇಲ್‌ ಗಳು ಸೇರಿವೆ.
  • ಹಡಗು ನಿರ್ದೇಶನಾಲಯ ಇದುವರೆಗೆ 513ಕ್ಕೂ ಹೆಚ್ಚು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಲು ನೆರವಾಗಿದೆ, ಇದರಲ್ಲಿ ಕಳೆದ 24 ಗಂಟೆಗಳಲ್ಲಿ ವಿಮಾನ ನಿಲ್ದಾಣಗಳು ಮತ್ತು ಪ್ರಾದೇಶಿಕ ಸ್ಥಳಗಳಿಂದ ಮರಳಿದ 25 ನಾವಿಕರು ಸೇರಿದ್ದಾರೆ.
  • ಗುಜರಾತ್, ಮಹಾರಾಷ್ಟ್ರ, ಗೋವಾ, ಕೇರಳ, ಆಂಧ್ರಪ್ರದೇಶ ಮತ್ತು ಪುದುಚೇರಿ ಸೇರಿದಂತೆ ರಾಜ್ಯ ಕಡಲ ಮಂಡಳಿಗಳು ದೃಢಪಡಿಸಿದಂತೆ, ಭಾರತದ ಕಡಲ ವಲಯವು ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಂದರುಗಳಲ್ಲಿ ಯಾವುದೇ ದಟ್ಟಣೆ ವರದಿಯಾಗಿಲ್ಲ.
  • ಬಂದರುಗಳು ಹಡಗುಗಳ ಚಲನೆ ಮತ್ತು ಸರಕು ಕಾರ್ಯಾಚರಣೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿವೆ. ಸುಗಮ ನಿರ್ವಹಣೆ ಮತ್ತು ದಟ್ಟಣೆ ಕಡಿಮೆ ಮಾಡಲು ಜವಾಹರಲಾಲ್ ನೆಹರು ಪೋರ್ಟ್ ಅಥಾರಿಟಿ, ವಿ.ಒ. ಚಿದಂಬರನಾರ್ ಪೋರ್ಟ್ ಅಥಾರಿಟಿ, ವಿಶಾಖಪಟ್ಟಣಂ ಬಂದರು, ಮುಂದ್ರಾ ಮತ್ತು ದೀನ್ ದಯಾಳ್ ಪೋರ್ಟ್ ಅಥಾರಿಟಿಗಳಂತಹ ಪ್ರಮುಖ ಬಂದರುಗಳಲ್ಲಿ ಹೆಚ್ಚುವರಿ ಸಾಮರ್ಥ್ಯವನ್ನು ಸೃಷ್ಟಿಸಲಾಗಿದೆ.
  • ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಮಧ್ಯಸ್ಥಗಾರರಿಗೆ ಬೆಂಬಲ ನೀಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಮಾರ್ಚ್ 14 ರಿಂದ ಮಾರ್ಚ್ 31, 2026 ರವರೆಗೆ ಕಚ್ಚಾ ತೈಲ ಮತ್ತು ಎಲ್‌ ಪಿ ಜಿ ಹಡಗುಗಳಿಗೆ ಸರಕು ಸಂಬಂಧಿತ ಶುಲ್ಕಗಳ ಮನ್ನಾ, ಸಿಲುಕಿಕೊಂಡಿರುವ ರಫ್ತು ಕಂಟೈನರ್‌ ಗಳಿಗೆ ಗ್ರೌಂಡ್ ರೆಂಟ್ ಮತ್ತು ರೀಫರ್ ಶುಲ್ಕಗಳ ಮನ್ನಾ ಮತ್ತು ಸುಮಾರು 3,500 ಚದರ ಮೀಟರ್ ಹೊದಿಕೆಯ ಶೆಡ್ ಮತ್ತು 76,000 ಚದರ ಮೀಟರ್ ಮುಕ್ತ ಪ್ರದೇಶದ ಹೆಚ್ಚುವರಿ ದಾಸ್ತಾನು ಸಾಮರ್ಥ್ಯದ ಸೃಷ್ಟಿ ಸೇರಿವೆ.
  • ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸುತ್ತಿರುವ ಪರಿಸ್ಥಿತಿಯ ದೃಷ್ಟಿಯಿಂದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಹಡಗುಗಳ ಚಲನೆ, ಬಂದರು ಕಾರ್ಯಾಚರಣೆಗಳು, ನಾವಿಕರ ಸುರಕ್ಷತೆ ಮತ್ತು ಕಡಲ ವ್ಯಾಪಾರದ ನಿರಂತರತೆಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ.

ಪ್ರದೇಶದಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಶ್ಚಿಮ ಏಷ್ಯಾ ಪ್ರದೇಶದ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದು, ಭಾರತೀಯ ಮಿಷನ್‌ ಗಳ ಮೂಲಕ ನಡೆಯುತ್ತಿರುವ ನೆರವು ಮತ್ತು ಸಂಪರ್ಕದ ಬಗ್ಗೆ ಮಾಹಿತಿ ನೀಡಿದೆ. ಸಚಿವಾಲಯವು ಈ ಮಾಹಿತಿಯನ್ನು ನೀಡಿದೆ:

  • ಪ್ರಧಾನಮಂತ್ರಿಯವರು ಓಮನ್, ಮಲೇಷ್ಯಾ, ಫ್ರಾನ್ಸ್, ಜೋರ್ಡಾನ್ ಮತ್ತು ಕತಾರ್ ನಾಯಕರೊಂದಿಗೆ ಮಾತನಾಡಿ, ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿಯ ಕುರಿತು ಭಾರತದ ನಿಲುವನ್ನು ತಿಳಿಸಿದ್ದಾರೆ ಮತ್ತು ಉದ್ವಿಗ್ನತೆ ಕಡಿಮೆ ಮಾಡಲು ಹಾಗೂ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಿದ್ದಾರೆ.
  • ಪ್ರಧಾನಮಂತ್ರಿಯವರು ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಬಲವಾಗಿ ಖಂಡಿಸಿದ್ದಾರೆ ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಮತ್ತು ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ್ದಾರೆ.
  • ಓಮನ್: ಪ್ರಧಾನಮಂತ್ರಿಯವರು ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರೊಂದಿಗೆ ಮಾತನಾಡಿ, ಈದ್ ಶುಭಾಶಯಗಳನ್ನು ತಿಳಿಸಿದರು ಮತ್ತು ಓಮನ್‌ ನ ಸಾರ್ವಭೌಮತ್ವದ ಉಲ್ಲಂಘನೆಯನ್ನು ಭಾರತವು ಖಂಡಿಸುತ್ತದೆ ಎಂದು ಪುನರುಚ್ಚರಿಸಿದರು. ಭಾರತೀಯ ಪ್ರಜೆಗಳು ಸೇರಿದಂತೆ ಜನರ ಸುರಕ್ಷಿತ ಮರಳುವಿಕೆಗೆ ಓಮನ್ ನೀಡುತ್ತಿರುವ ಸಹಕಾರವನ್ನು ಅವರು ಶ್ಲಾಘಿಸಿದರು.
  • ಮಲೇಷ್ಯಾ: ಪ್ರಧಾನಮಂತ್ರಿಯವರು ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಮಾತನಾಡಿ, ಪಶ್ಚಿಮ ಏಷ್ಯಾದ ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಹಾರಿ ರಯ ಐದಿಲ್‌ಫಿಟ್ರಿ (Hari Raya Aidilfitri) ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದರು.
  • ಫ್ರಾನ್ಸ್: ಪ್ರಧಾನಮಂತ್ರಿಯವರು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತನಾಡಿದರು ಮತ್ತು ಉಭಯ ನಾಯಕರು ಈ ಪ್ರದೇಶದಲ್ಲಿ ಮತ್ತು ಅದರಾಚೆ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ನಿಕಟ ಸಮನ್ವಯವನ್ನು ಮುಂದುವರಿಸಲು ಒಪ್ಪಿಕೊಂಡರು.
  • ಜೋರ್ಡಾನ್: ಪ್ರಧಾನಮಂತ್ರಿಯವರು ಗೌರವಾನ್ವಿತ ರಾಜ ಅಬ್ದುಲ್ಲಾ II ಅವರೊಂದಿಗೆ ಮಾತನಾಡಿ, ಈದ್ ಶುಭಾಶಯಗಳನ್ನು ತಿಳಿಸಿದರು ಮತ್ತು ಭಾರತೀಯರ ಸುರಕ್ಷಿತ ಮರಳುವಿಕೆಗೆ ಜೋರ್ಡಾನ್ ನೀಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಉಭಯ ದೇಶಗಳು ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಖಂಡಿಸಿದವು ಮತ್ತು ಸರಕು ಹಾಗೂ ಇಂಧನದ ಅಡೆತಡೆಯಿಲ್ಲದ ಸಾಗಣೆಯನ್ನು ಬೆಂಬಲಿಸಿದವು.
  • ಕತಾರ್: ಪ್ರಧಾನಮಂತ್ರಿಯವರು ಕತಾರ್‌ ನ ಅಮೀರ್ ಗೌರವಾನ್ವಿತ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಮಾತನಾಡಿ, ಈದ್ ಶುಭಾಶಯಗಳನ್ನು ತಿಳಿಸಿದರು ಮತ್ತು ಕತಾರ್‌ ಗೆ ಬೆಂಬಲ ವ್ಯಕ್ತಪಡಿಸಿದರು. ಉಭಯ ದೇಶಗಳು ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಖಂಡಿಸಿದವು ಮತ್ತು ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಸಂಚಾರಕ್ಕೆ ಬೆಂಬಲವನ್ನು ಪುನರುಚ್ಚರಿಸಿದವು.
  • ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಶ್ಚಿಮ ಏಷ್ಯಾ ಮತ್ತು ಕೊಲ್ಲಿ ಪ್ರದೇಶದ ಬೆಳವಣಿಗೆಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಿದೆ. ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣವು ಅತ್ಯುನ್ನತ ಆದ್ಯತೆಯಾಗಿದೆ.
  • ಇರಾನ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು 913 ಭಾರತೀಯ ಪ್ರಜೆಗಳನ್ನು ಇರಾನ್‌ ನಿಂದ ನೆರೆಯ ದೇಶಗಳಿಗೆ ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದೆ, ಇದರಲ್ಲಿ 793 ಜನರನ್ನು ಅರ್ಮೇನಿಯಾಕ್ಕೆ ಮತ್ತು 120 ಜನರನ್ನು ಅಜೆರ್ಬೈಜಾನ್‌ ಗೆ ಕಳುಹಿಸಲಾಗಿದೆ.
  • ಇರಾನ್‌ ನಿಂದ ಎಲ್ಲಾ 284 ಭಾರತೀಯ ಯಾತ್ರಿಕರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ.
  • ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿಯಂತ್ರಣ ಕೊಠಡಿಯು ಭಾರತೀಯ ಪ್ರಜೆಗಳಿಗೆ ನೆರವು ನೀಡುತ್ತಿದೆ. ನಿನ್ನೆ 10 ಕರೆಗಳು ಮತ್ತು 6 ಇಮೇಲ್‌ ಗಳನ್ನು ಸ್ವೀಕರಿಸಲಾಗಿದ್ದು, ಇವುಗಳಲ್ಲಿ ಹೆಚ್ಚಿನವು ವ್ಯಾಪಾರಿ ಹಡಗುಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳಿಗೆ ಸಂಬಂಧಿಸಿದ್ದವು.
  • ಮೀಸಲಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿಯಂತ್ರಣ ಕೊಠಡಿಯು ಕಾರ್ಯಾಚರಣೆಯಲ್ಲಿದೆ ಮತ್ತು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಮುಂದುವರಿದಿದೆ.
  • ಪ್ರದೇಶದಾದ್ಯಂತ ಇರುವ ಭಾರತೀಯ ಮಿಷನ್‌ ಗಳು ಮತ್ತು ಪೋಸ್ಟ್‌ ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿವೆ, ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕ ಕಾಯ್ದುಕೊಂಡಿವೆ ಮತ್ತು ನಿಯಮಿತ ಸಲಹೆಗಳನ್ನು ನೀಡುತ್ತಿವೆ. ನಾವಿಕರು, ವಿದ್ಯಾರ್ಥಿಗಳು, ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳು ಮತ್ತು ಅಲ್ಪಾವಧಿಯ ಸಂದರ್ಶಕರಿಗೆ ವೀಸಾ, ಕಾನ್ಸುಲರ್ ಮತ್ತು ಲಾಜಿಸ್ಟಿಕ್ ಬೆಂಬಲ ಸೇರಿದಂತೆ ನೆರವು ಮುಂದುವರಿದಿದೆ.
  • ಫೆಬ್ರವರಿ 28 ರಿಂದ, ಸುಮಾರು 3,00,000 ಪ್ರಯಾಣಿಕರು ಈ ಪ್ರದೇಶದಿಂದ ಭಾರತಕ್ಕೆ ಮರಳಿದ್ದಾರೆ ಮತ್ತು ಒಟ್ಟಾರೆ ವಿಮಾನ ಕಾರ್ಯಾಚರಣೆಗಳು ಸ್ಥಿರ ಸುಧಾರಣೆಯನ್ನು ತೋರಿಸುತ್ತಿವೆ.
  • ಯುಎಇಯಲ್ಲಿ, ಸೀಮಿತ ನಾನ್-ಷೆಡ್ಯೂಲ್ಡ್ ವಿಮಾನಗಳು ಮುಂದುವರಿದಿದ್ದು, ಇಂದು ಸುಮಾರು 90 ವಿಮಾನಗಳು ಭಾರತಕ್ಕೆ ಬರುವ ನಿರೀಕ್ಷೆಯಿದೆ.
  • ಸೌದಿ ಅರೇಬಿಯಾ ಮತ್ತು ಓಮನ್‌‌ ನಿಂದ ಭಾರತಕ್ಕೆ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
  • ಕತಾರ್ ವಾಯುಪ್ರದೇಶವು ಭಾಗಶಃ ತೆರೆದಿದ್ದು, ಕತಾರ್ ಏರ್ವೇಸ್ ಇಂದು ಭಾರತಕ್ಕೆ 10 ನಾನ್-ಷೆಡ್ಯೂಲ್ಡ್ ವಿಮಾನಗಳನ್ನು ಓಡಿಸುವ ನಿರೀಕ್ಷೆಯಿದೆ.
  • ಕುವೈತ್ ವಾಯುಪ್ರದೇಶವು ಮುಚ್ಚಲ್ಪಟ್ಟಿದೆ, ಜಜೀರಾ ಏರ್ವೇಸ್ ಸೌದಿ ಅರೇಬಿಯಾದ ಅಲ್ ಖೈಸೂಮಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನಗಳನ್ನು ಪ್ರಾರಂಭಿಸುತ್ತಿದ್ದು, ಮೊದಲ ವಿಮಾನವು ಇಂದು ಕೊಚ್ಚಿಗೆ ಬರಲಿದೆ.
  • ಬಹ್ರೇನ್ ವಾಯುಪ್ರದೇಶವು ಮುಚ್ಚಲ್ಪಟ್ಟಿದೆ, ಗಲ್ಫ್ ಏರ್ ಸೌದಿ ಅರೇಬಿಯಾದ ದಮ್ಮಾಮ್‌ ನಿಂದ ಭಾರತಕ್ಕೆ ವಿಶೇಷ ವಿಮಾನಗಳನ್ನು ಓಡಿಸುತ್ತಿದೆ.
  • ಕುವೈತ್, ಬಹ್ರೇನ್ ಮತ್ತು ಇರಾಕ್‌ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಸೌದಿ ಅರೇಬಿಯಾದ ಮೂಲಕ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.
  • ಇರಾನ್‌ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಮೂಲಕ ಭಾರತಕ್ಕೆ ಪ್ರಯಾಣಿಸಲು ನೆರವು ನೀಡಲಾಗುತ್ತಿದೆ.
  • ಇಸ್ರೇಲ್‌ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಜೋರ್ಡಾನ್ ಮೂಲಕ ಭಾರತಕ್ಕೆ ಪ್ರಯಾಣಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ.
  • ಮಾರ್ಚ್ 18 ರಂದು ರಿಯಾದ್‌ ನಲ್ಲಿ ನಡೆದ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ದುರದೃಷ್ಟವಶಾತ್ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರವು ಸಂತಾಪ ವ್ಯಕ್ತಪಡಿಸಿದೆ ಮತ್ತು ಮೃತದೇಹವನ್ನು ಶೀಘ್ರವಾಗಿ ಸ್ವದೇಶಕ್ಕೆ ತರಲು ಮಿಷನ್ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
  • ಒಟ್ಟಾರೆಯಾಗಿ, ಇತ್ತೀಚಿನ ಘಟನೆಗಳಲ್ಲಿ ಆರು ಮಂದಿ ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ. ಇಬ್ಬರು ಭಾರತೀಯ ಪ್ರಜೆಗಳ ಮೃತದೇಹಗಳನ್ನು ಈಗಾಗಲೇ ಭಾರತಕ್ಕೆ ತರಲಾಗಿದೆ.
  • ಸೌದಿ ಅರೇಬಿಯಾ, ಓಮನ್, ಇರಾಕ್ ಮತ್ತು ಯುಎಇಯಲ್ಲಿರುವ ಭಾರತೀಯ ಮಿಷನ್‌ ಗಳು ನಾಪತ್ತೆಯಾದ ವ್ಯಕ್ತಿಗಾಗಿ ಮತ್ತು ಉಳಿದ ಮೃತದೇಹಗಳನ್ನು ಸ್ವದೇಶಕ್ಕೆ ತರಲು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ.
  • ರಕ್ಷಿಸಲ್ಪಟ್ಟ ಎಂಟಿ ಸೇಫ್‌ ಸೀ ವಿಷ್ಣು ಹಡಗಿನ 15 ಭಾರತೀಯ ಸಿಬ್ಬಂದಿ ಇರಾಕ್‌ ನಿಂದ ನಿರ್ಗಮಿಸಿದ್ದಾರೆ ಮತ್ತು ಸೌದಿ ಅರೇಬಿಯಾ ಮೂಲಕ ಭಾರತಕ್ಕೆ ಮರಳುವ ನಿರೀಕ್ಷೆಯಿದೆ.
  • ಎಂವಿ ಎಂಕೆಡಿ ವ್ಯೋಮ್ ನಿಂದ 16 ಮತ್ತು ಎಂಟಿ ಸ್ಕೈಲೈಟ್ ನಿಂದ 8 ಮಂದಿ ಸೇರಿದಂತೆ ಒಟ್ಟು 24 ಮಂದಿ ರಕ್ಷಿಸಲ್ಪಟ್ಟ ಭಾರತೀಯ ನಾವಿಕರು ಓಮನ್‌ ನಿಂದ ಈಗಾಗಲೇ ಭಾರತಕ್ಕೆ ಮರಳಿದ್ದಾರೆ.

 

*****

 


(ಪ್ರಕಟಣೆ ಐ.ಡಿ.: 2243102) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Gujarati , Odia , Malayalam