ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಸಿನಿಮಾಟೋಗ್ರಾಫ್ (ತಿದ್ದುಪಡಿ) ಕಾಯ್ದೆ 2023 ಪೈರಸಿ ನಿಗ್ರಹ ಚೌಕಟ್ಟನ್ನು ಬಲವರ್ಧನೆಗೊಳಿಸಿದೆ; ಅಪರಾಧಿಗಳಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಉತ್ಪಾದನಾ ವೆಚ್ಚದ ಶೇ.5 ವರೆಗೆ ದಂಡ ವಿಧಿಸಲು ಅವಕಾಶ
ಕೇಂದ್ರವು ಪೈರಸಿ ವಿರುದ್ಧ ಕ್ರಮ ಕೈಗೊಂಡಿದ್ದು, 3,142 ಟೆಲಿಗ್ರಾಮ್ ಚಾನೆಲ್‌ಗಳ ನೋಟಿಫೈ ಮಾಡಲಾಗಿದೆ ಮತ್ತು 800 ವೆಬ್‌ಸೈಟ್‌ಗಳ ನಿರ್ಬಂಧ
ಪ್ರಕಟಣಾ ದಿನಾಂಕ:
18 MAR 2026 3:19PM by PIB Bengaluru
ಸಿನಿಮಾಟೋಗ್ರಾಫ್ (ತಿದ್ದುಪಡಿ) ಕಾಯ್ದೆ 2023 ಚಲನಚಿತ್ರ ಪೈರಸಿಯನ್ನು ತಡೆಯಲು ಕಾನೂನು ಚೌಕಟ್ಟನ್ನು ಬಲವರ್ಧನೆಗೊಳಿಸಿದೆ. ಸಿನಿಮಾಟೋಗ್ರಾಫ್ ಕಾಯ್ದೆಯ ಸೆಕ್ಷನ್ 6ಎಎ ಮತ್ತು 6ಎಬಿ ಚಲನಚಿತ್ರಗಳ ಅನಧಿಕೃತ ರೆಕಾರ್ಡಿಂಗ್ ಮತ್ತು ಪ್ರಸಾರವನ್ನು ನಿಷೇಧಿಸುತ್ತದೆ. ಸೆಕ್ಷನ್ 7 (1ಎ) ಯಾವುದೇ ವ್ಯಕ್ತಿಯು ಸೆಕ್ಷನ್ 6ಎಎ ಅಥವಾ ಸೆಕ್ಷನ್ 6ಎಬಿ ಯ ನಿಬಂಧನೆಗಳನ್ನು ಉಲ್ಲಂಘಿಸಿದರೆ, ಅವರಿಗೆ ಕನಿಷ್ಠ 3 ತಿಂಗಳ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುವುದು, ಇದನ್ನು 3 ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು ಲೆಕ್ಕಪರಿಶೋಧನೆ ಮಾಡಿರುವ ಒಟ್ಟು ಉತ್ಪಾದನಾ ವೆಚ್ಚದ ಶೇ. 5 ರವರೆಗೆ ದಂಡ ವಿಧಿಸಲು ಅವಕಾಶವಿದೆ. ಅಲ್ಲದೆ ಸೆಕ್ಷನ್ 7(1ಬಿ)(ii) ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 79(3) ರ ಅಡಿಯಲ್ಲಿ ಪೈರಸಿ (ನಕಲು)ಮಾಡಿದ ಕಂಟೆಂಟ್ (ವಿಷಯ) ಅನ್ನು ಹೋಸ್ಟ್ ಮಾಡುವ ಮಧ್ಯವರ್ತಿಗಳನ್ನುನೋಟಿಫೈ ಮಾಡಲು ಅನುವು ಮಾಡಿಕೊಡುತ್ತದೆ.
2023ರ ನ.3 ರಂದು ಹೊರಡಿಸಿರುವ ಸಾರ್ವಜನಿಕ ಪ್ರಕಟಣೆಯ ಮೂಲಕ ನಿಗದಿತ ನಮೂನೆಯಲ್ಲಿ ದೂರುಗಳನ್ನು ಸ್ವೀಕರಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಗೊತ್ತುಪಡಿಸಿದ ನೋಡಲ್ ಅಧಿಕಾರಿಗಳ ಮೂಲಕ ಸಾಂಸ್ಥಿಕ ಕಾರ್ಯವಿಧಾನವನ್ನು ಸ್ಥಾಪಿಸಿದೆ. ಅಂತಹ ದೂರುಗಳನ್ನು ಸಿನಿಮಾಟೋಗ್ರಾಫ್ ಚಲನಚಿತ್ರಗಳ ಮೂಲ ಹಕ್ಕುಸ್ವಾಮ್ಯ ಹೊಂದಿರುವವರು, ಅವರಿಂದ ಕಾಪಿರೈಟ್ ಪಡೆದ ವ್ಯಕ್ತಿಗಳು ಅಥವಾ ಇಂಟರ್ನೆಟ್‌ನಲ್ಲಿ ಚಲನಚಿತ್ರಗಳ ನಕಲು ಅಥವಾ ಉಲ್ಲಂಘನೆಯ ಪ್ರತಿಗಳ ಪ್ರದರ್ಶನದ ಬಗ್ಗೆ ಯಾವುದೇ ಇತರ ವ್ಯಕ್ತಿ ಸಲ್ಲಿಸಬಹುದು. ದೂರು ಸ್ವೀಕರಿಸಿದ ನಂತರ ಗುರುತಿಸಲಾದ ಲಿಂಕ್‌ಗಳ ಲಭ್ಯತೆಯನ್ನು ನಿಷ್ಕ್ರಿಯಗೊಳಿಸಲು ಮಧ್ಯವರ್ತಿಗಳಿಗೆ ಆದೇಶಗಳನ್ನು ನೀಡಲಾಗುವುದು.
ಐಟಿ ಕಾಯ್ದೆ 2000 ರ ಸೆಕ್ಷನ್ 79(3)(ಬಿ) ಕಾನೂನುಬಾಹಿರ ಕೃತ್ಯ ಅಥವಾ ಕಂಟೆಂಟ್ ಗಳ ಬಗ್ಗೆ ಸೂಕ್ತ ಸರ್ಕಾರಗಳು ಮಧ್ಯವರ್ತಿಗಳಿಗೆ ಸೂಚನೆ ನೀಡುವ ಅಧಿಕಾರ ನೀಡುತ್ತದೆ, ಅಂತಹ ವಿಷಯಗಳ ಲಭ್ಯತೆಯನ್ನು ತೆಗೆದುಹಾಕಲು/ ನಿಷ್ಕ್ರಿಯಗೊಳಿಸಲು, ಮಧ್ಯವರ್ತಿಗಳು ನ್ಯಾಯಾಲಯದ ಆದೇಶದ ಮೂಲಕ ಅಥವಾ ಸೂಕ್ತ ಸರ್ಕಾರ ಅಥವಾ ಅದರ ಅಧಿಕೃತ ಸಂಸ್ಥೆಯ ಸೂಚನೆಯ ಮೂಲಕ ತಮ್ಮ ಅರಿವಿಗೆ ಬಂದಿರುವಂತೆ ಯಾವುದೇ ಕಾನೂನನ್ನು ಉಲ್ಲಂಘಿಸುವ ಯಾವುದೇ ಕಂಟೆಂಟ್ (ವಿಷಯ) ಅನ್ನು ತೆಗೆದುಹಾಕಬೇಕಾಗುತ್ತದೆ.
ಭಾರತ ಸರ್ಕಾರವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ (ಇಂಟರ್ ಮೀಡಿಯರಿ) ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು 2021 (ಐಟಿ ನಿಯಮಗಳು 2021) ಅನ್ನು ಐಟಿ ಕಾಯ್ದೆ 2000 ರಡಿಯಲ್ಲಿ ಅಧಿಸೂಚನೆ ಹೊರಡಿಸಿದೆ. ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಸೇರಿದಂತೆ ಮಧ್ಯವರ್ತಿಗಳಿಗೆ ಸಂಬಂಧಿಸಿದ ಐಟಿ ನಿಯಮಗಳು, 2021 ರ ಭಾಗ-II, ಇತರ ವಿಷಯಗಳ ಜೊತೆಗೆ ತಮ್ಮ ವೇದಿಕೆಗಳಲ್ಲಿ ಹೋಸ್ಟ್ ಮಾಡಿದ, ಪ್ರದರ್ಶಿಸಿದ, ಅಪ್‌ಲೋಡ್ ಮಾಡಿದ, ಪ್ರಕಟಿಸಿದ, ರವಾನಿಸಿದ, ಸಂಗ್ರಹಿಸಿದ ಅಥವಾ ಹಂಚಿಕೊಂಡ ಮಾಹಿತಿಗೆ ಸಂಬಂಧಿಸಿದಂತೆ ಮಧ್ಯವರ್ತಿಗಳ ಮೇಲೆ ನಿರ್ದಿಷ್ಟ ಬಾಧ್ಯತೆಗಳನ್ನು ವಿಧಿಸುತ್ತದೆ.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ನಿಯಮ 3(1)(ಬಿ) ಮಧ್ಯವರ್ತಿಗಳು ಸ್ವತಃ ಸಮಂಜಸವಾದ ಪ್ರಯತ್ನಗಳನ್ನು ಮಾಡಬೇಕು ಎಂದು ಹೇಳುತ್ತದೆ. ಯಾವುದೇ ಪೇಟೆಂಟ್, ಟ್ರೇಡ್‌ಮಾರ್ಕ್, ಹಕ್ಕುಸ್ವಾಮ್ಯ ಅಥವಾ ಇತರ ಸ್ವಾಮ್ಯದ ಹಕ್ಕುಗಳನ್ನು ಉಲ್ಲಂಘಿಸುವ ಯಾವುದೇ ಮಾಹಿತಿಯನ್ನು ಹೋಸ್ಟ್ ಮಾಡಲು, ಪ್ರದರ್ಶಿಸಲು, ಅಪ್‌ಲೋಡ್ ಮಾಡಲು, ಪರಿಷ್ಕರಿಸಲು, ಪ್ರಕಟಿಸಲು, ರವಾನಿಸಲು, ಸಂಗ್ರಹಿಸಲು, ನವೀಕರಿಸಲು ಅಥವಾ ಹಂಚಿಕೊಳ್ಳಲು ಅವರು ತಮ್ಮ ಕಂಪ್ಯೂಟರ್ ಸಂಪನ್ಮೂಲವನ್ನು ಬಳಸಲು ಅನುಮತಿಸಬಾರದು.
ಪೈರಸಿ ನಿಗ್ರಹದ ವಿರುದ್ಧ ಕ್ರಮ
ಮೇಲೆ ತಿಳಿಸಲಾದ ಕಾನೂನಿನ ನಿಬಂಧನೆಗಳಿಗೆ ಅನುಸಾರವಾಗಿ 1957 ರ ಹಕ್ಕುಸ್ವಾಮ್ಯ ಕಾಯ್ದೆಯನ್ನು ಉಲ್ಲಂಘಿಸಿ, ಅನುಮತಿಯಿಲ್ಲದೆ ಕೆಲವು ವಿಷಯ ಮಾಲೀಕರು, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ನಿರ್ಮಾಪಕರ ಒಡೆತನದ ಅಥವಾ ಪರವಾನಗಿ ಪಡೆದ ಕಂಟೆಂಟ್ ಪ್ರಕಟಿಸುವ 3,142 ಚಾನೆಲ್‌ಗಳ ಲಭ್ಯತೆಯನ್ನು ತೆಗೆದುಹಾಕಲು ಮತ್ತು ನಿಷ್ಕ್ರಿಯಗೊಳಿಸಲು ಮಧ್ಯವರ್ತಿ ಟೆಲಿಗ್ರಾಮ್ ಅಪ್ಲಿಕೇಶನ್‌ಗೆ 2026ರ ಮಾ.11 ರಂದು ಸೂಚಿಸಲಾಗಿದೆ. ಅಲ್ಲದೆ ಪೈರೆಟೆಡ್ ಕಂಟೆಂಟ್ ಅನ್ನು ಹೋಸ್ಟ್ ಮಾಡುವ ಸುಮಾರು 800 ವೆಬ್‌ಸೈಟ್‌ಗಳ ಲಭ್ಯತೆಯನ್ನು ಇಂಟರ್ನೆಟ್ ಸೇವಾ ಪೂರೈಕೆದಾರರ (ಐಎಸ್ ಪಿ ಗಳು) ಮೂಲಕ ನಿಷ್ಕ್ರಿಯಗೊಳಿಸಲಾಗಿದೆ.
ಈ ಮಾಹಿತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಲೋಕಸಭೆಯಲ್ಲಿಂದು ಶ್ರೀ ಪ್ರದ್ಯುತ್ ಬೋರ್ಡೊಲೊಯ್ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
*****
(ಪ್ರಕಟಣೆ ಐ.ಡಿ.: 2241796)
ವಿಸಿಟರ್ ಕೌಂಟರ್ : 9