ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಪ್ರಸಾರ ಭಾರತಿಯ ವೈವಿಧ್ಯಮಯ ವಿಷಯ(ಕಂಟೆಂಟ್) ಕೊಡುಗೆ ಹೆಚ್ಚಿಸಿದ ವೇವ್ಸ್‌ ಒಟಿಟಿ; ಪ್ಲಾಟ್‌ಫಾರ್ಮ್ 84 ಲಕ್ಷಕ್ಕೂ ಅಧಿಕ ನೋಂದಾಯಿತ ಬಳಕೆದಾರರ ದಾಖಲು

ಪ್ರಕಟಣಾ ದಿನಾಂಕ: 18 MAR 2026 3:16PM by PIB Bengaluru

ಪ್ರಸಾರ ಭಾರತಿಯು 2024ರ ನವೆಂಬರ್ ನಲ್ಲಿ ರೇಡಿಯೋ ಮತ್ತು ಟಿವಿ ಚಾನೆಲ್‌ಗಳು, ಟಿವಿ ಕಾರ್ಯಕ್ರಮಗಳು, ವೆಬ್ ಸರಣಿಗಳು, ಚಲನಚಿತ್ರಗಳು, ನೇರ ಕಾರ್ಯಕ್ರಮಗಳು, ರೇಡಿಯೋ ಸೇವೆಗಳು, ಸಾಂಸ್ಕೃತಿಕ ವಿಷಯ, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಪ್ರಸಾರ ಭಾರತಿಯ ಸಂಗ್ರಹದ ವಿಷಯಗಳು (ಕಂಟೆಂಟ್) ಸೇರಿದಂತೆ ವೈವಿಧ್ಯಮಯ ವಿಷಯಗಳ ಪ್ರಸಾರಕ್ಕಾಗಿ ಡಿಜಿಟಲ್ ಸ್ಟ್ರೀಮಿಂಗ್ ವೇದಿಕೆಯಾಗಿ ವೇವ್ಸ್ ಒಟಿಟಿ (WAVES OTT) ವೇದಿಕೆಯನ್ನು ಆರಂಭಿಸಿದೆ. ಈ ವೇದಿಕೆಯು ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಬಳಕೆದಾರರನ್ನು ಒಳಗೊಂಡಂತೆ 84 ಲಕ್ಷಕ್ಕೂ ಅಧಿಕ ನೋಂದಾಯಿತ ಬಳಕೆದಾರರನ್ನು ಹೊಂದಿದೆ.

ಪ್ರಸಾರ ಭಾರತಿ - ಪ್ರಸಾರ ಮತ್ತು ಪ್ರಸರಣಕ್ಕಾಗಿ ಹಂಚಿಕೆಯ ಆಡಿಯೋ-ವಿಷುಯಲ್‌ಗಳು (ಪಿಬಿ-ಶಬ್ದ್‌) ಅನ್ನು 2024ರ ಮಾರ್ಚ್ ನಲ್ಲಿ ಆರಂಭಿಸಿತು. ಇದು ದೇಶಾದ್ಯಂತ 15 ಭಾರತೀಯ ಭಾಷೆಗಳಲ್ಲಿ ಅಂದರೆ ಅಸ್ಸಾಮಿ, ಬಂಗಾಳಿ, ಇಂಗ್ಲೀಷ್, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಡೋಗ್ರಿ ಮತ್ತು ಉರ್ದು ಭಾಷೆಗಳಲ್ಲಿ ಸುದ್ದಿಗಳ ಪ್ರಸಾರವನ್ನು ಸುಗಮಗೊಳಿಸುತ್ತದೆ. ಆರಂಭದಲ್ಲಿ ಇದನ್ನು ಒಂದು ವರ್ಷದವರೆಗೆ ಬಳಕೆದಾರರಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗಿತ್ತು, ನಂತರ ಅದನ್ನು 2027ರ ಮಾರ್ಚ್ ವರೆಗೆ ವಿಸ್ತರಣೆ ಮಾಡಲಾಗಿದೆ.

ದೂರದರ್ಶನ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳು ಮತ್ತು ಇತರ ಕಾರ್ಯಕ್ರಮಗಳನ್ನು ಒಳಗೊಂಡಂತೆ ಪ್ರಸಾರ ಭಾರತಿಯ ದೊಡ್ಡ ಆರ್ಕೈವಲ್ (ಸಂಗ್ರಹಣೆಯ) ವಿಷಯದ ಭಂಡಾರವನ್ನು ವೇವ್ಸ್ ಒಟಿಟಿ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಅದರ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಪ್ರೇಕ್ಷಕರ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಆರ್ಕೈವಲ್ ಕಾರ್ಯಕ್ರಮಗಳ ಪ್ರಕಟಣೆಯನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ.

ವೇವ್ಸ್ ಒಟಿಟಿ ಮತ್ತು ಪಿಬಿ-ಶಬ್ಧ್‌ ವೇದಿಕೆಗಳು ಹಿಂದಿ ಮತ್ತು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿನ ಕಾರ್ಯಕ್ರಮಗಳು ಮತ್ತು ಸುದ್ದಿಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಪ್ರಸಾರ ಭಾರತಿ ವಿಷಯಗಳನ್ನು ಒದಗಿಸುತ್ತವೆ, ಇವು ಛತ್ತೀಸ್‌ಗಢದ ಸುರ್ಗುಜಾ ಪ್ರದೇಶ ಸೇರಿದಂತೆ ದೇಶಾದ್ಯಂತ ಪಡೆಯಬಹುದಾಗಿದೆ.

ಈ ಮಾಹಿತಿಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು  ಲೋಕಸಭೆಯಲ್ಲಿಂದು ಪ್ರಶ್ನೆಯೊಂದಕ್ಕೆ ನೀಡಿರುವ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2241763) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Marathi , Bengali , Bengali-TR , Assamese , Punjabi , Telugu , Malayalam