ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಪ್ರಕಟಣಾ ದಿನಾಂಕ: 11 MAR 2026 6:58PM by PIB Bengaluru

ಕೇಂದ್ರ ಸಚಿವ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಪಿಯೂಷ್ ಗೋಯಲ್ ಜಿ, ಡಾ. ಎಲ್. ಮುರುಗನ್ ಜಿ, ಶ್ರೀ ಎಡಪ್ಪಾಡಿ ಕೆ. ಪಳನಿಸ್ವಾಮಿ ಜಿ, ಶ್ರೀ ನೈನಾರ್ ನಾಗೇಂದ್ರನ್ ಜಿ, ಶ್ರೀ ತಂಗಂ ತೆನ್ನರಸು ಜಿ, ನನ್ನ ತಮಿಳುನಾಡಿನ ಸಹೋದರ ಸಹೋದರಿಯರೆ, ವಣಕ್ಕಂ!

ಸ್ನೇಹಿತರೆ,

ಈ ಅದ್ಭುತ ನಗರ ತಿರುಚಿಯಲ್ಲಿ ಇರುವುದು ನನಗೆ ತುಂಬಾ ಸಂತೋಷ ನೀಡುತ್ತಿದೆ. ಇಂದಿನ ಕಾರ್ಯಕ್ರಮವು ತಮಿಳುನಾಡಿನ ಭವಿಷ್ಯಕ್ಕೆ ಮಹತ್ವದ್ದಾಗಿದೆ. ಇದು 5 ಸಾವಿರದ 600 ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಸಂಬಂಧಿಸಿದೆ. ಈ ಯೋಜನೆಗಳು: ಸ್ವಚ್ಛ ಇಂಧನಕ್ಕಾಗಿ ಮೂಲಸೌಕರ್ಯ, ಪೆಟ್ರೋಲಿಯಂ ಸಂಬಂಧಿತ ಉತ್ಪಾದನೆ, ಹೆದ್ದಾರಿಗಳು, ರೈಲ್ವೆಗಳು ಮತ್ತು ಗ್ರಾಮೀಣ ರಸ್ತೆ ಯೋಜನೆಗಳಾಗಿವೆ. ಅವು ಇಂಧನ ಪ್ರವೇಶ, ಸಂಪರ್ಕವನ್ನು ಹೆಚ್ಚಿಸುತ್ತವೆ ಮತ್ತು ತಮಿಳುನಾಡಿನ ಯುವಕರಿಗೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತವೆ.

ಸ್ನೇಹಿತರೆ,

ಭಾರತ್ ಪೆಟ್ರೋಲಿಯಂನ ನಗರ ಅನಿಲ ವಿತರಣಾ ಜಾಲಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದರಿಂದ ನನಗೆ ಸಂತೋಷವಾಗಿದೆ. ಸುಮಾರು 3 ಸಾವಿರದ 700 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುತ್ತಿದೆ. ಈ ಜಾಲವು ತಮಿಳುನಾಡಿನ ನೀಲಗಿರಿ ಮತ್ತು ಈರೋಡ್ ಜಿಲ್ಲೆಗಳನ್ನು ಒಳಗೊಂಡಿದೆ. ಇದು ಸುಮಾರು 9 ಲಕ್ಷ ಕುಟುಂಬಗಳು ಮತ್ತು ನೂರಾರು ವಾಣಿಜ್ಯ ಸಂಸ್ಥೆಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಒದಗಿಸುತ್ತದೆ. ಪೈಪ್ ಮೂಲಕ ಅನಿಲವು ನೇರವಾಗಿ ಮನೆಗಳಿಗೆ ಹರಿಯುತ್ತದೆ, ಜೀವನ ಸುಲಭತೆಯನ್ನು ಹೆಚ್ಚಿಸುತ್ತದೆ. ಸಾವಿರಾರು ಉದ್ಯೋಗಗಳನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸೃಷ್ಟಿಸಲಾಗುವುದು. ನೈಸರ್ಗಿಕ ಅನಿಲವು ಪರಿಸರ ಸ್ನೇಹಿ ಇಂಧನವಾಗಿದ್ದು, ಇದು ವಾಯು ಮಾಲಿನ್ಯ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೇವಲ 8 ವರ್ಷಗಳಲ್ಲಿ ಈ ಯೋಜನೆಯ ಸಕಾರಾತ್ಮಕ ಪರಿಸರ ಪರಿಣಾಮವು 4 ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ ಎಂಬುದು ನನಗೆ ತಿಳಿದುಬಂದಿದೆ!

ಸ್ನೇಹಿತರೆ,

ಇಂದು ಚೆನ್ನೈನಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಲ್ಯೂಬ್ರಿಕಂಟ್ ಬ್ಲೆಂಡಿಂಗ್ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತಿದೆ. ಇದು ವಿಶ್ವದ ಅತಿದೊಡ್ಡ ಸೌಲಭ್ಯಗಳಲ್ಲಿ ಒಂದಾಗಿದೆ ಎಂದು ತಿಳಿದರೆ ನೀವು ಹೆಮ್ಮೆಪಡುತ್ತೀರಿ. ಈ ಘಟಕವು ತಮಿಳುನಾಡು ಮತ್ತು ಹೊರಗಿನ ಅನೇಕ ಪ್ರಮುಖ ಕೈಗಾರಿಕೆಗಳ ಬೇಡಿಕೆ ಪೂರೈಸುತ್ತದೆ. ಸ್ಥಳೀಯ ಲೂಬ್ರಿಕೆಂಟ್‌ಗಳ ಉತ್ಪಾದನೆಯಲ್ಲಿನ ಹೆಚ್ಚಳವು ಆಮದುಗಳನ್ನು ಕಡಿಮೆ ಮಾಡುತ್ತದೆ ಮತ್ತು ರಾಷ್ಟ್ರದ ಹಣ ಹೊರಹೋಗುವುದನ್ನು ಉಳಿಸುತ್ತದೆ.

ಸ್ನೇಹಿತರೆ,

ಇಂದು ನಾವು 370 ಕಿಲೋಮೀಟರ್‌ಗಳಷ್ಟು ವಿಸ್ತಾರವಾದ ಗ್ರಾಮೀಣ ರಸ್ತೆಗಳನ್ನು ಉದ್ಘಾಟಿಸುತ್ತಿದ್ದೇವೆ. ಈ ಕೆಲಸವನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮಾಡಲಾಗಿದೆ. ಈ ಪ್ರತಿಯೊಂದು ರಸ್ತೆಯು ಕೇವಲ ಭೌತಿಕ ಮೂಲಸೌಕರ್ಯದ ಭಾಗವಲ್ಲ. ರೋಗಿಗಳು ಉತ್ತಮ ಆರೋಗ್ಯ ಸೇವೆ ಪಡೆಯಬಹುದು. ವಿದ್ಯಾರ್ಥಿಗಳು ಶಾಲೆಗಳು ಮತ್ತು ಕಾಲೇಜುಗಳಿಗೆ ಆರಾಮವಾಗಿ ಪ್ರಯಾಣಿಸಬಹುದು. ರೈತರು ಉತ್ಪನ್ನಗಳನ್ನು ಮಾರಾಟ ಮಾಡಲು ಅಥವಾ ವಸ್ತುಗಳನ್ನು ಖರೀದಿಸಲು ವಿವಿಧ ಸ್ಥಳಗಳಿಗೆ ಪ್ರಯಾಣಿಸಬಹುದು. ಒಟ್ಟಾರೆಯಾಗಿ, ಪ್ರತಿಯೊಂದು ರಸ್ತೆಯು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಜೀವನ ಸುಲಭತೆಯನ್ನು ಸಹ ಹೆಚ್ಚಿಸುತ್ತದೆ.

ಸ್ನೇಹಿತರೆ,

ಕಳೆದ ವರ್ಷ ಆದಿ ತಿರುಪತಿರೈ ಹಬ್ಬಕ್ಕಾಗಿ ಗಂಗೈಕೊಂಡ ಚೋಳಪುರಂನಲ್ಲಿ ಇದ್ದೆ, ಅದರಿಂದ ನನಗೆ ಸಂತೋಷವಾಗಿತ್ತು. ಚಕ್ರವರ್ತಿ ರಾಜೇಂದ್ರ ಚೋಳನ ಭವ್ಯ ದೇವಾಲಯ ನಿರ್ಮಾಣದ ಪ್ರಾರಂಭದ ಸಾವಿರ ವರ್ಷಗಳನ್ನು ನಾವು ಆಚರಿಸಿದ್ದೇವೆ. ಇದು ಯುನೆಸ್ಕೊ ಮಾನ್ಯತೆ ಪಡೆದ ತಾಣವಾಗಿದ್ದು, ವಿಶ್ವಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಂದು ನಾವು ಅಲ್ಲಿ ಒಂದು ಪ್ರಮುಖ ಹೆದ್ದಾರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇವೆ. ಅಸ್ತಿತ್ವದಲ್ಲಿರುವ ಹೆದ್ದಾರಿ ದೇವಾಲಯಕ್ಕೆ ಬಹಳ ಹತ್ತಿರದಲ್ಲೇ ಹಾದುಹೋಗುವುದರಿಂದ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ಸುರಕ್ಷತಾ ಭಾವನೆ ಉಂಟಾಗುತ್ತದೆ. ಹೊಸ ಬೈಪಾಸ್ ನಿರ್ಮಾಣದೊಂದಿಗೆ, ಇತರ ವಾಹನಗಳು ಈಗ ದೇವಾಲಯದ ಹೊರ ರಸ್ತೆಯಲ್ಲಿ ಸಂಚರಿಸುತ್ತವೆ. ಇದರರ್ಥ ಎಲ್ಲರಿಗೂ ಉತ್ತಮ ಸುರಕ್ಷತೆ ಸಿಕ್ಕಂತಾಗುತ್ತದೆ.

ಸ್ನೇಹಿತರೆ,

ಕಳೆದ ವಾರವಷ್ಟೇ ಮಧುರೈನಲ್ಲಿ ಅಮೃತ ಭಾರತ ಕಾರ್ಯಕ್ರಮದಡಿ 8 ಆಧುನೀಕರಿಸಿದ ಮತ್ತು ಪುನರಾಭಿವೃದ್ಧಿಪಡಿಸಿದ ನಿಲ್ದಾಣಗಳನ್ನು ನಾವು ಉದ್ಘಾಟಿಸಿದ್ದೇವೆ. ಇಂದು ಹಲವಾರು ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಲಾಗುತ್ತಿದೆ. ಅವು ನಾಗರಕೋಯಿಲ್, ಕೊಯಮತ್ತೂರು, ರಾಮೇಶ್ವರಂ, ತಿರುನಲ್ವೇಲಿ, ಮೈಲಾಡುತುರೈ, ಕಾರೈಕ್ಕುಡಿ ಮುಂತಾದ ಸ್ಥಳಗಳನ್ನು ಇತೆರ ಪ್ರದೇಶಗಳೊಂದಿಗೆ ಸಂಪರ್ಕಿಸುತ್ತವೆ. ಈ ಹೊಸ ರೈಲು ಸೇವೆಗಳು ಪ್ರವಾಸೋದ್ಯಮವನ್ನು ಹೆಚ್ಚಿಸುತ್ತವೆ, ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುತ್ತವೆ ಮತ್ತು ಯುವಕರಿಗೆ ಅನೇಕ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಅಭಿವೃದ್ಧಿ ಹೊಂದಿದ ತಮಿಳುನಾಡನ್ನು ರೂಪಿಸುವುದು ನಮ್ಮ ಗುರಿಯಾಗಿದೆ. ಕೇಂದ್ರ ಸರ್ಕಾರವು ತಮಿಳುನಾಡಿನ ಜನರ ಕಲ್ಯಾಣಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ. ರಾಜ್ಯದ ಪ್ರಗತಿಗಾಗಿ ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ.

ತುಂಬು ಧನ್ಯವಾದಗಳು

 

*****


(ಪ್ರಕಟಣೆ ಐ.ಡಿ.: 2238801) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Manipuri , Bengali , Assamese , Gujarati , Tamil , Telugu , Malayalam