ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇರಳಂನ ಎರ್ನಾಕುಲಂನಲ್ಲಿ ಸುಮಾರು 11,000 ಕೋಟಿ ರೂ.ಗಳ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು
ಈ ಯೋಜನೆಗಳು ಕೈಗಾರಿಕಾ ಬೆಳವಣಿಗೆಯನ್ನು ಉತ್ತೇಜಿಸುತ್ತವೆ, ಪ್ರವಾಸೋದ್ಯಮವನ್ನು ಉತ್ತೇಜಿಸುತ್ತವೆ ಮತ್ತು ಕೇರಳದ ಜನರ ಜೀವನವನ್ನು ಸುಲಭಗೊಳಿಸುತ್ತವೆ: ಪ್ರಧಾನಮಂತ್ರಿ
ʻಮೇಕ್ ಇನ್ ಇಂಡಿಯಾʼ ಮತ್ತು ಸ್ವಾವಲಂಬಿ ಭಾರತಕ್ಕೆ ಪೆಟ್ರೋಲಿಯಂ ಕ್ಷೇತ್ರದ ವಿಸ್ತರಣೆ ಅತ್ಯಗತ್ಯ, ಕೊಚ್ಚಿ ಸಂಸ್ಕರಣಾಗಾರದಲ್ಲಿ ಪಾಲಿ-ಪ್ರೊಪಿಲೀನ್ ಘಟಕಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸುವುದರ ಹಿಂದಿನ ಮೂಲತತ್ವ ಇದೇ ಆಗಿದೆ: ಪ್ರಧಾನಮಂತ್ರಿ
ಇಂದು, ಆಧುನಿಕ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಿದ್ದಕ್ಕಾಗಿ ಜಗತ್ತು ಭಾರತವನ್ನು ಶ್ಲಾಘಿಸುತ್ತಿದೆ; ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕಾಗಿ ದಾಖಲೆಯ ಮೊತ್ತದ ಹಣವನ್ನು ಹಂಚಿಕೆ ಮಾಡಲಾಗಿದೆ: ಪ್ರಧಾನಮಂತ್ರಿ
ಮೂಲಸೌಕರ್ಯದಲ್ಲಿನ ಈ ಹೂಡಿಕೆಯಿಂದ ಕೇರಳವು ಅದ್ಭುತ ಲಾಭವನ್ನು ಪಡೆಯುತ್ತಿದೆ: ಪ್ರಧಾನಮಂತ್ರಿ
ಈ ಯೋಜನೆಗಳು ನಮ್ಮ 'ವಿಕಸಿತ ಕೇರಳಂ' ಸಂಕಲ್ಪವನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ: ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
11 MAR 2026 3:22PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅತ್ಯಂತ ಚಟುವಟಿಕೆಯಿಂದ ಕೂಡಿದ ಕರಾವಳಿ ನಗರವಾದ ಕೊಚ್ಚಿಗೆ ಭೇಟಿ ನೀಡಿ, ಕೇರಳಂನ ಅಭಿವೃದ್ಧಿಗೆ ವೇಗ ನೀಡುವ ಅನೇಕ ಅಧಿಕ ಪರಿಣಾಮದ ಯೋಜನೆಗಳನ್ನು ಪ್ರಾರಂಭಿಸಿದರು. ಈ ವೇಳೆ, ಹೂಡಿಕೆಯ ಪ್ರಮಾಣವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸುಮಾರು 11,000 ಕೋಟಿ ರೂ.ಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕೊಚ್ಚಿಗೆ ಬರುವುದು ಸದಾ ತಮ್ಮ ಪಾಲಿಗೆ ಅದ್ಭುತ ಅನುಭವ ಎಂದು ಹೇಳಿದರು. "ಈ ಯೋಜನೆಗಳಿಗಾಗಿ ನಾನು ಕೇರಳಂ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ," ಎಂದು ಪ್ರಧಾನಮಂತ್ರಿ ಹೇಳಿದರು.
ಇಂದು ಕೊಚ್ಚಿ ಸಂಸ್ಕರಣಾಗಾರದಲ್ಲಿ ಪಾಲಿಪ್ರೊಪಿಲೀನ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅವರು ಪೆಟ್ರೋಲಿಯಂ ವಲಯವನ್ನು ಸದೃಢಗೊಳಿಸುವುದು ಇದರ ಹಿಂದಿನ ಉದ್ದೇಶ ಎಂದು ಒತ್ತಿ ಹೇಳಿದರು. ಪ್ಯಾಕೇಜಿಂಗ್, ಜವಳಿ ಮತ್ತು ವೈದ್ಯಕೀಯ ಸಾಧನ ಕೈಗಾರಿಕೆಗಳನ್ನು ಬೆಂಬಲಿಸಲು ಈ ಘಟಕವು ವಾರ್ಷಿಕವಾಗಿ ನಾಲ್ಕು ಲಕ್ಷ ಟನ್‌ಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಈ ಸೌಲಭ್ಯದ ಕಾರ್ಯತಂತ್ರದ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿ, "ಸ್ವಾವಲಂಬಿ ಭಾರತವನ್ನು ನಿರ್ಮಿಸಲು, 'ಮೇಕ್ ಇನ್ ಇಂಡಿಯಾ'ಕ್ಕಾಗಿ, ಪೆಟ್ರೋಲಿಯಂ ಕ್ಷೇತ್ರದ ವಿಸ್ತರಣೆ ಅತ್ಯಗತ್ಯ" ಎಂದು ಪ್ರತಿಪಾದಿಸಿದರು.
ಜಾಗತಿಕ ಉತ್ಪಾದನೆ ಮತ್ತು ತಂತ್ರಜ್ಞಾನ ಕೇಂದ್ರವಾಗಿ ಭಾರತದ ಸ್ಥಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಕೃತಕ ಬುದ್ಧಿಮತ್ತೆ ಮತ್ತು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ರಾಷ್ಟ್ರದ ಪ್ರಗತಿಯನ್ನು ಹೆಚ್ಚುತ್ತಿರುವ ಸುಸ್ಥಿರ ಇಂಧನದ ಬೇಡಿಕೆಯೊಂದಿಗೆ ಪ್ರಧಾನಮಂತ್ರಿಯವರು ಜೋಡಿಸಿದರು. ಸೌರ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಕೇರಳಂನ ಪ್ರಗತಿ ಸಾಧನೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಇಂದು ಪಶ್ಚಿಮ ಕಲ್ಲಡದಲ್ಲಿ 50 ಮೆಗಾವ್ಯಾಟ್ ತೇಲುವ ಸೌರ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಜಲಮೂಲಗಳಿದ್ದು, ತೇಲುವ ಸೌರ ವಿದ್ಯುತ್ ಕ್ಷೇತ್ರದಲ್ಲಿ ರಾಜ್ಯವು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು. ಹಸಿರು ಭವಿಷ್ಯದತ್ತ ಸಾಗುತ್ತಿರುವ ಬದಲಾವಣೆಯನ್ನು ಒತ್ತಿ ಹೇಳಿದ ಶ್ರೀ ಮೋದಿ, "ಸೌರ ವಿದ್ಯುತ್ ಉತ್ಪಾದನೆಯಲ್ಲಿ ಕೇರಳಂ ಮತ್ತಷ್ಟು ಮುಂದುವರಿಯುವಂತೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ," ಎಂದು ಹೇಳಿದರು.
ʻಅಮೃತ್ ಭಾರತ್ʼ ನಿಲ್ದಾಣ ಯೋಜನೆ ಮತ್ತು ರೈಲ್ವೆ ವಿದ್ಯುದ್ದೀಕರಣದ ಮೂಲಕ ಪ್ರಾದೇಶಿಕ ಸಂಪರ್ಕದಲ್ಲಿ ಆಗಿರುವ ಮಹತ್ವದ ಪ್ರಗತಿಯನ್ನು ಪ್ರಧಾನಮಂತ್ರಿ ವಿವರಿಸಿದರು. ಶೋರನೂರ್ ಜಂಕ್ಷನ್, ಕುಟ್ಟಿಪುರಂ ಮತ್ತು ಚಂಗನಾಶೇರಿಯಲ್ಲಿ ಆಧುನೀಕರಣ ಪ್ರಯತ್ನಗಳು ಹಾಗೂ ಇದರ ಜೊತೆಗೆ ಹೊಸ ಪಾಲಕ್ಕಾಡ್-ಪೊಲ್ಲಾಚಿ ರೈಲು ಸೇವೆಯು ಕೇರಳಂ ಮತ್ತು ತಮಿಳುನಾಡು ನಿವಾಸಿಗಳಿಗೆ ಪ್ರಯಾಣದ ಅನುಭವವನ್ನು ಪರಿವರ್ತಿಸಲು ಸಜ್ಜಾಗಿದೆ ಎಂದರು. ಸ್ಥಳೀಯ ಬೆಳವಣಿಗೆಯ ಮೇಲೆ ರಾಷ್ಟ್ರೀಯ ಬಜೆಟ್‌ನ ಪ್ರಭಾವವನ್ನು ಒತ್ತಿ ಹೇಳಿದ ಶ್ರೀ ಮೋದಿ, "ಇಂದು, ಆಧುನಿಕ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುತ್ತಿರುವುದಕ್ಕಾಗಿ ಜಗತ್ತು ಭಾರತವನ್ನು ಶ್ಲಾಘಿಸುತ್ತಿದೆ" ಎಂದು ಹೇಳಿದರು.
ರಸ್ತೆ ಮೂಲಸೌಕರ್ಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಕೋಝಿಕ್ಕೋಡ್ ಬೈಪಾಸ್ ಮತ್ತು ಅಝಿಕ್ಕಲ್ ಬಂದರಿಗೆ ಸುಧಾರಿತ ಸಂಪರ್ಕ ಸೇರಿದಂತೆ ಹೊಸ ಆರು ಪಥದ ಯೋಜನೆಗಳು ಪ್ರಯಾಣದ ಸಮಯ ಮತ್ತು ದಟ್ಟಣೆಯನ್ನು ಹೇಗೆ ಗಣನೀಯವಾಗಿ ಕಡಿಮೆ ಮಾಡುತ್ತವೆ ಎಂಬುದನ್ನು ಉಲ್ಲೇಖಿಸಿದರು. ಈ ಎಲ್ಲಾ ಯೋಜನೆಗಳು ಕೇರಳಂ ರೈತರಿಗೆ ಪ್ರಯೋಜನಕಾರಿಯಾಗಲಿವೆ. ಅವು ಇಲ್ಲಿನ ಪ್ರವಾಸೋದ್ಯಮ ಮತ್ತು ಇತರ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತವೆ", ಎಂದು ಶ್ರೀ ಮೋದಿ ಪ್ರತಿಪಾದಿಸಿದರು.
ತಮ್ಮ ಭಾಷಣ ಮುಗಿಸುವ ಮುನ್ನ ಪ್ರಧಾನಮಂತ್ರಿಯವರು ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಪ್ರತಿಯೊಂದು ರೂಪಾಯಿಯೂ ಯುವಕರಿಗೆ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಸಲು ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪುನರುಚ್ಚರಿಸಿದರು. ಈ ಬಹು-ವಲಯ ಯೋಜನೆಗಳು ರಾಜ್ಯದ ಸಮೃದ್ಧ ಭವಿಷ್ಯಕ್ಕೆ ಅಗತ್ಯವಾದ ಅಡಿಪಾಯಗಳಾಗಿವೆ ಎಂಬ ದೃಢವಾದ ನಂಬಿಕೆಯನ್ನು ಶ್ರೀ ವ್ಯಕ್ತಪಡಿಸಿದರು. ಈ ಪ್ರದೇಶದ ಪ್ರಗತಿಗೆ ತಮ್ಮ ಬದ್ಧತೆಯನ್ನು ಒತ್ತಿ ಹೇಳಿದ ಶ್ರೀ ಮೋದಿ ಅವರು, "ಈ ಯೋಜನೆಗಳು 'ವಿಕಸಿತ ಕೇರಳಂ' ಎಂಬ ನಮ್ಮ ಸಂಕಲ್ಪವನ್ನು ಈಡೇರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ," ಎಂದು ಹೇಳುವ ಮೂಲಕ ತಮ್ಮ ಮಾತು ಮುಗಿಸಿದರು.
(ಪ್ರಕಟಣೆ ಐ.ಡಿ.: 2238300)
ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Bengali-TR
,
Assamese
,
Manipuri
,
Gujarati
,
Odia
,
Tamil
,
Telugu
,
Malayalam