ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಆಹಾರ್ 2026ರಲ್ಲಿ ಭಾರತದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ರಫ್ತು ಸಾಮರ್ಥ್ಯ ಪ್ರದರ್ಶಿಸುತ್ತಿರುವ ಅಪೇಡಾ
5 ಲಕ್ಷ ಕೋಟಿ ರೂ. ದಾಟಿದ ಭಾರತದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ರಫ್ತು; ಎಫ್ ಟಿಎ ಗಳು ಹೊಸ ಜಾಗತಿಕ ಅವಕಾಶಗಳನ್ನು ತೆರೆಯುತ್ತಿವೆ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್
ಅಪೇಡಾದಿಂದ ಪ್ರಮುಖ ಕೃಷಿ ಉತ್ಪನ್ನಗಳ ಕುರಿತು ಸಂಶೋಧನಾ ವರದಿಗಳ ಬಿಡುಗಡೆ: ಜಿಐ ಮತ್ತು ನಿರ್ದಿಷ್ಟ ಪ್ರದೇಶ ರಫ್ತಿಗೆ ಪ್ಯಾಕೇಜಿಂಗ್ ಪರಿಹಾರಗಳ ಆರಂಭ
ಆಹಾರ್ 2026ರಲ್ಲಿ ಅಪೇಡಾ ಮಳಿಗೆಯಲ್ಲಿ ಬಾಸ್ಮತಿ, ಸಾವಯವ ಮತ್ತು ಸಸ್ಯ ಆಧಾರಿತ ಆಹಾರಗಳಿಗೆ ಪ್ರಾಧ್ಯಾನ್ಯತೆ
ಪ್ರಕಟಣಾ ದಿನಾಂಕ:
11 MAR 2026 12:43PM by PIB Bengaluru
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿಯಲ್ಲಿ ಬರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಅಪೇಡಾ) ನವದೆಹಲಿಯ ಭಾರತ್ ಮಂಟಪದಲ್ಲಿ 2026ರ ಮಾರ್ಚ್ 10 ರಿಂದ 14 ರವರೆಗೆ ನಡೆಯುತ್ತಿರುವ ಆಹಾರ್ 2026ರ 40ನೇ ಆವೃತ್ತಿಯಲ್ಲಿ ಭಾಗವಹಿಸಿತು. ಅಪೇಡಾ ಭಾರತದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ರಫ್ತು ಸಾಮರ್ಥ್ಯಗಳನ್ನು ಪ್ರಮುಖವಾಗಿ ಪ್ರಸ್ತುತಪಡಿಸಿತಲ್ಲದೆ, ರಫ್ತುದಾರರು, ರಾಜ್ಯ ಪ್ರತಿನಿಧಿಗಳು ಮತ್ತು ಉದ್ಯಮದ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿತು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ 40ನೇ ಆವೃತ್ತಿಯ ಆಹಾರ್ - ಅಂತಾರಾಷ್ಟ್ರೀಯ ಆಹಾರ ಮತ್ತು ಆತಿಥ್ಯ ಮೇಳವನ್ನು ಉದ್ಘಾಟಿಸಿದರು. ಭಾರತ ವ್ಯಾಪಾರ ಉತ್ತೇಜನ ಸಂಸ್ಥೆ (ಐಟಿಪಿಒ) ಆಯೋಜಿಸಿರುವ ಆವೃತ್ತಿಯಲ್ಲಿ ಇಟಲಿ ದೇಶ ಪಾಲುದಾರನಾಗಿ ಕಾಣಿಸಿಕೊಂಡಿದೆ. ಉದ್ಘಾಟನಾ ಸಮಾರಂಭದಲ್ಲಿ ಇಟಲಿಯ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗಳು, ಐಟಿಪಿಒ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಉದ್ಯಮ ಮುಖಂಡರು, ಪ್ರದರ್ಶಕರು ಮತ್ತು ಭಾರತ ಮತ್ತು ವಿದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ತಮ್ಮ ಪ್ರಧಾನ ಭಾಷಣದಲ್ಲಿ, ಭಾರತದ ಆಹಾರ ಮತ್ತು ಕೃಷಿ ವಲಯವು ಜಾಗತಿಕ ಅವಕಾಶದ ಹೊಸ ಹಂತವನ್ನು ಪ್ರವೇಶಿಸುತ್ತಿದೆ ಎಂದು ಹೇಳಿದರು. ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ವಾರ್ಷಿಕವಾಗಿ 5 ಲಕ್ಷ ಕೋಟಿ ರೂಪಾಯಿ ದಾಟುತ್ತಿರುವುದರಿಂದ ಭಾರತ ಇಂದು ವಿಶ್ವದ ಪ್ರಮುಖ ರಫ್ತುದಾರರಲ್ಲಿ ಸ್ಥಾನ ಪಡೆದಿದೆ ಎಂದು ಅವರು ಉಲ್ಲೇಖಿಸಿದರು. ಕಳೆದೊಂದು ದಶಕದಲ್ಲಿ ಸಂಸ್ಕರಿಸಿದ ಆಹಾರಗಳು, ಹಣ್ಣುಗಳು, ದ್ವಿದಳ ಧಾನ್ಯಗಳು ಮತ್ತು ತರಕಾರಿಗಳ ರಫ್ತು ಗಮನಾರ್ಹವಾಗಿ ಏರಿಕೆಯಾಗಿದ್ದು, ಇದು ದೇಶಾದ್ಯಂತ ರೈತರು, ಮೀನುಗಾರರು ಮತ್ತು ಆಹಾರ ಸಂಸ್ಕಾರಕರ ಸಾಮರ್ಥ್ಯ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಭಾರತದ ವಿಸ್ತಾರಗೊಳ್ಳುತ್ತಿರುವ ಮುಕ್ತ ವ್ಯಾಪಾರ ಒಪ್ಪಂದಗಳ ಜಾಲವು ದೇಶದ ಆಹಾರ ಮತ್ತು ಕೃಷಿ ರಫ್ತಿಗೆ ಗಮನಾರ್ಹ ಅವಕಾಶಗಳನ್ನು ತೆರೆಯುತ್ತಿದೆ ಎಂದು ಸಚಿವರು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಭಾರತವು ಸಂಯುಕ್ತ ಅರಬ್ ಎಮಿರೇಟ್ಸ್, ಆಸ್ಟ್ರೇಲಿಯಾ, ಸ್ವಿಟ್ಜರ್ಲೆಂಡ್ ಮತ್ತು ಇತರ ಇ ಎಫ್ ಟಿ ಎ ರಾಷ್ಟ್ರಗಳು ಸೇರಿದಂತೆ ಹಲವು ರಾಷ್ಟ್ರಗಳು ಮತ್ತು ಪ್ರದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಇದೇ ವೇಳೆ ಜಪಾನ್, ಕೊರಿಯಾ, ಯುನೈಟೆಡ್ ಕಿಂಗ್‌ಡಮ್, ಓಮನ್ ಮತ್ತು ಮಾರಿಷಸ್‌ನಂತಹ ಪಾಲುದಾರರೊಂದಿಗೆ ಸಹಭಾಗಿತ್ವವನ್ನು ಬಲಪಡಿಸುತ್ತದೆ ಮತ್ತು ಕೆನಡಾ ಮತ್ತು ಯುರೋಪಿಯನ್ ಒಕ್ಕೂಟದೊಂದಿಗೆ ಚರ್ಚೆಗಳನ್ನು ಮುಂದುವರಿಸುತ್ತದೆ. ಈ ಒಪ್ಪಂದಗಳು ಜಾಗತಿಕ ವ್ಯಾಪಾರದ ಸುಮಾರು ಮೂರನೇ ಎರಡರಷ್ಟು ಭಾಗಗಳಲ್ಲಿ ಭಾರತೀಯ ಉತ್ಪನ್ನಗಳಿಗೆ ಆದ್ಯತೆಯ ಮಾರುಕಟ್ಟೆ ಲಭ್ಯತೆಯನ್ನು ಸಕ್ರಿಯಗೊಳಿಸುತ್ತಿವೆ, ರೈತರು, ಎಂಎಸ್ ಎಂಇಗಳು ಮತ್ತು ಆಹಾರ ಸಂಸ್ಕಾರಕರಿಗೆ ರಫ್ತುಗಳನ್ನು ವಿಸ್ತರಿಸಲು ಮತ್ತು ಹೆಚ್ಚಿನ ಮೌಲ್ಯದ ಮಾರುಕಟ್ಟೆಗಳನ್ನು ಪ್ರವೇಶಿಸಲು ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಅವರು ಉಲ್ಲೇಖಿಸಿದರು.
ಅಪೇಡಾ ಮಳಿಗೆಯನ್ನು ವಾಣಿಜ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ನಿತಿನ್ ಕುಮಾರ್ ಯಾದವ್, ಅಪೇಡಾ ಅಧ್ಯಕ್ಷ ಶ್ರೀ ಅಭಿಷೇಕ್ ದೇವ್ ಮತ್ತು ಐಟಿಪಿಒ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ನೀರಜ್ ಖರ್ವಾಲ್ ಅವರು ಉದ್ಘಾಟಿಸಿದರು. ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರಗಳ ಪ್ರತಿನಿಧಿಗಳು, ರಫ್ತುದಾರರು ಮತ್ತು ಕೈಗಾರಿಕಾ ಪ್ರತಿನಿಧಿಗಳ ಸಮ್ಮುಖದಲ್ಲಿ ಅಪೇಡಾ ಪೆವಿಲಿಯನ್ ಉದ್ಘಾಟನೆಗೊಂಡಿತು. ಭಾರತದ ವೈವಿಧ್ಯಮಯ ಕೃಷಿ-ರಫ್ತು ಬುಟ್ಟಿಯನ್ನು ಪ್ರದರ್ಶಿಸಲು ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ರಫ್ತುದಾರರು ಮತ್ತು ಖರೀದಿದಾರರ ನಡುವಿನ ಸಂವಹನವನ್ನು ಸುಗಮಗೊಳಿಸಲು ಈ ಮಳಿಗೆ ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಿತು.
ಈ ಸಂದರ್ಭದಲ್ಲಿ ಐ ಸಿ ಆರ್ ಐ ಇ ಆರ್ ಜ್ಞಾನ ಪಾಲುದಾರರಾಗಿ ಅಪೇಡಾ ಸಿದ್ಧಪಡಿಸಿದ ಸೌತೆಕಾಯಿ, ಗೋಡಂಬಿ, ಅನಾನಸ್ ಮತ್ತು ದಾಳಿಂಬೆ ಕುರಿತಾದ ಸಂಶೋಧನಾ ವರದಿಗಳನ್ನು ಸಹ ಬಿಡುಗಡೆ ಮಾಡಲಾಯಿತು. ವರದಿಗಳು ಪೂರೈಕೆ ಸರಣಿಗಳು, ರಫ್ತು ಸಾಮರ್ಥ್ಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ತಂತ್ರಗಳ ಕುರಿತು ಒಳನೋಟಗಳನ್ನು ಕಟ್ಟಿಕೊಡಲಿವೆ.
ಅಪೇಡಾ ಪ್ಯಾಕೇಜಿಂಗ್ ವಿನ್ಯಾಸ ಪರಿಹಾರಗಳು ಮತ್ತು ತಾಂತ್ರಿಕ ಮಾನದಂಡಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು, ಇದನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಕೇಜಿಂಗ್ (ಐಐಪಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಉಪಕ್ರಮವು ವಿಶೇಷವಾಗಿ ಜಿಐ-ಟ್ಯಾಗ್ ಮಾಡಲಾದ ಮತ್ತು ಸಾವಯವ ಉತ್ಪನ್ನಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ರಫ್ತಿಗಾಗಿ ಉತ್ಪನ್ನ ರಕ್ಷಣೆ, ವಸ್ತುಗಳು ಹಾಳಾಗದಂತೆ ಜೀವಿತಾವಧಿ ಹೆಚ್ಚಿಸುವ ಮತ್ತು ಮಾರುಕಟ್ಟೆ ಲಭ್ಯತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮದ ಅಡಿಯಲ್ಲಿ ಒಳಗೊಂಡಿರುವ ಉತ್ಪನ್ನಗಳಲ್ಲಿ ಕಾರ್ಬಿ ಆಂಗ್ಲಾಂಗ್ ಶುಂಠಿ (ಅಸ್ಸಾಂ), ಜಿ4 ಮೆಣಸಿನಕಾಯಿ ಮತ್ತು ಜಲಗಾಂವ್ ಬಾಳೆಹಣ್ಣು (ಮಹಾರಾಷ್ಟ್ರ), ಅಸ್ಸಾಂ ಕಾಜಿ ನೇಮು (ಅಸ್ಸಾಂ) ಮತ್ತು ಪ್ರಯಾಗ್ರಾಜ್ ಸುರ್ಖಾ ಗುವಾ (ಉತ್ತರ ಪ್ರದೇಶ) ಸೇರಿವೆ.
2,500 ಚದರ ಮೀಟರ್ ವಿಸ್ತೀರ್ಣದ ಪ್ರದರ್ಶನ ಪ್ರದೇಶದಲ್ಲಿ ಹರಡಿರುವ ಅಪೇಡಾ ಮಳಿಗೆ ದೇಶಾದ್ಯಂತದ ರಫ್ತುದಾರರು, ಉತ್ಪಾದಕ ಸಂಸ್ಥೆಗಳು, ನವೋದ್ಯಮಗಳು ಮತ್ತು ಆಹಾರ ಸಂಸ್ಕರಣಾ ಉದ್ಯಮಗಳನ್ನು ಪ್ರತಿನಿಧಿಸುವ 100ಕ್ಕೂ ಅಧಿಕ ಪ್ರದರ್ಶಕರಿಗೆ ಆತಿಥ್ಯ ವಹಿಸಿತ್ತು. ಈ ಪ್ರದರ್ಶನವು ಉದ್ಯಮದ ಪಾಲುದಾರರಿಗೆ ಸಹಯೋಗಗಳನ್ನು ಅನ್ವೇಷಿಸಲು, ಮಾರುಕಟ್ಟೆ ಸಂಪರ್ಕಗಳನ್ನು ವಿಸ್ತರಿಸಲು ಮತ್ತು ಮೌಲ್ಯವರ್ಧಿತ ಕೃಷಿ ಉತ್ಪನ್ನಗಳನ್ನು ಉತ್ತೇಜಿಸಲು ಅವಕಾಶಗಳನ್ನು ಒದಗಿಸಿತು.
ಬಾಸ್ಮತಿ ಅಕ್ಕಿ, ಬಾಸ್ಮತಿಯೇತರ ಅಕ್ಕಿ, ಸಾವಯವ ಉತ್ಪನ್ನಗಳು ಮತ್ತು ಉದಯೋನ್ಮುಖ ಸಸ್ಯ ಆಧಾರಿತ ಆಹಾರ ಉತ್ಪನ್ನಗಳು ಸೇರಿ ಪ್ರಮುಖ ರಫ್ತು ವಿಭಾಗಗಳನ್ನು ಮಳಿಗೆಗಳಲ್ಲಿ ಪ್ರಧಾನವಾಗಿ ಪ್ರದರ್ಶಿಸಲಾಯಿತು, ಇದು ಜಾಗತಿಕ ಕೃಷಿ-ಆಹಾರ ಮಾರುಕಟ್ಟೆಗಳಲ್ಲಿ ಭಾರತದ ವಿಸ್ತರಿಸುತ್ತಿರುವ ಬಂಡವಾಳವನ್ನು ಪ್ರತಿಬಿಂಬಿಸುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಆಕರ್ಷಣೆಯನ್ನು ಪಡೆಯುತ್ತಿರುವ ನವೀನ ಮತ್ತು ಸುಸ್ಥಿರ ಆಹಾರ ಪರ್ಯಾಯಗಳನ್ನು ಸಸ್ಯ ಆಧಾರಿತ ಉತ್ಪನ್ನಗಳ ಮೇಲಿನ ವಿಶೇಷ ವೈಶಿಷ್ಟ್ಯವು ಪ್ರದರ್ಶಿಸಿತು.
ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ದೆಹಲಿ, ಗುಜರಾತ್, ಹರ್ಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮೇಘಾಲಯ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದ ಭಾಗವಹಿಸುವಿಕೆಯೊಂದಿಗೆ ಅಪೇಡಾ ಜಾಗದಲ್ಲಿ ಹಲವು ರಾಜ್ಯಗಳ ಮಳಿಗೆಗಳು ಕಾಣಿಸಿಕೊಂಡವು. ಈ ಮಂಟಪಗಳು ಭಾರತದ ಕೃಷಿ-ಆಹಾರ ಕ್ಷೇತ್ರದ ವೈವಿಧ್ಯತೆ ಮತ್ತು ಶಕ್ತಿಯನ್ನು ಪ್ರತಿಬಿಂಬಿಸುವ ಪ್ರದೇಶ-ನಿರ್ದಿಷ್ಟ ಉತ್ಪನ್ನಗಳು, ಸಾಂಪ್ರದಾಯಿಕ ಆಹಾರ ವಸ್ತುಗಳು ಮತ್ತು ರಫ್ತು-ಸಿದ್ಧ ಕೃಷಿ ಉತ್ಪನ್ನಗಳನ್ನು ಪ್ರದರ್ಶಿಸಿದವು.
ಆಹಾರ್ 2026ರಲ್ಲಿ ಅಪೇಡಾ ಪಾಲ್ಗೊಳ್ಳುವಿಕೆಯು ಗಮನಾರ್ಹವಾದ ಕೈಗಾರಿಕಾ ಸಹಭಾಗಿತ್ವವನ್ನು ಆಕರ್ಷಿಸತು, ಐದು ದಿನಗಳ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಸಂದರ್ಶಕರು ಭಾಗವಹಿಸಿದ್ದರು. ಈ ಪ್ರದರ್ಶನವು ರಫ್ತುದಾರರು, ಆಹಾರ ಸಂಸ್ಕರಣಾದಾರರು ಮತ್ತು ಕೃಷಿ-ಉದ್ಯಮಿಗಳಿಗೆ ಭಾರತ ಮತ್ತು ವಿದೇಶಗಳಿಂದ ಖರೀದಿದಾರರು, ವಿತರಕರು ಮತ್ತು ಸಾಂಸ್ಥಿಕ ಪಾಲುದಾರರೊಂದಿಗೆ ಸಂವಹನ ನಡೆಸಲು ಅವಕಾಶಗಳನ್ನು ಸೃಷ್ಟಿಸಿತು.
ಅಪೇಡಾ ಮಳಿಗೆಯ ಪ್ರಮುಖ ಅಂಶವೆಂದರೆ ಭಾರತೀಯ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳನ್ನು ಬಳಸಿಕೊಂಡು ನವೀನ ಪಾಕವಿಧಾನಗಳು ಮತ್ತು ಅನ್ವಯಿಕೆಗಳನ್ನು ಪ್ರಸ್ತುತಪಡಿಸುವ ಹೆಸರಾಂತ ಬಾಣಸಿಗರಿಂದ ನಡೆಸಲ್ಪಟ್ಟ ನೇರ ಮಾದರಿ ಪ್ರದರ್ಶನ ಗೋಷ್ಠಿಗಳು. ಈ ಮಳಿಗೆಯು ಬಾಸ್ಮತಿ ಅಕ್ಕಿ, ಬಾಸ್ಮತಿಯೇತರ ಅಕ್ಕಿ, ಸಾವಯವ ಉತ್ಪನ್ನಗಳು ಮತ್ತು ಸಸ್ಯಾಧಾರಿತ ಆಹಾರ ಉತ್ಪನ್ನಗಳ ಮೇಲೆ ಕೇಂದ್ರೀಕೃತ ಪ್ರದರ್ಶನಗಳನ್ನು ಸಹ ಒಳಗೊಂಡಿತ್ತು, ಖರೀದಿದಾರರು ಮತ್ತು ಸಂದರ್ಶಕರು ಭಾರತದ ರಫ್ತು-ಸಿದ್ಧ ಕೊಡುಗೆಗಳನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ.
ಆಹಾರ್ ದಕ್ಷಿಣ ಏಷ್ಯಾದಲ್ಲಿ ಆಹಾರ ಮತ್ತು ಆತಿಥ್ಯ ಉದ್ಯಮಕ್ಕೆ ಅತಿದೊಡ್ಡ B2B ವೇದಿಕೆಗಳಲ್ಲಿ ಒಂದಾಗಿ ಮುಂದುವರೆದಿದ್ದು, ಕೃಷಿ-ಆಹಾರ ಮೌಲ್ಯ ಸರಣಿಯಾದ್ಯಂತ ವ್ಯಾಪಾರ ಜಾಲ, ಉತ್ಪನ್ನ ಪ್ರಚಾರ ಮತ್ತು ಜ್ಞಾನ ವಿನಿಮಯಕ್ಕಾಗಿ ಪ್ರಮುಖ ಮುಖಾಮುಖಿಯ ವೇದಿಕೆಯನ್ನು ಒದಗಿಸುತ್ತದೆ.
ಆಹಾರ್ 2026ರಲ್ಲಿ ಭಾಗವಹಿಸುವ ಮೂಲಕ ಅಪೇಡಾ ಉತ್ತಮ ಗುಣಮಟ್ಟದ ಕೃಷಿ ಉತ್ಪಾದನೆ, ಮೌಲ್ಯವರ್ಧನೆ ಮತ್ತು ರಫ್ತು-ಆಧಾರಿತ ಪೂರೈಕೆ ಸರಣಿಗಳಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಪ್ರದರ್ಶಿಸಿತು. ಮಳಿಗೆಯು ರಫ್ತುದಾರರು, ನವೋದ್ಯಮಗಳು, ರಾಜ್ಯ ಸಂಸ್ಥೆಗಳು ಮತ್ತು ಉತ್ಪಾದಕ ಸಂಸ್ಥೆಗಳನ್ನು ಒಗ್ಗೂಡಿಸಿತು, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರತದ ಉಪಸ್ಥಿತಿಯನ್ನು ವಿಸ್ತರಿಸುವ ಅವಕಾಶಗಳನ್ನು ಪ್ರಮುಖವಾಗಿ ಬಿಂಬಿಸಿತು.
*****
(ಪ್ರಕಟಣೆ ಐ.ಡಿ.: 2238095)
ವಿಸಿಟರ್ ಕೌಂಟರ್ : 13