ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ 2027ರ ಜನಗಣತಿಗಾಗಿ- 'ಪ್ರಗತಿ' (ಮಹಿಳೆ) ಮತ್ತು "ವಿಕಾಸ್" (ಪುರುಷ) ಹೆಸರಿನ ಪ್ರತಿಕೃತಿಗಳು (ಮ್ಯಾಸ್ಕಾಟ್) ಹಾಗೂ ಡಿಜಿಟಲ್ ಸಾಧನಗಳನ್ನು ಬಿಡುಗಡೆ ಮಾಡಿದರು
2027ರ ಜನಗಣತಿ 2 ಹಂತಗಳಲ್ಲಿ ನಡೆಯಲಿದ್ದು, ವಿಶ್ವದ ಅತಿದೊಡ್ಡ ಜನಗಣತಿ ಇದಾಗಿದೆ
ಮೊದಲ ಬಾರಿಗೆ, ಜನಗಣತಿಯನ್ನು ಡಿಜಿಟಲ್ ರೂಪದಲ್ಲಿ ನಡೆಸಲಾಗುವುದು ಮತ್ತು ಇದೇ ಮೊದಲ ಬಾರಿಗೆ ಸ್ವಯಂ ಎಣಿಕೆ (ಸೆಲ್ಫ್ ಎನ್ಯುಮರೇಷನ್) ಆಯ್ಕೆ ಲಭ್ಯವಾಗಿಸಲಾಗಿದೆ
'ಸ್ವಯಂ ಎಣಿಕೆ'ಯು ಸುರಕ್ಷಿತ ವೆಬ್ ಆಧಾರಿತ ಸೌಲಭ್ಯವಾಗಿದ್ದು, ಇದರ ಮೂಲಕ ಗಣತಿದಾರರು ಮನೆಮನೆಗೆ ಭೇಟಿ ನೀಡುವ ಮುನ್ನವೆ ಪ್ರತಿಸ್ಪಂದಕರು 16 ಭಾಷೆಗಳಲ್ಲಿ ತಮ್ಮ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಬಹುದು
2027ರ ಜನಗಣತಿಯ ಪ್ರತಿಕೃತಿಗಳಾದ "ಪ್ರಗತಿ" ಮತ್ತು "ವಿಕಾಸ್" 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವನ್ನು ಈಡೇರಿಸುವಲ್ಲಿ ಮಹಿಳೆಯರು ಮತ್ತು ಪುರುಷರ ಸಮಾನ ಭಾಗವಹಿಸುವಿಕೆಯನ್ನು ಸಂಕೇತಿಸುತ್ತವೆ
ದೇಶಾದ್ಯಂತ 2027ರ ಜನಗಣತಿಯಲ್ಲಿ 3 ದಶಲಕ್ಷಕ್ಕೂ ಹೆಚ್ಚು ಗಣತಿದಾರರು, ಮೇಲ್ವಿಚಾರಕರು ಮತ್ತು ಇತರ ಅಧಿಕಾರಿಗಳು ಭಾಗಿಯಾಗಲಿದ್ದಾರೆ
ಪ್ರಕಟಣಾ ದಿನಾಂಕ:
05 MAR 2026 1:11PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ 2027ರ ಜನಗಣತಿಗಾಗಿ ನಾಲ್ಕು ಡಿಜಿಟಲ್ ಸಾಧನಗಳನ್ನು ಬಿಡುಗಡೆ ಮಾಡಿದರು. ಇದೇವೇಳೆ, "ಪ್ರಗತಿ" (ಮಹಿಳೆ) ಮತ್ತು "ವಿಕಾಸ್" (ಪುರುಷ) ಎಂಬವ ಎರಡು ಪ್ರತಿಕೃತಿಗಳನ್ನು (ಮ್ಯಾಸ್ಕಾಟ್) ಔಪಚಾರಿಕವಾಗಿ ಅವರು ಅನಾವರಣಗೊಳಿಸಿದರು. 'ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್'(ಸಿ-ಡ್ಯಾಕ್) ಸಂಸ್ಥೆಯು ದೇಶಾದ್ಯಂತ ಎಣಿಕೆ ಕಾರ್ಯಾಚರಣೆಗಳಿಗೆ ಅನುಕೂಲವಾಗುವಂತೆ ಈ ಸುಧಾರಿತ ಡಿಜಿಟಲ್ ವೇದಿಕೆಗಳನ್ನು ಅಭಿವೃದ್ಧಿಪಡಿಸಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ರಿಜಿಸ್ಟ್ರಾರ್ ಜನರಲ್ ಹಾಗೂ ಭಾರತದ ಜನಗಣತಿ ಆಯುಕ್ತರು ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

2025ರ ಜೂನ್ 16ರಂದು ಗೆಜೆಟ್ ಅಧಿಸೂಚನೆಯ ಮೂಲಕ ಕೇಂದ್ರ ಸರ್ಕಾರವು 2027ರ ಜನಗಣತಿಯನ್ನು ನಡೆಸುವ ಉದ್ದೇಶವನ್ನು ವ್ಯಕ್ತಪಡಿಸಿದ್ದು, ಆ ಮೂಲಕ ಜನಗಣತಿ ಪ್ರಕ್ರಿಯೆಗೆ ಔಪಚಾರಿಕವಾಗಿ ಚಾಲನೆ ನೀಡಿತು. 2027ರ ಜನಗಣತಿಯನ್ನು 2 ಹಂತಗಳಲ್ಲಿ ನಡೆಸಲಾಗುತ್ತಿದ್ದು, ಇದು ವಿಶ್ವದ ಅತಿದೊಡ್ಡ ಜನಗಣತಿ ಪ್ರಕ್ರಿಯೆಯಾಗಿದೆ. ಮೊದಲ ಬಾರಿಗೆ, ಜನಗಣತಿಯನ್ನು ಡಿಜಿಟಲ್ ರೂಪದಲ್ಲಿ ನಡೆಸಲಾಗುವುದು ಮತ್ತು ಮೊದಲ ಬಾರಿಗೆ, ಸ್ವಯಂ ಎಣಿಕೆಯ (ಸೆಲ್ಫ್ ಎನ್ಯುಮರೇಷನ್) ಆಯ್ಕೆ ಲಭ್ಯವಾಗಿಸಲಾಗಿದೆ.
'ಪ್ರಗತಿ' ಮತ್ತು 'ವಿಕಾಸ್' ಪ್ರತಿಕೃತಿಗಳ ಬಗ್ಗೆ
2027ರ ಜನಗಣತಿಯ ಸ್ನೇಹಪರ, ಸಾಪೇಕ್ಷ ಮುಖಗಳಾಗಿ ಕಾರ್ಯನಿರ್ವಹಿಸಲು "ಪ್ರಗತಿ" (ಮಹಿಳಾ ಎಣಿಕೆದಾರರು) ಮತ್ತು "ವಿಕಾಸ್" (ಪುರುಷ ಎಣಿಕೆದಾರರು) ಎಂಬ ಎರಡು ಪ್ರತಿಕೃತಿಗಳನ್ನು (ಮ್ಯಾಸ್ಕಾಟ್) ಅನಾವರಣಗೊಳಿಸಲಾಯಿತು. ಈ ಪ್ರತಿಕೃತಿಗಳು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವನ್ನು ಈಡೇರಿಸುವಲ್ಲಿ ಮಹಿಳೆಯರು ಮತ್ತು ಪುರುಷರ ಸಮಾನ ಭಾಗವಹಿಸುವಿಕೆಯನ್ನು ಸಂಕೇತಿಸುತ್ತವೆ. ಈ ಪ್ರತಿಕೃತಿಗಳ ಮೂಲಕ, 2027ರ ಜನಗಣತಿಗೆ ಸಂಬಂಧಿಸಿದ ಮಾಹಿತಿ, ಉದ್ದೇಶಗಳು ಮತ್ತು ಪ್ರಮುಖ ಸಂದೇಶಗಳನ್ನು ಸಮಾಜದ ವಿವಿಧ ವರ್ಗಗಳಲ್ಲಿ ಪರಿಣಾಮಕಾರಿ ಮತ್ತು ನಾಗರಿಕ ಸ್ನೇಹಿ ರೀತಿಯಲ್ಲಿ ಪ್ರಸಾರ ಮಾಡಲಾಗುತ್ತದೆ.

ನಾಲ್ಕು ಡಿಜಿಟಲ್ ಪರಿಕರಗಳು
2027ರ ಜನಗಣತಿಯು ಡಿಜಿಟಲ್ ಸಾಧನಗಳನ್ನು ಬಳಸಿಕೊಂಡು ನಡೆಸಲಾದ ಭಾರತದ ಮೊದಲ ಜನಗಣತಿ ಎನಿಸಲಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಪ್ರಾರಂಭಿಸಿದ ನಾಲ್ಕು ಡಿಜಿಟಲ್ ವೇದಿಕೆಗಳು ಹೀಗಿವೆ:
1. ಹೌಸ್ ಲಿಸ್ಟಿಂಗ್ ಬ್ಲಾಕ್ ಕ್ರಿಯೇಟರ್ (ಎಚ್ಎಲ್ಬಿಸಿ) ವೆಬ್ ತಂತ್ರಾಂಶ: ಉಪಗ್ರಹ ಚಿತ್ರಣವನ್ನು ಬಳಸಿಕೊಂಡು ಡಿಜಿಟಲ್ ಮಾದರಿಯಲ್ಲಿ ಹೌಸ್ ಲಿಸ್ಟಿಂಗ್ ಬ್ಲಾಕ್‌ಗಳನ್ನು ರಚಿಸಲು ಸಂಬಧಪಟ್ಟ ಅಧಿಕಾರಿಗಳಿಗೆ ಇದು ಅನುವು ಮಾಡಿಕೊಡುತ್ತದೆ. ಈ ವೆಬ್-ಮ್ಯಾಪ್ ತಂತ್ರಾಂಶವು ದೇಶಾದ್ಯಂತ ಪ್ರಮಾಣೀಕೃತ ಭೌಗೋಳಿಕ ವ್ಯಾಪ್ತಿಯನ್ನು ಖಚಿತಪಡಿಸುತ್ತದೆ.
2. ಎಚ್ಎಲ್ಒ ಮೊಬೈಲ್ ತಂತ್ರಾಂಶ: ಎಣಿಕೆದಾರರಿಗೆ ಹೌಸ್ ಲಿಸ್ಟಿಂಗ್ ದತ್ತಾಂಶವನ್ನು ಸಂಗ್ರಹಿಸಲು ಮತ್ತು ಅಪ್‌ಲೋಡ್ ಮಾಡಲು ಸುರಕ್ಷಿತ ಆಫ್‌ಲೈನ್ ಮೊಬೈಲ್ ತಂತ್ರಾಂಶ ಇದಾಗಿದೆ. 'ಸಿಎಂಎಂಎಸ್' ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಎಣಿಕೆದಾರರು ಮಾತ್ರ ಅಪ್ಲಿಕೇಶನ್ ಅನ್ನು ಪ್ರವೇಶಿಸಬಹುದು. ಅಪ್ಲಿಕೇಶನ್ ಸಾಂಪ್ರದಾಯಿಕ ಕಾಗದಪತ್ರಗಳ ಅಗತ್ಯವನ್ನು ನಿವಾರಿಸುವ ಮೂಲಕ ನೇರ 'ಫೀಲ್ಡ್-ಟು-ಸರ್ವರ್' ಡೇಟಾ ಪ್ರಸರಣವನ್ನು ಸಕ್ರಿಯಗೊಳಿಸುತ್ತದೆ. ಎಲ್ಲಾ ಹೌಸ್ ಲಿಸ್ಟಿಂಗ್ ದತ್ತಾಂಶವನ್ನು ಈ ತಂತ್ರಾಂಶದ ಮೂಲಕ ಸಂಗ್ರಹಿಸಲಾಗುತ್ತದೆ. ಇದನ್ನು ನೋಂದಾಯಿತ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಮಾತ್ರ ನಿರ್ವಹಿಸಬಹುದು. ಈ ತಂತ್ರಾಂಶವು ಆಂಡ್ರಾಯ್ಡ್ ಮತ್ತು ಐಒಎಸ್ ವೇದಿಕೆಗಳಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಇದನ್ನು 16 ಪ್ರಾದೇಶಿಕ ಭಾಷೆಗಳಲ್ಲಿ ಬಳಸಬಹುದಾಗಿದೆ.
3. ಸ್ವಯಂ ಎಣಿಕೆ (ಎಸ್ಇ) ಪೋರ್ಟಲ್: ಮೊದಲ ಬಾರಿಗೆ, ಸ್ವಯಂ-ಎಣಿಕೆಯ ಆಯ್ಕೆಯನ್ನು ಪರಿಚಯಿಸಲಾಗುತ್ತಿದೆ. 'ಎಸ್ಇ ಪೋರ್ಟಲ್' ಎಂಬುದು ಸುರಕ್ಷಿತ ವೆಬ್ ಆಧಾರಿತ ಸೌಲಭ್ಯವಾಗಿದ್ದು, ಇದು ಮನೆಯೊಳಗಿನ ಅರ್ಹ ಪ್ರತಿಸ್ಪಂದಕರಿಗೆ ಕ್ಷೇತ್ರ ಕಾರ್ಯಾಚರಣೆಗಳಿಗೆ ಮೊದಲು ತಮ್ಮ ಮನೆಯ ಮಾಹಿತಿಯನ್ನು ಆನ್‌ಲೈನ್ ಮೂಲಕ ನಮೂದಿಸಲು ಅನುವು ಮಾಡಿಕೊಡುತ್ತದೆ. ಮಾಹಿತಿಯ ಯಶಸ್ವಿ ಸಲ್ಲಿಕೆಯ ನಂತರ, ಒಂದು ಅನನ್ಯ ಸ್ವಯಂ-ಎಣಿಕೆ ಐಡಿ (ಎಸ್ಇ ಐಡಿ) ಸೃಷ್ಟಿಯಾಗುತ್ತದೆ. ಈ ಸ್ವಯಂ-ಎಣಿಕೆ ಐಡಿ (ಎಸ್ಇ ಐಡಿ) ಅನ್ನು ಎಣಿಕೆದಾರರೊಂದಿಗೆ ಹಂಚಿಕೊಳ್ಳಲಾಗುತ್ತದೆ, ಅದರ ಆಧಾರದ ಮೇಲೆ ಎಣಿಕೆದಾರರು ಮಾಹಿತಿಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.
4. ಜನಗಣತಿ ನಿರ್ವಹಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (ಸಿಎಂಎಂಎಸ್) ಪೋರ್ಟಲ್: ಆಡಳಿತಾತ್ಮಕ ಹಂತಗಳಲ್ಲಿ ಜನಗಣತಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಯೋಜಿಸಲು, ನಿರ್ವಹಿಸಲು, ಕಾರ್ಯಗತಗೊಳಿಸಲು ಮತ್ತು ಮೇಲ್ವಿಚಾರಣೆ ಮಾಡಲು ವಿನ್ಯಾಸಗೊಳಿಸಲಾದ ಕೇಂದ್ರೀಕೃತ, ವೆಬ್ ಆಧಾರಿತ ಡಿಜಿಟಲ್ ವೇದಿಕೆ ಇದಾಗಿದೆ. ತಾಲೂಕು ಜಿಲ್ಲಾ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳು ಸಮಗ್ರ ಡ್ಯಾಶ್‌ಬೋರ್ಡ್ ಮೂಲಕ ಗಣತಿಯ ಪ್ರಗತಿ, ಕ್ಷೇತ್ರ ಕಾರ್ಯಕ್ಷಮತೆ ಮತ್ತು ಕಾರ್ಯಾಚರಣೆಯ ಸಿದ್ಧತೆಯನ್ನು ನೈಜ ಸಮಯದಲ್ಲಿ ನಿಗಾ ಮಾಡಬಹುದು.

ಜನಗಣತಿ-2027ರ ಅಡಿಯಲ್ಲಿ, ಮನೆ ಮನೆಗೆ ಭೇಟಿ ನೀಡಿ, ಸುರಕ್ಷಿತ ಮೊಬೈಲ್ ತಂತ್ರಾಂಶಗಳನ್ನು ಬಳಸಿಕೊಂಡು ದತ್ತಾಂಶವನ್ನು ಸಂಗ್ರಹಿಸಲಾಗುತ್ತದೆ. ಆ ಮೂಲಕ ಜನಗಣತಿಯ ಸಂಪೂರ್ಣ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಇದಕ್ಕಾಗಿ, 2027ರ ಜನಗಣತಿಗಾಗಿ ದೇಶಾದ್ಯಂತ 30 ಲಕ್ಷಕ್ಕೂ ಹೆಚ್ಚು ಗಣತಿದಾರರು, ಮೇಲ್ವಿಚಾರಕರು ಮತ್ತು ಇತರ ಜನಗಣತಿ ಅಧಿಕಾರಿಗಳನ್ನು ನಿಯೋಜಿಸಲಾಗುವುದು.
ಚಾಣಾಕ್ಷ ರೀತಿಯಲ್ಲಿ ತಂತ್ರಜ್ಞಾನದ ನಿರ್ಣಯದ ಅಳವಡಿಕೆಯು ನಾವೀನ್ಯತೆ ಜೊತೆಗೆ ಎಲ್ಲರ ಒಳಗೊಳ್ಳುವಿಕೆಯನ್ನು ಸಂಯೋಜಿಸುತ್ತದೆ, ಆ ಮೂಲಕ 2027ರ ಜನಗಣತಿಯು ನಿಖರ, ಸುರಕ್ಷಿತ ಮತ್ತು ಸಮಗ್ರವಾಗಿ ಇರುವುದನ್ನು ಖಚಿತಪಡಿಸುತ್ತದೆ.
2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು:
ಹಂತ 1: ಮನೆಗಳ ಪಟ್ಟಿ ಮಾಡುವಿಕೆ ಮತ್ತು ಮನೆಮನೆ ಗಣತಿ (ಎಚ್ಎಲ್ಒ)
ಹಂತ 1 ರಲ್ಲಿ, ಮನೆ ಪರಿಸ್ಥಿತಿಗಳು ಮತ್ತು ಮನೆಯ ಸೌಲಭ್ಯಗಳ ದತ್ತಾಂಶವನ್ನು ಸಂಗ್ರಹಿಸಲಾಗುವುದು ಮತ್ತು ಹಂತ 2 ದೇಶದ ಪ್ರತಿಯೊಬ್ಬ ವ್ಯಕ್ತಿಯ ಜನಸಂಖ್ಯಾ, ಸಾಮಾಜಿಕ ಮತ್ತು ಆರ್ಥಿಕ ವಿವರಗಳನ್ನು ದಾಖಲಿಸುತ್ತದೆ.
ಮೊದಲ ಹಂತಕ್ಕೆ ಅಧಿಸೂಚನೆಯನ್ನು 2026 ರ ಜನವರಿ 7 ರಂದು ಹೊರಡಿಸಲಾಗಿದೆ. ಮನೆಗಳ ಪಟ್ಟಿ ಮಾಡುವಿಕೆ ಮತ್ತು ಮನೆಮನೆ ಗಣತಿಯನ್ನು 2026ರ ಏಪ್ರಿಲ್ 1 ರಿಂದ 2026ರ ಸೆಪ್ಟೆಂಬರ್ 30ರ ನಡುವೆ 30 ದಿನಗಳ ನಿರಂತರ ಅವಧಿಯಲ್ಲಿ ನಡೆಸಲಾಗುತ್ತದೆ. ಈ ಸಂಬಂಧ ಪ್ರತಿ ರಾಜ್ಯ / ಕೇಂದ್ರಾಡಳಿತ ಪ್ರದೇಶವು ಅಧಿಸೂಚನೆ ಹೊರಡಿಸಲಿವೆ. ಮನೆ ಮನೆ ಸಮೀಕ್ಷೆಗೆ ಮುಂಚಿತವಾಗಿ 15 ದಿನಗಳ ಸ್ವಯಂ-ಎಣಿಕೆ ಅವಧಿಯು ಐಚ್ಛಿಕ ಇರುತ್ತದೆ.
ಹಂತ 2: ಜನಸಂಖ್ಯಾ ಎಣಿಕೆ (ಪಿಇ)
ಫೆಬ್ರವರಿ 2027ರಲ್ಲಿ ಭಾರತದಾದ್ಯಂತ ಜನಸಂಖ್ಯೆಯ ಎಣಿಕೆಯನ್ನು ನಡೆಸಲಾಗುವುದು. ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಮತ್ತು ಹಿಮದಿಂದ ಆವೃತವಾದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಪ್ರದೇಶಗಳಿಗೆ ಸೆಪ್ಟೆಂಬರ್ 2026ರಲ್ಲಿ ಗಣತಿ ನಡೆಯಲಿದೆ. ಎರಡನೇ ಹಂತದ ಜನಗಣತಿಯಲ್ಲಿ ಜಾತಿ ಸಂಬಂಧಿತ ಪ್ರಶ್ನೆಯನ್ನೂ ಸೇರಿಸಲಾಗುವುದು.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2027ರ ಜನಗಣತಿಯ ಪರಾಮರ್ಶೆ ದಿನಾಂಕವು 2027ರ ಮಾರ್ಚ್ 1ರ 00:00 ಗಂಟೆ ಆಗಿರುತ್ತದೆ. ಹಿಮದಿಂದ ಆವೃತವಾಗುವ ಪ್ರದೇಶಗಳಾದ ಕೇಂದ್ರಾಡಳಿತ ಪ್ರದೇಶ ಲಡಾಖ್, ಜಮ್ಮು-ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪರಾಮರ್ಶೆ ದಿನಾಂಕ 2026 ರ ಅಕ್ಟೋಬರ್ 1ರ 00:00 ಗಂಟೆ ಆಗಿರುತ್ತದೆ.
*****
(ಪ್ರಕಟಣೆ ಐ.ಡಿ.: 2235510)
ವಿಸಿಟರ್ ಕೌಂಟರ್ : 140
ಪ್ರಕಟಣೆಯನ್ನು ಇದರಲ್ಲಿ ಓದಿ:
Malayalam
,
Khasi
,
English
,
Urdu
,
Marathi
,
हिन्दी
,
Nepali
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu