ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಎಐ ಪಾಲಿಗೆ ನಿರ್ಣಾಯಕ ಕ್ಷಣ: ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ಜವಾಬ್ದಾರಿಯುತ ಎಐ ನಾವೀನ್ಯತೆಗೆ ವಿಶ್ವ ನಾಯಕರು ಮತ್ತು ಬಿಗ್ ಟೆಕ್ ಸಿಇಒಗಳ ಬೆಂಬಲ
ಅತ್ಯಂತ ಬುದ್ಧಿವಂತ ಎಐ ಎಂದರೆ ಅದು ಅತ್ಯಂತ ದುಬಾರಿಯಾದದ್ದಲ್ಲ, ಬದಲಿಗೆ ಸರಿಯಾದ ಉದ್ದೇಶಕ್ಕಾಗಿ ಅತ್ಯುತ್ತಮ ವ್ಯಕ್ತಿಗಳಿಂದ ನಿರ್ಮಿಸಲ್ಪಟ್ಟಿದ್ದು: ಇಮ್ಯಾನುಯೆಲ್ ಮ್ಯಾಕ್ರನ್, ಫ್ರಾನ್ಸ್ ಅಧ್ಯಕ್ಷರು
ಎಐ ಭವಿಷ್ಯವನ್ನು ಕೆಲವೇ ದೇಶಗಳು ನಿರ್ಧರಿಸಲು ಸಾಧ್ಯವಿಲ್ಲ ಅಥವಾ ಅದನ್ನು ಕೆಲವೇ ಬಿಲಿಯನೇರ್ ಗಳ ಇಚ್ಛೆಗೆ ಬಿಡಬಾರದು; ಎಐ ಗಾಗಿ ಜಾಗತಿಕ ನಿಧಿಗೆ ಕರೆ: ಆಂಟೋನಿಯೊ ಗುಟೆರೆಸ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ
ಡಿಜಿಟಲ್ ವಿಭಜನೆಯು 'ಎಐ ವಿಭಜನೆ'ಯಾಗಿ ಬದಲಾಗಲು ನಾವು ಬಿಡಬಾರದು: ಸುಂದರ್ ಪಿಚೈ, ಗೂಗಲ್ ಸಿಇಒ
ನಾವು ದೇಶದ ಕಟ್ಟಕಡೆಯ ವ್ಯಕ್ತಿಯ ಕೈಗೂ ಎಐ ಪರಿಕರಗಳನ್ನು ತಲುಪಿಸಬೇಕು: ಎನ್. ಚಂದ್ರಶೇಖರನ್, ಟಾಟಾ ಸನ್ಸ್ ಅಧ್ಯಕ್ಷ
ಎಐ ಶೀಘ್ರದಲ್ಲೇ ಹೆಚ್ಚಿನ ಕ್ಷೇತ್ರಗಳಲ್ಲಿ ಮಾನವನ ಅರಿವಿನ ಸಾಮರ್ಥ್ಯವನ್ನು ಮೀರಿಸಬಹುದು: ಡಾರಿಯೊ ಅಮೊಡೆಐ, ಆಂಥ್ರೋಪಿಕ್ ಸಿಇಒ
ಪ್ರಕಟಣಾ ದಿನಾಂಕ:
19 FEB 2026 3:00PM by PIB Bengaluru
ಭಾರತ ಮಂಟಪದಲ್ಲಿ ನಡೆದ 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026'ರ ಉನ್ನತ ಮಟ್ಟದ ಉದ್ಘಾಟನಾ ಸಮಾರಂಭವು ಜಾಗತಿಕ ನಾಯಕರು ಮತ್ತು ಬಿಗ್ ಟೆಕ್ ಸಿಇಒಗಳ ಸಮಾಗಮಕ್ಕೆ ಸಾಕ್ಷಿಯಾಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಸಮಾರಂಭವನ್ನು ಉದ್ಘಾಟಿಸಿದರು. ಕೃತಕ ಬುದ್ಧಿಮತ್ತೆಯ ಭವಿಷ್ಯವನ್ನು ರೂಪಿಸುವಲ್ಲಿ ಜವಾಬ್ದಾರಿಯುತ ನಾವೀನ್ಯತೆ, ವೈಜ್ಞಾನಿಕ ಪ್ರಗತಿ ಮತ್ತು ಅಂತರರಾಷ್ಟ್ರೀಯ ಸಹಯೋಗದ ಮೇಲೆ ಈ ಶೃಂಗಸಭೆಯು ಗಮನ ಕೇಂದ್ರೀಕರಿಸಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಭಾರತದ ಎಐ ಕಾರ್ಯತಂತ್ರವು ಪ್ರಜಾಪ್ರಭುತ್ವೀಕರಣ, ವಿಸ್ತರಣೀಯ ಮತ್ತು ಸಾರ್ವಭೌಮತ್ವದಲ್ಲಿ ಬೇರೂರಿದೆ ಎಂದು ತಿಳಿಸಿದರು. ಅಪ್ಲಿಕೇಶನ್ ಗಳು, ಮಾದರಿಗಳು, ಕಂಪ್ಯೂಟ್, ಪ್ರತಿಭೆ ಮತ್ತು ಶಕ್ತಿ - ಹೀಗೆ ಎಐ ಸ್ಟಾಕ್ ನ ಐದು ಪದರಗಳಲ್ಲಿ ಭಾರತದ ಸಮಗ್ರ ವಿಧಾನವನ್ನು ಅವರು ವಿವರಿಸಿದರು. ಆರೋಗ್ಯ, ಕೃಷಿ, ಶಿಕ್ಷಣ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಇವುಗಳ ನೈಜ ಬಳಕೆಯ ಬಗ್ಗೆ ಅವರು ಒತ್ತು ನೀಡಿದರು.
ಟಾಟಾ ಸನ್ಸ್ ಅಧ್ಯಕ್ಷರಾದ ಎನ್. ಚಂದ್ರಶೇಖರನ್ ಅವರು ಎಐ ಅನ್ನು ಮುಂದಿನ ಮೂಲಭೂತ ಮೂಲಸೌಕರ್ಯ ಅಥವಾ "ಬುದ್ಧಿವಂತಿಕೆಯ ಮೂಲಸೌಕರ್ಯ" ಎಂದು ಬಣ್ಣಿಸಿದರು. ಇದರ ಪರಿವರ್ತನಾ ಶಕ್ತಿಯನ್ನು ಹಬೆ ಇಂಜಿನ್, ವಿದ್ಯುತ್ ಮತ್ತು ಇಂಟರ್ನೆಟ್ ಗೆ ಹೋಲಿಸಿದರು. "ಎಐ ಮುಂದಿನ ದೊಡ್ಡ ಮೂಲಸೌಕರ್ಯವಾಗಿದೆ. ನಮ್ಮ ಮಿಷನ್ ಈ ದೇಶದ ಪ್ರತಿಯೊಬ್ಬ ನಾಗರಿಕನಿಗಾಗಿ ಎಐ ಕೆಲಸ ಮಾಡುವಂತೆ ಮಾಡುವುದಾಗಿರಬೇಕು. ನಾವು ದೇಶದ, ಮತ್ತು ವಾಸ್ತವವಾಗಿ ಭೂಮಿಯ ಕಟ್ಟಕಡೆಯ ವ್ಯಕ್ತಿಯ ಕೈಗೆ ಎಐ ಪರಿಕರಗಳನ್ನು ನೀಡಬೇಕು. ನಾವು ಒಂದು ನಿರ್ಣಾಯಕ ಕ್ಷಣದಲ್ಲಿ ನಿಂತಿದ್ದೇವೆ, ಇದು ಹೇರಳವಾದ ಬುದ್ಧಿವಂತಿಕೆಯ ಯುಗ, ಇಲ್ಲಿ ನಂಬಿಕೆ ಮತ್ತು ಮಾನವ ಸಾಮರ್ಥ್ಯಗಳು ಅತ್ಯಂತ ಅಮೂಲ್ಯವಾದ ಸಂಪನ್ಮೂಲಗಳಾಗಿವೆ" ಎಂದು ಅವರು ಹೇಳಿದರು.

2023 ರಲ್ಲಿ ಬ್ಲೆಚ್ಲಿ ಪಾರ್ಕ್‌ನಲ್ಲಿ ನಡೆದ ಮೊದಲ ಜಾಗತಿಕ ಎಐ ಸುರಕ್ಷತಾ ಶೃಂಗಸಭೆಯ ನಂತರ ಎಐ ಪ್ರಗತಿಯ ಅಸಾಧಾರಣ ವೇಗದ ಕುರಿತು ಆಂಥ್ರೋಪಿಕ್ ಸಿಇಒ ಡಾರಿಯೊ ಅಮೊಡೆಐ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು, ಕಳೆದ ಎರಡೂವರೆ ವರ್ಷಗಳ ಪ್ರಗತಿಯನ್ನು ಅವರು "ಬೆರಗುಗೊಳಿಸುವಂತಿದೆ" ಎಂದು ಬಣ್ಣಿಸಿದರು. ಎಐ ಸುಮಾರು ಒಂದು ದಶಕದಿಂದ ಘಾತೀಯವಾಗಿ ಮುನ್ನಡೆಯುತ್ತಿದೆ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ವ್ಯವಸ್ಥೆಗಳು ಮಾನವನ ಅರಿವಿನ ಸಾಮರ್ಥ್ಯವನ್ನು ಮೀರಿಸುವ ಹಂತವನ್ನು ವೇಗವಾಗಿ ತಲುಪುತ್ತಿವೆ ಎಂದು ಅವರು ಪ್ರತಿಪಾದಿಸಿದರು. ಎಐ ಕಳೆದ 10 ವರ್ಷಗಳಿಂದ ಘಾತೀಯ ಪ್ರವೃತ್ತಿಯಲ್ಲಿದೆ ಮತ್ತು ನಾವೀಗ ಆ ವಕ್ರರೇಖೆಯಲ್ಲಿ ಸಾಕಷ್ಟು ಮುನ್ನಡೆದಿದ್ದೇವೆ. ನಾನು 'ಡೇಟಾ ಸೆಂಟರ್ ನಲ್ಲಿರುವ ಪ್ರತಿಭಾವಂತರ ದೇಶ' ಎಂದು ಕರೆದಿರುವ ಹಂತಕ್ಕೆ ನಾವು ದಿನೇ ದಿನೇ ಹತ್ತಿರವಾಗುತ್ತಿದ್ದೇವೆ; ಅಂದರೆ ಹೆಚ್ಚಿನ ವಿಷಯಗಳಲ್ಲಿ ಹೆಚ್ಚಿನ ಮಾನವರಿಗಿಂತ ಹೆಚ್ಚು ಸಮರ್ಥವಾಗಿರುವ ಮತ್ತು ಅತಿಮಾನವ ವೇಗದಲ್ಲಿ ಸಂಯೋಜನೆಗೊಳ್ಳುವ ಎಐ ಏಜೆಂಟ್ ಗಳ ಗುಂಪು ಅದು. ಆ ಮಟ್ಟದ ಸಾಮರ್ಥ್ಯವು ರೋಗಗಳನ್ನು ಗುಣಪಡಿಸಲು, ಕೋಟ್ಯಂತರ ಜನರನ್ನು ಬಡತನದಿಂದ ಮೇಲೆತ್ತಲು ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ಅಸಾಧಾರಣ ಅವಕಾಶಗಳನ್ನು ತರುತ್ತದೆ, ಆದರೆ ಇದು ಗಂಭೀರ ಅಪಾಯಗಳನ್ನೂ ತರುತ್ತದೆ. ಇದು ಅತಿ ವೇಗವಾಗಿ ಸಂಭವಿಸುತ್ತಿರುವುದರಿಂದ, ಅಡೆತಡೆಗಳನ್ನು ನಿರ್ವಹಿಸಲು ಮತ್ತು ಸಮೃದ್ಧಿಯು ಸುಗಮವಾಗಿ ಹಾಗೂ ಜವಾಬ್ದಾರಿಯುತವಾಗಿ ಹಂಚಿಕೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಕಂಪನಿಗಳು ಮತ್ತು ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಗೂಗಲ್ ಸಿಇಒ ಸುಂದರ್ ಪಿಚೈ ಮಾತನಾಡಿ, ಎಐ ಅನ್ನು "ಜೀವಮಾನದ ಅತಿದೊಡ್ಡ ಪ್ಲಾಟ್‌ಫಾರ್ಮ್ ಬದಲಾವಣೆ" ಎಂದು ಬಣ್ಣಿಸಿದರು. "ನಾವು ಅತಿವೇಗದ ಪ್ರಗತಿ ಮತ್ತು ಹೊಸ ಆವಿಷ್ಕಾರಗಳ ಹೊಸ್ತಿಲಲ್ಲಿದ್ದೇವೆ, ಇದು ಉದಯೋನ್ಮುಖ ಆರ್ಥಿಕತೆಗಳು ಹಳೆಯ ಅಂತರಗಳನ್ನು ದಾಟಲು ಸಹಾಯ ಮಾಡುತ್ತದೆ. ಆದರೆ ಈ ಫಲಿತಾಂಶವು ಖಚಿತ ಅಥವಾ ಸ್ವಯಂಚಾಲಿತವಲ್ಲ. ಎಲ್ಲರಿಗೂ ನಿಜವಾಗಿಯೂ ಸಹಕಾರಿಯಾದ ಎಐ ಅನ್ನು ನಿರ್ಮಿಸಲು, ನಾವು ಧೈರ್ಯದಿಂದ ಮುನ್ನಡೆಯಬೇಕು ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಡಿಜಿಟಲ್ ವಿಭಜನೆಯು ಎಐ ವಿಭಜನೆಯಾಗಿ ಬದಲಾಗಲು ನಾವು ಬಿಡಬಾರದು" ಎಂದು ತಿಳಿಸಿದರು.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು, ಜಾಗತಿಕ ದಕ್ಷಿಣದಲ್ಲಿ ಮೊದಲ ಎಐ ಶೃಂಗಸಭೆಯನ್ನು ಆಯೋಜಿಸುವಲ್ಲಿ ಭಾರತದ ನಾಯಕತ್ವವನ್ನು ಸ್ವಾಗತಿಸಿದರು ಮತ್ತು ಕೃತಕ ಬುದ್ಧಿಮತ್ತೆಯ ಭವಿಷ್ಯವನ್ನು ಕೆಲವೇ ದೇಶಗಳ ಗುಂಪು ಅಥವಾ ಖಾಸಗಿ ಹಿತಾಸಕ್ತಿಗಳು ನಿರ್ಧರಿಸಬಾರದು ಎಂದು ಒತ್ತಿ ಹೇಳಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಕೈಗೊಂಡಿರುವ ಎರಡು ಪ್ರಮುಖ ಕ್ರಮಗಳನ್ನು ಅವರು ಎತ್ತಿ ತೋರಿಸಿದರು: 40 ಜಾಗತಿಕ ತಜ್ಞರನ್ನು ಒಳಗೊಂಡ ಎಐ ಕುರಿತಾದ ಸ್ವತಂತ್ರ ಅಂತರರಾಷ್ಟ್ರೀಯ ವೈಜ್ಞಾನಿಕ ಸಮಿತಿಯ ರಚನೆ, ಮತ್ತು ಎಲ್ಲರನ್ನೂ ಒಳಗೊಂಡ ಬಹು-ಪಾಲುದಾರರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು 'ಎಐ ಆಡಳಿತದ ಕುರಿತು ಜಾಗತಿಕ ಸಂವಾದ'ವನ್ನು ಪ್ರಾರಂಭಿಸುವುದು. ಮಾನವನ ಕರ್ತೃತ್ವವನ್ನು ಉಳಿಸಿಕೊಳ್ಳುವ ಸುರಕ್ಷತಾ ಕ್ರಮಗಳಿಗೆ ಕರೆ ನೀಡಿದ ಅವರು, ಎಐ ಭವಿಷ್ಯವನ್ನು ಕೆಲವೇ ದೇಶಗಳು ನಿರ್ಧರಿಸಲು ಸಾಧ್ಯವಿಲ್ಲ ಅಥವಾ ಅದನ್ನು ಕೆಲವೇ ಬಿಲಿಯನೇರ್ ಗಳ ಇಚ್ಛೆಗೆ ಬಿಡಬಾರದು. ನಮಗೆ ಮಾನವನ ಕರ್ತೃತ್ವ, ಮಾನವನ ಮೇಲ್ವಿಚಾರಣೆ ಮತ್ತು ಮಾನವನ ಹೊಣೆಗಾರಿಕೆಯನ್ನು ಸಂರಕ್ಷಿಸುವ ಸುರಕ್ಷತಾ ಕ್ರಮಗಳ ಅಗತ್ಯವಿದೆ. ಎಐ ಪ್ರತಿಯೊಬ್ಬರಿಗೂ ಲಭ್ಯವಿರಬೇಕು. ಅದಕ್ಕಾಗಿಯೇ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮೂಲಭೂತ ಸಾಮರ್ಥ್ಯವನ್ನು ನಿರ್ಮಿಸಲು ನಾನು 'ಎಐ ಗಾಗಿ ಜಾಗತಿಕ ನಿಧಿ'ಗೆ ಕರೆ ನೀಡುತ್ತಿದ್ದೇನೆ. ನೈಜ ಪ್ರಭಾವ ಎಂದರೆ ಜೀವನವನ್ನು ಸುಧಾರಿಸುವ ಮತ್ತು ಗ್ರಹವನ್ನು ರಕ್ಷಿಸುವ ತಂತ್ರಜ್ಞಾನವಾಗಿದೆ, ಆದ್ದರಿಂದ ಘನತೆಯೇ ಮೂಲಭೂತ ಗುಣವಾಗಿರುವಂತೆ ಎಲ್ಲರಿಗಾಗಿ ಎಐ ಅನ್ನು ನಿರ್ಮಿಸೋಣ ಎಂದು ಹೇಳಿದರು.

ಮುಖ್ಯ ಭಾಷಣ ಮಾಡಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ತಾಂತ್ರಿಕ ಪೈಪೋಟಿ ವೇಗವಾಗುತ್ತಿರುವ ಈ ಯುಗದಲ್ಲಿ ಸಾರ್ವಭೌಮ, ಸ್ವತಂತ್ರ ಮತ್ತು ಸಹಕಾರಿ ಎಐ ಅಭಿವೃದ್ಧಿಯ ಮಹತ್ವವನ್ನು ಒತ್ತಿ ಹೇಳಿದರು. ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ರಾಂತಿ ಮತ್ತು ಪ್ರಸ್ತುತ ನಡೆಯುತ್ತಿರುವ ಎಐ ರೂಪಾಂತರದ ನಡುವೆ ಸಾಮ್ಯತೆಗಳನ್ನು ಎತ್ತಿ ತೋರಿಸಿದ ಅವರು, ಎಐ ಅನ್ನು ಭೌಗೋಳಿಕ ರಾಜಕೀಯ, ಆರ್ಥಿಕ ಶಕ್ತಿ ಮತ್ತು ಜಾಗತಿಕ ಸಮತೋಲನವನ್ನು ರೂಪಿಸುವ ಒಂದು ಆಯಕಟ್ಟಿನ ಕ್ಷೇತ್ರ ಎಂದು ಬಣ್ಣಿಸಿದರು. ಭಾರತ ಮತ್ತು ಯುರೋಪ್ ಅನುಸರಿಸುತ್ತಿರುವ ಪರಸ್ಪರ ಪೂರಕ ಹಾದಿಗಳನ್ನು ಅವರು ಎತ್ತಿ ತೋರಿಸಿದರು. ಅತ್ಯಂತ ಬುದ್ಧಿವಂತ ಎಐ ಎಂದರೆ ಅದು ಅತ್ಯಂತ ದುಬಾರಿಯಾದದ್ದಲ್ಲ. ಅದು ಅತ್ಯುತ್ತಮ ವ್ಯಕ್ತಿಗಳಿಂದ ಮತ್ತು ಸರಿಯಾದ ಉದ್ದೇಶಕ್ಕಾಗಿ ನಿರ್ಮಿಸಲ್ಪಟ್ಟಿದ್ದಾಗಿರುತ್ತದೆ ಎಂದು ಅವರು ಹೇಳಿದರು. ಎಐ ಭವಿಷ್ಯವನ್ನು ನಾವೀನ್ಯತೆ ಮತ್ತು ಜವಾಬ್ದಾರಿ ಹಾಗೂ ತಂತ್ರಜ್ಞಾನ ಮತ್ತು ಮಾನವೀಯತೆಯನ್ನು ಸಂಯೋಜಿಸುವವರು ನಿರ್ಮಿಸುತ್ತಾರೆ. ಯಾವುದೇ ದೇಶವು ಕೇವಲ ವಿದೇಶಿ ಕಂಪನಿಗಳು ತಮ್ಮ ಮಾದರಿಗಳನ್ನು ಮಾರಾಟ ಮಾಡುವ ಮತ್ತು ನಾಗರಿಕರ ಡೇಟಾವನ್ನು ಡೌನ್‌ಲೋಡ್ ಮಾಡುವ ಮಾರುಕಟ್ಟೆಯಾಗಿ ಮಾತ್ರ ಸೇವೆ ಸಲ್ಲಿಸಲು ಬದ್ಧವಾಗಿಲ್ಲ. ನಾವೀನ್ಯತೆ, ಸ್ವಾತಂತ್ರ್ಯ ಮತ್ತು ಕಾರ್ಯತಂತ್ರದ ಸ್ವಾಯತ್ತತೆಗೆ ಒಂದು ಹಾದಿಯಿದೆ ಮತ್ತು ಭಾರತ ಹಾಗೂ ಫ್ರಾನ್ಸ್ ಈ ಭವಿಷ್ಯವನ್ನು ಒಟ್ಟಾಗಿ ರೂಪಿಸಲು ಸಹಾಯ ಮಾಡಲಿವೆ ಎಂದು ಅವರು ಹೇಳಿದರು.

ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಜಾಗತಿಕ ರಾಜಕೀಯ ನಾಯಕರು, ಬಹುಪಕ್ಷೀಯ ಸಂಸ್ಥೆಗಳು ಮತ್ತು ತಂತ್ರಜ್ಞಾನ ಪ್ರವರ್ತಕರ ಸಕ್ರಿಯ ಭಾಗವಹಿಸುವಿಕೆಯು; ದಿನೇ ದಿನೇ ಪರಸ್ಪರ ಬೆಸೆಯುತ್ತಿರುವ ಹಾಗೂ ವೇಗವಾಗಿ ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ, ಕೃತಕ ಬುದ್ಧಿಮತ್ತೆಯ ಭವಿಷ್ಯದ ಪಥವನ್ನು ನಿರ್ಧರಿಸುವ ಒಂದು ಅತ್ಯುನ್ನತ ಮತ್ತು ನಿರ್ಣಾಯಕ ವೇದಿಕೆಯಾಗಿ ಈ ಶೃಂಗಸಭೆಯ ಘನತೆಯನ್ನು ಸಾಬೀತುಪಡಿಸಿತು.
*****
(ಪ್ರಕಟಣೆ ಐ.ಡಿ.: 2230512)
ವಿಸಿಟರ್ ಕೌಂಟರ್ : 2