ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav AI Impact Summit 2026

ಭಾರತ-ಫ್ರಾನ್ಸ್ ಜಂಟಿ ಹೇಳಿಕೆ

ಪ್ರಕಟಣಾ ದಿನಾಂಕ: 17 FEB 2026 11:08PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಫ್ರೆಂಚ್ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್ ಅವರು 2026ರ ಫೆಬ್ರವರಿ 17 ರಿಂದ 19 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದರು ಮತ್ತು ʻಕೃತಕ ಬುದ್ಧಿಮತ್ತೆ ಪರಿಣಾಮ ಶೃಂಗಸಭೆ-2026ʼರಲ್ಲಿ ಭಾಗವಹಿಸಿದರು. ಭೇಟಿಯ ಸಮಯದಲ್ಲಿ, ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದರು ಮತ್ತು ಫೆಬ್ರವರಿ 17ರಂದು ಮುಂಬೈನಲ್ಲಿ ʻಭಾರತ-ಫ್ರಾನ್ಸ್ ನಾವೀನ್ಯತೆಯ ವರ್ಷ-2026ʼ ಅನ್ನು ಜಂಟಿಯಾಗಿ ಉದ್ಘಾಟಿಸಿದರು. ಇದು ಅಧ್ಯಕ್ಷ ಮ್ಯಾಕ್ರನ್ ಅವರ 4ನೇ ಭಾರತ ಭೇಟಿಯಾಗಿದ್ದು, ಫೆಬ್ರವರಿ 2025ರಲ್ಲಿ ಪ್ರಧಾನಿ ಮೋದಿಯವರ ಫ್ರಾನ್ಸ್ ಭೇಟಿಯ ನಂತರ ಇದು ನೆರವೇರಿದೆ.

ಈ ಸಂದರ್ಭದಲ್ಲಿ, ಮುಂಬರುವ ದಶಕಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಎರಡೂ ದೇಶಗಳ ಸಂಬಂಧವನ್ನು "ವಿಶೇಷ ಜಾಗತಿಕ ಕಾರ್ಯತಂತ್ರದ ಸಹಭಾಗಿತ್ವ"ದ ಮಟ್ಟಕ್ಕೆ ಕೊಂಡೊಯ್ಯಲು ಉಭಯ ನಾಯಕರು ಸಮ್ಮತಿಸಿದರು. ಸಂಬಂಧಗಳ ಈ ಉನ್ನತೀಕರಣವು ಭಾರತ-ಫ್ರಾನ್ಸ್ ಬಾಂಧವ್ಯದ ಬಗ್ಗೆ ಉಭಯ ನಾಯಕರು ವ್ಯಕ್ತಪಡಿಸಿದ ಹೆಚ್ಚಿನ ಮಹತ್ವಾಕಾಂಕ್ಷೆ ಮತ್ತು ಮುನ್ನೋಟವನ್ನು ಪ್ರತಿಬಿಂಬಿಸುತ್ತದೆ. ಉಭಯ ದೇಶಗಳ ಆರ್ಥಿಕತೆಗಳಲ್ಲಿ ಸಮೃದ್ಧಿ ಮತ್ತು ಸದೃಢತೆಯನ್ನು ತರಲು ನೆರವಾಗುವುದು ಮಾತ್ರವಲ್ಲದೆ, ಪರಸ್ಪರ ಭದ್ರತೆಯನ್ನು ಹೆಚ್ಚಿಸಲು ಹಾಗೂ ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯಾಗಿ ಕಾರ್ಯನಿರ್ವಹಿಸಲು ಇದು ಅನುವು ಮಾಡಿಕೊಡುತ್ತದೆ.

ಆ ಮೂಲಕ ಹೆಚ್ಚುತ್ತಿರುವ ಅನಿಶ್ಚಿತ ಜಾಗತಿಕ ಪರಿಸರದಲ್ಲಿ ಸವಾಲುಗಳನ್ನು ಎದುರಿಸಲು ಸಾಮೂಹಿಕವಾಗಿ ಕೆಲಸ ಮಾಡುವುದನ್ನು ಸಾಧ್ಯವಾಗಿಸುತ್ತದೆ. ಇದು ಸ್ಥಿರವಾದ, ನಿಯಮಾಧರಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಎರಡೂ ದೇಶಗಳು 2023ರಲ್ಲಿ ಕಾರ್ಯತಂತ್ರದ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವವನ್ನು ಆಚರಿಸಿದವು, ಈ ಸಂದರ್ಭದಲ್ಲಿ ಉಭಯ ದೇಶಗಳು 2047 ರವರೆಗೆ ದ್ವಿಪಕ್ಷೀಯ ಸಂಬಂಧಕ್ಕೆ ಹಾದಿಯನ್ನು ನಿಗದಿಪಡಿಸಲು ʻಹೊರೈಜನ್-2047 ಮಾರ್ಗಸೂಚಿʼಯನ್ನು ಅಳವಡಿಸಿಕೊಂಡವು. 2047ನೇ ವರ್ಷವು ಭಾರತದ ಸ್ವಾತಂತ್ರ್ಯದ ಶತಮಾನೋತ್ಸವ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಶತಮಾನೋತ್ಸವ ಹಾಗೂ ಕಾರ್ಯತಂತ್ರದ ಪಾಲುದಾರಿಕೆಯ 50 ವರ್ಷಗಳ ಸಂದರ್ಭವೂ ಆಗಿರುವುದು ವಿಶೇಷ.  ದ್ವಿಪಕ್ಷೀಯ ಸಹಕಾರದ ಪ್ರಗತಿ ಮತ್ತು ಉನ್ನತ ಪಾಲುದಾರಿಕೆಯ ಅನುಷ್ಠಾನ ಹಾಗೂ ನಿರ್ದಿಷ್ಟವಾಗಿ, ಆರ್ಥಿಕ ಭದ್ರತೆ, ಜಾಗತಿಕ ಸಮಸ್ಯೆಗಳು ಮತ್ತು ಜನರ ನಡುವಿನ ವಿನಿಮಯದ ಕ್ಷೇತ್ರಗಳಲ್ಲಿ ʻಹೊರೈಜನ್-2047ʼರ ಅಡಿಯಲ್ಲಿ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಲು ವಾರ್ಷಿಕ ವಿದೇಶಾಂಗ ಸಚಿವರ ಸಮಗ್ರ ಸಂವಾದ ನಡೆಸಲು ನಾಯಕರು ನಿರ್ಧರಿಸಿದರು.

ಭಾರತ ಮತ್ತು ಫ್ರಾನ್ಸ್ ದೇಶಗಳು ರಕ್ಷಣೆ ಮತ್ತು ಭದ್ರತಾ ಸಹಯೋಗದಲ್ಲಿ ಸುದೀರ್ಘ ಇತಿಹಾಸವನ್ನು ಹೊಂದಿವೆ. ರಕ್ಷಣಾ ವೇದಿಕೆಗಳ ಸಹ-ವಿನ್ಯಾಸ, ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯ ಮೇಲೆ ಇದು ಗಾಢವಾಗಿ ಗಮನಕೇಂದ್ರೀಕರಿಸಿದೆ. ಭಾರತದ ಪಾಲಿಗೆ ಫ್ರಾನ್ಸ್ ವಿಶ್ವದ ಅಗ್ರಗಣ್ಯ ರಕ್ಷಣಾ ಪಾಲುದಾರರಲ್ಲಿ ಒಂದಾಗಿ ಹೊರಹೊಮ್ಮಿದೆ. ದೊಡ್ಡ ಸಾಮರ್ಥ್ಯದ ಪರಮಾಣು ವಿದ್ಯುತ್ ಸ್ಥಾವರಗಳು ಮತ್ತು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳು ಹಾಗೂ ಸುಧಾರಿತ ಮಾಡ್ಯುಲರ್ ರಿಯಾಕ್ಟರ್‌ಗಳಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಭಾವ್ಯ ಸಹಯೋಗದ ಫಲಪ್ರದ ಚರ್ಚೆಗಳ ಮೂಲಕ ಉಭಯ ದೇಶಗಳು ನಾಗರಿಕ ಪರಮಾಣು ಶಕ್ತಿಯಲ್ಲಿ ಸಹಯೋಗವನ್ನು ಆಳಗೊಳಿಸಿವೆ. ಜಂಟಿ ಉಪಗ್ರಹ ಅಭಿವೃದ್ಧಿ, ಉಡಾವಣಾ ವಾಹನಗಳು ಹಾಗೂ ಮಾನವ ಹಾರಾಟ ಕಾರ್ಯಕ್ರಮಗಳು ಸೇರಿದಂತೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಎರಡೂ ದೇಶಗಳು ದೀರ್ಘಕಾಲೀನ ಸಹಕಾರವನ್ನು ಹೊಂದಿವೆ. ಕೃತಕ ಬುದ್ಧಿಮತ್ತೆ, ನಾವೀನ್ಯತೆ, ಸಂಶೋಧನೆ, ತಂತ್ರಜ್ಞಾನ, ಡಿಜಿಟಲ್ ಮತ್ತು ಸೈಬರ್ ಕ್ಷೇತ್ರ, ಆರೋಗ್ಯ, ಸಂಸ್ಕೃತಿ, ಆರ್ಥಿಕತೆ, ಶೈಕ್ಷಣಿಕ ಸಂಪರ್ಕಗಳು ಮತ್ತು ಜನರ ನಡುವಿನ ವಿನಿಮಯದಂತಹ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಸಹಕಾರವನ್ನು ವಿಸ್ತರಿಸಿವೆ ಮತ್ತು ವೈವಿಧ್ಯಮಯಗೊಳಿಸಿವೆ. ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆ ಸಂಪರ್ಕಗಳು ಗಾಢವಾಗಿವೆ ಮತ್ತು ಎರಡೂ ದೇಶಗಳು ವಿಶ್ವಾಸಾರ್ಹ ಮತ್ತು ಸದೃಢ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಮತ್ತು ತಮ್ಮ ಆರ್ಥಿಕ ಭದ್ರತೆಯನ್ನು ರಕ್ಷಿಸಲು ಸಹಕರಿಸುತ್ತಿವೆ. ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯ ಸ್ಥಾಪನೆಯ ಮೂಲಕ, ಭಾರತ ಮತ್ತು ಫ್ರಾನ್ಸ್ ದೇಶಗಳು ʻಭಾರತ-ಫ್ರಾನ್ಸ್ ಹೊರೈಜನ್-2047ʼ ಮಾರ್ಗಸೂಚಿಗೆ ಅನುಗುಣವಾಗಿ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಆಳವಾದ ಸಹಕಾರ ಮತ್ತು ಸಮನ್ವಯಕ್ಕೆ ಬದ್ಧವಾಗಿವೆ.

ವೈಜ್ಞಾನಿಕ ಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಸುಧಾರಣೆಯ ಜೊತೆಗೆ ಈ ಕ್ಷೇತ್ರಗಳಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ದೀರ್ಘಕಾಲೀನ ಮತ್ತು ನಿರಂತರ ಸಂಬಂಧದ ಮಹತ್ವವನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು. 2026ನೇ ಸಾಲಿನ ʻಭಾರತ-ಫ್ರಾನ್ಸ್ ನಾವೀನ್ಯತೆ ವರ್ಷʼವನ್ನು ಜಂಟಿಯಾಗಿ ಉದ್ಘಾಟಿಸಿದರು. ಈ ವರ್ಷವು ಭಾರತ ಮತ್ತು ಫ್ರಾನ್ಸ್‌ ನಡುವೆ ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸೈಬರ್‌ಸ್ಪೇಸ್‌ ಮತ್ತು ಕೃತಕ ಬುದ್ಧಿಮತ್ತೆ, ಆರೋಗ್ಯ ರಕ್ಷಣೆ, ಸುಸ್ಥಿರ ಅಭಿವೃದ್ಧಿ, ಸಾಂಸ್ಕೃತಿಕ ಮತ್ತು ಸೃಜನಶೀಲ ಆರ್ಥಿಕತೆ, ಸಂಶೋಧನೆ ಮತ್ತು ಶಿಕ್ಷಣದಂತಹ ವಿವಿಧ ಕ್ಷೇತ್ರಗಳಾದ್ಯಂತ ಗರಿಷ್ಠ ಪರಿಣಾಮದ ಸಹಯೋಗಗಳಿಗೆ ದಾರಿ ಮಾಡಲಿದೆ. ಈ ಕಾರ್ಯಕ್ರಮಗಳು ಅಸ್ತಿತ್ವದಲ್ಲಿರುವ ಸಹಯೋಗಗಳನ್ನು ಶ್ರೀಮಂತಗೊಳಿಸುವ ಹಾಗೂ ನವೋದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ಉದ್ಯಮದ ನಡುವೆ ಹೊಸ ಸಹಯೋಗವನ್ನು ಬೆಳೆಸುವ ಗುರಿಯನ್ನು ಹೊಂದಿವೆ. ಇದು ʻಸ್ಮಾರ್ಟ್ʼ, ಹೆಚ್ಚು ಸುಸ್ಥಿರ ಭವಿಷ್ಯಕ್ಕಾಗಿ ಪರಿಹಾರಗಳನ್ನು ಪರಸ್ಪರ ಸಹಯೋಗದಲ್ಲಿ ಅಭಿವೃದ್ಧಿಪಡಿಸಲು ಭಾರತ ಮತ್ತು ಫ್ರಾನ್ಸ್‌ನ ಹಂಚಿಕೆಯ ಬದ್ಧತೆಯನ್ನು ಪ್ರದರ್ಶಿಸುತ್ತದೆ.

ಭಾರತವು ʻಎಐ ಪರಿಣಾಮ ಶೃಂಗಸಭೆʼಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಅಧ್ಯಕ್ಷ ಮ್ಯಾಕ್ರನ್ ಅವರು ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದರು. ಶೃಂಗಸಭೆಯು ಅಪಾಯಗಳನ್ನು ಪರಿಹರಿಸುವುದರ ಜೊತೆಗೆ, ʻಎಐʼ ನೀಡುವ ಅವಕಾಶಗಳನ್ನು ಎತ್ತಿ ತೋರಿಸಿತು. ಫ್ರಾನ್ಸ್ ಆಯೋಜಿಸಿದ್ದ ಮತ್ತು ಫೆಬ್ರವರಿ 2025ರಲ್ಲಿ ಪ್ಯಾರಿಸ್‌ನಲ್ಲಿ ಅಧ್ಯಕ್ಷ ಮ್ಯಾಕ್ರನ್ ಮತ್ತು ಪ್ರಧಾನಿ ಮೋದಿ ಅವರ ಸಹ-ಅಧ್ಯಕ್ಷತೆಯಲ್ಲಿ ನಡೆದ ʻಎಐ ಕ್ರಿಯಾ ಶೃಂಗಸಭೆʼಯಲ್ಲಿ ಸಾಧಿಸಿದ ಪ್ರಗತಿಯನ್ನು ಎತ್ತಿ ತೋರಿತು. ಕೃತಕ ಬುದ್ಧಿಮತ್ತೆ ಕುರಿತ ಭಾರತ-ಫ್ರಾನ್ಸ್ ಘೋಷಣೆಯನ್ನು ಸ್ಮರಿಸಿದ ಉಭಯ ನಾಯಕರು ಜನಸಾಮಾನ್ಯರು, ಸಾರ್ವಜನಿಕ ಹಿತಾಸಕ್ತಿ, ಭೂಗ್ರಹ ಮತ್ತು ನಮ್ಮ ಜನರ ಪ್ರಗತಿಗೆ ಸೇವೆ ಸಲ್ಲಿಸುವಂತಹ ಸುರಕ್ಷಿತ ಹಾಗೂ ವಿಶ್ವಾಸಾರ್ಹ ಕೃತಕ ಬುದ್ಧಿಮತ್ತೆಯ ಕಡೆಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಮುಕ್ತತೆಯ ಮೂಲಕ ʻಎಐʼ ಸಂಪನ್ಮೂಲಗಳನ್ನು ಪ್ರಜಾಸತ್ತಾತ್ಮಕಗೊಳಿಸುವ ಹಾಗೂ ಜಾಗತಿಕ ʻಎಐʼ ವಿಭಜನೆಯನ್ನು ನಿವಾರಿಸುವ ತತ್ವಕ್ಕೂ ಉಭಯ ದೇಶಗಳು ಬದ್ಧತೆ ಸೂಚಿಸಿದವು. ʻಸದೃಢತೆ, ನಾವೀನ್ಯತೆ ಮತ್ತು ದಕ್ಷತೆ ಕುರಿತಾದ ಕಾರ್ಯಕಾರಿ ಪಡೆʼಯ ಸಹ-ಅಧ್ಯಕ್ಷನಾಗಿಯೂ ಫ್ರಾನ್ಸ್ ಗಮನಾರ್ಹ ಕೊಡುಗೆಯನ್ನು ನೀಡಿದೆ.

2026ರಲ್ಲಿ ಫ್ರಾನ್ಸ್ ಆಯೋಜಿಸಲಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸುವಂತೆ ಅಧ್ಯಕ್ಷ ಮ್ಯಾಕ್ರನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದರು. ಮುಖ್ಯವಾಗಿ ಜಾಗತಿಕ ಸ್ಥೂಲ ಆರ್ಥಿಕ ಅಸಮತೋಲನವನ್ನು ನಿಭಾಯಿಸುವ ಹಾಗೂ ಅಂತರರಾಷ್ಟ್ರೀಯ ಪಾಲುದಾರಿಕೆ ಮತ್ತು ಒಗ್ಗಟ್ಟಿಗೆ ಹೊಸ ಮಾದರಿಯನ್ನು ವ್ಯಾಖ್ಯಾನಿಸುವ ಪ್ರಮುಖ ವಿಷಯಗಳ ಕುರಿತು ಶೃಂಗಸಭೆಗೆ ಮುಂಚಿತವಾಗಿ ನಡೆಯುವಚರ್ಚೆಗಳು ಮತ್ತು ಪೂರ್ವಸಿದ್ಧತಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಭಾರತವನ್ನು ಆಹ್ವಾನಿಸಿದರು. ಜಿ7 ಜೊತೆಗಿನ ಭಾರತದ ದೀರ್ಘಕಾಲೀನ ಪಾಲುದಾರಿಕೆ ಮತ್ತು ಜಾಗತಿಕ ಆರ್ಥಿಕ ಅಸಮತೋಲನ, ಅಭಿವೃದ್ಧಿ ಹಣಕಾಸು, ಅಂತರರಾಷ್ಟ್ರೀಯ ಪಾಲುದಾರಿಕೆ, ಆರ್ಥಿಕ ಭದ್ರತೆ, ಸದೃಢ ಪೂರೈಕೆ ಸರಪಳಿಗಳು, ಹವಾಮಾನ ಉಪಕ್ರಮ ಮತ್ತು ಅಂತರರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡುವ ಜಾಗತಿಕ ಚರ್ಚೆಗಳಿಗೆ ರಚನಾತ್ಮಕವಾಗಿ ಬೆಂಬಲಿಸುವ ಬದ್ಧತೆಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. ಮ್ಯಾಕ್ರನ್‌ ಅವರ ಆಹ್ವಾನವನ್ನು ಮೋದಿ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಭಾರತದ ಭಾಗವಹಿಸುವಿಕೆಯು ಜಾಗತಿಕ ಸವಾಲುಗಳನ್ನು ಎದುರಿಸಲು ಹಾಗೂ ಹೆಚ್ಚು ಸಮತೋಲಿತ, ಎಲ್ಲರನ್ನೂ ಒಳಗೊಂಡ ಮತ್ತು ಸದೃಢ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಇಬ್ಬರೂ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು. ಜಾಗತಿಕ ಸವಾಲುಗಳನ್ನು, ವಿಶೇಷವಾಗಿ ಸ್ಥೂಲ ಆರ್ಥಿಕ ಸಮಸ್ಯೆಗಳನ್ನು ಒಟ್ಟಾಗಿ ಎದುರಿಸುವ ಸಲುವಾಗಿ ಸಾಮೂಹಿಕ ಪ್ರಯತ್ನಗಳ ಮಹತ್ವವನ್ನು ಉಭಯ ನಾಯಕರು ಒತ್ತಿ ಹೇಳಿದರು.

ʻಕೀನ್ಯಾದ ನೈರೋಬಿಯಲ್ಲಿ 2026ರ ಮೇ 11 ಮತ್ತು 12ರಂದು ನಡೆಯಲಿರುವ "ಆಫ್ರಿಕಾ ಫಾರ್ವರ್ಡ್: ಆಫ್ರಿಕಾ ಮತ್ತು ಫ್ರಾನ್ಸ್ ನಡುವಿನ ಪಾಲುದಾರಿಕೆ" ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರಿಗೆ ಅಧ್ಯಕ್ಷ ರುಟೊ ಅವರೊಂದಿಗೆ ಜಂಟಿಯಾಗಿ ನೀಡಿದ ಆಹ್ವಾನವನ್ನು ಅಧ್ಯಕ್ಷ ಮ್ಯಾಕ್ರನ್ ಸ್ಮರಿಸಿದರು. ಫ್ರಾನ್ಸ್ ಮತ್ತು ಆಫ್ರಿಕನ್ ದೇಶಗಳೊಂದಿಗೆ ಭಾರತದ ದೀರ್ಘಕಾಲೀನ ಮತ್ತು ಸ್ನೇಹಪರ ಸಂಬಂಧವನ್ನು ಪರಿಗಣಿಸಿ, ಈ ಆಹ್ವಾನಕ್ಕೆ ಪ್ರಧಾನಿ ಮೋದಿ ಅವರು ಧನ್ಯವಾದ ಅರ್ಪಿಸಿದರು. ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ, ವಿಶೇಷವಾಗಿ ಇಂಧನ ಪರಿವರ್ತನೆ, ಕೃತಕ ಬುದ್ಧಿಮತ್ತೆ, ಆರೋಗ್ಯ, ಕೃಷಿ ಮತ್ತು ನೀಲಿ ಆರ್ಥಿಕತೆಯಲ್ಲಿ ಭಾರತದ ಬೆಂಬಲವನ್ನು ಮೋದಿ ಅವರು ಪುನರುಚ್ಚರಿಸಿದರು.

ಇಂಡೋ-ಪೆಸಿಫಿಕ್ ಪ್ರದೇಶ ಮತ್ತು ಅದರಾಚೆಗೆ ನಿಯಮಾಧಾರಿತ ವ್ಯವಸ್ಥೆಗೆ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ಸಂಬಂಧದ ಉನ್ನತಿಯು ಭವಿಷ್ಯದ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಸಹಕಾರವನ್ನು ಬಲಪಡಿಸುತ್ತದೆ, ಆ ಮೂಲಕ ಅವರ ಸಾರ್ವಭೌಮತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಸ್ವಾಯತ್ತತೆಯನ್ನು ಬಲಪಡಿಸುತ್ತದೆ. ಜೊತೆಗೆ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಸಹಕಾರದ ಮೂಲಕ ನಮ್ಮ ಜಗತ್ತು ಎದುರಿಸುತ್ತಿರುವ ಪ್ರಮುಖ ಸವಾಲುಗಳಿಗೆ ಒಟ್ಟಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ.

ಸಮಾನ ಮತ್ತು ಶಾಂತಿಯುತ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಉಳಿಸಿಕೊಳ್ಳಲು, ಒತ್ತಡದ ಜಾಗತಿಕ ಸವಾಲುಗಳನ್ನು ಎದುರಿಸಲು, ತಾಂತ್ರಿಕ ಮತ್ತು ಆರ್ಥಿಕ ಇತರ ಕ್ಷೇತ್ರಗಳಲ್ಲಿ ಮುಂಬರುವ ಸವಾಲುಗಳಿಗೆ ಜಗತ್ತನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಸುಧಾರಿತ ಹಾಗೂ ಪರಿಣಾಮಕಾರಿ ಬಹುಪಕ್ಷೀಯ ಸಂಬಂಧ ಬೆಳೆಸಲು ಉಭಯ ನಾಯಕರು ತಮ್ಮ ಕರೆಯನ್ನು ಪುನರುಚ್ಚರಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ತುರ್ತು ಅಗತ್ಯವನ್ನು ಉಭಯ ನಾಯಕರು ಒತ್ತಿ ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಷಯಗಳು ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ನಿಕಟವಾಗಿ ಸಮನ್ವಯ ಸಾಧಿಸಲು ಅವರು ಒಪ್ಪಿದರು. ಇದೇವೇಳೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಕುರಿತ ಅಂತರ ಸರ್ಕಾರಿ ಮಾತುಕತೆಗಳನ್ನು ಮುಕ್ತಾಯಗೊಳಿಸಲು ತಮ್ಮ ಪ್ರಯತ್ನಗಳನ್ನು ಮುಂದುವರಿಸಲು ಸಂಕಲ್ಪ ತೊಟ್ಟರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ಫ್ರಾನ್ಸ್ ತನ್ನ ದೃಢವಾದ ಬೆಂಬಲವನ್ನು ಪುನರುಚ್ಚರಿಸಿತು. ಸಾಮೂಹಿಕ ದೌರ್ಜನ್ಯದ ಪ್ರಕರಣಗಳಲ್ಲಿ ʻವೀಟೋʼ ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಸಂಭಾಷಣೆಗಳನ್ನು ಬಲಪಡಿಸಲು ಅವರು ಒಪ್ಪಿಕೊಂಡರು. ಅವರು ದೀರ್ಘಕಾಲೀನ ಜಾಗತಿಕ ಸವಾಲುಗಳು ಮತ್ತು ಪ್ರಸ್ತುತ ಅಂತರರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದರು. ಜೊತೆಗೆ ತಮ್ಮ ತೊಡಗಿಸಿಕೊಳ್ಳುವಿಕೆಯನ್ನು ತೀವ್ರಗೊಳಿಸಲು ಒಪ್ಪಿಕೊಂಡರು.

ಐರೋಪ್ಯ ಒಕ್ಕೂಟ ಮತ್ತು ಭಾರತ ಸಂಬಂಧಗಳನ್ನು ಬಲಪಡಿಸುವ ಪ್ರಮುಖ ಮಹತ್ವವನ್ನು ಉಭಯ ನಾಯಕರು ಒತ್ತಿಹೇಳಿದರು. ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಐತಿಹಾಸಿಕ ಶೃಂಗಸಭೆಯನ್ನು ಅವರು ಸ್ವಾಗತಿಸಿದರು, ಈ ಸಮಯದಲ್ಲಿ ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದದ(ಎಫ್‌ಟಿಎ) ಮಾತುಕತೆಗಳು ಮುಕ್ತಾಯಗೊಂಡವು.  ಈ ಮುಕ್ತ ವ್ಯಾಪಾರ ಒಪ್ಪಂದವು ಭಾರತ, ಫ್ರಾನ್ಸ್ ಮತ್ತು ಯುರೋಪ್ ನಡುವೆ ಮತ್ತಷ್ಟು ಆರ್ಥಿಕ ಸಹಯೋಗಕ್ಕೆ ಅವಕಾಶಗಳನ್ನು ತೆರೆಯುತ್ತದೆ. ವ್ಯವಹಾರಗಳ ಸ್ಪರ್ಧಾತ್ಮಕತೆಯನ್ನು ಬಲಪಡಿಸುತ್ತದೆ, ಸುಸ್ಥಿರ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕ ಮೌಲ್ಯ ಸರಪಳಿಗಳ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ. ಐರೋಪ್ಯ ಒಕ್ಕೂಟ ಮತ್ತು ಭಾರತದ ವ್ಯೂಹಾತ್ಮಕ ಸ್ವಾಯತ್ತತೆಗೆ ಕೊಡುಗೆ ನೀಡುವ ಭದ್ರತೆ ಮತ್ತು ರಕ್ಷಣಾ ಪಾಲುದಾರಿಕೆಯ ತೀರ್ಮಾನವನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಕಡಲ ಭದ್ರತೆ, ಸೈಬರ್ ಭದ್ರತೆ, ಹೈಬ್ರಿಡ್ ಅಪಾಯಗಳು, ಬಾಹ್ಯಾಕಾಶ ಮತ್ತು ಭಯೋತ್ಪಾದನೆ ನಿಗ್ರಹದಂತಹ ಸಾಮಾನ್ಯ ಭದ್ರತಾ ಸವಾಲುಗಳ ಬಗ್ಗೆ ಆಳವಾದ ವಿನಿಮಯ ಮತ್ತು ಸಹಕಾರಕ್ಕೆ ಇದು ಚೌಕಟ್ಟನ್ನು ಒದಗಿಸುತ್ತದೆ. ಜೊತೆಗೆ ಪರಸ್ಪರ ಪ್ರಯೋಜನಕಾರಿ ರಕ್ಷಣಾ ಕೈಗಾರಿಕಾ ಸಹಯೋಗವನ್ನು ಉತ್ತೇಜಿಸುತ್ತದೆ.

ಉಕ್ರೇನ್-ರಷ್ಯಾ ಯುದ್ಧದ ಬಗ್ಗೆ ಉಭಯ ನಾಯಕರು ತಮ್ಮ ಕಳವಳವನ್ನು ಪುನರುಚ್ಚರಿಸಿದರು. ಇದು ಅಪಾರ ಮಾನವ ಸಂಕಟ ಮತ್ತು ನಕಾರಾತ್ಮಕ ಜಾಗತಿಕ ಪರಿಣಾಮಗಳನ್ನು ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ಯುದ್ಧವನ್ನು ನಿಲ್ಲಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ವಿಶ್ವಸಂಸ್ಥೆಯ ಸಂವಿಧನ ಹಾಗೂ ಸ್ವಾತಂತ್ರ್ಯ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಐಕ್ಯತೆ ಸೇರಿದಂತೆ ಅಂತರರಾಷ್ಟ್ರೀಯ ಕಾನೂನಿನ ತತ್ವಗಳಿಗೆ ಅನುಗುಣವಾಗಿ ಮಾತುಕತೆಯ ಮಹತ್ವವನ್ನು ಒತ್ತಿ ಹೇಳಿದರು. ರಾಜತಾಂತ್ರಿಕತೆಯ ಮೂಲಕ ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಗೆ ಬೆಂಬಲ ವ್ಯಕ್ತಪಡಿಸಿದರು.

ಇರಾನ್ ಮತ್ತು ಆ ಪ್ರದೇಶದಲ್ಲಿನ ಇತ್ತೀಚಿನ ಕಳವಳಕಾರಿ ಬೆಳವಣಿಗೆಗಳ ಬಗ್ಗೆ ಎರಡೂ ಕಡೆಯವರು ಚರ್ಚಿಸಿದರು. ಶಾಂತಿಯುತ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿದ ʻನಿರ್ಣಯ 2803ʼ ಮತ್ತು ʻನ್ಯೂಯಾರ್ಕ್ ಘೋಷಣೆʼಯಲ್ಲಿ ಪ್ರತಿಪಾದಿಸಲಾದ ತತ್ವಗಳಿಗೆ ಅನುಗುಣವಾಗಿ ಗಾಜಾದ ಶಾಂತಿ ಯೋಜನೆಯ ಅನುಷ್ಠಾನಕ್ಕೆ ಉಭಯ ನಾಯಕರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ನಿರ್ಣಯವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲು ಅವರು ಎಲ್ಲಾ ಪಕ್ಷಗಳನ್ನು ಪ್ರೋತ್ಸಾಹಿಸಿದರು. ನ್ಯಾಯಯುತ ಮತ್ತು ಶಾಶ್ವತ ಶಾಂತಿಯ ಪ್ರಯತ್ನಗಳನ್ನು ಬೆಂಬಲಿಸಲು ಉಭಯ ನಾಕರು ತಮ್ಮ ಸಿದ್ಧತೆಯನ್ನು ಪುನರುಚ್ಚರಿಸಿದರು. ಗಾಜಾ ಪಟ್ಟಿಯಾದ್ಯಂತ ತ್ವರಿತ, ಸುರಕ್ಷಿತ ಮತ್ತು ಅಡೆತಡೆಯಿಲ್ಲದ ನೆರವು ವಿತರಣೆಯ ಅಗತ್ಯವನ್ನು ಒತ್ತಿ ಹೇಳಿದರು. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ದ್ವಿ-ರಾಜ್ಯ ಪರಿಹಾರದ ಅನುಷ್ಠಾನದ ಆಧಾರದ ಮೇಲೆ ನ್ಯಾಯಯುತ ಮತ್ತು ಶಾಶ್ವತ ಪರಿಹಾರಕ್ಕಾಗಿ ಭಾರತ ಮತ್ತು ಫ್ರಾನ್ಸ್‌ನ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.

I. ಭದ್ರತೆ ಮತ್ತು ಸಾರ್ವಭೌಮತ್ವಕ್ಕಾಗಿ ಪಾಲುದಾರಿಕೆ

ಫ್ರಾನ್ಸ್ ಮತ್ತು ಭಾರತದ ನಡುವಿನ ಆಳವಾದ ಮತ್ತು ದೀರ್ಘಕಾಲೀನ ರಕ್ಷಣಾ ಸಹಕಾರವನ್ನು ಪ್ರಧಾನಮಂತ್ರಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಅವರು ಸ್ಮರಿಸಿದರು. 2024ರಲ್ಲಿ ಅಂಗೀಕರಿಸಲಾದ ಮಹತ್ವಾಕಾಂಕ್ಷೆಯ ರಕ್ಷಣಾ ಕೈಗಾರಿಕಾ ಮಾರ್ಗಸೂಚಿಗೆ ಅನುಗುಣವಾಗಿ ವಾಯು, ನೌಕಾ ಮತ್ತು ಭೂ ವ್ಯವಸ್ಥೆಗಳು ಹಾಗೂ ಉದಯೋನ್ಮುಖ ಉಭಯ ಬಳಕೆಯ ತಂತ್ರಜ್ಞಾನಗಳು ಸೇರಿದಂತೆ ಸುಧಾರಿತ ರಕ್ಷಣಾ ವೇದಿಕೆಗಳ ಜಂಟಿ ಸಂಶೋಧನೆ, ಸಹ-ವಿನ್ಯಾಸ, ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯನ್ನು ತೀವ್ರಗೊಳಿಸಲು ಒಪ್ಪಿಕೊಂಡರು. ಈ ಭೇಟಿಯ ವೇಳೆ ಎರಡೂ ದೇಶಗಳ ರಕ್ಷಣಾ ಸಚಿವರ ನಡುವೆ ವಾರ್ಷಿಕ ರಕ್ಷಣಾ ಮಾತುಕತೆಯನ್ನು ಎದುರು ನೋಡುತ್ತಿರುವುದಾಗಿ ಅವರು ಹೇಳಿದರು. ನವೆಂಬರ್ 2025ರಲ್ಲಿ ʻಡಿಜಿಎʼ ಮತ್ತು ʻಡಿಆರ್‌ಡಿಒʼ ನಡುವೆ ರಕ್ಷಣಾ ತಂತ್ರಜ್ಞಾನಗಳಲ್ಲಿನ ಸಹಕಾರಕ್ಕಾಗಿ ತಾಂತ್ರಿಕ ವ್ಯವಸ್ಥೆಗೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು. ಇದು ಎರಡು ಸಂಸ್ಥೆಗಳ ನಡುವೆ ಸಂಶೋಧನೆ ಮತ್ತು ಅಭಿವೃದ್ಧಿ ಪಾಲುದಾರಿಕೆಗೆ ವೇದಿಕೆಯನ್ನು ಒದಗಿಸುತ್ತದೆ. ಭಾರತ ಮತ್ತು ಫ್ರಾನ್ಸ್ ನಡುವಿನ ಉನ್ನತ ತಂತ್ರಜ್ಞಾನ ಸಹಯೋಗದಲ್ಲಿ ನಂಬಿಕೆಯನ್ನು ಬಲಪಡಿಸಲು, ಸ್ಪರ್ಧಾತ್ಮಕ ಮಿಲಿಟರಿ ಅನುಕೂಲತೆಯನ್ನು ಉಳಿಸಿಕೊಳ್ಳಲು ಹಾಗೂ ಪೂರೈಕೆ ಸರಪಳಿಯ ದುರ್ಬಲತೆಗಳನ್ನು ತಗ್ಗಿಸಲು ಗುರುತಿಸಲಾದ ಕ್ಷೇತ್ರಗಳಲ್ಲಿ ಹೊಸ ಮತ್ತು ನಿರ್ಣಾಯಕ ತಂತ್ರಜ್ಞಾನಗಳನ್ನು ಸಹ-ಅಭಿವೃದ್ಧಿಪಡಿಸುವ ಅವಕಾಶಗಳನ್ನು ಅನ್ವೇಷಿಸಲು ಒಪ್ಪಿದರು. ಇದಕ್ಕಾಗಿ ಜಂಟಿ ಸುಧಾರಿತ ತಂತ್ರಜ್ಞಾನ ಅಭಿವೃದ್ಧಿ ಪಡೆಯನ್ನು ಸ್ಥಾಪಿಸಲು ಇಬ್ಬರೂ ನಾಯಕರು ಸಹಮತಿಸಿದರು.

ಹೆಲಿಕಾಪ್ಟರ್ ಮತ್ತು ಜೆಟ್ ಎಂಜಿನ್‌ಗಳಲ್ಲಿ ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಕುರಿತು ನಡೆಯುತ್ತಿರುವ ಚರ್ಚೆಗಳು ಹಾಗೂ ಎರಡೂ ಕಡೆಯ ಸಂಬಂಧಿತ ಸಂಸ್ಥೆಗಳ ನಡುವಿನ ಅತ್ಯುತ್ತಮ ಸಹಕಾರವನ್ನು ಅವರು ಸ್ವಾಗತಿಸಿದರು. ನಿರ್ದಿಷ್ಟವಾಗಿ, 26 ರಫೇಲ್-ಮೆರೈನ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದವನ್ನು ಉಭಯ ನಾಯಕರು ಶ್ಲಾಘಿಸಿದರು. ರಕ್ಷಣಾ ವೈಮಾನಿಕ ಕ್ಷೇತ್ರದಲ್ಲಿ, ವಿಶೇಷವಾಗಿ ʻಮೇಕ್ ಇನ್ ಇಂಡಿಯಾʼ ಉಪಕ್ರಮದ ಅಡಿಯಲ್ಲಿ ಯುದ್ಧ ವಿಮಾನಗಳು ಮತ್ತು ಯುದ್ಧ ವಿಮಾನ ಎಂಜಿನ್‌ಗ ತಯಾರಿಕೆ ಕ್ಷೇತ್ರದಲ್ಲಿ ತಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಇತ್ತೀಚಿನ ಸಕಾರಾತ್ಮಕ ಬೆಳವಣಿಗೆಗಳನ್ನು ಅವರು ಸ್ವಾಗತಿಸಿದರು. ʻಸಫ್ರಾನ್ʼ ಸಮೂಹದ ಸಂಬಂಧಿತ ಘಟಕಗಳು ಮತ್ತು ಅವರ ಭಾರತೀಯ ಸಹವರ್ತಿಗಳ ನಡುವಿನ ಅತ್ಯುತ್ತಮ ಸಹಕಾರವನ್ನು ಅವರು ಉಲ್ಲೇಖಿಸಿದರು. ಭಾರತೀಯ ಬಹು ಉದ್ದೇಶ ಬಳಕೆಯ ಹೆಲಿಕಾಪ್ಟರ್ (ಐಎಂಆರ್‌ಎಚ್) ಅಭಿವೃದ್ಧಿಗಾಗಿ ʻಸಫ್ರಾನ್ʼ ಮತ್ತು ʻಎಚ್ಎಎಲ್ʼ ನಡುವೆ ನಡೆಯುತ್ತಿರುವ ಪಾಲುದಾರಿಕೆಯನ್ನು ಅವರು ಶ್ಲಾಘಿಸಿದರು. ʻಲೀಪ್ ಎಂಜಿನ್‌ʼನ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ (ಎಂಆರ್‌ಒ) ಘಟಕದ ಉದ್ಘಾಟನೆ, ರಫೇಲ್ ವಿಮಾನಗಳಲ್ಲಿ ಅಳವಡಿಸಲಾದ ʻಎಂ-88ʼ ಎಂಜಿನ್‌ಗಳಿಗೆ ʻಎಂಆರ್‌ಒʼ ಘಟಕ ಸ್ಥಾಪನೆ ಹಾಗೂ ಭಾರತದಲ್ಲಿ ʻಹ್ಯಾಮರ್ʼ ಕ್ಷಿಪಣಿಗಳನ್ನು ಉತ್ಪಾದಿಸಲು ʻಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ʼ ಜೊತೆ ಜಂಟಿ ಯೋಜನೆಯನ್ನ ಎರಡೂ ಕಡೆಯವರು ಸ್ವಾಗತಿಸಿದರು. ಭಾರತದ ಮೊದಲ ಖಾಸಗಿ ವಲಯದ ಹೆಲಿಕಾಪ್ಟರ್ ಉತ್ಪಾದನಾ ಘಟಕವಾದ ʻಎಚ್-125 ಫೈನಲ್ ಅಸೆಂಬ್ಲಿ ಲೈನ್‌ʼ ಅನ್ನು ಉಭಯ ನಾಯಕರು ಜಂಟಿಯಾಗಿ ಉದ್ಘಾಟಿಸಿದರು. ಇದು ಐತಿಹಾಸಿಕ ʻಮೇಕ್ ಇನ್ ಇಂಡಿಯಾʼದ ಮೈಲಿಗಲ್ಲಾಗಿದ್ದು, ʻಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ʼ ಮತ್ತು ʻಏರ್‌ಬಸ್‌ʼ ಸಂಸ್ಥೆಗಳ ಶಕ್ತಿಯುತ ಸಹಯೋಗವನ್ನು ಸೂಚಿಸುತ್ತದೆ. ಇಲ್ಲಿ ಉತ್ಪಾದಿಸುವ ಕಾಪ್ಟರ್‌ಗಳನ್ನು ಭಾರತದ ಬೆಳೆಯುತ್ತಿರುವ ಮಾರುಕಟ್ಟೆ ಪೂರೈಸುವುದರ ಜೊತೆಗೆ ಮೂರನೇ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಭಾರತದ ʻಪಿನಾಕಾ ಎಂಬಿಆರ್‌ಎಲ್ʼ ಬಗ್ಗೆ ಫ್ರಾನ್ಸ್‌ ಕಡೆಯಿಂದ ಹೆಚ್ಚುತ್ತಿರುವ ಆಸಕ್ತಿಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.

2025ರ ಜನವರಿ 15ರಂದು ಭಾರತೀಯ ನೌಕಾಪಡೆಗೆ 6ನೇ ಜಲಾಂತರ್ಗಾಮಿ ನೌಕೆಯನ್ನು ಹಸ್ತಾಂತರಿಸಲಾದ ʻಮೇಡ್-ಇನ್-ಇಂಡಿಯಾ ಸ್ಕಾರ್ಪೀನ್ ಕಾರ್ಯಕ್ರಮʼದ(ಪಿ75-ಕಲ್ವಾರಿ) ಯಶಸ್ಸನ್ನು ಉಭಯ ನಾಯಕರು ಎತ್ತಿ ತೋರಿದರು. ಜೊತೆಗೆ ಜಲಾಂತರ್ಗಾಮಿ ನೌಕೆ ಕುರಿತಾಗಿ ಸಹಕಾರದ ಮುಂದುವರಿಕೆಯನ್ನು ಸ್ವಾಗತಿಸಿದರು.

2025ರಲ್ಲಿ ನಡೆದ ಮೂರು ಪ್ರಮುಖ ದ್ವಿಪಕ್ಷೀಯ ಸಮರಾಭ್ಯಾಸಗಳು (ʻವರುಣʼ, ʻಶಕ್ತಿʼ ಮತ್ತು ʻಗರುಡʼ) ಹಾಗೂ ಫ್ರಾನಸ್‌ನ ಬಾಹ್ಯಾಕಾಶ ಮಿಲಿಟರಿ ಸಮರಾಭ್ಯಾಸಗಳಲ್ಲಿ ಭಾರತದ ಭಾಗವಹಿಸುವಿಕೆ ಸೇರಿದಂತೆ ಬಹುಪಕ್ಷೀಯ ಸಮರಾಭ್ಯಾಸಗಳಲ್ಲಿ ಎರಡೂ ಕಡೆಯ ಭಾಗವಹಿಸುವಿಕೆಯನ್ನು ಉಭಯ ನಾಯಕರು ಶ್ಲಾಘಿಸಿದರು. ಎಲ್ಲಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಮಿಲಿಟರಿ ವ್ಯಾಯಾಮಗಳನ್ನು ನಿಯಮಿತವಾಗಿ ನಡೆಸುತ್ತಿರುವುದನ್ನು ಅವರು ಸ್ವಾಗತಿಸಿದರು. ಉಭಯ ದೇಶಗಳ ನಡುವೆ ನಿಯಮಿತ ʻಪೋರ್ಟ್‌ ಕಾಲ್‌ʼ ಅನ್ನು ಅವರು ಸ್ವಾಗತಿಸಿದರು. 2026ರಲ್ಲಿ ಆಯಾ ಸೇನೆಗಳಲ್ಲಿ ಅಧಿಕಾರಿಗಳ ನಿಯೋಜನೆಯನ್ನು ಉಭಯ ನಾಯಕರು ಸ್ವಾಗತಿಸಿದರು, ಇದು ನಮ್ಮ ಸಶಸ್ತ್ರ ಪಡೆಗಳ ನಡುವೆ ಪರಸ್ಪರ ಜ್ಞಾನವನ್ನು ಬಲಪಡಿಸಲು ಕೊಡುಗೆ ನೀಡುತ್ತದೆ. ಉಭಯ ದೇಶಗಳ ಸಶಸ್ತ್ರ ಪಡೆಗಳ ನಡುವೆ ಕಾರ್ಯಾಚರಣೆಯ ಕಾರ್ಯಕ್ರಮಗಳನ್ನು ಹೆಚ್ಚಿಸಲು ಎದುರು ನೋಡುತ್ತಿರುವುದಾಗಿ ಉಭಯ ನಾಯಕರು ಹೇಳಿದರು.

2024ರ ಜನವರಿಯಲ್ಲಿ ಸಹಿ ಹಾಕಲಾದ ʻಆಶಯ ಪತ್ರʼಕ್ಕೆ ಅನುಗುಣವಾಗಿ ರಕ್ಷಣಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಗಾಢವಾಗಿಸುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ʻಡಿಆರ್‌ಡಿಒʼ ಮತ್ತು ʻಡಿಜಿಎʼ ನಡುವಿನ ತಾಂತ್ರಿಕ ಒಪ್ಪಂದದ ವ್ಯಾಪ್ತಿಯಲ್ಲಿ ರಕ್ಷಣಾ ಕ್ಷೇತ್ರವೂ ಸೇರಿದ್ದು ಅದು  ಪರಸ್ಪರ ಆಸಕ್ತಿಯ ನಾವಿನ್ಯತೆ, ರಾಜ್ಯ ಮಟ್ಟದ ಮತ್ತು ಕೈಗಾರಿಕಾ ಸಹಕಾರಕ್ಕೆ ನೀತಿ ಚೌಕಟ್ಟನ್ನು ಒದಗಿಸುತ್ತದೆ.

ಹಸಿರು ಮತ್ತು ಡಿಜಿಟಲ್ ಆರ್ಥಿಕತೆ, ಉದಯೋನ್ಮುಖ ತಂತ್ರಜ್ಞಾನಗಳು ಹಾಗೂ ಸುಧಾರಿತ ಉತ್ಪಾದನೆಯನ್ನು ಬೆಂಬಲಿಸುವಲ್ಲಿ ನಿರ್ಣಾಯಕ ಖನಿಜಗಳ ಪ್ರಮುಖ ಪಾತ್ರವನ್ನು ಉಭಯ ನಾಯಕರು ಗುರುತಿಸಿದರು. ವೈವಿಧ್ಯಮಯ, ಸುಸ್ಥಿರ, ಜವಾಬ್ದಾರಿಯುತ ಮತ್ತುಸದೃಢ ಪೂರೈಕೆ ಸರಪಳಿಗಳನ್ನು ರಚಿಸುವ ಸಲುವಾಗಿ ನಿರ್ಣಾಯಕ ಖನಿಜಗಳು ಮತ್ತು ಅಪರೂಪದ ಖನಿಜಗಳ ಪರಿಶೋಧನೆ, ಹೊರತೆಗೆಯುವಿಕೆ, ಸಂಸ್ಕರಣೆ ಮತ್ತು ಮರುಬಳಕೆ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಆಳಗೊಳಿಸಲು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ, ಫ್ರಾನ್ಸ್ ಮತ್ತು ಭಾರತದ ನಡುವಿನ ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿ ಸಹಕಾರದ ಉದ್ದೇಶದ ಜಂಟಿ ಘೋಷಣೆಯನ್ನು ಎರಡೂ ಕಡೆಯವರು ಸ್ವಾಗತಿಸಿದರು.

ಉಭಯ ನಾಯಕರು ʻಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ʼನಲ್ಲಿ (ಐಎಂಇಸಿ) ಸಹಕರಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಜಾಗತಿಕ ವ್ಯಾಪಾರ, ಸಂಪರ್ಕ ಮತ್ತು ಸಮೃದ್ಧಿಯನ್ನು ಮರುರೂಪಿಸುವಲ್ಲಿ ಮತ್ತು ಉತ್ತೇಜಿಸುವಲ್ಲಿ ಅದರ ಪರಿವರ್ತನೆಯ ಸಾಮರ್ಥ್ಯವನ್ನು ಗುರುತಿಸಿದರು. ಯೋಜನೆಯ ಸುತ್ತಲಿನ ಪ್ರಾಥಮಿಕ ಚರ್ಚೆಗಳನ್ನು ಶ್ಲಾಘಿಸಿದ ಅವರು, 2026ರಲ್ಲಿ ಈ ಉಪಕ್ರಮವನ್ನು ಮುಂದುವರಿಸಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಲು ಮೊದಲ ʻಐಎಂಇಸಿ ಸಚಿವರ ಸಭೆʼಯನ್ನು ಪ್ರೋತ್ಸಾಹಿಸಿದರು.

ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನೊಂದಿಗೆ ತ್ರಿಪಕ್ಷೀಯ ಸ್ವರೂಪಗಳಲ್ಲಿ ಸಹಕಾರವನ್ನು ಅವರು ಶ್ಲಾಘಿಸಿದರು ಮತ್ತು ಈ ಉಪಕ್ರಮಗಳ ಅಡಿಯಲ್ಲಿ ಪರಸ್ಪರ ಗುರುತಿಸಲಾದ ಕೆಲಸದ ಕ್ಷೇತ್ರಗಳನ್ನು ಕಾರ್ಯಗತಗೊಳಿಸಲು ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರಗಳ ಅಧಿಕಾರಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಕ್ತ, ಸಮೃದ್ಧ ಮತ್ತು ನಿಯಮಾಧಾರಿತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. 2018ರ 'ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತ-ಫ್ರಾನ್ಸ್ ಸಹಕಾರದ ಜಂಟಿ ಕಾರ್ಯತಂತ್ರದ ದೃಷ್ಟಿಕೋನ' ಮತ್ತು 2023ರ 'ಭಾರತ-ಫ್ರಾನ್ಸ್ ಇಂಡೋ-ಪೆಸಿಫಿಕ್ ಮಾರ್ಗಸೂಚಿ'ಗೆ ಅನುಗುಣವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ನಿಕಟ ಸಹಯೋಗಕ್ಕೆ ಕರೆ ನೀಡಿದರು. ಇಂಡೋ-ಪೆಸಿಫಿಕ್ ಸಾಗರ ಉಪಕ್ರಮ (ಐಪಿಒಐ) ಅಡಿಯಲ್ಲಿ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ಭಾರತದ ಅಧ್ಯಕ್ಷತೆಯಲ್ಲಿ ʻಹಿಂದೂ ಮಹಾಸಾಗರ ರಿಮ್ ಅಸೋಸಿಯೇಷನ್ʼನಲ್ಲಿ ಸಹಕಾರವನ್ನು ಬಲಪಡಿಸಲು ನಿರೀಕ್ಷಿಸುತ್ತಿರುವುದಾಗಿ ಅವರು ತಿಳಿಸಿದರು. ಇಂಡೋ-ಪೆಸಿಫಿಕ್ ವಲಯದ ದೇಶಗಳಲ್ಲಿ ಭಾರತ ಮತ್ತು ಫ್ರಾನ್ಸ್‌ ಆರ್ಥಿಕ ನೆರವಿನೊಂದಿಗೆ ʻಅಂತಾರಾಷ್ಟ್ರೀಯ ಸೌರ ಮೈತ್ರಿಕೂಟʼದ(ಐಎಸ್ಎ) ಮೂಲಕ ಹೊಸ ಸೌರ ಇಂಧನ ತರಬೇತಿಗಳು ಮತ್ತು ಮೂರನೇ ದೇಶಗಳಲ್ಲಿ ವಿಪತ್ತು ಎದುರಿಸುವಿಕೆಯನ್ನು ಬಲಪಡಿಸಲು ಕೈಗೊಂಡ ಕ್ರಮಗಳನ್ನು ಸ್ವಾಗತಿಸಿದರು. ʻವಿಪತ್ತು ಪರಿಹಾರ ಮೂಲಸೌಕರ್ಯಗಳ ಒಕ್ಕೂಟʼ(ಸಿಡಿಆರ್‌ಐ) ಮತ್ತು ʻಎಎಫ್‌ಡಿʼ ಪಡೆಯ ನಡುವೆ ಒಪ್ಪಂದಕ್ಕೆ ಸಹಿ ಹಾಕುವುದು ಸೇರಿದಂತೆ ಇತ್ತೀಚಿನ ಉಪಕ್ರಮಗಳು ಇದರಲ್ಲಿ ಸೇರಿವೆ. ಇಂಡೋ-ಪೆಸಿಫಿಕ್‌ ಪ್ರದೇಶದ ತೃತೀಯ ದೇಶಗಳ ಹವಾಮಾನ ಮತ್ತು ʻಸುಸ್ಥಿರ ಅಭಿವೃದ್ಧಿ ಗುರಿʼ ಕೇಂದ್ರೀತ ಯೋಜನೆಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ʻಇಂಡೋ-ಪೆಸಿಫಿಕ್ ತ್ರಿಕೋನ ಅಭಿವೃದ್ಧಿ ಸಹಕಾರʼ (ಐಪಿಟಿಡಿಸಿ) ಪ್ರಗತಿಯನ್ನು ಅವರು ಶ್ಲಾಘಿಸಿದರು. ಡಿಜಿಟಲ್ ನವೋದ್ಯಮಗಳು, ಆರೋಗ್ಯ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಜಂಟಿಯಾಗಿ ಗುರುತಿಸಿದ ಯೋಜನೆಗಳನ್ನು ಎರಡೂ ಕಡೆಯವರು ಒಟ್ಟಿಗೆ ಜಾರಿಗೆ ತರಲಿದ್ದಾರೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ, ಅವರು ʻಸಿಎನ್ಇಎಸ್ʼ ಮತ್ತು ʻಇಸ್ರೋʼ ನಡುವಿನ ಪಾಲುದಾರಿಕೆಯ ಬಲವನ್ನು ಶ್ಲಾಘಿಸಿದರು. ತಮ್ಮ ಬಾಹ್ಯಾಕಾಶ ಉದ್ಯಮಗಳ ನಡುವೆ ಆಳವಾದ ಸಹಯೋಗದ ಅಭಿವೃದ್ಧಿಯನ್ನು ಬೆಂಬಲಿಸಿದರು. ಈ ಉದ್ದೇಶವನ್ನು ಮುಂದುವರಿಸಲು ಭಾರತ-ಫ್ರಾನ್ಸ್ ವ್ಯೂಹಾತ್ಮಕ ಬಾಹ್ಯಾಕಾಶ ಸಂವಾದದ ಮೊದಲ ಎರಡು ಅಧಿವೇಶನಗಳ ಗಣನೀಯ ಕೊಡುಗೆಯನ್ನು ಅವರು ಉಲ್ಲೇಖಿಸಿದರು. 2026ರಲ್ಲಿ ಮೂರನೇ ಅಧಿವೇಶನವನ್ನು ಶೀಘ್ರವಾಗಿ ಕರೆಯುವಂತೆ ಕರೆ ನೀಡಿದರು. ರಕ್ಷಣಾ ಕ್ಷೇತ್ರದಲ್ಲಿ ಸಹಕಾರದ ʻಆಶಯ ಪತ್ರʼಕ್ಕೆ ಅನುಗುಣವಾಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಾರ್ವತ್ರಿಕ ಪ್ರವೇಶ ಮತ್ತು ಬಾಹ್ಯಾಕಾಶ ಪರಿಸ್ಥಿತಿಯ ಜಾಗೃತಿಯನ್ನು ಹೆಚ್ಚಿಸುವ ವಿಷಯದಲ್ಲಿ ತಮ್ಮ ಸಮನ್ವಯವನ್ನು ಬಲಪಡಿಸಲು ಉಭಯ ನಾಯಕರು ಒಪ್ಪಿಕೊಂಡರು. ಬಾಹ್ಯಾಕಾಶದಲ್ಲಿ ಬಹುಪಕ್ಷೀಯತೆಯನ್ನು ಬಲಪಡಿಸಲು ಮತ್ತು ಭಾಗವಹಿಸುವಿಕೆಯನ್ನು ದೃಢಪಡಿಸಲು ಜುಲೈ 2026ರಲ್ಲಿ ಫ್ರಾನ್ಸ್ ಆಯೋಜಿಸಿದ ಅಂತರರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆಯನ್ನು ಭಾರತ ಸ್ವಾಗತಿಸಿತು.

ಉಭಯ ನಾಯಕರು ತಮ್ಮ ಪ್ರಮುಖ ಸಾಗರಸಶೋಧನಾ ಸಂಸ್ಥೆಗಳ ನಡುವಿನ ಸಹಕಾರವನ್ನು ಆಳಗೊಳಿಸುವ ಮಹತ್ವವನ್ನು ಒತ್ತಿ ಹೇಳಿದರು. ಸಾಗರ-ಬಾಹ್ಯಾಕಾಶ ಸಂಬಂಧದಲ್ಲಿ ಸಹಯೋಗವನ್ನು ಅಭಿವೃದ್ಧಿಪಡಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ವಿಶೇಷವಾಗಿ ಸಾಗರಸಂಶೋಧನಾ ನೌಕಾಯಾನಕ್ಕೆ ಸಂಬಂಧಿಸಿದಂತೆ ಸಾಗರ ವೀಕ್ಷಣೆಯನ್ನು ಸುಧಾರಿಸಲು ಹಾಗೂ ಸಾಗರದ ಸಮೃದ್ಧಿ ಮತ್ತು ರಕ್ಷಣೆಯನ್ನು ಸಮನ್ವಯಗೊಳಿಸುವ ಸುಸ್ಥಿರ ನಿರ್ವಹಣೆಯನ್ನು ಬೆಂಬಲಿಸಲು ʻಸಿಎನ್ಇಎಸ್ʼ ಮತ್ತು ʻಐಎನ್‌ಸಿಒಐಎಸ್ʼ ನಡುವಿನ ಸಹಯೋಗವನ್ನು ಬಲಪಡಿಸುವ ಮೂಲಕ ಇದನ್ನು ನಿರ್ವಹಿಸಲು ಉದ್ದೇಶಿಸಲಾಗಿದೆ.

ಸೈಬರ್ ವಲಯದಲ್ಲಿ, ಭಾರತೀಯ ಮತ್ತು ಫ್ರಾನ್ಸ್‌ನ ಕೈಗಾರಿಕೆಗಳ ನಡುವಿನ ಸಮನ್ವಯ ಹೆಚ್ಚಳ ಆಧಾರದ ಮೇಲೆ ಬಲವಾದ ದ್ವಿಪಕ್ಷೀಯ ಸಹಭಾಗಿತ್ವವನ್ನು ಉಭಯ ನಾಯಕರು ಶ್ಲಾಘಿಸಿದರು. ನಿಯಮಿತ ದ್ವಿಪಕ್ಷೀಯ ಸೈಬರ್ ಸಂವಾದ ಮತ್ತು ಕಾರ್ಯಕ್ರಮಗಳ ಮೂಲಕ ಸೈಬರ್ ಸಹಕಾರವನ್ನು ಬಲಪಡಿಸುವುದನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಮುಂದಿನ ಸಂವಾದ 2026ರಲ್ಲಿ ನಡೆಯಬೇಕೆಂದು ಅವರು ಕರೆ ನೀಡಿದರು. ಸೈಬರ್ ಕ್ಷೇತ್ರದ ವ್ಯೂಹಾತ್ಮಕ ಮಹತ್ವವನ್ನು ಉಭಯ ನಾಯಕರು ಪುನರುಚ್ಚರಿಸಿದರು ಮತ್ತು ಅಂತಾರಾಷ್ಟ್ರೀಯ ಕಾನೂನಿನ ಅನ್ವಯಿಕಗಳು ಮತ್ತು ಸೈಬರ್ ಕ್ಷೇತ್ರದಲ್ಲಿ ಜವಾಬ್ದಾರಿಯುತ ರಾಷ್ಟ್ರಗಳ ನೀತಿ ಚೌಕಟ್ಟಿನ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ತಮ್ಮ ಸಮನ್ವಯವನ್ನು ಬಲಪಡಿಸುವ ಇಚ್ಛೆಯನ್ನು ಪುನರುಚ್ಚರಿಸಿದರು. ಹಾಗೆಯೇ ದುರುದ್ದೇಶಪೂರಿತ ಸೈಬರ್ ಸಾಧನಗಳು ಮತ್ತು ಅಭ್ಯಾಸಗಳ ಪ್ರಸರಣದಿಂದ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.

ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಇಬ್ಬರೂ ನಾಯಕರು ಬಲವಾಗಿ ಖಂಡಿಸಿದರು. ಅಧ್ಯಕ್ಷ ಮ್ಯಾಕ್ರನ್ ಅವರು ಏಪ್ರಿಲ್ 2025ರ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದರು ಮತ್ತು ಭಯೋತ್ಪಾದನೆಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಭಾರತದ ಹಕ್ಕಿಗೆ ಬೆಂಬಲ ಸೂಚಿಸಿದರು. ನವದೆಹಲಿಯ ಕೆಂಪು ಕೋಟೆಯ ಬಳಿ 2025ರ ನವೆಂಬರ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ಅವರು ಖಂಡಿಸಿದರು. ʻವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿರ್ಬಂಧ ಸಮಿತಿʼ ಪಟ್ಟಿ ಮಾಡಿರುವ ಭಯೋತ್ಪಾದಕರು ಮತ್ತು ಭಯೋತ್ಪಾದಕ ಗುಂಪುಗಳು ಹಾಗೂ ಅವುಗಳ ಅಂಗಸಂಸ್ಥೆಗಳ ವಿರುದ್ಧದ ಹೋರಾಟದಲ್ಲಿ ಸಹಕರಿಸುವ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ʻಹಣಕಾಸು ಕ್ರಿಯಾಪಡೆʼಗೆ(ಎಫ್ಎಟಿಎಫ್) ಅನುಗುಣವಾಗಿ ಭಯೋತ್ಪಾದಕರ ಸುರಕ್ಷಿತ ತಾಣಗಳು ಮತ್ತು ಮೂಲಸೌಕರ್ಯಗಳನ್ನು ನಿರ್ಮೂಲನೆ ಮಾಡಲು; ಭಯೋತ್ಪಾದಕ ಜಾಲಗಳನ್ನು ಭೇದಿಸಲು ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ತಡೆಯಲು ಎಲ್ಲಾ ದೇಶಗಳಿಗೆ ಉಭಯ ನಾಯಕರು ಕರೆ ನೀಡಿದರು. ವಿಶ್ವಸಂಸ್ಥೆ, ʻಎಫ್ಎಟಿಎಫ್ʼ ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಎರಡೂ ದೇಶಗಳು ಪುನರುಚ್ಚರಿಸಿದವು. 2026ರ ಮೇ ತಿಂಗಳಲ್ಲಿ, ಫ್ರಾನ್ಸ್ ಆಯೋಜನೆಯಲ್ಲಿ ನಡೆಯಲಿರುವ ಮುಂದಿನ ʻನೋ ಮನಿ ಫಾರ್ ಟೆರರ್ʼ(ಎನ್ಎಂಎಫ್‌ಟಿ) ಸಮ್ಮೇಳನಕ್ಕೆ ಭಾರತ ಬೆಂಬಲ ವ್ಯಕ್ತಪಡಿಸಿತು.

ʻಭಾರತದ ರಾಷ್ಟ್ರೀಯ ಭದ್ರತಾ ಪಡೆʼ(ಎನ್ಎಸ್‌ಜಿ) ಮತ್ತು ಗ್ರೂಪ್ ಡಿ'ಇಂಟರ್ವೆನ್ಷನ್ ಡೆ ಲಾ ಜೆಂಡರ್ಮೆರಿ ನ್ಯಾಷನಲ್ (ಜಿಐಜಿಎನ್) ನಡುವೆ 2025ರ ನವೆಂಬರ್‌ನಲ್ಲಿ ಭಯೋತ್ಪಾದನೆ ನಿಗ್ರಹದ ಸಹಕಾರಕ್ಕಾಗಿ ʻಆಶಯʼಪತ್ರಕ್ಕೆ ಸಹಿ ಬಿದ್ದಿರುವುದನ್ನು ಇಬ್ಬರೂ ನಾಯಕರು ಶ್ಲಾಘಿಸಿದರು. 2025ರಲ್ಲಿ ಪರಸ್ಪರರ ದೇಶಗಳಲ್ಲಿ ʻಮಿಲಿಪೋಲ್ʼ ಪ್ರದರ್ಶನಗಳನ್ನು ಆಯೋಜಿಸುವಲ್ಲಿ ಉಭಯ ದೇಶಗಳ ನಡುವಿನ ಪರಸ್ಪರ ಬೆಂಬಲವನ್ನು ಅವರು ಶ್ಲಾಘಿಸಿದರು. ಜೊತೆಗೆ ನವದೆಹಲಿ ಮತ್ತು ಪ್ಯಾರಿಸ್ನಲ್ಲಿ ಕ್ರಮವಾಗಿ ʻಮಿಲಿಪೋಲ್-2027ʼರ ಯಶಸ್ವಿ ಆಯೋಜನೆಯನ್ನು ಎದುರು ನೋಡುತ್ತಿರುವುದಾಗಿ ಹೇಳಿದರು. 2025ರ ಸೆಪ್ಟೆಂಬರ್‌ನಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಸಂವಾದದ ಫಲಿತಾಂಶಗಳನ್ನು ಉಭಯ ನಾಯಕರು ಸ್ವಾಗತಿಸಿದರು. ಇದು ಹೆಚ್ಚುತ್ತಿರುವ ಭಾರತ-ಫ್ರಾನ್ಸ್ ಭಯೋತ್ಪಾದನಾ ನಿಗ್ರಹ ಮತ್ತು ಗುಪ್ತಚರ ಸಹಕಾರವನ್ನು ಪ್ರತಿಬಿಂಬಿಸುತ್ತದೆ.

II. ಭೂ ಗ್ರಹಕ್ಕಾಗಿ ಪಾಲುದಾರಿಕೆ

ಹೆಚ್ಚುತ್ತಿರುವ ಹವಾಮಾನ ವೈಪರೀತ್ಯದ ತೀವ್ರತೆ ಮತ್ತು ಪುನರಾವರ್ತೆನೆಯಿಂದ ಗುರುತಿಸಲ್ಪಟ್ಟ ಹವಾಮಾನ ಬದಲಾವಣೆಯ ಗಂಭೀರ ಪರಿಣಾಮಗಳನ್ನು ಉಭಯ ನಾಯಕರು ಗುರುತಿಸಿದರು. ಪ್ಯಾರಿಸ್ ಒಪ್ಪಂದದ ಮಹತ್ವ ಹಾಗೂ ಸುಸ್ಥಿರ ಜೀವನಶೈಲಿಗೆ ಉತ್ತೇಜನವನ್ನು ಪುನರುಚ್ಚರಿಸಿದರು. ಅದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಿಕಟವಾಗಿ ಸಹಕರಿಸಲು ಹಾಗೂ ಈ ನಿಟ್ಟಿನಲ್ಲಿ ಜಾಗತಿಕ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸಲು ಕೈಜೋಡಿಸಲು ಅವರು ಸಹಮತಿಸಿದರು.  ಇದರಲ್ಲಿ ಜಾಗತಿಕ ಸರಾಸರಿ ತಾಪಮಾನದ ಹೆಚ್ಚಳವನ್ನು ಕೈಗಾರಿಕಾ-ಪೂರ್ವ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇರುವಂತೆ ನೋಡುವುದು ಮತ್ತು ತಾಪಮಾನ ಹೆಚ್ಚಳವನ್ನು ಕೈಗಾರಿಕಾ-ಪೂರ್ವ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವ ಪ್ರಯತ್ನಗಳನ್ನು ಮುಂದುವರಿಸುವುದು ಸೇರಿವೆ. ಹವಾಮಾನ ಉಪಕ್ರಮದ ಆಧಾರವಾಗಿ ವಿಜ್ಞಾನದ ಪಾತ್ರವನ್ನು ಸಮರ್ಥಿಸುವ ಮತ್ತು ಹವಾಮಾನ ಬದಲಾವಣೆ ಕುರಿತ ʻಅಂತರ ಸರ್ಕಾರಿ ಸಮಿತಿʼಯ(ಐಪಿಸಿಸಿ) ಕಾರ್ಯವನ್ನು ಬೆಂಬಲಿಸುವ ತಮ್ಮ ಸಂಕಲ್ಪವನ್ನು ಫ್ರಾನ್ಸ್ ಮತ್ತು ಭಾರತ ಪುನರುಚ್ಚರಿಸಿದವು. 2024 ರಿಂದ ʻವಿಪತ್ತು ಪರಿಹಾರ ಮೂಲಸೌಕರ್ಯಗಳ ಒಕ್ಕೂಟʼ(ಸಿಡಿಆರ್‌ಐ) ಮತ್ತು 2018ರಿಂದ ʻಅಂತಾರಾಷ್ಟ್ರೀಯ ಸೌರ ಒಕ್ಕೂಟʼದ(ಐಎಸ್ಎ) ಫ್ರಾನ್ಸ್-ಭಾರತ ಅಧ್ಯಕ್ಷತೆಯ ವೇಳೆ ಬಹುಪಕ್ಷೀಯ ವೇದಿಕೆಗಳಲ್ಲಿ ಕೈಗೊಂಡ ದ್ವಿಪಕ್ಷೀಯ ಸಹಕಾರವನ್ನು ಅವರು ಸ್ವಾಗತಿಸಿದರು. ಭಾರತ ಮೂಲದ ಈ ಎರಡು ಒಕ್ಕೂಟಗಳಿಗೆ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. 2025 ರಲ್ಲಿ ʻಸಿಡಿಆರ್‌ಐʼನ ಅಂತರರಾಷ್ಟ್ರೀಯ ಸಮ್ಮೇಳನದ ಸಹ-ಅಧ್ಯಕ್ಷತೆಯನು ಫ್ರಾನ್ಸ್‌ ವಹಿಸಿತ್ತು. ಇದು ಎರಡೂ ಒಕ್ಕೂಟಗಳಿಗೆ ಭಾರತ ಮತ್ತು ಫ್ರಾನ್ಸ್‌ನ ದೃಢವಾದ ಬೆಂಬಲವನ್ನು ಪ್ರತಿಬಿಂಬಿಸುತ್ತದೆ. ಪ್ಯಾರಿಸ್‌ನಲ್ಲಿ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ ಐರೋಪ್ಯ ಕಚೇರಿ ಸ್ಥಾಪನೆಗಾಗಿ ನಡೆಯುತ್ತಿರುವ ಚರ್ಚೆಗಳನ್ನು ಅವರು ಸ್ವಾಗತಿಸಿದರು. ಕಟ್ಟಡಗಳ ನಿರ್ಮಾಣ ವಲಯದಲ್ಲಿ ʻಇಂಗಾಲಮುಕ್ತೀಕರಣʼ (ಡಿಕಾರ್ಬನೈಸೇಶನ್) ಮತ್ತು ಸದೃಢತೆಗಾಗಿ ಉಭಯ ದೇಶಗಳು ತೊಡಗಿಸಿಕೊಳ್ಳಲು ಸಮ್ಮತಿಸಿದರು. ವಿಶೇಷವಾಗಿ ʻಚೈಲೋಟ್ ಘೋಷಣೆʼ ಮತ್ತು ಅದರ ʻಕಟ್ಟಡಗಳು ಮತ್ತು ಹವಾಮಾನಕ್ಕಾಗಿ ಅಂತರ ಸರಕಾರಿ ಮಂಡಳಿʼ ಮೂಲಕ ಹಾಗೂ ʻಉದ್ಯಮ ಪರಿವರ್ತನೆಗಾಗಿ ನಾಯಕತ್ವ ಪಡೆʼ(ಲೀಡ್ಐಟಿ) ಉಪಕ್ರಮ ಸೇರಿದಂತೆ ಕಷ್ಟಕರವಾದ ಕ್ಷೇತ್ರಗಳನ್ನು ಇಂಗಾಲಮುಕ್ತ ಮಾಡುವ ಪ್ರಯತ್ನಗಳಿಗೆ ಬೆಂಬಲವನ್ನು ಇದು ಸೂಚಿಸುತ್ತದೆ.

ಹವಾಮಾನ ಮತ್ತು ಪರಿಸರ ವಿಷಯಗಳಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಬಲವಾದ ದ್ವಿಪಕ್ಷೀಯ ಸಹಕಾರವನ್ನು ಉಭಯ ನಾಯಕರು ಶ್ಲಾಘಿಸಿದರು. ನವೀಕರಿಸಬಹುದಾದ ಇಂಧನ ಸಹಕಾರಕ್ಕಾಗಿ ಭಾರತದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯʼ ಹಾಗೂ ʻಆರ್ಥಿಕತೆ, ಹಣಕಾಸು ಮತ್ತು ಕೈಗಾರಿಕಾ ಮತ್ತು ಡಿಜಿಟಲ್ ಸಾರ್ವಭೌಮತ್ವ ಸಚಿವಾಲಯʼದ ನಡುವಿನ ಒಪ್ಪಂದದ ನವೀಕರಣವನ್ನು ಅವರು ಸ್ವಾಗತಿಸಿದರು. ʻಎಎಫ್‌ಡಿ ಪಡೆʼಯ ಪಾಲ್ಗೊಳ್ಳುವಿಕೆಯೊಂದಿಗೆ ಭಾರತದಲ್ಲಿ ನಗರ ಸಾರಿಗೆ, ಇಂಧನ ಪರಿವರ್ತನೆ, ಹಸಿರು ಹಣಕಾಸು, ಜೀವವೈವಿಧ್ಯ ಸಂರಕ್ಷಣೆ ಮತ್ತು ವಿಪತ್ತು ನಿರ್ವಹಣೆಯ ಯೋಜನೆಗಳಲ್ಲಿನ ದ್ವಿಪಕ್ಷೀಯ ಸಹಕಾರದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದಲ್ಲಿ ಇಂಧನ ಪರಿವರ್ತನೆಯ ಪರಿಣಾಮಗಳ ಹೊಸ ಸ್ಥೂಲ ಆರ್ಥಿಕ ಮಾದರಿಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ನೀತಿ ಆಯೋಗ ಮತ್ತು ʻಎಎಫ್‌ಡಿ ಪಡೆʼಯ ನಡುವಿನ ʻಆಶಯ ಪತ್ರʼದ ಮೇಲಿನ ಚರ್ಚೆಗಳಲ್ಲಿನ ಪ್ರಗತಿಯನ್ನು ಅವರು ಉಲ್ಲೇಖಿಸಿದರು.

ಜೂನ್ 2025ರಲ್ಲಿ ʻನೈಸ್ʼನಲ್ಲಿ ನಡೆದ ʻವಿಶ್ವಸಂಸ್ಥೆಯ ಸಾಗರ ಸಮ್ಮೇಳನʼ(ಯುಎನ್ಒಸಿ -3) ಯಶಸ್ಸನ್ನು ಉಭಯ ನಾಯಕರು ಸ್ವಾಗತಿಸಿದರು. ಎಲ್ಲರನ್ನೂ ಒಳಗೊಂಡ ಮತ್ತು ಸಮಗ್ರ ಅಂತಾರಾಷ್ಟ್ರೀಯ ಸಾಗರ ಆಡಳಿತ ವ್ಯವಸ್ಥೆಯ ಆಧಾರಸ್ತಂಭಗಳಲ್ಲಿ ಒಂದಾದ, ʻರಾಷ್ಟ್ರೀಯ ನ್ಯಾಯವ್ಯಾಪ್ತಿಯನ್ನು ಮೀರಿದ ಪ್ರದೇಶಗಳಲ್ಲಿ ಸಮುದ್ರ ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯ ಒಪ್ಪಂದʼ ಜಾರಿಗೆ ಬರುವುದನ್ನು ಫ್ರಾನ್ಸ್ ಮತ್ತು ಭಾರತ ಸ್ವಾಗತಿಸಿವೆ. ಬಹುಪಕ್ಷೀಯತೆ, ವಿಜ್ಞಾನ ಮತ್ತು ಭವಿಷ್ಯದ ಪೀಳಿಗೆಗೆ ಈ ಒಪ್ಪಂದವು ನೀಡುವ ಪ್ರಮುಖ ಕೊಡುಗೆಯ ಬಗ್ಗೆ ಉಲ್ಲೇಖಿಸಿದ ನಾಯಕರು, ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯ ರಾಷ್ಟ್ರಗಳ ಅನುಮೋದನೆಯ ಮಹತ್ವವನ್ನು ಒಪ್ಪಿಕೊಂಡರು. ಸಾಗರ ಜೀವವೈವಿಧ್ಯತೆಯನ್ನು ರಕ್ಷಿಸುವ ನಿರ್ಣಾಯಕ ಮಹತ್ವವನ್ನು ಮನಗಂಡ ಫ್ರಾನ್ಸ್ ಮತ್ತು ಭಾರತ ವಿಶ್ವಾದ್ಯಂತ ಸಮುದ್ರ ಸಂರಕ್ಷಿತ ಪ್ರದೇಶಗಳ ವಿಸ್ತರಣೆಗೆ ಕರೆ ನೀಡಿದವು. ʻಕುನ್ಮಿಂಗ್-ಮಾಂಟ್ರಿಯಲ್ ಜಾಗತಿಕ ಜೀವವೈವಿಧ್ಯ ಒಪ್ಪಂದʼದ ಸಂಪೂರ್ಣ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಭಾರತ ಮತ್ತು ಫ್ರಾನ್ಸ್ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದವು. ಫ್ರಾನ್ಸ್ ಮತ್ತು ಭಾರತ ಸಾಗರದ ಪರಿಶೋಧನೆ ಮತ್ತು ವೀಕ್ಷಣೆಯಲ್ಲಿ ತಮ್ಮ ಸಹಕಾರವನ್ನು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದವು. ಇದರಲ್ಲಿ ʻಆಳ ಸಮುದ್ರ ಕುರಿತಾದ ಒಪ್ಪಂದʼದ ಅನುಷ್ಠಾನ, ಅಂತಾರಾಷ್ಟ್ರೀಯ ಸಮುದ್ರ ಪ್ರದೇಶಗಳ ಆಡಳಿತವನ್ನು ಬಲಪಡಿಸಲು ಹಾಗೂ ಹೊಸ ಸಮುದ್ರ ಸಂರಕ್ಷಿತ ಪ್ರದೇಶಗಳ ಅಭಿವೃದ್ಧಿಗೆ ವಿಶ್ವಾಸಾರ್ಹ ವೈಜ್ಞಾನಿಕ ದತ್ತಾಂಶದ ಸೃಷ್ಟಿ ಮತ್ತು ವಿನಿಮಯ ಸೇರಿದೆ.

ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಕಡಿಮೆ ಇಂಗಾಲದ ಆರ್ಥಿಕತೆಯತ್ತ ಪರಿವರ್ತನೆಗೊಳ್ಳಲು ಕಡಿಮೆ ಇಂಗಾಲ ಉತ್ಪಾದಿಸುವ ಇಂಧನಗಳ ಪರ್ಯಾಯವನ್ನು ಅಧ್ಯಕ್ಷ ಮ್ಯಾಕ್ರನ್ ಅವರು ಗುರುತಿಸಿದರು. ಅದರಲ್ಲೂ ಪರಮಾಣು ಶಕ್ತಿಯ ಮಹತ್ವವನ್ನು ಒತ್ತಿ ಹೇಳಿದ ಅವರು, 2047ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು ಸಾಧಿಸುವ ಭಾರತದ ಮಹತ್ವಾಕಾಂಕ್ಷೆಯ ಗುರಿ ಹಾಗೂ ಈ ವಲಯದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ನೀಡುವುದು ಸೇರಿದಂತೆ ಪರಮಾಣು ಕ್ಷೇತ್ರದಲ್ಲಿ ಭಾರತದ ಇತ್ತೀಚಿನ ಸುಧಾರಣೆಗಳನ್ನು ಶ್ಲಾಘಿಸಿದರು. ಸಂಶೋಧನೆ, ಕೌಶಲ್ಯ ಅಭಿವೃದ್ಧಿಯಿಂದ ಕೈಗಾರಿಕಾ ಅನ್ವಯಿಕೆಗಳವರೆಗೆ ಮೌಲ್ಯ ಸರಪಳಿಯಲ್ಲಿ ಪರಮಾಣು ಶಕ್ತಿಯಲ್ಲಿ ಭಾರತ-ಫ್ರಾನ್ಸ್ ಸಹಕಾರವನ್ನು ಗಾಢವಾಗಿಸಲು ಮತ್ತು ಭಾರತದ ಇಂಧನ ಮಿಶ್ರಣದಲ್ಲಿ ಪ್ರಮುಖ ಆಧಾರಸ್ತಂಭವನ್ನಾಗಿ ಮಾಡಲು ಸಹಯೋಗದ ಸಾಧ್ಯತೆಗಳನ್ನು ಅನ್ವೇಷಿಸಲು ನಾಯಕರು ಸಹಮತಿಸಿದರು. ʻಜೈತಾಪುರ ಪರಮಾಣು ವಿದ್ಯುತ್ ಸ್ಥಾವರʼ ಯೋಜನೆ ಕುರಿತಾಗಿ ಮುಂದುವರಿದ ಚರ್ಚೆಗಳು ಸೇರಿದಂತೆ ನಾಗರಿಕ ಪರಮಾಣು ಇಂಧನ ಕುರಿತ ವಿಶೇಷ ಕಾರ್ಯಪಡೆಯ ನಿಯಮಿತ ಸಭೆಗಳ ಬಗ್ಗೆ ಅವರು ಗಮನ ಸೆಳೆದರು. ಇದೇ ಸಂದರ್ಭದಲ್ಲಿ, 2025ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ʻ6ನೇ ವಿಶ್ವ ಪರಮಾಣು ಪ್ರದರ್ಶನʼದಲ್ಲಿ (ಡಬ್ಲ್ಯುಎನ್ಇ) ಭಾರತೀಯ ಕಂಪನಿಗಳು ಮತ್ತು ಉದ್ಯಮದ ಪ್ರತಿನಿಧಿಗಳು ಭಾಗವಹಿಸಿದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. ಇದೇವೇಳೆ, ʻಐಎಇಎʼ ಸಹಕಾರದೊಂದಿಗೆ ಫ್ರಾನ್ಸ್‌ನಲ್ಲಿ ನಡೆಯಲಿರುವ ʻಎರಡನೇ ವಿಶ್ವ ಪರಮಾಣು ಇಂಧನ ಶೃಂಗಸಭೆʼಯಲ್ಲಿ ಭಾರತದ ಭಾಗವಹಿಸುವಿಕೆಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ, ಭಾರತದ ಪರಮಾಣು ಇಂಧನ ಇಲಾಖೆ(ಡಿಎಇ) ಮತ್ತು ಫ್ರಾನ್ಸ್‌ನ ʻಪರಮಾಣು ಶಕ್ತಿ ಮತ್ತು ಪರ್ಯಾಯ ಇಂಧನ ಆಯೋಗʼ (ಸಿಇಎ) ನಡುವಿನ ದೀರ್ಘಕಾಲೀನ ಸಂಬಂಧವನ್ನು ನಾಯಕರು ಸ್ವಾಗತಿಸಿದರು. ಶಾಂತಿಯುತ ಉದ್ದೇಶಗಳಿಗಾಗಿ ಪರಮಾಣು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮತ್ತು ಹೆಚ್ಚಿನ ಸಹಕಾರಕ್ಕೆ ಕರೆ ನೀಡಿದರು. ಇದಲ್ಲದೆ, ಉಭಯ ನಾಯಕರು ತಮ್ಮ ತಮ್ಮ ನಿಯಂತ್ರಕ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವ ಸಾಧ್ಯತೆಯನ್ನು ಪರಿಶೀಲಿಸಲು ಒಪ್ಪಿದರು.

ಸಣ್ಣ ಮತ್ತು ಸುಧಾರಿತ ಮಾಡ್ಯುಲರ್ ರಿಯಾಕ್ಟರ್‌ಗಳ (ಎಸ್ಎಂಆರ್/ಎಎಂಆರ್) ವಿಚಾರದಲ್ಲಿ ಸಹಕಾರವನ್ನು ಹೆಚ್ಚಿಸುವ ಕುರಿತು ಭಾರತ ಮತ್ತು ಫ್ರಾನ್ಸ್ ನಡುವೆ 2025ರಲ್ಲಿ ಸಹಿ ಹಾಕಲಾದ ʻಆಶಯ ಘೋಷಣೆʼಯನ್ನು(ಡಿಒಐ)  ನಾಯಕರು ಸ್ಮರಿಸಿದರು. ಸುರಕ್ಷತೆ, ಭದ್ರತೆ ಮತ್ತು ಪ್ರಸರಣ ರಹಿತ ಅತ್ಯುನ್ನತ ಮಾನದಂಡಗಳನ್ನು ಅನ್ವಯಿಸುವ ಬದ್ಧತೆಯೂ ಇದರ ಭಾಗವಾಗಿರುವುದನ್ನು ಅವರು ಉಲ್ಲೇಖಿಸಿದರು. ಈ ವಲಯದಲ್ಲಿ ಫ್ರೆಂಚ್ ನವೋದ್ಯಮ ಕಂಪನಿಗಳು ಮತ್ತು ಸಂಬಂಧಿತ ಭಾರತೀಯ ಕಂಪನಿಗಳ ನಡುವಿನ ಸಹಕಾರವನ್ನು ಬಲಪಡಿಸಲು ಎರಡೂ ಕಡೆಯ ಪ್ರಯತ್ನಗಳ ಬಗ್ಗೆ ಗಮನ ಸೆಳೆದರು. ಪ್ರತ್ಯೇಕವಾಗಿ, ಈ ʻಡಿಒಐʼನ ಚೌಕಟ್ಟಿನೊಳಗೆ, ಫ್ರಾನ್ಸ್‌ನ ʻಪರಮಾಣು ಶಕ್ತಿ ಮತ್ತು ಪರ್ಯಾಯ ಇಂಧನ ಆಯೋಗ (ಸಿಇಎ) ಹಾಗೂ ಭಾರತದ ಪರಮಾಣು ಶಕ್ತಿ ಇಲಾಖೆ (ಡಿಎಇ) ನಡುವೆ ʻಎಸ್ಎಂಆರ್ / ಎಎಂಆರ್ʼ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಹಕಾರವನ್ನು ಸ್ಥಾಪಿಸುವ ಸಾಧ್ಯತೆಯನ್ನು ಅನ್ವೇಷಿಸಲು ಉಭಯ ದೇಶಗಳು ಸಹಮತಿಸಿದವು.

ದ್ವಿಪಕ್ಷೀಯ ವ್ಯಾಪಾರದಲ್ಲಿನ ಸುಸ್ಥಿರ ಬೆಳವಣಿಗೆ ಮತ್ತು ದೇಶಗಳ ನಡುವಿನ ಬಲವಾದ ದ್ವಿಮುಖ ಹೂಡಿಕೆಗಳನ್ನು ನಾಯಕರು ಸ್ವಾಗತಿಸಿದರು. ʻಎಂಎಸ್ಎಂಇʼಗಳು, ನವೋದ್ಯಮಗಳು, ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆ ಮತ್ತು ನಾವೀನ್ಯತೆ ಆಧರಿತ ಉದ್ಯಮಗಳು ಸೇರಿದಂತೆ ಬಳಕೆಯಾಗದ ಆರ್ಥಿಕ ಸಾಮರ್ಥ್ಯವನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ, ಈ ಭೇಟಿಯ ವೇಳೆ ʻಭಾರತ-ಫ್ರಾನ್ಸ್ ಸಿಇಒ ಸಭೆʼಯನ್ನು ಆಯೋಜಿಸಿರುವುದಕ್ಕೆ ಉಭಯ ನಾಯಕರು ಸಂತಸ ವ್ಯಕ್ತಪಡಿಸಿದರು. ಈ ವರ್ಷ ಆರ್ಥಿಕ ಮತ್ತು ಹಣಕಾಸು ಮಾತುಕತೆ ನಡೆಸುವ ಬದ್ಧತೆಯನ್ನು ಅವರು ಹಂಚಿಕೊಂಡರು. ಎರಡೂ ದೇಶಗಳ ಕಂಪನಿಗಳ ನಡುವೆ, ವಿಶೇಷವಾಗಿ ವಿಮಾನಯಾನ, ಇಂಧನ ಮತ್ತು ಸರಕು-ಸಾಗಣೆ, ಕೃಷಿ-ಆಹಾರ, ದೂರಸಂಪರ್ಕ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವ್ಯಾಪಾರ ಸಂಬಂಧಗಳು ಗಾಢವಾಗುತ್ತಿರುವ ಬಗ್ಗೆ ನಾಯಕರು ಸಂತಸ ವ್ಯಕ್ತಪಡಿಸಿದರು. ನಾಳೆ ನಡೆಯಲಿರುವ ʻಸಿಇಒ ಸಭೆʼಯು ಉಭಯ ದೇಶಗಳ ನಡುವಿನ ವ್ಯಾಪಾರ ಪಾಲುದಾರಿಕೆಯ ಕಾರ್ಯಸೂಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ದ್ವಿಪಕ್ಷೀಯ ತೆರಿಗೆ ಒಪ್ಪಂದದ ತಿದ್ದುಪಡಿಗೆ ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು, ಇದು ಫ್ರಾನ್ಸ್ ಮತ್ತು ಭಾರತೀಯ ವ್ಯವಹಾರಗಳಿಗೆ ಆರ್ಥಿಕ ಚಟುವಟಿಕೆಯನ್ನು ಭದ್ರಪಡಿಸುತ್ತದೆ ಜೊತೆಗೆ ಉಭಯ ದೇಶಗಳ ನಡುವೆ ಹೆಚ್ಚಿನ ಹೂಡಿಕೆ ಮತ್ತು ಸಹಯೋಗಕ್ಕೆ ದಾರಿ ಮಾಡಿಕೊಡುತ್ತದೆ.

ʻಯುಪಿಐʼ ಸೌಲಭ್ಯವನ್ನು ಒದಗಿಸಿದ ಮೊದಲ ಯುರೋಪಿಯನ್ ದೇಶವಾದ ಫ್ರಾನ್ಸ್‌ನಲ್ಲಿ ʻಯುಪಿಐʼನ ನಿರಂತರ ಪ್ರಗತಿಯ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಹಲವಾರು ಪ್ರಮುಖ ಮಳಿಗೆಗಳು ಈಗಾಗಲೇ ʻಯುಪಿಐʼ ಮೂಲಕ ಹಣ ಸ್ವೀಕರಿಸುತ್ತಿವೆ, ಇದು ಪ್ಯಾರಿಸ್ ಅನ್ನು ಭಾರತೀಯ ಪ್ರವಾಸಿಗರಿಗೆ ಹೆಚ್ಚು ಆಕರ್ಷಕ ತಾಣವನ್ನಾಗಿ ಮಾಡಿದೆ. ಪ್ರವಾಸಿಗರು ಮಾಡಿದ ಪಾವತಿಗಳನ್ನು ಸುಧಾರಿಸುವ ಸಲುವಾಗಿ ಸುರಕ್ಷಿತ ಮತ್ತು ದಕ್ಷ ಡಿಜಿಟಲ್ ಪಾವತಿ ವಿಧಾನಗಳನ್ನು ಅಭಿವೃದ್ಧಿಪಡಿಸಲು ಉಭಯ ನಾಯಕರು ಸಮ್ಮತಿಸಿದರು.

ಇಬ್ಬರೂ ನಾಯಕರು ರೈಲ್ವೆ ವಲಯದಲ್ಲಿನ ಸಹಕಾರವನ್ನು ಸ್ವಾಗತಿಸಿದರು. ಇದೇವೇಳೆ,  ಕಾರ್ಯಾಚರಣೆ ಮತ್ತು ನಿರ್ವಹಣೆ, ಪ್ರಯಾಣಿಕರ ಸೌಲಭ್ಯಗಳು, ಸುಸ್ಥಿರತೆ ಮತ್ತು ಪರಿಸರ ಪರಿಣಾಮ ನಿರ್ವಹಣೆ, ರೈಲ್ವೆ ಸಿಬ್ಬಂದಿಯ ತರಬೇತಿ ಮತ್ತು ಉನ್ನತ ಕೌಶಲ್ಯ, ಹೈಸ್ಪೀಡ್ ರೈಲು, ಮೂಲಸೌಕರ್ಯಗಳು ಮತ್ತು ಹೈಡ್ರೋಜನ್ ಚಾಲಿತ ರೈಲುಗಳು, ಉತ್ಪಾದನಾ ತಂತ್ರಜ್ಞಾನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಸಹಕರಿಸುವ ಉದ್ದೇಶವನ್ನು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ, ಭಾರತದಲ್ಲಿ ರೈಲ್ವೆ ಮತ್ತು ಹೈಸ್ಪೀಡ್ ರೈಲ್ವೆ ಅಭಿವೃದ್ಧಿಯ ಸಹಕಾರಕ್ಕಾಗಿ ಉದ್ದೇಶದ ಜಂಟಿ ಘೋಷಣೆಗೆ ಸಹಿ ಹಾಕುವುದನ್ನು ನಾಯಕರು ನಿರೀಕ್ಷಿಸುತ್ತಿದ್ದಾರೆ.

III. ಜನರಿಗಾಗಿ ಪಾಲುದಾರಿಕೆ

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ-ಫ್ರಾನ್ಸ್ ಸಹಕಾರದ ಶ್ರೀಮಂತ ಇತಿಹಾಸವನ್ನು ಸ್ಮರಿಸಿದ ನಾಯಕರು ಈ ಕ್ಷೇತ್ರದಲ್ಲಿ, ವಿಶೇಷವಾಗಿ ʻಭಾರತ-ಫ್ರಾನ್ಸ್ ನಾವೀನ್ಯತೆ ವರ್ಷ-2026ʼರ ಸಂದರ್ಭದಲ್ಲಿ ಸಹಕಾರವನ್ನು ಮತ್ತಷ್ಟು ಗಾಢವಾಗಿಸುವ ಅಗತ್ಯವನ್ನು ಒತ್ತಿ ಹೇಳಿದರು. ಬಾಹ್ಯಾಕಾಶ, ನಾಗರಿಕ ಪರಮಾಣು ಶಕ್ತಿ, ಸೈಬರ್ ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಸಹಕಾರದ ಪ್ರಗತಿಯನ್ನು ಅವರು ಸ್ವಾಗತಿಸಿದರು. ತಂತ್ರಜ್ಞಾನ ಸಹಕಾರದಲ್ಲಿ ಮತ್ತಷ್ಟು ಮುಂದುವರಿಯಲು ಉತ್ಸಾಹ ತೋರಿದರು. ಎರಡೂ ದೇಶಗಳ ನವೋದ್ಯಮಿಗಳು, ನವೋದ್ಯಮಗಳು, ವ್ಯವಹಾರಗಳು ಮತ್ತು ಇನ್‌ಕ್ಯುಬೇಟರ್‌ಗಳು ಸೇರಿದಂತೆ ಪ್ರಮುಖ ಮಧ್ಯಸ್ಥಗಾರರನ್ನು ಸಂಪರ್ಕಿಸುವ ಮೂಲಕ,  ಡಿಜಿಟಲ್ ಸಂಪರ್ಕದ ಮೂಲಕ ಫ್ರಾನ್ಸ್ ಮತ್ತು ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಗಳನ್ನು ಒಟ್ಟುಗೂಡಿಸಲು ಒಲವು ತೋರಿದರು. ಈ ನಿಟ್ಟಿನಲ್ಲಿ ʻಭಾರತ-ಫ್ರಾನ್ಸ್ ನಾವಿನ್ಯತಾ ಜಾಲʼ ಸ್ಥಾಪನೆಯನ್ನು ಅನ್ನು ಅವರು ಸ್ವಾಗತಿಸಿದರು.

ಕಳೆದ ವರ್ಷ ʻಸ್ಟೇಷನ್ ಎಫ್ʼನಲ್ಲಿ ಹತ್ತು ಭಾರತೀಯ ನವೋದ್ಯಮಗಳ ಯಶಸ್ಸಿನ ನಂತರ, ಮತ್ತಷ್ಟು ʻಸ್ಟಾರ್ಟ್ಅಪ್ ಇನ್‌ಕ್ಯುಬೇಷನ್ʼ ಹಾಗೂ ಭಾರತೀಯ ಮತ್ತು ಫ್ರೆಂಚ್ ನವೋದ್ಯಮ ಪರಿಸರ ವ್ಯವಸ್ಥೆಗಳ ಹೆಚ್ಚಿನ ಸಂವಹನಗಳ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ನಾಯಕರು ಸ್ವಾಗತಿಸಿದರು. ಎರಡು ನವೋದ್ಯಮ ಪರಿಸರ ವ್ಯವಸ್ಥೆಗಳ ನಡುವಿನ ಸಹಯೋಗಕ್ಕಾಗಿ ʻಟಿ-ಹಬ್ʼ ಮತ್ತು ʻನಾರ್ಡ್ ಫ್ರಾನ್ಸ್ ಇನ್ವೆಸ್ಟ್ʼ ನಡುವೆ ʻಆಶಯ ಪತ್ರʼಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸಿದರು. ಈ ನಿಟ್ಟಿನಲ್ಲಿ, ʻಬೆಂಗಳೂರು ಟೆಕ್ ಶೃಂಗಸಭೆʼಯ ಸಹಭಾಗಿತ್ವದಲ್ಲಿ ಯುರೋಪಿನ ಅತಿದೊಡ್ಡ ಟೆಕ್ ಮೇಳವಾದ ʻವಿವಾಟೆಕ್ʼ ಅನ್ನು ಭಾರತಕ್ಕೆ ತರುವ ಬದ್ಧತೆಯನ್ನು ಫ್ರಾನ್ಸ್‌ ವ್ಯಕ್ತಪಡಿಸಿತು. ಬಹು ಯೋಜನೆಗಳಲ್ಲಿ ಅಸ್ತಿತ್ವದಲ್ಲಿರುವ ಬಲವಾದ ವೈಜ್ಞಾನಿಕ ಸಹಭಾಗಿತ್ವವನ್ನು ಮುಂದಕ್ಕೆ ಕೊಂಡೊಯ್ಯುವ ಭಾಗವಾಗಿ, ಭಾರತದಲ್ಲಿ ಡಿಜಿಟಲ್ ವಿಜ್ಞಾನ ಮತ್ತು ತಂತ್ರಜ್ಞಾನದ ದ್ವಿರಾಷ್ಟ್ರೀಯ ಕೇಂದ್ರವನ್ನು ತೆರೆಯುವ ಘೋಷಣೆಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.

ಭಾರತದಲ್ಲಿ ಡಿಜಿಟಲ್‌ ವಿಜ್ಞಾನ ಮತ್ತು ತಂತ್ರಜ್ಞಾನದ ಜಂಟಿ ಜಂಟಿ ಕೇಂದ್ರವನ್ನು ಸ್ಥಾಪಿಸಲು ಫ್ರಾನ್ಸ್‌ನ ʻಐಎನ್‌ಆರ್‌ಐಎʼ ಮತ್ತು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ  ಇಲಾಖೆ (ಡಿಎಸ್‌ಟಿ) ನಡುವೆ ಆಶಯ ಪತ್ರಕ್ಕೆ ಸಹಿ ಬಿದ್ದಿರುವುದನ್ನು ನಾಯಕರು ಸ್ವಾಗತಿಸಿದರು. ಫ್ರಾನ್ಸ್‌ನ ʻಸಿಎನ್ಆರ್‌ಎಸ್ʼ ಮತ್ತು ಭಾರತದ ʻಡಿಎಸ್‌ಟಿʼ ನಡುವಿನ ʻವೈಜ್ಞಾನಿಕ ಸಹಯೋಗ ಒಪ್ಪಂದʼದ ನವೀಕರಣ ಹಾಗೂ ʻಸುಧಾರಿತ ವಸ್ತುಗಳಿಗಾಗಿ ಜಂಟಿ ಕೇಂದ್ರ ಸ್ಥಾಪನೆʼ ಪ್ರಸ್ತಾಪವನ್ನು ನಾಯಕರು ಸ್ವಾಗತಿಸಿದರು. ಕೃತಕ ಬುದ್ಧಿಮತ್ತೆ ಮತ್ತು ಅನ್ವಯಿಕ ಗಣಿತ ಕ್ಷೇತ್ರದಲ್ಲಿ ʻಎಎನ್ಆರ್ʼ ಮತ್ತು ʻಡಿಎಸ್‌ಟಿʼಯಿಂದ ಯೋಜನೆಗಳಿಗೆ ಜಂಟಿ ಕರೆಯನ್ನು ಶೀಘ್ರವಾಗಿ ಅಂತಿಮಗೊಳಿಸುವಂತೆ ಅವರು ಕರೆ ನೀಡಿದರು.

ನಾಗರಿಕ ವಿಮಾನಯಾನದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಗಾಢವಾಗಿಸುವ ತಮ್ಮ ಉದ್ದೇಶಕ್ಕೆ ಅನುಗುಣವಾಗಿ, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಉದ್ದೇಶದ ಘೋಷಣೆಗೆ ಇತ್ತೀಚೆಗೆ ಸಹಿ ಹಾಕಿರುವುದನ್ನು ಎರಡೂ ಪಕ್ಷಕಾರರು ಸ್ವಾಗತಿಸಿದರು. ಸೇಂಟ್-ಡೆನಿಸ್ ಡೆ ಲಾ ರಿಯೂನಿಯನ್ ಮತ್ತು ಚೆನ್ನೈ ನಡುವೆ ಹೊಸ ವಿಮಾನಯಾನ ಮಾರ್ಗವನ್ನು ಪ್ರಾರಂಭಿಸುವುದನ್ನು ಅವರು ಸ್ವಾಗತಿಸಿದರು. ಇದು ಲಾ ರಿಯೂನಿಯನ್ ಮತ್ತು ಭಾರತದ ನಡುವೆ ಆರ್ಥಿಕ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಕಾನ್ಪುರದ ʻರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆʼಯಲ್ಲಿ (ಎನ್ಎಸ್‌ಟಿಐ) ವಿಮಾನಯಾನ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುವ ʻಆಶಯ ಪತ್ರʼಕ್ಕೆ ಸಹಿ ಹಾಕಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು. ಕೌಶಲ್ಯ ಫಲಿತಾಂಶಗಳನ್ನು ಹೆಚ್ಚಿಸುವತ್ತ ಗಮನ ಕೇಂದ್ರೀಕರಿಸಿ ಕೌಶಲ್ಯ ಅಭಿವೃದ್ಧಿ, ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಕ್ಷೇತ್ರಗಳಲ್ಲಿ ಅಸ್ತಿತ್ವದಲ್ಲಿರುವ ಒಪ್ಪಂದದ ಅಡಿಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಹತ್ವವನ್ನು ಒತ್ತಿಹೇಳಿದರು.

ಆರೋಗ್ಯ ಸಹಕಾರ ಕ್ಷೇತ್ರದಲ್ಲಿ ಅಭೂತಪೂರ್ವ ಚಲನಶೀಲತೆಯನ್ನು ಭಾರತ ಮತ್ತು ಫ್ರಾನ್ಸ್ ಸ್ವಾಗತಿಸಿದವು. 2024ರ ಜನವರಿಯಲ್ಲಿ ಅಧ್ಯಕ್ಷರ ಕಡೆಯ ನವದೆಹಲಿ ಭೇಟಿಯ ಸಂದರ್ಭದಲ್ಲಿ ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಉದ್ದೇಶದ ಘೋಷಣೆಗೆ ಸಹಿ ಹಾಕಿದ ನಂತರ, ಭಾರತ ಮತ್ತು ಫ್ರಾನ್ಸ್ ದೇಶಗಳು ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಆರೋಗ್ಯವನ್ನು ಈ ಕಾರ್ಯತಂತ್ರದ ಸಹಕಾರದ ಕೇಂದ್ರಬಿಂದುವಾಗಿ ಇರಿಸಿವೆ. ಇದರ ಮುಂದುವರಿಕೆಯಾಗಿ, ಉಭಯ ನಾಯಕರು ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆಗೆ ಮೀಸಲಾಗಿರುವ ವಿಶಿಷ್ಟ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲು ಎದುರು ನೋಡುತ್ತಿದ್ದಾರೆ. ಇದರ ಭಾಗವಾಗಿ ಸೋರ್ಬೊನ್ ವಿಶ್ವವಿದ್ಯಾಲಯ, ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್), ಮತ್ತು ʻಪ್ಯಾರಿಸ್ ಬ್ರೈನ್ ಇನ್ಸ್‌ಟಿಟ್ಯೂಟ್ʼ ನಡುವಿನ ಸಹಯೋಗ ಏರ್ಪಡಿಸಲಿವೆ. ಡಿಜಿಟಲ್ ಆರೋಗ್ಯ ಕ್ಷೇತ್ರದಲ್ಲಿ ಭರವಸೆಯ ಇಂಡೋ-ಫ್ರೆಂಚ್ ಸಹಕಾರವು ʻಪರಿಸಾಂಟೆ ಕ್ಯಾಂಪಸ್ʼ ಮತ್ತು ʻಸಿ-ಕ್ಯಾಂಪ್ʼ (ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಪ್ಲಾಟ್‌ಫಾರ್ಮಸ್‌ ಸೆಂಟರ್‌) ಹಾಗೂ ʻಹೆಲ್ತ್ ಡೇಟಾ ಹಬ್ʼ ಮತ್ತು ʻಐಸಿಎಂಆರ್ʼ(ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ನಡುವಿನ ಸಹಭಾಗಿತ್ವವನ್ನು ಒಳಗೊಂಡಿದೆ. ಪ್ರಮುಖ ಜಾಗತಿಕ ಆರೋಗ್ಯ ಸವಾಲುಗಳನ್ನು ಎದುರಿಸಲು ಎರಡೂ ದೇಶಗಳಲ್ಲಿನ 22 ಪ್ರತಿಷ್ಠಿತ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು ಒಟ್ಟುಗೂಡಿಸುವ ಪ್ರಮುಖ ಯೋಜನೆಯನ್ನು ಘೋಷಿಸಲಾಗಿದೆ. ಇದನ್ನು ಉಭಯ ನಾಯಕರು ಶ್ಲಾಘಿಸಿದರು. ಸಾಂಕ್ರಾಮಿಕ ರೋಗಗಳು ಮತ್ತು ಜಾಗತಿಕ ಆರೋಗ್ಯ ಸಂಶೋಧನೆಯ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತ-ಫ್ರಾನ್ಸ್ ಸಹಯೋಗದ ಆಶಯ ಪತ್ರಕ್ಕೆ ಸಹಿ ಹಾಕಿರುವುದನ್ನು ಇಬ್ಬರೂ ಸ್ವಾಗತಿಸಿದರು.

ಉಭಯ ರಾಷ್ಟ್ರಗಳ ನಡುವಿನ ದೀರ್ಘಕಾಲೀನ ಸಾಂಸ್ಕೃತಿಕ ಸಹಯೋಗವನ್ನು ನಿರ್ಮಿಸಿ, ಉಭಯ ನಾಯಕರು ಸಾಂಸ್ಕೃತಿಕ ಸಂಬಂಧಗಳನ್ನು ಗಾಢವಾಗಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ವಿಶೇಷವಾಗಿ ʼಭಾರತ-ಫ್ರಾನ್ಸ್ ನಾವೀನ್ಯತೆ ವರ್ಷ-2026ʼರ ಸಂದರ್ಭದಲ್ಲಿ, ಭಾರತ ಮತ್ತು ಫ್ರಾನ್ಸ್ ಹಂಚಿಕೊಂಡ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುವ ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯನ್ನು ಆಯೋಜಿಸುವ ಮೂಲಕ ಇದನ್ನು ನೆರವೇರಿಸಲು ಒಲವು ವ್ಯಕ್ತಪಡಿಸಿದರು. ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸಲು ಪರಸ್ಪರ 'ವಿಲ್ಲಾ ಸ್ವಾಗತಂ' ನಿವಾಸಿ ಜಾಲದ ಮಹತ್ವವನ್ನು ಉಭಯ ನಾಯಕರು ಒಪ್ಪಿಕೊಂಡರು.

ಡಿಸೆಂಬರ್ 2024ರಲ್ಲಿ ದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ʻಫ್ರಾನ್ಸ್ ಮ್ಯೂಸಿಯಮ್ಸ್ ಡೆವಲಪ್ಮೆಂಟ್‌ʼ ನಡುವೆ ಒಪ್ಪಂದಕ್ಕೆ ಸಹಿ ಬಿದ್ದಿದ್ದನ್ನು ಉಭಯ ನಾಯಕರು ಸ್ಮರಿಸಿದರು.  ʻಯುಗೆ ಯುಗೀನ್ ಭಾರತ್ ವಸ್ತುಸಂಗ್ರಹಾಲಯʼವನ್ನು ಜಾಗತಿಕ ಸಾಂಸ್ಕೃತಿಕ ಹೆಗ್ಗುರುತಾಗಿ ಸ್ಥಾಪಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನು ಶ್ಲಾಘಿಸಿದರು. ಲೋಥಾಲ್‌ನಲ್ಲಿರುವ ʻರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣʼಕ್ಕೆ ಸಂಬಂಧಪಟ್ಟಂತೆ ಸಹಕಾರ ಬಗ್ಗೆ ಚರ್ಚೆಗಳಲ್ಲಿ ಆಗಿರುವ ಪ್ರಗತಿಯನ್ನು ಉಭಯ ನಾಯಕರು ಸ್ವಾಗತಿಸಿದರು. ಫ್ರಾನ್ಸ್-ಭಾರತ ವ್ಯೂಹಾತ್ಮಕ ಪಾಲುದಾರಿಕೆಯ 30ನೇ ವಾರ್ಷಿಕೋತ್ಸವವನ್ನು ಆಚರಿಸಲು 2028ರಲ್ಲಿ ʻಫ್ರೆಂಚ್ ನ್ಯಾಷನಲ್ ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್ಸ್ʼನಲ್ಲಿ(ಗೈಮೆಟ್ ಮ್ಯೂಸಿಯಂ) ಭಾರತಕ್ಕೆ ಸಮರ್ಪಿತವಾದ ಸಾಂಸ್ಕೃತಿಕ ವರ್ಷ ಆಚರಣೆಯ ಘೋಷಣೆಯನ್ನು ಸ್ವಾಗತಿಸಿದರು. ಜೊತೆಗೆ ʻಮ್ಯೂಸಿ ಡು ಕ್ವಾಯ್‌ ಬ್ರಾನ್ಲಿ -ಜಾಕ್ವೆಸ್‌ ಚಿರಾಕ್‌ʼನಲ್ಲಿ ಸಮಕಾಲೀನ ಭಾರತೀಯ ಛಾಯಾಗ್ರಹಣಕ್ಕೆ ಮೀಸಲಾದ ಪ್ರದರ್ಶನವನ್ನು ಅವರು ಸ್ವಾಗತಿಸಿದರು. 2025ರ ಕೊನೆಯಲ್ಲಿ ʻಮೊಬಿಲಿಯರ್ ನ್ಯಾಷನಲ್‌ʼನಲ್ಲಿ ಪ್ರಸ್ತುತಪಡಿಸಲಾದ ಎರಡೂ ದೇಶಗಳ ಜವಳಿ ಪರಿಣತಿಗೆ ಮೀಸಲಾಗಿರುವ "ಸೆ ಕ್ವಿ ಸೆ ಟ್ರೇಮ್" / "ಟೆಕ್ಸ್‌ಟೈಲ್ ಮ್ಯಾಟರ್ಸ್" ಪ್ರದರ್ಶನವನ್ನು ಶೀಘ್ರದಲ್ಲೇ ಭಾರತದಲ್ಲಿ ಪ್ರದರ್ಶಿಸಲಾಗುವುದು.

ಫ್ರಾನ್ಸ್ ಮತ್ತು ಭಾರತ ಎರಡೂ ತಮ್ಮ ಶ್ರೀಮಂತ ಸಾಂಸ್ಕೃತಿಕ ಮತ್ತು ಸೃಜನಶೀಲ ಸಂಪ್ರದಾಯಗಳೊಂದಿಗೆ, ಹೊಸ ಸಹಯೋಗಗಳನ್ನು ಪ್ರೋತ್ಸಾಹಿಸುವ ಮತ್ತು ಉತ್ತಮ ಅಭ್ಯಾಸಗಳ ಹಂಚಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಮತ್ತು ಸೃಜನಶೀಲ ಕೈಗಾರಿಕೆಗಳನ್ನು (ಸಿಸಿಐ) ಉತ್ತೇಜಿಸಲು ಸಹಕರಿಸುವ ಇಚ್ಛೆಯನ್ನು ವ್ಯಕ್ತಪಡಿಸಿವೆ.

ಫ್ರಾನ್ಸ್‌ನ ʻಪ್ಯಾರಿಸ್ ಪುಸ್ತಕೋತ್ಸವ-2022ʼಕ್ಕೆ ಮತ್ತು ಭಾರತದ ʻನವದೆಹಲಿ ವಿಶ್ವ ಪುಸ್ತಕ ಮೇಳ-2023ʼಕ್ಕೆ ಪರಸ್ಪರ ಆಹ್ವಾನದ ಯಶಸ್ಸಿನ ಆಧಾರದ ಮೇಲೆ, ಫ್ರಾನ್ಸ್ ಮತ್ತು ಭಾರತವು ವೃತ್ತಿಪರರ ಪರಸ್ಪರ ಆಹ್ವಾನಗಳು, ದ್ವಿಮುಖ ಅನುವಾದ ಹರಿವು ಮತ್ತು ಸಹಯೋಗದ ಉದ್ಯಮಗಳನ್ನು ಉತ್ತೇಜಿಸುವ ಮೂಲಕ ಪುಸ್ತಕ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮ ಸಹಕಾರವನ್ನು ಬಲಪಡಿಸಲು ಉದ್ದೇಶಿಸಿವೆ.

2023ರಲ್ಲಿ ʻನಮಸ್ತೆ ಫ್ರಾನ್ಸ್ʼನ ಯಶಸ್ಸಿನ ಆಧಾರದ ಮೇಲೆ, 2028ರಲ್ಲಿ 30 ವರ್ಷಗಳ ಕಾರ್ಯತಂತ್ರದ ಪಾಲುದಾರಿಕೆಯನ್ನು ಆಚರಿಸಲು ಮತ್ತು ಅದನ್ನು ದ್ವಿಪಕ್ಷೀಯ ಸಾಂಸ್ಕೃತಿಕ ಸಹಕಾರದ ನಿಯಮಿತ ಅಭ್ಯಾಸವನ್ನಾಗಿ ಮಾಡಲು ʻನಮಸ್ತೆ ಫ್ರಾನ್ಸ್ʼನ ಮುಂದಿನ ಆವೃತ್ತಿಯನ್ನು ಆಚರಿಸಲು ಉಭಯ ನಾಯಕರು ಸಮ್ಮತಿಸಿದರು.

ಭಾರತದಲ್ಲಿ ʻಅಲೈಯನ್ಸ್ ಫ್ರಾಂಕೈಸ್ʼ ಜಾಲ ಮತ್ತು ʻಲಾ ರಿಯೂನಿಯನ್ʼನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಾಧನೆಯನ್ನು ಅವರು ಶ್ಲಾಘಿಸಿದರು. ಪ್ಯಾರಿಸ್‌ನಲ್ಲಿ ʻಭಾರತೀಯ ಸಾಂಸ್ಕೃತಿಕ ಕೇಂದ್ರʼ(ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ – ಎಸ್‌ವಿಸಿಸಿ) ತೆರೆಯುವುದನ್ನು ಸ್ವಾಗತಿಸಿದ ಅವರು, ಪ್ಯಾರಿಸ್‌ನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರ ಮತ್ತು ಭಾರತದಲ್ಲಿನ ʻಅಲೈಯನ್ಸ್ ಫ್ರಾಂಚೈಸ್ʼ ಜಾಲದ ನಿರ್ದಿಷ್ಟ ಧ್ಯೇಯಗಳನ್ನು ಗುರುತಿಸುವ ಸಲುವಾಗಿ ದ್ವಿಪಕ್ಷೀಯ ಒಪ್ಪಂದವನ್ನು ಆಖೈರುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ನಿಟ್ಟಿನಲ್ಲಿ, ʻಫ್ರೆಂಚ್ ಫಾರ್ ಆಲ್-ಫ್ರೆಂಚ್ ಫಾರ್ ಬೆಟರ್ ಫ್ಯೂಚರ್ʼ ಕಾರ್ಯಕ್ರಮ ಸೇರಿದಂತೆ ಭಾರತದ ಮಾಧ್ಯಮಿಕ ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ವೃತ್ತಿಪರ ಶಿಕ್ಷಣ ಕೇಂದ್ರಗಳಲ್ಲಿ ಫ್ರೆಂಚ್ ಭಾಷೆಯ ಬೋಧನೆಯನ್ನು ವಿಸ್ತರಿಸುವ ಗುರಿಗೆ ಎರಡೂ ಕಡೆಯವರು ಬದ್ಧತೆ ವ್ಯಕ್ತಪಡಿಸಿದರು.

ಶೈಕ್ಷಣಿಕ ಸಹಕಾರ ಮತ್ತು ವಿದ್ಯಾರ್ಥಿಗಳ ಚಲನಶೀಲತೆಯನ್ನು ಬಲಪಡಿಸಲು ಆದ್ಯತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ, ಭಾರತೀಯ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಭಾಷಾ ಮತ್ತು ಬೋಧನಾವಿಧಾನದ ತರಬೇತಿಯನ್ನು ನೀಡುವ ಮೂಲಕ ಫ್ರೆಂಚ್ ವಿಶ್ವವಿದ್ಯಾಲಯಗಳಿಗೆ ಪ್ರವೇಶವನ್ನು ಸುಗಮಗೊಳಿಸುವ ಉಪಕ್ರಮವನ್ನು ಅವರು ಶ್ಲಾಘಿಸಿದರು. ಪ್ರಸ್ತುತ ಫ್ರಾನ್ಸ್‌ನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖಯೆ 10,000 ಇದ್ದು, 2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್‌ಗೆ ಸ್ವಾಗತಿಸುವ ಗುರಿಯನ್ನು ಪೂರೈಸುವ ಉದ್ದೇಶದೊಂದಿಗೆ ವಿದ್ಯಾರ್ಥಿಗಳ ಚಲನಶೀಲತೆಯನ್ನು ಉತ್ತೇಜಿಸಲು ಇದು ನೆರವಾಗಲಿದೆ. ʻಇಎಸ್ಎಸ್ಇಸಿ ಬಿಸಿನೆಸ್ ಸ್ಕೂಲ್ʼ ಮತ್ತು ʻಸೆಂಟ್ರಲ್ ಸುಪೆಲೆಕ್ ಎಂಜಿನಿಯರಿಂಗ್ ಸ್ಕೂಲ್‌ʼ ಅನ್ನು ಒಟ್ಟುಗೂಡಿಸುವ ಕೇಂದ್ರವನ್ನು ಮುಂಬಯಿನಲ್ಲಿ ತೆರೆಯುವ ಪ್ರಸ್ತಾವವನ್ನೂ  ಇಬ್ಬರೂ ನಾಯಕರು ಸ್ವಾಗತಿಸಿದರು. ʻಶೈಕ್ಷಣಿಕ ಅರ್ಹತೆಗಳ ಪರಸ್ಪರ ಗುರುತಿಸುವಿಕೆ ಕುರಿತ ಒಪ್ಪಂದʼದ ಉದ್ದೇಶಿತ ಪರಿಷ್ಕರಣೆಯನ್ನು ಉಭಯ ನಾಯಕರು ಸ್ವಾಗತಿಸಿದರು.

ಫೆಬ್ರವರಿ 18 ಮತ್ತು 19ರಂದು ನವದೆಹಲಿಯಲ್ಲಿ ʻಏಮ್ಸ್ʼ ಆಯೋಜಿಸಿದ್ದ ʻಉನ್ನತ ಮಟ್ಟದ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಭೆʼಗಳ ಯಶಸ್ಸನ್ನು ಹಾಗೂ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಹಕಾರದ ಬೆಳವಣಿಗೆಯನ್ನು ಉಭಯ ನಾಯಕರು ಶ್ಲಾಘಿಸಿದರು. ಈ ಉನ್ನತ ಮಟ್ಟದ ಸಭೆಗಳು ಎರಡೂ ದೇಶಗಳ 200ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಹಾಗೂ ವೈಜ್ಞಾನಿಕ ಸಂಸ್ಥೆಗಳನ್ನು ಒಟ್ಟುಗೂಡಿಸಿವೆ. ಜೊತೆಗೆ ಅವಳಿ ಮತ್ತು ಜಂಟಿ ಪದವಿ ವ್ಯವಸ್ಥೆಗಳು ಸೇರಿದಂತೆ ಎರಡೂ ಕಡೆಯ ಪ್ರಮುಖ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ರೋಮಾಂಚಕ ಸಹಕಾರವನ್ನು ಎತ್ತಿ ತೋರಿಸಿವೆ. ಸಮಾಜ ವಿಜ್ಞಾನ ಕ್ಷೇತ್ರದಲ್ಲಿ, ದ್ವಿಪಕ್ಷೀಯ ವೈಜ್ಞಾನಿಕ ಸಂಶೋಧನೆಯನ್ನು ಉತ್ತೇಜಿಸುವಲ್ಲಿ ಮತ್ತು ಧನಸಹಾಯ ನೀಡುವಲ್ಲಿ ʻಸಿಇಎಫ್ಐಪಿಆರ್‌ಐʼ ಸಾಧಿಸಿದ ಕಾರ್ಯಕ್ಕೆ ಇಬ್ಬರೂ ನಾಯಕರು ತಮ್ಮ ಮೆಚ್ಚುಗೆ ಮತ್ತು ಬೆಂಬಲವನ್ನು ವ್ಯಕ್ತಪಡಿಸಿದರು.

ದೇಶಗಳ ನಡುವೆ ಪರಸ್ಪರ ಲಾಭದಾಯಕ ಕೌಶಲ್ಯ ಮತ್ತು ಪ್ರತಿಭೆಯ ಚಲನಶೀಲತೆಯನ್ನು ವಿಸ್ತರಿಸುವ ಉದ್ದೇಶದಿಂದ, ʻಭಾರತ-ಫ್ರಾನ್ಸ್ ವಲಸೆ ಮತ್ತು ಚಲನಶೀಲತೆ ಪಾಲುದಾರಿಕೆ ಒಪ್ಪಂದʼ (ಎಂಎಂಪಿಎ) ಹಾಗೂ ʻಯುವ ವೃತ್ತಿಪರ ಯೋಜನೆʼಯ (ವೈಪಿಎಸ್) ಮಹತ್ವವನ್ನು ಉಭಯ ನಾಯಕರು ಒತ್ತಿ ಹೇಳಿದರು. ಕೌಶಲ್ಯ ಅಭಿವೃದ್ಧಿ, ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಇಬ್ಬರೂ ನಾಯಕರು ಸ್ವಾಗತಿಸಿದರು, ಇದು ಯುವಕರು ಮತ್ತು ವೃತ್ತಿಪರರಿಗೆ ಸುಗಮ ಚಲನಶೀಲತೆಯ ಅವಕಾಶಗಳನ್ನು ಬಲಪಡಿಸುತ್ತದೆ. ಜೊತೆಗೆ ಭಾರತ ಮತ್ತು ಫ್ರಾನ್ಸ್ ಜನರ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ. ಈ ಆಶಯದೊಂದಿಗೆ, ಫ್ರೆಂಚ್ ವಿಮಾನ ನಿಲ್ದಾಣಗಳ ಮೂಲಕ ಭಾರತೀಯ ಪ್ರಜೆಗಳ ವೀಸಾ ಮುಕ್ತ ಪ್ರಯಾಣ ಘೋಷಣೆಯನ್ನು ನಾಯಕರು ಸ್ವಾಗತಿಸಿದರು. ಆರು ತಿಂಗಳ ಪ್ರಾಯೋಗಿಕ ಅವಧಿಯ ನಂತರ ಇದನ್ನು ಮರುಪರಿಶೀಲಿಸಲಾಗುವುದು.

ಸರ್ಕಾರಗಳ ಪ್ರತಿನಿಧಿಗಳು, ಉದ್ಯಮದ ನಾಯಕರು, ವ್ಯಾಪಾರ ಮತ್ತು ಸಂಪರ್ಕ ವಿಷಯಗಳ ತಜ್ಞರು ಹಾಗೂ ಇತರ ಸಂಬಂಧಿತ ಮಧ್ಯಸ್ಥಗಾರರನ್ನು ಒಳಗೊಂಡ ಉನ್ನತ ಮಟ್ಟದ ಸಭೆಯನ್ನು ಉತ್ತೇಜಿಸಲು ಮಾರ್ಸಿಲ್ಲೆಯಲ್ಲಿ ನಡೆದ ʻರೈಸಿನಾʼ ಸಭೆಯ ಉದ್ಘಾಟನಾ ಆವೃತ್ತಿಯನ್ನು ಉಭಯ ನಾಯಕರು ಸ್ವಾಗತಿಸಿದರು. ಮೆಡಿಟರೇನಿಯನ್ ಮತ್ತು ಇಂಡೋ-ಪೆಸಿಫಿಕ್ ಪ್ರದೇಶಗಳ ನಡುವೆ ವ್ಯಾಪಾರ ಮತ್ತು ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ. ಇದು ಎರಡೂ ದೇಶಗಳ ಶಿಕ್ಷಣ ತಜ್ಞರು ಮತ್ತು ಚಿಂತಕರ ಚಾವಡಿಗಳ ನಡುವೆ ಹಾಗೂ ಮೆಡಿಟರೇನಿಯನ್ ಪ್ರದೇಶದ ದೇಶಗಳ ನಡುವೆ ದ್ವಿಪಕ್ಷೀಯ ವಿನಿಮಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನಾಯಕರು ಹೇಳಿದರು. ಈ ನಿಟ್ಟಿನಲ್ಲಿ, ಉಭಯ ನಾಯಕರು ಈ ಸಭೆಯ ಮುಂಬರುವ ಆವೃತ್ತಿಗಾಗಿ ನಿರೀಕ್ಷಿಸುತ್ತಿರುವುದಾಗಿ ಹೇಳಿದರು.

ಭಾರತ-ಫ್ರಾನ್ಸ್ ನಡುವೆ ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯ ಆರಂಭವು ಭಾರತ-ಫ್ರಾನ್ಸ್ ಬಾಂಧವ್ಯದಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ. ಇದು ಉಭಯ ದೇಶಗಳ ಜನರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಅಂತರರಾಷ್ಟ್ರೀಯ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಕಾಪಾಡುತ್ತದೆ.

 

*****


(ಪ್ರಕಟಣೆ ಐ.ಡಿ.: 2229844) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Gujarati , Telugu