ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಲೇಷ್ಯಾ ಪ್ರಧಾನಮಂತ್ರಿ ಅವರ ಜೊತೆ ಜಂಟಿ ಪತ್ರಿಕಾ ಹೇಳಿಕೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಪತ್ರಿಕಾ ಹೇಳಿಕೆ

ಪ್ರಕಟಣಾ ದಿನಾಂಕ: 08 FEB 2026 10:33AM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ,

ಉಭಯ ರಾಷ್ಟ್ರಗಳ ಗಣ್ಯ ಪ್ರತಿನಿಧಿಗಳೇ,

ಮಾಧ್ಯಮದ ಸ್ನೇಹಿತರೇ,

ನಮಸ್ಕಾರ!

ಸೆಲಾಮತ್ ಪಗಿ!

ಮೊದಲನೆಯದಾಗಿ, ಆತ್ಮೀಯ ಸ್ವಾಗತಕ್ಕಾಗಿ ನನ್ನ ಆಪ್ತ ಮಿತ್ರರಾದ ಪ್ರಧಾನಮಂತ್ರಿ ಅನ್ವರ್ ಇಬ್ರಾಹಿಂ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕಳೆದ ವರ್ಷ, ಆಸಿಯಾನ್ (ASEAN) ಶೃಂಗಸಭೆಯ ಸಂದರ್ಭದಲ್ಲಿ ನನಗೆ ಮಲೇಷ್ಯಾಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಆದರೆ ಶೀಘ್ರದಲ್ಲೇ ಮಲೇಷ್ಯಾಕ್ಕೆ ಬರುತ್ತೇನೆ ಎಂದು ನಾನು ನನ್ನ ಪ್ರಿಯ ಮಿತ್ರರಿಗೆ ಮಾತು ಕೊಟ್ಟಿದ್ದೆ. ಅದರಂತೆ ಇಂದು, 2026ರ ಸಾಲಿನ ನನ್ನ ಮೊದಲ ವಿದೇಶಿ ಪ್ರವಾಸದ ಅಂಗವಾಗಿ ನಾನು ಮಲೇಷ್ಯಾದಲ್ಲಿದ್ದೇನೆ.

ಸ್ನೇಹಿತರೇ,

ಭಾರತ ಮತ್ತು ಮಲೇಷ್ಯಾ ನಡುವಿನ ಸಂಬಂಧವು ನಿಜಕ್ಕೂ ವಿಶೇಷವಾದುದು. ನಾವು ಸಮುದ್ರ ತೀರದ ನೆರೆಹೊರೆಯವರು. ಶತಮಾನಗಳಿಂದಲೂ ನಮ್ಮ ಜನರು ಆಳವಾದ ಮತ್ತು ಆತ್ಮೀಯ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಇಂದು, ಭಾರತೀಯ ಮೂಲದ ಜನಸಂಖ್ಯೆಯನ್ನು ಹೊಂದಿರುವ ವಿಶ್ವದ ಎರಡನೇ ಅತಿದೊಡ್ಡ ದೇಶ ಮಲೇಷ್ಯಾ ಆಗಿದೆ. ನಮ್ಮ ನಾಗರಿಕತೆಗಳು ಹಂಚಿಕೆಯ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೂಲಕ ಬೆಸೆದುಕೊಂಡಿವೆ.

ಸ್ನೇಹಿತರೇ,

ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಂಬಂಧಗಳು ಹೊಸ ವೇಗವನ್ನು ಪಡೆದುಕೊಂಡಿವೆ. ಈ ಪ್ರಗತಿಯಲ್ಲಿ ನನ್ನ ಮಿತ್ರರಾದ ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ಅವರು ವಿಶೇಷ ಪಾತ್ರ ವಹಿಸಿದ್ದಾರೆ.

ಇಂಧನ, ಮೂಲಸೌಕರ್ಯ ಮತ್ತು ಉತ್ಪಾದನಾ ವಲಯಗಳಲ್ಲಿ ನಮ್ಮ ಸಹಕಾರವು ಇನ್ನಷ್ಟು ಬಲಗೊಂಡಿದೆ. ಡಿಜಿಟಲ್ ಆರ್ಥಿಕತೆ, ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ (IT) ಕ್ಷೇತ್ರಗಳಲ್ಲಿ ಪರಸ್ಪರ ಹೂಡಿಕೆಗಳು ಹೆಚ್ಚಿವೆ. ಪ್ರವಾಸೋದ್ಯಮ ಮತ್ತು ಜನರ ನಡುವಿನ ಬಾಂಧವ್ಯ ಮತ್ತಷ್ಟು ಗಾಢವಾಗಿದೆ. ಈ ಸಾಧನೆಗಳಿಂದ ಸ್ಫೂರ್ತಿ ಪಡೆದು, ಇಂದು ನಾವು ನಮ್ಮ ಪಾಲುದಾರಿಕೆಗೆ ಅಭೂತಪೂರ್ವ ವೇಗ ಮತ್ತು ಗಾಢತೆಯನ್ನು ನೀಡಲು ನಿರ್ಧರಿಸಿದ್ದೇವೆ.

ಸ್ನೇಹಿತರೇ,

ಭದ್ರತಾ ಕ್ಷೇತ್ರದಲ್ಲಿ, ನಾವು ಭಯೋತ್ಪಾದನೆ ನಿಗ್ರಹ, ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಕಡಲ ಭದ್ರತೆಯಲ್ಲಿ ಸಹಕಾರವನ್ನು ಬಲಪಡಿಸುತ್ತೇವೆ. ಅದರೊಂದಿಗೆ ನಮ್ಮ ರಕ್ಷಣಾ ಸಹಯೋಗವನ್ನೂ ನಾವು ವಿಸ್ತರಿಸಲಿದ್ದೇವೆ.

ಕೃತಕ ಬುದ್ಧಿಮತ್ತೆ (AI) ಮತ್ತು ಡಿಜಿಟಲ್ ತಂತ್ರಜ್ಞಾನಗಳ ಜೊತೆಗೆ, ನಾವು ಸೆಮಿಕಂಡಕ್ಟರ್‌ ಗಳು, ಆರೋಗ್ಯ ಮತ್ತು ಆಹಾರ ಭದ್ರತೆಯಲ್ಲಿ ಪಾಲುದಾರಿಕೆಯನ್ನು ಮುಂದುವರಿಸುತ್ತೇವೆ. ಇಂದು ನಡೆದ 'ಸಿಇಒ ಫೋರಂ' (CEO Forum) ವ್ಯಾಪಾರ ಮತ್ತು ಹೂಡಿಕೆಗೆ ಹೊಸ ಹಾದಿಗಳನ್ನು ತೆರೆದಿದೆ. ಕಾರ್ಯತಂತ್ರದ ವಿಶ್ವಾಸದೊಂದಿಗೆ, ನಾವು ಆರ್ಥಿಕ ಪರಿವರ್ತನೆಗೆ ದಾರಿ ಮಾಡಿಕೊಡುತ್ತೇವೆ.

ಸ್ನೇಹಿತರೇ,

ನಿನ್ನೆ ನನಗೆ ಮಲೇಷ್ಯಾದಲ್ಲಿನ ಭಾರತೀಯ ಮೂಲದ ಸಮುದಾಯದ ಸದಸ್ಯರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ಅವರು ಆ ಸಮಾವೇಶದಲ್ಲಿ ಉಪಸ್ಥಿತರಿರುವ ಮೂಲಕ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಿದರು. ಮೂವತ್ತು ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಈ ಅನಿವಾಸಿ ಭಾರತೀಯರು ನಮ್ಮ ರಾಷ್ಟ್ರಗಳ ನಡುವಿನ ಸಜೀವ ಸೇತುವೆಯಾಗಿದ್ದಾರೆ ಮತ್ತು ನಮಗೆ ದೊಡ್ಡ ಶಕ್ತಿಯ ಮೂಲವಾಗಿದ್ದಾರೆ. ಅವರ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳು ನಮ್ಮ ಸಂಬಂಧಕ್ಕೆ ಒಂದು ಬಲಿಷ್ಠ ಮಾನವೀಯ ಅಡಿಪಾಯವನ್ನು ಒದಗಿಸಿವೆ.

ಮಲೇಷ್ಯಾದಲ್ಲಿನ ಭಾರತೀಯ ಕಾರ್ಮಿಕರಿಗಾಗಿ ‘ಸಾಮಾಜಿಕ ಭದ್ರತಾ ಒಪ್ಪಂದ’, ಪ್ರವಾಸೋದ್ಯಮಕ್ಕಾಗಿ ಉಚಿತ ಇ-ವಿಸಾಗಳು ಮತ್ತು ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಾದ ‘ಯುಪಿಐ’ (UPI) ಅನ್ನು ಮಲೇಷ್ಯಾದಲ್ಲಿ ಜಾರಿಗೆ ತರುವಂತಹ ಕ್ರಮಗಳು ಉಭಯ ದೇಶಗಳ ನಾಗರಿಕರ ಜೀವನವನ್ನು ಸುಗಮಗೊಳಿಸಲಿವೆ. ಯಾವುದೇ ಪಾಲುದಾರಿಕೆಯು ಅದರ ಪ್ರಯೋಜನಗಳು ನೇರವಾಗಿ ಜನರನ್ನು ತಲುಪಿದಾಗ ಮಾತ್ರ ನಿಜವಾಗಿಯೂ ಯಶಸ್ವಿಯಾಗುತ್ತದೆ.

ಸ್ನೇಹಿತರೇ,

ಭಾರತ ಮತ್ತು ಮಲೇಷ್ಯಾಗಳು ತಮಿಳು ಭಾಷೆಯ ಮೇಲಿನ ಹಂಚಿಕೆಯ ಪ್ರೀತಿಯಿಂದಲೂ ಒಂದಾಗಿವೆ. ಮಲೇಷ್ಯಾದ ಶಿಕ್ಷಣ, ಮಾಧ್ಯಮ ಮತ್ತು ಸಾಂಸ್ಕೃತಿಕ ಜೀವನದಲ್ಲಿ ತಮಿಳು ಭಾಷೆಯ ಪ್ರಬಲ ಮತ್ತು ರೋಚಕ ಉಪಸ್ಥಿತಿಯು ಸ್ಪಷ್ಟವಾಗಿ ಕಂಡುಬರುತ್ತದೆ. ಇಂದಿನ ‘ದೃಶ್ಯ-ಶ್ರವಣ ಒಪ್ಪಂದ’ವು ಚಲನಚಿತ್ರಗಳು ಮತ್ತು ಸಂಗೀತದ ಮೂಲಕ, ವಿಶೇಷವಾಗಿ ತಮಿಳು ಚಿತ್ರರಂಗದ ಮೂಲಕ ನಮ್ಮ ಹೃದಯಗಳನ್ನು ಮತ್ತಷ್ಟು ಹತ್ತಿರ ತರುತ್ತದೆ ಎಂಬ ವಿಶ್ವಾಸ ನನಗಿದೆ.

ನಮ್ಮ ಯುವಜನರಲ್ಲಿ ವಿಶ್ವವಿದ್ಯಾಲಯಗಳ ವಿನಿಮಯ, ಸ್ಟಾರ್ಟ್‌-ಅಪ್‌ಗಳ ಸಂಪರ್ಕ ಮತ್ತು ಕೌಶಲ್ಯಾಭಿವೃದ್ಧಿಗಾಗಿ ನಾವು ಅವಕಾಶಗಳನ್ನು ವಿಸ್ತರಿಸುತ್ತಿದ್ದೇವೆ. ನಮ್ಮ ಬೆಳೆಯುತ್ತಿರುವ ಸಂಬಂಧಗಳಿಗೆ ಬೆಂಬಲ ನೀಡಲು, ನಾವು ಮಲೇಷ್ಯಾದಲ್ಲಿ ಹೊಸ ದೂತಾವಾಸ ಕಚೇರಿಯನ್ನು ತೆರೆಯುತ್ತಿದ್ದೇವೆ.

ಸ್ನೇಹಿತರೇ,

ಇಂಡೋ-ಪೆಸಿಫಿಕ್ ಪ್ರದೇಶವು ಜಾಗತಿಕ ಬೆಳವಣಿಗೆಯ ಇಂಜಿನ್ ಆಗಿ ಹೊರಹೊಮ್ಮುತ್ತಿದೆ. ಆಸಿಯಾನ್ (ASEAN) ಸಹಭಾಗಿತ್ವದಲ್ಲಿ ಇಂಡೋ-ಪೆಸಿಫಿಕ್‌ ನಾದ್ಯಂತ ಅಭಿವೃದ್ಧಿ, ಶಾಂತಿ ಮತ್ತು ಸ್ಥಿರತೆಗೆ ನಾವು ಬದ್ಧರಾಗಿದ್ದೇವೆ. ಭಾರತವು 'ಆಸಿಯಾನ್ ಕೇಂದ್ರಿತ' ನೀತಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಮಲೇಷ್ಯಾವು ಆಸಿಯಾನ್ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ವಹಿಸಿಕೊಂಡಿರುವುದಕ್ಕಾಗಿ ನಾನು ಮತ್ತೊಮ್ಮೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಮಲೇಷ್ಯಾದಂತಹ ಸ್ನೇಹಪರ ರಾಷ್ಟ್ರಗಳ ಬೆಂಬಲದೊಂದಿಗೆ, ಭಾರತವು ಆಸಿಯಾನ್ ಜೊತೆಗಿನ ತನ್ನ ಸಂಬಂಧವನ್ನು ಮತ್ತಷ್ಟು ವಿಸ್ತರಿಸಲಿದೆ. 'ಆಸಿಯಾನ್-ಭಾರತ ಸರಕುಗಳ ವ್ಯಾಪಾರ ಒಪ್ಪಂದ'ದ (AITIGA) ಮರುಪರಿಶೀಲನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂಬುದಕ್ಕೆ ನಾವು ಸಮ್ಮತಿಸಿದ್ದೇವೆ.

ಸ್ನೇಹಿತರೇ,

ಇಂದು ನಾವು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಅರ್ಥಪೂರ್ಣ ಚರ್ಚೆಗಳನ್ನು ನಡೆಸಿದ್ದೇವೆ. ಜಾಗತಿಕ ಅಸ್ಥಿರತೆಯ ಈ ಸಂದರ್ಭದಲ್ಲಿ, ಭಾರತ ಮತ್ತು ಮಲೇಷ್ಯಾ ನಡುವೆ ಬೆಳೆಯುತ್ತಿರುವ ಸ್ನೇಹವು ಉಭಯ ರಾಷ್ಟ್ರಗಳಿಗೆ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ.

ಇಂದಿನ ಸವಾಲುಗಳನ್ನು ಎದುರಿಸಲು ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಅಗತ್ಯ ಎಂಬ ಅಭಿಪ್ರಾಯವನ್ನು ನಾವು ಹಂಚಿಕೊಂಡಿದ್ದೇವೆ. ಶಾಂತಿಗಾಗಿ ಕೈಗೊಳ್ಳುವ ಎಲ್ಲಾ ಪ್ರಯತ್ನಗಳನ್ನು ನಾವು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ. ಮತ್ತು ಭಯೋತ್ಪಾದನೆಯ ಬಗ್ಗೆ ನಮ್ಮ ಸಂದೇಶವು ಸ್ಪಷ್ಟವಾಗಿದೆ: ಯಾವುದೇ ಇಬ್ಬಗೆಯ ನೀತಿಯಿಲ್ಲ ಮತ್ತು ಯಾವುದೇ ರಾಜಿ ಇಲ್ಲ.

ಮಾನ್ಯರೇ,

ಭಾರತ-ಮಲೇಷ್ಯಾ ಸಂಬಂಧಗಳ ಬಗ್ಗೆ ನಿಮಗಿರುವ ಬದ್ಧತೆಯನ್ನು ನಾವು ಆಳವಾಗಿ ಪ್ರಶಂಸಿಸುತ್ತೇವೆ. ನಿಮ್ಮ ಸಮೃದ್ಧ ಮಲೇಷ್ಯಾದ ದೃಷ್ಟಿಕೋನ ಮತ್ತು ನಮ್ಮ ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಲು ನಾವು ಜೊತೆಯಾಗಿ ಕೆಲಸ ಮಾಡೋಣ.

ಮತ್ತೊಮ್ಮೆ, ನಿಮ್ಮ ಸ್ನೇಹಕ್ಕಾಗಿ, ಆತ್ಮೀಯ ಸ್ವಾಗತಕ್ಕಾಗಿ ಮತ್ತು ನಿಮ್ಮ ಉದಾರ ಆತಿಥ್ಯಕ್ಕಾಗಿ ನಾನು ನಿಮಗೆ ಪ್ರಾಮಾಣಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಿಮ್ಮನ್ನು ಭಾರತಕ್ಕೆ ಸ್ವಾಗತಿಸಲು ನಾವು ಕಾತರದಿಂದ ಎದುರು ನೋಡುತ್ತಿದ್ದೇವೆ.

ತುಂಬಾ ಧನ್ಯವಾದಗಳು.

ಜಂಪಾ ಲಗಿ!

 

*****


(ಪ್ರಕಟಣೆ ಐ.ಡಿ.: 2225113) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Bengali , Gujarati , Odia