ಹಣಕಾಸು ಸಚಿವಾಲಯ
ಭಾರತದ ಮುಂದಿನ ಹಂತದ ಆರ್ಥಿಕ ಬೆಳವಣಿಗೆಗೆ ಹಣಕಾಸು ವಲಯವನ್ನು ಸೇರಿಸಲು 'ವಿಕಿಸತ ಭಾರತಕ್ಕಾಗಿ ಬ್ಯಾಂಕಿಂಗ್ ಉನ್ನತ ಮಟ್ಟದ ಸಮಿತಿ' ರಚನೆ: ಕೇಂದ್ರ ಬಜೆಟ್ 2026-27 ಪ್ರಸ್ತಾಪ
ಹೆಚ್ಚಿನ ಪ್ರಮಾಣ ಸಾಧಿಸಲು ಮತ್ತು ದಕ್ಷತೆ ಸುಧಾರಿಸಲು ಪವರ್ ಫೈನಾನ್ಸ್ ಕಾರ್ಪೊರೇಷನ್ ಮತ್ತು ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಪುನಾರಚನೆ ಮಾಡಲಾಗುವುದು: ಕೇಂದ್ರ ಸರ್ಕಾರ ಘೋಷಣೆ
ಕಾರ್ಪೊರೇಟ್ ಬಾಂಡ್ ಸೂಚ್ಯಂಕಗಳಲ್ಲಿ ನಿಧಿಗಳು ಮತ್ತು ಉತ್ಪನ್ನ(ಡೆರಿವೇಟಿವ್)ಗಳಿಗೆ ಸೂಕ್ತ ಪ್ರವೇಶ ಸಿಗುವ “ಮಾರುಕಟ್ಟೆ ಏರಿಳಿತ ನಿರ್ವಹಣೆ ಮಾರ್ಗಸೂಚಿ” ರೂಪಿಸುವುದಾಗಿ ಕೇಂದ್ರ ಬಜೆಟ್ ಪ್ರಸ್ತಾಪ
ಅಧಿಕ ಅಥವಾ ಹೆಚ್ಚಿನ ಮೌಲ್ಯದ ಪುರಸಭೆ ಬಾಂಡ್ ಗಳ ವಿತರಣೆ ಉತ್ತೇಜಿಸಲು 1000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಏಕ ಬಾಂಡ್ ವಿತರಣೆಗೆ 100 ಕೋಟಿ ರೂ. ಪ್ರೋತ್ಸಾಹಧನ
ಭಾರತದ ಹೊರಗೆ(ಹೊರರಾಷ್ಟ್ರಗಳಲ್ಲಿ) ವಾಸಿಸುವ ವ್ಯಕ್ತಿಗಳಿಗೆ ಪೋರ್ಟ್ ಫೋಲಿಯೊ ಹೂಡಿಕೆ ಯೋಜನೆ(ಆರ್ ಬಿಐ ಮೂರ್ಗಸೂಚಿ) ಮೂಲಕ ನೋಂದಾಯಿತ ಭಾರತೀಯ ಕಂಪನಿಗಳ ಈಕ್ವಿಟಿ ಸಾಧನಗಳಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಲಾಗುವುದು
ಪ್ರಕಟಣಾ ದಿನಾಂಕ:
01 FEB 2026 12:45PM by PIB Bengaluru
2026-27ರ ಕೇಂದ್ರ ಬಜೆಟ್ 'ವಿಕಸಿತ ಭಾರತಕ್ಕಾಗಿ ಬ್ಯಾಂಕಿಂಗ್ ಉನ್ನತ ಮಟ್ಟದ ಸಮಿತಿ' ಸ್ಥಾಪಿಸುವುದಾಗಿ ಪ್ರಸ್ತಾಪಿಸಿದೆ. ಸಂಸತ್ತಿನಲ್ಲಿಂದು ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸ್ಥಿರತೆ, ಹಣಕಾಸು ಸೇರ್ಪಡೆ ಮತ್ತು ಗ್ರಾಹಕರ ರಕ್ಷಣೆ ಕಾಪಾಡುವಾಗ ಈ ಉನ್ನತ ಮಟ್ಟದ ಸಮಿತಿಯು, ಹಣಕಾಸು ವಲಯವನ್ನು ಸಮಗ್ರವಾಗಿ ಪರಿಶೀಲಿಸುತ್ತದೆ ಮತ್ತು ಭಾರತದ ಮುಂದಿನ ಹಂತದ ಆರ್ಥಿಕ ಬೆಳವಣಿಗೆಗೆ ಜೋಡಿಸುತ್ತದೆ ಎಂದು ಹೇಳಿದರು. ಇಂದು ಭಾರತೀಯ ಬ್ಯಾಂಕಿಂಗ್ ವಲಯವು ಬಲವಾದ ಬ್ಯಾಲೆನ್ಸ್ ಶೀಟ್ ಗಳು, ಲಾಭದಾಯಕತೆಯಲ್ಲಿ ಐತಿಹಾಸಿಕ ಗರಿಷ್ಠ ಮಟ್ಟಗಳು, ಸುಧಾರಿತ ಸ್ವತ್ತು ಗುಣಮಟ್ಟ ಮತ್ತು ದೇಶದ 98% ಹಳ್ಳಿಗಳನ್ನು ತಲುಪಿದ ವ್ಯಾಪ್ತಿಯಿಂದ ನಿರೂಪಿಸಲ್ಪಟ್ಟಿದೆ ಎಂಬುದನ್ನು ಕೇಂದ್ರ ಬಜೆಟ್ ಗಮನಿಸಿದೆ ಎಂದರು.
ಸಾರ್ವಜನಿಕ ವಲಯದ ಬ್ಯಾಂಕಿಂಗ್ ಯೇತರ ಹಣಕಾಸು ಸಂಸ್ಥೆ(ಎನ್ ಬಿ ಎಫ್ ಸಿ)ಗಳಲ್ಲಿ ಹೆಚ್ಚಿನ ಪ್ರಮಾಣ ಸಾಧಿಸಲು ಮತ್ತು ದಕ್ಷತೆ ಸುಧಾರಿಸುವ ನಿಟ್ಟಿನಲ್ಲಿ ಪವರ್ ಫೈನಾನ್ಸ್ ಕಾರ್ಪೊರೇಷನ್ ಮತ್ತು ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್(ಆರ್ ಇಸಿ) ಸಂಸ್ಥೆಗಳನ್ನು ಪುನಾರಚಿಸುವುದಾಗಿ ಕೇಂದ್ರ ಬಜೆಟ್ ಪ್ರಸ್ತಾಪಿಸಿದೆ. ವಿಕಸಿತ ಭಾರತಕ್ಕಾಗಿ ಎನ್ ಬಿ ಎಫ್ ಸಿಗಳ ದೃಷ್ಟಿಕೋನವನ್ನು ಸಾಲ ವಿತರಣೆ ಮತ್ತು ತಂತ್ರಜ್ಞಾನ ಅಳವಡಿಕೆಯ ಸ್ಪಷ್ಟ ಗುರಿಗಳೊಂದಿಗೆ ವಿವರಿಸಲಾಗಿದೆ.
ಭಾರತದ ವಿಕಸನಗೊಳ್ಳುತ್ತಿರುವ ಆರ್ಥಿಕ ಆದ್ಯತೆಗಳಿಗೆ ಅನುಗುಣವಾಗಿ ವಿದೇಶಿ ಹೂಡಿಕೆಗಳಿಗೆ ಹೆಚ್ಚು ಸಮಕಾಲೀನ, ಬಳಕೆದಾರಸ್ನೇಹಿ ಮಾರ್ಗಸೂಚಿ ರೂಪಿಸುವ ನಿಟ್ಟಿನಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಕೇಂದ್ರ ಬಜೆಟ್ ನಲ್ಲಿ ವಿದೇಶಿ ವಿನಿಮಯ ನಿರ್ವಹಣೆ(ಸಾಲಯೇತರ ಹೂಡಿಕೆ ಸಾಧನಗಳು) ನಿಯಮಗಳ ಸಮಗ್ರ ಪರಾಮರ್ಶೆ ನಡೆಸುವುದಾಗಿ ಪ್ರಸ್ತಾಪಿಸಿದ್ದಾರೆ.

ಕಾರ್ಪೊರೇಟ್ ಬಾಂಡ್ ಸೂಚ್ಯಂಕಗಳಲ್ಲಿನ ನಿಧಿಗಳು ಮತ್ತು ಉತ್ಪನ್ನ(ಡೆರಿವೇಟಿವ್ಸ್)ಗಳಿಗೆ ಸೂಕ್ತವಾದ ಪ್ರವೇಶ ಕಲ್ಪಿಸಲು “ಮಾರುಕಟ್ಟೆ ಏರಿಳಿತ ನಿರ್ವಹಣೆ ಮಾರ್ಗಸೂಚಿ” ಮತ್ತು ಕಾರ್ಪೊರೇಟ್ ಬಾಂಡ್ ಗಳ ಮೇಲಿನ ಒಟ್ಟು ಆದಾಯ ವಿನಿಮಯ(ಟೋಟಲ್ ರಿಟರ್ನ್ ಸ್ವಾಪ್) ವ್ಯವಸ್ಥೆ ರೂಪಿಸುವುದಾಗಿ 2026-27ರ ಕೇಂದ್ರ ಬಜೆಟ್ ಪ್ರಸ್ತಾಪಿಸಿದೆ.
ಬೃಹತ್ ನಗರಗಳಲ್ಲಿ ಅಧಿಕ ಅಥವಾ ಹೆಚ್ಚಿನ ಮೌಲ್ಯದ ಮುನಿಸಿಪಲ್ ಬಾಂಡ್ ಗಳನ್ನು ಸಾರ್ವಜನಿಕರಿಗೆ ನೀಡುವುದನ್ನು ಉತ್ತೇಜಿಸಲು ಕೇಂದ್ರ ಬಜೆಟ್, 1000 ಕೋಟಿ ರೂ.ಗಿಂತ ಅಧಿಕ ಮೌಲ್ಯದ ಒಂದೇ ಬಾಂಡ್ ವಿತರಣೆಗೆ 100 ಕೋಟಿ ಪ್ರೋತ್ಸಾಹಧನ ನೀಡುವುದಾಗಿ ಪ್ರಸ್ತಾಪಿಸಿದೆ. ಪ್ರಸ್ತುತ ಅಮೃತ್ ಯೋಜನೆ ಅಡಿ ಇರುವ 200 ಕೋಟಿ ರೂ. ವರೆಗಿನ ವಿತರಣೆಗಳನ್ನು ಪ್ರೋತ್ಸಾಹಿಸುವ ಸಣ್ಣ ಮತ್ತು ಮಧ್ಯಮ ಗಾತ್ರದ ಪಟ್ಟಣಗಳಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ.
ಸುಲಭವಾಗಿ ವ್ಯವಹಾರ ಮಾಡುವ ವಿಧಾನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಭಾರತದ ಹೊರಗಿನ ನಿವಾಸಿ ವ್ಯಕ್ತಿಗಳು(ಪಿ ಆರ್ ಒ ಐ) ಪೋರ್ಟ್ ಫೋಲಿಯೊ ಹೂಡಿಕೆ ಯೋಜನೆಯ ಮೂಲಕ ನೋಂದಾಯಿಸಲಾದ ಭಾರತೀಯ ಕಂಪನಿಗಳ ಈಕ್ವಿಟಿ ಸಾಧನಗಳಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಲಾಗುವುದು. ಈ ಯೋಜನೆಯಡಿ, ವೈಯಕ್ತಿಕ ಪಿಆರ್ ಒಐಗಳಿಗಾಗಿ ಹೂಡಿಕೆ ಮಿತಿಯನ್ನು 5%ನಿಂದ 10%ಗೆ ಹೆಚ್ಚಿಸಲು ಮತ್ತು ಎಲ್ಲಾ ವೈಯಕ್ತಿಕ ಪಿಆರ್ ಒಐಗಳಿಗೆ ಒಟ್ಟಾರೆ ಹೂಡಿಕೆ ಮಿತಿಯನ್ನು ಪ್ರಸ್ತುತ ಇರುವ 10%ನಿಂದ 24%ಗೆ ಹೆಚ್ಚಿಸುವುದಾಗಿ ಕೇಂದ್ರ ಬಜೆಟ್ ಪ್ರಸ್ತಾಪಿಸಿದೆ.
*****
(ಪ್ರಕಟಣೆ ಐ.ಡಿ.: 2221525)
ವಿಸಿಟರ್ ಕೌಂಟರ್ : 57
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam