ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

16ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಭಾಗವಹಿಸಿದ  ಭಾರತದ ರಾಷ್ಟ್ರಪತಿ


ಮತದಾನ ಕೇವಲ ರಾಜಕೀಯ ಅಭಿವ್ಯಕ್ತಿಯಲ್ಲ; ಇದು ಚುನಾವಣಾ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ನಾಗರಿಕರ ನಂಬಿಕೆಯ ಪ್ರತಿಬಿಂಬ: ರಾಷ್ಟ್ರಪತಿ ದ್ರೌಪದಿ ಮುರ್ಮು

प्रविष्टि तिथि: 25 JAN 2026 2:32PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜನವರಿ 25, 2026) ಹೊಸದಿಲ್ಲಿಯಲ್ಲಿ ನಡೆದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಭಾಗವಹಿಸಿ ಭಾಷಣ ಮಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ನಮ್ಮ ಪ್ರಜಾಪ್ರಭುತ್ವದ ಬಲವು ಮತದಾರರ ದೊಡ್ಡ ಸಂಖ್ಯೆಯಲ್ಲಿ ಮಾತ್ರವಲ್ಲದೆ ಪ್ರಜಾಪ್ರಭುತ್ವದ ಸ್ಪೂರ್ತಿಯ  ಆಳದಲ್ಲಿದೆ ಎಂದು ಹೇಳಿದರು. ಅತ್ಯಂತ ಹಿರಿಯ ಮತದಾರರು, ದಿವ್ಯಾಂಗ ಮತದಾರರು ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವವರು ಸಹ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಾರೆ. ಚುನಾವಣಾ ಆಯೋಗದ ನೇತೃತ್ವದಲ್ಲಿ ಈ ಹಕ್ಕು ಚಲಾಯಿಸುವ ಹಲವು ಸ್ಪೂರ್ತಿದಾಯಕ ಉದಾಹರಣೆಗಳನ್ನು ಒದಗಿಸಿದ್ದಕ್ಕಾಗಿ ಜಾಗೃತ ಮತದಾರರು ಮತ್ತು ಚುನಾವಣಾ ವ್ಯವಸ್ಥೆಯಲ್ಲಿ  ತೊಡಗಿರುವ ಎಲ್ಲರನ್ನು ಅವರು ಶ್ಲಾಘಿಸಿದರು.

ಸಾರ್ವಜನಿಕ ಭಾಗವಹಿಸುವಿಕೆಯು ತಳಮಟ್ಟದಲ್ಲಿ ಪ್ರಜಾಪ್ರಭುತ್ವದ ಚೈತನ್ಯಕ್ಕೆ ಪ್ರಾಯೋಗಿಕ ಆಕಾರ ನೀಡುತ್ತದೆ ಎಂದು ರಾಷ್ಟ್ರಪತಿಗಳು ಹೇಳಿದರು. "ಯಾವುದೇ ಮತದಾರನು ಹಿಂದೆ ಉಳಿಯಬಾರದು" ಎಂದು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಚುನಾವಣಾ ಆಯೋಗವು ಹಲವಾರು ಪ್ರಯತ್ನಗಳನ್ನು ಮಾಡಿದೆ ಎಂಬುದನ್ನು ಅವರು  ಅವರು ಗಮನಿಸಿದರು. ಮತದಾರರ ಜಾಗೃತಿಯನ್ನು ಹೆಚ್ಚಿಸಲು ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಚುನಾವಣಾ ಆಯೋಗವು ಆಯ್ಕೆ ಮಾಡಿದ ಈ ವರ್ಷದ ಧ್ಯೇಯವಾಕ್ಯವಾದ "ನನ್ನ ಭಾರತ, ನನ್ನ ಮತ: ಭಾರತೀಯ ಪ್ರಜಾಪ್ರಭುತ್ವದ ಹೃದಯಭಾಗದಲ್ಲಿ ಭಾರತೀಯ ನಾಗರಿಕ" ನಮ್ಮ ಪ್ರಜಾಪ್ರಭುತ್ವದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕಿನ ಮಹತ್ವವನ್ನು ಒತ್ತಿಹೇಳುತ್ತದೆ.

ಮತದಾನವು ಕೇವಲ ರಾಜಕೀಯ ಅಭಿವ್ಯಕ್ತಿಯಲ್ಲ. ಇದು ಚುನಾವಣಾ ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ನಾಗರಿಕರ ನಂಬಿಕೆಯ ಪ್ರತಿಬಿಂಬವಾಗಿದೆ. ನಾಗರಿಕರು ತಮ್ಮ ಆಕಾಂಕ್ಷೆಗಳನ್ನು ವ್ಯಕ್ತಪಡಿಸಲು ಇದು ಒಂದು ಸಾಧನವಾಗಿದೆ ಎಂದು ರಾಷ್ಟ್ರಪತಿಗಳು ಹೇಳಿದರು. ಎಲ್ಲಾ ವಯಸ್ಕ ನಾಗರಿಕರಿಗೆ ತಾರತಮ್ಯವಿಲ್ಲದೆ ಲಭ್ಯವಿರುವ ಮತದಾನದ ಹಕ್ಕು, ನಮ್ಮ ಸಾಂವಿಧಾನಿಕ ಆದರ್ಶಗಳಾದ ರಾಜಕೀಯ ಮತ್ತು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಬಗ್ಗೆ ಬಲವಾದ  ಅಭಿವ್ಯಕ್ತಿಯನ್ನು ನೀಡುತ್ತದೆ. ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ "ಒಬ್ಬ ವ್ಯಕ್ತಿ, ಒಂದು ಮತ" ವ್ಯವಸ್ಥೆಯು ನಮ್ಮ ಸಂವಿಧಾನ ತಯಾರಕರು ಸಾಮಾನ್ಯ ಜನರ ಬುದ್ಧಿವಂತಿಕೆಯ ಮೇಲಿನಟ್ಟ ದೃಢ ನಂಬಿಕೆಯ ಪರಿಣಾಮವಾಗಿದೆ. ನಮ್ಮ ದೇಶದ ಮತದಾರರು ತಮ್ಮ ನಂಬಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಭಾರತೀಯ ಪ್ರಜಾಪ್ರಭುತ್ವವು ಅಸಾಧಾರಣ ಉದಾಹರಣೆಯಾಗಿ ವಿಶ್ವ ವೇದಿಕೆಯಲ್ಲಿ ಗೌರವವನ್ನು ಗಳಿಸಿದೆ.

ಮತದಾನದ ಹಕ್ಕು ಮುಖ್ಯವಾದರೂ, ಎಲ್ಲಾ ವಯಸ್ಕ ನಾಗರಿಕರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮತವನ್ನು ಚಲಾಯಿಸುವುದೂ ಅಷ್ಟೇ ಮುಖ್ಯ ಎಂದು ರಾಷ್ಟ್ರಪತಿಗಳು ಹೇಳಿದರು. ಎಲ್ಲಾ ಮತದಾರರು ಪ್ರಲೋಭನೆ, ಅಜ್ಞಾನ, ತಪ್ಪು ಮಾಹಿತಿ, ಪ್ರಚಾರ ಮತ್ತು ಪೂರ್ವಾಗ್ರಹಗಳಿಂದ ಮುಕ್ತರಾಗಿ, ತಮ್ಮ ಆತ್ಮಸಾಕ್ಷಿಯ ಶಕ್ತಿಯ ಮೂಲಕ ನಮ್ಮ ಚುನಾವಣಾ ವ್ಯವಸ್ಥೆಯನ್ನು ಬಲಪಡಿಸುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ದೇಶಾದ್ಯಂತ ಮತದಾರರ ಗುರುತಿನ ಚೀಟಿಗಳನ್ನು ಪಡೆದಿರುವ ಎಲ್ಲಾ ಯುವ ಮತದಾರರನ್ನು ರಾಷ್ಟ್ರಪತಿಗಳು ಅಭಿನಂದಿಸಿದರು ಮತ್ತು ಕಾರ್ಡ್ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ರೋಮಾಂಚಕ ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವರಿಗೆ ಅಮೂಲ್ಯವಾದ ಹಕ್ಕನ್ನು ನೀಡುತ್ತದೆ ಎಂದು ಹೇಳಿದರು. ಇಂದಿನ ಮತದಾರರು ಭಾರತದ ಭವಿಷ್ಯದ ಶಿಲ್ಪಿಗಳು ಎಂದೂ ಅವರು ಹೇಳಿದರು. ದೇಶದ ಎಲ್ಲಾ ಯುವ ಮತದಾರರು ಜವಾಬ್ದಾರಿಯುತವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಾರೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

2011 ರಿಂದ, ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ನೆನಪಿಗಾಗಿ ವಾರ್ಷಿಕವಾಗಿ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮವು ಮತದಾರರ ಕೇಂದ್ರೀಯತೆಯನ್ನು ಒತ್ತಿಹೇಳುವುದು, ನಾಗರಿಕರಲ್ಲಿ ಚುನಾವಣಾ ಜಾಗೃತಿ ಮೂಡಿಸುವುದು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.

ರಾಷ್ಟ್ರಪತಿಗಳ ಭಾಷಣವನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ-

 

*****


(रिलीज़ आईडी: 2218488) आगंतुक पटल : 12
इस विज्ञप्ति को इन भाषाओं में पढ़ें: Tamil , Telugu , Odia , English , Urdu , हिन्दी , Marathi , Bengali , Bengali-TR , Malayalam