ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ದಿನಾಂಕ 25.01.2026 ರಂದು ಮಾಡಿದ ‘ಮನ್ ಕಿ ಬಾತ್’ – 130ನೇ ಸಂಚಿಕೆಯ ಕನ್ನಡ ಅವತರಣಿಕೆ
प्रविष्टि तिथि:
25 JAN 2026 11:53AM by PIB Bengaluru
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ.
ಇದು 2026ರ ಮೊದಲ 'ಮನದ ಮಾತು'. ನಾಳೆ, ಜನವರಿ 26 ರಂದು, ನಾವೆಲ್ಲರೂ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ. ಈ ದಿನ ನಮ್ಮ ಸಂವಿಧಾನವು ಜಾರಿಗೆ ಬಂದಿತು. ಜನವರಿ 26, ನಮ್ಮ ಸಂವಿಧಾನದ ನಿರ್ಮಾತೃಗಳಿಗೆ ಗೌರವ ಸಲ್ಲಿಸಲು ನಮಗೆ ಅವಕಾಶ ನೀಡುತ್ತದೆ. ಜನವರಿ 25, ಇಂದಿನ ದಿನ ಕೂಡಾ ಬಹಳ ಪ್ರಮುಖ ದಿನ. ಇಂದು ರಾಷ್ಟ್ರೀಯ ಮತದಾರರ ದಿನ. ಮತದಾರರು ಪ್ರಜಾಪ್ರಭುತ್ವದ ಆತ್ಮವಿದ್ದಂತೆ.
ಸ್ನೇಹಿತರೇ,
ಸಾಮಾನ್ಯವಾಗಿ, ಯಾರೇ ಆಗಲಿ 18 ವರ್ಷ ತುಂಬಿದಾಗ ಅವರು ಮತದಾರರಾಗುತ್ತಾರೆ, ಅದನ್ನು ಜೀವನದ ಒಂದು ಸಾಮಾನ್ಯ ಸಂಗತಿ ಎಂದೇ ಪರಿಗಣಿಸಲಾಗುತ್ತದೆ. ಆದರೆ, ವಾಸ್ತವದಲ್ಲಿ, ಈ ಸಂದರ್ಭವು ಯಾವುದೇ ಭಾರತೀಯನ ಜೀವನದಲ್ಲಿ ಒಂದು ದೊಡ್ಡ ಮೈಲಿಗಲ್ಲಾಗಿದೆ. ಆದ್ದರಿಂದ, ನಾವು ದೇಶದಲ್ಲಿ ಮತದಾರರಾಗುವ ಸಂದರ್ಭವನ್ನು ಆಚರಿಸುವುದು ಬಹಳ ಮುಖ್ಯ. ಹುಟ್ಟುಹಬ್ಬವನ್ನು ಆಸೆಯಿಂದ ನಾವು ಆಚರಿಸುವಂತೆಯೇ, ಯುವಕರು ಮೊದಲ ಬಾರಿಗೆ ಮತದಾರರಾದಾಗ, ನೆರೆಹೊರೆಯವರು, ಗ್ರಾಮ ಅಥವಾ ನಗರವು ಅವರನ್ನು ಅಭಿನಂದಿಸಿ, ಸಿಹಿತಿಂಡಿಗಳನ್ನು ವಿತರಿಸಲು ಒಗ್ಗೂಡಬೇಕು. ಇದು ಮತದಾನದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಹೆಚ್ಚಿಸುತ್ತದೆ. ಇದು ಮತದಾರರಾಗಿರುವುದು ಎಷ್ಟು ಮುಖ್ಯ ಎಂಬ ಭಾವನೆಗೆ ಪುಷ್ಟಿ ನೀಡುತ್ತದೆ.
ಸ್ನೇಹಿತರೇ,
ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವ ಮತ್ತು ನಮ್ಮ ಪ್ರಜಾಪ್ರಭುತ್ವಕ್ಕೆ ಪುಷ್ಟಿ ನೀಡುವಲ್ಲಿ ತಳಮಟ್ಟದಿಂದ ಕೆಲಸದ ಮಾಡುವ ಎಲ್ಲರಿಗೂ ನನ್ನ ಮನಃಪೂರ್ವಕವಾಗಿ ಮೆಚ್ಚುಗೆ ವ್ಯಕ್ತಪಡಿಸಲು ಬಯಸುತ್ತೇನೆ. ಈ ಮತದಾರರ ದಿನದಂದು, 18 ವರ್ಷ ತುಂಬಿದ ನಂತರ ಮತದಾರರಾಗಿ ಖಂಡಿತ ನೋಂದಾಯಿಸಿಕೊಳ್ಳುವಂತೆ ನಾನು ಮತ್ತೊಮ್ಮೆ ನನ್ನ ಯುವ ಸ್ನೇಹಿತರನ್ನು ಆಗ್ರಹಿಸುತ್ತೇನೆ. ಸಂವಿಧಾನವು ಪ್ರತಿಯೊಬ್ಬ ನಾಗರಿಕರಿಂದ ನಿರೀಕ್ಷಿಸುವ ಕರ್ತವ್ಯ ಪ್ರಜ್ಞೆಯನ್ನು ಇದು ಪೂರೈಸುತ್ತದೆ ಜೊತೆಗೆ ಭಾರತದ ಪ್ರಜಾಪ್ರಭುತ್ವ ಕೂಡ ಬಲಗೊಳ್ಳುತ್ತದೆ.
ನನ್ನ ಪ್ರಿಯ ದೇಶವಾಸಿಗಳೇ,
ಸಾಮಾಜಿಕ ಮಾಧ್ಯಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಒಂದು ಆಸಕ್ತಿದಾಯಕ ಪ್ರವೃತ್ತಿಯನ್ನು ನಾನು ಕಂಡಿದ್ದೇನೆ. ಜನರು 2016 ನೇ ವರ್ಷದ ತಮ್ಮ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ. ಅದೇ ಉತ್ಸಾಹದಲ್ಲಿ, ಇಂದು ನಾನು ಕೂಡ ನನ್ನ ನೆನಪುಗಳಲ್ಲಿ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಹತ್ತು ವರ್ಷಗಳ ಹಿಂದೆ, ಜನವರಿ 2016 ರಲ್ಲಿ, ನಾವು ಮಹತ್ವಾಕಾಂಕ್ಷೆಯ ಒಂದು ಪ್ರಯಾಣವನ್ನು ಪ್ರಾರಂಭಿಸಿದ್ದೆವು. ಆ ಪಯಣ ಚಿಕ್ಕದಾಗಿದ್ದರೂ, ಯುವ ಪೀಳಿಗೆಗೆ ಮತ್ತು ದೇಶದ ಭವಿಷ್ಯಕ್ಕೆ ಬಹಳ ಮಹತ್ವವಾದಾದ್ದು ಎಂಬುದರ ಅರಿವು ನಮಗಿತ್ತು. ಆ ಸಮಯದಲ್ಲಿ, ಕೆಲವರಿಗೆ ಅದರ ಬಗ್ಗೆ ಏನೂ ಅರ್ಥವಾಗಿರಲಿಲ್ಲ. ಸ್ನೇಹಿತರೇ, ನಾನು ಯಾವ ಪಯಣದ ಬಗ್ಗೆ ಮಾತನಾಡುತ್ತಿದ್ದೇನೆಂದರೆ ಸ್ಟಾರ್ಟ್-ಅಪ್ ಇಂಡಿಯಾ ಬಗ್ಗೆ. ಈ ಅದ್ಭುತ ಪಯಣದ ನಾಯಕರು ನಮ್ಮ ಯುವ ಸ್ನೇಹಿತರೇ. ತಮ್ಮ comfort zone ನಿಂದ ಹೊರಬಂದು ಅವರು ಕೈಗೊಂಡಂತಹ ಆವಿಷ್ಕಾರಗಳು ಇತಿಹಾಸದಲ್ಲಿ ದಾಖಲಾಗುತ್ತಿವೆ.
ಸ್ನೇಹಿತರೇ,
ಭಾರತದಲ್ಲಿ ಇಂದು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್-ಅಪ್ ಪರಿಸರ ವ್ಯವಸ್ ಸಿದ್ಧಗೊಂಡಿದೆ. ಈ ಸ್ಟಾರ್ಟ್-ಅಪ್‌ಗಳು ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರತಾಗಿವೆ. ಇಂದು, ಅವರು 10 ವರ್ಷಗಳ ಹಿಂದೆ ಊಹೆಗೂ ನಿಲುಕದಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ಪರಮಾಣು ಶಕ್ತಿ, ಅರೆವಾಹಕಗಳು, ಮೊಬಿಲಿಟಿ, ಗ್ರೀನ್ ಹೈಡ್ರೋಜನ್, ಜೈವಿಕ ತಂತ್ರಜ್ಞಾನ, ನೀವು ಯಾವುದನ್ನೇ ಹೆಸರಿಸಿ, ಆ ವಲಯದಲ್ಲಿ ಒಂದಲ್ಲಾ ಒಂದು ಭಾರತೀಯ ನವೋದ್ಯಮಗಳು ಕಾರ್ಯನಿರ್ವಹಿಸುವುದನ್ನು ನೀವು ನೋಡುತ್ತೀರಿ. ಯಾವುದೇ ನವೋದ್ಯಮಗಳೊಂದಿಗೆ ಕೆಲಸ ಮಾಡುತ್ತಿರುವ ಅಥವಾ ತಮ್ಮದೇ ಆದ ನವೋದ್ಯಮವನ್ನು ಪ್ರಾರಂಭಿಸಲು ಬಯಸುವ ನನ್ನ ಎಲ್ಲಾ ಯುವ ಸ್ನೇಹಿತರಿಗೆ ನಾನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ಇಂದು 'ಮನದ ಮಾತು' ಮೂಲಕ ನಾನು ದೇಶವಾಸಿಗಳಿಗೆ, ವಿಶೇಷವಾಗಿ ಕೈಗಾರಿಕೆ ಮತ್ತು ನವೋದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಯುವಕರಿಗೆ ಆಗ್ರಹಿಸಲು ಬಯಸುತ್ತೇನೆ. ಭಾರತದ ಆರ್ಥಿಕತೆ ವೇಗವಾಗಿ ಮುಂದುವರಿಯುತ್ತಿದೆ. ಪ್ರಪಂಚವೇ ಭಾರತದ ಮೇಲೆ ದೃಷ್ಟಿ ನೆಟ್ಟಿದೆ. ಇಂತಹ ಸಮಯದಲ್ಲಿ, ನಮ್ಮೆಲ್ಲರ ಮೇಲೆ ದೊಡ್ಡ ಜವಾಬ್ದಾರಿಯಿದೆ. ಅದೇ ಗುಣಮಟ್ಟಕ್ಕೆ ಪ್ರಾಶಸ್ತ್ಯ ನೀಡುವುದು. 'ಆಗತ್ತೆ, ಪರವಾಗಿಲ್ಲ, ನಡೆಯುತ್ತದೆ' ಎಂಬ ಯುಗ ಕಳೆಯಿತು. ಈ ವರ್ಷ ನಮ್ಮೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಗುಣಮಟ್ಟಕ್ಕೆ ಆದ್ಯತೆ ನೀಡೋಣ. ಗುಣಮಟ್ಟ, ಗುಣಮಟ್ಟ ಮತ್ತು ಕೇವಲ ಗುಣಮಟ್ಟ, ನಿನ್ನೆಗಿಂತ ಇಂದು ಉತ್ತಮ ಗುಣಮಟ್ಟ ಎಂಬುದು ನಮ್ಮ ಏಕೈಕ ಮಂತ್ರವಾಗಲಿ. ನಾವು ಉತ್ಪಾದಿಸುವ ಯಾವುದೇ ವಸ್ತುವಿನ ಗುಣಮಟ್ಟವನ್ನು ಸುಧಾರಿಸಲು ಸಂಕಲ್ಪಗೈಯ್ಯೋಣ. ಅದು ನಮ್ಮ ಜವಳಿ, ತಂತ್ರಜ್ಞಾನ ಅಥವಾ ಎಲೆಕ್ಟ್ರಾನಿಕ್ಸ್. ಅಥವಾ ಕೇವಲ ಪ್ಯಾಕೇಜಿಂಗೇ ಆಗಿರಲಿ, ಭಾರತೀಯ ಉತ್ಪನ್ನವೆಂದ ಉತ್ಕೃಷ್ಟ ಗುಣಮಟ್ಟ ಎನ್ನುವಂತಾಗಲಿ. ಬನ್ನಿ, ಶ್ರೇಷ್ಠತೆಯನ್ನು ನಮ್ಮ ಮಾನದಂಡವನ್ನಾಗಿ ಮಾಡಿಕೊಳ್ಳೋಣ. ಗುಣಮಟ್ಟ ತಗ್ಗುವುದಿಲ್ಲ ಮತ್ತು ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಂಕಲ್ಪಗೈಯ್ಯೋಣ. ನಾನು ಕೆಂಪು ಕೋಟೆಯಿಂದಲೇ "Zero defect – Zero effect" ಎಂಬ ಮಂತ್ರವನ್ನು ಘೋಷಿಸಿದ್ದೆ. ಹೀಗೆ ಮಾಡುವುದರಿಂದ ಮಾತ್ರ ನಾವು ಅಭಿವೃದ್ಧಿ ಹೊಂದಿದ ಭಾರತದತ್ತ ಪಯಣಕ್ಕೆ ವೇಗ ನೀಡಲು ಸಾಧ್ಯವಾಗುತ್ತದೆ.
ನನ್ನ ಪ್ರಿಯ ದೇಶವಾಸಿಗಳೇ,
ನಮ್ಮ ದೇಶದ ಜನರು ಬಹಳ ಆವಿಷ್ಕಾರಿಗಳು. ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವುದು ನಮ್ಮ ದೇಶವಾಸಿಗಳ ಸ್ವಭಾವದಲ್ಲೇ ಇದೆ. ಕೆಲವರು ಈ ಕೆಲಸವನ್ನು ಸ್ಟಾರ್ಟ್-ಅಪ್‌ಗಳ ಮೂಲಕ ಮಾಡಿದರೆ, ಇನ್ನು ಕೆಲವರು ಸಮಾಜದ ಸಾಮೂಹಿಕ ಶಕ್ತಿಯ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಶ್ರಮಿಸುತ್ತಾರೆ. ಉತ್ತರ ಪ್ರದೇಶದ ಅಜಮ್‌ಗಢದಲ್ಲಿ ಇಂಥದ್ದೇ ಒಂದು ಪ್ರಯತ್ನ ಬೆಳಕಿಗೆ ಬಂದಿದೆ. ಈ ಪ್ರದೇಶದ ಮೂಲಕ ಹರಿಯುವ ತಮ್ಸಾ ನದಿಯನ್ನು ಜನರು ಪುನರುಜ್ಜೀವನಗೊಳಿಸಿದ್ದಾರೆ. ತಮ್ಸಾ ಕೇವಲ ನದಿ ಮಾತ್ರವಲ್ಲ, ಬದಲಿಗೆ ನಮ್ಮ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಜೀವಂತ ಮೂಲವಾಗಿದೆ. ಅಯೋಧ್ಯೆಯಲ್ಲಿ ಹುಟ್ಟಿ ಗಂಗಾ ನದಿಯೊಂದಿಗೆ ವಿಲೀನಗೊಳ್ಳುವ ಈ ನದಿಯು ಒಂದೊಮ್ಮೆ ಈ ಪ್ರದೇಶದ ಜನರ ಜೀವನಾಡಿಯಾಗಿತ್ತು, ಆದರೆ ಮಾಲಿನ್ಯದಿಂದಾಗಿ ಅದರ ನಿರಂತರ ಹರಿವಿಗೆ ಅಡ್ಡಿ ಉಂಟಾಗುತ್ತಿತ್ತು. ಹೂಳು, ಕಸ ಮತ್ತು ಕೊಳಕು ಅದರ ಹರಿವನ್ನು ನಿರ್ಬಂಧಿಸಿತ್ತು. ಪರಿಣಾಮವಾಗಿ, ಇಲ್ಲಿನ ಜನರು ಅದಕ್ಕೆ ಪುನರುಜ್ಜೀವನ ನೀಡುವ ಅಭಿಯಾನವನ್ನು ಪ್ರಾರಂಭಿಸಿದರು. ನದಿಯನ್ನು ಸ್ವಚ್ಛಗೊಳಿಸಲಾಯಿತು ಮತ್ತು ಅದರ ದಡದ ಉದ್ದಕ್ಕೂ ನೆರಳು ನೀಡುವ ಹಾಗೂ ಹಣ್ಣಿನ ಮರಗಳನ್ನು ನೆಡಲಾಯಿತು. ಸ್ಥಳೀಯ ಜನರು ತಮ್ಮ ಕರ್ತವ್ಯ ಪ್ರಜ್ಞೆಯೊಂದಿಗೆ ಈ ಕೆಲಸದಲ್ಲಿ ತೊಡಗಿಸಿಕೊಂಡರು ಮತ್ತು ಎಲ್ಲರ ಪ್ರಯತ್ನದಿಂದಾಗಿ ನದಿಯನ್ನು ಪುನರುಜ್ಜೀವನಗೊಳಿಸಲಾಯಿತು.
ಸ್ನೇಹಿತರೇ,
ಆಂಧ್ರಪ್ರದೇಶದ ಅನಂತಪುರದಲ್ಲಿ ಇದೇ ರೀತಿಯ ಸಾರ್ವಜನಿಕ ಭಾಗವಹಿಸುವಿಕೆಯ ಪ್ರಯತ್ನ ಕಂಡುಬಂದಿದೆ. ಈ ಪ್ರದೇಶವು ತೀವ್ರ ಬರಗಾಲವನ್ನು ಎದುರಿಸುತ್ತಲೇ ಇದೆ. ಇಲ್ಲಿನ ಮಣ್ಣು ಕೆಂಪು ಮತ್ತು ಮರಳಿನಿಂದ ಕೂಡಿದ್ದಾಗಿರುವುದರಿಂದ ಇಲ್ಲಿಯ ಜನರು ನೀರಿನ ಅಭಾವವನ್ನು ಎದುರಿಸುತ್ತಾರೆ. ಇಲ್ಲಿನ ಅನೇಕ ಪ್ರದೇಶಗಳಲ್ಲಿ ದೀರ್ಘಕಾಲದವರೆಗೆ ಮಳೆಯೇ ಆಗುವುದಿಲ್ಲ. ಅದೆಷ್ಟೋ ಬಾರಿ ಜನರು ಅನಂತಪುರವನ್ನು ಮರುಭೂಮಿಯ ಬರಗಾಲಕ್ಕೆ ಹೋಲಿಸುತ್ತಾರೆ. ಸ್ನೇಹಿತರೇ, ಈ ಸಮಸ್ಯೆಯನ್ನು ಪರಿಹರಿಸಲು, ಸ್ಥಳೀಯರು ಜಲಮೂಲಗಳನ್ನು ಸ್ವಚ್ಛಗೊಳಿಸುವ ಸಂಕಲ್ಪಗೈದರು. ನಂತರ, ಆಡಳಿತದ ಸಹಯೋಗದೊಂದಿಗೆ, "ಅನಂತ ನೀರು ಸಂರಕ್ಷಣಂ ಯೋಜನೆ"ಯನ್ನು ಪ್ರಾರಂಭಿಸಲಾಯಿತು. ಈ ಪ್ರಯತ್ನದಡಿಯಲ್ಲಿ, 10 ಕ್ಕೂ ಹೆಚ್ಚು ಜಲಮೂಲಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಆ ಜಲಾಶಯಗಳಲ್ಲಿ ಈಗ ನೀರು ಭರ್ತಿಯಾಗುತ್ತಿದೆ. ಜೊತೆಗೆ, 7,000 ಕ್ಕೂ ಹೆಚ್ಚು ಮರಗಳನ್ನು ಇಲ್ಲಿ ನೆಡಲಾಗಿದೆ. ಇದರರ್ಥ ಅನಂತಪುರದಲ್ಲಿ ನೀರಿನ ಸಂರಕ್ಷಣೆ ಜೊತೆ ಜೊತೆಗೆ ವೃಕ್ಷಾರೋಪಣ ಕೂಡಾ ವೃಧ್ಧಿಸಿದೆ. ಮಕ್ಕಳು ಈಗ ಇಲ್ಲಿ ಈಜುವುದನ್ನು ಆನಂದಿಸಬಹುದು. ಒಂದು ರೀತಿಯಲ್ಲಿ, ಇಲ್ಲಿನ ಸಂಪೂರ್ಣ ಪರಿಸರ ವ್ಯವಸ್ಥೆ ಪುನರುಜ್ಜೀವಿತಗೊಂಡಿದೆ.
ಸ್ನೇಹಿತರೇ,
ಅದು ಅಜಮ್‌ಗಢ ಆಗಿರಲಿ, ಅಥವಾ ಅನಂತಪುರ್ ಇಲ್ಲವೆ ದೇಶದ ಬೇರಾವುದೇ ಪ್ರದೇಶವಾಗಿರಲಿ, ಜನರು ಒಗ್ಗೂಡಿ ಕರ್ತವ್ಯ ಪ್ರಜ್ಞೆಯೊಂದಿಗೆ ದೊಡ್ಡ ಸಾಧನೆಗೈಯ್ಯುವುದನ್ನು ನೋಡುವುದು ಸಂತಸದ ಸಂಗತಿಯಾಗಿದೆ. ಸಾರ್ವಜನಿಕ ಭಾಗವಹಿಸುವಿಕೆ ಮತ್ತು ಸಾಮೂಹಿಕತೆಯ ಈ ಮನೋಭಾವವೇ ನಮ್ಮ ರಾಷ್ಟ್ರದ ದೊಡ್ಡ ಶಕ್ತಿಯಾಗಿದೆ.
ನನ್ನ ಪ್ರಿಯ ದೇಶವಾಸಿಗಳೇ,
ಶತಮಾನಗಳಿಂದ ನಮ್ಮ ದೇಶದಲ್ಲಿ, ಭಜನೆಗಳು ಮತ್ತು ಕೀರ್ತನೆಗಳು ನಮ್ಮ ಸಂಸ್ಕೃತಿಯ ಆತ್ಮದಂತಿವೆ. ನಾವು ದೇವಾಲಯಗಳಲ್ಲಿ ಭಜನೆಗಳನ್ನು ಕೇಳಿದ್ದೇವೆ, ಕಥೆಗಳನ್ನು ಕೇಳುತ್ತಿದ್ದೇವೆ ಮತ್ತು ಪ್ರತಿ ಯುಗವು ಅದರ ಕಾಲಕ್ಕೆ ಅನುಗುಣವಾಗಿ ಭಕ್ತಿಯ ಸಾರದಲ್ಲಿ ಮಿಂದೆದ್ದಿವೆ. ಇಂದಿನ ಪೀಳಿಗೆಯೂ ಸಹ ಅಧ್ಬುತ ಕಾರ್ಯಗಳನ್ನು ಸಾಧಿಸುತ್ತಿದೆ. ಇಂದಿನ ಯುವಕರು ತಮ್ಮ ಅನುಭವಗಳಲ್ಲಿ ಮತ್ತು ಜೀವನಶೈಲಿಯಲ್ಲಿ ಭಕ್ತಿಯನ್ನು ಅಳವಡಿಸಿಕೊಂಡಿದ್ದಾರೆ. ಈ ಚಿಂತನೆಯು ಹೊಸ ಸಾಂಸ್ಕೃತಿಕ ಪ್ರವೃತ್ತಿಗೆ ನಾಂದಿ ಹಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಇಂತಹ ವೀಡಿಯೊಗಳನ್ನು ನೀವು ಖಂಡಿತ ನೋಡಿರಬಹುದು. ದೇಶಾದ್ಯಂತ ವಿವಿಧ ನಗರಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡುತ್ತಿದ್ದಾರೆ. ವೇದಿಕೆ ಅಲಂಕೃತಗೊಂಡಿರುತ್ತದೆ, ಬೆಳಕು, ಸಂಗೀತ, ಎಲ್ಲಾ ಆಡಂಬರ ಮತ್ತು ಪ್ರದರ್ಶನವಿರುತ್ತದೆ. ಅಲ್ಲಿಯ ವಾತಾವರಣವು ಯಾವುದೇ ಸಂಗೀತ ಕಚೇರಿಗಿಂತ ಕಡಿಮೆಯೇನಿರುವುದಿಲ್ಲ. ಅದನ್ನು ನೋಡಿದರೆ ಯಾವುದೋ ಭವ್ಯ ಸಂಗೀತ ಕಚೇರಿಯಂತೆ ಭಾಸವಾಗುತ್ತದೆ, ಆದರೆ ಅಲ್ಲಿ ಸಂಪೂರ್ಣ ಏಕಾಗ್ರತೆ, ಸಮರ್ಪಣೆ ಮತ್ತು ಲಯದೊಂದಿಗೆ, ಹಾಡಲಾಗುವ ಭಜನೆಗಳು ಪ್ರತಿಧ್ವನಿಸುತ್ತವೆ. ಇಂದು ಈ ಪ್ರವೃತ್ತಿಯನ್ನು 'ಭಜನ್ ಕ್ಲಬ್ಬಿಂಗ್' ಎಂದು ಕರೆಯಲಾಗುತ್ತಿದೆ. ವಿಷೇಷವಾಗಿ ಜೆನ್ ಜಿ ಯುವಜನರಲ್ಲಿ ಇದು ಹೆಚ್ಚು ಜನಪ್ರಿಯವಾಗುತ್ತಿದೆ. ಈ ಕಾರ್ಯಕ್ರಮಗಳಲ್ಲಿ ಭಜನೆಗಳ ಘನತೆ ಮತ್ತು ಶುದ್ಧತೆಯನ್ನು ಕಾಪಾಡಿಕೊಳ್ಳುವುದನ್ನು ನೋಡಿ ಆನಂದವಾಗುತ್ತದೆ. ಭಕ್ತಿಯನ್ನು ಹಗುರವಾಗಿ ಪರಿಗಣಿಸಲಾಗುವುದಿಲ್ಲ. ಶಬ್ದಗಳ ಪಾವಿತ್ರ್ಯತೆ ಅಥವಾ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ. ವೇದಿಕೆ ಆಧುನಿಕವಾಗಿರಬಹುದು, ಸಂಗೀತ ಪ್ರಸ್ತುತಿ ವಿಭಿನ್ನವಾಗಿರಬಹುದು, ಆದರೆ ಮೂಲ ಭಾವ ಒಂದೇ ಆಗಿರುತ್ತದೆ. ಅಲ್ಲಿ ಆಧ್ಯಾತ್ಮಿಕತೆಯ ನಿರಂತರ ಹರಿವು ಅನುಭವಿಸಲ್ಪಡುತ್ತದೆ.
ನನ್ನ ಪ್ರಿಯ ದೇಶವಾಸಿಗಳೇ,
ಇಂದು ನಮ್ಮ ಸಂಸ್ಕೃತಿ ಮತ್ತು ಹಬ್ಬಗಳು ಪ್ರಪಂಚದಾದ್ಯಂತ ತಮ್ಮದೇ ಛಾಪನ್ನು ಮೂಡಿಸುತ್ತಿವೆ. ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಭಾರತೀಯ ಹಬ್ಬಗಳನ್ನು ಅತ್ಯಂತ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. ಸಾಂಸ್ಕೃತಿಕ ಚೈತನ್ಯವನ್ನು ಕಾಪಾಡಿಕೊಳ್ಳುವಲ್ಲಿ ನಮ್ಮ ಭಾರತೀಯ ಸಹೋದರ ಸಹೋದರಿಯರ ಪಾತ್ರ ಮಹತ್ವದ್ದಾಗಿದೆ. ಅವರು ಎಲ್ಲೇ ಇರಲಿ, ತಮ್ಮ ಸಂಸ್ಕೃತಿಯ ಮೂಲ ಸಾರವನ್ನು ಸಂರಕ್ಷಿಸಿ ಉತ್ತೇಜಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಲೇಷ್ಯಾದಲ್ಲಿರುವ ನಮ್ಮ ಭಾರತೀಯ ಸಮುದಾಯವು ಶ್ಲಾಘನೀಯ ಕೆಲಸವನ್ನು ಮಾಡುತ್ತಿದೆ. ಮಲೇಷ್ಯಾದಲ್ಲಿ 500 ಕ್ಕೂ ಹೆಚ್ಚು ತಮಿಳು ಶಾಲೆಗಳಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ತಮಿಳು ಭಾಷೆಯನ್ನು ಕಲಿಸುವುದರ ಜೊತೆಗೆ, ಇತರ ವಿಷಯಗಳನ್ನು ಕೂಡಾ ಇಲ್ಲಿ ತಮಿಳಿನಲ್ಲಿ ಕಲಿಸಲಾಗುತ್ತದೆ. ಅಲ್ಲದೆ, ತೆಲುಗು ಮತ್ತು ಪಂಜಾಬಿ ಸೇರಿದಂತೆ ಇತರ ಭಾರತೀಯ ಭಾಷೆಗಳ ಮೇಲೆ ವಿಷೇಷ ಗಮನ ಹರಿಸಲಾಗುತ್ತಿದೆ.
ಸ್ನೇಹಿತರೇ,
ಭಾರತ ಮತ್ತು ಮಲೇಷ್ಯಾ ನಡುವಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಒಂದು ಸಂಸ್ಥೆ ಮಹತ್ವದ ಪಾತ್ರ ವಹಿಸಿದೆ. ಇದರ ಹೆಸರು 'ಮಲೇಷ್ಯಾ ಇಂಡಿಯಾ ಹೆರಿಟೇಜ್ ಸೊಸೈಟಿ'. ವಿವಿಧ ಕಾರ್ಯಕ್ರಮಗಳ ಜೊತೆಗೆ, ಈ ಸಂಸ್ಥೆಯು ಎರಡು ದೇಶಗಳನ್ನು ಸಂಪರ್ಕಿಸುವ ಸಾಂಸ್ಕೃತಿಕ ತಾಣಗಳನ್ನು ಒಳಗೊಂಡ ಹೆರಿಟೇಜ್ ವಾಕ್ ಸಹ ಆಯೋಜಿಸುತ್ತದೆ. ಕಳೆದ ತಿಂಗಳು, ಮಲೇಷ್ಯಾದಲ್ಲಿ ಐಕಾನಿಕ್ 'ಲಾಲ್ ಪಾಡ್ ಸಾಡಿ' ಐಕಾನಿಕ್ ವಾಕ್ ಆಯೋಜಿಸಲಾಗಿತ್ತು. ಈ ಸೀರೆಯು ನಮ್ಮ ಬಂಗಾಳಿ ಸಂಸ್ಕೃತಿಯೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಈ ಸೀರೆಯನ್ನು ಧರಿಸಿದ ಜನರು ಹೊಸ ದಾಖಲೆಯನ್ನು ನಿರ್ಮಿಸಿದರು. ಇದನ್ನು ಮಲೇಷ್ಯಾದ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಒಡಿಸ್ಸಿ ನೃತ್ಯ ಮತ್ತು ಬೌಲ್ ಸಂಗೀತ ಜನರ ಮನ ಗೆದ್ದಿತು. ನಾನು ಹೇಳಬಲ್ಲೆ -
ಸಾಯಾ ಬರ್ಬಂಗಾ / ದೆಂಗಾನ್ ಡಿಯಾಸ್ಪೊರಾ ಇಂಡಿಯಾ/
ದಿ ಮಲೇಷ್ಯಾ //
ಮೆರೆಕಾ ಮಂಬಾವಾ/ ಇಂಡಿಯಾ ದಾನ್ ಮಲೇಷ್ಯಾ /
ಸೆಮಾಕಿನ್ ರಾಪಾ //
(ಕನ್ನಡ ಭಾಷಾಂತರ - ಮಲೇಷ್ಯಾದಲ್ಲಿರುವ ಭಾರತೀಯ ವಲಸೆಗಾರರ ಬಗ್ಗೆ ನನಗೆ ಹೆಮ್ಮೆ ಇದೆ; ಅವರು ಭಾರತ ಮತ್ತು ಮಲೇಷ್ಯಾದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ.)
ಮಲೇಷ್ಯಾದಲ್ಲಿರುವ ನಮ್ಮ ಭಾರತೀಯ ವಲಸಿಗರಿಗೆ ನನ್ನ ಅನಂತ ಶುಭಾಶಯಗಳು.
ನನ್ನ ಪ್ರೀತಿಯ ದೇಶಬಾಂಧವರೇ,
ನಾವು ಭಾರತದ ಯಾವುದೇ ಭಾಗಕ್ಕೆ ಹೋದರೂ, ಅಲ್ಲಿ ನಮಗೆ ಏನಾದರೊಂದು ಅಸಾಧಾರಣವಾದ, ಅದ್ಭುತವಾದ ಅಂಶ ಖಂಡಿತವಾಗಿಯೂ ಕಾಣಸಿಗುತ್ತದೆ. ಕೆಲವೊಮ್ಮೆ ಮಾಧ್ಯಮದ ಪ್ರಚಾರದ ಭರಾಟೆಯಲ್ಲಿ ಈ ವಿಷಯಗಳಿಗೆ ಜಾಗ ದೊರೆಯುವುದಿಲ್ಲ. ಆದರೆ ನಮ್ಮ ಸಮಾಜದ ನಿಜವಾದ ಶಕ್ತಿ ಯಾವುದೆಂದು ಇವುಗಳಿಂದ ತಿಳಿದುಬರುತ್ತದೆ. ಇವುಗಳಿಂದ ಏಕತೆಯ ಮನೋಭಾವ ಅತ್ಯುನ್ನತವಾಗಿರುವ ನಮ್ಮ ಆ ಮೌಲ್ಯ ವ್ಯವಸ್ಥೆಗಳ ಒಂದು ನೋಟವೂ ದೊರೆಯುತ್ತದೆ. ಗುಜರಾತ್ ನ ಬೆಚರಾಜಿಯ ಚಂದನಕೀ ಗ್ರಾಮದ ಸಂಪ್ರದಾಯ ಬಹಳ ವಿಶಿಷ್ಟವಾಗಿದೆ. ಇಲ್ಲಿನ ಜನರು ವಿಶೇಷವಾಗಿ ವೃದ್ಧರು ತಮ್ಮ ಮನೆಗಳಲ್ಲಿ ಅಡುಗೆ ಮಾಡುವುದಿಲ್ಲ ಎಂದು ನಾನು ಹೇಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇದಕ್ಕೆ ಕಾರಣವೆಂದರೆ ಅಲ್ಲಿರುವ ಭವ್ಯವಾದ ಸಮುದಾಯ ಅಡುಗೆ ಮನೆ ಅಂದರೆ ಕಮ್ಯೂನಿಟಿ ಕಿಚನ್. ಈ ಸಮುದಾಯ ಅಡುಗೆ ಮನೆಯಲ್ಲಿ ಒಂದೇಬಾರಿಗೆ ಇಡೀ ಗ್ರಾಮದ ಜನರಿಗಾಗಿ ಭೋಜನ ತಯಾರಾಗುತ್ತದೆ ಮತ್ತು ಜನರು ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಕಳೆದ 15 ವರ್ಷಗಳಿಂದ ಈ ಸಂಪ್ರದಾಯ ನಿರಂತರವಾಗಿ ಮುಂದುವರಿಯುತ್ತಿದೆ. ಇಷ್ಟೇ ಅಲ್ಲದೆ, ಯಾರಾದರೊಬ್ಬರು ಅನಾರೋಗ್ಯಕ್ಕೆ ಗುರಿಯಾದರೆ, ಅವರಿಗಾಗಿ ಟಿಫಿನ್ ಸೇವೆಯೂ ಲಭ್ಯವಿದೆ ಅಂದರೆ, ಅವರ ಮನೆಗೇ ಆಹಾರ ತಲುಪಿಸುವ ಏರ್ಪಾಡು ಕೂಡಾ ಇದೆ. ಗ್ರಾಮದ ಈ ಸಾಮೂಹಿಕ ಭೋಜನದಿಂದ ಜನರು ಆನಂದದಿಂದ ಇದ್ದಾರೆ. ಈ ಉಪಕ್ರಮ ಕೇವಲ ಜನರನ್ನು ಪರಸ್ಪರ ಸಂಪರ್ಕಿಸುವುದು ಮಾತ್ರವಲ್ಲದೇ ಒಂದೇ ಕುಟುಂಬವೆಂಬ ಭಾವನೆಯನ್ನೂ ಉತ್ತೇಜಿಸುತ್ತದೆ.
ಸ್ನೇಹಿತರೇ,
ಭಾರತದ ಕೌಟುಂಬಿಕ ವ್ಯವಸ್ಥೆ - Family System ನಮ್ಮ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದೆ. ವಿಶ್ವದ ಅನೇಕ ದೇಶಗಳಲ್ಲಿ ಇದನ್ನು ಬಹಳ ಕುತೂಹಲದಿಂದ ನೋಡಲಾಗುತ್ತದೆ. ಅನೇಕ ದೇಶಗಳಲ್ಲಿ ಇಂತಹ ಕೌಟುಂಬಿಕ ವ್ಯವಸ್ಥೆಯ ಬಗ್ಗೆ ಬಹಳ ಗೌರವವಿದೆ. ಕೆಲವೇ ದಿನಗಳ ಹಿಂದೆ ನನ್ನ ಸೋದರ (ಆತ್ಮೀಯ) U.A.E. ರಾಷ್ಟ್ರಪತಿ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯದ್ ಅಲ್ ನಾಹಯಾನ್ ಭಾರತಕ್ಕೆ ಆಗಮಿಸಿದ್ದರು. 2026 ನೇ ವರ್ಷವನ್ನು ಯು.ಎ.ಇ. ಕುಟುಂಬದ ವರ್ಷವಾಗಿ (year of family) ಆಚರಿಸುತ್ತದೆ ಎಂದು ಅವರು ನನಗೆ ಹೇಳಿದರು. ಅಲ್ಲಿನ ಜನರಲ್ಲಿ ಸಾಮರಸ್ಯ ಮತ್ತು ಸಮುದಾಯ ಮನೋಭಾವವನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ, ಇದು ನಿಜಕ್ಕೂ ಬಹಳ ಶ್ಲಾಘನೀಯ ಉಪಕ್ರಮವಾಗಿದೆ.
ಸ್ನೇಹಿತರೇ,
ಕುಟುಂಬ ಮತ್ತು ಸಮಾಜದ ಶಕ್ತಿ ಒಂದುಗೂಡಿದಾಗ, ನಾವು ಅತ್ಯಂತ ಕಠಿಣ ಸವಾಲುಗಳನ್ನು ಕೂಡಾ ಸುಲಭವಾಗಿ ಜಯಿಸಬಹುದು. ಅನಂತ್ ನಾಗ್ ನ ಶೇಖ್ ಗುಂಡ್ ಗ್ರಾಮ ಕುರಿತಂತೆ ವಿಷಯವೊಂದು ನನಗೆ ತಿಳಿದುಬಂದಿದೆ. ಇಲ್ಲಿ ಮಾದಕ ಪದಾರ್ಥಗಳು, ತಂಬಾಕು, ಸಿಗರೇಟ್ ಮತ್ತು ಮದ್ಯ ಸೇವನೆಗೆ ಸಂಬಂಧಿಸಿದ ಸವಾಲುಗಳು ಹೆಚ್ಚಾಗಿದ್ದವು. ಇವುಗಳನ್ನು ನೋಡಿ ಅಲ್ಲಿನ ಮೀರ್ ಜಾಫರ್ ಅವರಿಗೆ ಬಹಳ ಚಿಂತೆಯಾಯಿತು, ಅವರು ಈ ಸಮಸ್ಯೆಯನ್ನು ದೂರಮಾಡಬೇಕೆಂದು ಪಣ ತೊಟ್ಟರು. ಅವರು ಗ್ರಾಮದ ಯುವಜನತೆಯಿಂದ ವೃದ್ಧರವರೆಗೂ ಎಲ್ಲರನ್ನೂ ಒಗ್ಗೂಡಿಸಿದರು. ಅವರ ಈ ಉಪಕ್ರಮ ಅದೆಷ್ಟು ಪ್ರಭಾವ ಬೀರಿತೆಂದರೆ ಅಲ್ಲಿನ ಅಂಗಡಿಗಳು ತಂಬಾಕು ಉತ್ಪನ್ನಗಳ ಮಾರಾಟವನ್ನೇ ನಿಲ್ಲಿಸಿಬಿಟ್ಟವು. ಈ ಪ್ರಯತ್ನದಿಂದಾಗಿ ಮಾದಕ ಪದಾರ್ಥಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಾಯಿತು.
ಸ್ನೇಹಿತರೇ,
ಅನೇಕ ವರ್ಷಗಳಿಂದ ನಿಸ್ವಾರ್ಥ ಭಾವನೆಯಿಂದ ಸಮಾಜದ ಸೇವೆಯಲ್ಲಿ ತೊಡಗಿಕೊಂಡಿರುವ ಹಲವಾರು ಸಂಸ್ಥೆಗಳು ನಮ್ಮ ದೇಶದಲ್ಲಿವೆ. ಇಂತಹ ಒಂದು ಸಂಸ್ಥೆ ಪಶ್ಚಿಮ ಬಂಗಾಳದ ಪೂರ್ವ ಮೇದಿನೀಪುರದ ಫರೀದ್ ಪುರದಲ್ಲಿದೆ. ಈ ಸಂಸ್ಥೆಯ ಹೆಸರು ‘ವಿವೇಕಾನಂದ್ ಲೋಕ್ ಶಿಕ್ಷಾ ನಿಕೇತನ್’ ಎಂಬುದಾಗಿದೆ. ಈ ಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ಮಕ್ಕಳು ಮತ್ತು ವೃದ್ಧರ ಲಾಲನೆ-ಪಾಲನೆಯ ಕೆಲಸದಲ್ಲಿ ತೊಡಗಿಕೊಂಡಿದೆ. ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಮತ್ತು ಶಿಕ್ಷಕರ ತರಬೇತಿಯೊಂದಿಗೆ ಈ ಸಂಸ್ಥೆಯು ಸಮಾಜ ಕಲ್ಯಾಣದ ಅನೇಕ ಉದಾತ್ತ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ನಮ್ಮ ದೇಶವಾಸಿಗಳಲ್ಲಿ ಈ ನಿಸ್ವಾರ್ಥ ಸೇವಾ ಮನೋಭಾವವು ಇನ್ನಷ್ಟು ಬಲಗೊಳ್ಳಲಿ ಎಂದು ನಾನು ಹಾರೈಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ,
‘ಮನ್ ಕೀ ಬಾತ್’ ನಲ್ಲಿ ನಾವು ಸ್ವಚ್ಛತೆಯ ವಿಷಯ ಕುರಿತು ಮಾತನಾಡುತ್ತಲೇ ಇರುತ್ತೇವೆ. ನಮ್ಮ ಯುವಜನತೆ ತಮ್ಮ ಸುತ್ತಮುತ್ತಲಿನ ಸ್ವಚ್ಛತೆಯ ಬಗ್ಗೆ ಬಹಳ ಜಾಗೃತರಾಗಿರುವುದು ನೋಡಿ ನನಗೆ ಹೆಮ್ಮೆ ಎನಿಸುತ್ತದೆ. ಅರುಣಾಚಲ ಪ್ರದೇಶದಲ್ಲಿನ ಇಂತಹ ವಿಶಿಷ್ಠ ಪ್ರಯತ್ನದ ಬಗ್ಗೆ ನನಗೆ ಮಾಹಿತಿ ದೊರೆತಿದೆ. ದೇಶದಲ್ಲಿ ಸೂರ್ಯನ ಕಿರಣ ಎಲ್ಲಕ್ಕಿಂತ ಮೊದಲು ಸ್ಪರ್ಶಿಸುವ ಭೂಮಿ ಅರುಣಾಚಲ ಪ್ರದೇಶ ಎನಿಸಿದೆ. ಇಲ್ಲಿನ ಜನರು ಪರಸ್ಪರ ಜೈ ಹಿಂದ್ ಎಂದು ವಂದನೆ ಸಲ್ಲಿಸುತ್ತಾರೆ. ಇಲ್ಲಿ ಇಟಾನಗರದಲ್ಲಿ ಯುವಜನರ ಸಮೂಹವೊಂದು ಹೆಚ್ಚಿನ ಗಮನ ಅಗತ್ಯವಿರುವ ಪ್ರದೇಶವನ್ನು ಸ್ವಚ್ಛಗೊಳಿಸಲು ಒಟ್ಟುಗೂಡಿತು. ಈ ಯುವಜನರು ಬೇರೆ ಬೇರೆ ನಗರಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ತಮ್ಮ ಧ್ಯೇಯವಾಗಿಸಿಕೊಂಡರು. ನಂತರ ಇಟಾನಗರ್, ನಾಹರಲಾಗುನ್, ದೋಯೀಮುಖ್, ಸೇಪ್ಪಾ, ಪಾಲಿನ್ ಮತ್ತು ಪಾಸೀಘಾಟ್ ನಲ್ಲಿ ಕೂಡಾ ಈ ಅಭಿಯಾನ ನಡೆಸಲಾಯಿತು. ಈ ಯುವಜನರು ಈಗ ಸುಮಾರು 11 ಲಕ್ಷ ಕಿಲೋಗಿಂತಲೂ ಅಧಿಕ ತ್ಯಾಜ್ಯ ತೊಲಗಿಸಿ ಸ್ವಚ್ಛಗೊಳಿಸಿದ್ದಾರೆ. ಯೋಚಿಸಿ ನೋಡಿ ಸ್ನೇಹಿತರೇ, ಯುವಜನರು ಒಟ್ಟಾಗಿ ಸೇರಿ, 11 ಲಕ್ಷ ಕಿಲೋ ತ್ಯಾಜ್ಯ ತೊಲಗಿಸಿದ್ದಾರೆ.
ಸ್ನೇಹಿತರೇ,
ಇನ್ನೊಂದು ಉದಾಹರಣೆ ಅಸ್ಸಾಂನಿಂದ. ಅಸ್ಸಾಂನ ನಾಗಾಂವ್ ನಲ್ಲಿ ಜನರು ಹಳೆಯ ಬೀದಿಗಳೊಂದಿಗೆ ಜನರು ಭಾವನಾತ್ಮಕ ಅನುಬಂಧ ಹೊಂದಿದ್ದಾರೆ. ಇಲ್ಲಿ ಕೆಲವರು ಒಗ್ಗಟ್ಟಾಗಿ ತಮ್ಮ ಬೀದಿಗಳನ್ನು ಸ್ವಚ್ಛಗೊಳಿಸಲು ನಿರ್ಧರಿಸಿದರು. ಕ್ರಮೇಣ, ಅಧಿಕ ಸಂಖ್ಯೆಯಲ್ಲಿ ಜನರು ಅವರೊಂದಿಗೆ ಸೇರಿಕೊಂಡರು. ಈ ರೀತಿಯಾಗಿ, ಒಂದು ತಂಡ ರಚಿಸಲಾಯಿತು, ಇದು ಬೀದಿಗಳಿಂದ ಬಹಳಷ್ಟು ಕಸವನ್ನು ತೊಲಗಿಸಿತು. ಸ್ನೇಹಿತರೇ, ಬೆಂಗಳೂರಿನಲ್ಲಿಯೂ ಇದೇ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಸೋಫಾ ತ್ಯಾಜ್ಯವು ಒಂದು ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದ್ದು, ಕೆಲವು ವೃತ್ತಿಪರರು ಒಗ್ಗೂಡಿ ಈ ಸಮಸ್ಯೆಯನ್ನು ತಮ್ಮದೇ ಆದ ರೀತಿಯಲ್ಲಿ ಪರಿಹರಿಸುತ್ತಿದ್ದಾರೆ.
ಸ್ನೇಹಿತರೇ,
ಅನೇಕ ನಗರಗಳಲ್ಲಿ ಇಂದು ಲ್ಯಾಂಡ್ ಫಿಲ್ ತ್ಯಾಜ್ಯವನ್ನು ಮರುಬಳಕೆ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿರುವ ಅನೇಕ ತಂಡಗಳಿವೆ. ಚೆನ್ನೈನಲ್ಲಿ ಇಂತಹ ಒಂದು ತಂಡ ಬಹಳ ಉತ್ತಮ ಕೆಲಸ ಮಾಡಿದೆ. ಸ್ವಚ್ಛತೆಗೆ ಸಂಬಂಧಿಸಿದ ಪ್ರತಿಯೊಂದು ಪ್ರಯತ್ನವೂ ಎಷ್ಟೊಂದು ಮಹತ್ವ ಹೊಂದಿರುತ್ತದೆಂದು ಇಂತಹ ಉದಾಹರಣೆಗಳಿಂದ ತಿಳಿದು ಬರುತ್ತದೆ. ಸ್ವಚ್ಛತೆಗಾಗಿ ನಾವು ವೈಯಕ್ತಿಕವಾಗಿ ಅಥವಾ ತಂಡದ ರೂಪದಲ್ಲಿ ನಮ್ಮ ಪ್ರಯತ್ನವನ್ನು ಹೆಚ್ಚಿಸಬೇಕು, ಆಗಲೇ ನಮ್ಮ ನಗರಗಳು ಮತ್ತಷ್ಟು ಉತ್ತಮವಾಗುತ್ತವೆ.
ನನ್ನ ಪ್ರೀತಿಯ ದೇಶವಾಸಿಗಳೇ,
ಪರಿಸರ ಸಂರಕ್ಷಣೆ ಕುರಿತು ಮಾತನಾಡುವಾಗ, ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ದೊಡ್ಡ ದೊಡ್ಡ ಯೋಜನೆಗಳು, ಅಭಿಯಾನಗಳು ಮತ್ತು ಸಂಘಟನೆಗಳ ವಿಚಾರ ಬರುತ್ತದೆ. ಆದರೆ ಕೆಲವೊಮ್ಮೆ ಬದಲಾವಣೆ ಎನ್ನುವುದರ ಆರಂಭ ಬಹಳ ಸಾಧಾರಣ ರೀತಿಯಲ್ಲಿ ಆಗುತ್ತದೆ. ಓರ್ವ ವ್ಯಕ್ತಿಯಿಂದ, ಒಂದು ಇಲಾಖೆಯಿಂದ, ಒಂದು ಹೆಜ್ಜೆಯಿಂದ ಮತ್ತು ಸತತವಾಗಿ ಮಾಡುವ ಸಣ್ಣ ಸಣ್ಣ ಪ್ರಯತ್ನಗಳಿಂದ ಕೂಡಾ ಬಹುದೊಡ್ಡ ಬದಲಾವಣೆ ಉಂಟಾಗುತ್ತದೆ. ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ನಿವಾಸಿ ಬೇನೋಯ್ ದಾಸ್ ಅವರ ಪ್ರಯತ್ನ ಇದಕ್ಕೆ ಒಂದು ಉದಾಹರಣೆಯಾಗಿದೆ. ಕಳೆದ ಅನೇಕ ವರ್ಷಗಳಿಂದ ಅವರು ತಮ್ಮ ಜಿಲ್ಲೆಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುವ ಕೆಲಸದಲ್ಲಿ ಏಕಾಂಗಿಯಾಗಿ ತೊಡಗಿಕೊಂಡಿದ್ದಾರೆ. ಬೆನೋಯ್ ದಾಸ್ ಸಾವಿರಾರು ಗಿಡಗಳನ್ನು ನೆಟ್ಟಿದ್ದಾರೆ. ಹಲವು ಬಾರಿ, ಸಸಿಗಳ ಖರೀದಿಯಿಂದ ಹಿಡಿದು ಅವುಗಳನ್ನು ನೆಡುವುದು ಮತ್ತು ಆರೈಕೆ ಮಾಡುವವರೆಗೆ ಎಲ್ಲಾ ವೆಚ್ಚಗಳನ್ನು ತಾವೇ ಭರಿಸಿದ್ದಾರೆ. ಅಗತ್ಯವಿರುವಾಗ, ಅಲ್ಲಿನ ಸ್ಥಳೀಯರು, ವಿದ್ಯಾರ್ಥಿಗಳು ಮತ್ತು ಪುರಸಭೆಗಳೊಂದಿಗೆ ಸಹಕರಿಸಿ ಕೆಲಸ ಮಾಡಿದ್ದಾರೆ. ಅವರ ಪ್ರಯತ್ನಗಳು ರಸ್ತೆಗಳ ಅಕ್ಕಪಕ್ಕಗಳನ್ನು ಹಸಿರಾಗಿಸಿವೆ.
ಸ್ನೇಹಿತರೇ,
ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಜಗದೀಶ್ ಪ್ರಸಾದ್ ಅಹಿರ್ ವಾರ್ ಅವರ ಪ್ರಯತ್ನ ಬಹಳ ಪ್ರಶಂಸನೀಯವಾಗಿದೆ. ಅವರು ಕಾಡಿನಲ್ಲಿ beat–guard ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ಬಾರಿ ಗಸ್ತು ತಿರುಗುತ್ತಿದ್ದಾಗ, ಕಾಡಿನಲ್ಲಿ ಬೆಳೆದಿರುವ ಅನೇಕ ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿಯನ್ನು ವ್ಯವಸ್ಥಿತವಾಗಿ ದಾಖಲಾಗಿಲ್ಲ ಎಂದು ಅರಿವಾಯಿತು. ಜಗದೀಶ್ ಅವರು ಈ ಮಾಹಿತಿಯನ್ನು ಮುಂದಿನ ಪೀಳಿಗೆಯವರೆಗೂ ತಲುಪಿಸಲು ಬಯಸುತ್ತಾರೆ, ಇದಕ್ಕಾಗಿ ಅವರು ಔಷಧೀಯ ಸಸ್ಯಗಳನ್ನು ಗುರುತಿಸಲು ಮತ್ತು ಅವುಗಳನ್ನು ದಾಖಲಿಸಲು ಆರಂಭಿಸಿದರು. ಅವರು ನೂರಾ ಇಪ್ಪತ್ತೈದಕ್ಕೂ ಅಧಿಕ ಔಷಧೀಯ ಸಸ್ಯಗಳನ್ನು ಗುರುತಿಸಿದರು. ಪ್ರತಿಯೊಂದು ಸಸ್ಯದ ಚಿತ್ರ, ಹೆಸರು, ಉಪಯೋಗ, ದೊರೆಯುವ ಸ್ಥಳದ ಮಾಹಿತಿಯನ್ನು ಸಂಗ್ರಹಿಸಿದರು. ತಾವು ಸಂಗ್ರಹಿಸಿದ ಮಾಹಿತಿಯನ್ನು ಅರಣ್ಯ ಇಲಾಖೆ ಸಂಗ್ರಹಿಸಿ ಪುಸ್ತಕದ ರೂಪದಲ್ಲಿ ಪ್ರಕಟಿಸಿತು. ಈ ಪುಸ್ತಕದಲ್ಲಿ ನೀಡಲಾಗಿರುವ ಮಾಹಿತಿಯು ಈಗ ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಅರಣ್ಯಾಧಿಕಾರಿಗಳಿಗೆ ಬಹಳ ಉಪಯುಕ್ತವಾಗಿದೆ.
ಸ್ನೇಹಿತರೇ,
ಪರಿಸರ ಸಂರಕ್ಷಣೆಯ ಈ ಭಾವನೆ ಇಂದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಕಂಡುಬರುತ್ತಿದೆ. ಇದೇ ಚಿಂತನೆಯೊಂದಿಗೆ ದೇಶಾದ್ಯಂತ ‘ಒಂದು ಸಸಿ ತಾಯಿಯ ಹೆಸರಿನಲ್ಲಿ’ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನದಲ್ಲಿ ಇಂದು ಕೋಟ್ಯಂತರ ಜನರು ಕೈಜೋಡಿಸಿದ್ದಾರೆ. ಇಲ್ಲಿಯವರೆಗೂ ದೇಶದಲ್ಲಿ 200 ಕೋಟಿಗೂ ಅಧಿಕ ಗಿಡಗಳನ್ನು ನೆಡಲಾಗಿದೆ. ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ ಮತ್ತು ಜನರು ಯಾವುದಾದರೊಂದು ರೀತಿಯಲ್ಲಿ ತಮ್ಮ ಕೊಡುಗೆ ನೀಡಲು ಬಯಸುತ್ತಿದ್ದಾರೆ.
ನನ್ನ ಪ್ರೀತಿಯ ದೇಶವಾಸಿಗಳೇ,
ನಾನು ನಿಮ್ಮೆಲ್ಲರನ್ನೂ ಮತ್ತೊಂದು ವಿಷಯಕ್ಕಾಗಿ ಶ್ಲಾಘಿಸಲು ಬಯಸುತ್ತೇನೆ – ಅದು ಮಿಲ್ಲೆಟ್ಸ್ ಅಂದರೆ ಸಿರಿಧಾನ್ಯಗಳಿಗಾಗಿ. ಸಿರಿಧಾನ್ಯಗಳ ಬಗ್ಗೆ ದೇಶದ ಜನರ ಪ್ರೀತಿ ಸತತವಾಗಿ ಹೆಚ್ಚಳವಾಗುತ್ತಿರುವುದು ಕಂಡು ನನಗೆ ಆನಂದವಾಗುತ್ತಿದೆ. ನಾವು 2023 ಅನ್ನು ಸಿರಿಧಾನ್ಯಗಳ ವರ್ಷವೆಂದು ಘೋಷಿಸಿದ್ದೆವು. ಆದರೆ ಇಂದು ಮೂರು ವರ್ಷಗಳ ನಂತರವೂ, ದೇಶ ಮತ್ತು ಇಡೀ ಜಗತ್ತಿನಲ್ಲಿ ಈ ಆಹಾರದ ಬಗ್ಗೆ ಕಂಡುಬರುತ್ತಿರುವ ಉತ್ಸಾಹ ಮತ್ತು ಬದ್ಧತೆ ಬಹಳ ಉತ್ತೇಜನಕಾರಿಯಾಗಿದೆ.
ಸ್ನೇಹಿತರೇ,
ತಮಿಳುನಾಡಿನ ಕಲ್ಲ್ -ಕುರಿಚೀ ಜಿಲ್ಲೆಯಲ್ಲಿ ರೈತ ಮಹಿಳೆಯರ ಒಂದು ಗುಂಪು ಪ್ರೇರಣೆಗೆ ಮೂಲವಾಗಿದೆ. ಇಲ್ಲಿನ ‘Periyapalayam millet’ FPC ಯೊಂದಿಗೆ ಸುಮಾರು 800 ರೈತ ಮಹಿಳೆಯರು ತೊಡಗಿಕೊಂಡಿದ್ದಾರೆ. ಹೆಚ್ಚಾಗುತ್ತಿರುವ ಸಿರಿಧಾನ್ಯಗಳ ಜನಪ್ರಿಯತೆಯನ್ನು ಕಂಡ ಈ ಮಹಿಳೆಯರು ಸಿರಿಧಾನ್ಯ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದರು. ಈಗ ಅವರು ಸಿರಿಧಾನ್ಯಗಳಿಂದ ತಯಾರಿಸಿದ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಗೆ ತಲುಪಿಸುತ್ತಿದ್ದಾರೆ.
ಸ್ನೇಹಿತರೇ,
ರಾಜಸ್ತಾನದ ರಾಮಸರ್ ನಲ್ಲಿ ಕೂಡಾ ರೈತರು ಸಿರಿಧಾನ್ಯದ ಕೃಷಿಯಲ್ಲಿ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಇಲ್ಲಿನ ರಾಮಸರ್ ಸಾವಯವ ರೈತ ಉತ್ಪಾದನಾ ಕಂಪೆನಿ (Ramsar Organic Farmer Producer Company)ಯೊಂದಿಗೆ 900 ಕ್ಕೂ ಅಧಿಕ ರೈತರು ಜೋಡಣೆಯಾಗಿದ್ದಾರೆ. ಈ ರೈತರು ಪ್ರಮುಖವಾಗಿ ಸಜ್ಜೆ ಬೆಳೆಯನ್ನು ಬೆಳೆಯುತ್ತಾರೆ. ಇಲ್ಲಿ ಸಜ್ಜೆಯನ್ನು ಸಂಸ್ಕರಿಸಿ ಸೇವನೆಗೆ ಸಿದ್ಧ ಲಡ್ಡೂ ತಯಾರಿಸಲಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆಯಿದೆ. ಸ್ನೇಹಿತರೇ ಕೇವಲ ಇಷ್ಟೇ ಅಲ್ಲ, ಅನೇಕ ಈಗೀಗ ದೇವಾಲಯಗಳಲ್ಲಿ ವಿತರಿಸುವ ಪ್ರಸಾದದ ತಯಾರಿಕೆಯಲ್ಲಿ ಕೇವಲ ಸಿರಿಧಾನ್ಯಗಳನ್ನು ಬಳಸಲಾಗುತ್ತದೆ ಎಂಬ ವಿಷಯ ನನಗೆ ಬಹಳ ಸಂತೋಷ ತಂದಿದೆ. ನಾನು ಈ ಉಪಕ್ರಮಕ್ಕಾಗಿ ಇಂತಹ ದೇವಾಲಯಗಳ ಎಲ್ಲಾ ನಿರ್ವಾಹಕರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಸ್ನೇಹಿತರೇ,
ಸಿರಿಧಾನ್ಯಗಳು ಅನ್ನದಾತರ ವರಮಾನ ಹೆಚ್ಚಳ ಮಾಡುತ್ತಿರುವುದರ ಜೊತೆಗೇ ಜನರ ಆರೋಗ್ಯದಲ್ಲಿ ಕೂಡಾ ಸುಧಾರಣೆಯ ಭರವಸೆಯಾಗುತ್ತಾ ಬಂದಿದೆ. ಸಿರಿಧಾನ್ಯಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಇವು ಅತ್ಯುತ್ತಮ ಆಹಾರವಾಗಿವೆ. ನಮ್ಮ ದೇಶದಲ್ಲಿ ಚಳಿಗಾಲದಲ್ಲಂತೂ ಇದರ ಸೇವನೆಯನ್ನು ಅತ್ಯುತ್ತಮವೆಂದು ಭಾವಿಸಲಾಗುತ್ತದೆ. ಈ ದಿನಗಳಲ್ಲಿ ನಾವು ಸಿರಿಧಾನ್ಯಗಳ ಸೇವನೆಯನ್ನು ಖಂಡಿತವಾಗಿಯೂ ಮಾಡಬೇಕು.
ನನ್ನ ಪ್ರೀತಿಯ ದೇಶಬಾಂಧವರೇ,
‘ಮನದ ಮಾತಿನಲ್ಲಿ’ ಅನೇಕ ವಿಷಯಗಳ ಬಗ್ಗೆ ಮಾತನಾಡುವ ಅವಕಾಶ ನಮಗೆ ಮತ್ತೊಮ್ಮೆ ದೊರೆಯಿತು. ಈ ಕಾರ್ಯಕ್ರಮ ನಮ್ಮ ದೇಶದ ಸಾಧನೆಗಳನ್ನು ಅರಿತುಕೊಳ್ಳಲು ಮತ್ತು ಅವುಗಳನ್ನು ಆನಂದಿಸಿ, ಆಚರಿಸಲು ನಮಗೆ ಅವಕಾಶ ನೀಡುತ್ತದೆ. ಫೆಬ್ರವರಿ ತಿಂಗಳಿನಲ್ಲಿ ಇಂತಹದ್ದೇ ಮತ್ತೊಂದು ಅವಕಾಶ ಬರುತ್ತಿದೆ. ಮುಂದಿನ ತಿಂಗಳು India AI Impact Summit ನಡೆಯಲಿದೆ. ಈ ಶೃಂಗಸಭೆಯಲ್ಲಿ ವಿಶ್ವದೆಲ್ಲೆಡೆಯಿಂದ, ವಿಶೇಷವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಕೊಂಡಿರು ತಜ್ಞರು ಭಾರತಕ್ಕೆ ಆಗಮಿಸಲಿದ್ದಾರೆ. ಈ ಸಮಾವೇಶ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತದ ಪ್ರಗತಿ ಮತ್ತು ಸಾಧನೆಗಳನ್ನು ವಿಶ್ವದ ಮುಂದಿಡಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಪ್ರತಿಯೊಬ್ಬರಿಗೂ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಹೇಳುತ್ತಿದ್ದೇನೆ. ಮುಂದಿನ ತಿಂಗಳು ‘ಮನದ ಮಾತಿನಲ್ಲಿ’ India AI Impact Summit ಕುರಿತಂತೆ ನಾವು ಖಂಡಿತವಾಗಿಯೂ ಮಾತನಾಡೋಣ. ದೇಶಬಾಂಧವರ ಮತ್ತಷ್ಟು ಸಾಧನೆಗಳ ಬಗ್ಗೆ ಕೂಡಾ ಮಾತನಾಡೋಣ. ಇಂದಿನ ‘ಮನ್ ಕಿ ಬಾತ್’ ಇಲ್ಲಿಗೆ ಮುಕ್ತಾಯಗೊಳಿಸೋಣ. ನಾಳಿನ ಗಣರಾಜ್ಯೋತ್ಸವಕ್ಕಾಗಿ ಮತ್ತೊಮ್ಮೆ ನಿಮ್ಮೆಲ್ಲರಿಗೂ ಅನೇಕಾನೇಕ ಶುಭ ಹಾರೈಕೆಗಳು.
ಧನ್ಯವಾದ.
*****
(रिलीज़ आईडी: 2218412)
आगंतुक पटल : 18
इस विज्ञप्ति को इन भाषाओं में पढ़ें:
Gujarati
,
Assamese
,
Manipuri
,
English
,
Urdu
,
Marathi
,
हिन्दी
,
Bengali
,
Odia
,
Tamil
,
Malayalam