ಚುನಾವಣಾ ಆಯೋಗ
ಭಾರತೀಯ ಚುನಾವಣಾ ಆಯೋಗದಿಂದ ನಾಳೆ 16ನೇ ರಾಷ್ಟ್ರೀಯ ಮತದಾರರ ದಿನ ಆಚರಣೆ
प्रविष्टि तिथि:
24 JAN 2026 3:00PM by PIB Bengaluru
1. ಭಾರತೀಯ ಚುನಾವಣಾ ಆಯೋಗ (ECI) ನಾಳೆ ನವದೆಹಲಿಯಲ್ಲಿ 16ನೇ ರಾಷ್ಟ್ರೀಯ ಮತದಾರರ ದಿನ (NVD-2026) ಆಚರಿಸಲು ಸಜ್ಜಾಗಿದೆ. "ಭಾರತೀಯ ಪ್ರಜಾಪ್ರಭುತ್ವದ ಕೇಂದ್ರಬಿಂದುವಾಗಿ ನಾಗರಿಕ" ಎಂಬ ಅಡಿಬರಹದೊಂದಿಗೆ "ನನ್ನ ಭಾರತ, ನನ್ನ ಮತ", ಈ ವರ್ಷದ ಕಾರ್ಯಕ್ರಮದ ವಿಷಯವಾಗಿದೆ.
2. ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾರತದ ಮಾನ್ಯ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವರಾದ (ಸ್ವತಂತ್ರ ನಿರ್ವಹಣೆ) ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯುಕ್ತರಾದ ಡಾ. ಸುಖಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರೊಂದಿಗೆ ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ. ಭಾರತದ ಮಾನ್ಯ ರಾಷ್ಟ್ರಪತಿಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಹೊಸದಾಗಿ ಸೇರ್ಪಡೆಗೊಂಡ ಯುವ ಮತದಾರರಿಗೆ ಮತದಾರರ ಫೋಟೋ ಗುರುತಿನ ಚೀಟಿಗಳನ್ನು (EPIC) ವಿತರಿಸಲಿದ್ದಾರೆ.
3. ತಂತ್ರಜ್ಞಾನದ ಪರಿಣಾಮಕಾರಿ ಬಳಕೆ, ಚುನಾವಣಾ ನಿರ್ವಹಣೆ ಮತ್ತು ಸಾಗಣೆ, ನವೀನ ಮತದಾರರ ಜಾಗೃತಿ, ಮಾದರಿ ನೀತಿ ಸಂಹಿತೆಯ ಅನುಷ್ಠಾನ ಮತ್ತು ಜಾರಿ, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಚುನಾವಣಾ ಪದ್ಧತಿ ಪ್ರಶಸ್ತಿಗಳನ್ನು ಹಾಗೂ ಮಾಧ್ಯಮಕ್ಕಾಗಿ ಇತರ ವಿಶೇಷ ಪ್ರಶಸ್ತಿಗಳು ಮಾನ್ಯ ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದಾರೆ.
4. NVD-2026ರ ಕಾರ್ಯಕ್ರಮದಲ್ಲಿ ಎರಡು ಪ್ರಕಟಣೆಗಳನ್ನು ಸಹ ಬಿಡುಗಡೆ ಮಾಡಲಾಗುವುದು. "2025: ಉಪಕ್ರಮಗಳು ಮತ್ತು ನಾವಿನ್ಯತೆಗಳ ವರ್ಷ" ಹಾಗೂ ಬಿಹಾರದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದುದರ ಕುರಿತು 'ಚುನಾವ್ ಕಾ ಪರ್ವ್, ಬಿಹಾರ್ ಕಾ ಗರ್ವ್' ಈ ಪ್ರಕಟಣೆಗಳಾಗಿವೆ. ಚುನಾವಣಾ ನಿರ್ವಹಣೆ ಮತ್ತು ಪ್ರಜಾಪ್ರಭುತ್ವ ಅಭಿವೃದ್ಧಿಯಲ್ಲಿ ECI ಯ ಜಾಗತಿಕ ನಾಯಕತ್ವವನ್ನು ಪ್ರತಿಬಿಂಬಿಸುವ ವಿಡಿಯೊವನ್ನು ಸಹ ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು.
5. ಮತದಾರರ ಪಟ್ಟಿ ತಯಾರಿಕೆ ಮತ್ತು ಚುನಾವಣೆಗಳನ್ನು ನಡೆಸುವುದು ಸೇರಿದಂತೆ ಚುನಾವಣೆಯ ವಿವಿಧ ಆಯಾಮಗಳನ್ನು ಪ್ರದರ್ಶಿಸುವ ಪ್ರತ್ಯೇಕ ಪ್ರದರ್ಶನವೂ ಇರಲಿದೆ. ಮತದಾರರ ಅನುಕೂಲಕ್ಕಾಗಿ ಭಾರತೀಯ ಚುನಾವಣಾ ಆಯೋಗವು ಕೈಗೊಂಡಿರುವ ಇತ್ತೀಚಿನ ಉಪಕ್ರಮಗಳು ಮತ್ತು 2025ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದುದನ್ನು ಈ ಪ್ರದರ್ಶನವು ಪ್ರಸ್ತುತಪಡಿಸಲಿದೆ.
6. ದೇಶಾದ್ಯಂತ ಏಕಕಾಲದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರಮವಾಗಿ ಮುಖ್ಯ ಚುನಾವಣಾಧಿಕಾರಿ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿಗಳ ಮೂಲಕ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಬೂತ್ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಮತಗಟ್ಟೆ ಸ್ಥಳವಿರುವೆಡೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಹೊಸದಾಗಿ ಮತದಾರರಾಗಿ ನೋಂದಾಯಿಸಲ್ಪಟ್ಟವರನ್ನು ಅಭಿನಂದಿಸಲಿದ್ದಾರೆ ಮತ್ತು ಹೊಸ ಮತದಾರರಿಗೆ ಗುರುತಿನ ಚೀಟಿ EPIC ವಿತರಿಸಲಿದ್ದಾರೆ.
*****
(रिलीज़ आईडी: 2218205)
आगंतुक पटल : 7