ರಾಷ್ಟ್ರಪತಿಗಳ ಕಾರ್ಯಾಲಯ
ಸ್ಪೇನ್ ನ ವಿದೇಶಾಂಗ ವ್ಯವಹಾರಗಳು, ಯೂರೋಪಿಯನ್ ಒಕ್ಕೂಟ ಮತ್ತು ಸಹಕಾರ ಸಚಿವರಿಂದ ಭಾರತದ ರಾಷ್ಟ್ರಪತಿ ಭೇಟಿ
प्रविष्टि तिथि:
21 JAN 2026 3:56PM by PIB Bengaluru
ಸ್ಪೇನ್ ನ ಸಹಕಾರ ಮತ್ತು ಯೂರೋಪಿಯನ್ ಒಕ್ಕೂಟ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವರಾದ ಗೌರವಾನ್ವಿತ ಶ್ರೀ ಮ್ಯಾನುಯೆಲ್ ಅಲ್ಬಾರೆಸ್ ಅವರು ಇಂದು (ಜನವರಿ 21, 2026) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.

ರಾಷ್ಟ್ರಪತಿ ಭವನದಲ್ಲಿ ಶ್ರೀ ಅಲ್ಬರೆಸ್ ಅವರನ್ನು ಸ್ವಾಗತಿಸಿದ ರಾಷ್ಟ್ರಪತಿಗಳು, ಶತಮಾನಗಳಷ್ಟು ಹಳೆಯದಾದ ಭಾರತ ಮತ್ತು ಸ್ಪೇನ್ ನಡುವಿನ ಬಾಂಧವ್ಯವು ವ್ಯಾಪಾರ, ಸಂಸ್ಕೃತಿ ಹಾಗೂ ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯ ಹಂಚಿತ ಮೌಲ್ಯಗಳಿಂದ ಸಮೃದ್ಧವಾಗಿವೆ ಎಂದು ಹೇಳಿದರು. ಈ ವರ್ಷ ನಮ್ಮ ರಾಜತಾಂತ್ರಿಕ ಸಂಬಂಧಗಳ 70 ನೇ ವಾರ್ಷಿಕೋತ್ಸವವಾಗಿದ್ದು, ಇದನ್ನು 'ಭಾರತ-ಸ್ಪೇನ್ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಕೃತಕ ಬುದ್ಧಿಮತ್ತೆಯ ದ್ವಿವರ್ಷ' ಎಂದು ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.
ವ್ಯಾಪಾರ ಮತ್ತು ಹೂಡಿಕೆ ವಿಸ್ತರಣೆಯೊಂದಿಗೆ ಭಾರತ ಮತ್ತು ಸ್ಪೇನ್ ಸ್ಥಿರವಾಗಿ ಬೆಳೆಯುತ್ತಿರುವ ಆರ್ಥಿಕ ಸಂಬಂಧ ಹೊಂದಿವೆ ಎಂದು ರಾಷ್ಟ್ರಪತಿಗಳು ಹೇಳಿದರು. ಎಂಜಿನಿಯರಿಂಗ್, ರೈಲ್ವೆ, ನವೀಕರಿಸಬಹುದಾದ ಇಂಧನ, ನಗರ ಸೇವೆಗಳು ಮತ್ತು ರಕ್ಷಣಾ ಏರೋಸ್ಪೇಸ್ ನಲ್ಲಿ ಸ್ಪೇನ್ ನ ಸಾಮರ್ಥ್ಯಗಳು ಭಾರತದ ಅಭಿವೃದ್ಧಿ ಆದ್ಯತೆಗಳಿಗೆ ಪೂರಕವಾಗಿವೆ ಎಂದು ಅವರು ಹೇಳಿದರು. ಭಾರತ - ಇಯು ಎಫ್ ಟಿ ಎ ಗೆ ಸಹಿ ಹಾಕುವುದರೊಂದಿಗೆ, ಎರಡೂ ದೇಶಗಳ ನಡುವಿನ ವ್ಯಾಪಾರ ಬಾಂಧವ್ಯ ಮತ್ತಷ್ಟು ಬಲಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಪಂಚದಾದ್ಯಂತ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯ ನಮ್ಮ ಹಂಚಿತ ಗುರಿಗಳನ್ನು ಮುಂದಕ್ಕೆ ಕೊಂಡೊಯ್ಯಲು ಬಹುಪಕ್ಷೀಯತೆಗೆ ಬಲವಾದ ಬೆಂಬಲದೊಂದಿಗೆ, ಭಾರತ ಮತ್ತು ಸ್ಪೇನ್ ವಿಶ್ವಸಂಸ್ಥೆ ಮತ್ತು ಜಿ-20 ಯಂತಹ ಬಹುಪಕ್ಷೀಯ ವೇದಿಕೆಗಳಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದು ರಾಷ್ಟ್ರಪತಿಗಳು ಸಲಹೆ ನೀಡಿದರು.
ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಗಂಭೀರ ಬೆದರಿಕೆಯಾಗಿ ಉಳಿದಿರುವ ಭಯೋತ್ಪಾದನೆಯ ಪಿಡುಗನ್ನು ನಿಗ್ರಹಿಸಲು ಭಾರತ ಮತ್ತು ಸ್ಪೇನ್ ಜಂಟಿ ನಿಲುವನ್ನು ಹೊಂದಿವೆ ಎಂದು ರಾಷ್ಟ್ರಪತಿಗಳು ಒತ್ತಿ ಹೇಳಿದರು.

ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ಹೋರಾಡಲು ನಾವು ನಮ್ಮ ಸಂಪನ್ಮೂಲಗಳು ಮತ್ತು ಸಾಮರ್ಥ್ಯಗಳನ್ನು ಒಟ್ಟುಗೂಡಿಸಬೇಕು ಎಂದು ಅವರು ಹೇಳಿದರು.
ಯೂರೋಪ್ ಮತ್ತು ಯೂರೋಪಿಯನ್ ಒಕ್ಕೂಟದೊಂದಿಗಿನ ಭಾರತದ ಬಾಂಧವ್ಯ ನಿರಂತರವಾಗಿ ಬೆಳೆಯುತ್ತಿದ್ದು ನಮ್ಮ 77ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಯೂರೋಪಿಯನ್ ಕೌನ್ಸಿಲ್ ಅಧ್ಯಕ್ಷರು ಮತ್ತು ಯೂರೋಪಿಯನ್ ಆಯೋಗದ ಅಧ್ಯಕ್ಷರನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ರಾಷ್ಟ್ರಪತಿ ಮುರ್ಮು ತಿಳಿಸಿದ್ದಾರೆ.
*****
(रिलीज़ आईडी: 2217206)
आगंतुक पटल : 5