ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಮಾಲ್ದಾದಲ್ಲಿ ₹3,250 ಕೋಟಿಗೂ ಅಧಿಕ ಮೌಲ್ಯದ ವಿವಿಧ ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು
ಇಂದು, ಭಾರತೀಯ ರೈಲ್ವೆಯ ಆಧುನೀಕರಣದತ್ತ ಮತ್ತೊಂದು ದೊಡ್ಡ ಹೆಜ್ಜೆ ಇಡಲಾಗಿದೆ, ಭಾರತದಲ್ಲಿ ವಂದೇ ಭಾರತ ಸ್ಲೀಪರ್ ರೈಲುಗಳನ್ನು ಪರಿಚಯಿಸಲಾಗುತ್ತಿದೆ: ಪ್ರಧಾನಮಂತ್ರಿ
ಕಾಳಿ ಮಾತೆಯ ನಾಡನ್ನು ಕಾಮಾಖ್ಯ ಮಾತೆಯ ನಾಡಿಗೆ ಸಂಪರ್ಕಿಸುವ ದೇಶದ ಮೊದಲ ವಂದೇ ಭಾರತ ಸ್ಲೀಪರ್ ರೈಲು ಇದಾಗಿದೆ; ಮುಂಬರುವ ದಿನಗಳಲ್ಲಿ ಈ ಆಧುನಿಕ ರೈಲು ಇಡೀ ದೇಶಾದ್ಯಂತ ವಿಸ್ತರಣೆಯಾಗಲಿದೆ; ಈ ಆಧುನಿಕ ಸ್ಲೀಪರ್ ರೈಲಿಗಾಗಿ ನಾನು ಬಂಗಾಳ, ಅಸ್ಸಾಂ ಮತ್ತು ಇಡೀ ದೇಶವನ್ನು ಅಭಿನಂದಿಸುತ್ತೇನೆ: ಪ್ರಧಾನಮಂತ್ರಿ
ಇಂದು ಬಂಗಾಳವು ಇನ್ನೂ ನಾಲ್ಕು ಆಧುನಿಕ ಅಮೃತ ಭಾರತ ಎಕ್ಸ್ ಪ್ರೆಸ್ ರೈಲುಗಳನ್ನು ಪಡೆದಿದೆ; ನ್ಯೂ ಜಲಪೈಗುರಿ - ನಾಗರಕೋಯಿಲ್ ಅಮೃತ ಭಾರತ ಎಕ್ಸ್ ಪ್ರೆಸ್, ಜಲಪೈಗುರಿ - ತಿರುಚ್ಚಿರಾಪಳ್ಳಿ ಅಮೃತ ಭಾರತ ಎಕ್ಸ್ ಪ್ರೆಸ್, ಅಲಿಪುರ್ದುವಾರ್ - ಬೆಂಗಳೂರು ಅಮೃತ ಭಾರತ ಎಕ್ಸ್ ಪ್ರೆಸ್, ಅಲಿಪುರ್ದುವಾರ್ - ಮುಂಬೈ ಅಮೃತ ಭಾರತ ಎಕ್ಸ್ ಪ್ರೆಸ್; ಇದು ಬಂಗಾಳದ, ವಿಶೇಷವಾಗಿ ಉತ್ತರ ಬಂಗಾಳದ ದಕ್ಷಿಣ ಮತ್ತು ಪಶ್ಚಿಮ ಭಾರತದೊಂದಿಗಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ: ಪ್ರಧಾನಮಂತ್ರಿ
प्रविष्टि तिथि:
17 JAN 2026 3:23PM by PIB Bengaluru
ಪಶ್ಚಿಮ ಬಂಗಾಳ ಮತ್ತು ಈಶಾನ್ಯ ವಲಯದಲ್ಲಿ ಸಂಪರ್ಕವನ್ನು ಬಲಪಡಿಸುವ ಮತ್ತು ಅಭಿವೃದ್ಧಿಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ₹3,250 ಕೋಟಿ ಮೌಲ್ಯದ ವಿವಿಧ ರೈಲ್ವೆ ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ಮಾಲ್ದಾದಲ್ಲಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ ಅವರು, ಇಂದು ಮಾಲ್ದಾದಿಂದ ಪಶ್ಚಿಮ ಬಂಗಾಳದ ಪ್ರಗತಿಯನ್ನು ವೇಗಗೊಳಿಸುವ ಅಭಿಯಾನವು ಮತ್ತಷ್ಟು ವೇಗವನ್ನು ಪಡೆದುಕೊಂಡಿದೆ ಎಂದು ತಿಳಿಸಿದರು. ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಇದೀಗ ಉದ್ಘಾಟಿಸಲಾಗಿದೆ ಮತ್ತು ದೇಶಕ್ಕೆ ಸಮರ್ಪಿಸಲಾಗಿದೆ ಎಂದು ಅವರು ಹೇಳಿದರು. ಪಶ್ಚಿಮ ಬಂಗಾಳಕ್ಕೆ ಹೊಸ ರೈಲು ಸೇವೆಗಳನ್ನು ಪರಿಚಯಿಸಲಾಗಿದೆ ಎಂದು ಹೇಳಿದ ಪ್ರಧಾನಿಯವರು, ಈ ಯೋಜನೆಗಳು ಜನರ ಪ್ರಯಾಣವನ್ನು ಸುಲಭಗೊಳಿಸುವುದಲ್ಲದೆ ವ್ಯಾಪಾರ ಮತ್ತು ವಾಣಿಜ್ಯಕ್ಕೂ ಅನುಕೂಲ ಮಾಡಿಕೊಡುತ್ತವೆ ಎಂದು ತಿಳಿಸಿದರು. ಇಲ್ಲಿ ಸ್ಥಾಪಿಸಲಾದ ಹೊಸ ರೈಲು ನಿರ್ವಹಣಾ ಸೌಲಭ್ಯಗಳು ಬಂಗಾಳದ ಯುವಕರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತವೆ ಎಂದು ಅವರು ಉಲ್ಲೇಖಿಸಿದರು.
ಬಂಗಾಳದ ಪುಣ್ಯಭೂಮಿಯಿಂದ ಭಾರತೀಯ ರೈಲ್ವೆಯ ಆಧುನೀಕರಣದತ್ತ ಮತ್ತೊಂದು ಪ್ರಮುಖ ಹೆಜ್ಜೆ ಇಡಲಾಗಿದೆ ಎಂದು ಉಲ್ಲೇಕಿಸಿದ ಶ್ರೀ ಮೋದಿ ಅವರು, ಇಂದಿನಿಂದ ಭಾರತದಲ್ಲಿ ವಂದೇ ಭಾರತ ಸ್ಲೀಪರ್ ರೈಲುಗಳನ್ನು ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದರು. ಈ ಹೊಸ ವಂದೇ ಭಾರತ ಸ್ಲೀಪರ್ ರೈಲು ನಾಗರಿಕರ ದೂರದ ಪ್ರಯಾಣವನ್ನು ಹೆಚ್ಚು ಆರಾಮದಾಯಕ ಮತ್ತು ಭವ್ಯವಾಗಿಸುತ್ತದೆ ಎಂದು ಅವರು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದಲ್ಲಿ ರೈಲುಗಳು ಹೇಗಿರಬೇಕು ಎಂಬ ದೃಷ್ಟಿಕೋನವು ಈ ವಂದೇ ಭಾರತ ಸ್ಲೀಪರ್ ರೈಲಿನಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು. ಸ್ವಲ್ಪ ಸಮಯದ ಹಿಂದೆ ತಾವು ಮಾಲ್ದಾ ನಿಲ್ದಾಣದಲ್ಲಿ ಕೆಲವು ಪ್ರಯಾಣಿಕರೊಂದಿಗೆ ಸಂವಾದ ನಡೆಸಿದ್ದಾಗಿ ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು ಮತ್ತು ಈ ರೈಲಿನಲ್ಲಿ ಪ್ರಯಾಣಿಸುವುದು ಅಸಾಧಾರಣ ಅನುಭವ ಎಂದು ಎಲ್ಲರೂ ಸಂತೋಷ ವ್ಯಕ್ತಪಡಿಸಿದರು ಎಂದರು. ಹಿಂದೆ ಜನರು ವಿದೇಶಿ ರೈಲುಗಳ ಚಿತ್ರಗಳನ್ನು ನೋಡಿ ಭಾರತದಲ್ಲೂ ಇಂತಹ ರೈಲುಗಳು ಬರಲಿ ಎಂದು ಆಶಿಸುತ್ತಿದ್ದರು, ಇಂದು ಆ ಕನಸು ನನಸಾಗುತ್ತಿದೆ ಎಂದು ಅವರು ನೆನಪಿಸಿಕೊಂಡರು. ಇತ್ತೀಚಿನ ದಿನಗಳಲ್ಲಿ ವಿದೇಶಿ ಪ್ರವಾಸಿಗರು ಭಾರತೀಯ ರೈಲ್ವೆ ಹೇಗೆ ಕ್ರಾಂತಿಕಾರಕ ಬದಲಾವಣೆ ಹೊಂದುತ್ತಿದೆ ಎಂಬುದರ ಕುರಿತು ವಿಡಿಯೋಗಳನ್ನು ಮಾಡುತ್ತಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ಈ ವಂದೇ ಭಾರತ ರೈಲು 'ಮೇಡ್ ಇನ್ ಇಂಡಿಯಾ' ಆಗಿದ್ದು, ಭಾರತೀಯರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ನಿರ್ಮಿಸಲ್ಪಟ್ಟಿದೆ ಎಂದು ಅವರು ಒತ್ತಿ ಹೇಳಿದರು. ದೇಶದ ಮೊದಲ ವಂದೇ ಭಾರತ ಸ್ಲೀಪರ್ ರೈಲು ಕಾಳಿ ಮಾತೆಯ ನಾಡನ್ನು ಕಾಮಾಖ್ಯ ಮಾತೆಯ ನಾಡಿನೊಂದಿಗೆ ಸಂಪರ್ಕಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಮುಂಬರುವ ಸಮಯದಲ್ಲಿ ಈ ಆಧುನಿಕ ರೈಲು ದೇಶಾದ್ಯಂತ ವಿಸ್ತರಣೆಯಾಗಲಿದೆ ಎಂದು ಅವರು ತಿಳಿಸಿದರು ಮತ್ತು ಈ ಆಧುನಿಕ ಸ್ಲೀಪರ್ ರೈಲಿಗಾಗಿ ಬಂಗಾಳ, ಅಸ್ಸಾಂ ಮತ್ತು ಇಡೀ ದೇಶವನ್ನು ಅಭಿನಂದಿಸಿದರು.
ರೈಲು ಮಾರ್ಗಗಳ ವಿದ್ಯುದೀಕರಣ ಮತ್ತು ನಿಲ್ದಾಣಗಳ ಆಧುನೀಕರಣದೊಂದಿಗೆ ಭಾರತೀಯ ರೈಲ್ವೆಯು ರೂಪಾಂತರಕ್ಕೆ ಒಳಗಾಗುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತಿಳಿಸಿದರು. ಇಂದು ಪಶ್ಚಿಮ ಬಂಗಾಳ ಸೇರಿದಂತೆ ದೇಶಾದ್ಯಂತ 150 ಕ್ಕೂ ಹೆಚ್ಚು ವಂದೇ ಭಾರತ ರೈಲುಗಳು ಸಂಚರಿಸುತ್ತಿವೆ ಎಂದು ಅವರು ತಿಳಿಸಿದರು. ಇದರೊಂದಿಗೆ ಆಧುನಿಕ ಮತ್ತು ಅತಿವೇಗದ ರೈಲುಗಳ ಸಂಪೂರ್ಣ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಇದು ಬಂಗಾಳದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬಂಗಾಳವು ಇನ್ನೂ ನಾಲ್ಕು ಆಧುನಿಕ ಅಮೃತ ಭಾರತ ಎಕ್ಸ್ ಪ್ರೆಸ್ ರೈಲುಗಳನ್ನು ಪಡೆದಿದೆ ಎಂದು ಅವರು ಘೋಷಿಸಿದರು—ನ್ಯೂ ಜಲಪೈಗುರಿ–ನಾಗರಕೋಯಿಲ್ ಅಮೃತ ಭಾರತ ಎಕ್ಸ್ ಪ್ರೆಸ್, ನ್ಯೂ ಜಲಪೈಗುರಿ –ತಿರುಚ್ಚಿರಾಪಳ್ಳಿ ಅಮೃತ ಭಾರತ ಎಕ್ಸ್ ಪ್ರೆಸ್, ಅಲಿಪುರ್ದುವಾರ್–ಬೆಂಗಳೂರು ಅಮೃತ ಭಾರತ ಎಕ್ಸ್ ಪ್ರೆಸ್ ಮತ್ತು ಅಲಿಪುರ್ದುವಾರ್–ಮುಂಬೈ ಅಮೃತ ಭಾರತ ಎಕ್ಸ್ ಪ್ರೆಸ್. ಈ ರೈಲುಗಳು ಬಂಗಾಳ, ವಿಶೇಷವಾಗಿ ಉತ್ತರ ಬಂಗಾಳ ಮತ್ತು ದಕ್ಷಿಣ ಹಾಗೂ ಪಶ್ಚಿಮ ಭಾರತದ ನಡುವಿನ ಸಂಪರ್ಕವನ್ನು ಬಲಪಡಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಈ ಅಮೃತ ಭಾರತ ಎಕ್ಸ್ ಪ್ರೆಸ್ ರೈಲುಗಳು ಗಂಗಾಸಾಗರ, ದಕ್ಷಿಣೇಶ್ವರ ಮತ್ತು ಕಾಳೀಘಾಟ್ ಗೆ ಭೇಟಿ ನೀಡುವ ಯಾತ್ರಿಕರಿಗೆ ಹಾಗೂ ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕೆ ಪ್ರಯಾಣಿಸುವವರಿಗೆ ಪ್ರಯಾಣವನ್ನು ಸುಲಭಗೊಳಿಸುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು.
"ಭಾರತೀಯ ರೈಲ್ವೆಯು ಕೇವಲ ಆಧುನಿಕವಾಗುತ್ತಿರುವುದು ಮಾತ್ರವಲ್ಲದೆ ಸ್ವಾವಲಂಬಿಯೂ ಆಗುತ್ತಿದೆ" ಎಂದು ಹೇಳಿದ ಶ್ರೀ ಮೋದಿ ಅವರು, ಭಾರತದ ರೈಲು ಇಂಜಿನ್ ಗಳು, ಬೋಗಿಗಳು ಮತ್ತು ಮೆಟ್ರೋ ಬೋಗಿಗಳು ಭಾರತದ ತಂತ್ರಜ್ಞಾನದ ಸಂಕೇತಗಳಾಗಿ ಹೊರಹೊಮ್ಮುತ್ತಿವೆ ಎಂದರು. ಇಂದು ಭಾರತವು ಅಮೆರಿಕ ಮತ್ತು ಯುರೋಪ್ ಗಿಂತ ಹೆಚ್ಚಿನ ಲೋಕೋಮೋಟಿವ್ ಗಳನ್ನು ತಯಾರಿಸುತ್ತದೆ ಮತ್ತು ಅನೇಕ ದೇಶಗಳಿಗೆ ಪ್ರಯಾಣಿಕ ರೈಲು ಮತ್ತು ಮೆಟ್ರೋ ರೈಲು ಬೋಗಿಗಳನ್ನು ರಫ್ತು ಮಾಡುತ್ತದೆ, ಇದು ದೇಶದ ಆರ್ಥಿಕತೆಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದು ಪ್ರಧಾನಿ ಹೇಳಿದರು. ಭಾರತವನ್ನು ಸಂಪರ್ಕಿಸುವುದು ಆದ್ಯತೆಯಾಗಿದೆ ಮತ್ತು ದೂರವನ್ನು ಕಡಿಮೆ ಮಾಡುವುದು ಒಂದು ಮಿಷನ್ ಆಗಿದೆ, ಇದು ಇಂದಿನ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತಿದೆ ಎಂದು ಹೇಳುವ ಮೂಲಕ ಶ್ರೀ ಮೋದಿ ಅವರು ಭಾಷಣ ಮುಕ್ತಾಯಗೊಳಿಸಿದರು.
ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಶ್ರೀ ಸಿ ವಿ ಆನಂದ ಬೋಸ್, ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಶ್ರೀ ಶಾಂತನು ಠಾಕೂರ್, ಶ್ರೀ ಸುಕಾಂತ ಮಜುಂದಾರ್ ಸೇರಿದಂತೆ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನಮಂತ್ರಿಯವರು ಮಾಲ್ದಾ ಟೌನ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ಹೌರಾ ಮತ್ತು ಗುವಾಹಟಿ (ಕಾಮಾಖ್ಯ) ನಡುವೆ ಭಾರತದ ಮೊದಲ ವಂದೇ ಭಾರತ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಿದರು. ಅವರು ಗುವಾಹಟಿ (ಕಾಮಾಖ್ಯ) – ಹೌರಾ ವಂದೇ ಭಾರತ ಸ್ಲೀಪರ್ ರೈಲಿಗೆ ವರ್ಚುವಲ್ ಆಗಿ ಚಾಲನೆ ನೀಡಿದರು. ಆಧುನಿಕ ಭಾರತದ ಹೆಚ್ಚುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸಲು ಅಭಿವೃದ್ಧಿಪಡಿಸಲಾದ ಸಂಪೂರ್ಣ ಹವಾನಿಯಂತ್ರಿತ ವಂದೇ ಭಾರತ ಸ್ಲೀಪರ್ ರೈಲು ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ವಿಮಾನದಂತಹ ಪ್ರಯಾಣದ ಅನುಭವವನ್ನು ನೀಡಲು ಸಿದ್ಧವಾಗಿದೆ. ಇದು ದೂರದ ಪ್ರಯಾಣವನ್ನು ವೇಗವಾಗಿ, ಸುರಕ್ಷಿತವಾಗಿ ಮತ್ತು ಹೆಚ್ಚು ಅನುಕೂಲಕರವಾಗಿ ಮಾಡುತ್ತದೆ. ಹೌರಾ-ಗುವಾಹಟಿ (ಕಾಮಾಖ್ಯ) ಮಾರ್ಗದಲ್ಲಿ ಪ್ರಯಾಣದ ಸಮಯವನ್ನು ಸುಮಾರು 2.5 ಗಂಟೆಗಳಷ್ಟು ಗಮನಾರ್ಹವಾಗಿ ಕಡಿಮೆ ಮಾಡುವ ಮೂಲಕ, ಈ ರೈಲು ಧಾರ್ಮಿಕ ಪ್ರವಾಸೋದ್ಯಮ ಮತ್ತು ಪ್ರವಾಸೋದ್ಯಮಕ್ಕೂ ಪ್ರಮುಖ ಉತ್ತೇಜನ ನೀಡಲಿದೆ.
ಬಾಲೂರ್‌ಘಾಟ್ ಮತ್ತು ಹಿಲಿ ನಡುವಿನ ಹೊಸ ರೈಲು ಮಾರ್ಗ, ನ್ಯೂ ಜಲಪೈಗುರಿಯಲ್ಲಿ ಮುಂದಿನ ಪೀಳಿಗೆಯ ಸರಕು ನಿರ್ವಹಣಾ ಸೌಲಭ್ಯಗಳು, ಸಿಲಿಗುರಿ ಲೋಕೋ ಶೆಡ್ ನ ಮೇಲ್ದರ್ಜೆಗೇರಿಸುವಿಕೆ ಮತ್ತು ಜಲಪೈಗುರಿ ಜಿಲ್ಲೆಯಲ್ಲಿ ವಂದೇ ಭಾರತ ರೈಲು ನಿರ್ವಹಣಾ ಸೌಲಭ್ಯಗಳ ಆಧುನೀಕರಣ ಸೇರಿದಂತೆ ಪಶ್ಚಿಮ ಬಂಗಾಳದ ನಾಲ್ಕು ಪ್ರಮುಖ ರೈಲ್ವೆ ಯೋಜನೆಗಳಿಗೆ ಪ್ರಧಾನ ಮಂತ್ರಿಯವರು ಶಂಕುಸ್ಥಾಪನೆ ಮಾಡಿದರು. ಈ ಯೋಜನೆಗಳು ಪ್ರಯಾಣಿಕರ ಮತ್ತು ಸರಕು ಸಾಗಣೆ ಕಾರ್ಯಾಚರಣೆಗಳನ್ನು ಬಲಪಡಿಸುತ್ತವೆ, ಉತ್ತರ ಬಂಗಾಳದಲ್ಲಿ ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುತ್ತವೆ ಮತ್ತು ಈ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ.
ಪ್ರಧಾನಮಂತ್ರಿಯವರು ನ್ಯೂ ಕೂಚ್ ಬೆಹಾರ್–ಬಮನ್ಹತ್ ಮತ್ತು ನ್ಯೂ ಕೂಚ್ ಬೆಹಾರ್–ಬಾಕ್ಸಿರ್ಹತ್ ನಡುವಿನ ರೈಲು ಮಾರ್ಗಗಳ ವಿದ್ಯುದೀಕರಣವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು, ಇದು ವೇಗವಾದ, ಸ್ವಚ್ಛವಾದ ಮತ್ತು ಹೆಚ್ಚು ಇಂಧನ ದಕ್ಷತೆಯ ರೈಲು ಕಾರ್ಯಾಚರಣೆಗಳನ್ನು ಶಕ್ತಗೊಳಿಸುತ್ತದೆ.
ಪ್ರಧಾನಮಂತ್ರಿಯವರು 4 ಹೊಸ ಅಮೃತ ಭಾರತ ಎಕ್ಸ್ ಪ್ರೆಸ್ ರೈಲುಗಳಿಗೆ ವರ್ಚುವಲ್ ಆಗಿ ಚಾಲನೆ ನೀಡಿದರು - ನ್ಯೂ ಜಲಪೈಗುರಿ- ನಾಗರಕೋಯಿಲ್ ಅಮೃತ ಭಾರತ ಎಕ್ಸ್ ಪ್ರೆಸ್; ನ್ಯೂ ಜಲಪೈಗುರಿ- ತಿರುಚ್ಚಿರಾಪಳ್ಳಿ ಅಮೃತ ಭಾರತ ಎಕ್ಸ್ ಪ್ರೆಸ್; ಅಲಿಪುರ್ದುವಾರ್ – ಎಸ್ ಎಂ ವಿ ಟಿ ಬೆಂಗಳೂರು ಅಮೃತ ಭಾರತ ಎಕ್ಸ್ ಪ್ರೆಸ್; ಅಲಿಪುರ್ದುವಾರ್ – ಮುಂಬೈ (ಪನ್ವೇಲ್) ಅಮೃತ ಭಾರತ ಎಕ್ಸ್ ಪ್ರೆಸ್. ಇದು ಕೈಗೆಟುಕುವ ಮತ್ತು ವಿಶ್ವಾಸಾರ್ಹ ದೂರದ ರೈಲು ಸಂಪರ್ಕವನ್ನು ಹೆಚ್ಚಿಸುತ್ತದೆ. ಈ ಸೇವೆಗಳು ಸಾಮಾನ್ಯ ನಾಗರಿಕರು, ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು ಮತ್ತು ವ್ಯಾಪಾರಿಗಳ ಸಂಚಾರ ಅಗತ್ಯಗಳನ್ನು ಬೆಂಬಲಿಸುತ್ತವೆ ಮತ್ತು ಅಂತರ-ರಾಜ್ಯ ಆರ್ಥಿಕ ಮತ್ತು ಸಾಮಾಜಿಕ ಸಂಬಂಧಗಳನ್ನು ಬಲಪಡಿಸುತ್ತವೆ.
ಎಲ್ ಎಚ್ ಬಿ ಬೋಗಿಗಳನ್ನು ಹೊಂದಿರುವ ಎರಡು ಹೊಸ ರೈಲು ಸೇವೆಗಳಿಗೂ ಪ್ರಧಾನಮಂತ್ರಿಯವರು ಚಾಲನೆ ನೀಡಿದರು - ರಾಧಿಕಾಪುರ - ಎಸ್ ಎಂ ವಿ ಟಿ ಬೆಂಗಳೂರು ಎಕ್ಸ್ ಪ್ರೆಸ್; ಬಾಲೂರ್‌ಘಾಟ್ - ಎಸ್ ಎಂ ವಿ ಟಿ ಬೆಂಗಳೂರು ಎಕ್ಸ್ ಪ್ರೆಸ್. ಈ ರೈಲುಗಳು ಈ ಪ್ರದೇಶದ ಯುವಜನರು, ವಿದ್ಯಾರ್ಥಿಗಳು ಮತ್ತು ಐಟಿ ವೃತ್ತಿಪರರಿಗೆ ಬೆಂಗಳೂರಿನಂತಹ ಪ್ರಮುಖ ಐಟಿ ಮತ್ತು ಉದ್ಯೋಗ ಕೇಂದ್ರಗಳಿಗೆ ನೇರ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಸಂಪರ್ಕವನ್ನು ಒದಗಿಸುತ್ತವೆ.
ರಾಷ್ಟ್ರೀಯ ಹೆದ್ದಾರಿ-31ಡಿ ಯ ಧೂಪ್‌ಗುರಿ-ಫಲಕಟಾ ವಿಭಾಗದ ಪುನರ್ವಸತಿ ಮತ್ತು ಚತುಷ್ಪಥ ಕಾಮಗಾರಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ಮಾಡಿದರು. ಈ ಪ್ರಮುಖ ರಸ್ತೆ ಯೋಜನೆಯು ಪ್ರಾದೇಶಿಕ ರಸ್ತೆ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಉತ್ತರ ಬಂಗಾಳದಲ್ಲಿ ಪ್ರಯಾಣಿಕರ ಮತ್ತು ಸರಕುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ.
ಈ ಯೋಜನೆಗಳು ಆಧುನಿಕ ಮೂಲಸೌಕರ್ಯ ಸೃಷ್ಟಿ ಮತ್ತು ಸುಧಾರಿತ ಸಂಪರ್ಕವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ಪೂರ್ವ ಮತ್ತು ಈಶಾನ್ಯ ವಲಯಗಳನ್ನು ದೇಶದ ಪ್ರಮುಖ ಬೆಳವಣಿಗೆಯ ಇಂಜಿನ್ ಗಳಾಗಿ ಬಲಪಡಿಸುತ್ತವೆ.
******
(रिलीज़ आईडी: 2215619)
आगंतुक पटल : 35
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Gujarati
,
Tamil
,
Telugu
,
Malayalam