ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜನವರಿ 17-18 ರಂದು ಅಸ್ಸಾಂಗೆ ಪ್ರಧಾನಮಂತ್ರಿ ಭೇಟಿ


ಜನವರಿ 17 ರಂದು ಬೋಡೋ ಸಮುದಾಯದ ಶ್ರೀಮಂತ ಪರಂಪರೆಯನ್ನು ಆಚರಿಸುವ ಐತಿಹಾಸಿಕ ಸಾಂಸ್ಕೃತಿಕ ಕಾರ್ಯಕ್ರಮ “ಬಾಗುರೂಂಬಾ ದೊಹೊ 2026”ನಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ

ಬೋಡೋ ಸಮುದಾಯದ 10,000ಕ್ಕೂ ಹೆಚ್ಚು ಕಲಾವಿದರು ಬಾಗುರುಂಬ ನೃತ್ಯ ಪ್ರದರ್ಶಿಸಲಿದ್ದಾರೆ

ಕಾಲಿಯಾಬೋರ್‌ನಲ್ಲಿ ₹6,950 ಕೋಟಿಗೂ ಹೆಚ್ಚು ಮೌಲ್ಯದ ಕಾಜಿರಂಗ ಎತ್ತರದ ಕಾರಿಡಾರ್ ಯೋಜನೆಗಾಗಿ ಭೂಮಿ ಪೂಜೆ ನೆರವೇರಿಸಲಿದ್ದಾರೆ ಪ್ರಧಾನಮಂತ್ರಿ

ಈ ಯೋಜನೆಯು ಪ್ರಾಣಿಗಳ ಅಡೆತಡೆಯಿಲ್ಲದ ಸಂಚಾರವನ್ನು ಖಚಿತಪಡಿಸುತ್ತದೆ, ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುತ್ತದೆ

ಗುವಾಹಟಿ (ಕಾಮಾಖ್ಯ) - ರೋಹ್ಟಕ್ ಮತ್ತು ದಿಬ್ರುಗಢ - ಲಕ್ನೋ (ಗೋಮತಿ ನಗರ) ನಡುವಿನ 2 ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಮಂತ್ರಿ ಹಸಿರು ನಿಶಾನೆ ತೋರಲಿದ್ದಾರೆ.

प्रविष्टि तिथि: 16 JAN 2026 1:53PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜನವರಿ 17-18, ರಂದು ಅಸ್ಸಾಂಗೆ ಭೇಟಿ ನೀಡಲಿದ್ದಾರೆ.

ಜನವರಿ 17 ರಂದು ಸಂಜೆ 6 ಗಂಟೆಗೆ ಗುವಾಹಟಿಯ ಸರುಸಜೈ ಕ್ರೀಡಾಂಗಣದಲ್ಲಿ ನಡೆಯುವ ಸಾಂಪ್ರದಾಯಿಕ ಬೋಡೋ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ.

ಜನವರಿ 18 ರಂದು ಬೆಳಿಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ₹6,950 ಕೋಟಿಗೂ ಹೆಚ್ಚು ಮೌಲ್ಯದ ಕಾಜಿರಂಗ ಎತ್ತರದ ಕಾರಿಡಾರ್ ಯೋಜನೆಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ ಮತ್ತು ನಾಗಾಂವ್ ಜಿಲ್ಲೆಯ ಕಲಿಯಾಬೋರ್‌ನಲ್ಲಿ 2 ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಗುವಾಹಟಿಯಲ್ಲಿ ಪ್ರಧಾನಮಂತ್ರಿ

ಗುವಾಹಟಿಯ ಸರುಸಜೈ ಕ್ರೀಡಾಂಗಣದಲ್ಲಿ ಬೋಡೋ ಸಮುದಾಯದ ಶ್ರೀಮಂತ ಪರಂಪರೆಯನ್ನು ಆಚರಿಸುವ ಐತಿಹಾಸಿಕ ಸಾಂಸ್ಕೃತಿಕ ಕಾರ್ಯಕ್ರಮ “ಬಾಗುರುಂಬ ದ್ವೌ 2026” ನಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ.

ಸಂದರ್ಭದಲ್ಲಿ, ಬೋಡೋ ಸಮುದಾಯದ 10,000ಕ್ಕೂ ಹೆಚ್ಚು ಕಲಾವಿದರು ಒಂದೇ ಬಾರಿಗೆ ಬಾಗುರೂಂಬಾ ನೃತ್ಯವನ್ನು ಪ್ರದರ್ಶಿಸಲಿದ್ದಾರೆ. ರಾಜ್ಯದ 23 ಜಿಲ್ಲೆಗಳ 81 ವಿಧಾನಸಭಾ ಕ್ಷೇತ್ರಗಳ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಾಗುರೂಂಬಾ ಬೋಡೋ ಸಮುದಾಯದ ಜಾನಪದ ನೃತ್ಯಗಳಲ್ಲಿ ಒಂದಾಗಿದ್ದು, ಪ್ರಕೃತಿಯಿಂದ ಆಳವಾಗಿ ಪ್ರೇರಿತವಾಗಿದೆ. ಈ ನೃತ್ಯವು ಅರಳುವ ಹೂವುಗಳನ್ನು ಸಂಕೇತಿಸುತ್ತದೆ ಮತ್ತು ಮಾನವ ಜೀವನ ಹಾಗು ನೈಸರ್ಗಿಕ ಪ್ರಪಂಚದ ನಡುವಿನ ಸಾಮರಸ್ಯವನ್ನು ಪ್ರತಿಬಿಂಬಿಸುತ್ತದೆ. ಸಾಂಪ್ರದಾಯಿಕವಾಗಿ ಯುವ ಬೋಡೋ ಮಹಿಳೆಯರು, ಪುರುಷರು ಸಂಗೀತಗಾರರಾಗಿ ಜೊತೆಗೂಡುತ್ತಾರೆ, ಈ ನೃತ್ಯವು ಚಿಟ್ಟೆಗಳು, ಪಕ್ಷಿಗಳು, ಎಲೆಗಳು ಮತ್ತು ಹೂವುಗಳನ್ನು ಅನುಕರಿಸುವ ಸೌಮ್ಯವಾದ, ಹರಿಯುವ ಚಲನೆಗಳನ್ನು ಒಳಗೊಂಡಿದೆ. ಪ್ರದರ್ಶನಗಳನ್ನು ಸಾಮಾನ್ಯವಾಗಿ ಗುಂಪುಗಳಲ್ಲಿ ಆಯೋಜಿಸಲಾಗುತ್ತದೆ, ವೃತ್ತಗಳು ಅಥವಾ ರೇಖೆಗಳನ್ನು ರೂಪಿಸುವ ಮೂಲಕ ಅದರ ದೃಶ್ಯ ಸೊಬಗನ್ನು ಹೆಚ್ಚಿಸುತ್ತಾರೆ.

ಬಾಗುರೂಂಬಾ ನೃತ್ಯವು ಬೋಡೋ ಜನರಲ್ಲಿ ಆಳವಾದ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಇದು ಶಾಂತಿ, ಫಲವತ್ತತೆ, ಸಂತೋಷ ಮತ್ತು ಸಾಮೂಹಿಕ ಸಾಮರಸ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಬಿವಿಸಾಗು, ಬೋಡೋ ಹೊಸ ವರ್ಷ ಮತ್ತು ಡೊಮಾಸಿಯಂತಹ ಹಬ್ಬಗಳೊಂದಿಗೆ ನಿಕಟ ಸಂಬಂಧ ಹೊಂದಿದೆ.

ಕಲಿಯಾಬೋರ್‌ನಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿಯವರು ₹6,950 ಕೋಟಿಗೂ ಹೆಚ್ಚು ಮೌಲ್ಯದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಯ (ಎನ್.ಎಚ್.-715 ರ ಕಲಿಯಾಬೋರ್-ನುಮಲಿಗಢ ವಿಭಾಗದ 4-ಲೇನಿಂಗ್) ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ.

86 ಕಿ.ಮೀ ಉದ್ದದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಯು ಪರಿಸರ ಸ್ನೇಹಿ ರಾಷ್ಟ್ರೀಯ ಹೆದ್ದಾರಿ ಯೋಜನೆಯಾಗಿದೆ. ಇದು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುವ 35 ಕಿ.ಮೀ ಎತ್ತರದ ವನ್ಯಜೀವಿ ಕಾರಿಡಾರ್, 21 ಕಿ.ಮೀ ಬೈಪಾಸ್ ವಿಭಾಗ ಮತ್ತು ಎನ್.ಎಚ್.-715ರ ಅಸ್ತಿತ್ವದಲ್ಲಿರುವ ಹೆದ್ದಾರಿ ವಿಭಾಗದ ದ್ವಿಪಥದಿಂದ ನಾಲ್ಕು ಪಥಗಳ ವಿಸ್ತರಣೆಯ ಭಾಗವಾಗಿ 30 ಕಿ.ಮೀ ಅಗಲೀಕರಣವನ್ನು ಒಳಗೊಂಡಿದೆ. ಉದ್ಯಾನವನದ ಶ್ರೀಮಂತ ಜೀವವೈವಿಧ್ಯತೆಯ ರಕ್ಷಣೆಯನ್ನು ಖಚಿತಪಡಿಸಿಕೊತ್ತಲೇ ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಯೋಜನೆ ಹೊಂದಿದೆ.

ಯೋಜನೆಯು ನಾಗಾಂವ್, ಕರ್ಬಿ ಆಂಗ್ಲಾಂಗ್ ಮತ್ತು ಗೋಲಾಘಾಟ್ ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಮೇಲ್ಭಾಗದ ಅಸ್ಸಾಂ, ವಿಶೇಷವಾಗಿ ದಿಬ್ರುಗಢ ಮತ್ತು ತಿನ್ಸುಕಿಯಾಕ್ಕೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಎತ್ತರಿಸಿದ ವನ್ಯಜೀವಿ ಕಾರಿಡಾರ್ ಪ್ರಾಣಿಗಳ ಅಡೆತಡೆಯಿಲ್ಲದ ಚಲನೆಯನ್ನು ಖಚಿತಪಡಿಸುತ್ತದೆ, ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡುತ್ತದೆ. ಇದು ರಸ್ತೆ ಸುರಕ್ಷತೆಯನ್ನು ಹೆಚ್ಚಿಸುತ್ತದೆ, ಪ್ರಯಾಣದ ಸಮಯ ಮತ್ತು ಅಪಘಾತ ಪ್ರಮಾಣಗಳನ್ನು ಕಡಿಮೆ ಮಾಡುತ್ತದೆ ಮತ್ತು ಬೆಳೆಯುತ್ತಿರುವ ಪ್ರಯಾಣಿಕರ ಹಾಗು ಸರಕು ಸಾಗಣೆಯನ್ನು ಬೆಂಬಲಿಸುತ್ತದೆ. ಯೋಜನೆಯ ಭಾಗವಾಗಿ, ಜಖಲಬಂಧ ಮತ್ತು ಬೊಕಾಖಾಟ್‌ನಲ್ಲಿ ಬೈಪಾಸ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು, ಇದು ಪಟ್ಟಣಗಳ ದಟ್ಟಣೆಯನ್ನು ಕಡಿಮೆ ಮಾಡಲು, ನಗರ ಚಲನಶೀಲತೆಯನ್ನು ಸುಧಾರಿಸಲು ಮತ್ತು ಸ್ಥಳೀಯ ನಿವಾಸಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಾರ್ಯಕ್ರಮದ ಸಮಯದಲ್ಲಿ, ಪ್ರಧಾನಮಂತ್ರಿ ಅವರು 2 ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಾದ ಗುವಾಹಟಿ (ಕಾಮಾಖ್ಯ)-ರೋಹಟಕ್ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಮತ್ತು ದಿಬ್ರುಗಢ-ಲಕ್ನೋ (ಗೋಮತಿ ನಗರ) ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಲಿದ್ದಾರೆ. ಈ ಹೊಸ ರೈಲು ಸೇವೆಗಳು ಈಶಾನ್ಯ ಮತ್ತು ಉತ್ತರ ಭಾರತದ ನಡುವಿನ ರೈಲು ಸಂಪರ್ಕವನ್ನು ಬಲಪಡಿಸುತ್ತವೆ, ಜನರಿಗೆ ಸುರಕ್ಷಿತ ಮತ್ತು ಹೆಚ್ಚು ಅನುಕೂಲಕರ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತವೆ.  

 

*****


(रिलीज़ आईडी: 2215349) आगंतुक पटल : 21
इस विज्ञप्ति को इन भाषाओं में पढ़ें: Bengali , Assamese , English , Khasi , Urdu , Marathi , हिन्दी , Nepali , Bengali-TR , Gujarati , Odia , Tamil , Telugu , Malayalam