ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಾರ್ಯಾಲಯದಿಂದ 'ಇನ್ಸ್ಪೈರಿಂಗ್ ಇನ್ನೋವೇಟರ್ಸ್' ಕೌಶಲ್ಯ ಉಪಕ್ರಮಕ್ಕಾಗಿ ನೆಟ್‌ಫ್ಲಿಕ್ಸ್ ನೊಂದಿಗೆ ಸಹಯೋಗ
ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ, ಕೌಶಲ್ಯ ಉಪಕ್ರಮದ ಭಾಗವಾಗಿ ನಿರ್ಮಿಸಲಾದ ಎಂಟು ಕಿರುಚಿತ್ರಗಳು ಭಾರತದ ಉದಯೋನ್ಮುಖ ನಾವೀನ್ಯತೆ ಪರಿಸರ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತವೆ
प्रविष्टि तिथि:
13 JAN 2026 5:49PM by PIB Bengaluru
ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಾರ್ಯಾಲಯವು ಇಂದು 'ನೆಟ್‌ಫ್ಲಿಕ್ಸ್ ಫಂಡ್ ಫಾರ್ ಕ್ರಿಯೇಟಿವ್ ಈಕ್ವಿಟಿ' ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ 'ಇನ್ಸ್ಪೈರಿಂಗ್ ಇನ್ನೋವೇಟರ್ಸ್ – ನಯೇ ಭಾರತ್ ಕಿ ನಯೀ ಪೆಹಚಾನ್' ಎಂಬ ಕೌಶಲ್ಯ ಉಪಕ್ರಮದ ಸಮಾರೋಪವನ್ನು ಆಚರಿಸಿದವು. ಗ್ರಾಫಿಟಿ ಸ್ಟುಡಿಯೋಸ್ ಪಾಲುದಾರಿಕೆಯಲ್ಲಿ ಅನುಷ್ಠಾನಗೊಂಡ ಈ ಉಪಕ್ರಮವು, ಕಥೆ ಹೇಳುವಿಕೆ ಮತ್ತು ಪ್ರಾಯೋಗಿಕ ಕೌಶಲ್ಯದ ಮೂಲಕ ಸಾಮಾಜಿಕವಾಗಿ ಪ್ರಸ್ತುತವಾದ ನಾವೀನ್ಯತೆಯನ್ನು ಉತ್ತೇಜಿಸಲು ಭಾರತದ ನಾವೀನ್ಯತೆ ಮತ್ತು ಸೃಜನಶೀಲ ಪರಿಸರ ವ್ಯವಸ್ಥೆಗಳನ್ನು ಒಂದೆಡೆ ತರುತ್ತದೆ.

ಸಾಮಾಜಿಕ ಪ್ರಭಾವದ ನಾವೀನ್ಯತೆಯನ್ನು ಚಾಲನೆ ಮಾಡುವಲ್ಲಿನ ಕಾರ್ಯಕ್ಕಾಗಿ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಾರ್ಯಾಲಯದಿಂದ ಗುರುತಿಸಲ್ಪಟ್ಟ ಎಂಟು ಭಾರತೀಯ ನವೋದ್ಯಮಗಳ ಕೊಡುಗೆಗಳನ್ನು ಈ ಉಪಕ್ರಮವು ಪ್ರದರ್ಶಿಸುತ್ತದೆ. ರಾಷ್ಟ್ರೀಯ ವಿನ್ಯಾಸ ಸಂಸ್ಥೆ, ಚಿತ್ಕಾರಾ ವಿಶ್ವವಿದ್ಯಾಲಯ, ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಮತ್ತು ಇತರ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ನಿರ್ಮಿಸಿದ ಎಂಟು ಕಿರು ಅನಿಮೇಟೆಡ್ ಚಿತ್ರಗಳ ಮೂಲಕ ಈ ನವೋದ್ಯಮಗಳನ್ನು ಚಿತ್ರಿಸಲಾಗಿದೆ. ಈ ಚಿತ್ರಗಳ ಧ್ವನಿಮುದ್ರಣವನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಸಿ) ಸಹಯೋಗದೊಂದಿಗೆ ನೆಟ್‌ಫ್ಲಿಕ್ಸ್ ಹಮ್ಮಿಕೊಂಡಿದ್ದ 'ವಾಯ್ಸ್ ಬಾಕ್ಸ್' ಎಂಬ ಕೌಶಲ್ಯ ಉಪಕ್ರಮದಲ್ಲಿ ಭಾಗವಹಿಸಿದವರು ನಿರ್ವಹಿಸಿದ್ದಾರೆ.

ನೆಟ್‌ಫ್ಲಿಕ್ಸ್ ಫಂಡ್ ಫಾರ್ ಕ್ರಿಯೇಟಿವ್ ಈಕ್ವಿಟಿ ಅಡಿಯಲ್ಲಿ ಕಥೆ ಹೇಳುವಿಕೆ ಮತ್ತು ಕೌಶಲ್ಯ ಆಧಾರಿತ ಕಾರ್ಯಕ್ರಮವಾಗಿ ವಿನ್ಯಾಸಗೊಳಿಸಲಾದ ಈ ಉಪಕ್ರಮವು ಭಾರತದ ವಿವಿಧ ಭಾಗಗಳ 26 ವಿದ್ಯಾರ್ಥಿಗಳ ತಂಡಕ್ಕೆ ಪ್ರಾಯೋಗಿಕ ಸೃಜನಶೀಲ ಅನುಭವವನ್ನು ಒದಗಿಸಿದೆ. ಭಾಗವಹಿಸಿದವರಲ್ಲಿ ಶೇ. 50 ರಷ್ಟು ಮಹಿಳೆಯರು ಮತ್ತು ಹಲವಾರು ವಿದ್ಯಾರ್ಥಿಗಳು ಎರಡನೇ ಹಂತದ ನಗರಗಳಿಂದ ಬಂದವರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಅಹಮದಾಬಾದ್ ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್ ಐ ಡಿ) ಮತ್ತು ಗ್ರಾಫಿಟಿ ಸ್ಟುಡಿಯೋಸ್ ನ ಪರಿಣಿತರು ಮಾರ್ಗದರ್ಶನ ನೀಡಿದರು, ಇದರಿಂದಾಗಿ ಉದ್ಯಮದ ಪ್ರಕ್ರಿಯೆಗಳ ಬಗ್ಗೆ ಪ್ರಾಯೋಗಿಕ ಮತ್ತು ನೈಜ-ಪ್ರಪಂಚದ ಜ್ಞಾನವನ್ನು ಪಡೆದರು.
ಈ ಉಪಕ್ರಮದ ಮೂಲ ಗೀತೆಯನ್ನು ಶಂಕರ್ ಮಹಾದೇವನ್ ಅಕಾಡೆಮಿಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು, ಇದು ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮತ್ತು ಸೃಜನಶೀಲ ಆಯಾಮವನ್ನು ಸೇರಿಸಿತು.
ಕಾರ್ಯಕ್ರಮದ ವೇಳೆ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಮಾತನಾಡಿ, "ಭಾರತದ ಶ್ರೀಮಂತ ಕಥೆ ಹೇಳುವ ಸಂಪ್ರದಾಯದಲ್ಲಿ ಬೇರೂರಿರುವ ನಮ್ಮ ಸೃಜನಶೀಲರು ಇಂದು ಭಾರತೀಯ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ ಅವಕಾಶವನ್ನು ಹೊಂದಿದ್ದಾರೆ. ಬೌದ್ಧಿಕ ಆಸ್ತಿ ಚೌಕಟ್ಟುಗಳನ್ನು ಬಲಪಡಿಸಲು ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಸರ್ಕಾರದ ಪ್ರಯತ್ನಗಳು ಇದಕ್ಕೆ ಬೆಂಬಲ ನೀಡುತ್ತಿವೆ. ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನದಿಂದ ಪ್ರೇರಿತರಾಗಿ, ಭಾರತದ ಆರ್ಥಿಕತೆಯ ಪ್ರಮುಖ ಸ್ತಂಭಗಳಾಗಿ ಹೊರಹೊಮ್ಮುತ್ತಿರುವ ವಿಷಯ (ಕಂಟೆಂಟ್), ಸೃಜನಶೀಲತೆ ಮತ್ತು ಸಂಸ್ಕೃತಿಯೊಂದಿಗೆ ಭಾರತದಲ್ಲಿ ನಿರ್ಮಿಸಲು ಮತ್ತು ಜಗತ್ತಿಗಾಗಿ ನಿರ್ಮಿಸಲು ಇದು ಸರಿಯಾದ ಸಮಯವಾಗಿದೆ. ಕಥೆ ಹೇಳುವಿಕೆಯು ಸೃಜನಶೀಲರು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಂದ ರೂಪಿತವಾದ ಹೊಸ ಯುಗವನ್ನು ಪ್ರವೇಶಿಸುತ್ತಿರುವಾಗ, 'ಇನ್ಸ್ಪೈರಿಂಗ್ ಇನ್ನೋವೇಟರ್ಸ್' ನಂತಹ ಉಪಕ್ರಮಗಳು ಸಮಾಜದ ಸೇವೆಯಲ್ಲಿ ಸೃಜನಶೀಲತೆಯನ್ನು ಹೇಗೆ ಬಳಸಬಹುದು" ಎಂದು ಹೇಳಿದರು.

ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊ. ಅಜಯ್ ಕುಮಾರ್ ಸೂದ್ ಅವರು,
"ಕೌಶಲ್ಯ ಮತ್ತು ಜ್ಞಾನದ ಮಾರ್ಗಗಳನ್ನು ಬಲಪಡಿಸುವ ಜೊತೆಗೆ ಸಾಮಾಜಿಕ ಪ್ರಸ್ತುತತೆಯುಳ್ಳ ನಾವೀನ್ಯತೆಯನ್ನು ಪ್ರದರ್ಶಿಸಲು ಇನ್ಸ್ಪೈರಿಂಗ್ ಇನ್ನೋವೇಟರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಸೃಜನಾತ್ಮಕ ಪ್ರಕ್ರಿಯೆಯ ಮೂಲಕ ನವೋದ್ಯಮಗಳನ್ನು ಮತ್ತು ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಮೂಲಕ ಹಾಗೂ ನೆಟ್‌ಫ್ಲಿಕ್ಸ್ ಫಂಡ್ ಫಾರ್ ಕ್ರಿಯೇಟಿವ್ ಈಕ್ವಿಟಿ ಮತ್ತು ಉದ್ಯಮದ ಮಾರ್ಗದರ್ಶನದ ಮೂಲಕ ಕೌಶಲ್ಯ ಬೆಂಬಲವನ್ನು ಒದಗಿಸುವ ಈ ಕಾರ್ಯಕ್ರಮವು, ನೀತಿ ಉದ್ದೇಶವನ್ನು ಪ್ರತಿಭೆ ಅಭಿವೃದ್ಧಿ ಮತ್ತು ನೈಜ-ಪ್ರಪಂಚದ ಅನ್ವಯದೊಂದಿಗೆ ಸಂಪರ್ಕಿಸುವ ಮೂಲಕ ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಒಂದು ಸಮಗ್ರ ವಿಧಾನವನ್ನು ಪ್ರತಿಬಿಂಬಿಸುತ್ತದೆ" ಎಂದರು.

ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಅವರು, "ಭಾರತವು ಗಮನಾರ್ಹವಾದ ನಾವೀನ್ಯತೆಗೆ ಸಾಕ್ಷಿಯಾಗುತ್ತಿದೆ, ಇದು ದೈನಂದಿನ ಸವಾಲುಗಳನ್ನು ಉದ್ದೇಶ-ಚಾಲಿತ ಪರಿಹಾರಗಳ ಮೂಲಕ ಪರಿಹರಿಸುವ ಸಾಮಾಜಿಕ ನಾವೀನ್ಯಕಾರರಿಂದ ನಡೆಸಲ್ಪಡುತ್ತಿದೆ. ನೆಟ್‌ಫ್ಲಿಕ್ಸ್ ಭಾರತದಲ್ಲಿ ಒಂದು ದಶಕವನ್ನು ಪೂರೈಸುತ್ತಿರುವಾಗ, ಕಥೆ ಹೇಳುವಿಕೆಯು ಕೇವಲ ವಿಷಯ ನಿರ್ಮಾಣವನ್ನು ಮೀರಿ ಹೇಗೆ ಅರ್ಥಪೂರ್ಣ ಕೌಶಲ್ಯ ಮತ್ತು ಸಬಲೀಕರಣದ ವೇದಿಕೆಯಾಗಿ ವಿಕಸನಗೊಳ್ಳಬಹುದು ಎಂಬುದಕ್ಕೆ ಇನ್ಸ್ಪೈರಿಂಗ್ ಇನ್ನೋವೇಟರ್ಸ್ ಒಂದು ಪ್ರಬಲ ಉದಾಹರಣೆಯಾಗಿದೆ. ಇದು ದೇಶಾದ್ಯಂತ ಇರುವ ಯುವ ಪ್ರತಿಭೆಗಳ ಆತ್ಮವಿಶ್ವಾಸ ಮತ್ತು ವೃತ್ತಿಪರತೆಯನ್ನು ಪ್ರತಿಬಿಂಬಿಸುತ್ತದೆ. ಇದು ನಿಜವಾಗಿಯೂ ಸೃಜನಶೀಲರು ಮತ್ತು ಕಥೆ ಹೇಳುವವರ ಯುಗವಾಗಿದೆ ಮತ್ತು ಎಐ-ಚಾಲಿತ ನಿರೂಪಣೆಗಳಿಂದ ರೂಪಿತವಾದ ಯುಗವನ್ನು ನಾವು ಪ್ರವೇಶಿಸುತ್ತಿರುವಾಗ, ಮುಂದಿನ ಪೀಳಿಗೆಯ ಬೆಳವಣಿಗೆ ಮತ್ತು ಪ್ರಗತಿಯನ್ನು ಸಕ್ರಿಯಗೊಳಿಸುವ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಭಾರತದ ಪ್ರಸ್ತುತ ಮತ್ತು ಉದ್ದೇಶ-ಚಾಲಿತ ಕಥೆಗಳನ್ನು ದೂರದ ಪ್ರೇಕ್ಷಕರಿಗೆ ತಲುಪಿಸುತ್ತಿರುವುದು ಆಶಾದಾಯಕವಾಗಿದೆ" ಎಂದು ಹೇಳಿದರು.

ನೆಟ್‌ಫ್ಲಿಕ್ಸ್ ಇಂಡಿಯಾದ ಜಾಗತಿಕ ವ್ಯವಹಾರಗಳ ನಿರ್ದೇಶಕಿ ಮಹಿಮಾ ಕೌಲ್ ಅವರು ಪ್ರತಿಕ್ರಿಯಿಸಿ, "ನೆಟ್‌ಫ್ಲಿಕ್ಸ್ ನಲ್ಲಿ, ಭಾರತದ ಯುವ ಮತ್ತು ಚೈತನ್ಯದಾಯಕ ಸೃಜನಶೀಲ ಪರಿಸರ ವ್ಯವಸ್ಥೆಯ ಕೌಶಲ್ಯ ಮತ್ತು ನೈಪುಣ್ಯವನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ನೈಜ ಸಾಮಾಜಿಕ ಮೌಲ್ಯವನ್ನು ನೀಡುವ ನಾವೀನ್ಯತೆಯನ್ನು ಗುರುತಿಸುವ ಹಂಚಿಕೆಯ ಬದ್ಧತೆಯನ್ನು ಇನ್ಸ್ಪೈರಿಂಗ್ ಇನ್ನೋವೇಟರ್ಸ್ ಪ್ರತಿಬಿಂಬಿಸುತ್ತದೆ" ಎಂದು ಹೇಳಿದರು.
ಮಂಥನ್-ಸಕ್ರಿಯಗೊಳಿಸಿದ ನಾವೀನ್ಯತೆ ಕಥೆಗಳು
ಮಂಥನ್ ರಾಷ್ಟ್ರೀಯ ಡಿಜಿಟಲ್ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತದೆ, ಇದು ಉನ್ನತ-ಪ್ರಭಾವದ ನಾವೀನ್ಯತೆಗಳನ್ನು ಗುರುತಿಸುತ್ತದೆ, ಸಂಯೋಜಿಸುತ್ತದೆ ಮತ್ತು ಅವುಗಳನ್ನು ವಿಸ್ತರಿಸಲು ಅವಕಾಶಗಳೊಂದಿಗೆ ಸಂಪರ್ಕಿಸುತ್ತದೆ. ಮಂಥನ್ ವೇದಿಕೆಯ ಮೂಲಕ ಎಂಟು ಸಾಮಾಜಿಕ ನಾವೀನ್ಯತೆ ನವೋದ್ಯಮಗಳನ್ನು ಅನ್ವೇಷಿಸಲಾಯಿತು ಮತ್ತು ಬೆಂಬಲಿಸಲಾಯಿತು. ಈ ಉಪಕ್ರಮದ ಅಡಿಯಲ್ಲಿ ಪ್ರದರ್ಶಿಸಲಾದ ಎಂಟು ಚಿತ್ರಗಳು ಈ ಕೆಳಗಿನಂತಿವೆ:
- ನಿಯೋಮೋಷನ್: ವಿಕಲಚೇತನರು ಸ್ವತಂತ್ರವಾಗಿ ಓಡಾಡಲು ಮತ್ತು ಘನತೆಯ ಜೀವನೋಪಾಯವನ್ನು ಗಳಿಸಲು ಅನುವು ಮಾಡಿಕೊಡುವ ಕಸ್ಟಮೈಸ್ ಮಾಡಿದ ವೀಲ್‌ಚೇರ್ ಮತ್ತು ಚಲನಶೀಲ ಪರಿಹಾರಗಳನ್ನು ಸೃಷ್ಟಿಸುವ ನಾವೀನ್ಯಕಾರರನ್ನು ಇದು ಅನುಸರಿಸುತ್ತದೆ.
- ಬ್ಲೈಂಡ್ ವಿಷನ್ ಫೌಂಡೇಶನ್: ದೃಷ್ಟಿಹೀನ ವ್ಯಕ್ತಿಗಳಿಗೆ ಓದಲು, ದಾರಿ ತಿಳಿಯಲು, ಮುಖಗಳನ್ನು ಗುರುತಿಸಲು ಮತ್ತು ಆತ್ಮವಿಶ್ವಾಸದಿಂದ ಸ್ವತಂತ್ರವಾಗಿ ಬದುಕಲು ಅನುವು ಮಾಡುವ ಎಐ-ಚಾಲಿತ ಸ್ಮಾರ್ಟ್ ಗ್ಲಾಸ್ ಗಳನ್ನು ಪ್ರದರ್ಶಿಸುತ್ತದೆ.
- ಹೆಲ್ತ್ ಕೇರ್ ಗ್ಲೋಬಲ್ ಎಂಟರ್ಪ್ರೈಸಸ್ (ಇನ್ನೌಮೇಶನ್): ಲಾರಿಂಜೆಕ್ಟಮಿ ನಂತರ ಗಂಟಲು ಕ್ಯಾನ್ಸರ್ ನಿಂದ ಬದುಕುಳಿದವರಿಗೆ ಮಾತು, ಘನತೆ ಮತ್ತು ಜೀವನೋಪಾಯವನ್ನು ಮರುಸ್ಥಾಪಿಸುವ ಕೈಗೆಟುಕುವ ದರದ ಕೃತಕ ಧ್ವನಿ ಅಂಗದ ಕಥೆಯನ್ನು ಹೇಳುತ್ತದೆ.
- ಇನ್ನೋಗ್ಲೆ: ಭಾರತದ ನೀಲಿ ಆರ್ಥಿಕತೆಗಾಗಿ ಸಮುದ್ರದ ಸುರಕ್ಷತೆ, ಜಲಚರ ಸಾಕಣೆ ಉತ್ಪಾದಕತೆ, ಸಾಗರ ಭದ್ರತೆ ಮತ್ತು ವಿಪತ್ತು ಮೇಲ್ವಿಚಾರಣೆಯನ್ನು ಸುಧಾರಿಸುವ ಎಐ ಮತ್ತು ನೀರಿನೊಳಗಿನ (ಅಂಡರ್ ವಾಟರ್) ತಂತ್ರಜ್ಞಾನಗಳನ್ನು ಎತ್ತಿ ತೋರಿಸುತ್ತದೆ.
- ಕಲ್ಟಿವೇಟ್: ರೈತರಿಗೆ ನೀರನ್ನು ಉಳಿಸಲು, ಇಳುವರಿಯನ್ನು ಹೆಚ್ಚಿಸಲು ಮತ್ತು ಹವಾಮಾನ-ತಾಳಿಕೆ, ನಿಖರವಾದ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುವ ಸ್ವಯಂಚಾಲಿತ, ಎಐ-ಚಾಲಿತ ನೀರಾವರಿ ವ್ಯವಸ್ಥೆಗಳನ್ನು ಚಿತ್ರಿಸುತ್ತದೆ.
- ವಿವೋಯ್ಸ್ ಲ್ಯಾಬ್ಸ್: ತ್ಯಾಜ್ಯ ವಿಂಗಡಣೆ, ಮರುಬಳಕೆ, ಘನತೆಯ ನೈರ್ಮಲ್ಯ ಕೆಲಸ ಮತ್ತು ಮರುಬಳಕೆ ಆರ್ಥಿಕ ಪರಿಹಾರಗಳ ಮೂಲಕ ನಗರಗಳನ್ನು ಪರಿವರ್ತಿಸುವ ತಂತ್ರಜ್ಞಾನ-ಸಕ್ರಿಯಗೊಳಿಸಿದ ತ್ಯಾಜ್ಯ ನಿರ್ವಹಣೆಯನ್ನು ವಿವರಿಸುತ್ತದೆ.
- ಗ್ರೀನ್ಜಿನ್ ಎನ್ವಿರಾನ್ಮೆಂಟಲ್ ಟೆಕ್ನಾಲಜೀಸ್: ಕೈಗಾರಿಕಾ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಇಂಗಾಲವನ್ನು ಸುಸ್ಥಿರವಾಗಿ ಮೌಲ್ಯಯುತ ಜೈವಿಕ ಸಂಪನ್ಮೂಲಗಳಾಗಿ ಪರಿವರ್ತಿಸುವ ಸೂಕ್ಷ್ಮ ಪಾಚಿ-ಆಧಾರಿತ ಇಂಗಾಲ ಸೆರೆಹಿಡಿಯುವ ನಾವೀನ್ಯತೆಗಳನ್ನು ಅನ್ವೇಷಿಸುತ್ತದೆ.
- ಎಲ್ ಸಿ ಬಿ ಫರ್ಟಿಲೈಸರ್ಸ್: ಕೃಷಿ ಮತ್ತು ಕೈಗಾರಿಕಾ ತ್ಯಾಜ್ಯವನ್ನು ಜೈವಿಕ-ನ್ಯಾನೋ ರಸಗೊಬ್ಬರಗಳಾಗಿ ಪರಿವರ್ತಿಸುವ ಮೂಲಕ ಮಣ್ಣಿನ ಆರೋಗ್ಯ, ರೈತರ ಆದಾಯ ಮತ್ತು ಸುಸ್ಥಿರ ಕೃಷಿಯನ್ನು ಸುಧಾರಿಸುವುದನ್ನು ಚಿತ್ರಿಸುತ್ತದೆ.
ಎಂಟೂ ಚಿತ್ರಗಳು Netflix India’s YouTube channel (ನೆಟ್‌ಫ್ಲಿಕ್ಸ್ ಇಂಡಿಯಾದ ಯೂಟ್ಯೂಬ್ ಚಾನಲ್) ನಲ್ಲಿ ವೀಕ್ಷಣೆಗೆ ಲಭ್ಯವಿವೆ.
ನೆಟ್ಫ್ಲಿಕ್ಸ್ ಫಂಡ್ ಫಾರ್ ಕ್ರಿಯೇಟಿವ್ ಈಕ್ವಿಟಿ ಬಗ್ಗೆ
ನೆಟ್‌ಫ್ಲಿಕ್ಸ್ ಫಂಡ್ ಫಾರ್ ಕ್ರಿಯೇಟಿವ್ ಈಕ್ವಿಟಿ ಎಂಬುದು ಮನರಂಜನಾ ಕ್ಷೇತ್ರದಲ್ಲಿ ಕಡಿಮೆ ಪ್ರಾತಿನಿಧ್ಯ ಹೊಂದಿರುವ ಸಮುದಾಯಗಳಿಗೆ ಹೊಸ ಮಾರ್ಗಗಳನ್ನು ನಿರ್ಮಿಸಲು ಸಹಾಯ ಮಾಡುವ ಒಂದು ಸಮರ್ಪಿತ ಪ್ರಯತ್ನವಾಗಿದೆ. ದೂರದರ್ಶನ ಮತ್ತು ಚಲನಚಿತ್ರೋದ್ಯಮಗಳಲ್ಲಿ ಹೆಚ್ಚಿನ ಪ್ರವೇಶವನ್ನು ಸೃಷ್ಟಿಸಲು ಬದ್ಧವಾಗಿರುವ ಬಾಹ್ಯ ಸಂಸ್ಥೆಗಳನ್ನು ಬೆಂಬಲಿಸುವುದರ ಜೊತೆಗೆ, ಜಾಗತಿಕವಾಗಿ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಲು, ತರಬೇತಿ ನೀಡಲು ಮತ್ತು ಸಂಭಾವ್ಯ ಉದ್ಯೋಗಾವಕಾಶಗಳನ್ನು ಒದಗಿಸಲು ವಿನ್ಯಾಸಗೊಳಿಸಲಾದ ನೆಟ್‌ಫ್ಲಿಕ್ಸ್ ನ ವಿಶೇಷ ಕಾರ್ಯಕ್ರಮಗಳನ್ನು ಈ ನಿಧಿಯು ಬೆಂಬಲಿಸುತ್ತದೆ.
*****
(रिलीज़ आईडी: 2214307)
आगंतुक पटल : 6