ರಾಷ್ಟ್ರಪತಿಗಳ ಕಾರ್ಯಾಲಯ
ಭಾರತದ ರಾಷ್ಟ್ರಪತಿ ಅವರಿಂದ ಜಲಾಂತರ್ಗಾಮಿ ನೌಕೆ ಐ.ಎನ್.ಎಸ್. ವಾಘ್ ಶೀರ್ ನಲ್ಲಿ ಸಮುದ್ರಯಾನ
ವಾಘ ಶೀರ್ ಸಿಬ್ಬಂದಿಯ ಶಿಸ್ತು, ವಿಶ್ವಾಸ ಮತ್ತು ಉತ್ಸಾಹ ನೋಡಿ ನಮ್ಮ ಜಲಾಂತರ್ಗಾಮಿ ಮತ್ತು ಭಾರತೀಯ ನೌಕಾಪಡೆ ಸಿಬ್ಬಂದಿ ಯಾವುದೇ ಬೆದರಿಕೆ ವಿರುದ್ಧ ಎಲ್ಲಾ ಸಂದರ್ಭಗಳಲ್ಲಿಯೂ ಹೋರಾಡಲು ಸನ್ನದ್ಧವಾಗಿವೆ ಎಂಬ ಭರವಸೆ ಮೂಡಿದೆ: ರಾಷ್ಡ್ರಪತಿ ದ್ರೌಪದಿ ಮುರ್ಮು
ಪ್ರಕಟಣಾ ದಿನಾಂಕ:
28 DEC 2025 4:53PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಪಶ್ಚಿಮ ಸಮುದ್ರ ತೀರದಲ್ಲಿ ಐ.ಎನ್.ಎಸ್. ವಾಘಶೀರ್ ಜಲಾಂತರ್ಗಾಮಿ ನೌಕೆಯಲ್ಲಿ ಸಮುದ್ರಯಾನ ಕೈಗೊಂಡರು. ನೌಕಾಪಡೆ ಮುಖ್ಯಸ್ಥರಾದ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರು ರಾಷ್ಟ್ರಪತಿ ಅವರೊಂದಿಗೆ ಇದ್ದರು. ರಾಷ್ಟ್ರಪತಿ ಅವರು ಕರ್ನಾಟಕದ ಕಾರವಾರ ನೌಕಾ ಬಂದರಿನಿಂದ ಜಲಾಂತರ್ಗಾಮಿ ನೌಕೆಯಲ್ಲಿ ಇಂದು (ಡಿಸೆಂಬರ್ 28, 2025) ಸಂಚಾರ ನಡೆಸಿದರು. 2 ಗಂಟೆಗಳಿಗೂ ಹೆಚ್ಚು ಕಾಲ ಸಂಚರಿಸಿದ ಅವರು, ಜಲಾಂತರ್ಗಾಮಿ ನೌಕೆಯ ಸಿಬ್ಬಂದಿಯೊಂದಿಗೆ ಸಂವಹನ ನಡೆಸಿದರು ಮತ್ತು ಕಾರ್ಯಾಚರಣೆಯ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಬಳಿಕ, ಜಲಾಂತರ್ಗಾಮಿ ನೌಕೆಯಲ್ಲಿ ಸಂಚಾರ ನಡೆಸಿದ ಎರಡನೇ ರಾಷ್ಟ್ರಪತಿಯಾಗಿದ್ದಾರೆ.

ದೇಶೀಯ ಕಲ್ವರಿ-ವರ್ಗದ ಜಲಾಂತರ್ಗಾಮಿ ನೌಕೆಯಲ್ಲಿ ಅವರ ಈ ಮೊದಲ ಸಂಚಾರವು, ಕಾರ್ಯಾಚರಣೆಯ ವಿಧಾನಗಳಲ್ಲಿ ಸಶಸ್ತ್ರ ಪಡೆಗಳೊಂದಿಗೆ ಪರಮೋಚ್ಚ ನಾಯಕರ ನಿರಂತರ ಪಾಲ್ಗೊಳ್ಳುವಿಕೆಯ ಪ್ರತಿಬಿಂಬವಾಗಿದೆ. 2024ರ ನವೆಂಬರ್‌ನಲ್ಲಿ, ರಾಷ್ಟ್ರಪತಿ ಅವರು ದೇಶೀಯ ವಿಮಾನವಾಹಕ ನೌಕೆ ಐ.ಎನ್.ಎಸ್. ವಿಕ್ರಾಂತ್ ನಲ್ಲಿ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ್ದರು.

ರಾಷ್ಟ್ರಪತಿ ಅವರು ನಂತರ, ಸಂದರ್ಶಕರ ಪುಸ್ತಕದಲ್ಲಿ ಕಿರು ಟಿಪ್ಪಣಿ ಮೂಲಕ ತಮ್ಮ ಭಾವನೆಗಳನ್ನು ಹೀಗೆ ವ್ಯಕ್ತಪಡಿಸಿದ್ದಾರೆ : "ಐ.ಎನ್.ಎಸ್. ವಾಘಶೀರ್‌ನಲ್ಲಿ ನಮ್ಮ ನಾವಿಕರು ಮತ್ತು ಅಧಿಕಾರಿಗಳೊಂದಿಗೆ ನೌಕಾಯಾನ ಮಾಡಿದುದು, ಸಮುದ್ರದಾಳದಲ್ಲಿ ಸಂಚರಿಸಿದುದು ಮತ್ತು ಸಮಯ ಕಳೆದಿದುದು ನಿಜಕ್ಕೂ ನನಗೆ ಅತ್ಯಂತ ವಿಶೇಷ ಅನುಭೂತಿಯಾಗಿತ್ತು. ಐ.ಎನ್.ಎಸ್. ವಾಘಶೀರ್ ನಡೆಸಿದ ಬಹು ಯಶಸ್ವಿ ಗುಂಡಿನ ದಾಳಿಗಳು ಮತ್ತು ಸವಾಲಿನ ಕಾರ್ಯಾಚರಣೆಗಳು ‘ಶೌರ್ಯ ಶ್ರೇಷ್ಠತೆಯ ವಿಜಯ' ಎಂಬ ಅದರ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಸಿಬ್ಬಂದಿಯ ಅಸಾಧಾರಣ ಸನ್ನದ್ಧತೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿವೆ. ವಾಘಶೀರ್ ಸಿಬ್ಬಂದಿಯ ಶಿಸ್ತು, ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ನೋಡಿದಾಗ ನಮ್ಮ ಜಲಾಂತರ್ಗಾಮಿ ನೌಕಾಪಡೆ ಮತ್ತು ಭಾರತೀಯ ನೌಕಾಪಡೆಯು ಯಾವುದೇ ಬೆದರಿಕೆ ವಿರುದ್ಧ ಎಲ್ಲಾ ಸಂದರ್ಭಗಳಲ್ಲಿಯೂ ಯುದ್ಧಕ್ಕೆ ಸಿದ್ಧವಾಗಿದೆ ಎಂದು ನನಗೆ ಭರವಸೆ ಮೂಡುತ್ತದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
*****
(ಪ್ರಕಟಣೆ ಐ.ಡಿ.: 2209240)
ವಿಸಿಟರ್ ಕೌಂಟರ್ : 65