ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ‘ಭಯೋತ್ಪಾದನಾ ನಿಗ್ರಹ ಸಮ್ಮೇಳನ-2025’  ಅನ್ನು ಉದ್ಘಾಟಿಸಿದರು


ಭಯೋತ್ಪಾದನೆಯ ವಿರುದ್ಧ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಶೂನ್ಯ ಸಹಿಷ್ಣುತೆ' ದೃಷ್ಟಿಕೋನದ ಅಡಿಯಲ್ಲಿ, ಈ ವಾರ್ಷಿಕ ಸಮ್ಮೇಳನವು ಉದಯೋನ್ಮುಖ ಬೆದರಿಕೆಗಳನ್ನು ಎದುರಿಸುವ ವೇದಿಕೆಯಾಗಿ ಮಾರ್ಪಟ್ಟಿದೆ



ನಮ್ಮ ಭಯೋತ್ಪಾದನಾ ನಿಗ್ರಹ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸಲು ದೇಶ ಮತ್ತು ವಿಶ್ವದಲ್ಲಿ ಸಂಭವಿಸಿದ ಪ್ರತಿಯೊಂದು ಭಯೋತ್ಪಾದಕ ಘಟನೆಯನ್ನು ಎಲ್ಲಾ ಸಂಸ್ಥೆಗಳು ವಿಶ್ಲೇಷಿಸಬೇಕು



ಭಯೋತ್ಪಾದಕ ಘಟನೆಗಳಲ್ಲಿ ತಂತ್ರಜ್ಞಾನದ ಬಳಕೆಯಿಂದಾಗಿ ಭಯೋತ್ಪಾದನೆಯ ಸ್ವರೂಪವೂ ಬದಲಾಗುತ್ತಿದೆ; ನಾವು ಅದಕ್ಕಿಂತ ಎರಡು ಹೆಜ್ಜೆ ಮುಂದಿರಬೇಕು



ಮುಂಬರುವ ಪೀಳಿಗೆಗಳಿಗಾಗಿ, ಪ್ರತಿಯೊಂದು ಸವಾಲನ್ನು ಎದುರಿಸಲು ಸಮರ್ಥವಾಗಿರುವ ಅಭೇದ್ಯ ಮತ್ತು ಬಲಿಷ್ಠ ‘ಭಯೋತ್ಪಾದನಾ ನಿಗ್ರಹ ಗ್ರಿಡ್’ ಅನ್ನು ನಾವು ನಿರ್ಮಿಸಬೇಕು



ಸಂಘಟಿತ ಅಪರಾಧದ ಮೇಲೆ 360-ಡಿಗ್ರಿ ದಾಳಿ ನಡೆಸಲು ನಾವು ಕ್ರಿಯಾ ಯೋಜನೆಯನ್ನು ತರುತ್ತಿದ್ದೇವೆ



ಕಾರ್ಯಾಚರಣೆಯ ಏಕರೂಪತೆಯ ಮೂಲಕ ಮಾತ್ರ ನಾವು ಬೆದರಿಕೆಗಳ ನಿಖರವಾದ ಮೌಲ್ಯಮಾಪನ, ಗುಪ್ತಚರ ಹಂಚಿಕೆಯ ಸರಿಯಾದ ಬಳಕೆ ಮತ್ತು ಸಂಘಟಿತ ಪ್ರತಿಕ್ರಿಯೆಯನ್ನು ಸಾಧಿಸಲು ಸಾಧ್ಯ



ಮೊದಲ ಬಾರಿಗೆ, ಭದ್ರತಾ ಪಡೆಗಳು 'ಆಪರೇಷನ್ ಸಿಂಧೂರ' ಮೂಲಕ ಭಯೋತ್ಪಾದಕ ಘಟನೆಯ ಸಂಚು ರೂಪಿಸಿದವರನ್ನು ಶಿಕ್ಷಿಸಿದವು ಮತ್ತು 'ಆಪರೇಷನ್ ಮಹಾದೇವ್' ಮೂಲಕ ಅದನ್ನು ಕಾರ್ಯಗತಗೊಳಿಸಿದವರನ್ನು ನಿರ್ಮೂಲನೆ ಮಾಡಿದವು



ದೇಶಾದ್ಯಂತ ಪೊಲೀಸರಿಗೆ ಸಾಮಾನ್ಯ ಎಟಿಎಸ್ ರಚನೆಯು ಅತ್ಯಂತ ಅವಶ್ಯಕವಾಗಿದೆ; ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು ಇದನ್ನು ಆದಷ್ಟು ಬೇಗ ಜಾರಿಗೆ ತರಬೇಕು



ಭಾರತ ಸರ್ಕಾರದ ಎಲ್ಲಾ ಸಂಸ್ಥೆಗಳು ಮತ್ತು ರಾಜ್ಯ ಪೊಲೀಸರು ಒಟ್ಟಾಗಿ ರಾಷ್ಟ್ರೀಯ ಭದ್ರತೆಗಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ‘ಟೀಮ್ ಇಂಡಿಯಾ’ ಆಗಿ ರೂಪುಗೊಳ್ಳಬೇಕು



ಕೇಂದ್ರ ಗೃಹ ಸಚಿವರು ಎನ್ ಐ ಎ ಸಿದ್ಧಪಡಿಸಿದ ನವೀಕರಿಸಿದ ಅಪರಾಧ ಕೈಪಿಡಿಯನ್ನು ಅನಾವರಣಗೊಳಿಸಿದರು ಮತ್ತು ಸಂಘಟಿತ ಅಪರಾಧ ಜಾಲದ ದತ್ತಸಂಚಯ ಹಾಗೂ ಶಸ್ತ್ರಾಸ್ತ್ರ ದತ್ತಸಂಚಯವನ್ನು ಬಿಡುಗಡೆ ಮಾಡಿದರು

प्रविष्टि तिथि: 26 DEC 2025 7:31PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ‘ಭಯೋತ್ಪಾದನಾ ನಿಗ್ರಹ ಸಮ್ಮೇಳನ-2025’ ಅನ್ನು ಉದ್ಘಾಟಿಸಿದರು. ಎರಡು ದಿನಗಳ ಈ ಸಮ್ಮೇಳನವನ್ನು ಭಾರತ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಆಯೋಜಿಸಿದೆ. ಗೃಹ ಸಚಿವರು ಎನ್ ಐ ಎ ಯ ನವೀಕರಿಸಿದ ಅಪರಾಧ ಕೈಪಿಡಿ, ಸಂಘಟಿತ ಅಪರಾಧ ಜಾಲದ ದತ್ತಸಂಚಯ ಮತ್ತು ಕಳೆದುಹೋದ/ಲೂಟಿ ಮಾಡಲಾದ ಮತ್ತು ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ದತ್ತಸಂಚಯವನ್ನು ಬಿಡುಗಡೆ ಮಾಡಿದರು. ಸಮ್ಮೇಳನದಲ್ಲಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ನಿತ್ಯಾನಂದ ರೈ ಮತ್ತು ಶ್ರೀ ಬಂಡಿ ಸಂಜಯ್ ಕುಮಾರ್, ಕೇಂದ್ರ ಗೃಹ ಕಾರ್ಯದರ್ಶಿ, ಆರ್&ಎಡಬ್ಲ್ಯೂ ಕಾರ್ಯದರ್ಶಿ, ಎನ್ ಐ ಎ ಮಹಾನಿರ್ದೇಶಕರು ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಪೊಲೀಸ್ ಅಧಿಕಾರಿಗಳು, ಭಯೋತ್ಪಾದನಾ ನಿಗ್ರಹಕ್ಕೆ ಸಂಬಂಧಿಸಿದ ಕೇಂದ್ರ ಸಂಸ್ಥೆಗಳು/ಇಲಾಖೆಗಳ ಅಧಿಕಾರಿಗಳು ಮತ್ತು ಕಾನೂನು, ವಿಧಿವಿಜ್ಞಾನ, ತಂತ್ರಜ್ಞಾನ ಮುಂತಾದ ಸಂಬಂಧಿತ ಕ್ಷೇತ್ರಗಳ ತಜ್ಞರು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.

ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಯೋತ್ಪಾದನೆಯ ವಿರುದ್ಧದ 'ಶೂನ್ಯ ಸಹಿಷ್ಣುತೆ'ಯ ದೃಷ್ಟಿಕೋನದ ಅಡಿಯಲ್ಲಿ, ಈ ವಾರ್ಷಿಕ ಸಮ್ಮೇಳನವು ಉದಯೋನ್ಮುಖ ಬೆದರಿಕೆಗಳನ್ನು ಎದುರಿಸುವ ವೇದಿಕೆಯಾಗಿದೆ ಎಂದು ಹೇಳಿದರು. ಕಳೆದ 3 ವರ್ಷಗಳಲ್ಲಿ, ಈ ಸಮ್ಮೇಳನವನ್ನು ವಾರ್ಷಿಕ ಸಂಪ್ರದಾಯವನ್ನಾಗಿ ಮಾಡುವ ದಿಸೆಯಲ್ಲಿ ನಾವು ಮುನ್ನಡೆದಿದ್ದೇವೆ ಎಂದರು. ಈ ಸಮ್ಮೇಳನವು ಕೇವಲ ಚರ್ಚೆಯ ವೇದಿಕೆಯಲ್ಲ, ಇಲ್ಲಿ ಕ್ರಿಯಾತ್ಮಕ ಅಂಶಗಳು ಹೊರಹೊಮ್ಮುತ್ತವೆ ಮತ್ತು ಎನ್ ಐ ಎ ಜೊತೆಗೆ ರಾಜ್ಯಗಳ ಎಲ್ಲಾ ಸಂಬಂಧಿತ ಏಜೆನ್ಸಿಗಳು ವರ್ಷವಿಡೀ ಅವುಗಳ ಅನುಷ್ಠಾನಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತವೆ. ಇದರ ಪರಿಣಾಮವಾಗಿ, ದೇಶಾದ್ಯಂತ ಬಲಿಷ್ಠ ಭಯೋತ್ಪಾದನಾ ನಿಗ್ರಹ ಗ್ರಿಡ್ ನಿರ್ಮಿಸುವಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸಮ್ಮೇಳನದ ಉದ್ದೇಶವು ಕಳೆದ ವರ್ಷದಲ್ಲಿ ದೇಶ ಮತ್ತು ವಿಶ್ವದಲ್ಲಿ ಸಂಭವಿಸಿದ ಎಲ್ಲಾ ಭಯೋತ್ಪಾದಕ ಘಟನೆಗಳನ್ನು ವಿಶ್ಲೇಷಿಸುವುದು ಮತ್ತು ಅದಕ್ಕೆ ಅನುಗುಣವಾಗಿ ನಮ್ಮ ಭಯೋತ್ಪಾದನಾ ನಿಗ್ರಹ ಸಾಮರ್ಥ್ಯಗಳನ್ನು ಹೆಚ್ಚಿಸುವುದಾಗಿದೆ ಎಂದು ಶ್ರೀ ಶಾ ಹೇಳಿದರು. ತಂತ್ರಜ್ಞಾನದ ಪ್ರಗತಿಯೊಂದಿಗೆ ಭಯೋತ್ಪಾದನೆಯ ಸ್ವರೂಪವೂ ಬದಲಾಗುತ್ತಿದೆ ಮತ್ತು ಇದನ್ನು ತಡೆಗಟ್ಟಲು ನಾವು ಸಿದ್ಧರಾಗಬೇಕು ಎಂದರು. ಭವಿಷ್ಯದ ಅದೃಶ್ಯ ಸವಾಲುಗಳನ್ನು ಅಂದಾಜಿಸುವುದು ಮತ್ತು ಅವುಗಳನ್ನು ತಡೆಗಟ್ಟುವುದು ಈ ಸಮ್ಮೇಳನದ ರಾಷ್ಟ್ರೀಯ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಶ್ರೀ ಅಮಿತ್ ಶಾ ಅವರು ಇಂದು ಇಲ್ಲಿ ಮೂರು ಹೊಸ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. ಎನ್ ಐ ಎ ಸಿದ್ಧಪಡಿಸಿದ ನವೀಕರಿಸಿದ ಅಪರಾಧ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ತನಿಖೆ ಮತ್ತು ಕಾನೂನು ಪ್ರಕ್ರಿಯೆಗಳ ಉದ್ದೇಶಕ್ಕಾಗಿ ಈ ಕೈಪಿಡಿಯನ್ನು ಅಧ್ಯಯನ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಅವರು ಎಲ್ಲಾ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರಿಗೆ ವಿನಂತಿಸಿದರು. ಇಂದು ಶಸ್ತ್ರಾಸ್ತ್ರ ಇ-ದತ್ತಸಂಚಯ ಮತ್ತು ಸಂಘಟಿತ ಅಪರಾಧ ಜಾಲಗಳ ದತ್ತಸಂಚಯವನ್ನು ಸಹ ಬಿಡುಗಡೆ ಮಾಡಲಾಗಿದೆ ಎಂದು ಅವರು ಎಂದರು.

ಸಂಘಟಿತ ಅಪರಾಧ ಜಾಲಗಳು ಆರಂಭದಲ್ಲಿ ಸುಲಿಗೆ ಮತ್ತು ಹಣ ವಸೂಲಿಗಾಗಿ ಕಾರ್ಯನಿರ್ವಹಿಸುತ್ತವೆ, ಆದರೆ ಅವುಗಳ ನಾಯಕರು ವಿದೇಶಕ್ಕೆ ಪರಾರಿಯಾಗಿ ಅಲ್ಲಿ ನೆಲೆಸಿದಾಗ, ಅವರು ಸ್ವಯಂಚಾಲಿತವಾಗಿ ಭಯೋತ್ಪಾದಕ ಸಂಘಟನೆಗಳ ಸಂಪರ್ಕಕ್ಕೆ ಬರುತ್ತಾರೆ ಮತ್ತು ನಂತರ ಆ ಹಣವನ್ನು ದೇಶದೊಳಗೆ ಭಯೋತ್ಪಾದನೆಯನ್ನು ಹರಡಲು ಬಳಸುತ್ತಾರೆ ಎಂದು ವಿವರಿಸಿದರು. ಪ್ರತಿಯೊಂದು ರಾಜ್ಯವು ಎನ್‌ ಐ ಎ ಮತ್ತು ಸಿಬಿಐ ಮಾರ್ಗದರ್ಶನದಲ್ಲಿ, ಐಬಿಯ ಸಹಕಾರದೊಂದಿಗೆ ಮತ್ತು ಈ ಡೇಟಾಬೇಸ್ ಅನ್ನು ಬಳಸಿಕೊಂಡು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅದನ್ನು ತೊಡೆದುಹಾಕಬೇಕು ಎಂದು ಅವರು ಹೇಳಿದರು.

ಬೈಸರನ್ ಕಣಿವೆಯಲ್ಲಿ ನಡೆದ ದಾಳಿಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ದಾಳಿಯ ಮೂಲಕ ಭಯೋತ್ಪಾದಕರು ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಕದಡಲು ಮತ್ತು ಕಾಶ್ಮೀರದಲ್ಲಿ ಆರಂಭವಾಗಿರುವ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮದ ಹೊಸ ಯುಗಕ್ಕೆ ಪೆಟ್ಟು ನೀಡಲು ಬಯಸಿದ್ದರು. ಅತ್ಯಂತ ನಿಖರವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ನಮ್ಮ ಪಡೆಗಳು ಮೂವರೂ ಭಯೋತ್ಪಾದಕರನ್ನು ಹತ್ಯೆಗೈದವು, ಆ ಮೂಲಕ ಪಾಕಿಸ್ತಾನಕ್ಕೆ ಕಠಿಣ ಸಂದೇಶವನ್ನು ರವಾನಿಸಿದವು ಎಂದರು. 'ಆಪರೇಷನ್ ಸಿಂಧೂರ್' ಮೂಲಕ ಸಂಚು ರೂಪಿಸಿದವರನ್ನು ಶಿಕ್ಷಿಸಿದ ಮತ್ತು 'ಆಪರೇಷನ್ ಮಹಾದೇವ್' ಮೂಲಕ ಅದನ್ನು ಕಾರ್ಯಗತಗೊಳಿಸಿದವರನ್ನು ನಿರ್ಮೂಲನೆ ಮಾಡಿದ ಮೊದಲ ಘಟನೆ ಇದಾಗಿದೆ ಎಂದು ಅವರು ಹೇಳಿದರು. ಭಾರತ ಸರ್ಕಾರ, ಭಾರತೀಯ ಭದ್ರತಾ ಪಡೆಗಳು ಮತ್ತು ಭಾರತದ ಜನರು ಎರಡೂ ಕಡೆಯಿಂದ ಪಾಕಿಸ್ತಾನದ ಭಯೋತ್ಪಾದಕರಿಗೆ ನಮ್ಮ ಭದ್ರತಾ ಪಡೆಗಳು ಮತ್ತು ಗುಪ್ತಚರ ಸಂಸ್ಥೆಗಳ ಮೂಲಕ ಬಲವಾದ ಮತ್ತು ಸೂಕ್ತ ಉತ್ತರ ನೀಡಿದ್ದಾರೆ ಎಂದು ಗೃಹ ಸಚಿವರು ಹೇಳಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ನಮ್ಮ ತಂಡವು ಸಂಪೂರ್ಣ ಮತ್ತು ಯಶಸ್ವಿ ತನಿಖೆಯನ್ನು ನಡೆಸಿದೆ, ಮುಂದಿನ ದಿನಗಳಲ್ಲಿ ಪ್ರಪಂಚದಾದ್ಯಂತದ ಸಂಸ್ಥೆಗಳು ಇದನ್ನು ಅಧ್ಯಯನ ಮಾಡುತ್ತವೆ ಎಂದು ಅವರು ಹೇಳಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯ ಫಲಿತಾಂಶಗಳು ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಶಿಕ್ಷಿಸುತ್ತವೆ ಎಂದು ಅವರು ಎಂದರು.

ದೆಹಲಿಯಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸಂಪೂರ್ಣ ತನಿಖೆ ನಡೆಸಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. ನಮ್ಮ ಎಲ್ಲಾ ಸಂಸ್ಥೆಗಳು ಇಡೀ ಜಾಲವನ್ನು ತನಿಖೆ ಮಾಡುವಲ್ಲಿ ಅತ್ಯುತ್ತಮ ಕೆಲಸ ಮಾಡಿವೆ. ಪಹಲ್ಗಾಮ್ ಮತ್ತು ದೆಹಲಿ ಸ್ಫೋಟ ಪ್ರಕರಣಗಳ ತನಿಖೆಗಳು ಸಾಮಾನ್ಯ ಪೊಲೀಸ್ ಗಿರಿಯಲ್ಲ, ಬದಲಾಗಿ ಕಠಿಣ ತನಿಖೆಯ ಅತ್ಯುತ್ತಮ ಉದಾಹರಣೆಗಳಾಗಿವೆ ಎಂದು ಶ್ರೀ ಶಾ ಹೇಳಿದರು. ಜಾಗರೂಕ ಅಧಿಕಾರಿಯೊಬ್ಬರು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರುವುದರಿಂದ ದೇಶವನ್ನು ಇಂತಹ ದೊಡ್ಡ ಬಿಕ್ಕಟ್ಟಿನಿಂದ ಹೇಗೆ ರಕ್ಷಿಸಬಹುದು ಎಂಬುದಕ್ಕೆ ಇದು ಒಂದು ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು.

ಡಿಜಿಪಿ ಸಮ್ಮೇಳನ, ಭದ್ರತಾ ಕಾರ್ಯತಂತ್ರ ಸಮ್ಮೇಳನ, ಎನ್-ಸಿ ಒ ಆರ್‌ ಡಿ ಸಭೆಗಳು ಮತ್ತು ಭಯೋತ್ಪಾದನಾ ನಿಗ್ರಹ ಸಮ್ಮೇಳನಗಳ ನಡುವೆ ನಾವು ಸಮನ್ವಯ, ಸಹಕಾರ ಮತ್ತು ಸಂವಹನದ ಹೊಸ ಮಾನದಂಡವನ್ನು ಸ್ಥಾಪಿಸಿದ್ದೇವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ನಾಲ್ಕು ಸ್ತಂಭಗಳನ್ನು ನಾವು ಪ್ರತ್ಯೇಕವಾಗಿ ನೋಡಲಾಗುವುದಿಲ್ಲ; ಅವುಗಳ ಮೂಲಕ ಸಾಮಾನ್ಯ ಸೂತ್ರದಂತೆ ಭಯೋತ್ಪಾದನಾ ನಿಗ್ರಹ ಸಮ್ಮೇಳನ ಬೆಸೆದುಕೊಂಡಿದೆ ಎಂದು ಅವರು ಹೇಳಿದರು.

ದೇಶಾದ್ಯಂತ ಏಕರೂಪದ ಎಟಿಎಸ್ ರಚನೆಯನ್ನು ರೂಪಿಸಲು ಎನ್ ಐ ಎ ಅತ್ಯಂತ ಶ್ರಮವಹಿಸಿದೆ ಮತ್ತು ಅದನ್ನು ಈಗಾಗಲೇ ರಾಜ್ಯಗಳ ಪೊಲೀಸ್ ಪಡೆಗಳಿಗೆ ಕಳುಹಿಸಿಕೊಟ್ಟಿದೆ ಎಂದು ಶ್ರೀ ಶಾ ತಿಳಿಸಿದರು. ಇಡೀ ದೇಶಾದ್ಯಂತ ಸಾಮಾನ್ಯ ಎಟಿಎಸ್ ರಚನೆಯನ್ನು ಸ್ಥಾಪಿಸಿದಾಗ, ಅದು ನಮಗೆ ಪ್ರತಿ ಹಂತದಲ್ಲೂ ಏಕರೂಪದ ಸಿದ್ಧತೆಯನ್ನು ಮಾಡಿಕೊಳ್ಳಲು ಅವಕಾಶ ನೀಡುತ್ತದೆ ಎಂದು ಅವರು ವಿವರಿಸಿದರು. ದೇಶದ ಎಲ್ಲಾ ಪೊಲೀಸ್ ಪಡೆಗಳಿಗೆ ಸಾಮಾನ್ಯ ಎಟಿಎಸ್ ರಚನೆಯು ಅತ್ಯಂತ ಪ್ರಮುಖವಾಗಿದೆ ಮತ್ತು ಎಲ್ಲಾ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು ಇದನ್ನು ಆದಷ್ಟು ಬೇಗ ಜಾರಿಗೆ ತರಬೇಕು ಎಂದು ಅವರು ಹೇಳಿದರು. ಎಲ್ಲಾ ರಾಜ್ಯಗಳ ಎಟಿಎಸ್ ಘಟಕಗಳು ನಿದಾನ್ (NIDAAN) ಮತ್ತು ನ್ಯಾಟ್‌ಗ್ರಿಡ್ (NATGRID) ಬಳಸುವ ಅಭ್ಯಾಸವನ್ನು ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು. ತನಿಖೆಗಳಲ್ಲಿ ನಿಧಾನ್ ಮತ್ತು ನ್ಯಾಟ್‌ಗ್ರಿಡ್ ಬಳಸುವುದರಿಂದ ಪ್ರಕರಣಗಳನ್ನು ಕೇವಲ ಪ್ರತ್ಯೇಕವಾಗಿ ತನಿಖೆ ಮಾಡುವುದಷ್ಟೇ ಅಲ್ಲದೆ, ಆ ಪ್ರಕರಣಗಳ ನಡುವೆ ಇರುವ ಅದೃಶ್ಯ ಕೊಂಡಿಗಳನ್ನು ಸಹ ಬೆಳಕಿಗೆ ತರಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಕೆಲವು ನಿರ್ದಿಷ್ಟ ರೀತಿಯ ತನಿಖೆಗಳಲ್ಲಿ ನ್ಯಾಟ್‌ಗ್ರಿಡ್ ಬಳಕೆಯನ್ನು ಮತ್ತು ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ನಿದಾನ್ ಬಳಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಅವರು ತಿಳಿಸಿದರು.

ಮಲ್ಟಿ ಏಜೆನ್ಸಿ ಸೆಂಟರ್ ಮತ್ತು ನ್ಯಾಷನಲ್ ಮೆಮೊರಿ ಬ್ಯಾಂಕ್‌ ನಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಸಾಮಾನ್ಯ ಎಟಿಎಸ್ ರಚನೆ ಮತ್ತು ಕಾರ್ಯಾಚರಣೆಯ ಏಕರೂಪತೆಯು ಭಯೋತ್ಪಾದಕರನ್ನು ಕಾನೂನುಬದ್ಧವಾಗಿ ಶಿಕ್ಷಿಸುವಲ್ಲಿ ನಮಗೆ ಹೆಚ್ಚಿನ ಅನುಕೂಲವನ್ನು ನೀಡುತ್ತದೆ ಎಂದು ಅವರು ತಿಳಿಸಿದರು. ಕಾರ್ಯಾಚರಣೆಯ ಏಕರೂಪತೆಯನ್ನು ಸಾಧಿಸದ ಹೊರತು, ನಾವು ಬೆದರಿಕೆಗಳ ನಿಖರವಾದ ಮೌಲ್ಯಮಾಪನ ಮಾಡಲು, ಗುಪ್ತಚರ ಮಾಹಿತಿಯ ಹಂಚಿಕೆಯನ್ನು ಸರಿಯಾಗಿ ಬಳಸಿಕೊಳ್ಳಲು ಅಥವಾ ಸಂಘಟಿತ ಪ್ರತಿಕ್ರಿಯೆಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ತನಿಖೆಯಿಂದ ಹಿಡಿದು ಕಾನೂನು ಪ್ರಕ್ರಿಯೆ ಮತ್ತು ಪ್ರತಿ-ಕಾರ್ಯಾಚರಣೆಯವರೆಗೆ ನಾವು ಏಕರೂಪತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶ್ರೀ ಶಾ ಹೇಳಿದರು.

ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಹಿಂದೂ ಮಹಾಸಾಗರದ ಕಾರಣದಿಂದಾಗಿ ನಮ್ಮ ಭೌಗೋಳಿಕ-ರಾಜಕೀಯ ಸ್ಥಾನವು ಅತ್ಯಂತ ಪ್ರಮುಖವಾಗಿದೆ. ನಮ್ಮ ಆರ್ಥಿಕತೆಯು ಇನ್ನಷ್ಟು ಪ್ರಗತಿ ಹೊಂದಿದಂತೆ, ಅದಕ್ಕೆ ತಕ್ಕಂತೆ ನಮ್ಮ ಸಮಸ್ಯೆಗಳೂ ಹೆಚ್ಚಾಗುತ್ತವೆ ಎಂದು ಅವರು ತಿಳಿಸಿದರು. ದೇಶದ ಆರ್ಥಿಕತೆಯು ಮುಂದುವರಿದಂತೆ, ನಾವು ನಮ್ಮ ಜಾಗರೂಕತೆಯನ್ನು ಅದಕ್ಕೆ ಅನುಗುಣವಾಗಿ ಹೆಚ್ಚಿಸಬೇಕಾಗುತ್ತದೆ. ದೇಶದ ಆಂತರಿಕ ಭದ್ರತೆಯನ್ನು ಖಚಿತಪಡಿಸುವ ಸಿದ್ಧತೆಗಳು ನಮ್ಮ ಗಡಿಭಾಗದಲ್ಲಿ ಆರಂಭವಾಗುವುದಿಲ್ಲ; ಬದಲಿಗೆ, ಗಡಿಗಳನ್ನು ಭದ್ರಪಡಿಸುವ ಸಿದ್ಧತೆಯು ಗಡಿಗಿಂತ ಎಷ್ಟೋ ಮೈಲುಗಳ ದೂರದಿಂದಲೇ ಆರಂಭವಾಗಬೇಕು ಎಂದು ಶ್ರೀ ಶಾ ಹೇಳಿದರು. ಸೈಬರ್ ಮತ್ತು ಮಾಹಿತಿ ಯುದ್ಧ, ಆರ್ಥಿಕ ಜಾಲಗಳ ದುರುಪಯೋಗ ಮತ್ತು ಭಯೋತ್ಪಾದನೆಯ 'ಹೈಬ್ರಿಡ್' ಸ್ವರೂಪಕ್ಕಾಗಿ, ನಾವು ರಾಷ್ಟ್ರೀಯ ಗ್ರಿಡ್ ರೂಪದಲ್ಲಿ ಒಂದು ದೃಢವಾದ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬೇಕು. ಈ ವ್ಯವಸ್ಥೆಯು ಸದಾ ಜಾಗರೂಕವಾಗಿದ್ದು, ಕ್ಷಿಪ್ರ ಮತ್ತು ಫಲಿತಾಂಶ ಆಧಾರಿತ ಕ್ರಮವನ್ನು ತೆಗೆದುಕೊಳ್ಳಲು ಸಮರ್ಥವಾಗಿರಬೇಕು; ಇಂತಹ ಸಮ್ಮೇಳನಗಳ ಮೂಲಕ ಮಾತ್ರ ಇದನ್ನು ಸಾಧಿಸಲು ಸಾಧ್ಯ ಎಂದು ಶ್ರೀ ಅಮಿತ್ ಶಾ ಹೇಳಿದರು. ಬಹು-ಪದರದ ಭದ್ರತಾ ಮಾದರಿಯನ್ನು ನಿರ್ಮಿಸುವುದು ಮತ್ತು ಭಯೋತ್ಪಾದನೆಯ ವಿರುದ್ಧ ನಿರ್ದಾಕ್ಷಿಣ್ಯ ಧೋರಣೆಯೊಂದಿಗೆ ಕೆಲಸ ಮಾಡುವುದು - ಇವುಗಳು ಮಾತ್ರ ಮುಂಬರುವ ದಿನಗಳಲ್ಲಿ ನಮ್ಮನ್ನು ಸುರಕ್ಷಿತವಾಗಿಡಬಲ್ಲವು ಎಂದು ಅವರು ಹೇಳಿದರು.

ಪ್ರತಿಯೊಬ್ಬರೂ 'ತಿಳಿಯುವ ಅಗತ್ಯ' (Need to Know) ಎನ್ನುವ ತತ್ವದ ಬದಲಿಗೆ 'ಹಂಚಿಕೊಳ್ಳುವ ಜವಾಬ್ದಾರಿ' (Duty to Share) ಎಂಬ ತತ್ವದೊಂದಿಗೆ ಮುನ್ನಡೆಯಬೇಕು ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದರು. ಕೇಂದ್ರ ಸಂಸ್ಥೆಗಳು ಮತ್ತು ರಾಜ್ಯ ಪೊಲೀಸರು ತಮ್ಮ ತಮ್ಮ ಮಟ್ಟದಲ್ಲಿ ತಂತ್ರಜ್ಞಾನದ ಉತ್ತಮ ಬಳಕೆಯನ್ನು ಮಾಡಿಕೊಂಡಿದ್ದಾರೆ, ಆದರೆ ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಮತ್ತು ಸಂಗ್ರಹಿಸಿದ ದತ್ತಾಂಶಗಳು ಗುಂಡುಗಳಿಲ್ಲದ ಬಂದೂಕಿನಂತೆ ಎಂದು ಅವರು ತಿಳಿಸಿದರು. ಎಲ್ಲಾ ದತ್ತಾಂಶಗಳು ಪರಸ್ಪರ ಸಂವಹನ ನಡೆಸುವಂತಿದ್ದರೆ ಮತ್ತು ಅವುಗಳನ್ನು ಒಂದೇ ರೀತಿಯ ತಂತ್ರಜ್ಞಾನವನ್ನು ಬಳಸಿ ರೂಪಿಸಿದ್ದರೆ ಅದು ಹೆಚ್ಚು ಉತ್ತಮ. ಈ ಉದ್ದೇಶಕ್ಕಾಗಿ, ಗೃಹ ಸಚಿವಾಲಯ, ಎನ್ ಐ ಎ ಮತ್ತು ಐಬಿ ಸಂಸ್ಥೆಗಳು ತಂತ್ರಜ್ಞಾನ ಮತ್ತು ದತ್ತಾಂಶಕ್ಕಾಗಿ ತಡೆರಹಿತ ರಾಷ್ಟ್ರೀಯ ಮಟ್ಟದ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಚರ್ಚೆಗಳನ್ನು ನಡೆಸಬೇಕು ಮತ್ತು ರಾಜ್ಯಗಳು ಅದನ್ನು ಬಲಪಡಿಸಲು ಬೆಂಬಲ ನೀಡಬೇಕು ಎಂದು ಶ್ರೀ ಶಾ ಹೇಳಿದರು.

ಭಯೋತ್ಪಾದಕರು ಮತ್ತು ಅಪರಾಧಿಗಳ ದತ್ತಸಂಚಯವನ್ನು 'ಶೂನ್ಯ-ಭಯೋತ್ಪಾದನೆ' ನೀತಿಯ ಪ್ರಮುಖ ಆಸ್ತಿಯನ್ನಾಗಿ ಮಾಡಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರು ಈ ದತ್ತಸಂಚಯದ ಚೌಕಟ್ಟನ್ನು ಸಂಪೂರ್ಣ ಅರ್ಥದಲ್ಲಿ ಮತ್ತು ದೃಢವಾಗಿ ಜಾರಿಗೆ ತರುವುದಾಗಿ ತಾವು ನಿರೀಕ್ಷಿಸುವುದಾಗಿ ಅವರು ಹೇಳಿದರು. ಮುಂಬರುವ ದಿನಗಳಲ್ಲಿ, ಸಂಘಟಿತ ಅಪರಾಧದ ಮೇಲೆ 360-ಡಿಗ್ರಿ ದಾಳಿ ನಡೆಸುವ ಯೋಜನೆಯನ್ನು ನಾವು ತರುತ್ತಿದ್ದೇವೆ ಎಂದು ಶ್ರೀ ಶಾ ತಿಳಿಸಿದರು.

ಅದಕ್ಕೆ ಸಂಬಂಧಿಸಿದ ವಿವಾದಗಳ ಬಗ್ಗೆ ಭಯಪಡದೆ, ನಾವು 'ಗೈರುಹಾಜರಿಯಲ್ಲಿ ವಿಚಾರಣೆ' ಪ್ರಕ್ರಿಯೆಯೊಂದಿಗೆ ಮುನ್ನಡೆಯಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇದು ವಿದೇಶಕ್ಕೆ ಪರಾರಿಯಾದ ಅಪರಾಧಿಗಳು ದೇಶಕ್ಕೆ ಮರಳುವಂತೆ ಒತ್ತಾಯಿಸುತ್ತದೆ. ಭಾರತ ಸರ್ಕಾರದ ಎಲ್ಲಾ ಸಂಸ್ಥೆಗಳು ಮತ್ತು ರಾಜ್ಯ ಪೊಲೀಸರು ಒಟ್ಟಾಗಿ ರಾಷ್ಟ್ರೀಯ ಭದ್ರತೆಗಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ‘ಟೀಮ್ ಇಂಡಿಯಾ’ ಆಗಿ ರೂಪುಗೊಳ್ಳಬೇಕು ಎಂದು ಶ್ರೀ ಶಾ ಹೇಳಿದರು. ಭಾರತವು ಪ್ರಗತಿಯತ್ತ ಸಾಗುತ್ತಿರುವಂತೆ ನಮ್ಮ ಸವಾಲುಗಳೂ ಬೆಳೆಯುತ್ತಲೇ ಇರುತ್ತವೆ ಎಂದು ಅವರು ಪುನರುಚ್ಚರಿಸಿದರು. ಇಂತಹ ಸಂದರ್ಭದಲ್ಲಿ, ದೇಶಕ್ಕಾಗಿ ಮತ್ತು ಮುಂದಿನ ಪೀಳಿಗೆಯ ಅಧಿಕಾರಿಗಳಿಗಾಗಿ ಬಲವಾದ ಭಯೋತ್ಪಾದನಾ ನಿಗಗ್ರಹ ಗ್ರಿಡ್ ಅನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಇದರಿಂದ ಅವರು ಮುಂದಿನ ಸವಾಲುಗಳನ್ನು ದೃಢವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

*****


(रिलीज़ आईडी: 2209023) आगंतुक पटल : 5
इस विज्ञप्ति को इन भाषाओं में पढ़ें: English , Urdu , हिन्दी , Gujarati