ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ರೋಜ್‌ಗಾರ್ ಸಹಾಯಕರನ್ನು ಭೇಟಿ ಮಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್


ಆಡಳಿತಾತ್ಮಕ ವೆಚ್ಚವನ್ನು ಶೇ.6 ರಿಂದ ಶೇ.9ಕ್ಕೆ ಹೆಚ್ಚಿಸಿದ್ದಕ್ಕಾಗಿ ಕೇಂದ್ರಕ್ಕೆ ಧನ್ಯವಾದ ಅರ್ಪಿಸಿದ ರೋಜ್ ಗಾರ್ ಸಹಾಯಕರು

“ಉದ್ಯೋಗ ಸಹಾಯಕರ ಆಡಳಿತಾತ್ಮಕ ವೆಚ್ಚವನ್ನು ಶೇ.6 ರಿಂದ ಶೇ.9 ಕ್ಕೆ ಹೆಚ್ಚಳ; ಸಂಬಳ ಪಾವತಿಗೆ ಸದ್ಯ ಯಾವುದೇ ತೊಂದರೆ ಇಲ್ಲ”: ಶ್ರೀ ಶಿವರಾಜ್ ಸಿಂಗ್ ಚೌಹಾಣ್

”ಸಿಬ್ಬಂದಿಗೆ ಸಂಬಳ ಪಾವತಿಯಲ್ಲಿ ವಿಳಂಬವು ಒಂದು ಪ್ರಮುಖ ಕಳವಳವಾಗಿತ್ತು; ಈಗ ಮೊದಲು ಸಂಬಳವನ್ನು ಪಾವತಿಸಲಾಗುವುದು, ನಂತರ ಇತರ ಅಗತ್ಯ ವೆಚ್ಚಗಳಿಗೆ ಅವಕಾಶ ನೀಡಲಾಗುವುದು’’: ಶ್ರೀ ಶಿವರಾಜ್ ಸಿಂಗ್ ಚೌಹಾಣ್

“100ದಿನಗಳ ಬದಲಿಗೆ 125 ದಿನಗಳ ಉದ್ಯೋಗದ ಕಾನೂನು ಖಾತರಿ; ಗ್ರಾಮವೇ ತನ್ನ ಅಭಿವೃದ್ಧಿಯನ್ನು ನಿರ್ಧರಿಸುತ್ತದೆ’’: ಶ್ರೀ ಶಿವರಾಜ್ ಸಿಂಗ್ ಚೌಹಾಣ್

“ವಿಬಿ-ಜಿ ರಾಮ್ ಜಿ ಯೋಜನೆಯನ್ನು ಹೆಚ್ಚು ಪ್ರಾಯೋಗಿಕ ಮತ್ತು ಪರಿಣಾಮಕಾರಿಯಾಗಿ ರೂಪಿಸಲಾಗಿದೆ; ಅಭಿವೃದ್ಧಿ ಕಾರ್ಯಗಳು ತಳಮಟ್ಟದಲ್ಲಿ ಗೋಚರಿಸಬೇಕೆಂಬುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ’’: ಶ್ರೀ ಶಿವರಾಜ್ ಸಿಂಗ್ ಚೌಹಾಣ್

प्रविष्टि तिथि: 22 DEC 2025 6:42PM by PIB Bengaluru

ವಿವಿಧ ರಾಜ್ಯಗಳ ರೋಜ್‌ಗಾರ್ ಸಹಾಯಕರು ಸೋಮವಾರ ಭೋಪಾಲ್‌ನಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದರು ಮತ್ತು ಆಡಳಿತಾತ್ಮಕ ವೆಚ್ಚವನ್ನು ಶೇ.6 ರಿಂದ ಶೇ.9ಕ್ಕೆ ಹೆಚ್ಚಳ ಮಾಡಿರುವುದಕ್ಕಾಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಉದ್ಯೋಗ ಸಹಾಯಕರು, ಪಂಚಾಯತ್ ಕಾರ್ಯದರ್ಶಿಗಳು ಮತ್ತು ತಾಂತ್ರಿಕ ಸಿಬ್ಬಂದಿಗೆ ಸಕಾಲಿಕವಾಗಿ ಸಂಬಳ ಪಾವತಿಸುವಲ್ಲಿನ ವಿಳಂಬವು ಒಂದು ಪ್ರಮುಖ ಕಳವಳವಾಗಿತ್ತು ಮತ್ತು ಅದನ್ನು ಪರಿಹರಿಸಲು ಆಡಳಿತಾತ್ಮಕ ವೆಚ್ಚವನ್ನು ಹೆಚ್ಚಿಸುವ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು

https://static.pib.gov.in/WriteReadData/userfiles/image/image001Y9LI.jpg

ಈ ಹಿಂದೆ ಆಡಳಿತಾತ್ಮಕ ವೆಚ್ಚವು ಶೇ.6 ರಷ್ಟಿತ್ತು, ಅದನ್ನು ಇದೀಗ ಶೇ.9ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಅದನ್ನು ಒಂದೂವರೆ ಪಟ್ಟು ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಇದರ ನೇರ ಪ್ರಯೋಜನವೆಂದರೆ, ಒಟ್ಟು ಉದ್ದೇಶಿತ ಬಜೆಟ್ 1,51,282 ಕೋಟಿ ರೂಪಾಯಿಯಲ್ಲಿ 13,000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ನೌಕರರ ವೇತನ ಮತ್ತು ಆಡಳಿತಾತ್ಮಕ ಅಗತ್ಯಗಳಿಗಾಗಿ ಮೀಸಲಿಡಲಾಗುವುದು. ಈ ಮೊತ್ತವು ಸಿಬ್ಬಂದಿಯ ವೇತನ ಪಾವತಿಗಳನ್ನು ಪೂರೈಸಲು ಸಾಕಾಗುತ್ತದೆ ಮತ್ತು ಆಡಳಿತಾತ್ಮಕ ವೆಚ್ಚದಲ್ಲಿ ಯಾವುದೇ ರೀತಿಯ ವ್ಯರ್ಥವಾಗದಂತೆ ನೋಡಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು. ಜೀಪುಗಳು, ವಾಹನಗಳು ಅಥವಾ ಇತರ ಅನಗತ್ಯ ವೆಚ್ಚಗಳ ಮೇಲಿನ ವೆಚ್ಚವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಮೇಲ್ವಿಚಾರಣೆ ಮಾಡಲಾಗುವುದು ಎಂದು ಶ್ರೀ ಶಿವರಾಜ್ ಸಿಂಗ್ ಹೇಳಿದರು. ರೋಜ್‌ಗಾರ್ ಸಹಾಯಕರು ವಿಳಂಬ ಮತ್ತು ತಡೆಹಿಡಿಯಲಾದ ಸಂಬಳದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಇನ್ನು ಮುಂದೆ ಸಂಬಳವನ್ನು ಮೊದಲು ಪಾವತಿಸಬೇಕು ಮತ್ತು ನಂತರ ಇತರ ಅಗತ್ಯ ವೆಚ್ಚಗಳನ್ನು ಪಾವತಿಸಬೇಕು ಎಂದು ನಿಯಮಗಳಲ್ಲಿ ನಿಬಂಧನೆಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಅವರು ಹೇಳಿದರು. ಅಲ್ಲದೆ, ಆ ನಿಟ್ಟಿನಲ್ಲಿ ರಾಜ್ಯಗಳೊಂದಿಗೆ ಸಮನ್ವಯದಿಂದ ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದು ಎಂದರು.

https://static.pib.gov.in/WriteReadData/userfiles/image/image002RJCO.jpg

ನರೇಗಾ ಅಡಿಗಿಂತ ಭಿನ್ನವಾಗಿ ಇದೀಗ 100 ದಿನಗಳ ಬದಲಿಗೆ 125 ದಿನಗಳ ಉದ್ಯೋಗದ ಕಾನೂನು ಖಾತರಿ ಇದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಇದೇ ವೇಳೆ  ಕೃಷಿ ಗರಿಷ್ಠ ಋತುವನ್ನು ಗಮನದಲ್ಲಿಟ್ಟುಕೊಂಡು ರೈತರು ಕಾರ್ಮಿಕರ ಕೊರತೆಯನ್ನು ಎದುರಿಸಬೇಕಾಗಿಲ್ಲ ಎಂದು ಬಿತ್ತನೆ ಮತ್ತು ಕೊಯ್ಲು ಋತುಗಳಲ್ಲಿ 60 ದಿನಗಳವರೆಗೆ ಕೃಷಿ ಕೆಲಸದಲ್ಲಿ ಕಾರ್ಮಿಕರನ್ನು ನಿಯೋಜಿಸಲು ರಾಜ್ಯ ಸರ್ಕಾರಗಳಿಗೆ ಅಧಿಸೂಚನೆಗಳನ್ನು ಹೊರಡಿಸುವ ಅಧಿಕಾರ ನೀಡಲಾಗಿದೆ. ಹಳೆಯ ನ್ಯೂನತೆಗಳನ್ನು ತೆಗೆದುಹಾಕುವ ಮೂಲಕ ವಿಬಿ-ಜಿ ರಾಮ್ ಜಿ ಯೋಜನೆಯನ್ನು ಹೆಚ್ಚು ಪ್ರಾಯೋಗಿಕ ಮತ್ತು ಪರಿಣಾಮಕಾರಿಯಾಗಿ ಮಾಡಲು ಪ್ರಯತ್ನಿಸಲಾಗಿದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಆಡಳಿತಾತ್ಮಕ ವೆಚ್ಚವನ್ನು ಹೆಚ್ಚಿಸುವ ಮೂಲಕ ತಳಮಟ್ಟದಲ್ಲಿ ಕೆಲಸ ಮಾಡುವ ಸಹೋದ್ಯೋಗಿಗಳ ತೊಂದರೆಗಳನ್ನು ತಗ್ಗಿಸಲು ಸಮಗ್ರವಾದ ಹೆಜ್ಜೆಯನ್ನಿಡಲಾಗಿದೆ ಎಂದರು. ಈ ಸಂದೇಶವನ್ನು ಉದ್ಯೋಗ ಸಹಾಯಕರು ತಳಮಟ್ಟದ ಜನರಿಗೆ ಸರಿಯಾಗಿ ತಿಳಿಸಬೇಕು ಎಂದು ಶ್ರೀ ಶಿವರಾಜ್ ಸಿಂಗ್ ತಿಳಿಸಿದರು ಮತ್ತು ರಾಜ್ಯ ಸರ್ಕಾರಗಳೊಂದಿಗೆ ಅವರ ಸಲಹೆಗಳನ್ನು ಚರ್ಚಿಸಿದ ನಂತರ, ಪಂಚಾಯತ್ ಮಟ್ಟದಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೆಲಸ ಕಾರ್ಯಗಳಲ್ಲಿ ಮತ್ತಷ್ಟು ಸುಧಾರಣೆಗಳನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.

'ವಿಕಸಿತ ಭಾರತ್-ಜಿ ರಾಮ್ ಜಿ' ಒಂದು ಐತಿಹಾಸಿಕ ಯೋಜನೆಯಾಗಿದ್ದು, ಇದು ಈಗ ಮಸೂದೆಯಾಗಿದ್ದನ್ನು ಮೀರಿ ರಾಷ್ಟ್ರಪತಿಗಳ ಅನುಮೋದನೆಯ ನಂತರ ಶಾಸನವಾಗಿ ಮಾರ್ಪಟ್ಟಿದೆ ಎಂದು ಸಚಿವರು ಹೇಳಿದರು. ಈ ಯೋಜನೆಯ ಬಗ್ಗೆ ಕೆಲವರು ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ಸತ್ಯವನ್ನು ಅರ್ಥಮಾಡಿಕೊಳ್ಳುವುದು ಮತ್ತು ಸರಿಯಾದ ಮಾಹಿತಿ ಪ್ರತಿ ಹಳ್ಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.

ನರೇಗಾ ಅಡಿಯಲ್ಲಿ ಈ ಹಿಂದೆ 100 ದಿನಗಳ ಉದ್ಯೋಗದ ಖಾತರಿ ಇತ್ತು, ಅದನ್ನು ವಿಕಸಿತ ಭಾರತ ರೋಜ್‌ಗಾರ್ ಯೋಜನೆಯಡಿಯಲ್ಲಿ 125 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಇದು ಕೇವಲ ದಿನಗಳ ಹೆಚ್ಚಳವಲ್ಲ, ಆದರೆ ಉದ್ಯೋಗದ ಖಾತರಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಹೇಳಿದರು. ಯಾವುದೇ ಕಾರಣಕ್ಕಾಗಿ ಉದ್ಯೋಗ ಒದಗಿಸದಿದ್ದರೆ, ನಿರುದ್ಯೋಗ ಭತ್ಯೆಯ ನೀಡುವುದನ್ನು ಮೊದಲಿಗಿಂತ ಹೆಚ್ಚು ಬಲಪಡಿಸಲಾಗಿದೆ. ವೇತನ ಪಾವತಿಯ ಬಗ್ಗೆಯೂ ಕಠಿಣ ನಿಬಂಧನೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು. 15 ದಿನಗಳಲ್ಲಿ ವೇತನ ಪಾವತಿಸದಿದ್ದರೆ ಮತ್ತು ಮೊತ್ತ ಬಾಕಿ ಉಳಿದಿದ್ದರೆ, ಕೆಲಸಗಾರನಿಗೆ ಹೆಚ್ಚುವರಿ ಪರಿಹಾರವನ್ನು ನೀಡಲಾಗುವುದು. ತಿಂಗಳುಗಳ ಕಾಲ ವೇತನ ಸ್ಥಗಿತಗೊಳ್ಳುವುದು ಇನ್ನು ಮುಂದೆ ಸ್ವೀಕಾರಾರ್ಹವಲ್ಲ. ಸಕಾಲಿಕ ವೇತನ ಪಾವತಿ ಖಾತ್ರಿಪಡಿಸಲಾಗಿದೆ. ಸದ್ಯ ಹಾಲಿ ಇರುವ ವೇತನ ದರಗಳು ಮುಂದುವರಿಯಲಿದ್ದು, ಪ್ರತಿ ವರ್ಷ ವೇತನ ಹೆಚ್ಚಳವಾಗಲಿದೆ.

https://static.pib.gov.in/WriteReadData/userfiles/image/image003P76U.jpg

ಈ ಯೋಜನೆಯಡಿಯಲ್ಲಿ ನಾಲ್ಕು ಬಗೆಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು. ಮೊದಲ ವರ್ಗದಲ್ಲಿ ಕೊಳಗಳು, ಚೆಕ್ ಡ್ಯಾಮ್‌ಗಳು ಮತ್ತು ಇತರ ನಿರ್ಮಾಣಗಳಂತಹ ನೀರಿನ ಸಂರಕ್ಷಣೆ ಮತ್ತು ನೀರಿನ ಉಳಿತಾಯಕ್ಕೆ ಸಂಬಂಧಿಸಿದ ಕಾಮಗಾರಿಗಳು ಸೇರಿವೆ. ಎರಡನೇ ವರ್ಗದಲ್ಲಿ ಶಾಲೆಗಳು, ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು,  ರಸ್ತೆಗಳು, ಚರಂಡಿಗಳು ಮತ್ತು ಇತರ ಸೌಲಭ್ಯಗಳಂತಹ ಮೂಲಭೂತ ಗ್ರಾಮದ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಕೆಲಸಗಳು ಸೇರಿವೆ. ಜೀವನೋಪಾಯ ಮಿಷನ್‌ಗೆ ಸಂಬಂಧಿಸಿದ ಮಹಿಳೆಯರು ಮತ್ತು ಎಫ್.ಪಿ.ಒ ಗಳಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಸಹ ಸೇರಿಸಲಾಗುವುದು. ಮೂರನೇ ವರ್ಗದ ಕಾಮಗಾರಿಗಳು ಉದ್ಯೋಗವನ್ನು ವಿಸ್ತರಿಸಲು ಸಹಾಯ ಮಾಡುವ ಜೀವನೋಪಾಯ ಆಧಾರಿತ ಚಟುವಟಿಕೆಗಳಾಗಿದ್ದರೆ, ನಾಲ್ಕನೆಯದು ನೈಸರ್ಗಿಕ ವಿಕೋಪಗಳಿಂದ ರಕ್ಷಣೆಗೆ ಸಂಬಂಧಿಸಿದ ಕಾಮಗಾರಿಗಳಾದ ತಡೆಗೋಡೆಗಳು, ಒಳಚರಂಡಿ ವ್ಯವಸ್ಥೆಗಳು ಮತ್ತು ನದಿಗಳು ಮತ್ತು ಹೊಳೆಗಳಿಗೆ ಸಂಬಂಧಿಸಿದ ನಿರ್ಮಾಣ ಕಾರ್ಯಗಳನ್ನು ಒಳಗೊಂಡಿರುತ್ತದೆ.

ಅಭಿವೃದ್ಧಿ ಕಾಮಗಾರಿಗಳು ತಳಮಟ್ಟದಲ್ಲಿ ಗೋಚರಿಸಬೇಕೆಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯಾಗಿದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ವಿಕಸಿತ ಗ್ರಾಮ ಪಂಚಾಯತ್ ಯೋಜನೆಯಡಿಯಲ್ಲಿ, ಎಲ್ಲಾ ಯೋಜನೆಗಳನ್ನು ಸಾಮೂಹಿಕ ಸಮಾಲೋಚನೆಯ ಮೂಲಕ ಸಿದ್ಧಪಡಿಸಲಾಗುವುದು ಮತ್ತು ಗ್ರಾಮವು ತನ್ನ ಅಭಿವೃದ್ಧಿಯ ಹಾದಿಯನ್ನು ತಾನೇ ನಿರ್ಧರಿಸುತ್ತದೆ ಎಂದು ತಿಳಿಸಿದರು.

 

*****


(रिलीज़ आईडी: 2207667) आगंतुक पटल : 69
इस विज्ञप्ति को इन भाषाओं में पढ़ें: Assamese , Khasi , English , Urdu , Nepali , हिन्दी , Punjabi , Gujarati , Odia , Tamil , Malayalam