ಪ್ರಧಾನ ಮಂತ್ರಿಯವರ ಕಛೇರಿ
ನವದೆಹಲಿಯಲ್ಲಿ ನಡೆದ 2ನೇ ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯು.ಹೆಚ್.ಒ)ಯ ಸಾಂಪ್ರದಾಯಿಕ ಔಷಧದ ಜಾಗತಿಕ ಶೃಂಗಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
प्रविष्टि तिथि:
19 DEC 2025 8:10PM by PIB Bengaluru
ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯು.ಹೆಚ್.ಒ)ಯ ಮಹಾನಿರ್ದೇಶಕರಾದ ನಮ್ಮ ತುಳಸಿ ಭಾಯಿ ಡಾ. ಟೆಡ್ರೊಸ್, ಕೇಂದ್ರ ಆರೋಗ್ಯ ಸಚಿವರಾದ, ನನ್ನ ಸಹೋದ್ಯೋಗಿ ಜೆ. ಪಿ. ನಡ್ಡಾ ಜಿ, ಆಯುಷ್ ಖಾತೆ ರಾಜ್ಯ ಸಚಿವರಾದ ಪ್ರತಾಪ್‌ರಾವ್ ಜಾಧವ್ ಜಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಇತರೆ ದೇಶಗಳ ಸಚಿವರೆ, ವಿವಿಧ ರಾಷ್ಟ್ರಗಳ ರಾಯಭಾರಿಗಳೆ, ಎಲ್ಲಾ ಗಣ್ಯ ಪ್ರತಿನಿಧಿಗಳೆ, ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಗೌರವಾನ್ವಿತ ತಜ್ಞರೆ, ಮಹಿಳೆಯರೆ ಮತ್ತು ಮಹನೀಯರೆ!
ಇಂದು 2ನೇ ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯು.ಹೆಚ್.ಒ)ಯ ಜಾಗತಿಕ ಸಾಂಪ್ರದಾಯಿಕ ಔಷಧ ಶೃಂಗಸಭೆಯ ಸಮಾರೋಪ ದಿನ. ಕಳೆದ 3 ದಿನಗಳಲ್ಲಿ, ಸಾಂಪ್ರದಾಯಿಕ ಔಷಧ ಕ್ಷೇತ್ರಕ್ಕೆ ಸಂಬಂಧಿಸಿದ ಜಾಗತಿಕ ತಜ್ಞರು ಇಲ್ಲಿ ಗಂಭೀರ ಮತ್ತು ಅರ್ಥಪೂರ್ಣ ಚರ್ಚೆಗಳಲ್ಲಿ ತೊಡಗಿದ್ದಾರೆ. ಭಾರತವು ಇದಕ್ಕೆ ಬಲಿಷ್ಠ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ, ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯು.ಹೆಚ್.ಒ)ಯು ಸಹ ಸಕ್ರಿಯ ಪಾತ್ರ ವಹಿಸುತ್ತಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯು.ಹೆಚ್.ಒ), ಭಾರತ ಸರ್ಕಾರದ ಆಯುಷ್ ಸಚಿವಾಲಯ ಮತ್ತು ಇಲ್ಲಿ ಹಾಜರಿರುವ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಭಾರತದ ಗುಜರಾತ್ ರಾಜ್ಯದ ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯು.ಹೆಚ್.ಒ)ಯ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರ ಸ್ಥಾಪಿಸಿರುವುದು ನಮ್ಮ ಅದೃಷ್ಟ ಮತ್ತು ಭಾರತಕ್ಕೆ ಹೆಮ್ಮೆಯ ವಿಷಯ. 2022ರಲ್ಲಿ ನಡೆದ ಮೊದಲ ಸಾಂಪ್ರದಾಯಿಕ ಔಷಧದ ಜಾಗತಿಕ ಶೃಂಗಸಭೆಯಲ್ಲಿ ಜಗತ್ತು ನಮಗೆ ಈ ಜವಾಬ್ದಾರಿಯನ್ನು ಬಹಳ ವಿಶ್ವಾಸದಿಂದ ವಹಿಸಿತು. ಈ ಜಾಗತಿಕ ಕೇಂದ್ರದ ಖ್ಯಾತಿ ಮತ್ತು ಪ್ರಭಾವ ಸ್ಥಳೀಯ ಮಟ್ಟದಿಂದ ಜಾಗತಿಕ ಹಂತಕ್ಕೆ ವಿಸ್ತರಿಸುತ್ತಿರುವುದು ನಮಗೆಲ್ಲರಿಗೂ ಸಂತೋಷದ ವಿಷಯವಾಗಿದೆ. ಈ ಶೃಂಗಸಭೆಯ ಯಶಸ್ಸು ಇದಕ್ಕೆ ಬಹುದೊಡ್ಡ ಉದಾಹರಣೆಯಾಗಿದೆ. ಈ ಶೃಂಗಸಭೆಯು ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ಅಭ್ಯಾಸಗಳ ಸಂಗಮಕ್ಕೆ ಸಾಕ್ಷಿಯಾಗುತ್ತಿದೆ. ವೈದ್ಯಕೀಯ ವಿಜ್ಞಾನ ಮತ್ತು ಸಮಗ್ರ ಆರೋಗ್ಯದ ಭವಿಷ್ಯವನ್ನು ಪರಿವರ್ತಿಸುವ ಸಾಮರ್ಥ್ಯ ಹೊಂದಿರುವ ಹಲವಾರು ಹೊಸ ಉಪಕ್ರಮಗಳನ್ನು ಸಹ ಇಲ್ಲಿ ಪ್ರಾರಂಭಿಸಲಾಗಿದೆ. ಆರೋಗ್ಯ ಸಚಿವರು ಮತ್ತು ವಿವಿಧ ದೇಶಗಳ ಪ್ರತಿನಿಧಿಗಳ ನಡುವೆ ವಿವರವಾದ ಸಂವಾದವೂ ನಡೆದಿದೆ. ಈ ಸಂವಾದವು ಜಂಟಿ ಸಂಶೋಧನೆಯನ್ನು ಉತ್ತೇಜಿಸಲು, ನಿಯಮಗಳನ್ನು ಸರಳೀಕರಿಸಲು ಮತ್ತು ತರಬೇತಿ ಮತ್ತು ಜ್ಞಾನ ಹಂಚಿಕೆಯನ್ನು ವಿಸ್ತರಿಸಲು ಹೊಸ ಮಾರ್ಗಗಳನ್ನು ತೆರೆದಿದೆ. ಅಂತಹ ಸಹಭಾಗಿತ್ವವು ಮುಂಬರುವ ದಿನಗಳಲ್ಲಿ ಸಾಂಪ್ರದಾಯಿಕ ಔಷಧವನ್ನು ಸುರಕ್ಷಿತ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಸ್ನೇಹಿತರೆ,
ಈ ಶೃಂಗಸಭೆಯಲ್ಲಿ ಹಲವಾರು ಪ್ರಮುಖ ವಿಷಯಗಳ ಕುರಿತು ಒಮ್ಮತಕ್ಕೆ ಬಂದಿರುವುದು ನಮ್ಮ ಬಲವಾದ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ. ಸಂಶೋಧನೆಯನ್ನು ಬಲಪಡಿಸುವುದು, ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸುವುದು ಮತ್ತು ವಿಶ್ವಾದ್ಯಂತ ನಂಬಬಹುದಾದ ನಿಯಂತ್ರಕ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ವಿವಿಧ ವಿಷಯಗಳು ಸಾಂಪ್ರದಾಯಿಕ ಔಷಧವನ್ನು ಹೆಚ್ಚು ಸಬಲೀಕರಣಗೊಳಿಸುತ್ತವೆ. ಡಿಜಿಟಲ್ ಆರೋಗ್ಯ ತಂತ್ರಜ್ಞಾನಗಳು, ಎಐ-ಆಧಾರಿತ ಸಾಧನ ಪರಿಕರಗಳು, ಸಂಶೋಧನಾ ನಾವೀನ್ಯತೆ ಮತ್ತು ಆಧುನಿಕ ಸ್ವಾಸ್ಥ್ಯ ಮೂಲಸೌಕರ್ಯಗಳ ಮೂಲಕ ವಸ್ತುಪ್ರದರ್ಶನದಲ್ಲಿ ಸಂಪ್ರದಾಯ ಮತ್ತು ತಂತ್ರಜ್ಞಾನದ ನಡುವೆ ಹೊಸ ಸಹಭಾಗಿತ್ವವನ್ನು ನಾವು ಕಂಡಿದ್ದೇವೆ. ಇವು ಒಟ್ಟಿಗೆ ಸೇರಿದಾಗ, ಜಾಗತಿಕ ಆರೋಗ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಸಾಮರ್ಥ್ಯವು ಹಲವು ಪಟ್ಟು ಹೆಚ್ಚಾಗುತ್ತದೆ. ಆದ್ದರಿಂದ, ಜಾಗತಿಕ ದೃಷ್ಟಿಕೋನದಿಂದ ಈ ಶೃಂಗಸಭೆಯ ಯಶಸ್ಸು ಅತ್ಯಂತ ಮುಖ್ಯವಾಗಿದೆ.
ಸ್ನೇಹಿತರೆ,
ಯೋಗವು ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳ ಪ್ರಮುಖ ಅಂಶವಾಗಿದೆ. ಯೋಗವು ಇಡೀ ಜಗತ್ತಿಗೆ ಆರೋಗ್ಯ, ಸಮತೋಲನ ಮತ್ತು ಸಾಮರಸ್ಯದ ಮಾರ್ಗವನ್ನು ತೋರಿಸಿದೆ. ಭಾರತದ ಪ್ರಯತ್ನಗಳು ಮತ್ತು 175ಕ್ಕೂ ಹೆಚ್ಚು ದೇಶಗಳ ಬೆಂಬಲದೊಂದಿಗೆ ವಿಶ್ವಸಂಸ್ಥೆಯು ಜೂನ್ 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. ಅನೇಕ ವರ್ಷಗಳಲ್ಲಿ, ಯೋಗವು ಪ್ರಪಂಚದ ಪ್ರತಿಯೊಂದು ಮೂಲೆಯನ್ನು ತಲುಪುವುದನ್ನು ನಾವು ನೋಡಿದ್ದೇವೆ. ಯೋಗದ ಉತ್ತೇಜನ, ಪ್ರಚಾರ ಮತ್ತು ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ನಾನು ಶ್ಲಾಘಿಸುತ್ತೇನೆ. ಇಂದು ಆಯ್ದ ಕೆಲವು ಗಣ್ಯ ವ್ಯಕ್ತಿಗಳಿಗೆ ಪ್ರಧಾನ ಮಂತ್ರಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಕಠಿಣ ಆಯ್ಕೆ ಪ್ರಕ್ರಿಯೆಯ ಮೂಲಕ ಪ್ರಶಸ್ತಿ ಪುರಸ್ಕೃತರನ್ನು ಶ್ರೇಷ್ಠ ತೀರ್ಪುಗಾರರು ಆಯ್ಕೆ ಮಾಡಿದ್ದಾರೆ. ಈ ಎಲ್ಲಾ ಪುರಸ್ಕೃತರು ಯೋಗಕ್ಕೆ ಸಮರ್ಪಣೆ, ಶಿಸ್ತು ಮತ್ತು ಜೀವಮಾನದ ಬದ್ಧತೆಯನ್ನು ಸಂಕೇತಿಸುತ್ತಾರೆ. ಅವರ ಜೀವನವು ಎಲ್ಲರಿಗೂ ಸ್ಫೂರ್ತಿಯಾಗಿದೆ. ಎಲ್ಲಾ ಗೌರವಾನ್ವಿತ ಪ್ರಶಸ್ತಿ ಪುರಸ್ಕೃತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಈ ಶೃಂಗಸಭೆಯ ಫಲಿತಾಂಶಗಳ ಶಾಶ್ವತ ಪರಿಣಾಮವನ್ನು ಖಚಿತಪಡಿಸಿಕೊಳ್ಳಲು ಒಂದು ಪ್ರಮುಖ ಹೆಜ್ಜೆ ಇಡಲಾಗಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. ಸಾಂಪ್ರದಾಯಿಕ ಔಷಧದ ಜಾಗತಿಕ ಗ್ರಂಥಾಲಯ ರೂಪದಲ್ಲಿ ಜಾಗತಿಕ ವೇದಿಕೆಯನ್ನು ಪ್ರಾರಂಭಿಸಲಾಗಿದೆ, ಇದು ಸಾಂಪ್ರದಾಯಿಕ ಔಷಧಕ್ಕೆ ಸಂಬಂಧಿಸಿದ ವೈಜ್ಞಾನಿಕ ದತ್ತಾಂಶ ಮತ್ತು ನೀತಿ ದಾಖಲೆಗಳನ್ನು ಒಂದೇ ಸ್ಥಳದಲ್ಲಿ ಸಂರಕ್ಷಿಸುತ್ತದೆ. ಮೌಲ್ಯಯುತ ಮಾಹಿತಿಯು ಎಲ್ಲಾ ದೇಶಗಳಿಗೆ ಸಮಾನವಾಗಿ ತಲುಪುದನ್ನು ಇದು ಸುಲಭಗೊಳಿಸುತ್ತದೆ. ಈ ಗ್ರಂಥಾಲಯದ ಘೋಷಣೆಯನ್ನು ಭಾರತದ ಜಿ-20 ಅಧ್ಯಕ್ಷತೆಯಲ್ಲಿ ನಡೆದ ಮೊದಲ ಡಬ್ಲ್ಯು.ಹೆಚ್.ಒ ಜಾಗತಿಕ ಶೃಂಗಸಭೆಯಲ್ಲಿ ಮಾಡಲಾಯಿತು. ಇಂದು ಆ ಸಂಕಲ್ಪವೂ ಈಡೇರಿದೆ.
ಸ್ನೇಹಿತರೆ,
ವಿವಿಧ ದೇಶಗಳ ಆರೋಗ್ಯ ಸಚಿವರು ಜಾಗತಿಕ ಪಾಲುದಾರಿಕೆಯ ಅತ್ಯುತ್ತಮ ಉದಾಹರಣೆಯನ್ನು ಇಲ್ಲಿ ಪ್ರಸ್ತುತಪಡಿಸಿದ್ದಾರೆ. ಪಾಲುದಾರರಾಗಿ, ನೀವು ಮಾನದಂಡಗಳು, ಸುರಕ್ಷತೆ ಮತ್ತು ಹೂಡಿಕೆಯಂತಹ ವಿಷಯಗಳನ್ನು ಚರ್ಚಿಸಿದ್ದೀರಿ. ಈ ಸಂವಾದದಿಂದ ಹೊರಹೊಮ್ಮಿದ ದೆಹಲಿ ಘೋಷಣೆಯು ಮುಂಬರುವ ವರ್ಷಗಳಲ್ಲಿ ಹಂಚಿಕೆಯ ಮಾರ್ಗಸೂಚಿಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಜಂಟಿ ಪ್ರಯತ್ನಕ್ಕಾಗಿ ವಿವಿಧ ದೇಶಗಳ ಗೌರವಾನ್ವಿತ ಸಚಿವರನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಮತ್ತು ಅವರ ಸಹಕಾರಕ್ಕಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಸ್ನೇಹಿತರೆ,
ಇಂದು ದೆಹಲಿಯಲ್ಲಿ ಡಬ್ಲ್ಯು.ಹೆಚ್.ಒ ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿಯ ಉದ್ಘಾಟನೆಯೂ ನಡೆದಿದೆ. ಇದು ಭಾರತದ ವಿನಮ್ರ ಕೊಡುಗೆಯಾಗಿದೆ. ಸಂಶೋಧನೆ, ನಿಯಂತ್ರಣ ಮತ್ತು ಸಾಮರ್ಥ್ಯ ವೃದ್ಧಿಯನ್ನು ಉತ್ತೇಜಿಸಲು ಇದು ಜಾಗತಿಕ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ.
ಸ್ನೇಹಿತರೆ,
ಭಾರತವು ವಿಶ್ವಾದ್ಯಂತ ಗುಣಪಡಿಸುವಿಕೆಯ ಪಾಲುದಾರಿಕೆಗಳಿಗೂ ಒತ್ತು ನೀಡುತ್ತಿದೆ. ನಾನು ನಿಮ್ಮೊಂದಿಗೆ 2 ಪ್ರಮುಖ ಸಹಭಾಗಿತ್ವಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಮೊದಲನೆಯದಾಗಿ, ನಾವು ಬಿಮ್ ಸ್ಟೆಕ್ ದೇಶಗಳಿಗೆ, ಅಂದರೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ನಮ್ಮ ನೆರೆಯ ರಾಷ್ಟ್ರಗಳಿಗೆ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸುತ್ತಿದ್ದೇವೆ. ಎರಡನೆಯದಾಗಿ, ನಾವು ಜಪಾನ್‌ನೊಂದಿಗೆ ಸಹಭಾಗಿತ್ವ ಪ್ರಾರಂಭಿಸಿದ್ದೇವೆ. ಈ ಪ್ರಯತ್ನವು ವಿಜ್ಞಾನ, ಸಾಂಪ್ರದಾಯಿಕ ಅಭ್ಯಾಸಗಳು ಮತ್ತು ಆರೋಗ್ಯ ರಕ್ಷಣೆಯನ್ನು ಒಟ್ಟುಗೂಡಿಸಲು ಪ್ರಯತ್ನ ನಡೆಸುತ್ತದೆ.
ಸ್ನೇಹಿತರೆ,
ಈ ಶೃಂಗಸಭೆಯ ವಸ್ತುವಿಷಯ "ಸಮತೋಲನವನ್ನು ಪುನಃಸ್ಥಾಪಿಸುವುದು: ಆರೋಗ್ಯ ಮತ್ತು ಯೋಗಕ್ಷೇಮದ ವಿಜ್ಞಾನ ಮತ್ತು ಅಭ್ಯಾಸ." ಸಮತೋಲನವನ್ನು ಪುನಃಸ್ಥಾಪಿಸುವುದು ಯಾವಾಗಲೂ ಸಮಗ್ರ ಆರೋಗ್ಯದ ಮೂಲಭೂತ ಪರಿಕಲ್ಪನೆಯಾಗಿದೆ. ಆಯುರ್ವೇದವು ಸಮತೋಲನ ಅಥವಾ ಸಮತೋಲನವನ್ನು ಆರೋಗ್ಯದ ಮೂಲತತ್ವವೆಂದು ವ್ಯಾಖ್ಯಾನಿಸುತ್ತದೆ ಎಂಬುದನ್ನು ನೀವೆಲ್ಲರೂ ತಜ್ಞರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ. ಈ ಸಮತೋಲನವನ್ನು ಕಾಯ್ದುಕೊಳ್ಳುವ ವ್ಯಕ್ತಿಯು ನಿಜವಾಗಿಯೂ ಆರೋಗ್ಯವಂತನಾಗಿರುತ್ತಾನೆ. ಇಂದು, ಜೀವನಶೈಲಿ ಅಂಶಗಳು ಮತ್ತು ವಿವಿಧ ಅಸಮತೋಲನಗಳು ಮಧುಮೇಹ, ಹೃದಯಾಘಾತ ಮತ್ತು ಖಿನ್ನತೆಯಿಂದ ಕ್ಯಾನ್ಸರ್‌ವರೆಗಿನ ಹೆಚ್ಚಿನ ರೋಗಗಳಿಗೆ ಪ್ರಮುಖ ಕಾರಣಗಳಾಗಿ ಹೊರಹೊಮ್ಮುತ್ತಿವೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ. ಕೆಲಸ ಮತ್ತು ಜೀವನದ ಅಸಮತೋಲನ, ಆಹಾರದ ಅಸಮತೋಲನ, ನಿದ್ರೆಯ ಅಸಮತೋಲನ, ಕರುಳಿನ ಸೂಕ್ಷ್ಮಜೀವಿಯ ಅಸಮತೋಲನ, ಕ್ಯಾಲೋರಿ ಅಸಮತೋಲನ ಮತ್ತು ಭಾವನಾತ್ಮಕ ವಿಷಯಗಳಲ್ಲಿ ಅಸಮತೋಲನದಂತಹ ಅನೇಕ ಜಾಗತಿಕ ಆರೋಗ್ಯ ಸವಾಲುಗಳು ಈ ಅಡಚಣೆಗಳಿಂದಲೇ ಉಂಟಾಗುತ್ತಿವೆ. ಅಧ್ಯಯನಗಳು ಸಹ ಇದನ್ನೇ ದೃಢಪಡಿಸುತ್ತಿವೆ, ದತ್ತಾಂಶವು ಸಹ ಅದನ್ನು ಸ್ಪಷ್ಟವಾಗಿ ಬೆಂಬಲಿಸುತ್ತದೆ. ಆರೋಗ್ಯ ತಜ್ಞರಾಗಿ ನೀವು ಈ ವಾಸ್ತವವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ. ಆದಾಗ್ಯೂ, ಇಂದು ಸಮತೋಲನ ಪುನಃಸ್ಥಾಪಿಸುವುದು ಕೇವಲ ಜಾಗತಿಕ ಕಾರಣವಲ್ಲ, ಅದು ಜಾಗತಿಕ ತುರ್ತುಸ್ಥಿತಿಯಾಗಿದೆ ಎಂಬುದನ್ನು ಒತ್ತಿ ಹೇಳಲು ನಾನು ಬಯಸುತ್ತೇನೆ. ಈ ಸಮಸ್ಯೆಯನ್ನು ಪರಿಹರಿಸಲು ನಾವು ಹೆಚ್ಚಿನ ವೇಗ ಮತ್ತು ದೃಢನಿಶ್ಚಯದಿಂದ ಕಾರ್ಯ ನಿರ್ವಹಿಸಬೇಕು.
ಸ್ನೇಹಿತರೆ,
21ನೇ ಶತಮಾನದ ಈ ಹಂತದಲ್ಲಿ, ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವ ಸವಾಲು ಹೆಚ್ಚು ಸಂಕೀರ್ಣವಾಗಲಿದೆ. ಎಐ ಮತ್ತು ರೊಬೊಟಿಕ್ಸ್‌ನಿಂದ ಗುರುತಿಸಲ್ಪಟ್ಟ ಹೊಸ ತಾಂತ್ರಿಕ ಯುಗದ ಆಗಮನದೊಂದಿಗೆ, ಮಾನವ ಇತಿಹಾಸದಲ್ಲಿ ಅತ್ಯಂತ ದೊಡ್ಡ ಪರಿವರ್ತನೆಯು ತೆರೆದುಕೊಳ್ಳಲಿದೆ. ಮುಂಬರುವ ವರ್ಷಗಳಲ್ಲಿ, ನಾವು ನಮ್ಮ ಜೀವನ ನಡೆಸುವ ವಿಧಾನವು ಅಭೂತಪೂರ್ವ ರೀತಿಯಲ್ಲಿ ಬದಲಾಗುತ್ತದೆ. ಆದ್ದರಿಂದ, ದೈಹಿಕ ಶ್ರಮವಿಲ್ಲದೆ ಹೆಚ್ಚಿದ ಅನುಕೂಲತೆ ಮತ್ತು ಸಂಪನ್ಮೂಲಗಳಿಂದ ನಿರೂಪಿಸಲ್ಪಟ್ಟ ಇಂತಹ ತ್ವರಿತ ಜೀವನಶೈಲಿ ಬದಲಾವಣೆಗಳು ಮಾನವ ದೇಹಕ್ಕೆ ಅನಿರೀಕ್ಷಿತ ಸವಾಲುಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ ಎಂಬುದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ, ನಾವು ಸಾಂಪ್ರದಾಯಿಕ ಆರೋಗ್ಯ ರಕ್ಷಣೆಯಲ್ಲಿ ಪ್ರಸ್ತುತ ಅಗತ್ಯಗಳ ಮೇಲೆ ಮಾತ್ರ ಗಮನ ಹರಿಸದೆ, ಭವಿಷ್ಯದ ಬಗ್ಗೆ ನಾವು ಜವಾಬ್ದಾರಿಯನ್ನು ಸಹ ಹಂಚಿಕೊಳ್ಳುತ್ತೇವೆ.
ಸ್ನೇಹಿತರೆ,
ಸಾಂಪ್ರದಾಯಿಕ ಔಷಧವನ್ನು ಚರ್ಚಿಸುವಾಗ, ಸುರಕ್ಷತೆ ಮತ್ತು ವೈಜ್ಞಾನಿಕ ಮೌಲ್ಯೀಕರಣದ ಬಗ್ಗೆ ನೈಸರ್ಗಿಕ ಪ್ರಶ್ನೆ ಉದ್ಭವಿಸುತ್ತದೆ. ಭಾರತವು ಈ ದಿಕ್ಕಿನಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಶೃಂಗಸಭೆಯಲ್ಲಿ ನೀವೆಲ್ಲರೂ ಅಶ್ವಗಂಧದ ಉದಾಹರಣೆಯನ್ನು ನೋಡಿದ್ದೀರಿ. ಇದನ್ನು ನಮ್ಮ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಅದರ ಜಾಗತಿಕ ಬೇಡಿಕೆ ಅತಿಯಾಗಿ ಹೆಚ್ಚಾಯಿ, ಇದನ್ನು ಅನೇಕ ದೇಶಗಳಲ್ಲಿ ಬಳಸಲು ಪ್ರಾರಂಭಿಸಲಾಯಿತು. ಕಠಿಣ ಸಂಶೋಧನೆ ಮತ್ತು ಪುರಾವೆ ಆಧಾರಿತ ಮೌಲ್ಯೀಕರಣದ ಮೂಲಕ ಭಾರತವು ಅಶ್ವಗಂಧವನ್ನು ವಿಶ್ವಾಸಾರ್ಹ ಮತ್ತು ವೈಜ್ಞಾನಿಕ ರೀತಿಯಲ್ಲಿ ಮುನ್ನಡೆಸುತ್ತಿದೆ. ಈ ಶೃಂಗಸಭೆಯ ಸಂದರ್ಭದಲ್ಲಿ ಅಶ್ವಗಂಧದ ಕುರಿತು ವಿಶೇಷ ಜಾಗತಿಕ ಚರ್ಚೆಯನ್ನು ಸಹ ಆಯೋಜಿಸಲಾಗಿತ್ತು, ಅಲ್ಲಿ ಅಂತಾರಾಷ್ಟ್ರೀಯ ತಜ್ಞರು ಅದರ ಸುರಕ್ಷತೆ, ಗುಣಮಟ್ಟ ಮತ್ತು ಅನ್ವಯಗಳ ಕುರಿತು ಆಳವಾಗಿ ಚರ್ಚಿಸಿದರು. ಭಾರತವು ಇಂತಹ ಸಮಯ-ಪರೀಕ್ಷಿತ ಗಿಡಮೂಲಿಕೆಗಳನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ಮಾರ್ಗಸೂಚಿಗಳಲ್ಲಿ ಸಂಯೋಜಿಸಲು ಸಂಪೂರ್ಣ ಬದ್ಧವಾಗಿದೆ.
ಸ್ನೇಹಿತರೆ,
ಒಂದು ಕಾಲದಲ್ಲಿ ಸಾಂಪ್ರದಾಯಿಕ ಔಷಧವು ಕೇವಲ ಆರೋಗ್ಯ ಅಥವಾ ಜೀವನಶೈಲಿ ನಿರ್ವಹಣೆಗೆ ಮಾತ್ರ ಸೀಮಿತವಾಗಿದೆ ಎಂಬ ಗ್ರಹಿಕೆ ಇತ್ತು, ಆ ಗ್ರಹಿಕೆ ಈಗ ವೇಗವಾಗಿ ಬದಲಾಗುತ್ತಿದೆ. ನಿರ್ಣಾಯಕ ಸಂದರ್ಭಗಳಲ್ಲಿಯೂ ಸಹ ಸಾಂಪ್ರದಾಯಿಕ ಔಷಧವು ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಈ ದೃಷ್ಟಿಕೋನದೊಂದಿಗೆ, ಭಾರತವು ಈ ಕ್ಷೇತ್ರದಲ್ಲಿ ಮುಂದುವರಿಯುತ್ತಿದೆ. ಆಯುಷ್ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಘಟನೆಯ ಜಾಗತಿರ ಸಾಂಪ್ರದಾಯಿಕ ಔಷಧ ಕೇಂದ್ರವು ಹೊಸ ಉಪಕ್ರಮವನ್ನು ಪ್ರಾರಂಭಿಸಿವೆ ಎಂಬ ವಿಷಯ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಒಟ್ಟಾಗಿ, ಆ ಸಂಸ್ಥೆಯು ಭಾರತದಲ್ಲಿ ಸಮಗ್ರ ಕ್ಯಾನ್ಸರ್ ಆರೈಕೆಯನ್ನು ಬಲಪಡಿಸಲು ಜಂಟಿ ಪ್ರಯತ್ನವನ್ನು ಕೈಗೊಂಡಿದೆ. ಈ ಉಪಕ್ರಮವು ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳನ್ನು ಆಧುನಿಕ ಕ್ಯಾನ್ಸರ್ ಚಿಕಿತ್ಸೆಗಳೊಂದಿಗೆ ಸಂಯೋಜಿಸುವ ಗುರಿ ಹೊಂದಿದೆ, ಅದು ಪುರಾವೆ ಆಧಾರಿತ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಭಾರತದಲ್ಲಿ ಹಲವಾರು ಪ್ರಮುಖ ಸಂಸ್ಥೆಗಳು ರಕ್ತಹೀನತೆ, ಸಂಧಿವಾತ ಮತ್ತು ಮಧುಮೇಹ ಸೇರಿದಂತೆ ಗಂಭೀರ ಆರೋಗ್ಯ ಸವಾಲುಗಳ ಕುರಿತು ಕ್ಲಿನಿಕಲ್ ಅಧ್ಯಯನಗಳನ್ನು ನಡೆಸುತ್ತಿವೆ. ಭಾರತದಲ್ಲಿ ಈ ವಲಯದಲ್ಲಿ ಅನೇಕ ಸ್ಟಾರ್ಟಪ್‌ಗಳು ಸಹ ತಲೆ ಎತ್ತುತ್ತಿವೆ. ಯುವ ಶಕ್ತಿ ಪ್ರಾಚೀನ ಸಂಪ್ರದಾಯಗಳೊಂದಿಗೆ ಸಂಪರ್ಕ ಸಾಧಿಸುತ್ತಿದೆ. ಈ ಎಲ್ಲಾ ಪ್ರಯತ್ನಗಳ ಮೂಲಕ ಸಾಂಪ್ರದಾಯಿಕ ಔಷಧವು ಹೊಸ ಮತ್ತು ಉನ್ನತ ದಿಗಂತದತ್ತ ಸ್ಪಷ್ಟವಾಗಿ ಮುನ್ನಡೆಯುತ್ತಿದೆ.
ಸ್ನೇಹಿತರೆ,
ಇಂದು ಸಾಂಪ್ರದಾಯಿಕ ಔಷಧವು ನಿರ್ಣಾಯಕ ತಿರುವಿನಲ್ಲಿದೆ. ವಿಶ್ವದ ಜನಸಂಖ್ಯೆಯ ಒಂದು ದೊಡ್ಡ ಭಾಗವು ದೀರ್ಘಕಾಲದವರೆಗೆ ಅದನ್ನೇ ಅವಲಂಬಿಸಿದೆ. ಆದರೂ, ಸಾಂಪ್ರದಾಯಿಕ ಔಷಧವು ಅದರ ಅಪಾರ ಸಾಮರ್ಥ್ಯದ ಹೊರತಾಗಿಯೂ ಅದು ನಿಜವಾಗಿಯೂ ಅರ್ಹವಾದ ಮನ್ನಣೆ ಪಡೆದಿಲ್ಲ. ಆದ್ದರಿಂದ, ನಾವು ವಿಜ್ಞಾನದ ಮೂಲಕ ನಂಬಿಕೆಯನ್ನು ಸಹ ಗಳಿಸಬೇಕು. ನಾವು ಅದರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಬೇಕು. ಈ ಜವಾಬ್ದಾರಿ ಯಾವುದೇ ಒಂದು ದೇಶಕ್ಕೆ ಮಾತ್ರ ಸೇರದೆ, ಇದು ನಮ್ಮೆಲ್ಲರ ಹಂಚಿಕೆಯ ಬಾಧ್ಯತೆಯಾಗಿದೆ. ಕಳೆದ 3 ದಿನಗಳಲ್ಲಿ ಈ ಶೃಂಗಸಭೆಯಲ್ಲಿ ಕಂಡುಬಂದ ಭಾಗವಹಿಸುವಿಕೆ, ಸಂವಾದ ಮತ್ತು ಬದ್ಧತೆಯು ಈ ದಿಕ್ಕಿನಲ್ಲಿ ಜಗತ್ತು ಒಟ್ಟಾಗಿ ಮುಂದುವರಿಯಲು ಸಿದ್ಧವಾಗಿದೆ ಎಂಬ ನಂಬಿಕೆಯನ್ನು ಬಲಪಡಿಸಿದೆ. ಸಾಂಪ್ರದಾಯಿಕ ಔಷಧವನ್ನು ನಂಬಿಕೆ, ಗೌರವ ಮತ್ತು ಜವಾಬ್ದಾರಿಯೊಂದಿಗೆ ಸಾಮೂಹಿಕವಾಗಿ ಮುನ್ನಡೆಸುತ್ತೇವೆ ಎಂದು ನಾವು ಸಂಕಲ್ಪ ಮಾಡೋಣ. ಮತ್ತೊಮ್ಮೆ, ಈ ಶೃಂಗಸಭೆಯಲ್ಲಿ ಭಾಗವಹಿಸಿದ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಂಬಾ ಧನ್ಯವಾದಗಳು.
****
(रिलीज़ आईडी: 2207126)
आगंतुक पटल : 5