ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಿ-20 ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರ ಸಮಾರೋಪ ಭಾಷಣದ ಕನ್ನಡ ಅವತರಣಿಕೆ (ನವೆಂಬರ್ 22, 2023)

प्रविष्टि तिथि: 22 NOV 2023 9:38PM by PIB Bengaluru

ಮಹೋನ್ನತರೇ,


ಮಾನ್ಯರೇ,

ನಿಮ್ಮೆಲ್ಲರ ಮೌಲ್ಯಯುತ ಒಳನೋಟಗಳಿಗಾಗಿ ನಾನು ಮತ್ತೊಮ್ಮೆ ನಿಮ್ಮನ್ನು ಶ್ಲಾಘಿಸುತ್ತೇನೆ. ನಿಮ್ಮಲ್ಲಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಮುಕ್ತ ಮನಸ್ಸಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ನವದೆಹಲಿ ಘೋಷಣೆಯಲ್ಲಿ, ನಾವು ಹಲವಾರು ಕ್ಷೇತ್ರಗಳಲ್ಲಿ ಸಾಮೂಹಿಕ ಬದ್ಧತೆಗಳನ್ನು ವ್ಯಕ್ತಪಡಿಸಿದ್ದೇವೆ.



ಇಂದು, ನಾವು ಆ ಬದ್ಧತೆಗಳನ್ನೇ ಮುಂದುವರಿಸಲು ಮತ್ತೊಮ್ಮೆ ಸಂಕಲ್ಪ ಮಾಡಿದ್ದೇವೆ.

ಅಭಿವೃದ್ಧಿ ಕಾರ್ಯಸೂಚಿಯ ಜೊತೆಗೆ, ಜಾಗತಿಕ ಪರಿಸ್ಥಿತಿಗಳು ಮತ್ತು ಅವುಗಳ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳ ಕುರಿತು ನಾವು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ.

ಪಶ್ಚಿಮ ಏಷ್ಯಾದ ಗಂಭೀರ ಪರಿಸ್ಥಿತಿಯ ಬಗ್ಗೆ ನಿಮ್ಮ ದೃಷ್ಟಿಕೋನಗಳನ್ನು ಆಲಿಸಿದ ನಂತರ, ಹಲವಾರು ವಿಷಯಗಳಲ್ಲಿ ಜಿ-20 ಒಳಗೆ ವ್ಯಾಪಕ ಒಮ್ಮತವಿದೆ ಎಂದು ನಾನು ಹೇಳಬಲ್ಲೆ.


ಮೊದಲನೆಯದಾಗಿ, ನಾವೆಲ್ಲರೂ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಬಲವಾಗಿ ಖಂಡಿಸುತ್ತೇವೆ.

ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ಇದೆ.

ಎರಡನೆಯದಾಗಿ, ಅಮಾಯಕರ ಸಾವು - ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರ ಸಾವು - ಅಸಹನೀಯ.

ಮೂರನೆಯದಾಗಿ, ಮಾನವೀಯ ನೆರವನ್ನು ಸಾಧ್ಯವಾದಷ್ಟು ಶೀಘ್ರವಾಗಿ, ಪರಿಣಾಮಕಾರಿಯಾಗಿ ಮತ್ತು ಸುರಕ್ಷಿತವಾಗಿ ತಲುಪಿಸಬೇಕು.

ನಾಲ್ಕನೆಯದಾಗಿ, ಮಾನವೀಯ ವಿರಾಮದ ಕುರಿತಾದ ಒಮ್ಮತವನ್ನು ಮತ್ತು ಒತ್ತೆಯಾಳುಗಳ ಬಿಡುಗಡೆಯ ಕುರಿತಾದ ಸುದ್ದಿಯನ್ನು ನಾವು ಸ್ವಾಗತಿಸುತ್ತೇವೆ.

ಐದನೆಯದಾಗಿ, ಇಸ್ರೇಲ್-ಪ್ಯಾಲೆಸ್ಟೈನ್ ಸಮಸ್ಯೆಗೆ ಎರಡು-ರಾಜ್ಯಗಳ ಚೌಕಟ್ಟಿನ ಮೂಲಕ ಶಾಶ್ವತ ಪರಿಹಾರದ ಅಗತ್ಯವಿದೆ.

ಆರನೆಯದಾಗಿ, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆ ಅಗತ್ಯ.

ಮತ್ತು ಏಳನೆಯದಾಗಿ, ರಾಜಕೀಯ ಉದ್ವಿಗ್ನತೆಗಳನ್ನು ಪರಿಹರಿಸಲು ರಾಜತಾಂತ್ರಿಕತೆ ಮತ್ತು ಸಂವಾದ ಮಾತ್ರ ಏಕೈಕ ಮಾರ್ಗವಾಗಿದೆ.

ಈ ನಿಟ್ಟಿನಲ್ಲಿ, ಜಿ-20 ಸಾಧ್ಯವಿರುವ ಎಲ್ಲ ಬೆಂಬಲವನ್ನು ವಿಸ್ತರಿಸಲು ಸಿದ್ಧವಾಗಿದೆ.


ಮಹೋನ್ನತರೇ

ಮಾನ್ಯರೇ,

ಜಿ-20 ಅಧ್ಯಕ್ಷತೆಗಾಗಿ ನನ್ನ ಆತ್ಮೀಯ ಸ್ನೇಹಿತರಾದ ಬ್ರೆಜಿಲ್‌ನ ಅಧ್ಯಕ್ಷ ಲೂಲಾ ಅವರಿಗೆ ಮತ್ತೊಮ್ಮೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಬ್ರೆಜಿಲ್‌ನ ನಾಯಕತ್ವದಲ್ಲಿ, ನಾವು ಮಾನವ-ಕೇಂದ್ರಿತ ವಿಧಾನದೊಂದಿಗೆ ಮುಂದುವರಿಯುತ್ತೇವೆ ಎಂಬ ವಿಶ್ವಾಸ ನನಗಿದೆ.

ವಸುಧೈವ ಕುಟುಂಬಕಂ ಎಂಬ ಸ್ಫೂರ್ತಿಯಿಂದ ಮಾರ್ಗದರ್ಶಿಸಲ್ಪಟ್ಟು, ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ದಾರಿಮಾಡಲು ನಾವು ಒಗ್ಗಟ್ಟಿನಿಂದ ಮುನ್ನಡೆಯುತ್ತೇವೆ.

ನಾವು ಗ್ಲೋಬಲ್ ಸೌತ್‌ನ ನಿರೀಕ್ಷೆಗಳನ್ನು ಪೂರೈಸಲು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ.

ನಾವು ಆಹಾರ ಭದ್ರತೆ, ಆರೋಗ್ಯ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ.

ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು ಮತ್ತು ಜಾಗತಿಕ ಆಡಳಿತದಲ್ಲಿನ ಸುಧಾರಣೆಗಳನ್ನು ನಾವು ಖಂಡಿತವಾಗಿಯೂ ಮುಂದುವರಿಸುತ್ತೇವೆ.

ಹವಾಮಾನ ಕ್ರಿಯೆಯ ಜೊತೆಗೆ, ನಾವು ನ್ಯಾಯಯುತ, ಪ್ರವೇಶಿಸಬಹುದಾದ ಮತ್ತು ಕೈಗೆಟುಕುವ ಹವಾಮಾನ ಹಣಕಾಸು ಅನ್ನು ಸಹ ಖಚಿತಪಡಿಸುತ್ತೇವೆ.

ಸಾಲ ಮರು ಹೊಂದಾಣಿಕೆ ಕಡೆಗೆ ಪಾರದರ್ಶಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.

ನಾವು ಮಹಿಳಾ-ನೇತೃತ್ವದ ಅಭಿವೃದ್ಧಿ, ನುರಿತ ವಲಸೆ ಮಾರ್ಗಗಳು ಮತ್ತು ಮಧ್ಯಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳ ಬೆಳವಣಿಗೆಗೆ ಒತ್ತು ನೀಡುತ್ತೇವೆ.

ಟ್ರೋಯಿಕಾದ ಸದಸ್ಯನಾಗಿ, ನಮ್ಮ ಹಂಚಿಕೆಯ ಬದ್ಧತೆಗಳನ್ನು ಮುಂದುವರಿಸಲು ನಮ್ಮ ದೃಢ ಸಂಕಲ್ಪವನ್ನು ನಾನು ಪುನರುಚ್ಚರಿಸುತ್ತೇನೆ.

ಬ್ರೆಜಿಲ್‌ನ ಜಿ-20 ಅಧ್ಯಕ್ಷತೆಯ ಯಶಸ್ಸಿಗೆ ಭಾರತದ ಸಂಪೂರ್ಣ ಬೆಂಬಲವನ್ನು ನಾನು ಭರವಸೆ ನೀಡುತ್ತೇನೆ.

ಭಾರತದ ಜಿ-20 ಅಧ್ಯಕ್ಷತೆಯ ಯಶಸ್ಸಿನಲ್ಲಿ ನಿಮ್ಮೆಲ್ಲರ ಸಹಕಾರಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.

ತುಂಬಾ ಧನ್ಯವಾದಗಳು.

 

*****


(रिलीज़ आईडी: 2202777) आगंतुक पटल : 7
इस विज्ञप्ति को इन भाषाओं में पढ़ें: Bengali , English , Odia , Urdu , Marathi , हिन्दी , Manipuri , Assamese , Punjabi , Gujarati , Telugu , Malayalam