ಪ್ರಧಾನ ಮಂತ್ರಿಯವರ ಕಛೇರಿ
ರಷ್ಯಾ ಅಧ್ಯಕ್ಷರಾದ ಘನತೆವೆತ್ತ ಶ್ರೀ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಭಾರತ – ರಷ್ಯಾ ವಾಣಿಜ್ಯ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಅದು ವ್ಯಾಪಾರವಾಗಿರಲಿ ಅಥವಾ ರಾಜತಾಂತ್ರಿಕತೆಯಾಗಿರಲಿ, ಪರಸ್ಪರ ನಂಬಿಕೆಯು ಯಾವುದೇ ಪಾಲುದಾರಿಕೆಯ ಅಡಿಪಾಯವಾಗಿದೆ; ಭಾರತ-ರಷ್ಯಾ ಸಂಬಂಧಗಳ ದೊಡ್ಡ ಶಕ್ತಿ ಈ ನಂಬಿಕೆಯಲ್ಲಿ ಅಡಗಿದೆ; ಈ ನಂಬಿಕೆಯು ಜಂಟಿ ಪ್ರಯತ್ನಗಳಿಗೆ ದಿಕ್ಕು ಮತ್ತು ವೇಗವನ್ನು ಒದಗಿಸುತ್ತದೆ, ಜೊತೆಗೆ ಹೊಸ ಕನಸುಗಳು ಮತ್ತು ಆಕಾಂಕ್ಷೆಗಳಿಗೆ ಸ್ಫೂರ್ತಿಯ ಚಿಲುಮೆಯಾಗಿ ಅದು ಕಾರ್ಯನಿರ್ವಹಿಸುತ್ತದೆ: ಪ್ರಧಾನಮಂತ್ರಿ
2030ಕ್ಕೆ ಮುನ್ನ 100 ಶತಕೋಟಿ ಡಾಲರ್ ಮೌಲ್ಯದ ಭಾರತ-ರಷ್ಯಾ ವ್ಯಾಪಾರ ಗುರಿಯನ್ನು ಸಾಧಿಸಲಾಗುವುದು: ಪ್ರಧಾನಮಂತ್ರಿ
ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ತತ್ವದ ಮಾರ್ಗದರ್ಶನದಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಮುನ್ನಡೆಯುತ್ತಿದೆ: ಪ್ರಧಾನಮಂತ್ರಿ
प्रविष्टि तिथि:
05 DEC 2025 8:00PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ಭಾರತ ಮಂಟಪದಲ್ಲಿ ರಷ್ಯಾ ಅಧ್ಯಕ್ಷ ಘನತೆವೆತ್ತ ಶ್ರೀ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಭಾರತ-ರಷ್ಯಾ ವ್ಯಾಪಾರ ವೇದಿಕೆಯನ್ನುದ್ದೇಶಿಸಿ ಇಂದು ಮಾತನಾಡಿದರು. ತಮ್ಮ ಭಾಷಣದ ಆರಂಭದಲ್ಲಿ ಪ್ರಧಾನಮಂತ್ರಿ ಅವರು, ಘನತೆವೆತ್ತ ಅಧ್ಯಕ್ಷ ಪುಟಿನ್, ಭಾರತ ಮತ್ತು ವಿದೇಶಗಳ ನಾಯಕರು ಮತ್ತು ಎಲ್ಲಾ ಗೌರವಾನ್ವಿತ ಅತಿಥಿಗಳಿಗೆ ಶುಭಾಶಯ ಕೋರಿದರು. ಭಾರತ ರಷ್ಯಾ ವ್ಯಾಪಾರ ವೇದಿಕೆಯು ಅಧ್ಯಕ್ಷ ಪುಟಿನ್ ಅವರ ಮಹತ್ವದ ಉಪಕ್ರಮವನ್ನು ಪ್ರತಿಬಿಂಬಿಸುತ್ತದೆ, ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೊಡ್ಡ ನಿಯೋಗವನ್ನು ಕರೆತಂದಿದ್ದಾರೆ ಎಂದು ಹೇಳಿದರು. ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ತಮ್ಮ ಹೃತ್ಪೂರ್ವಕ ಸ್ವಾಗತವನ್ನು ಕೋರಿದ ಪ್ರಧಾನಮಂತ್ರಿ ಮೋದಿ, ಇಂದು ಗಣ್ಯರ ಜೊತೆ ಇರುವುದು ಬಹಳ ಸಂತೋಷ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತು ತಮ್ಮ ಅಮೂಲ್ಯವಾದ ಆಲೋಚನೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಶ್ರೀ ಮೋದಿ ಅವರು ತಮ್ಮ ಸ್ನೇಹಿತ ಅಧ್ಯಕ್ಷ ಪುಟಿನ್ ಅವರಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು. ವ್ಯಾಪಾರಕ್ಕಾಗಿ ಸರಳೀಕರಣಕೃತ ಮತ್ತು ಪೂರ್ವ ಅಂದಾಜಿನ ಕಾರ್ಯವಿಧಾನಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದ ಅವರು, ಭಾರತ ಮತ್ತು ಯುರೇಷಿಯನ್ ಆರ್ಥಿಕ ಒಕ್ಕೂಟದ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಉಲ್ಲೇಖಿಸಿದಂತೆ ಮತ್ತು ಮುಂದಿನ ಸಾಧ್ಯತೆಗಳ ಬಗ್ಗೆ ಅಧ್ಯಕ್ಷರಾದ ಪುಟಿನ್ ಅವರು ತಿಳಿಸಿದಂತೆ ಭಾರತ ಮತ್ತು ರಷ್ಯಾ ಅಲ್ಪಾವಧಿಯಲ್ಲಿ ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಧಿಸಬಲ್ಲವು ಎಂದು ಶ್ರೀ ಮೋದಿ ಹೇಳಿದರು. ಅದು ವ್ಯಾಪಾರವಾಗಿರಲಿ ಅಥವಾ ರಾಜತಾಂತ್ರಿಕತೆಯಾಗಿರಲಿ, ಪರಸ್ಪರ ನಂಬಿಕೆಯು ಯಾವುದೇ ಪಾಲುದಾರಿಕೆಯ ಅಡಿಪಾಯವಾಗಿರುತ್ತದೆ. ಭಾರತ-ರಷ್ಯಾ ಸಂಬಂಧಗಳ ದೊಡ್ಡ ಶಕ್ತಿ ಈ ನಂಬಿಕೆಯಲ್ಲಿ ಅಡಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಈ ನಂಬಿಕೆಯು ಜಂಟಿ ಪ್ರಯತ್ನಗಳಿಗೆ ದಿಕ್ಕು ಮತ್ತು ವೇಗವನ್ನು ಒದಗಿಸುತ್ತದೆ ಜೊತೆಗೆ ಹೊಸ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪ್ರೇರೇಪಿಸುವ ಸ್ಫೂರ್ತಿಯ ಸೆಲೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ಕಳೆದ ವರ್ಷ ಅಧ್ಯಕ್ಷ ಪುಟಿನ್ ಮತ್ತು ತಾವು 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರದಲ್ಲಿ 100 ಬಿಲಿಯನ್ ಡಾಲರ್ ಗುರಿಯನ್ನು ದಾಟಲು ನಿರ್ಧರಿಸಿದ್ದನ್ನು ಪ್ರಧಾನಮಂತ್ರಿ ಅವರು ಸ್ಮರಿಸಿದರು. ಆದರೆ ಇತ್ತೀಚೆಗೆ ಅಧ್ಯಕ್ಷ ಪುಟಿನ್ ಅವರೊಂದಿಗಿನ ಚರ್ಚೆಗಳು ಮತ್ತು ಕಣ್ಣ ಮುಂದೆ ಕಾಣುತ್ತಿರುವ ಸಾಮರ್ಥ್ಯವನ್ನು ಗಮನಿಸಿದರೆ, ಈ ಗುರಿಯನ್ನು ಸಾಧಿಸಲು ನಾವು 2030ರವರೆಗೆ ಕಾಯುವ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಪ್ರಧಾನಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು. ಭಾರತ ಮತ್ತು ರಷ್ಯಾ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಈ ಗುರಿಯನ್ನು ಸಾಧಿಸುವ ದೃಢ ನಿಶ್ಚಯದೊಂದಿಗೆ ಮುಂದುವರಿಯುತ್ತಿವೆ ಮತ್ತು ಈ ನಿಟ್ಟಿನಲ್ಲಿ ತಮ್ಮ ವಿಶ್ವಾಸ ಬಲಗೊಳ್ಳುತ್ತಿದೆ ಎಂದು ಅವರು ತಿಳಿಸಿದರು. ಉಭಯ ದೇಶಗಳ ನಡುವೆ ಸುಂಕ ಮತ್ತು ಸುಂಕೇತರ ಅಡೆತಡೆಗಳನ್ನು ಕಡಿಮೆ ಮಾಡಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಈ ಪ್ರಯತ್ನಗಳ ನಿಜವಾದ ಶಕ್ತಿ ವ್ಯಾಪಾರ ನಾಯಕರಲ್ಲಿ ಅಡಗಿದೆ ಎಂದು ತಿಳಿಸಿದ ಅವರು, ಅವರ ಶಕ್ತಿ, ನಾವೀನ್ಯತೆ ಮತ್ತು ಮಹತ್ವಾಕಾಂಕ್ಷೆಯು ಭಾರತ ಮತ್ತು ರಷ್ಯಾದ ಸಮಾನ ಭವಿಷ್ಯವನ್ನು ರೂಪಿಸುತ್ತದೆ ಎಂದು ಹೇಳಿದರು.
ಕಳೆದ ಹನ್ನೊಂದು ವರ್ಷಗಳಲ್ಲಿ, ಭಾರತದಲ್ಲಿ ಬದಲಾವಣೆಗಳ ವೇಗ ಮತ್ತು ಪ್ರಮಾಣವು ಅಭೂತಪೂರ್ವವಾಗಿದೆ ಎಂದು ತಿಳಿಸಿದ ಶ್ರೀ ಮೋದಿ ಅವರು ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ತತ್ವವನ್ನು ಅನುಸರಿಸಿ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು. ಹನ್ನೊಂದು ವರ್ಷಗಳ ಈ ಸುಧಾರಣಾ ಪಯಣದಲ್ಲಿ, ಭಾರತವು ದಣಿದಿಲ್ಲ ಅಥವಾ ಎಂದೂ ನಿಂತಿಲ್ಲ ಮತ್ತು ದೇಶದ ಸಂಕಲ್ಪವು ಹಿಂದೆಂದಿಗಿಂತಲೂ ಬಲವಾಗಿದೆ. ಮತನ್ನ ಗುರಿಗಳತ್ತ ಹೆಚ್ಚಿನ ವಿಶ್ವಾಸ ಮತ್ತು ವೇಗದೊಂದಿಗೆ ಮುಂದುವರಿಯುತ್ತಿದೆ ಎಂದು ಅವರು ತಿಳಿಸಿದರು. ಸುಗಮ ವ್ಯಾಪಾರವನ್ನು ಉತ್ತೇಜಿಸಲು ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳನ್ನು ಕೈಗೊಳ್ಳಲಾಗಿದ್ದು, ತೆರಿಗೆ ಅನುಸರಣೆಗಳನ್ನು ಕಡಿಮೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಹೂಡಿಕೆಗೆ ಅವಕಾಶ ಮುಕ್ತಗೊಳಿಸಲಾಗಿದೆ, ಹೊಸ ಅವಕಾಶಗಳನ್ನು ಸೃಷ್ಟಿಸಲಾಗಿದೆ ಮತ್ತು ನಾಗರಿಕ ಪರಮಾಣು ಕ್ಷೇತ್ರದಲ್ಲಿಯೂ ಸಾಧ್ಯತೆಗಳ ಹೊಸ ಬಾಗಿಲುಗಳನ್ನು ತೆರೆಯಲಾಗುತ್ತಿದೆ ಎಂದು ಅವರು ಹೇಳಿದರು. ಇವು ಕೇವಲ ಆಡಳಿತಾತ್ಮಕ ಸುಧಾರಣೆಗಳಲ್ಲ, ಬದಲಿಗೆ 'ವಿಕಸಿತ ಭಾರತ' ಎಂಬ ಏಕೈಕ ಸಂಕಲ್ಪದಿಂದ ಪ್ರೇರಿತವಾದ ಮನಸ್ಥಿತಿಯ ಸುಧಾರಣೆಗಳಾಗಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು.
ಕಳೆದ ಎರಡು ದಿನಗಳಲ್ಲಿ ಅತ್ಯಂತ ಉಪಯುಕ್ತ ಮತ್ತು ಅರ್ಥಪೂರ್ಣ ಚರ್ಚೆಗಳು ನಡೆದಿವೆ ಎಂದು ಹೇಳಿದ ಪ್ರಧಾನಮಂತ್ರಿ, ಭಾರತ-ರಷ್ಯಾ ಸಹಕಾರದ ಎಲ್ಲಾ ಕ್ಷೇತ್ರಗಳನ್ನು ಸಭೆಯಲ್ಲಿ ಪ್ರತಿನಿಧಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದೇವೇಳೆ, ಸಭೆಯಲ್ಲಿ ಭಾಗವಹಿಸಿದವರ ಸಲಹೆಗಳು ಮತ್ತು ಪ್ರಯತ್ನಗಳಿಗೆ ಹೃತ್ಪೂರ್ವಕ ಮೆಚ್ಚುಗೆ ವ್ಯಕ್ತಪಡಿಸಿದರು. ಸಹಕಾರವನ್ನು ಮತ್ತಷ್ಟು ಬಲಪಡಿಸಲು, ಹಲವಾರು ಆಲೋಚನೆಗಳನ್ನು ಮುಂದಿಡಲಾಗಿದೆ ಎಂದು ಅವರು ತಿಳಿಸಿದರು. ಸರಕು-ಸಾಗಣೆ ಮತ್ತು ಸಂಪರ್ಕಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಅಧ್ಯಕ್ಷ ಪುಟಿನ್ ಮತ್ತು ತಾವು ತಿಳಿಸಿದ್ದನ್ನು ಮೋದಿ ಸ್ಮರಿಸಿದರು. ಈ ನಿಟ್ಟಿನಲ್ಲಿ 'ಐಎನ್ಎಸ್‌ಟಿಸಿ' ಹಾಗೂ 'ಚೆನ್ನೈ-ವ್ಲಾಡಿವೋಸ್ಟಾಕ್ ಕಾರಿಡಾರ್' ಸೇರಿದಂತೆ ಉತ್ತರ ಸಮುದ್ರ ಮಾರ್ಗದಂತಹ ಯೋಜನೆಗಳನ್ನು ಮುನ್ನಡೆಸಲು ಬದ್ಧತೆ ವ್ಯಕ್ತಪಡಿಸಿದರು. ಇವುಗಳ ವಿಚಾರದಲ್ಲಿ ಕ್ಷಿಪ್ರ ಪ್ರಗತಿಯನ್ನು ನಿರೀಕ್ಷಿಸಲಾಗಿದ್ದು, ಇದರಿಂದ ಸಾರಿಗೆ ಸಮಯವನ್ನು ಕಡಿಮೆಯಾಗುತ್ತದೆ, ವೆಚ್ಚ ಕಡಿಮೆಯಾಗುತ್ತದೆ ಮತ್ತು ವ್ಯವಹಾರಕ್ಕಾಗಿ ಹೊಸ ಮಾರುಕಟ್ಟೆಗಳು ತೆರೆದುಕೊಳ್ಳುತ್ತವೆ ಎಂದು ಶ್ರೀ ಮೋದಿ ಹೇಳಿದರು. ಡಿಜಿಟಲ್ ತಂತ್ರಜ್ಞಾನದ ಶಕ್ತಿಯೊಂದಿಗೆ ಸುಂಕ, ಸರಕು-ಸಾಗಣೆ ಮತ್ತು ನಿಯಂತ್ರಕ ವ್ಯವಸ್ಥೆಗಳನ್ನು ವರ್ಚುವಲ್ ಟ್ರೇಡ್ ಕಾರಿಡಾರ್ ಮೂಲಕ ಸಂಪರ್ಕಿಸಬಹುದು, ಇದು ವೇಗದ ಕಸ್ಟಮ್ಸ್ ಕ್ಲಿಯರೆನ್ಸ್, ಕಡಿಮೆ ಕಾಗದಪತ್ರಗಳ ಅಗತ್ಯತೆ ಮತ್ತು ಹೆಚ್ಚು ತಡೆರಹಿತ ಸರಕು ಚಲನೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಅವರು ತಿಳಿಸಿದರು.
ಸಮುದ್ರ ಉತ್ಪನ್ನಗಳಿಗೆ ಸಂಬಂಧಿಸಿದಂತೆ ರಷ್ಯಾ ಇತ್ತೀಚೆಗೆ ಡೈರಿ ಮತ್ತು ಸಮುದ್ರ ಉತ್ಪನ್ನಗಳನ್ನು ರಫ್ತು ಮಾಡಲು ಅರ್ಹವಾದ ಭಾರತೀಯ ಕಂಪನಿಗಳ ಪಟ್ಟಿಯನ್ನು ವಿಸ್ತರಿಸಿದೆ. ಇದು ಭಾರತೀಯ ರಫ್ತುದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಶ್ರೀ ಮೋದಿ ಗಮನಸೆಳೆದರು. ಭಾರತದ ಉತ್ತಮ ಗುಣಮಟ್ಟದ ಸಮುದ್ರ ಉತ್ಪನ್ನಗಳು, ಮೌಲ್ಯವರ್ಧಿತ ಸಮುದ್ರಾಹಾರ ಮತ್ತು ಸಂಸ್ಕರಿಸಿದ ಆಹಾರವು ಬಲವಾದ ಜಾಗತಿಕ ಬೇಡಿಕೆಯನ್ನು ಹೊಂದಿದೆ. ಶೀತಲ ವ್ಯವಸ್ಥೆಯಡಿ ಸರಕು-ಸಾಗಣೆ (ಕೋಲ್ಡ್ ಚೈನ್ ಲಾಜಿಸ್ಟಿಕ್ಸ್), ಆಳ ಸಮುದ್ರ ಮೀನುಗಾರಿಕೆ ಹಾಗೂ ಮೀನುಗಾರಿಕೆ ಬಂದರುಗಳ ಆಧುನೀಕರಣದಲ್ಲಿ ಜಂಟಿ ಉದ್ಯಮಗಳು ಮತ್ತು ತಂತ್ರಜ್ಞಾನ ಸಹಭಾಗಿತ್ವವು ರಷ್ಯಾದ ದೇಶೀಯ ಬೇಡಿಕೆಯನ್ನು ಪೂರೈಸುತ್ತದೆ. ಜೊತೆಗೆ ಇದು ಭಾರತೀಯ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳನ್ನು ತೆರೆಯುತ್ತದೆ ಎಂದು ಅವರು ತಿಳಿಸಿದರು.
ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಭಾರತವು ಇಂದು ಅಗ್ಗದ ಮತ್ತು ಪರಿಣಾಮಕಾರಿ ಇವಿ ದ್ವಿಚಕ್ರ ವಾಹನಗಳು ಮತ್ತು ಸಿಎನ್‌ಜಿ ಸಾರಿಗೆ ಪರಿಹಾರಗಳಲ್ಲಿ ಜಾಗತಿಕ ನಾಯಕನಾಗಿದೆ. ಇದೇವೇಳೆ, ರಷ್ಯಾ ಸುಧಾರಿತ ಖನಿಜಗಳ ಪ್ರಮುಖ ಉತ್ಪಾದಕ ರಾಷ್ಟ್ರವಾಗಿದೆ. ಮತ್ತು ಎರಡೂ ದೇಶಗಳು ಒಟ್ಟಾಗಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ, ವಾಹನ ಬಿಡಿಭಾಗಗಳ ತಯಾರಿಕೆ ಮತ್ತು ಹಂಚಿಕೆಯ ಸಾರಿಗೆಯಲ್ಲಿ ಕೈಜೋಡಿಸಬಹುದು. ಆ ಮೂಲಕ ದೇಶೀಯ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಜಾಗತಿಕ ದಕ್ಷಿಣ ದೇಶಗಳ ವಿಶೇಷವಾಗಿ ಆಫ್ರಿಕಾದ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂದು ಪ್ರಧಾನಮಂತ್ರಿ ಹೇಳಿದರು.
ಔಷಧ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಭಾರತವು ವಿಶ್ವಾದ್ಯಂತ ಅತ್ಯುನ್ನತ ಗುಣಮಟ್ಟದ ಔಷಧಗಳನ್ನು ಕೈಗೆಟುಕುವ ಬೆಲೆಯಲ್ಲಿ ಪೂರೈಸುತ್ತದೆ, "ವಿಶ್ವದ ಔಷಧಾಲಯ" ಎಂಬ ಬಿರುದನ್ನು ಭಾರತ ಗಳಿಸಿದೆ. ಮತ್ತು ಎರಡೂ ರಾಷ್ಟ್ರಗಳು ಜಂಟಿ ಲಸಿಕೆ ಅಭಿವೃದ್ಧಿ, ಕ್ಯಾನ್ಸರ್ ಚಿಕಿತ್ಸೆಗಳು, ರೇಡಿಯೋ-ಫಾರ್ಮಾಸ್ಯುಟಿಕಲ್ಸ್ ಮತ್ತು ಎಪಿಐ ಪೂರೈಕೆ ಸರಪಳಿಗಳಲ್ಲಿ ಸಹಕರಿಸಬಹುದು. ಆ ಮೂಲಕ ಆರೋಗ್ಯ ಭದ್ರತೆಯನ್ನು ಹೆಚ್ಚಿಸಬಹುದು ಮತ್ತು ಹೊಸ ಕೈಗಾರಿಕೆಗಳನ್ನು ಬೆಳೆಸಬಹುದು ಎಂದು ಪ್ರಧಾನಮಂತ್ರಿ ಹೇಳಿದರು.
ಜವಳಿ ಬಗ್ಗೆ ಮಾತನಾಡಿದ ಶ್ರೀ ಮೋದಿ, ಭಾರತವು ನೈಸರ್ಗಿಕ ನಾರುಗಳಿಂದ ತಾಂತ್ರಿಕ ಜವಳಿಗಳವರೆಗೆ ಅಪಾರ ಸಾಮರ್ಥ್ಯವನ್ನು ಹೊಂದಿದೆ. ವಿನ್ಯಾಸ, ಕರಕುಶಲ ವಸ್ತುಗಳು ಮತ್ತು ಕಾರ್ಪೆಟ್‌ಗಳ ತಯಾರಿಕೆಯಲ್ಲಿ ಜಾಗತಿಕ ಮನ್ನಣೆಯನ್ನು ಹೊಂದಿದೆ. ಇದೇವೇಳೆ, ರಷ್ಯಾ ಪಾಲಿಮರ್ ಮತ್ತು ಸಂಶ್ಲೇಷಿತ ಕಚ್ಚಾ ವಸ್ತುಗಳ ಪ್ರಮುಖ ಉತ್ಪಾದಕ ದೇಶವಾಗಿದೆ. ಇದು ಎರಡೂ ದೇಶಗಳಿಗೆ ಸ್ಥಿತಿಸ್ಥಾಪಕ ಜವಳಿ ಮೌಲ್ಯ ಸರಪಳಿಯನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ರಸಗೊಬ್ಬರಗಳು, ಸೆರಾಮಿಕ್ಸ್, ಸಿಮೆಂಟ್ ಉತ್ಪಾದನೆ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲೂ ಇದೇ ರೀತಿಯ ಸಹಕಾರದ ಅವಕಾಶಗಳಿವೆ ಎಂದು ಅವರು ಹೇಳಿದರು.
ಎಲ್ಲಾ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಾನವಶಕ್ತಿಯ ಚಲನಶೀಲತೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ ಪ್ರಧಾನಮಂತ್ರಿ ಅವರು, ಭಾರತವು 'ವಿಶ್ವದ ಕೌಶಲ್ಯ ರಾಜಧಾನಿ'ಯಾಗಿ ಹೊರಹೊಮ್ಮುತ್ತಿದೆ ಎಂದು ಬಣ್ಣಿಸಿದರು. ತಂತ್ರಜ್ಞಾನ, ಎಂಜಿನಿಯರಿಂಗ್, ಆರೋಗ್ಯ ರಕ್ಷಣೆ, ನಿರ್ಮಾಣ ಮತ್ತು ಸರಕು-ಸಾಗಣೆಯಲ್ಲಿ ಭಾರತದ ಯುವ ಪ್ರತಿಭೆಗಳು ಜಾಗತಿಕ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅವರು ತಿಳಿಸಿದರು. ರಷ್ಯಾದ ಜನಸಂಖ್ಯಾ ಮತ್ತು ಆರ್ಥಿಕ ಆದ್ಯತೆಗಳನ್ನು ಪರಿಗಣಿಸಿ, ಈ ಪಾಲುದಾರಿಕೆಯು ಎರಡೂ ರಾಷ್ಟ್ರಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಶ್ರೀ ಮೋದಿ ಹೇಳಿದರು. ಭಾರತೀಯ ಪ್ರತಿಭೆಗಳಿಗೆ ರಷ್ಯಾದ ಭಾಷೆಯಲ್ಲಿ ತರಬೇತಿ ಮತ್ತು ಮೃದು ಕೌಶಲ್ಯಗಳನ್ನು ನೀಡುವ ಮೂಲಕ, ರಷ್ಯಾ-ಸನ್ನದ್ಧ ಕಾರ್ಯಪಡೆಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸಬಹುದು, ಇದು ಎರಡೂ ದೇಶಗಳ ಹಂಚಿಕೆಯ ಸಮೃದ್ಧಿಯನ್ನು ವೇಗಗೊಳಿಸುತ್ತದೆ ಎಂದು ಅವರು ತಿಳಿಸಿದರು.
ಎರಡೂ ದೇಶಗಳ ನಾಗರಿಕರಿಗೆ ಪ್ರವಾಸಿ ವೀಸಾಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ ಪ್ರಧಾನಮಂತ್ರಿ ಅವರು, ಇದು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಪ್ರವಾಸ ನಿರ್ವಾಹಕರಿಗೆ ಹೊಸ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಹೊಸ ಉದ್ಯೋಗದ ಮಾರ್ಗಗಳನ್ನು ತೆರೆಯುತ್ತದೆ ಎಂದು ಹೇಳಿದರು.
ಭಾರತ ಮತ್ತು ರಷ್ಯಾ ಸಹ-ನಾವೀನ್ಯತೆ, ಸಹ-ಉತ್ಪಾದನೆ ಮತ್ತು ಸಹ-ಸೃಷ್ಟಿಯ ಹೊಸ ಪ್ರಯಾಣವನ್ನು ಒಟ್ಟಾಗಿ ಪ್ರಾರಂಭಿಸುತ್ತಿವೆ ಎಂದು ಶ್ರೀ ಮೋದಿ ತಿಳಿಸಿದರು. ಇಲ್ಲಿ ಗುರಿಯು ಕೇವಲ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ, ಜೊತೆಗೆ ಜಾಗತಿಕ ಸವಾಲುಗಳಿಗೆ ಸುಸ್ಥಿರ ಪರಿಹಾರಗಳನ್ನು ಸಿದ್ಧಪಡಿಸುವ ಮೂಲಕ ಮಾನವೀಯತೆಯ ಕಲ್ಯಾಣವನ್ನು ಖಾತ್ರಿಪಡಿಸುವುದು ಸಹ ಇದರ ಮತ್ತೊಂದು ಗುರಿಯಾಗಿದೆ ಎಂದು ತಿಳಿಸಿದರು. ಈ ಪ್ರಯಾಣದಲ್ಲಿ ರಷ್ಯಾದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯಲು ಭಾರತ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ತಿಳಿಸಿದ ಪ್ರಧಾನಮಂತ್ರಿ ಅವರು, "ಬನ್ನಿ, 'ಮೇಕ್ ಇನ್ ಇಂಡಿಯಾ’, ಭಾರತದೊಂದಿಗೆ ಪಾಲುದಾರರಾಗಿ ಮತ್ತು ಒಟ್ಟಾಗಿ, ಜಗತ್ತಿಗಾಗಿ ನಿರ್ಮಿಸೋಣ" ಎಂದು ಕರೆ ನೀಡಿದರು. ಅಧ್ಯಕ್ಷ ಪುಟಿನ್ ಮತ್ತು ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ, ಧನ್ಯವಾದಗಳೊಂದಿಗೆ ತಮ್ಮ ಮಾತುಗಳನ್ನು ಮುಕ್ತಾಯ ಮಾಡಿದರು.
*****
(रिलीज़ आईडी: 2199925)
आगंतुक पटल : 8
इस विज्ञप्ति को इन भाषाओं में पढ़ें:
Malayalam
,
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Telugu