'ಕೇಸರಿ ಚಾಪ್ಟರ್ 2' ಚಿತ್ರಕ್ಕಾಗಿ ಕರಣ್ ಸಿಂಗ್ ತ್ಯಾಗಿ 56ನೇ ಐ.ಎಫ್.ಎಫ್.ಐ ನಲ್ಲಿ ಭಾರತೀಯ ಫೀಚರ್ ಫಿಲ್ಮ್ ನ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಯನ್ನು ಗೆದ್ದಿದ್ದಾರೆ
ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು
ಚಿತ್ರದ ಸಿನಿಮೀಯ ಮೌಲ್ಯ ಮತ್ತು ಐತಿಹಾಸಿಕ ಮಹತ್ವವನ್ನು ಗುರುತಿಸಿದ ತೀರ್ಪುಗಾರರು
#ಐ.ಎಫ್.ಎಫ್.ಐವುಡ್, 28 ನವೆಂಬರ್ 2025
ಉದಯೋನ್ಮುಖ ಸಿನಿಮಾ ಪ್ರತಿಭೆಗಳನ್ನು ಆಚರಿಸುವ ವಿಶೇಷ ಸಂದರ್ಭವಾಗಿ, 56ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಇಂದು ಕರಣ್ ಸಿಂಗ್ ತ್ಯಾಗಿ ಅವರಿಗೆ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ "ಕೇಸರಿ ಚಾಪ್ಟರ್ 2" ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ಭಾರತೀಯ ಫೀಚರ್ ಫಿಲ್ಮ್ ನಿರ್ದೇಶಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಕರಣ್ ಸಿಂಗ್ ತ್ಯಾಗಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಉಪಸ್ಥಿತರಿದ್ದರು.

ಚಲನಚಿತ್ರ ನಿರ್ದೇಶಕ, ಬರಹಗಾರ ಮತ್ತು ನಿರ್ಮಾಪಕರಾದ ತ್ಯಾಗಿ, ತಮ್ಮ ತೀಕ್ಷ್ಣವಾದ ಕಥೆ ಹೇಳುವಿಕೆ ಮತ್ತು ಅರ್ಥಪೂರ್ಣ ನಿರೂಪಣೆಯ ಬದ್ಧತೆಗಾಗಿ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಅವರ ಕೆಲಸಗಳಲ್ಲಿ ಈಗಾಗಲೇ 'ಬಂದಿಶ್ ಬ್ಯಾಂಡಿಟ್ಸ್' ಮತ್ತು 'ಕಾಲಕೂಟ್' ನಂತಹ ಗಮನಾರ್ಹ ಶೀರ್ಷಿಕೆಗಳಿವೆ ಮತ್ತು 'ಕೇಸರಿ ಚಾಪ್ಟರ್ 2' ಮೂಲಕ ಅವರು ಭರವಸೆಯ ನಿರ್ದೇಶಕರಾಗಿ ತಮ್ಮನ್ನು ತಾವು ದೃಢವಾಗಿ ಸ್ಥಾಪಿಸಿಕೊಂಡಿದ್ದಾರೆ.
ಚಿತ್ರದ ಸಿನಿಮೀಯ ಮೌಲ್ಯ, ಐತಿಹಾಸಿಕ ಮಹತ್ವ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಕುತೂಹಲಕಾರಿ ಕ್ಷಣಗಳನ್ನು ಗುರುತಿಸಿರುವುದಾಗಿ ತೀರ್ಪುಗಾರರು ಹೇಳಿದ್ದಾರೆ. "ಕೇಸರಿ ಚಾಪ್ಟರ್ 2" ರ ನಿರ್ದೇಶಕ, ನಿರ್ಮಾಪಕ, ನಟರು ಮತ್ತು ತಂತ್ರಜ್ಞರಿಗೆ ತೀರ್ಪುಗಾರರು ಮತ್ತು ಭಾರತೀಯ ಪನೋರಮಾ ಅಧ್ಯಕ್ಷರು ತಮ್ಮ ಅಭಿನಂದನೆಗಳನ್ನು ವ್ಯಕ್ತಪಡಿಸಿದರು ಮತ್ತು ಇದು ದೃಶ್ಯಾತ್ಮಕವಾಗಿ ಅದ್ಭುತವಾಗಿದೆ ಎಂದು ಬಣ್ಣಿಸಿದರು.
"ಕೇಸರಿ ಚಾಪ್ಟರ್ 2" ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಹಿಂದಿನ ಸತ್ಯವನ್ನು ಬಯಲು ಮಾಡಲು ಬ್ರಿಟಿಷ್ ಸಾಮ್ರಾಜ್ಯವನ್ನು ಎದುರಿಸಿದ ಕೇರಳದ ನಿರ್ಭೀತ ವಕೀಲ ಶಂಕರನ್ ನಾಯರ್ ಅವರ ವಿಶಿಷ್ಟ ನೈಜ ಕಥೆಯಾಗಿದೆ. ವೈಸರಾಯ್ ಕೌನ್ಸಿಲ್ ಸದಸ್ಯರಾಗಿ, ಜನರಲ್ ಡೈಯರ್ ನಿರಾಯುಧ ನಾಗರಿಕರ ಮೇಲೆ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಿದ ಬಲವಾದ ಪುರಾವೆಗಳನ್ನು ನಾಯರ್ ಬಹಿರಂಗಪಡಿಸುತ್ತಾರೆ. ಯುವ ವಕೀಲರಾದ ದಿಲ್ರೀತ್ ಗಿಲ್ ಅವರೊಂದಿಗೆ, ಅವರು ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ ದಿಟ್ಟ ಕಾನೂನು ಹೋರಾಟವನ್ನು ಪ್ರಾರಂಭಿಸುತ್ತಾರೆ, ನೂರಾರು ಬಲಿಪಶುಗಳಿಗೆ ನ್ಯಾಯವನ್ನು ಕೋರುತ್ತಾರೆ.

ಈ ಚಿತ್ರವು ನಾಯರ್ ಅವರ ಅಚಲ ಧೈರ್ಯವನ್ನು ಮಾತ್ರವಲ್ಲದೆ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕ್ರಿಯೆಗಳು ಹೊತ್ತಿಸಿದ ಕಿಡಿಯನ್ನು ಸಹ ಪ್ರದರ್ಶಿಸುತ್ತದೆ. ತನ್ನ ಆಕರ್ಷಕ ಕೋರ್ಟ್ ರೋಂ ಡ್ರಾಮಾ ಮತ್ತು ಪ್ರಭಾವಶಾಲಿ ನಟನೆಯ ಮೂಲಕ, "ಕೇಸರಿ: ಚಾಪ್ಟರ್ 2" ಭಾರತೀಯ ಇತಿಹಾಸದ ಹೆಚ್ಚು ಪ್ರಸಿದ್ಧವಲ್ಲದ ಅಧ್ಯಾಯವನ್ನು ಸಿನಿಮೀಯ ತೀವ್ರತೆ ಮತ್ತು ಭಾವನಾತ್ಮಕತೆಯೊಂದಿಗೆ ಜೀವಂತಗೊಳಿಸುತ್ತದೆ.
ಭಾರತೀಯ ಫೀಚರ್ ಫಿಲ್ಮ್ ನ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿಯು ದೇಶದ ಸೃಜನಶೀಲ ಸನ್ನಿವೇಶವನ್ನು ಮರು ವ್ಯಾಖ್ಯಾನಿಸುವ ಹೊಸ ಧ್ವನಿಗಳನ್ನು ಪ್ರದರ್ಶಿಸಲು ಐ.ಎಫ್.ಎಫ್.ಐ ನ ನಿರಂತರ ಪ್ರಯತ್ನದ ಭಾಗವಾಗಿದೆ. ಈ ವರ್ಷ, ತೀರ್ಪುಗಾರರು ತಾಜಾ ಕಥೆ ಹೇಳುವಿಕೆ, ಪ್ರಾದೇಶಿಕ ವೈವಿಧ್ಯತೆ ಮತ್ತು ಬಲವಾದ ಸಿನಿಮೀಯ ದೃಷ್ಟಿಕೋನವನ್ನು ಪ್ರದರ್ಶಿಸುವ ಅತ್ಯುತ್ತಮ ಚೊಚ್ಚಲ ಸಿನಿಮಾಗಳನ್ನು ಆಯ್ಕೆ ಮಾಡಿದರು.
ಮೊದಲ ಬಾರಿಯ ಚಲನಚಿತ್ರ ನಿರ್ದೇಶಕರ ಸೃಜನಶೀಲತೆ ಮತ್ತು ಪ್ರತಿಭೆಯನ್ನು ಗುರುತಿಸಲು ಸ್ಥಾಪಿಸಲಾದ ಈ ಪ್ರಶಸ್ತಿಯು, ಚೊಚ್ಚಲ ಕೃತಿಗಳು ಗಮನಾರ್ಹ ಸಾಮರ್ಥ್ಯ ಮತ್ತು ಕಲಾತ್ಮಕ ಅರ್ಹತೆಯನ್ನು ಪ್ರದರ್ಶಿಸುವ ನಿರ್ದೇಶಕರನ್ನು ಗೌರವಿಸುತ್ತದೆ. ಪ್ರತಿ ವರ್ಷ, ಐದು ಚೊಚ್ಚಲ ನಿರ್ದೇಶನದ ಚಲನಚಿತ್ರಗಳನ್ನು ಆಯ್ಕೆ ಮಾಡಿ ಉತ್ಸವದ ನಿಯಮಗಳ ಪ್ರಕಾರ ಪ್ರದರ್ಶಿಸಲಾಗುತ್ತದೆ. ಪ್ರಶಸ್ತಿಯು ₹5 ಲಕ್ಷ ನಗದು ಬಹುಮಾನ ಮತ್ತು ಪ್ರಮಾಣಪತ್ರವನ್ನು ಹೊಂದಿರುತ್ತದೆ.
ಕರಣ್ ಸಿಂಗ್ ತ್ಯಾಗಿ ಅವರಂತಹ ಚೊಚ್ಚಲ ಚಲನಚಿತ್ರ ನಿರ್ದೇಶಕರನ್ನು ಆಚರಿಸುವ ಮೂಲಕ, ದಿಟ್ಟ ವಿಚಾರಗಳು, ತಾಜಾ ದೃಷ್ಟಿಕೋನಗಳು ಮತ್ತು ಪರಿವರ್ತನಾ ಕಥೆಗಳೊಂದಿಗೆ ಭಾರತೀಯ ಚಿತ್ರರಂಗದ ಭವಿಷ್ಯವನ್ನು ರೂಪಿಸುವ ಧ್ವನಿಗಳ ಮುಂದಿನ ಪೀಳಿಗೆಯ ಕಥೆಗಾರರನ್ನು ಉತ್ತೇಜಿಸುವ ತನ್ನ ಬದ್ಧತೆಯನ್ನು ಐ.ಎಫ್.ಎಫ್.ಐ ದೃಢಪಡಿಸುತ್ತದೆ.
ಐ.ಎಫ್.ಎಫ್.ಐ ಬಗ್ಗೆ
1952ರಲ್ಲಿ ಪ್ರಾರಂಭವಾದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಉತ್ಸವವಾಗಿದೆ. ಇದನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್.ಎಫ್.ಡಿ.ಸಿ), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಮತ್ತು ಗೋವಾ ಸರ್ಕಾರದ ಗೋವಾ ಮನರಂಜನಾ ಸೊಸೈಟಿ ಜಂಟಿಯಾಗಿ ಆಯೋಜಿಸುತ್ತವೆ. ಈ ಉತ್ಸವವು ಜಾಗತಿಕ ಸಿನಿಮಾ ಶಕ್ತಿ ಕೇಂದ್ರವಾಗಿ ಬೆಳೆದಿದೆ - ಅಲ್ಲಿ ಪುನಃಸ್ಥಾಪಿಸಲಾದ ಕ್ಲಾಸಿಕ್ ಗಳು ದಿಟ್ಟ ಪ್ರಯೋಗಗಳನ್ನು ಸಂಧಿಸುತ್ತವೆ ಮತ್ತು ಹೆಸರಾಂತ ಕಲಾವಿದರು ಮೊದಲ ಬಾರಿಯ ಧೈರ್ಯಶಾಲಿಗಳೊಂದಿಗೆ ಜಾಗವನ್ನು ಹಂಚಿಕೊಳ್ಳುತ್ತಾರೆ. ಐ ಎಫ್ ಎಫ್ ಐ ಅನ್ನು ನಿಜವಾಗಿಯೂ ಅದ್ಭುತವಾಗಿಸುವುದು ಅದರ ಅದ್ಭುತವಾದ ಸಮ್ಮಿಲನಗಳು - ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ಕ್ಲಾಸ್ ಗಳು, ಗೌರವಗಳು ಮತ್ತು ವೇವ್ಸ್ ಫಿಲ್ಮ್ ಬಜಾರ್, ಅಲ್ಲಿ ಕಲ್ಪನೆಗಳು, ವ್ಯವಹಾರಗಳು ಮತ್ತು ಸಹಯೋಗಗಳು ಹುಟ್ಟುತ್ತವೆ. ಗೋವಾದ ಬೆರಗುಗೊಳಿಸುವ ಕಡಲತೀರದ ಹಿನ್ನೆಲೆಯಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯುವ 56ನೇ ಆವೃತ್ತಿಯು ಬೆರಗುಗೊಳಿಸುವ ಭಾಷೆಗಳು, ಪ್ರಕಾರಗಳು, ನಾವೀನ್ಯತೆಗಳು ಮತ್ತು ಧ್ವನಿಗಳ ಒಂದು ಅದ್ಭುತ ಶ್ರೇಣಿಯನ್ನು ಆಚರಿಸುವ ಭರವಸೆ ನೀಡುತ್ತದೆ - ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ತಲ್ಲೀನಗೊಳಿಸುವ ಆಚರಣೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Handles: @IFFIGoa, @PIB_India, @PIB_Panaji
****
रिलीज़ आईडी:
2196137
| Visitor Counter:
3